ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಯ ‘ಕೆಟ್ಟಕಾಲ’ದ ದೊರೆ?

ವ್ಯಕ್ತಿ
Last Updated 12 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಪೇಟೆಯಾದ ಬಂಟ್ವಾಳದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ ಎಂಬ ಮದ್ಯ ಕಂಪೆನಿಯನ್ನು ಕಟ್ಟಿ ಬೆಳೆಸಿದವರು ವಿಠಲ್‌ ಮಲ್ಯ. ಅವರ ಮಗ ವಿಜಯ್‌ ಮಲ್ಯ ಹುಟ್ಟಿದ್ದು ದೂರದ ಕೋಲ್ಕತ್ತಾದಲ್ಲಿ. ಅಲ್ಲೇ ಸೇಂಟ್ ಕ್ಸೇವಿಯರ್‌ ಕಾಲೇಜಿನಲ್ಲಿ ಬಿ.ಕಾಂ. ಪದವಿ.
1983ರಲ್ಲಿ ಅಪ್ಪ ಸತ್ತಾಗ ವಿಜಯ್‌ ಮಲ್ಯ ಅವರಿಗೆ ಇನ್ನೂ 28ರ ಹರಯ. ಅದಾಗಲೇ ಕೋಲ್ಕತ್ತಾದಲ್ಲಿ ಪರಿಚಯವಾದ ಏರ್‌ ಇಂಡಿಯಾದ ಗಗನಸಖಿ ಸಮೀರಾ ತ್ಯಾಬ್ಜಿ ಜತೆ ಮದುವೆಯಾಗಿತ್ತು. ಮಗ ಸಿದ್ಧಾರ್ಥನೂ ಹುಟ್ಟಿದ್ದ. ಬೆಂಗಳೂರಿಗೆ ಬಂದ ವಿಜಯ್‌ ಮಲ್ಯ, ಯುನೈಟೆಡ್‌ ಸ್ಪಿರಿಟ್ಸ್‌ ನೇತೃತ್ವ ವಹಿಸಿಕೊಂಡರು. ಮರುವರ್ಷವೇ ಸಮೀರಾಗೆ ಡೈವೋರ್ಸ್ ನೀಡಿದ ಮಲ್ಯ ಬಾಲ್ಯದಿಂದ ಪರಿಚಯವಿದ್ದ ರೇಖಾರನ್ನು ಮದುವೆಯಾದರು. ಇಬ್ಬರು ಹೆಣ್ಣು ಮಕ್ಕಳೂ ಹುಟ್ಟಿದರು.

ಕನ್ನಡ ಕರಾವಳಿಯ ಜಿಎಸ್‌ಬಿ (ಗೌಡ ಸಾರಸ್ವತ ಬ್ರಾಹ್ಮಣ) ಅಥವಾ ಕೊಂಕಣಿ ಎಂದು ಕರೆಯಲಾಗುವ ಸಮುದಾಯ ವ್ಯಾಪಾರದಲ್ಲಿ ಹಿಂದಿನಿಂದಲೂ ಎತ್ತಿದ ಕೈ. ಈ ಆನುವಂಶೀಯತೆಯೇ ಕಾರಣವೋ ಎಂಬಂತೆ ವಿಜಯ್‌ ಮಲ್ಯ ಅಪ್ಪ ಬಿಟ್ಟು ಹೋದ ಕಂಪೆನಿಯನ್ನು ಎಲ್ಲ ದಿಕ್ಕುಗಳಿಗೂ ವಿಸ್ತರಿಸಿದರು. ಮದ್ಯ ಮಾತ್ರವಲ್ಲ, ರಿಯಲ್‌ ಎಸ್ಟೇಟ್‌, ವಿಮಾನ, ರಸಗೊಬ್ಬರ, ಪತ್ರಿಕೆ, ಪೇಂಟ್‌, ಎಲೆಕ್ಟ್ರಿಕಲ್‌, ಫುಟ್‌ಬಾಲ್, ಕ್ರಿಕೆಟ್‌, ಕಾರ್‌ ರೇಸ್... ಹೀಗೆ ಕೈಗೆ ಸಿಕ್ಕಿದ್ದನ್ನೆಲ್ಲ ಉದ್ಯಮವಾಗಿ ಪರಿವರ್ತಿಸಿದರು. ನೋಡನೋಡುತ್ತಿದ್ದಂತೆಯೇ ಯುಬಿ ಗ್ರೂಪ್‌ ಒಟ್ಟು 60 ಕಂಪೆನಿಗಳ ದೊಡ್ಡ ಉದ್ಯಮ ಒಕ್ಕೂಟವಾಗಿ ಬೆಳೆದುನಿಂತಿತು. ಏನೇ ಮಾಡುವುದಿದ್ದರೂ ದೊಡ್ಡ ಮಟ್ಟದಲ್ಲಿ ಮಾಡಬೇಕು, ಸಣ್ಣದೊಂದು ಕ್ಯಾಲೆಂಡರ್‌ ಬಿಡುಗಡೆ ಮಾಡುವುದಿದ್ದರೂ ಪಂಚತಾರಾ ಹೋಟೆಲ್‌ನಲ್ಲಿ ಸಾವಿರಾರು ಜನರ ಭರ್ಜರಿ ಪಾರ್ಟಿಯೇ ನಡೆಯಬೇಕು ಎನ್ನುವುದು  ಮಲ್ಯ ಸ್ಟೈಲ್‌. ಅವರ ಉದ್ಯಮಗಳ ಟ್ಯಾಗ್‌ಲೈನೇ ‘ದಿ ಕಿಂಗ್‌ ಆಫ್‌ ಗುಡ್‌ ಟೈಮ್ಸ್‌!’ ಅದು, ಲಕ್ಷಾಂತರ ಜನ ಈಗಲೂ ಚಪ್ಪರಿಸಿ ಕುಡಿಯುವ ಕಿಂಗ್‌ಫಿಶರ್‌ ಬಿಯರ್‌ಗೂ  ಹೌದು; ಆಕಾಶದಲ್ಲಿ ಹಾರಾಟ ನಡೆಸಿದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ಗೂ ಹೌದು.

ಸನೋಫಿ ಇಂಡಿಯಾ, ಬೇಯರ್‌ ಕ್ರಾಪ್‌ಸೈನ್ಸ್‌ ಕಂಪೆನಿಗಳಿಗೆ 20 ವರ್ಷಗಳ ಕಾಲ ವಿಜಯ್‌ ಮಲ್ಯ ಚೇರ್‌ಮನ್‌. ಬರ್ಗರ್‌ ಪೇಂಟ್ಸ್‌, ಬೆಸ್ಟ್‌ ಅಂಡ್‌ ಕ್ರಾಂಪ್ಟನ್‌ ಒಡೆತನ, ಸಹಾರಾ ಇಂಡಿಯಾದ ಜತೆ ಫಾರ್ಮುಲಾ ಒನ್‌ ತಂಡದ ಜಂಟಿ ಮಾಲೀಕತ್ವ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ತಂಡ, ಐ ಲೀಗ್‌ ಫುಟ್‌ಬಾಲ್‌ನಲ್ಲಿ ಮೋಹನ್ ಬಾಗನ್‌ ಏಸಿ ಮತ್ತು ಈಸ್ಟ್‌ ಬೆಂಗಾಲ್‌ ಎಫ್‌ಸಿ ತಂಡಗಳ ಒಡೆತನ, ವಿಶ್ವ ಮೋಟಾರ್‌ ಸ್ಪೋರ್ಟ್ಸ್‌  ಕೌನ್ಸಿಲ್‌ನ ಸದಸ್ಯತ್ವ, ಮಂಗಳೂರು ಕೆಮಿಕಲ್ಸ್‌ ಅಂಡ್‌ ಫರ್ಟಿಲೈಸರ್ಸ್‌, ದಿ ಏಷ್ಯನ್‌ ಏಜ್‌ ಮತ್ತು ಸಿನಿ ಬ್ಲಿಟ್ಜ್‌ ಪತ್ರಿಕೆಗಳು... ಹೀಗೆ ಮಲ್ಯ ವೈವಿಧ್ಯಮಯ ಉದ್ಯಮಗಳ ಸಾರಥಿಯಾದರು. ಯುನೈಟೆಡ್‌ ಬ್ರೆವರೀಸ್‌ (ಯುಬಿ) ಗುಂಪಿನ ವಾರ್ಷಿಕ ವಹಿವಾಟು 15 ವರ್ಷಗಳಲ್ಲಿ ಶೇಕಡ 64ರಷ್ಟು ಏರಿಕೆ ಕಂಡಿತು. ಇದೆಲ್ಲದರ ಪರಿಣಾಮ ವಿಜಯ್‌ ಮಲ್ಯ ಅವರ ಒಟ್ಟು ಆಸ್ತಿ ಮೊತ್ತ ಸುಮಾರು 120 ಕೋಟಿ ಡಾಲರ್‌ಗೆ (₹8,100 ಕೋಟಿ) ಏರಿತು.

ಅತ್ಯಂತ ಯಶಸ್ವಿ ಉದ್ಯಮಿ ಎಂದ ಮೇಲೆ ಸಂಸತ್ತಿನಲ್ಲಿ ಸದಸ್ಯನಾಗಿ ಇರದಿದ್ದರೆ ಹೇಗೆ? 2002ರಲ್ಲಿ ವಿಜಯ್‌ ಮಲ್ಯ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾದರು. ಆಗ ಬೆಂಬಲಿಸಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್‌. 2010ರಲ್ಲಿ ಮತ್ತೆ ಎರಡನೇ ಬಾರಿಗೆ ರಾಜ್ಯಸಭೆಯ ಸದಸ್ಯರಾದಾಗ ಬೆಂಬಲಿಸಿದ್ದು ಬಿಜೆಪಿ ಮತ್ತು ಜೆಡಿಎಸ್‌. ಮಲ್ಯ ಈಗಲೂ ರಾಜ್ಯಸಭೆಯ ಸದಸ್ಯ.

ಮಲ್ಯ ಅವರ ಕೈಹಿಡಿದೆತ್ತಿದ ಅಭೂತಪೂರ್ವ ಬ್ರ್ಯಾಂಡ್‌ ಅಂದರೆ ಕಿಂಗ್‌ಫಿಶರ್‌ ಬಿಯರ್‌. ಇವತ್ತಿಗೂ ಭಾರತದ ಬಿಯರ್‌ ಮಾರುಕಟ್ಟೆಯಲ್ಲಿ ಶೇಕಡ 50ರಷ್ಟು ಪಾಲು ಕಿಂಗ್‌ಫಿಶರ್‌ನದ್ದೇ. ಸುಮಾರು 52 ದೇಶಗಳಲ್ಲಿ ಮಾರಾಟವಾಗುತ್ತಿರುವ ಈ ಬಿಯರ್‌, ಅಂತರರಾಷ್ಟ್ರೀಯ ಮದ್ಯ ಮಾರುಕಟ್ಟೆಯಲ್ಲಿ ಭಾರತಕ್ಕೆ ಹೆಸರು ತಂದುಕೊಟ್ಟದ್ದು ಸುಳ್ಳಲ್ಲ. ಒಂದು ವರ್ಷದಲ್ಲಂತೂ 10 ಕೋಟಿ ಕೇಸ್ ಮಾರಾಟವಾಗಿ ವಿಶ್ವ ದಾಖಲೆಯನ್ನೂ ಸ್ಥಾಪಿಸಿತ್ತು. ಯುನೈಟೆಡ್‌ ಸ್ಪಿರಿಟ್ಸ್‌ ಈಗಲೂ ಜಗತ್ತಿನ ಎರಡನೇ ಅತಿದೊಡ್ಡ ಸ್ಪಿರಿಟ್‌ ಕಂಪೆನಿ.

ಹಾಗೆಂದು ಮಲ್ಯ ಸ್ಥಾಪಿಸಿದ, ಖರೀದಿಸಿದ ಎಲ್ಲ ಉದ್ಯಮಗಳೂ ಲಾಭ ತಂದುಕೊಟ್ಟವು ಎಂದಲ್ಲ. ಆದರೆ ಬೇರೆ ಕಡೆ ಮಾಡಿಕೊಂಡ ನಷ್ಟಗಳೆಲ್ಲವನ್ನೂ ಕಿಂಗ್‌ಫಿಶರ್‌ ಬಿಯರ್‌ ತುಂಬಿಕೊಡುತ್ತಿತ್ತು. ಬಹುಶಃ ‘ಕಿಂಗ್‌ಫಿಶರ್‌ ಏರ್‌ಲೈನ್ಸ್‌’ ಎಂಬ ವಿಮಾನ ಕಂಪೆನಿಯನ್ನು ಹುಟ್ಟು ಹಾಕುವವರೆಗೂ ಯಶಸ್ಸಿನ ಓಟ ಹಾಗೆಯೇ ಇತ್ತು.

2005ರಲ್ಲಿ ಭಾರೀ ನಿರೀಕ್ಷೆ, ಸಂಭ್ರಮದೊಂದಿಗೆ ಹಾರಾಟ ಆರಂಭಿಸಿದ್ದು ಕಿಂಗ್‌ಫಿಶರ್‌ ಏರ್‌ಲೈನ್ಸ್‌. ಅಬ್ಬರದ ಪ್ರಚಾರದೊಂದಿಗೆ ಪ್ರಯಾಣಿಕರಿಗೆ ಭರ್ಜರಿ ಕೊಡುಗೆಗಳನ್ನು ಘೋಷಿಸಲಾಯಿತು. ನೂರಾರು ಸುಂದರಿಯರನ್ನು ಖುದ್ದಾಗಿ ಮಲ್ಯ ಅವರೇ ಕುಳಿತು ಇಂಟರ್‌ವ್ಯೂ ಮಾಡಿ ಕೆಲಸಕ್ಕೆ ಸೇರಿಸಿಕೊಂಡರು. ಬೇರೆಲ್ಲ ವಿಮಾನ ಕಂಪೆನಿಗಳು ಪೈಸೆ ಖರ್ಚಿಗೂ ಲೆಕ್ಕ ಹಾಕಿಕೊಂಡು ಎಚ್ಚರದಿಂದ ಹಾರಾಟ ನಡೆಸುತ್ತಿದ್ದರೆ, ಕಿಂಗ್‌ಫಿಶರ್‌ ಏರ್‌ಲೈನ್ಸ್ ಜಗತ್ತಿನ ಎಲ್ಲ ನಗರಗಳಿಂದಲೂ ಹಾರಾಟ ನಡೆಸಲು ಅಬ್ಬರದಿಂದ ಮುನ್ನುಗ್ಗಿತು.

ಈ ಅಬ್ಬರದಲ್ಲಿ ಕೋಟ್ಯಂತರ ಡಾಲರ್‌ಗಳನ್ನು ಕಳೆದುಕೊಂಡದ್ದು ಗೊತ್ತಾಗಲೇ ಇಲ್ಲ. 3-4 ವರ್ಷಗಳಲ್ಲೇ ಕಂಪೆನಿ ಹಳ್ಳ ಹಿಡಿಯತೊಡಗಿತು. ಅದಾಗಲೇ ಮಲ್ಯ ಭಾರತೀಯ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಎತ್ತಿದ್ದರು. ಎಸ್‌ಬಿಐನಿಂದ 1623 ಕೋಟಿ, ಐಡಿಬಿಐ ಬ್ಯಾಂಕ್‌ನಿಂದ 700 ಕೋಟಿ, ಬ್ಯಾಂಕ್‌ ಆಫ್‌ ಇಂಡಿಯಾದಿಂದ 308 ಕೋಟಿ- ಹೀಗೆ ಪಟ್ಟಿ ಉದ್ದಕ್ಕೆ ಬೆಳೆದಿತ್ತು. ಆದರೆ ಯಾವುದೂ ಬರಖತ್ತಾಗಲಿಲ್ಲ. ಕಂಪೆನಿ ದಿವಾಳಿ ಎದ್ದದ್ದು ಖಚಿತವಾದಾಗ ವಿಮಾನಯಾನಕ್ಕಾಗಿ ಕಂಪೆನಿಗೆ ನೀಡಿದ ಲೈಸೆನ್ಸ್ ರದ್ದಾಯಿತು. 2013ರ ಅಕ್ಟೋಬರ್‌ನಲ್ಲಿ ‘15 ತಿಂಗಳಿಂದ ಸಂಬಳ ಬಂದಿಲ್ಲ’ ಎಂದು ವಿಮಾನ ಕಂಪೆನಿಯ ಸಿಬ್ಬಂದಿಯೂ ಬೀದಿಗೆ ಬಂದರು.

ಈ ಮಧ್ಯೆ ಯುನೈಟೆಡ್ ಸ್ಪಿರಿಟ್ಸ್‌ನ ಶೇಕಡ 52ರಷ್ಟು ಷೇರುಗಳನ್ನು ಮಲ್ಯ ಇಂಗ್ಲೆಂಡಿನ ಡಿಯಾಜಿಯೊ ಮದ್ಯ ಕಂಪೆನಿಗೆ ಮಾರಾಟ ಮಾಡಿದರು. ಎರಡು ತಿಂಗಳ ಗುದ್ದಾಟದ ಬಳಿಕ ಆ ಕಂಪೆನಿಯ ಚೇರ್‌ಮನ್‌ ಹುದ್ದೆಗೆ ರಾಜೀನಾಮೆ ನೀಡಿದರು. ಮಗ ಸಿದ್ಧಾರ್ಥ ಆ ಕಂಪೆನಿಯಲ್ಲಿ ಒಬ್ಬ ನಿರ್ದೇಶಕ ಮಾತ್ರವಾಗಿ ಉಳಿದ.

ಈಗ ಸುಮಾರು 17 ಬ್ಯಾಂಕುಗಳಿಗೆ ಮಲ್ಯರಿಂದ 9000 ಕೋಟಿ ರೂಪಾಯಿಗಳಷ್ಟು ಸಾಲದ ಬಾಕಿ ಉಳಿದಿದೆ ಎನ್ನುವುದು ಊರಿಗೆಲ್ಲ ಟಾಂ ಟಾಂ ಆಗಿದೆ. ಮಲ್ಯ ಸದ್ದಿಲ್ಲದೆ ದೂರದ ಲಂಡನ್ನಿಗೆ ಹಾರಿದ್ದಾರೆ. ಮಾಧ್ಯಮಗಳಲ್ಲಿ ರಾತ್ರಿ ಹಗಲೂ ಚರ್ಚೆ ನಡೆದಿದೆ.  ಬ್ಯಾಂಕ್‌ಗಳು ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಿ ಕುಳಿತಿವೆ. ಜಾರಿ ನಿರ್ದೇಶನಾಲಯ  ಮಾರ್ಚ್‌ 18ರಂದು ಖುದ್ದಾಗಿ ತನ್ನ ಮುಂದೆ ಹಾಜರಾಗಲು ಸಮನ್ಸ್ ನೀಡಿದೆ. ಅಂದು ಮಲ್ಯ ಅವರು ಭಾರತಕ್ಕೆ ಬರಲಿದ್ದಾರೆಯೇ ಎನ್ನುವುದೀಗ ಬಿಸಿ ಚರ್ಚೆಯ ವಿಷಯ.

2004ರಲ್ಲಿ ₹4 ಕೋಟಿ ನೀಡಿ ಲಂಡನ್ನಿನ ಏಲಂನಲ್ಲಿ ಖರೀದಿಸಿದ ಟಿಪ್ಪು ಖಡ್ಗವಾಗಲೀ, ಫಿರಂಗಿಯಾಗಲೀ ಈಗ ನೆರವಿಗೆ ಬರಲಿಕ್ಕಿಲ್ಲ. 2009ರಲ್ಲಿ ನ್ಯೂಯಾರ್ಕ್‌ನ ಏಲಂನಲ್ಲಿ ₹ 9 ಕೋಟಿಗೆ ಖರೀದಿಸಿದ ಗಾಂಧೀಜಿಯವರ ಕನ್ನಡಕ, ವಾಚ್‌ಗಳೂ ನೆರವಿಗೆ ಬರುವುದಿಲ್ಲ. ಮಲ್ಯರ ಈ ಸಾಲಬಾಕಿ ಪ್ರಕರಣದಲ್ಲಿ ಉದ್ಯಮಿಗಳಿಗೂ ಪಾಠವಿದೆ; ಬ್ಯಾಂಕುಗಳಿಗೂ ಪಾಠವಿದೆ.

‘ಯಶಸ್ಸಿಗೆ ಹತ್ತಾರು ಅಪ್ಪಂದಿರು’ ಎನ್ನುವ ಮಾತೊಂದಿದೆ. ವಿಜಯ್‌ ಮಲ್ಯ ವಿಷಯದಲ್ಲಿ ಹಾಗಿಲ್ಲ. ಯಶಸ್ಸಿಗೂ, ವೈಫಲ್ಯಕ್ಕೂ ಅವರೇ ಅಪ್ಪ; ಅಲ್ಲಲ್ಲ, ಕಿಂಗ್‌! ಸದ್ಯಕ್ಕೀಗ ಅವರು ‘ಕಿಂಗ್‌ ಆಫ್‌ ಬ್ಯಾಡ್‌ ಟೈಮ್ಸ್‌’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT