ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಜಯದ ಮುನ್ನುಡಿ ಬರೆಯುವ ಕಾತರ

ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ; ಇಂದಿನಿಂದ ಸೂಪರ್‌–10 ಹಂತದ ಪಂದ್ಯಗಳು; ಮಹಿ ಬಳಗಕ್ಕೆ ಕಿವೀಸ್‌ ಸವಾಲು
Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ನಾಗಪುರ: 2007ರಲ್ಲಿ ನಡೆದಿದ್ದ ಚೊಚ್ಚಲ ವಿಶ್ವ ಟ್ವೆಂಟಿ–20 ಟೂರ್ನಿ ಯಲ್ಲಿಯೇ ಚಾಂಪಿಯನ್‌ ಪಟ್ಟಕ್ಕೇರಿದ್ದ ಭಾರತ ತಂಡ ಈಗ ತವರಿನ ಅಂಗಳದಲ್ಲಿ ಮತ್ತೊಂದು ಟ್ರೋಫಿ ಎತ್ತಿಹಿಡಿಯುವ ತವಕದಲ್ಲಿದೆ.

ಇದರ ಮೊದಲ ಹೆಜ್ಜೆಯಾಗಿ ಮಹಿ ಬಳಗ ಮಂಗಳವಾರ ನಡೆಯುವ ಸೂಪರ್‌ 10 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ಸವಾಲು ಎದುರಿಸಲಿದೆ.

ಉಭಯ ತಂಡಗಳ ನಡುವಣ ಈ ಹೋರಾಟಕ್ಕೆ ವಿದರ್ಭ ಕ್ರಿಕೆಟ್‌ ಸಂಸ್ಥೆಯ (ಜಮ್ತಾ) ಮೈದಾನದಲ್ಲಿ ವೇದಿಕೆಯೂ ಸಿದ್ಧಗೊಂಡಿದೆ.
ವಿಶ್ವ ಟ್ವೆಂಟಿ–20 ಟೂರ್ನಿಯ ಇತಿಹಾಸದಲ್ಲಿ ಆತಿಥ್ಯ ವಹಿಸಿದ ಯಾವ ರಾಷ್ಟ್ರವೂ ಇದುವರೆಗೆ ಪ್ರಶಸ್ತಿ ಗೆದ್ದಿಲ್ಲ. ಜತೆಗೆ ಯಾವ ತಂಡಕ್ಕೂ ಎರಡು ಬಾರಿ  ಟ್ರೋಫಿ ಒಲಿದಿಲ್ಲ.   ಈ ಎರಡು ದಾಖಲೆ ಗಳನ್ನು ತನ್ನ ಹೆಸರಿಗೆ ಬರೆದುಕೊಳ್ಳಲು ದೋನಿ ಬಳಗಕ್ಕೆ ಈ ಬಾರಿ ಅತ್ಯುತ್ತಮ ಅವಕಾಶ ಕೂಡಿ ಬಂದಿದೆ.   ಹೀಗಾಗಿ ಆತಿಥೇಯರ  ಮೇಲೆ ಅಪಾರ ನಿರೀಕ್ಷೆಗಳು ಗರಿ ಕೆದರಿವೆ.

ಚುಟುಕು ಮಾದರಿಯಲ್ಲಿ ಭಾರತ ತಂಡ ಅತ್ಯಂತ ಬಲಿಷ್ಠ ಎಂಬ ಹಣೆಪಟ್ಟಿ ಹೊಂದಿದೆ. ಈ ವರ್ಷ ಆಡಿದ 11 ಪಂದ್ಯಗಳ ಪೈಕಿ 10ರಲ್ಲಿ ಗೆಲುವು ಗಳಿಸಿರುವುದು ದೋನಿ ಪಡೆಯ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.

ವರ್ಷದ ಆರಂಭದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧದ ಸರಣಿಗಳಲ್ಲಿ ಭಾರತ ಕ್ರಮ ವಾಗಿ 3–0 ಮತ್ತು 2–1ರಲ್ಲಿ ಗೆಲುವು ಗಳಿಸಿತ್ತು. ಅಷ್ಟೇ ಅಲ್ಲದೆ ಬಾಂಗ್ಲಾದೇಶ ದಲ್ಲಿ ನಡೆದಿದ್ದ ಏಷ್ಯಾಕಪ್‌ನಲ್ಲಿ ಅಜೇಯವಾಗಿ (ಸತತ 5 ಪಂದ್ಯದಲ್ಲಿ ಗೆದ್ದು)  ಪ್ರಶಸ್ತಿ ಜಯಿಸಿತ್ತು.
ಹಿಂದಿನ ಈ ಗೆಲುವುಗಳು ಆತಿಥೇಯರ ಮನದಲ್ಲಿ ಅದಮ್ಯ ವಿಶ್ವಾಸ ನೆಲೆವೂರುವಂತೆ ಮಾಡಿರು ವುದು ಸುಳ್ಳಲ್ಲ.

ಟೂರ್ನಿಗೂ ಮುನ್ನ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಮಹಿ ಬಳಗ ವೆಸ್ಟ್‌ ಇಂಡೀಸ್‌ ಎದುರು ಗೆದ್ದಿತ್ತಾದರೂ ನಂತರದ ಪಂದ್ಯದಲ್ಲಿ ನಾಲ್ಕು ರನ್‌ಗಳಿಂದ ದಕ್ಷಿಣ ಆಫ್ರಿಕಾದ ವಿರುದ್ಧ ಮುಗ್ಗರಿಸಿತ್ತು. 

ದೋನಿ ಪಡೆ ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌  ಮೂರೂ ವಿಭಾಗಗಳಲ್ಲಿಯೂ ಶಕ್ತಿಯುತವಾಗಿದೆ. ತಂಡದಲ್ಲಿ ಚುಟುಕು ಮಾದರಿಯ ಪರಿಣತ ಆಟಗಾರರ ದಂಡೇ ಇದೆ. ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌, ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡಬಲ್ಲ ತಾಕತ್ತು ಹೊಂದಿದ್ದಾರೆ.

ಅಭ್ಯಾಸ ಪಂದ್ಯಗಳಲ್ಲಿ ರೋಹಿತ್‌ (ಔಟಾಗದೆ 98) ಮತ್ತು ಶಿಖರ್‌ (73)  ಮಿಂಚಿನ ಅರ್ಧಶತಕ  ಗಳಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಕಣ ಕ್ಕಿಳಿಯುವ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ನಲ್ಲಿ ತಂಡದ ಆಧಾರ ಸ್ತಂಭ . ಆಕರ್ಷಕ ಕವರ್‌ ಡ್ರೈವ್‌ ಮತ್ತು ಕಟ್‌ಗಳ ಮೂಲಕ ರನ್‌ ಬೇಟೆಯಾಡಬಲ್ಲ ಸಾಮರ್ಥ್ಯ ದೆಹಲಿ ಆಟಗಾರನ ತೋಳುಗಳಲ್ಲಿ ಅಡಗಿದೆ. ಹಿಂದಿನ ಏಳು ಪಂದ್ಯಗಳಲ್ಲಿ ಅವರು ನಾಲ್ಕು ಅರ್ಧಶತಕ ಗಳಿಸಿ ಗಮನಸೆಳೆದಿದ್ದಾರೆ. ಹೀಗಾಗಿ ಜಮ್ತಾ ಮೈದಾನದಲ್ಲಿ ಕಿವೀಸ್‌ ನಾಡಿನ ಬೌಲರ್‌ಗಳಿಗೆ ‘ವಿರಾಟ’ ರೂಪದ ದರ್ಶನ ಆಗುವ ಕುತೂಹಲ ಕ್ರಿಕೆಟ್‌ ಪ್ರಿಯರಲ್ಲಿ ಮನೆ ಮಾಡಿದೆ.

ಅನುಭವಿ ಯುವರಾಜ್‌ ಸಿಂಗ್‌, ಸುರೇಶ್‌ ರೈನಾ, ಹಾರ್ದಿಕ್‌ ಪಾಂಡ್ಯ ಮತ್ತು ನಾಯಕ ದೋನಿ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಸ್ಫೋಟಕ ಆಟದ ಮೂಲಕ ಎದುರಾಳಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಬಲ್ಲರು. ಜತೆಗೆ ಸೌರಾಷ್ಟ್ರದ ರವೀಂದ್ರ ಜಡೇಜ ಮತ್ತು ತಮಿಳು ನಾಡಿನ ಆರ್‌. ಅಶ್ವಿನ್‌ ಅವರೂ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಆಸರೆ ಯಾಗಬಲ್ಲರು.

ಬೌಲಿಂಗ್‌ನಲ್ಲೂ ಆತಿಥೇಯರ ಸಾಮರ್ಥ್ಯ ಪ್ರಶ್ನಾತೀತ. ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವ ಆಶಿಶ್‌ ನೆಹ್ರಾ ಮತ್ತು ಜಸ್‌ಪ್ರೀತ್‌ ಬೂಮ್ರಾ ತಮ್ಮ ಇನ್‌ಸ್ವಿಂಗ್‌ ಮತ್ತು ಯಾರ್ಕರ್‌ಗಳ ಮೂಲಕ ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ ಗಳನ್ನು ಕಟ್ಟಿಹಾಕಬಲ್ಲರು. ಗಾಯದಿಂದ ಗುಣಮುಖರಾಗಿರುವ ಮೊಹಮ್ಮದ್‌ ಶಮಿ ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಈ ಹಿಂದೆಯೇ ದೋನಿ, ಶಮಿಗೆ ಸ್ಥಾನ ನಿರಾಕರಿಸಿರುವುದರಿಂದ ಅವರು ಮಂಗಳವಾರದ ಪಂದ್ಯದಲ್ಲಿ ಕಣಕ್ಕಿಳಿಯುವುದು  ಅನುಮಾನ.

ಆರ್‌. ಅಶ್ವಿನ್‌ ಮತ್ತು ಜಡೇಜ ತಂಡದ ಸ್ಪಿನ್‌ ಅಸ್ತ್ರ ಎನಿಸಿದ್ದಾರೆ. ಒಂದೊಮ್ಮೆ ನಾಯಕ ದೋನಿ ಮೂರು ಮಂದಿ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲು ನಿಶ್ಚಯಿಸಿದರೆ ಪವನ್‌ ನೇಗಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವುದು ಖಚಿತ.

ವಿಶ್ವಾಸದಲ್ಲಿ ಕಿವೀಸ್‌:  ಭಾರತದ ಎದುರು ನ್ಯೂಜಿಲೆಂಡ್ ಅಜೇಯ ಗೆಲುವಿನ ದಾಖಲೆ ಹೊಂದಿದೆ. ಆಡಿರುವ 5 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದೆ. ಒಂದು ಪಂದ್ಯ ರದ್ದಾಗಿದೆ. ಹೀಗಾಗಿ ಈ ಪಂದ್ಯದಲ್ಲಿಯೂ ಪ್ರವಾಸಿ ತಂಡ ಗೆಲುವಿನ ವಿಶ್ವಾಸದಲ್ಲಿದೆ.

ಆದರೆ ತಂಡಕ್ಕೆ ಅನುಭವಿ ಬ್ರೆಂಡನ್‌ ಮೆಕ್ಲಮ್‌ ಅವರ ಅನುಪಸ್ಥಿತಿ ಭಾರಿ ಹಿನ್ನಡೆ ಉಂಟುಮಾಡಿದೆ. ಮೆಕ್ಲಮ್‌ ಇತ್ತೀಚೆಗೆ ತಮ್ಮ ಕ್ರೀಡಾ ಬದುಕಿಗೆ ನಿವೃತ್ತಿ ಹೇಳಿದ್ದರು.  ಈ ತಂಡ  ಈ ವರ್ಷ ಆಡಿರುವ 5 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಗಳಿಸಿದೆ.  ಕೇನ್‌ ವಿಲಿಯಮ್ಸನ್‌ ಸಾರಥ್ಯದ ತಂಡ ಬ್ಯಾಟಿಂಗ್‌ನಲ್ಲಿ ಮಾರ್ಟಿನ್‌ ಗುಪ್ಟಿಲ್‌, ಕಾಲಿನ್‌ ಮನ್ರೊ, ಗ್ರ್ಯಾಂಟ್‌ ಎಲಿಯಟ್‌, ಕೋರಿ ಆ್ಯಂಡರ್‌ಸನ್‌ ಮತ್ತು  ರಾಸ್‌ ಟೇಲರ್‌ ಅವರನ್ನು  ನೆಚ್ಚಿಕೊಂಡಿದೆ.

ಗುಪ್ಟಿಲ್‌ ಮತ್ತು ನಾಯಕ ವಿಲಿಯಮ್ಸನ್‌ ಅಭ್ಯಾಸ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದರು. ಮಿಷೆಲ್‌ ಮೆಕ್‌ಲೆನಾಗನ್‌, ಟ್ರೆಂಟ್‌ ಬೌಲ್ಟ್‌, ಟಿಮ್‌ ಸೌಥಿ ಮತ್ತು ಆ್ಯಡಮ್‌ ಮಿಲ್ನೆ ಅವರು ತಮ್ಮ ಬಿರುಗಾಳಿ ವೇಗದ ದಾಳಿಯ ಮೂಲಕ ಎದುರಾಳಿಗಳನ್ನು ಕಾಡುವ ಛಾತಿ ಹೊಂದಿದ್ದಾರೆ. ಜತೆಗೆ ಸ್ಪಿನ್‌ ವಿಭಾಗದಲ್ಲೂ ತಂಡ ಬಲಿಷ್ಠ ವಾಗಿದೆ. ಇವರನ್ನು ಭಾರತದ ಬ್ಯಾಟ್ಸ್‌ಮನ್‌ಗಳು ಹೇಗೆ ಎದುರಿಸಿ ನಿಲ್ಲಲಿದ್ದಾರೆ  ಎಂಬುದು ಈಗ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT