ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸುಗಳ ‘ಪರಿವರ್ತನೆ’

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ತಮ್ಮ ವೇಷದಿಂದಲೇ ಸಮಾಜದ ತಿರಸ್ಕಾರಕ್ಕೆ ಒಳಗಾದವರು ನಮ್ಮ ನಡುವೆ ಇದ್ದಾರೆ. ದುಡಿಯುವ ಆಸೆ ಇದ್ದರೂ ಅವಕಾಶಗಳು ದೊರೆಯದ ಜನರಿದ್ದಾರೆ. ಈ ಜನರಿಗೆ ಕೊಂಚ ನೆರವಿನ ಹಸ್ತ ಚಾಚಿದರೆ ಸಾಮಾನ್ಯ ಮನುಷ್ಯರಾಗುತ್ತಾರೆ. ಬದುಕುತ್ತಾರೆ –ಬಾಳುತ್ತಾರೆ. ಹೀಗೆ ನಮ್ಮ ನಡುವಿನ ನೋಟಗಳನ್ನೇ ವಸ್ತುವಾಗಿಸಿಕೊಂಡಿರುವ ಕಿರುಚಿತ್ರ ಅರಸು ಕುಮಾರ್ ನಿರ್ದೇಶನದ ‘ಪರಿವರ್ತನೆ’.

ಹೆಸರಿಗೆ ತಕ್ಕಂತೆಯೇ ಇಲ್ಲಿ ಸಕಾರಾತ್ಮಕ ಬದಲಾವಣೆ ಇದೆ. ನಿರ್ದೇಶಕರ ಈ ‘ಪರಿವರ್ತನೆ’ಯ ಆಶಯ ಸಮಾಜಕ್ಕೆ ಒಂದು ಸಂದೇಶ ದಾಟಿಸುತ್ತದೆ. ತುತ್ತು ಅನ್ನ, ಬದುಕು, ದುಡಿಮೆ, ಬದಲಾವಣೆ ಹೀಗೆ ಒಂದೇ ಕ್ಯಾನ್ವಾಸ್‌ ಮೇಲೆ ಚಕಚಕನೆ ಉತ್ತಮ ಸಂದೇಶವನ್ನು ‘ಪರಿವರ್ತನೆ’ ಹೇಳುತ್ತದೆ. ಎರಡು ವರ್ಗ ವ್ಯವಸ್ಥೆಯನ್ನು ಕೂಡ ಅಂತರ್ಗತವಾಗಿ ಹೇಳುತ್ತದೆ.  ಸಂಭಾಷಣೆಗಳೂ ಕಿರುಚಿತ್ರದ ವಸ್ತುವಿಗೆ ಮತ್ತಷ್ಟು ಸಾಣೆ ಹಿಡಿದಂತಿವೆ. 

ಕಥೆಯ ವಿಷಯಕ್ಕೆ ಬರೋಣ. ಅವನು ಭಿಕ್ಷುಕ. ತುತ್ತಿಗೂ ತತ್ವಾರ. ‘ಹಸಿವು, ತುಂಬಾ ಹಸಿವೂ’ ಎಂದು ನರಳುವವ.  ಆತನ ವೇಷ ನೋಡಿಯೇ ದೂರವಿಡುವವರು ಬಹುಮಂದಿ. ಆತನ ಸ್ಥಿತಿ ಅನುಮಾನಕ್ಕೂ ಕಾರಣವಾಗುತ್ತದೆ. ಅವನು ಪುಡಿಗಾಸಿನ ಭಿಕ್ಷೆ ಕೇಳುತ್ತಿಲ್ಲ. ‘ಏನಾದರೂ ಕೆಲಸ ಕೊಡಿ. ಒಂದು ಹೊತ್ತು ಊಟ ನೀಡಿ’ ಎಂದು ಬೇಡುವ ಭಿಕ್ಷುಕ. ಪುಡಿಗಾಸಿಗಿಂತ ಅವನಿಗೆ ಬೇಕಿರುವುದು ದುಡಿಮೆ.

‘ನಿನ್ನಂಥ ಭಿಕ್ಷುಕನಿಗೆ ಕೆಲಸ ಕೊಟ್ಟರೆ ಗ್ರಾಹಕರು ಯಾರೂ ಬರಲ್ಲ. ನಿನಗೆ ಕೆಲಸ ಕೊಟ್ಟು ನಾನು ಭಿಕ್ಷೆಗೆ ಹೋಗಲಾ’ ಎನ್ನುವ ಮಾತು ವೇಷದ ಆಧಾರದಲ್ಲಿ ಅವನನ್ನು ತಿರಸ್ಕರಿಸುವ ಸ್ಥಿತಿಗೆ ನಿದರ್ಶನ. ಭಿಕ್ಷುಕನ ಆರ್ತನಾದವೇ ಪ್ರಧಾನವಾಗಿದ್ದರೆ ‘ಪರಿವರ್ತನೆ’ ಚರ್ವಿತ ಚರ್ವಣವಾಗುತಿತ್ತು. ಆದರೆ ಇಲ್ಲೊಂದು ಬದಲಾವಣೆಯ ಪಸೆ ಇದೆ. ‘ಒಂದು ದಿನದ ಸಿನಿಮಾ, ಶೋಕಿಗಾಗಿ ವ್ಯಯಿಸುವ ಹಣವನ್ನು ಭಿಕ್ಷುಕನಿಗೆ ನೀಡಿದರೆ ಆತನ ಸ್ಥಿತಿ ಸುಧಾರಿಸುತ್ತದೆ.

ನಮ್ಮ ಒಂದು ದಿನದ ದುಡ್ಡು ಅವನಿಗೆ ಜೀವನ ಕೊಡಬಹುದು’ ಎಂದು ಸಕಾರಾತ್ಮಕವಾಗಿ ಚಿಂತಿಸುವ ಯುವ ಮನಸ್ಸುಗಳೂ ಇವೆ. ಅಂತಿಮವಾಗಿ ಭಿಕ್ಷುಕ ಸಣ್ಣ ಹೋಟೆಲ್ ನಡೆಸುವ ಮೂಲಕ ತನ್ನ ಬದುಕು ಕಟ್ಟಿಕೊಳ್ಳುವನು. ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದವನು ನೂರಾರು ಮಂದಿಗೆ ಊಟ ಹಾಕುವನು. ಈ ಹಾದಿ ಕಿರುಚಿತ್ರದಲ್ಲಿ ಒಂದು ಕಥೆಯಾಗಿ ಕಂಡರೂ ವಾಸ್ತವವಾಗಿ ನೋಡುವುದಾದರೆ ಛಲ, ಇಚ್ಛಾಶಕ್ತಿ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವ ಮಾತನ್ನೇ ಮತ್ತೊಮ್ಮೆ ಹೊರಸೂಸುತ್ತದೆ.

‘ಜೀವನ ಪೂರ್ತಿ ಭಿಕ್ಷೆ ಬೇಡಬೇಕು ಎಂದರೆ ಈ ದುಡ್ಡು ತೆಗೆದುಕೊಂಡು ಹೋಗು. ನೀನು ಸಮಾಜದ ಎಲ್ಲರಂತೆ ಆಗಬೇಕು ಎಂದರೆ ನನ್ನ ಜತೆ ಕೆಲಸ ಮಾಡು’ ಎಂದು ಹೋಟೆಲ್ ನಡೆಸುತ್ತಿರುವ ವ್ಯಕ್ತಿ (ಈ ಹಿಂದೆ ಭಿಕ್ಷುಕನಾಗಿದ್ದವನು) ಭಿಕ್ಷುಕನಿಗೆ ಹೇಳುವ ಮಾತು ಇಲ್ಲಿ ಅರ್ಥಪೂರ್ಣ. ‘ಪರಿವರ್ತನೆ’ಯ ಈ ಅಂತಿಮ ಸಾಲುಗಳು ಇಡೀ ಕಿರುಚಿತ್ರದ ಆಶಯವನ್ನು ತೋರುತ್ತವೆ.

ಕಿರುಚಿತ್ರದಲ್ಲಿ ಪ್ರೇಮಿಗಳಾದ ರಾಹುಲ್–ಪ್ರಿಯಾ, ಭಿಕ್ಷುಕ, ಭಿಕ್ಷೆ ಬೇಡುವ ಅಜ್ಜಿ, ಹೋಟೆಲ್‌ ಮಾಲೀಕನ ಮಾತು, ಹುಡುಗರ ಆಶಯ, ಭಿಕ್ಷುಕನ ಪರಿವರ್ತನೆ ಹೀಗೆ ಎಲ್ಲವೂ ನಮ್ಮ ನಡುವಿನ ಘಟನೆಗಳಿಂದಲೇ ಹೆಕ್ಕಿದಂಥವು. ಹದಿನಾರು ನಿಮಿಷಗಳ ಈ ಕಿರುಚಿತ್ರದಲ್ಲಿ ಅರಸು ಕುಮಾರ್ ಅವರದ್ದು ಸದಾಶಯ ಸಾರುವ ಪ್ರಯತ್ನ. ಸರಳ ಮತ್ತು ವಾಸ್ತವವಾಗಿ ಸಾಧ್ಯ ಎನ್ನುವಂಥ ವಿಷಯಗಳನ್ನು ಈ ಕಿರುಚಿತ್ರದಲ್ಲಿ ಕಾಣಬಹುದು.

ಬೋಪಣ್ಣ, ಭಾವನಾ, ಮಧು, ಅಶೋಕ್, ದೀಪಿಕಾ ಮತ್ತಿತರರು ‘ಪರಿವರ್ತನೆ’ಯ ಪಾತ್ರಧಾರಿಗಳು. ಮಧು, ಅಶೋಕ್, ನಾಗರಾಜ್, ನಿರ್ದೇಶಕ ಅರಸು ಕುಮಾರ್ ಅವರ ಈ ಸದಾಶಯದ ಪ್ರಯತ್ನಕ್ಕೆ ಕೈ ಜೋಡಿಸಿರುವ ತಾಂತ್ರಿಕ ತಂಡ. 

*
ಸಿಗ್ನಲ್‌ನಲ್ಲಿ ಕಥೆ ಸಿಕ್ಕಿತು
‘ಪರಿವರ್ತನೆ’ ಅರಸು ಕುಮಾರ್ ಅವರ ಎರಡನೇ ಕಿರುಚಿತ್ರ. ಈ ಹಿಂದೆ ತಮಿಳು ಕಥೆಯೊಂದರಿಂದ ಪ್ರಭಾವಿತರಾಗಿ ‘ಸೇವಕ’ ಕಿರುಚಿತ್ರ ನಿರ್ದೇಶಿಸಿದ್ದರು. ಅರಸು ಕಳೆದ ಎಂಟು ವರುಷಗಳಿಂದ ವಿಡಿಯೊ ಎಡಿಟಿಂಗ್‌ ಕೆಲಸ ಮಾಡುತ್ತಿದ್ದಾರೆ. ತಾಂತ್ರಿಕ ಅನುಭವ ಮತ್ತು ಸಿನಿಮಾ ಆಸಕ್ತಿ ಅವರನ್ನು ಕಿರುಚಿತ್ರ ನಿರ್ದೇಶನಕ್ಕೆ ಹಚ್ಚಿದೆ.

‘ಸೇವಕ ಕಿರುಚಿತ್ರ ತಮಿಳು ಕಿರುಚಿತ್ರವೊಂದರ ಸ್ಫೂರ್ತಿಯಿಂದ ಆದದ್ದು. ನಂತರ ನನ್ನದೇ ಆದ ಸ್ವಂತ ಪರಿಕಲ್ಪನೆಯ ಚಿತ್ರ ಮಾಡಬೇಕು ಎನಿಸಿತು. ಆಗ ಹೊಳೆದಿದ್ದೇ ‘ಪರಿವರ್ತನೆ’ಯ ಪರಿಕಲ್ಪನೆ. ನಾನು ಲವ್, ಕಾಮಿಡಿ ವಸ್ತುಗಳಲ್ಲಿ ಕಥೆ ಹುಡುಕುವುದಕ್ಕಿಂತ ಭಿನ್ನವಾದ ಮತ್ತು ಸಮಾಜಕ್ಕೆ ಸಣ್ಣ ಸಂದೇಶ ನೀಡಬೇಕು ಎನ್ನುವ ಆಸಕ್ತಿಯಿಂದ ಕಥೆ ಮಾಡಿಕೊಂಡೆ.

ಕಿರುಚಿತ್ರದ ಪರಿಕಲ್ಪನೆಯ ಬಗ್ಗೆ ಯೋಚಿಸುತ್ತಾ ಹೋಗುತ್ತಿದ್ದಾಗ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವವರು ಇದ್ದರು. ಅವರ ಬದುಕು ಹೇಗೆ ಇರುತ್ತದೆ. ಅವರಿಗೆ ಈ ಪರಿಸ್ಥಿತಿ ಬಂದಿದ್ದು ಹೇಗೆ, ಅವರಿಗೆ ಭಿಕ್ಷೆ ಬೇಡುತ್ತಲೇ ಜೀವನ ಸವೆಸಬೇಕಾ, ಅವರಿಗೂ ಎಲ್ಲರ ರೀತಿ ಬದುಕುವ ಆಸೆ ಇಲ್ಲವೇ ಇತ್ಯಾದಿ ಹಲವು ಯೋಚನೆಗಳು ಹುಟ್ಟಿಕೊಂಡವು. ಆಗ ಪರಿವರ್ತನೆ ನನ್ನೊಳಗೆ ಗಟ್ಟಿಯಾಗಿದ್ದು’ ಎನ್ನುತ್ತಾರೆ ಅರಸು ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT