ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಚಂದ್ರ ಸಂಭ್ರಮ...

Last Updated 11 ಮಾರ್ಚ್ 2016, 19:55 IST
ಅಕ್ಷರ ಗಾತ್ರ

ಹನಿಮೂನು ಎಂಬ ಪದವೇ ಸಾಕು ಕುತೂಹಲದಿಂದ ಕೆಲವರ ಕಣ್ಣರಳಲು... ಕೆಲವರ ಕಣ್ಣುಗಳು ನೆಲ ನೋಡಲು. ಹೊಸದಾಗಿ ಮದುವೆಯಾದವರ ಬಹುನಿರೀಕ್ಷೆಯ ಸುಸಮಯವಂತೂ ಹೌದು. ಖುಷಿಯಾಗಿ ಕಳೆಯಲಿರುವ ಸಮಯ ಎಂಬ ನಿರೀಕ್ಷೆಯಲ್ಲಿರುತ್ತಾರೆ. ಅಂತರ್ಜಾಲವೂ ಉತ್ತಮ ಅಪರೂಪದ ಹನಿಮೂನ್‌ ತಾಣಗಳ ಪಟ್ಟಿಯ ಜತೆ ಭರಪೂರ ಸವಿವರ ಮಾಹಿತಿ ಒದಗಿಸಲು ತಯಾರು. ಜೋಡಿಗೆ ಅರಿವಿಲ್ಲದೇ ಏನಿರುವುದಿಲ್ಲ...

ಈ ಸಮಯ ಬರೀ ಸಂತಸದ ಹೊನಲು ಹರಿಸಲು ಕಾದಿರುವುದಿಲ್ಲ ಎಂಬುದು ಅವರಿಗೆ ತಿಳಿದೇ ಇರುತ್ತದೆ. ವಿಲಕ್ಷಣ ಅಸೌಖ್ಯದ ರೂಪದಲ್ಲಿ ವಿವಿಧ ನೋವುಗಳೂ ಜತೆಯಾಗುತ್ತವೆ. ನವದಂಪತಿ ಪರಿಚಿತ ವಾತಾವರಣದಿಂದ ಗೈರಾಗಿ ಉಳಿದುಬಿಡುವ ಅವಧಿ ಇದು. ಪುರಾತನ ಕಾಲದಿಂದಲೂ ಮದುವೆಗೆ ಸಂಬಂಧಿಸಿದ ವಿಧಿಗಳಲ್ಲಿ ಹನಿಮೂನ್‌ ಕೂಡ ಒಂದು. ವಧುವನ್ನು ಹುಡುಕಿಕೊಂಡು ಬರುವವರೆಗೆ ಆಕೆಯೊಂದಿಗೆ ವರ ಅಜ್ಞಾತವಾಸದಲ್ಲಿ ಉಳಿದುಬಿಡಬೇಕಿತ್ತು.

ಈ ಹನಿಮೂನ್‌ ಪದ ಬಂದದ್ದಾದರೂ ಹೇಗೆ ಅಂತೀರಿ. ಉತ್ತರ ಯುರೋಪಿನ ಕೆಲವು ದೇಶಗಳಲ್ಲಿ ವಿಶಿಷ್ಟ ವಿಧಿ ಆಚರಣೆಯಲ್ಲಿದೆ. ಮದುವೆಯಾದ ನಂತರ ತಿಂಗಳ ಕಾಲ ಹೊಸ ಜೋಡಿ ಮೆಥೆಗ್ಲಿನ್‌ ಅಥವಾ ಮೀಡ್‌ ಎಂಬ ಮಧುವಿನಿಂದ ತಯಾರಾದ ವೈನ್‌ಅನ್ನು ಸೇವಿಸಬೇಕಂತೆ. ಹಾಗಾಗಿ ಹನಿ(ಮಧು) ಮತ್ತು ಮೂನ್‌ (ಮಾಸ) ಎಂಬ ಪದದ ವ್ಯುತ್ಪತ್ತಿ. ಮೊದಲ ಮಾಸವೆಲ್ಲ ಅವರಿಗೆ ಮಧು(ರ)ವಾಗೇ ಇರುವ ಸಂತಸದ ಕಾರಣ ಮಧುಚಂದ್ರ ಎಂಬ ಪದ ಸೂಕ್ತವಾಗೂ ಹೊಂದುತ್ತದೆ.

ಆದರೆ ಈ ಸವಿಸಮಯ ಮಧುಚಂದ್ರದ ಅವಧಿಯಲ್ಲಿ ‘ಹನಿಮೂನ್‌ ಸಿಸ್ಟಿಸಿಸ್‌’ ಎಂಬ ಸ್ಥಿತಿಯೂ ಎದುರಾಗುತ್ತದೆ. ಮೂತ್ರನಾಳ ಮತ್ತು ಸ್ತ್ರೀ ಜನನೇಂದ್ರಿಯವನ್ನು ಪ್ರತ್ಯೇಕಿಸುವ ಪಾರದರ್ಶಕ ಹಾಳೆಯಂತಹ ತೆಳು ಗೋಡೆಯೊಂದು ಇರುತ್ತದೆ. ಲೈಂಗಿಕ ಸಂಪರ್ಕದ ಆರಂಭಿಕ ಅವಧಿಯಲ್ಲಿ ಪುರುಷ ಜನನಾಂಗವು ಯೋನಿಯ ಮೇಲ್ಭಾಗದ ಗೋಡೆಯ ಮೇಲೆ ಅಸಾಧ್ಯ ಒತ್ತಡ ಹೇರುತ್ತದೆ. ಈ ಒತ್ತಡವು ಮೂತ್ರನಾಳದ ಕೆಳಗೋಡೆಯವರೆಗೂ ಪಸರಿಸುತ್ತದೆ.

ಹಾಗೂ ಮೂತ್ರಕೋಶ ಅಥವಾ ಸಿಸ್ಟ್‌ನ ಮೇಲೆ ಯಾಂತ್ರಿಕವಾಗಿ ಒತ್ತಡ ಬೀಳುತ್ತದೆ. ಹೀಗೆ ನವವಧುವಿನ ಮೂತ್ರನಾಳ ಮತ್ತು ಮೂತ್ರಕೋಶ ಕಿರಿಕಿರಿ ಅನುಭವಿಸುವಂತಾಗುತ್ತದೆ; ನೋವೂ ಅನುಭವಕ್ಕೆ ಬರುತ್ತದೆ. ಹೀಗಾಗಿ ಈ ಸಮಯದಲ್ಲಿ ಆಕೆಗೆ ಮೂತ್ರವಿಸರ್ಜಿಸಬೇಕು ಎನಿಸುತ್ತದೆ. ಉರಿಯ ಅನುಭವವೂ ಆಗುತ್ತದೆ. ಆಗ ಮೂತ್ರದೊಂದಿಗೆ ರಕ್ತಸ್ರಾವವೂ ಆಗಬಹುದು. ಇ.ಕೋಲಿ (Escherischia coli) ಎಂಬ ಬ್ಯಾಕ್ಟೀರಿಯಾ ಗುದದ್ವಾರದಿಂದ ಮೂತ್ರದ್ವಾರದವರೆಗೆ ಚಲಿಸಬಹುದು. ಈ ಬ್ಯಾಕ್ಟೀರಿಯಾಗಳು ಗುದದ್ವಾರ ಮತ್ತು ಜನನಾಂಗದ ನಡುವೆ ಇರುವ ತ್ವಚೆಯಲ್ಲಿ (ಪೆರೆನಿಯಮ್‌ನಲ್ಲಿ) ಕಂಡುಬರಬಹುದು.

ಯೋನಿಮಾರ್ಗದವರೆಗೆ ಅವು ಚಲಿಸುವ ಪ್ರಕ್ರಿಯೆ ಲೈಂಗಿಕ ಚಟುವಟಿಕೆಗಳ ಮೂಲಕ  ಯಾಂತ್ರಿಕವಾಗಿ ತಾಡನ, ಮುಖರತಿ ಅಥವಾ ಕೇವಲ ಶಿಶ್ನದ ಚಲನೆಯಿಂದಲೂ ಉಂಟಾಗಬಹುದು. ಪುರುಷನು ವೈಯಕ್ತಿಕ ಲೈಂಗಿಕ ಸ್ವಚ್ಛತೆ ಅನುಸರಿಸದೇ ಇದ್ದ ಪಕ್ಷದಲ್ಲೂ ಈ ಬ್ಯಾಕ್ಟೀರಿಯಾ ಶಿಶ್ನದ ಮೂಲಕ ಹರಡುತ್ತದೆ. ಮಧುಚಂದ್ರದಂತಹ ಅವಧಿಯಲ್ಲಿ ಪದೇ ಪದೇ ಸಂಭೋಗ ನಡೆಯುವಾಗ ಒಮ್ಮೆಲೆ ಘರ್ಷಣೆ, ದಾಳಿ ಉಂಟಾಗಿ ಯೋನಿಯ ಭಾಗದಲ್ಲಿ ತಕ್ಕಷ್ಟು ಜಾರುವಿಕೆಯ ಸ್ಥಿತಿ ಉಳಿಯುವುದಿಲ್ಲ. ಇದರಿಂದಾಗಿ ಯೋನಿಯ ಸುತ್ತಲಿನ ತ್ವಚೆ ಕೆತ್ತಿದಂತೆ ಆಗಿ ವಧುವಿಗೆ ಕಿರಿಕಿರಿ, ಉರಿಯ ಅನುಭವವೂ ಆಗುತ್ತದೆ.

ಭಾವೋದ್ರೇಕದ ಕ್ಷಣಗಳಲ್ಲಿ ಯೋನಿಯ ಮೇಲೆ ಅತ್ಯಂತ ತೀವ್ರವಾದ ತಾಡನ ಉಂಟಾಗಬಹುದು. ಕೆಲವೊಮ್ಮೆ ತುಂಬ ಬಲವಾಗಿ ತಾಡನ ನಡೆದು ಅಲ್ಲಿನ ತ್ವಚೆ ಕೆಂಪಾಗಿ ಉರಿಯ ಅನುಭವ ಆಗುತ್ತದೆ. ಸಂಭೋಗದ ಕೆಲವು ಭಂಗಿಗಳಿಂದಾಗಿ ಮೂತ್ರನಾಳದ ಹಾಸು(ತಳ) ಕಿರಿಕಿರಿ ಅನುಭವಿಸುವಂತಾಗಬಹುದು. ಮೂತ್ರ ಸಂಗ್ರಹಗೊಳ್ಳುವ ಮೂತ್ರಕೋಶವೂ ತೊಂದರೆಗೀಡಾಗಬಹುದು.

ಪುರುಷರು ಜನನಾಂಗ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು. ಲೈಂಗಿಕ ಕ್ರಿಯೆ ಎಂದರೆ ಸಂಗಾತಿಯನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವ ಕ್ರಿಯೆ ಎಂದು ಭಾವಿಸುವವರೇ ಹೆಚ್ಚು. ಇದೇ ಹಿನ್ನೆಲೆಯಲ್ಲಿ ತೀವ್ರವಾಗಿ, ಬಲವಾಗಿ ತೊಡಗಿಕೊಳ್ಳುತ್ತಾರೆ. ಅತಿಕ್ರಮಣದಂತೆ ಎನಿಸುವ ಕ್ರಿಯೆ ಸದೃಢ ಪುರುಷನ ಸಹಜ ವರ್ತನೆ ಎಂಬ ಮಿಥ್ಯೆಯನ್ನು ಮನದಿಂದ ತೆಗೆದುಹಾಕಿ. ನವಿರಾಗಿ, ನಯವಾಗಿ ಸೂಕ್ಷ್ಮವಾಗಿ ಪರಸ್ಪರ ಸ್ಪಂದನೆಯೊಂದಿಗೆ ಸಾಗಬೇಕಾದ ಸಂತಸದ ಪಯಣ, ಹೊಸತನದ ಹುಡುಕಾಟ ಎಂದು ಭಾವಿಸಿ ಮುಂದುವರಿಯಿರಿ.

ಮಹಿಳೆಯರು ಧಾರಾಳವಾಗಿ ನೀರು ಕುಡಿಯಬೇಕು. ಅದರಲ್ಲೂ ಸಿಟ್ರಿಕ್‌ ಆಸಿಡ್‌ನ ಅಂಶ ಹೆಚ್ಚಾಗಿ ಇರುವ ಲಿಂಬೆ ಪಾನಕ ಮತ್ತು ಕಿತ್ತಳೆ ಹಣ್ಣಿನ ರಸ ಸೇವನೆ ಇರಲಿ. ಬಿಸಿ ನೀರಿನ ಸ್ನಾನ, ಅದರಲ್ಲೂ ಟಬ್‌ ಸ್ನಾನ ಇನ್ನೂ ಉತ್ತಮ. ಗಾಬರಿಯಾಗುವ ಅಗತ್ಯವಿಲ್ಲ. ಸಂಗಾತಿಗಳಿಬ್ಬರೂ ಆತಂಕಕ್ಕೊಳಗಾಗಕೂಡದು. ಇಂಥ ಸಂದರ್ಭಗಳಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಬರುವವರೆಗೆ ಇಬ್ಬರೂ ಲೈಂಗಿಕ ಚಟುವಟಿಕೆಗಳಿಂದ ದೂರವಿರುವುದು ಉತ್ತಮ. ಸಮಸ್ಯೆ ಗಂಭೀರ ಸ್ವರೂಪದ್ದೆನಿಸಿದರೆ ತಜ್ಞ ವೈದ್ಯರ ಮೊರೆ ಹೋಗುವುದು ಉತ್ತಮ.

ಮೊದಲ ರಾತ್ರಿಯಲ್ಲೇ ತಮ್ಮ ಬಗ್ಗೆ ಉತ್ತಮ ಅಭಿಪ್ರಾಯ, ಛಾಪು ಮೂಡಿಸಬೇಕು ಎಂದುಕೊಳ್ಳುವ ಪುರುಷರೇ ಹೆಚ್ಚು. ಅದಕ್ಕಾಗಿ ಕೆಲವರು ಜಾಹೀರಾತುಗಳಿಗೆ ಮರುಳಾಗಿ ಔಷಧಿ, ಇಂಜೆಕ್ಷನ್‌ಗಳ ಮೊರೆಹೋಗುವುದಿದೆ. ಆದರೆ ಇಂಥ ಔಷಧಿಗಳು ದೇಹದಲ್ಲಿ ಹೇಗೆ ಪ್ರತಿಕ್ರಿಯಿಸುತ್ತವೆಯೊ ಎಂದು ಹೇಳಲಾಗದು. ಕೆಲವು ಸಂದರ್ಭಗಳಲ್ಲಿ ಉದ್ದೇಶಿತ ಅವಧಿಗಿಂತಲೂ ಹೆಚ್ಚು ಸಮಯ, ಗಂಟೆಗಟ್ಟಲೆ ನಿಮಿರಿದ ಪುರುಷರ ಜನನಾಂಗ ಸಹಜ ಸ್ಥಿತಿಗೆ ಮರಳದೇ ಇದ್ದ ಉದಾಹರಣೆಗಳೂ ಇವೆ.

ಅಂಥ ಸನ್ನಿವೇಶದಲ್ಲಿ ಅಸಾಧ್ಯ ನೋವು ಮುಜುಗರ ಅನುಭವಿಸಬೇಕಾಗುತ್ತದೆ. ಮುಂದಿನ ಲೈಂಗಿಕ ಚಟುವಟಿಕೆಗಳಲ್ಲಿ ಸಹಜವಾಗಿ ಸ್ಪಂದಿಸದೇ ಇರುವ ಸಾಧ್ಯತೆಯೂ ಇರುತ್ತದೆ. ಸಾಧ್ಯವಾದಷ್ಟು ಸಹಜವಾಗಿ ತೊಡಗಿಕೊಳ್ಳುವುದು ಅತ್ಯುತ್ತಮ ಉಪಾಯ. ಪರಸ್ಪರ ಸುಖ, ಖುಷಿ ಕೊಡಲೆಬೇಕು ಎಂದು ಯೋಚಿಸುವ ಬದಲು ಪರಸ್ಪರರ ಖುಷಿಯ ಹುಡುಕಾಟದಲ್ಲಿ ಮುಂದುವರಿದರೆ ಬದುಕಿದು ಸುದೀರ್ಘ ಪಯಣ ಸುಖ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT