ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕೊಪೊಲೊ ಬೀಗಮುದ್ರೆ ತೆರವು

Last Updated 8 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕ ಭಾಗದ ಬೃಹತ್‌ ಉದ್ದಿಮೆ ಟಾಟಾ ಮಾರ್ಕೊಪೊಲೊ ಬಸ್ ನಿರ್ಮಾಣ ಘಟಕದ ಬೀಗಮುದ್ರೆ  ಕೊನೆಗೂ ತೆರವುಗೊಂಡಿದೆ. ಇದೀಗ ಘಟಕ ಪುನಾರಂಭಗೊಂಡಿದೆ. ಆದರೆ ಆಡಳಿತ – ಕಾರ್ಮಿಕರ ಮಧ್ಯದ ‘ಮುಸುಕಿನ ಗುದ್ದಾಟ’ ಮುಂದುವರಿದಿರುವುದನ್ನು ರಾಜೇಶ್‌ ರೈ ಚಟ್ಲ ಅವರು ಇಲ್ಲಿ ವಿವರಿಸಿದ್ದಾರೆ.

ಟಾಟಾ ಮಾರ್ಕೊ ಪೊಲೊ ಬಸ್‌ ನಿರ್ಮಾಣ ಘಟಕ ಉತ್ತರ ಕರ್ನಾಟಕ ಭಾಗದ ಪ್ರಮುಖ ಉದ್ದಿಮೆ. ಧಾರವಾಡದ ಹೊರವಲಯದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಈ ಘಟಕ, ಆಡಳಿತ ಮತ್ತು ಕಾರ್ಮಿಕ ಸಂಘಟನೆಯ ಮಧ್ಯದ ‘ಸಂಘರ್ಷ’ದ ಕಾರಣ ಫೆ. 2ರಂದು ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಈ ಬೆಳವಣಿಗೆ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿತ್ತು. ವಿಶ್ವ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ರಾಜ್ಯ ಸರ್ಕಾರ ಆಯೋಜಿಸಿದ್ದ ‘ಇನ್ವೆಸ್ಟ್ ಕರ್ನಾಟಕ’ ಸಮಾವೇಶದ ಸಂದರ್ಭದಲ್ಲಿ ಮೂಡಿದ್ದ ಈ ಕಾರ್ಮೋಡವು ಸೋಮವಾರದ (ಮಾರ್ಚ್‌ 7) ಬಳಿಕ ತಿಳಿಯಾಗಿದೆ.

ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಆಡಳಿತ ವರ್ಗ ಮತ್ತು ಕಾರ್ಮಿಕ ಮುಖಂಡರ ಮಧ್ಯೆ ನಡೆದ ಸಂಧಾನ ಮಾತುಕತೆಯ ಬಳಿಕ ಘಟಕ ಪುನಾರಂಭಗೊಂಡಿದೆ. ಕಾರ್ಮಿಕರು ಶಾಂತಿ, ಸೌಹಾರ್ದ ಕಾಪಾಡಬೇಕು, ಕಂಪೆನಿ ನಿಯಮಕ್ಕೆ ಬದ್ಧರಾಗಿರಬೇಕು. ಕಂಪೆನಿಯ ತಯಾರಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಷರತ್ತು ವಿಧಿಸಿ ಆಡಳಿತ ಮಂಡಳಿಯು ಬೀಗಮುದ್ರೆ (ಲಾಕ್‌ಔಟ್‌) ತೆರವುಗೊಳಿಸಿದೆ. ಕಂಪೆನಿಯ ಷರತ್ತುಗಳಿಗೆ ಒಪ್ಪಿಗೆ ಸೂಚಿಸುವ ಮೂಲಕ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದಾರೆ.

‘ವಜಾ ಮತ್ತು ಅಮಾನತುಗೊಂಡ ಕಾರ್ಮಿಕರಿಗೆ ಸಂಬಂಧಿಸಿದಂತೆ ತನಿಖೆ ನಿಯಮಾವಳಿಯಂತೆ ನಡೆಯಲಿದೆ. ಉಳಿದ ಕಾರ್ಮಿಕರು ಕೆಲಸಕ್ಕೆ ಹಾಜರಾಗಲು ಮುಕ್ತ ಅವಕಾಶ ಇದೆ. ಯಾರು ಬರುವುದಿಲ್ಲವೊ ಅವರನ್ನು ಗೈರು ಎಂದು ಪರಿಗಣಿಸಿ ಮುಂದಿನ ಕ್ರಮ ತೆಗೆದುಕೊಳ್ಳಲು ಕಂಪೆನಿ ನಿರ್ಧರಿಸಿದೆ. ಈ ಕಾರಣಕ್ಕೆ ಆಡಳಿತ ಮತ್ತು ಕಾರ್ಮಿಕರ ಮಧ್ಯದ ‘ಮುಸುಕಿನ ಗುದ್ದಾಟ’ ಮುಂದುವರಿದಿದೆ.

‘ಲಾಕ್‌ಔಟ್‌’ ಘಟನೆ ಆಟೊಮೊಬೈಲ್‌ ಕೈಗಾರಿಕಾ ವಲಯದಲ್ಲಿನ ಆರ್ಥಿಕ ವ್ಯವಹಾರಕ್ಕೆ ಹೊಡೆತ ನೀಡಿದೆ. ಸಾವಿರಾರು ಕಾರ್ಮಿಕರ ಬದುಕಿನ ಮೇಲೆ ಪರಿಣಾಮ ಬೀರಿದೆ. ಅಷ್ಟೇ ಅಲ್ಲ, ಉತ್ತರ ಕರ್ನಾಟಕ ಭಾಗದಲ್ಲಿ ಭವಿಷ್ಯದ ಕೈಗಾರಿಕಾ ಅಭಿವೃದ್ಧಿಗೆ ಕಪ್ಪುಚುಕ್ಕೆ ಎಂದೇ ಬಿಂಬಿತವಾಗಿದೆ.

ಟಾಟಾ ಮೋಟಾರ್ಸ್‌ ಲಿಮಿಡೆಟ್‌ ಕಂಪೆನಿ ಬ್ರೆಜಿಲ್‌ನ ಮಾರ್ಕೊಪೊಲೊ ಎಸ್‌.ಎ. ಕಂಪೆನಿಯ ಸಹಯೋಗದಲ್ಲಿ 51:49 ಪಾಲುದಾರಿಕೆಯಲ್ಲಿ ಸುಮಾರು ₹ 350 ಕೋಟಿ ಬಂಡವಾಳ ಹೂಡಿಕೆ ಮಾಡಿ, 2008ರಲ್ಲಿ ಟಾಟಾ ಮಾರ್ಕೊಪೊಲೊ ಮೋಟಾರ್ಸ್‌ ಸಂಸ್ಥೆಯನ್ನು ಸ್ಥಾಪಿಸಿದೆ.  ನಗರದೊಳಗೆ ಮತ್ತು ಅಂತರ್‌ನಗರ ಸಾರಿಗೆ ಸೌಲಭ್ಯ ಹೊಂದಿದ ವಿಶ್ವದರ್ಜೆಯ ವಿನ್ಯಾಸದ ಬಸ್‌ಗಳನ್ನು ಸ್ಟಾರ್‌ಬಸ್‌ ಮತ್ತು ಗ್ಲೋಬಸ್‌ ಬ್ರ್ಯಾಂಡ್‌ನಡಿ ನಿರ್ಮಿಸುವ ಈ ಘಟಕ 123 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ.

ವಾರ್ಷಿಕ 30 ಸಾವಿರ ಬಸ್‌ಗಳ ನಿರ್ಮಾಣ ಸಾಮರ್ಥ್ಯ ಹೊಂದಿರುವ ಈ ಘಟಕ ಕಾರ್ಯಾಚರಣೆ ಆರಂಭಿಸಿದ ಮೊದಲ ವರ್ಷದಿಂದಲೇ 15 ಸಾವಿರ ಬಸ್‌ಗಳನ್ನು ನಿರ್ಮಿಸುತ್ತಿದೆ. ಇವುಗಳಲ್ಲಿ 16ರಿಂದ 54 ಆಸನಗಳ ಸ್ಟ್ಯಾಂಡರ್ಡ್‌ ಬಸ್‌ಗಳು, 18 ಮತ್ತು 45 ಆಸನಗಳ ಲಕ್ಷುರಿ ಬಸ್‌ಗಳು, ಲಕ್ಷುರಿ ಕೋಚ್‌ ಮತ್ತು ಲೋ ಫ್ಲೋರ್‌ ಬಸ್‌ಗಳು ಸೇರಿವೆ. ಇಲ್ಲಿ ತಯಾರಾದ ಬಸ್‌ಗಳು ಭಾರತದ ವಿವಿಧ ರಾಜ್ಯಗಳಿಗಷ್ಟೇ ಅಲ್ಲ, ಸೌದಿ ಅರೇಬಿಯಾ, ನೈಜೀರಿಯಾ, ಅಲ್ಜೀರಿಯಾ, ಕಾಂಗೊ, ಭೂತಾನ್, ದಕ್ಷಿಣ ಆಫ್ರಿಕಾ, ನೇಪಾಳ ಮುಂತಾದ ದೇಶಗಳಿಗೆ ಪೂರೈಕೆಯಾಗುತ್ತಿವೆ.

ಘಟಕ ತನ್ನ ಪೂರ್ಣ ಸಾಮರ್ಥ್ಯದಿಂದ ಕಾರ್ಯಾಚರಣೆ ಆರಂಭಿಸಿದರೆ 6,500 ನೇರ ಉದ್ಯೋಗಗಳು ಸೃಷ್ಟಿಯಾಗಲಿದೆ. ಸದ್ಯ ಘಟಕದಲ್ಲಿ 1,286 ಕಾಯಂ ಕಾರ್ಮಿಕರಿದ್ದಾರೆ. ಅಲ್ಲದೆ, ತಲಾ ಒಂದು ಸಾವಿರ ಗುತ್ತಿಗೆ ಮತ್ತು ತರಬೇತಿ ಪಡೆಯುತ್ತಿರುವ ಕಾರ್ಮಿಕರು ಹಾಗೂ 500 ಅಧಿಕಾರಿ ವರ್ಗ ಕೆಲಸ ಮಾಡುತ್ತಿದೆ. ಬಿಡಿಭಾಗ ಪೂರೈಕೆದಾರ (ವೆಂಡರ್‌) ಉದ್ದಿಮೆಗಳ ಮೂಲಕ ಅಪ್ರತ್ಯಕ್ಷವಾಗಿ 35 ಸಾವಿರ ಕಾರ್ಮಿಕರು ಈ ಉದ್ದಿಮೆಯನ್ನು ಅವಲಂಬಿಸಿದ್ದಾರೆ.

ಏನಿದು ವಿವಾದ?
ಕಳೆದ ಒಂದು ವರ್ಷದಿಂದ ಕಂಪೆನಿ ಮತ್ತು ಕಾರ್ಮಿಕರ ಮಧ್ಯೆ ಸಂಬಳ ಮತ್ತು ಭತ್ಯೆ ವಿಚಾರದಲ್ಲಿ ಶೀತಲ ಸಮರ ನಡೆಯುತ್ತಲೇ ಬಂದಿತ್ತು. 2015ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ಮೂಲದ ಕ್ರಾಂತಿಕಾರಿ ಕಾಮಗಾರ್‌ ಯೂನಿಯನ್‌ ಅನ್ನು ಕಾರ್ಮಿಕರು ಇಲ್ಲಿ ಸ್ಥಾಪಿಸಿಕೊಂಡಿದ್ದರು. ಈ ಸಂಘಟನೆಗೆ ಸಮ್ಮತಿ ಇಲ್ಲ ಎನ್ನುವುದು ಕಂಪೆನಿಯ ವಾದ. ಯಾಕಿಲ್ಲ ಎನ್ನುವುದು ಕಾರ್ಮಿಕರ  ಪ್ರತಿವಾದ. ಜೊತೆಗೆ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಈ ಸಂಘಟನೆ ಕಂಪೆನಿಯನ್ನು ಒತ್ತಾಯಿಸುತ್ತಿದೆ.

ಈ ಮಧ್ಯೆ, ವೇತನ ಪರಿಷ್ಕರಣೆ, ಕಂಪೆನಿಯಿಂದ ವಜಾ ಮಾಡಿದ ಮತ್ತು ಅಮಾನತುಗೊಳಿಸಿದ­ವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು, ವರ್ಗಾವಣೆ ಮಾಡುವುದನ್ನು ನಿಲ್ಲಿಸಬೇಕು ಮತ್ತಿತರ ಬೇಡಿಕೆ ಮುಂದಿಟ್ಟು ಕಾರ್ಮಿಕರು  ಜ. 31ರಂದು ಧಾರವಾಡದಲ್ಲಿ ನಡೆಸಿದ ಪ್ರತಿಭಟನಾ ರ್‍ಯಾಲಿ ಕಂಪೆನಿ ಆಡಳಿತವನ್ನು ಮತ್ತಷ್ಟು ಸಿಟ್ಟಿಗೆಬ್ಬಿಸಿತ್ತು. ಪ್ರತಿಭಟನೆ ನಿರತ ಕಾರ್ಮಿಕರು ಕೆಲಸಕ್ಕೆ ಹಾಜರಾಗುವಂತೆ ಕಂಪೆನಿ ಸೂಚನೆ ನೀಡಿದರೂ ಕಾರ್ಮಿಕರು ಅದನ್ನು ಪಾಲಿಸಿರಲಿಲ್ಲ.

‘ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕರು ಸಾಮೂಹಿಕವಾಗಿ ಕೆಲಸದಿಂದ ದೂರ ಉಳಿಯುವ ಮೂಲಕ ಅಸಹಕಾರ ತೋರಿಸಿದ್ದಾರೆ. ಇದರಿಂದಾಗಿ ಬಸ್‌ಗಳ ನಿರ್ಮಾಣದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರತಿದಿನ 25ರಿಂದ 30 ಬಸ್‌ಗಳು ಮಾತ್ರ ತಯಾರಾಗುತ್ತಿವೆ. ಪರಿಣಾಮ ಅಂದಾಜು ₹ 70 ಕೋಟಿ ನಷ್ಟ ಉಂಟಾಗಿದೆ’ ಎನ್ನುತ್ತವೆ ಕಂಪೆನಿ ಮೂಲಗಳು. ಕಾರ್ಮಿಕರ ಧೋರಣೆಗೆ ಪ್ರತ್ಯುತ್ತರ ಎಂಬಂತೆ ಕಂಪೆನಿ ಫೆ. 2ರಂದು ತಯಾರಿಕೆಯನ್ನೇ ಸ್ಥಗಿತಗೊಳಿಸಿ ಸಡ್ಡು ಹೊಡೆಯಿತು. ಪ್ರತಿಭಟನೆಗೆ ಪ್ರತೀಕಾರ ತೋರಿಸಿರುವ ಆಡಳಿತ ಮಂಡಳಿ, ಘಟಕವನ್ನೇ ಲಾಕ್‌ಔಟ್ ಮಾಡುವ ಕಠಿಣ ನಿರ್ಧಾರ ತೆಗೆದುಕೊಂಡಿತ್ತು. 

‘ತಾತ್ಕಾಲಿಕವಾಗಿ ತಯಾರಿಕೆ ಸ್ಥಗಿತ’ ಎಂದು ಆರಂಭದಲ್ಲಿ ಹೇಳಿಕೆ ನೀಡಿದ್ದ ಕಂಪೆನಿ, ಬಳಿಕ ಅದನ್ನು ಮುಂದುವರಿಸಿತ್ತು. ಇದು ಆತಂಕಗಳಿಗೆ ಕಾರಣವಾಗಿತ್ತು. ‘ಕಾರ್ಮಿಕರ ಪ್ರತಿಭಟನೆಯಿಂದಾಗಿ ಗ್ರಾಹಕರ ವಿಶ್ವಾಸ ಕೂಡ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣ ಆಗಿತ್ತು. ಹೀಗಾಗಿ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು ಅನಿವಾರ್ಯವಾಯಿತು’ ಎಂದು ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಪ್ರತಿ ಹಂತದಲ್ಲೂ ಅಡ್ಡಿ ಉಂಟು ಮಾಡುತ್ತಿರುವ ಕೆಲ ಕಾರ್ಮಿಕರು ತಯಾರಿಕೆ ಕುಂಠಿತಗೊಳ್ಳಲು ಕಾರಣರಾಗಿದ್ದಾರೆ. ಕಂಪೆನಿ ಅಸ್ತಿತ್ವಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಕಂಪೆನಿಯ ಕಾರ್ಮಿಕನೊಬ್ಬನ ಸರಾಸರಿ ವೇತನ ಇಂದು ತಿಂಗಳಿಗೆ ₹ 17,640 ಆಗಿದೆ ( ಕನಿಷ್ಠ ₹ 14,506 ಮತ್ತು ಗರಿಷ್ಠ ₹ 18,739). ಪಿಎಫ್, ಇಎಸ್‌ಐ, ಕ್ಯಾಂಟೀನ್ ಸೌಲಭ್ಯ ಇದೆ. ಹೊಸತಾಗಿ ಮದುವೆಯಾಗುವ ಕಾರ್ಮಿಕರಿಗೆ ₹ 5 ಸಾವಿರ ಉಡುಗೊರೆ ಕೊಡುತ್ತಿದ್ದೇವೆ. ಕಾರ್ಮಿಕ ಹಿತ ಎಂದೂ ಕಡೆಗಣಿಸಿಲ್ಲ. ಆದರೆ, ಕೆಲವರು ಕಂಪೆನಿಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಂಪೆನಿ ಸ್ಥಳಾಂತರಿಸುವ ಉದ್ದೇಶದಿಂದ ದೊಂಬಿ ಎಬ್ಬಿಸುತ್ತಿವೆ. ಹೀಗಾಗಿ ಘಟಕ ಸ್ಥಗಿತಗೊಳಿಸಬೇಕಾಯಿತು’ ಎಂದು ಕಂಪೆನಿಯ ಆಡಳಿತ ವರ್ಗ ಸಮರ್ಥನೆ ನೀಡಿದೆ.

2008ರಲ್ಲೂ ಕಾರ್ಮಿಕರ ಕಾಯಮಾತಿ ವಿಚಾರವಾಗಿ ಗೊಂದಲ ಉಂಟಾಗಿ 15 ದಿನ ಘಟಕ ತಾತ್ಕಾಲಿಕವಾಗಿ ಬಂದ್ ಆಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿದ್ದ ಭಾರತ್‌ ಮಿಲ್‌, ಮೈಸೂರು ಕಿರ್ಲೋಸ್ಕರ, ಭೋರೂಕಾ ಟೆಕ್ಸ್‌ಟೈಲ್‌ನಂಥ ಉದ್ದಿಮೆಗಳು ಈಗಾಗಲೇ ಅನೇಕ ಕಾರಣಗಳಿಗೆ ಬಾಗಿಲು ಹಾಕಿವೆ. ಇಂತಹದ್ದೇ ಸಮಸ್ಯೆಯಿಂದ ಅಪೆಕ್ಸ್‌ ಆಟೊ ಉದ್ದಿಮೆ ಕೂಡಾ ಇತ್ತೀಚೆಗೆ ಮುಚ್ಚಿದೆ. ಹೀರೊ ಮೋಟಾರ್ಸ್‌, ಆರ್ಸೆಲರ್‌ ಮಿತ್ತೆಲ್‌ನಂತಹ ಉದ್ದಿಮೆಗಳು ಬೇರೆ ಕಡೆಗೆ ಸ್ಥಳಾಂತರಗೊಂಡಿವೆ.

ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಆಗದಿದ್ದರೆ ಇರುವ ಉದ್ದಿಮೆಗಳು ಮುಚ್ಚಿಹೋಗುವ ಮತ್ತು ಬರಬಹುದಾದ ಉದ್ದಿಮೆಗಳು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣ ಆಗಬಹುದು ಎನ್ನುವುದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಆತಂಕ.  ಟಾಟಾ ಸಮೂಹ ಸಂಸ್ಥೆ ಟಾಟಾ ಮಾರ್ಕೊಪೊಲೊ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೊಂದು ಬೃಹತ್‌ ಕೈಗಾರಿಕಾ ಉದ್ದಿಮೆ ‘ಫ್ಯೂಚರ್‌ ಇನ್‌ಫ್ಯಾಕ್ಟರಿ ಕಾಂಬೋಟ್‌ ವೆಹಿಕಲ್‌ (ಎಫ್‌ಐಸಿವಿ)’ ನಿರ್ಮಾಣ ಘಟಕ ಸ್ಥಾಪಿಸಲು ಉತ್ಸುಕತೆ ಹೊಂದಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ, ₹ 60 ಸಾವಿರ ಕೋಟಿ ವೆಚ್ಚದಲ್ಲಿ ಈ ಮಿನಿ ಮಿಲಿಟರಿ ವಾಹನ ತಯಾರಿಕಾ ಘಟಕ ಧಾರವಾಡದಲ್ಲಿ ತಲೆಎತ್ತಲಿದೆ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಬಿಡ್‌ನಲ್ಲಿ ಸಂಸ್ಥೆ ಸ್ಪರ್ಧಿಸಿದೆ. ಆದರೆ, ಟಾಟಾ ಮಾರ್ಕೊಪೊಲೊ ಕಂಪೆನಿಯಲ್ಲಿನ ‘ಸಂಘರ್ಷ’ ಈ ಹೊಸ ಉದ್ಯಮ  ಬರುವ ಹಾದಿಗೆ ಅಡ್ಡಿ ಉಂಟು ಮಾಡಬಹುದೇ ಎನ್ನುವ ಅನುಮಾನ ಕಾಡುತ್ತಿದೆ.

ಕಗ್ಗಂಟಾದ ಕಾರ್ಮಿಕರ ಬಿಕ್ಕಟ್ಟು
ಟಾಟಾ ಮಾರ್ಕೊಪೋಲೊ ಬಸ್ ನಿರ್ಮಾಣ ಘಟಕ ಮಾರಾಟಗಾರರು ಮತ್ತು ಪೂರೈಕೆದಾರರ (ವೆಂಡರ್) ಆಧಾರಿತ ಉದ್ದಿಮೆ. ಹುಬ್ಬಳ್ಳಿ– ಧಾರವಾಡ  ಕೈಗಾರಿಕಾ ವಲಯದಲ್ಲಿ 152 ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಇದನ್ನು ಅವಲಂಬಿಸಿವೆ. ಬೆಂಗಳೂರು, ಮಹಾರಾಷ್ಟ್ರದ ಪುಣೆ, ಕೊಲ್ಹಾಪುರ ಉದ್ಯಮಗಳೂ ಇಲ್ಲಿಗೆ ಬಿಡಿಭಾಗಗಳನ್ನು ಪೂರೈಸುತ್ತಿವೆ. ಸ್ಥಳೀಯ ಸರಬರಾಜುದಾರ ಸಂಸ್ಥೆಗಳ ಮೂಲಕ 10 ಸಾವಿರಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಕಂಪೆನಿಯೂ ಹೇಳಿಕೊಂಡಿದೆ.

ಈ ಕಿರು ಉದ್ದಿಮೆಗಳು ಲೈಟ್, ಥರ್ಮಾಕೋಲ್, ಗ್ಲಾಸ್, ಬಣ್ಣ, ಸೀಟ್‌ಗಳಂತಹ ಉಪ ಉತ್ಪನ್ನಗಳನ್ನು ಕಂಪೆನಿಗೆ ಪೂರೈಸುತ್ತಿವೆ. ಈ ಉದ್ದೇಶದಿಂದ ಅಂದಾಜು ₹ 1,000  ಕೋಟಿಗೂ ಮೀರಿ ಬಂಡವಾಳವನ್ನು ಈ ಪೂರೈಕೆದಾರ ಉದ್ದಿಮೆಗಳು  ಹೂಡಿವೆ. ಇವುಗಳಲ್ಲಿ ನುರಿತ, ಅರೆ ನುರಿತ, ಕೌಶಲರಹಿತ ಕಾರ್ಮಿಕರು ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷವಾಗಿ ತೊಡಗಿಸಿಕೊಂಡಿದ್ದಾರೆ ಎನ್ನುತ್ತಾರೆ ವೆಂಡರ್‌ ಉದ್ಯಮಿ ಎಂ.ವಿ. ಕರ್ಮರಿ.

* * * 
‘ಸ್ನೇಹಮಯ ವಾತಾವರಣ ಅಗತ್ಯ’
ಕಾರ್ಮಿಕರ ಸಮಸ್ಯೆಯಿಂದ ಗ್ರಾಹಕರ ತೃಪ್ತಿ ಸಾಧ್ಯವಾಗಿಲ್ಲ. ಕೇರಳ ಸಾರಿಗೆ ಸಂಸ್ಥೆಯ ಕಾರ್ಯಾದೇಶ ಕೈತಪ್ಪಿದೆ. ನಷ್ಟದ ಮಧ್ಯೆಯೂ ಪ್ರತಿ ವರ್ಷ ವೇತನ ಪರಿಷ್ಕರಿಸಲಾಗಿದೆ. ಕಂಪೆನಿಯಲ್ಲಿ ಸ್ನೇಹಮಯ ವಾತಾವರಣ ಅಗತ್ಯ. ಕಾರ್ಮಿಕರು ಸಾಮೂಹಿಕವಾಗಿ ಕೆಲಸದಿಂದ ದೂರ ಉಳಿಯುತ್ತಿರುವುದರಿಂದ ನಷ್ಟ ಅನುಭವಿಸಬೇಕಾಗಿದೆ. ಕಂಪೆನಿಯ ಶಿಸ್ತು, ಸುರಕ್ಷತೆ, ತಯಾರಿಕೆ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಬದ್ಧತೆ ಮುಂದುವರಿಸಲಾಗುವುದು.
–ಟಾಟಾ ಮಾರ್ಕೊಪೊಲೊ ಕಂಪೆನಿ

* * *
‘ಸಂತಸದ ಸಂಗತಿ’

ಲಾಕ್‌ಔಟ್‌ನಿಂದ ಆಟೊ ಮೊಬೈಲ್‌ ಉದ್ಯಮ ಭಾರಿ ಆತಂಕಕ್ಕೆ ಒಳಗಾಗಿತ್ತು. ಕಾರ್ಮಿಕರು ಬೀದಿಗೆ ಬಂದಿದ್ದರು. ಈ ಘಟಕವನ್ನೇ ನಂಬಿ ಕೋಟ್ಯಂತರ ಬಂಡವಾಳ ಹೂಡಿಕೆ ಮಾಡಿರುವ ವೆಂಡರ್‌ಗಳು ಸಂಕಷ್ಟಕ್ಕೆ ಸಿಲುಕಿದ್ದರು.  ಒಂದು ತಿಂಗಳ ಅವಧಿಯಲ್ಲೇ ಸುಮಾರು ₹ 70 ಕೋಟಿಯಷ್ಟು ನಷ್ಟ ಉಂಟಾಗಿದೆ. ಇದೀಗ ಕಂಪೆನಿ ಪುನಾರಂಭಗೊಂಡಿರುವುದು ಸಂತಸದ ಸಂಗತಿ. ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಕಂಪೆನಿ ಮುಂದಾಗಬೇಕು.
–ರಮೇಶ ಪಾಟೀಲ, ಅಧ್ಯಕ್ಷ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT