ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ಗೆ ಸಂಸತ್‌ ಸಮಿತಿ ನೋಟಿಸ್‌

ಕಾಂಗ್ರೆಸ್ ಉಪಾಧ್ಯಕ್ಷರ ವಿರುದ್ಧ ಬ್ರಿಟನ್‌ ಪೌರತ್ವದ ಆರೋಪ
Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಬ್ರಿಟನ್‌ ಪೌರತ್ವ ಹೊಂದಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ನೇತೃತ್ವದ ನೀತಿ ಸಮಿತಿಯು ನೋಟಿಸ್‌ ನೀಡಿದೆ.

ರಾಹುಲ್‌ ಗಾಂಧಿ ಅವರು ಬ್ರಿಟನ್ ಪೌರತ್ವ ಹೊಂದಿದ್ದಾರೆ ಎಂಬ ಆರೋಪದ ಬಗ್ಗೆ  ಸೂಕ್ತ ತನಿಖೆ ನಡೆಯಬೇಕು ಎಂದು ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರಿಗೆ ಬಿಜೆಪಿ ಸಂಸದ ಮಹೇಶ್‌ ಗಿರಿ ದೂರು ನೀಡಿದ್ದರು.

ಬ್ರಿಟನ್‌ನಲ್ಲಿ ಕಂಪೆನಿಯೊಂದನ್ನು ಸ್ಥಾಪಿಸುವುದಕ್ಕಾಗಿ ರಾಹುಲ್‌ ಅವರು ‘ಬ್ರಿಟನ್‌ ಪ್ರಜೆ’ ಎಂದು ಘೋಷಣೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿಯ ಮುಖಂಡ ಸುಬ್ರಮಣಿಯಂ ಸ್ವಾಮಿ ಅವರು ಆರೋಪಿಸಿದ್ದರು. ಈ ಆರೋಪದ ಆಧಾರದಲ್ಲಿ ಮಹೇಶ್‌ ಗಿರಿ ಅವರು ದೂರು ಸಲ್ಲಿಸಿದ್ದರು. ಈ ದೂರನ್ನು ಜನವರಿ ಮೊದಲ ವಾರದಲ್ಲಿ ಸ್ಪೀಕರ್‌ ಅವರು ನೀತಿ ಸಮಿತಿಗೆ ವರ್ಗಾಯಿಸಿದ್ದರು.

‘ಲಂಡನ್‌ನಲ್ಲಿರುವ ಕಂಪೆನಿಯ ನಿರ್ದೇಶಕರಾಗುವುದಕ್ಕಾಗಿ ರಾಹುಲ್‌ ಅವರು ಬ್ರಿಟನ್‌ ಪ್ರಜೆ ಎಂದು ಹೇಗೆ ಘೋಷಿಸಿಕೊಂಡರು ಎಂಬುದನ್ನು ವಿವರಿಸುವಂತೆ ನೋಟಿಸ್‌ ನೀಡಲಾಗಿದೆ’ ಎಂದು ನೀತಿ ಸಮಿತಿಯ ಸದಸ್ಯ ಅರ್ಜುನ್‌ ರಾಮ್‌ ಮೇಘವಾಲ್‌ ಹೇಳಿದ್ದಾರೆ.
ಸುಬ್ರಮಣಿಯಂ ಸ್ವಾಮಿ ಅವರು ಕೂಡ ಈ ಬಗ್ಗೆ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದಾರೆ.

ವಿವಾದಕ್ಕೆ ಸಂಬಂಧಿಸಿದಂತೆ ದೇಶದ ಜನರಿಗೆ ಸತ್ಯಾಂಶ ತಿಳಿಯಬೇಕು. ರಾಹುಲ್‌ ಅವರ ಬಗ್ಗೆ ಹಲವು  ‘ವ್ಯತಿರಿಕ್ತ’  ಅಂಶಗಳು ಬಹಿರಂಗವಾಗಿವೆ. ಅವರ ಪೌರತ್ವದ ವಿಚಾರ ‘ನಿಗೂಢ’ವಾಗಿದೆ. ಹಾಗಾಗಿ ಸ್ಪೀಕರ್‌ಗೆ ದೂರು ನೀಡಲಾಗಿದೆ ಎಂದು ಗಿರಿ ಅವರು ಹೇಳಿದ್ದಾರೆ.

ಸಂಸದರು ಸ್ಪೀಕರ್‌ಗೆ ದೂರು ನೀಡಿದರೆ ನಿಯಮ ಪ್ರಕಾರ ಅದನ್ನು ನೀತಿ  ಸಮಿತಿಗೆ ವರ್ಗಾಯಿಸಲಾಗುತ್ತದೆ ಎಂದು ರಾಹುಲ್‌ ವಿರುದ್ಧದ ದೂರನ್ನು ನೀತಿ ಸಮಿತಿಗೆ ವರ್ಗಾಯಿಸಿದ ನಂತರ ಸುಮಿತ್ರಾ ಮಹಾಜನ್‌ ಹೇಳಿದ್ದರು.

ಜೈಲಿಗೆ ಕಳುಹಿಸಿ–ರಾಹುಲ್‌ ಸವಾಲ್‌
ತಮ್ಮ ಬಂಟರನ್ನು ಬಳಸಿಕೊಂಡು ಪ್ರಧಾನಿ ಕೆಸರೆರಚಾಟ ನಡೆಸುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಆರೋಪದ ಬಗ್ಗೆ ತನಿಖೆ ನಡೆಸಿ, ತಮ್ಮಿಂದ ತಪ್ಪಾಗಿದ್ದರೆ ಜೈಲಿಗೆ ಕಳುಹಿಸಿ ಎಂದು ರಾಹುಲ್‌ ಸವಾಲೆಸೆದಿದ್ದಾರೆ.

ದೇಶ ಎದುರಿಸುತ್ತಿರುವ ವಿವಿಧ ಬಿಕ್ಕಟ್ಟುಗಳಿಂದ ಗಮನ ಬೇರೆಡೆ ತಿರುಗಿಸುವುದಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ನ ರೇಣುಕಾ ಚೌಧರಿ ಆರೋಪಿಸಿದ್ದಾರೆ.

‘ಭಾರತದಲ್ಲಿಯೇ ಹುಟ್ಟಿರುವ ಮತ್ತು ದೇಶದ ಪ್ರಧಾನಿಯಾಗಿದ್ದವರ ಮೊಮ್ಮಗ ಮತ್ತು ಮಗನಾಗಿರುವ ವ್ಯಕ್ತಿ ಬೇರೊಂದು ದೇಶದ ಪ್ರಜೆಯಾಗುವುದು ಹೇಗೆ ಸಾಧ್ಯ’ ಎಂದು ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಪ್ರಶ್ನಿಸಿದ್ದಾರೆ. ಈ ದೂರನ್ನು ವಜಾ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಹುಲ್‌ ವಿರುದ್ಧದ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸಲು ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕಳೆದ ನವೆಂಬರ್ ನಲ್ಲಿ ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು. ಅರ್ಜಿಯ ಜತೆ ಸಲ್ಲಿಸಲಾಗಿದ್ದ ದಾಖಲೆಗಳ ಅಧಿಕೃತತೆಯನ್ನು ಪ್ರಶ್ನಿಸಿತ್ತು. ಜತೆಗೆ ಈ ದಾಖಲೆಗಳನ್ನು ಪಡೆದುಕೊಂಡ ವಿಧಾನದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT