ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮುಂದ ದೀಪವಿಲ್ಲ, ಕಲೆಯ ಬೆಳಕಿದೆ...

ನೆನಪಿನ ಗಣಿ * ಜೋಗತಿ ಮಂಜಮ್ಮ ಬದುಕಿನ ಕೆಲವು ಪುಟಗಳು
Last Updated 12 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ದೈಹಿಕ, ಕೌಟುಂಬಿಕ ಮತ್ತು ಸಾಮಾಜಿಕ ಹಿಂಸೆಗಳನ್ನು ಮೀರಿ ನಿಂತ ಗಂಡು ಜೋಗತಿ ಮಂಜಮ್ಮ. ಜೋಗತಿಯಾಗುವ ಕಾಲಘಟ್ಟ, ನಂತರದ ಕಾಲಘಟ್ಟಗಳಲ್ಲಿ ಸರಣಿ ಯಾತನೆಗಳನ್ನು ಮುಖಾಮುಖಿಯಾಗಿ ಬದುಕು ಕಟ್ಟಿಕೊಳ್ಳುತ್ತಲೇ ಜೋಗತಿ ನೃತ್ಯಕ್ಕೊಂದು ಘನತೆ ತಂದುಕೊಟ್ಟ ಜನಪದ ಕಲಾವಿದೆ. ಗುರು ಕಾಳವ್ವ ಜೋಗ್ತಿಯಿಂದ ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಯಲ್ಲಿ ಸಿಕ್ಕಿದ ಮನೆಯಲ್ಲಿರುವ ಮಂಜಮ್ಮ, ತನ್ನ ಸಂಗಡಿಗರು ಅನಾಥರಾಗಬಾರದು ಎಂಬ ಕಾರಣಕ್ಕೆ, ಆ ಮನೆಯನ್ನು ಪಂಚಾಯಿತಿಯಲ್ಲಿ ‘ಮಂಜಮ್ಮ ಜೋಗತಿ ಮತ್ತು ಸಂಗಡಿಗರು’ ಎಂದೇ ಮ್ಯುಟೇಶನ್ ಮಾಡಿಸಿದ್ದಾರೆ. ತಮ್ಮ ಜೋಗತಿ ಬದುಕಿನ ಹಲವು ನೆನಪುಗಳನ್ನು ಅವರು ಇಲ್ಲಿ ನೆನಪಿಸಿಕೊಂಡಿದ್ದಾರೆ.

‘ಕತೆ ಹೇಳುವೇ ನನ್ನ ಕತೆ ಹೇಳುವೆ’ ನನ್ನ ಇಷ್ಟದ ರಿಂಗ್‌ಟೋನು. ಇದೊಂಥರಾ ನನ್ನ ಜೀವನಕ್ಕೆ ಚೆನ್ನಾಗೈತಲ್ಲ. ನನ್ನ ಲೈಫಿಗೆ, ಬಾಳಿಗೆ ಇದೊಂದು ಅರ್ಥ ಇರುತ್ತೆ. ಇದೇ ಇರ್ಲಿ ಅಂತ ಇಟ್ಕೊಂಡಿದೀನಿ. ನಾನು ನೊಂದುಕೊಂಡಿರೋಳು. ನೊಂದುಕೊಂಡಿದ್ದರೂ ಅದೊಂದ್‌ ಅರ್ಥ ಐತೆ ಅಲ್ವಾ. ನೀವು ನಂಗೆ ಫೋನ್‌ ಮಾಡಿದ್ರೆ ಕೇಳ್ತಕ್ಕಂತಾ ಹಾಡು ‘ಒಂದೇ ನಾಡು ಒಂದೇ ಕುಲವು ಒಂದೇ ದೈವವು’. ಜೀವನದಲ್ಲಿ ಏನಿದೆ? ಒಂದೇ ಜಾತಿ, ಒಂದೇ ಕುಲ. ಅಂಗಾಗಿ ಅದೊಂದ್‌ ಹಾಡು, ಇದೊಂದ್‌ ಹಾಡು ಫಿಕ್ಸ್.

1986ರಲ್ಲೇ ನಾನು ಮರಿಯಮ್ಮನಹಳ್ಳಿ ಕಡೆ ಬಂದೆ. ನನ್ ವಿಳಾಸ ಇಷ್ಟೆ. ಮಂಜಮ್ಮ ಜೋಗತಿ. 4ನೇ ವಾರ್ಡು ‘ಬಿ’, ಎನ್‌ಎಚ್‌ 13ರ ಪಕ್ಕ. ಮರಿಯಮ್ಮನಹಳ್ಳಿ, ಹೊಸಪೇಟೆ ತಾಲ್ಲೂಕು, ಬಳ್ಳಾರಿ ಜಿಲ್ಲೆ. ನನ್ನ ಗುರು ಕಾಳವ್ವ ಜೋಗ್ತಿ ಇಲ್ಲಿರೋವಾಗ ಜೋಗ್ತೀರ ಜೊತೆ ಬಂದ್‌ ಹೋಗ್ತಿದ್ದೆ. ಅವ್ರು ಇಲ್ಲೇ ಗುಡಿಸಲಲ್ಲಿ ಇದ್ರು. ಇಲ್ಲಿಗ್‌ ಬಂದು ಲಗೇಜುಗಳನ್ನಿಟ್ಟು ಕಾರ್ಯಕ್ರಮಗಳಿಗೆ ಹೋಗ್ತಿದ್ವಿ. ಸಂಜೆ ಆಯ್ತು ಅಂದ್ರೆ ಇಲ್ಲೇ ಇದ್‌ ಬಿಡ್ತಿದ್ವಿ. ಆವಾಗೆಲ್ಲ ಟೆಂಪೊ, ಆಟೊ, ಟ್ರ್ಯಾಕ್ಸ್ ಏನೂ ಇರ್ತಿರಲಿಲ್ಲವಲ್ಲ. ಬಸ್ಸಿಗೆ ಹೋಗಬೇಕು. ಇಲ್ಲಾ ನಡಕೊಂಡು ಹೋಗಬೇಕು.

ಆವಾಗ ಕಾಳವ್ವ ಜೋಗ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಬಂತು. 2000ನೇ ಸಾಲು. ಗುಡಿಹಳ್ಳಿ ನಾಗರಾಜ ಸರ್‌ ‘ಕಾಳವ್ವ ಜೋಗ್ತಿ ಎಲ್ಲಿ ನಿನ್ ಅರಮನೆ’ ಅಂತ ‘ಪ್ರಜಾವಾಣಿ’ಯ ‘ಕರ್ನಾಟಕ ದರ್ಶನ’ದಲ್ಲಿ ಆರ್ಟಿಕಲ್ ಮಾಡಿದ್ರು. ಅದುನ್ನ ನೋಡಿ ಕೂಡ್ಲಿಗಿ ಎಂಎಲ್‌ಎ ಆಗಿದ್ದ ಸಿರಾಜ್‌ ಶೇಖ್‌ ಅವರು ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದ ನೇಮಿರಾಜನಾಯ್ಕ ಅವರನ್ನು ಕೇಳಿ 15 ದಿನದೊಳಗೆ ಕಾಳವ್ವಗೆ ಮನೆ ರೆಡಿ ಮಾಡಿಕೊಡಬೇಕು ಅಂತ ಹೇಳಿದ್ರು.

ಮನೆ ಕಾಳವ್ವ ಜೋಗ್ತಿ ಹೆಸರಿಗೇ ಇತ್ತು. ಅವರು ತೀರ್ಕೊಂಡ ಮೇಲೆ, ಏಳು ವರ್ಷದ ಹಿಂದೆ ನನ್ ಹೆಸರಿಗೇ ಮಾಡಿಕೊಂಡಿದೀನಿ.  ನಾಳೆ ನಾನು ಸತ್ತ ಮೇಲೆ ನನ್ನ ಅಣ್ಣ, ತಮ್ಮ, ತಂಗಿ, ಬರಬಾರದು ಅಂತ ಹೇಳಿ, ‘ಮಂಜಮ್ಮ ಜೋಗತಿ ಮತ್ತು ಸಂಗಡಿಗರು’ ಅಂತ ಪಂಚಾಯಿತಿನಾಗೆ ಮ್ಯುಟೇಶನ್‌ ಮಾಡಿಸಿದೀನಿ. ನನ್ ಜೊತೆಗಿರೋರು ಪರದೇಶಿಗಳಾಗಬಾರದು ಅಂತ. ‘ನನಗ್ ವಯಸ್ಸಾದ ಮೇಲೆ ಮಾಡೋಣ ಬಿಡು’ ಅಂತ ಅಂದ್ಕಂಡ್ರೆ ನನಗ್ ಬರೋ ಬುದ್ಧಿ ಎಂತದೋ ನಾನ್ ಕಾಣೆ. ಅಣ್ಣಂಗೋ, ತಮ್ಮಂಗೋ ಕೊಟ್ಟು ಆರಾಮಾಗಿ ಜೀವನ ಮಾಡಬಹುದು ಅನ್ನೋ ಬುದ್ಧಿ ಬರಬಹುದು. ನಾನು ಈವಾಗ ಚೆನ್ನಾಗಿರೋವಾಗ್ಲೇ, ಮುಂದ್‌ ಬರೋರ್ಗೆ ಇದೊಂದು ಸನ್ನಿಧಿ ಆಗಿರಬೇಕು ಅಂತ. 

ಮಂಜಮ್ಮ ಜೋಗತಿ ಜೊತೆ ಹಿಂದ್‌ ಯಾರಿದ್ರು, ಈಗ ಯಾರು ಇದಾರ, ಒಟ್ಟು ಅವರಿಗೆ ಸಂಬಂಧ ಇರ್ತದೆ ಮನೆ. ಈಗ ನಂಗೂ ಮಾರಕ್‌ ಬರಲ್ಲ. ಅವರ್‌ಗೂ ಮಾರಕ್‌ ಬರಲ್ಲ. ನನ್‌ ಹೆಸರೂ ತೆಗೆದುಹಾಕಕ್ ಬರಲ್ಲ. ಪಂಚಾಯತಿಯವರೇ ಕೊಟ್ಟ ಐಡಿಯಾ ಇದು. ಆವಾಗಿಂದು ನೆನಸಿಕೊಂಡ್ರೆ ಕಷ್ಟ ಆಗುತ್ತೆ ಮನಸಿಗೆ. ಆವಾಗ ಬಹಳ ಕಷ್ಟಪಟ್ಟೀವಿ. ಇಡೀ ಹಗಲೆಲ್ಲ ಕುಣುದ್ರೂನೂ ಹತ್ ಪೈಸಾ, ಐದ್‌ ಪೈಸಾನೂ ಕೊಡ್ತಿದ್ದಿಲ್ಲ. ಅಷ್ಟರ ಮಟ್ಟಿಗೆ ಕುಣ್ಸಿದಾನೆ ಆ ಬಸಪ್ಪ. ಅಷ್ಟೆಲ್ಲ ತೊಂದ್ರೆ ಕೊಡ್ತಿದ್ದ. ಆವಾಗ ಆ ಜೀವನ ಕಷ್ಟ ಆಗಿತ್ತು. ಈಗ ಈ ಏನು ಪ್ರಶಸ್ತಿಗಳು ಅವೆಲ್ಲ ಬಂದ್ವಲ್ಲ.

ನಾನು ಆವಾಗ ಕಷ್ಟ ಪಡ್ದೆ ಇದ್ದಿದ್ರೆ ಈವಾಗ ಈ ಗೌರವ ಸಿಕ್ತಿರಲಿಲ್ಲವೋ ಏನೋ? ನನಗೆ ಈ ಪ್ರಶಸ್ತಿ ಬಂದ ಮೇಲೆ ಬಸಪ್ಪನ ನೆನಸಿಕೊಳ್ತಾ ಇದ್ದೀನಿ. ಮುಂಚೆ ಎಲ್ಲ ಶಾಪ ಹಾಕಿದೀನಿ ಅವನಿಗೆ. ನಮ್ಮನ್ ದುಡುಸ್ಕೊಂಡು ತಿಂದ, ಹಂಗೆ, ಹಿಂಗೆ ಅಂತ. ನಮಗೇನೂ ಕೊಡ್ತಿರಲಿಲ್ಲ. ಹಿಂಸೆ ಮಾಡದಾ ಅಂತಂದು ಬಹಳ ನೊಂದುಕೊಂಡಿದೀನಿ. ಪ್ರಶಸ್ತಿಗಳು ಬಂದ ಮೇಲೆ ಆತನಿಗೆ ಗೌರವ ಕೊಡ್ತಿದೀನಿ. ಏನೋ ಒಂದು ಕಲೆ ಕಲ್ಸಿದ ನನಗೆ. ದುಡ್‌ ಕೊಡ್ಲಿ, ಕೊಡದೇ ಇರಲಿ, ಆ ಕಲೆಯಿಂದ ನಾನು ಇವತ್ತು ಬದುಕ್ತಾ ಇದೀನಿ.  ಜೀವನಕ್ಕೋಸ್ಕರ ಈ ಕಲೆಯನ್ನು ಅಳವಡಿಸಿಕೊಂಡಿದೀನಿ. ಕಲೆಯ ಮುಖಾಂತರ ಹೋಗ್ತಾ ಇದೀನಿ.

* * * *
ನನ್ನ ಜೀವನದಲ್ಲಿ ಮರೆಯಲಾಗದ ಕಹಿ ಘಟನೆ ಅಂದರೆ ನಾನು ಹೈಸ್ಕೂಲ್ ಫೀಲ್ಡಲ್ಲಿ ಒಂದು ಸಂಜೆ ನಡಕೊಂಡು ಹೋಗ್ತಾ ಇದ್ದಾಗ ಆಗಿದ್ದು. ಪತ್ರೀಕೇಲಿ, ಟೀವಿಗಳಲ್ಲಿ ಅತ್ಯಾಚಾರ ಅಂತ ಸುದ್ದಿ ಬಂದಾಗ, ಹೆಣ್ಮಕ್ಕಳನ್ನ ತೋರಿಸಿದಾಗ ಥಟ್ಟನೆ ನನ್ನ ಮನಸು ಕುಕ್ಕವಾಡ ಹೈಸ್ಕೂಲ್ ಫೀಲ್ಡಿಗೆ ಹೋಗುತ್ತೆ. ನನ್ನನ್ನೇ ಬಿಟ್ಟಿಲ್ಲ ಆ ಜನ. ಇನ್ನು ಹುಡುಗೀರ ಗತಿ ಏನು ಅಂತ ಅನ್ನಿಸ್ತದೆ.

ಕುಡಿದಿದ್ದ ಆ ನಾಲ್ಕೈದು ಜನ ನನ್ನ ಉಪಯೋಗಿಸಿಕೊಂಡ್ರಲ್ಲ. ಆ ದೃಶ್ಯಗಳು ಕಣ್ಣಿಗೆ ಕಟ್ಕಂಡ್ ಬಿಡ್ತವೆ. ನಾನು ಅತ್ಲಾಗೆ ಹೆಣ್ಣುನೂ ಅಲ್ಲ. ಗಂಡುನೂ ಅಲ್ಲ. ಸೀರೆ ಉಟ್ಕೊಂಡ್ ಹೋಗ್ತಿದ್ದ ನನ್ನನ್ನು ತಡುದು ಮಾನಭಂಗ ಮಾಡಿದರು. ನಾಯಿಗೆ ಒಂದು ಚೆಂಡು ಹಾಕಿದರೆ ಬೇಕಾದಂಗೆ ಆಟ ಆಡಿಕೊಳ್ಳುತ್ತೆ. ಅಂಗೆ ನನ್ನನ್ನು ಉಪಯೋಗಿಸಕೊಂಡರಲ್ಲ. ಅದು ತುಂಬ ಕೆಟ್ಟ ಘಟನೆ.

* * * *
ಬಸಪ್ಪನ ಜೊತೆ ಇದ್ದಾಗ ದಾವಣಗೆರೆ ಬಸ್‌ಸ್ಟಾಂಡಲ್ಲಿ ದೇವರ ಕೊಡ ಹೊತ್ಕೊಂಡು ಕುಣೀತಾ ಇದ್ವಿ. ಒಂದು ಸಾರಿ ಕಾಲಿಗೆ ಕಲ್ಲು ಒತ್ತಿಕೊಂಡು ಕೀವಾಗಿ, ಇಷ್ಟು ದಪ್ಪ ಬಾತುಕೊಂಡಿತ್ತು, ಕಾಲು ನೆಲಕ್ಕಿಟ್ಟರೆ ಕೀವು, ರಕ್ತ ಹಂಗೇ ಬೀಳ್ತಿತ್ತು. ನೋಡೋಕ್ ಬಂದ್‌ ಜನ ಬಸಪ್ಪನ ಕೇಳ್ತಾ ಇದ್ರು. ‘ಏನಪ್ಪ ನಿಂಗೆ ಅಂತಃಕರಣನೇ ಇಲ್ಲ. ಆ ಜೋಗಮ್ಮ ಕೊಡ ಹೊತ್ತುಕೊಂಡು ಕುಣಿತಾ ಇದಾಳ. ಕೀವು, ರಕ್ತ ಬೀಳ್ತಾ ಐತಿ. ನೀನ್ ಹಂಗೇ ಕುಣುಸ್ತಾ ಇದ್ದೀಯಲ್ಲ’ ಅಂತ. ‘ಅಯ್ಯೋ ಅವಳು ಇವಾಗ ಕಲಿತುಕೊಂಡರೆ, ಮುಂದೇ ಅವಳೇ ದುಡ್ಕೊಂಡ್ ತಿಂತಾಳಾ.

ಇವಾಗ ಮೈಸಾಪರಿಕೆ ಮಾಡಿದರೆ ನಾಳೆ ಅವಳು ಉದ್ದಾರ ಆಗ್ತಾಳೇನು’ ಅಂತಿದ್ದ ಬಸಪ್ಪ. ಪಾದದಿಂದ ಭಾರ ಹಾಕಿ ಕುಣಿದು ನಾನು ಜೀವನ ಮಾಡಬೇಕಲ್ಲ. ನಂಗೆ ಆತನ್ನ ಬಿಟ್ಟು ಬೇರೆ ಯಾರೂ ಇಲ್ಲ. ತಂದೆ, ತಾಯಿ, ಬಂಧು, ಬಳಗ ಎಲ್ಲ ಹೊರಗಡೆ ಹಾಕಿಬಿಟ್ಟಿದಾರೆ. ಹೋಗೋಕೆ ಎಲ್ಲೂ ಜಾಗವೇ ಇಲ್ಲ. ಫಸ್ಟಿಗೆ ಕಂಡ ದಿನವೇ ಅವನ್ನ ಅಪ್ಪಾಜಿ ಅಂತ ಕರೆದುಬಿಟ್ಟಿದೀನಿ. ಅವನು ಆ ಗೌರವ ಉಳಿಸಿಕೋಬೇಕು. ಆದರೆ ಹಾಗೇ ಇಲ್ಲ. ಶೆಟ್ರು ಜಾತಿಯಾಗೇ, ವೈಶ್ಯರ ಕುಲದಾಗೆ ನಿನ್ನಂಗೆ ಇಲ್ಲ.

ನೀನು ಎಸ್ಸಲ್ಸಿ ಓದಿ, ಒಂದು ವರ್ಷ ಫೈನಾನ್ಸ್‌ದಾಗ ಕೆಲಸ ಮಾಡಿ, ನಮ್‌ ಜನದಾಗೇ ಇರ್ಬೇಕು ಅಂತ ಹೊಡೆದು, ಬಡಿದು ಹಿಂಸೆ ಮಾಡಿಬಿಟ್ಟಿದ್ದಾರೆ. ಅಲ್ಲಿ ವಿಷ ಕುಡ್ದು ಹೊರಗೆ ಬದುಕ್ಕೊಂಡ್ ಬಂದಿದೀನಿ. ಮತ್ತೆ ಸಾಯಕ್‌ ಮನಸೂ ಇಲ್ಲ. ಜಾಗವೂ ಇಲ್ಲ. ಇದ್ರಲ್ಲೇ (ಜೋಗತಿ ಕುಣಿತ) ಒಂದು ಏನಾದ್ರೂ ಸಾಧನೆ ಮಾಡಬೇಕು ಅಂತಂದು ಒಂದು ಗಟ್ಟಿ ಮನಸು ಮಾಡಿ ಆತನತ್ರ ಕಲೆ ಕಲ್ತಿದ್ದು. ಮರೀಲಾರದ ಘಟನೆ. ಅಲ್ಲಿಂದ 86ರಾಗೇ ಇಲ್ಲಿಗ್ ಬಂದ್ ಮೇಲೆ ಕಾಳವ್ವ ಜೋಗ್ತಿ ಸಿಕ್ಕಿದ್ದು. ನನಗೆ ಕೋಪ ಜಾಸ್ತಿ. ಆದರೆ ಕೋಪ ಬಂದಾಗ ನನಗೆ ಬೈಯೋಕೆ ಬರೋದು ಎರಡೇ ಬೈಗುಳ. ಹುಡುಗರಾದ್ರೇ ಲುಚ್ಚಾ ಸೂಳೇ ಮಗ. ಹುಡ್ಗೀರಾದ್ರೆ ಬೋಸೂಡೇರು.

ಹೇಗಿದ್ದೆ ಹೇಗಾದೆ?
ನನ್ನ ಮೊದಲ್ನೇ ಹೆಸರು ಬಿ. ಮಂಜುನಾಥ ಶೆಟ್ಟಿ. ಅದು ನಂಗೆ ಹದಿನೆಂಟು ವರ್ಷ ಆಗೋವರ್ಗೂ ಇತ್ತು. ಆಮ್ಯಾಲ ಮಂಜಮ್ಮ ಆದೆ. ಅದಕ್ಕೆ ನನ್ನ ದೇಹ ಮತ್ತು ಮನಸ್ಸಿನ ಗೀಳು, ರೋಗ ಕಾರಣ. ದೈವಪ್ರೇರಣೆಯೂ ಇದೆ ಅಂತ ನಂಬೀದೀನಿ. ನನ್ನ ಅವ್ವ ಜಯಲಕ್ಷ್ಮಿ. ಅಪ್ಪ ಹನುಮಂತಯ್ಯ ಶೆಟ್ಟಿ ಕಂಪ್ಲಿ ಶುಗರ್‌ ಫ್ಯಾಕ್ಟರೀಲಿ ಕೆಲ್ಸ ಮಾಡ್ತಿದ್ರು.

ನನ್ನ ಅವ್ವ ಇಪ್ಪತ್ತೊಂದು ಮಕ್ಕಳ್ನ ಹೆತ್ತಾಳೆ. ಇಪ್ಪತ್ತರಿಂದ ಇಪ್ಪತ್ತೆರಡು ವರ್ಷ ಹೆರುವ ಕೆಲಸ ಮಾಡ್ಯಾಳೆ. ಆ ಮಕ್ಳ ಪೈಕಿ ಹದಿನೇಳು ಮಕ್ಕಳು ಅವಳ ಕಣ್ಮುಂದೆಯೇ ತೀರಿಕೊಂಡ್ವು. ಕಂಪ್ಲಿಯ ತೆಗ್ಗಿನಮಠ ಓಣಿಯಲ್ಲಿ ಹುಟ್ಟಿದ ನಾನು ಎಷ್ಟನೆಯವನೋ ಗೊತ್ತಿಲ್ಲ. ಈಗ ನಾನು, ಅಣ್ಣ, ಇಬ್ಬರು ತಂಗಿಯರಿದ್ದೇವೆ. ನಮ್ಮಣ್ಣ ವೀರಾಂಜನೇಯ ಶೆಟ್ಟಿ ನಮ್ಮನ್ನು ಕಷ್ಟಪಟ್ಟು ಸಾಕಿದ.

ಹರಿಹರದಲ್ಲಿ ಶಾಲೆಗೆ ಹೋಗುವಾಗ ಕಪ್ಪಗಿದ್ದ ನನಗೆ ಅವ್ವ ಕೃಷ್ಣನ ಡ್ರೆಸ್‌ ಹಾಕಿ ಮುದ್ದಾಡ್ತಿದ್ದ ನೆನಪು ಚೆನ್ನಾಗೈತೆ. ಆದರೆ ನಾನು ಕೃಷ್ಣನಂತಾಗದೆ ಬೃಹನ್ನಳೆಯಂತಾದೆ. ಏಳನೇ ಕ್ಲಾಸಲ್ಲಿರೋವಾಗ ನನ್ನ ದೇಹದಲ್ಲಿ ಭಾಳ ಬದ್ಲಾವಣೆಗಳಾದ್ವು. ಹುಡುಗರ ಜೊತೆಗಾಗಲೀ, ಹುಡುಗೀರ ಜೊತೆಗಾಗಲೀ ಹೊಂದಿಕೊಳ್ಳಲು ಆಗ್ತ ಇರಲಿಲ್ಲ. ಹೆಣ್ಣೂ ಅಲ್ಲದೆ, ಗಂಡೂ ಅಲ್ಲದೆ ಸಂಕಟ ಅನುಭವಿಸ್ತಿದ್ದೆ. ಹೆಣ್ಣುಮಕ್ಕಳಂಗೆ ಇರ್ಬೇಕು, ಅವ್ರ ಜೊತೆಗೇ ಇರ್ಬೇಕು ಎಂದು ಅನ್ನಿಸ್ತಿತ್ತು. ಎಸ್ಸೆಲ್ಸಿ ಓದೋ ಹೊತ್ಗೆ ಹುಡ್ಗೀರ ಥರ ವರ್ತಿಸಲಾರಂಭಿಸಿದೆ. ಪರೀಕ್ಷೇಲಿ ಫೇಲಾದೆ.

ಒಮ್ಮೆ ಮೂರ್ಛೆ ಬಿದ್ದು ಬಡಬಡಿಸಿದ ಮಾತುಗಳಿಂದ ‘ಶೆಟ್ರು ಹುಡುಗನ ಮೈಯಾಗ ಹುಲಿಗೆಮ್ಮ ಬರ್ತಾಳ’ ಅಂತ ಜನ ಮಾತಾಡ್ಕಂಡ್ರು. ಹುಡುಗ್ರು ಹೆಣ್ಣಗ ಅಂತ ಕರೀತಿದ್ರು. ಅವರ ಜೊತೆ ಗದ್ದೆ ಕೆಲ್ಸಕ್ ಹೋಗಲ್ಲ ಅಂದಿದ್ದಕ್ಕೆ ಮನೆ ಮಂದಿ ಮಂಚಕ್ಕೆ ಕಟ್ಟಿ ಹಾಕಿ ಹೊಡುದ್ರು. ಮನೆ ಒಳಗೆ, ಹೊರಗೆ ಅಂಥ ಹೊಡೆತಗಳು ಅದೆಷ್ಟೋ. ಹೊಡೆಯುವವರೊಡನೆ ಜನರೂ ಸೇರಿಕೊಳತಿದ್ರು. ಹೊಡೆತಗಳಿಗಿಂತ್ಲೂ ಅವರ ಕ್ಯಾಕೆ, ನಗೆ, ಅನುಕಂಪ ಹೆಚ್ಚು ನೋವ್ ಕೊಡ್ತಿದ್ದವು.

ಸುಧಾರಿಸಲಿ ಅಂತ ಅಪ್ಪನ ಬಳಿಗೆ ಕುಕ್ಕುವಾಡಕ್ಕೆ ಕಳಿಸಿದ್ರು. ಆ ಹೊತ್ತಿಗೆ ನಾನು ಹೆಣ್ಣಾಗಿದ್ದೆ. ನನ್ನ ಹೆಣ್ಣುತನ ಯಾರಿಗೂ ಸೋತಿರಲಿಲ್ಲ. ನನ್ನ ತಾಯಿಯ ತಮ್ಮ, ಅಂದರೆ ಮಾವ, ಗಂಡು ಜೋಗತಿಯಾಗಿದ್ದ ಗಾಂದೆಮ್ಮ ಜೋಗತಿಯಿಂದ ಸಮಾಧಾನ ಸಿಗಬಹುದು ಅಂತ ಅಂದುಕೊಂಡಿದ್ದೂ ಸುಳ್ಳಾಯಿತು. ಹುಲಿಗೆಮ್ಮನ ಗುಡಿಯಲ್ಲಿ ಜೋಗತಿ ದೀಕ್ಷೆ ಪಡೆದ ಮೇಲೆ ಮನೆಯವರು ಸಹಿಸದಾದರು. ಹೊರಗೆ ಬರಲೇಬೇಕಾಯ್ತು.

ಸಂಕಟ ತಡೀಲಾರದೆ, ಇನ್ನು ಬದುಕಿರಲೇಬಾರದು ಅಂತ ದಾವಣಗೆರೆಯಿಂದ ವಿಷ ತಂದು ಕುಡಿದೆ. ಚಿಗಟೇರಿ ಆಸ್ಪತ್ರೆಯಲ್ಲಿ ನನಗೆ ಪ್ರಜ್ಞೆ ಬರುವವರೆಗೂ ಇದ್ದ ಅವ್ವ ಆಮೇಲೆ ಹೊರಟುಹೋದಳು. ಆಸ್ಪತ್ರೆಯಲ್ಲಿ ಇರುವಷ್ಟು ದಿನ ಬದುಕು ಕಟ್ಟಿಕೊಳ್ಳುವ ಸಲುವಾಗಿ ಅಲ್ಲಿ ರೋಗಿಗಳು, ಅವರ ಮನೆಯೋರ ಮುಂದ ಹಾಡಿ ಕುಣೀತಿದ್ದೆ.

ಮನೆ ಬಿಟ್ಟು ಬಾಡಿಗೆ ಮನೆ ಮಾಡಿಕೊಂಡ ಮ್ಯಾಗ ಪೂರ್ತಿ ಒಂಟಿಯಾದೆ. ಪಡ್ಲಿಗೀ ಹಿಡ್ಕೊಂಡು ಶುಕ್ರವಾರ, ಮಂಗಳವಾರ ಭಿಕ್ಷಾಟನೆ ಸುರು ಮಾಡಿದೆ. ಒಂದ್‌ ದಿನ ಸಂತೇಲಿ ಭಿಕ್ಷೆ ಬೇಡುವಾಗ ಕಂಡ ಗುಂಪಿನಲ್ಲಿದ್ದ ಮಟ್ಟಿಕಲ್ಲು ಬಸಪ್ಪ. ಅವನ ಬಳಿ ಇದ್ದ ಸಣ್ಣ ಹುಡುಗ ತಲೆ ಮ್ಯಾಲೆ ಕೊಡ ಹೊತಕೊಂಡು ಜೋಗತಿ ನೃತ್ಯ ಮಾಡತಿದ್ದ. ನಂಗೂ ಹಂಗೆ ಕುಣೀಬೇಕು, ಅದ್ನ ಕಲೀಬೇಕು ಅಂತ ಆಸೆ ಆಯ್ತು. ಕುಣಿತ ಮುಗಿದು ಜನ ಹೋದ ಮ್ಯಾಲೆ ಬಸಪ್ಪನ ಹತ್ತಿರ ಹೋಗಿ ‘ಅಪ್ಪಾಜಿ’ ಅಂದೆ. ಆತ ನನ್ನ ಜೋಗತಿ ಕಲೆಯ ಮೊದಲ ಗುರುವಾದ. ಆಮೇಲೇನಾಯ್ತು ಅಂತ ಮೊದ್ಲೇ ಹೇಳಿದೀನಿ.

ನಾನೀಗ ಈ ಕಲೇನ ಬಿಟ್ಟು ಬೇರೇನೂ ಮಾಡಲ್ಲ. ‘ಕರ್ನಾಟಕ ಯಕ್ಷಗಾನ ನಾಟಕ ಅಕಾಡೆಮಿ’ ಪ್ರಶಸ್ತಿ ಸಿಕ್ಕಿದ ಮ್ಯಾಲ ಜನ ನಾನು ಭಿಕ್ಷೆ ಬೇಡೋದನ್ನ ನೋಡೋಕೆ ತಯಾರಿಲ್ಲ. ನನ್‌ ಮನೆ ಮುಂದ ಬೀದಿ ದೀಪ್ವೇ ಇಲ್ಲ. ಕಾಳವ್ವ ಜೋಗ್ತಿ ಇದ್‌ ಕಾಲ್‌ದಿಂದ್ಲೂ ದೀಪ ಇಲ್ಲ. ಆದರೆ ಕಲೆಯ ಬೆಳಕೇ ನಮ್ಮಂತ ಜೋಗತಿಯರ್ನ ಕಾಯ್ತ ಅದೆ.

“ನಾವು ಉತ್ತಮ ಸ್ಥಾನದಾಗ ಇದ್ದಿದ್ರೆ ತಿಂಗಳಿಗೆ ಇಷ್ಟಿಷ್ಟು ಅಂತ ಕೊಟ್‌ಬುಡ್ತಿದ್ವಿ. ನಮ್ಗೂ ದೇವ್ರು ಅಷ್ಟೊಂದು ಕೊಟ್ಟಿಲ್ಲ. ನೀನಿಲ್ಲಿ ನಿಂದರ್‌ಬ್ಯಾಡ. ನಮಿಗೆ ನೋಡಕ್‌ ಆಗಲ್ಲವ್ವ’’ ಅಂತಂದ್‌ ಹೇಳ್ದೋರು ಇದ್ದಾರೆ. ಮತ್‌ ಆ ಒಂದ್‌ ರೀತಿಯಿಂದ ಹೊಟ್ಟೆಪಾಡಿಗೆ ಕಲ್‌ ಬಿದ್ದಂಗೆ. ಈ ಪ್ರಶಸ್ತಿಯಿಂದ ಕಲ್‌ ಹಾಕ್ದಂಗೇನೆ. ಈ ಪ್ರಶಸ್ತಿಗಳಿಂದ ಒಂದ್‌ ರೀತಿ ಘನತೆ ಹೆಚ್ಚಿದೆಯೇ ವಿನಹ, ಹೊಟ್ಟೆ ಅಂತೂ ತುಂಬಿಲ್ಲ. ತುಂಬೋದೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT