ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸಯೇ ಬದುಕಾದಾಗ...

ಕ್ಯಾನ್ಸರ್‌ ಗೆದ್ದ ಕತೆ
Last Updated 11 ಮಾರ್ಚ್ 2016, 19:55 IST
ಅಕ್ಷರ ಗಾತ್ರ

ನನ್ನಮ್ಮ ಮೂವರು ಹೆಣ್ಣು ಮಕ್ಕಳ ತಾಯಿಯಾಗಿ, ನಮ್ಮ ತಂದೆಯವರಿಗೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಬೆಂಬಲವಾಗಿ ನಿಂತು ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟು ಹಾಗೂ ಮದುವೆಗಳನ್ನು ಮಾಡಿ ಜವಬ್ದಾರಿಗಳನ್ನು ಮುಗಿಸಿದ್ದು ಕಡಿಮೆ ಸಾಧನೆಯಲ್ಲ! ತಮ್ಮ 55-56ನೇ ವಯಸ್ಸಿನಲ್ಲಿ ಶೇರು ವಹಿವಾಟು ಮಾಡುವುದನ್ನು ಕಲಿತು ತಕ್ಕಮಟ್ಟಿಗೆ ಬಂಡವಾಳ ಹಾಕಿ ಜೀವನ ನಡೆಸಿದಂತಹವರು ನನ್ನ ತಾಯಿ. ತಮ್ಮ ಇಳೀ ವಯಸ್ಸಿನಲ್ಲಿ ಕಂಪ್ಯೂಟರ್ ಕಲಿತು ಬ್ಯಾಂಕಿಂಗ್, ಬಿಲ್ಲಿಂಗ್ ಎಲ್ಲವನ್ನೂ ತಾವೇ ಮಾಡುವಷ್ಟು ಸ್ವತಂತ್ರರಾಗಿದ್ದರು!

50 ವರ್ಷಗಳ ನೆಮ್ಮದಿಯ ವೈವಾಹಿಕ ಜೀವನ ನಡೆಸಿದ ನನ್ನಮ್ಮ , ಅಪ್ಪ ಹೋದ ಮೇಲೆ ಒಬ್ಬಂಟಿಯಾದರು. ಅಪ್ಪನ ಸಾವು ತೀರ ಆಕಸ್ಮಿಕವಾದದ್ದು. ಆ ನೋವನ್ನು ನುಂಗಿ ಅವರಿಲ್ಲದೇ ಬದುಕುವುದನ್ನು ಕಲಿಯುತ್ತಿದ್ದೆವು. ಅಮ್ಮ, ಎಂದು ತನ್ನಿಂದ ಇನ್ನು ಒಬ್ಬಳೇ ಬದುಕಲು ಸಾಧ್ಯವಿಲ್ಲ ಎಂದೆನಿಸುತ್ತದೋ ಅಲ್ಲಿಯವರೆಗೆ ಅವರು ತಮ್ಮ ಹೆಣ್ಣುಮಕ್ಕಳ ಆಸರೆಗೆ ಹೋಗುವುದಿಲ್ಲ ಎಂದು ನಿರ್ಧರಿಸಿಯಾಗಿತ್ತು. ಆಗ ಅವರಿಗೆ ಸುಮಾರು ಎಪ್ಪತ್ತೆರೆಡು ವರ್ಷ ವಯಸ್ಸಿರಬಹುದು. ಅಷ್ಟರಲ್ಲೇ ನಮ್ಮೆಲ್ಲರ ಪಾಲಿಗೆ ಇನ್ನೊಂದು ಬರಸಿಡಿಲು ಬಡಿದಿತ್ತು.

ಅಮ್ಮನಿಗೆ ಬ್ರೆಸ್ಟ್ ಕ್ಯಾನ್ಸರ್ 4ನೇ ಹಂತದಲ್ಲಿದೆ ಎಂಬುದು ತಿಳಿದು ಬಂತು. ನಾವೆಲ್ಲ ನಡುಗಿ ಹೋದೆವು ಆದರೆ ಅಮ್ಮ ಸ್ಥಿತ ಪ್ರಜ್ಞರಾಗಿದ್ದರು. ಅವರಿಗೆ ತಾನು ಹುಷರಾಗಿ ಬರುವೆ ಎಂಬ ಭರವಸೆ ಇತ್ತು. ನನ್ನ ಅಕ್ಕ ಅಮ್ಮನನ್ನು ಅವಳ ಜೊತೆ ಅವರೂರಿಗೆ ಕರೆದುಕೊಂಡು ಹೋಗಿ ಅವರ ಆರೈಕೆ ಮಾಡಿದಳು. ನ್ಯಾನೋ ತಂತ್ರಜ್ಞಾನದ ಕಿಮೋಥೆರೆಪಿಯಿಂದ ಆರು ತಿಂಗಳುಗಳಲ್ಲಿ ಗುಣಮುಖರಾದರು ಅಮ್ಮ ಆಗ ಅವರು ಪಟ್ಟ ಭಾಧೆ, ನೋವು ಅವನ್ನು ಹೇಳಲಸಾಧ್ಯ!

ಎಷ್ಟು ಸುಂದರವಾಗಿದ್ದ ನನ್ನಮ್ಮನ ತಲೆ ಕೂದಲು, ಕಣ್ಣಿನ ರೆಪ್ಪೆಗಳೆಲ್ಲ ಉದುರಿಹೋಗಿದ್ದವು. ಆದರೆ ನಂತರ ನಿಧಾನವಾಗಿ ಮತ್ತೆ ಬೆಳೆಯಲಾರಂಭಿಸಿತು. ಅವರಿಗೆ ಬೇರೆಯ ಅನೇಕ ದೈಹಿಕ ತೊಂದರೆಗಳಿದ್ದವು. ಆದರೂ ಅವೆಲ್ಲವನ್ನೂ ಮೆಟ್ಟಿ ನಿಂತು ಕ್ಯಾನ್ಸರನ್ನು ಗೆದ್ದು ತಿರುಗಿ ಬಂದರು ನನ್ನಮ್ಮ! ವೈದ್ಯರು ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದರಿಂದ ಮುಂದೆ ಇದು ಮರುಕಳಿಸಬಹುದು ಎಂದು ಹೇಳಿದ್ದರು.

ಆದರೂ ಅಮ್ಮ ಮತ್ತೆ ಒಂದುವರೆ ವರ್ಷ ಯಾರಿಗೂ ಭಾರವಾಗದೆ ಸ್ವತಂತ್ರರಾಗಿ ಒಬ್ಬರೇ ಬಾಳಿದರು. ತಮ್ಮ ನೋವನ್ನು ಯಾರೊಡನೆಯೂ ಹೇಳದೆ ತಮ್ಮ ಉಸಿರಾಗಿದ್ದ ಶೇರು ಪೇಟೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ತಮ್ಮ ಬೇನೆಯನ್ನು ಮರೆತಂತೆ ಇದ್ದರು. ತಿಂಗಳಿಗೊಮ್ಮೆ ವೈದ್ಯರ ಬಳಿ ತಪಾಸಣೆ, ಆರೈಕೆ ಎಲ್ಲ ನಡೆಯುತ್ತಿತ್ತು. ಜೊತೆಗೆ ನಮ್ಮ ನೋವು ನಲಿವುಗಳಿಗೆ ಸ್ಪಂದಿಸುತ್ತ ನಮಗೆ, ನಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತ ನಡೆದರು. 

ಆದರೆ ವಿಧಿಗೆ ಅವರು ಚೆನ್ನಾಗಿರುವುದು ಇಷ್ಟವಿರಲಿಲ್ಲವೇನೋ! ನಿಧಾನವಾಗಿ ಒಂದು ಶ್ವಾಸಕೋಶ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಕೆಮ್ಮು ಎಡೆಬಿಡದೆ ಕಾಡುತ್ತ ತಿನ್ನಲು, ಕೂರಲು, ಮಲಗಲೂ ಆಗದ ಸ್ಥಿತಿಯನ್ನು ತಲುಪಿದರು. ಇನ್ನು ತಾನು ಒಬ್ಬಳೇ ಇರಲಸಾಧ್ಯ ಎಂದು ಮನಗಂಡು ನನ್ನ ಅಕ್ಕನ ಬಳಿಗೆ ಹೋಗಿ ಅವರೂರಿನಲ್ಲಿ ನೆಲೆಸಿದರು. ನಾನು ಈ ಮಧ್ಯೆ ಅವರನ್ನು ಭೇಟಿಯಾಗಿ ಬರುತ್ತಿದ್ದೆ. ಆಗಲೂ ಅವರಲ್ಲಿ ಇದ್ದ ಜೀವನೋತ್ಸಾಹ ಸಾಮಾನ್ಯರನ್ನೂ ನಾಚಿಸುವಂತದ್ದು!

ಮೊಮ್ಮಗಳ ವಿವಾಹಕ್ಕೆ ಅವರು ಬರಲಾಗದಿದ್ದರೂ ದೂರದಿಂದಲೇ ಅವಳಿಗೆ ಆಶೀರ್ವಾದಿಸಿದ್ದರು. ಅವರನ್ನು ಮತ್ತೊಮ್ಮೆ ಭೇಟಿಯಾಗಲು ನನ್ನ ಮನೆಯವರೊಂದಿಗೆ ಹೋದೆ. ಆದರೆ ಅದೇ ಕಡೆಯ ಬಾರಿ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ನಗುನಗುತ್ತ ನಮ್ಮನ್ನು ಹೊರಗೆ ಹೋಗಿಬನ್ನಿ ಎಂದು ಕಳಿಸಿಕೊಟ್ಟವರು ನಾವು ಮನೆಗೆ ಬರುವಷ್ಟರಲ್ಲಿ ಅವರೇ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದರು. . . ಎಲ್ಲವನ್ನೂ ಎಲ್ಲರನ್ನೂ ಬಿಟ್ಟು. ಆದರೆ ಅವರು ಬಿಟ್ಟುಹೋದ ಧೈರ್ಯದ ಹಾಗೂ ಛಲದ ಹೆಜ್ಜೆಗುರುತುಗಳು, ಅವರ ನೆನಪು, ಅವರ ಆಶೀರ್ವಾದ ಸದಾ ನಮ್ಮೊಂದಿಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT