ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಯ ವಿರುದ್ಧ ಸಾಕ್ಷ್ಯ ಸಂಗ್ರಹಕ್ಕೆ ಕ್ರಮ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ನವದೆಹಲಿ  (ಪಿಟಿಐ): ಉದ್ಯಮಿ ವಿಜಯ್‌ ಮಲ್ಯ ಅವರ ವಿರುದ್ಧ  ಬಲವಾದ ಸಾಕ್ಷ್ಯ ಸಂಗ್ರಹಿಸಲು   ಜಾರಿ ನಿರ್ದೇಶನಾಲಯವು (ಇ.ಡಿ) 17 ಬ್ಯಾಂಕ್‌ಗಳು ಮತ್ತು ಹಲವಾರು ತನಿಖಾ ಸಂಸ್ಥೆಗಳಿಗೆ ಪತ್ರ ಬರೆದಿದೆ.

ಐಡಿಬಿಐ ಬ್ಯಾಂಕ್‌ನಿಂದ ಸಾಲ ಪಡೆದಿರುವ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಮಲ್ಯ ಅವರ ವಿರುದ್ಧ ತನಿಖೆ ಪ್ರಗತಿಯಲ್ಲಿದೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಖಚಿತ ಸಾಕ್ಷ್ಯ ಸಂಗ್ರಹಿಸುವುದು ‘ಇ.ಡಿ’ಯ ಉದ್ದೇಶವಾಗಿದೆ.

ಮಲ್ಯ ಮತ್ತು ಅವರ ಸಂಸ್ಥೆಗಳ ಅಧಿಕಾರಿಗಳು ವಿದೇಶಗಳಲ್ಲಿ ಹೊಂದಿರುವ ಸಂಪತ್ತಿನ ವಿವರಗಳನ್ನು ಸಿಬಿಐ ಮತ್ತು ಕೇಂದ್ರೀಯ ಭದ್ರತಾ ಸಂಸ್ಥೆಗಳಿಂದ ಸಂಗ್ರಹಿಸಲೂ ಉದ್ದೇಶಿಸಲಾಗಿದೆ.

ಅಕ್ರಮ ಹಣ ವರ್ಗಾವಣೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಫಿಷರ್‌ ಏರ್‌ಲೈನ್ಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಎ. ರಘುನಾಥನ್‌ ಮತ್ತು  ಯುನೈಟೆಡ್‌ ಬ್ರಿವರೀಸ್‌ನ  ಮಾಜಿ ಮುಖ್ಯ ಹಣಕಾಸು ಅಧಿಕಾರಿ ರವಿ ನೆಡುಂಗಡಿ ಅವರನ್ನು ‘ಇ.ಡಿ’ ಈಗಾಗಲೇ ವಿಚಾರಣೆಗೆ ಗುರಿಪಡಿಸಿದೆ.

ಈ ತಿಂಗಳ 18ರಂದು ಮುಂಬೈನಲ್ಲಿ  ನಡೆಯಲಿರುವ ವಿಚಾರಣೆಗೆ ಮಲ್ಯ ಅವರು ಹಾಜರಾಗದಿದ್ದರೆ ಅಥವಾ ಗೈರು ಹಾಜರಿಗೆ ಸೂಕ್ತ ಕಾರಣಗಳನ್ನು ನೀಡದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ ಜಾರಿ ನಿರ್ದೇಶನಾಲಯವು ಪರಿಶೀಲಿಸುತ್ತಿದೆ.

ವಿಚಾರಣೆಗೆ ಹಾಜರಾಗಲು ಅಂಚೆ ಮತ್ತು ಇ–ಮೇಲ್‌ ಮೂಲಕ ಕಳಿಸಿರುವ ಸಮನ್ಸ್‌ಗೆ ಮಲ್ಯ ಅವರ ಪ್ರತಿಕ್ರಿಯೆ ಎದುರು ನೋಡಲಾಗುತ್ತಿದೆ. ವಿಚಾರಣೆಗೆ ಹಾಜರಾಗದಿದ್ದರೆ ಅಥವಾ ಗೈರು ಹಾಜರಿಗೆ ಅರ್ಹ ಕಾರಣಗಳನ್ನು ನೀಡದಿದ್ದರೆ ಅವರ ಪಾಸ್‌ಪೋರ್ಟ್‌ ರದ್ದುಗೊಳಿಸುವುದೂ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳುವುದನ್ನು ಪರಿಶೀಲಿಸಲಿದೆ.

ಕಿಂಗ್‌ಫಿಷರ್‌ ಏರ್‌ಲೈನ್ಸ್‌ ವಿರುದ್ಧ ಈ ಮೊದಲು ಆದಾಯ ತೆರಿಗೆ, ಸೇವಾ ತೆರಿಗೆ ಇಲಾಖೆಗಳು ಮತ್ತು ವಿಶೇಷ ವಂಚನೆ ತನಿಖಾ ಕಚೇರಿಗಳು ನಡೆಸಿರುವ ತನಿಖೆಯ ವಿವರಗಳನ್ನೂ ಸಲ್ಲಿಸುವಂತೆ ‘ಇ.ಡಿ’ ಮನವಿ ಮಾಡಿಕೊಂಡಿದೆ.

ರಾಜೀನಾಮೆ ಅನಿವಾರ್ಯ: ಷೇರುಪೇಟೆ
ಯಲ್ಲಿ ವಹಿವಾಟು ನಡೆಸುವ ಸಂಸ್ಥೆಗಳ ಆಡಳಿತ ಮಂಡಳಿಯಿಂದ ಉದ್ದೇಶ ಪೂರ್ವಕ ಸುಸ್ತಿದಾರರನ್ನು  ದೂರ ಇಡುವ ಭಾರತೀಯ ಷೇರು ನಿಯಂತ್ರಣ ಮಂಡಳಿಯ (ಸೆಬಿ) ಹೊಸ ನಿರ್ಧಾರದಿಂದಾಗಿ ವಿಜಯ್‌ ಮಲ್ಯ ಅವರು ಹಲವಾರು ಕಂಪೆನಿಗಳಿಂದ ಹೊರ ಬರುವುದು ಅನಿವಾರ್ಯವಾಗಲಿದೆ.

ಯುನೈಟೆಡ್‌ ಬ್ರಿವರೀಸ್‌ ಸಮೂಹದ  ಸಂಸ್ಥೆಗಳಲ್ಲದೆ ಬೇಯರ್‌  ಕ್ರಾಪ್‌ಸೈನ್ಸಸ್‌ ಮತ್ತು ಸನೋಫಿ ಇಂಡಿಯಾ, ಮಂಗಳೂರು ಕೆಮಿಕಲ್ಸ್‌ ಆ್ಯಂಡ್‌ ಫರ್ಟಿಲೈಸರ್ಸ್‌ಗಳ ನಿರ್ದೇಶಕ ಮಂಡಳಿಯಿಂದ ಹೊರ ನಡೆಯಬೇಕಾಗಿದೆ.

ಈಗಾಗಲೇ ಯುನೈಟೆಡ್‌ ಸ್ಪಿರಿಟ್ಸ್‌ನ ಅಧ್ಯಕ್ಷ ಹುದ್ದೆ ತೊರೆದಿರುವ ಮಲ್ಯ ಅವರು, ಇತರ ಹಲವಾರು ಕಂಪೆನಿಗಳ ನಿರ್ದೇಶಕ ಮಂಡಳಿಯಲ್ಲಿ ಮುಂದುವರೆದಿದ್ದಾರೆ. ಇವುಗಳಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳ ಭಾರತದ ಘಟಕಗಳೂ ಸೇರಿವೆ.

‘ಸೆಬಿ’ಯ ಹೊಸ ನಿಯಮವು ಸಂಸ್ಥೆಗಳ  ಪ್ರವರ್ತಕರು ಮತ್ತು ನಿರ್ದೇಶಕರಿಗೂ ಅನ್ವಯವಾಗಲಿದೆ.  ಕೆಲವೇ ವಾರಗಳಲ್ಲಿ ಇದು  ಜಾರಿಗೆ ಬರುತ್ತಿದ್ದಂತೆ ಈ ಎಲ್ಲ ಸಂಸ್ಥೆಗಳ ನಿರ್ದೇಶಕ ಹುದ್ದೆಗಳಿಗೆ ಮಲ್ಯ ಅವರು ರಾಜೀನಾಮೆ ನೀಡಬೇಕಾಗುತ್ತದೆ. ಅಧಿಸೂಚನೆ ಹೊರ ಬೀಳುತ್ತಿದ್ದಂತೆ  ‘ಉದ್ದೇಶಪೂರ್ವಕ ಸುಸ್ತಿದಾರರು’ ಅನರ್ಹರಾಗಲಿದ್ದಾರೆ ಎಂದು ‘ಸೆಬಿ’  ಅಧ್ಯಕ್ಷ ಯು. ಕೆ . ಸಿನ್ಹಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT