ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನದ ಗಟ್ಟಿ ಬರಹಗಳು

Last Updated 12 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಪಾಪ ಪ್ಲೂಟೊ (ವೈಜ್ಞಾನಿಕ ಲೇಖನಗಳ ಸಂಗ್ರಹ)
ಲೇ:
ಪಾಲಹಳ್ಳಿ ವಿಶ್ವನಾಥ್
ಪ್ರ: ಇಂಡಿಗೋ ಮಲ್ಟಿ ಮೀಡಿಯ 10/1, 11ನೇ ಮುಖ್ಯರಸ್ತೆ, ಪ್ರಕಾಶನಗರ, ಬೆಂಗಳೂರು- 560 021

‘ಟಾಟಾ ಮೂಲಭೂತ ಸಂಶೋಧನ ಸಂಸ್ಥೆ’ಯಲ್ಲಿ ಭೌತವಿಜ್ಞಾನದಲ್ಲಿ ಸಂಶೋಧನೆ ಮಾಡಿ, ನಿವೃತ್ತಿಯ ನಂತರ ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನು ಹೆಚ್ಚು ಬರೆಯುತ್ತಿರುವವರು ಪಾಲಹಳ್ಳಿ ವಿಶ್ವನಾಥ್ (‘ತಾಯಿನಾಡು’ ಪತ್ರಿಕೆಯ ಸಂಸ್ಥಾಪಕ ಪಿ.ಆರ್. ರಾಮಯ್ಯ ಅವರ ಮಗ). ‘ಪಾಪ ಪ್ಲೂಟೊ’ ಅವರ ಹದಿನೇಳು ಬಿಡಿ ಲೇಖನಗಳ ಸಂಗ್ರಹ. ಲೇಖಕರು ಇಲ್ಲಿನ ಹದಿನೇಳು ಲೇಖನಗಳನ್ನು– ‘ಭ್ರಮಾಲೋಕ’, ‘ಆಕಾಶದಿಂದ ಆತಂಕ’, ‘ಸೂಪರ್‌ನೋವಾ’, ‘ಭೂಮಿ ಮತ್ತು ಬಾನು’, ‘ಕಣ ಮತ್ತು ಪರಮಾಣು’ ಎನ್ನುವ ಐದು ಪ್ರಮುಖ ಶೀರ್ಷಿಕೆಗಳಡಿ ತಂದಿದ್ದಾರೆ.

ಲೇಖನಗಳ ಮೇಲೆ ಕಣ್ಣಾಡಿಸುತ್ತಲೇ ಮೊದಲು ಗಮನ ಸೆಳೆಯುವುದು ವೈವಿಧ್ಯಮಯ ಶೀರ್ಷಿಕೆಗಳು. ವಿಜ್ಞಾನ, ಸಾಹಿತ್ಯ, ಕಲೆಯ ನಂಟಿನಲ್ಲಿ ಅರಳಿರುವ ಮುದನೀಡುವ ಲೇಖನಗಳು. ವಿಜ್ಞಾನ ಲೇಖನಗಳಿಗೆ ಒಂದು ಮಿತಿಯಿರುತ್ತದೆ. ಅವು ಪ್ರಕಟಿಸಿದ ಕಾಲಕ್ಕೆ ಮಾತ್ರ ಸಲ್ಲುವಂತಹವು. ಸಂಶೋಧನೆ ಮುಂದುವರಿದಂತೆ ಹಿಂದಿನ ಮಾಹಿತಿಗಳು ಹಳತಾಗುತ್ತವೆ. ಈ ಅರ್ಥದಲ್ಲೇ ಇವನ್ನು ಅಲ್ಪಾಯು ಎನ್ನುವುದು. ವಿಜ್ಞಾನಿಯಾದ ಪಿ.ಆರ್. ವಿಶ್ವನಾಥ್ ಇದಕ್ಕೊಂದು ಉಪಾಯ ಕಂಡುಕೊಂಡಿದ್ದಾರೆ. ಪ್ರತಿ ಲೇಖನವನ್ನು ವರ್ತಮಾನದ ಬೆಳವಣಿಗೆಯನ್ನು ಗಮನಿಸಿ ಹೆಚ್ಚುವರಿ ಟಿಪ್ಪಣಿ ಕೊಟ್ಟು ಪ್ರಸ್ತುತಗೊಳಿಸುವುದು.

ವಿಜ್ಞಾನಿಗಳಿಗೆ ಎಲ್ಲವೂ ರೆಲೆವೆಂಟ್. ಆದರೆ ಸಾಮಾನ್ಯ ಓದುಗರಿಗೆ ಕೌತುಕದ ಕಡೆ ಗಮನ. ಇಲ್ಲಿ ಲೇಖನಗಳನ್ನು ಆರಿಸಿಕೊಳ್ಳುವಲ್ಲಿ ಈ ಪ್ರಜ್ಞೆ ನಿಚ್ಚಳವಾಗಿ ಕಾಣುತ್ತದೆ. ಪ್ಲೂಟೊ ಕುರಿತು ವಾದ–ವಿವಾದ ಇಂದಿಗೂ ನಡೆಯುತ್ತಿದೆ. ಅದಕ್ಕೆ ಗ್ರಹಪಟ್ಟ ಕೊಟ್ಟಿದ್ದು, ಪಟ್ಟದಿಂದ ಇಳಿಸಿದ್ದು, ಕುಬ್ಜಗ್ರಹದ ಪಟ್ಟಿಗೆ ತಳ್ಳಿದ್ದು, ಅದರ ಹಿಂದಿರುವ ವೈಜ್ಞಾನಿಕ ತರ್ಕ ಇಲ್ಲಿ ಸೊಗಸಾಗಿ ಮೂಡಿಬಂದಿದೆ. ಇಂದಿಗೂ ಅಧ್ಯಾಪಕ ವರ್ಗ ಮಕ್ಕಳಿಗೆ ಈ ವೈಜ್ಞಾನಿಕ ಸತ್ಯವನ್ನು ಮನಗಾಣಿಸಲು ತಿಣುಕಾಡುವುದುಂಟು. ಅಂಥವರು ಅಗತ್ಯವಾಗಿ ಇಂಥ ಲೇಖನಗಳನ್ನು ಓದಿ, ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ವೈಜ್ಞಾನಿಕ ನೆಲೆಯಲ್ಲೇ ಉತ್ತರ ಕೊಡಬಹುದು. ಇಲ್ಲೂ ಈಚಿನ ಮಾಹಿತಿ ಅಂದರೆ 2015ರಲ್ಲಿ ‘ನ್ಯೂ ಹೊರೈಝನ್’ ಎಂಬ ವ್ಯೋಮನೌಕೆ ಪ್ಲೂಟೊ ಕುರಿತು ಕಳಿಸಿರುವ ಮಾಹಿತಿಯನ್ನು ಟಿಪ್ಪಣಿಯಾಗಿ ಕೊಟ್ಟಿದ್ದಾರೆ.

‘ಧೂಮಕೇತುಗಳು ಅಂದಿನಿಂದ ಇಂದಿನವರೆಗೆ’, ‘ಆಕಾಶದಲ್ಲಿ ಹೊಸ ನಕ್ಷತ್ರ’, ‘ಸೂಪರ್‌ನೋವಾ’, ‘ನಮ್ಮ ಭೂಮಿಯ ಸಂಗಾತಿ’, ‘ಪರಮಾಣು ನೀನು ಈಗ ಶತಾಯುಷಿ’– ಮುಂತಾದ ಲೇಖನಗಳು ಇಂದಿನ ತಿಳಿವಿನ ದೀವಿಗೆಗೆ ಮತ್ತಷ್ಟು ತೈಲ ಎರೆದು ಆಕರ್ಷಿಸುತ್ತವೆ. ಇವಕ್ಕೆ ಕಾಲದ ಹಂಗಿಲ್ಲ, ಯಾವಾಗ ಬೇಕಾದರೂ ಓದಬಹುದು, ಸವಿಯಬಹುದು. ಧೂಮಕೇತುಗಳ ಬಗ್ಗೆ ಅನಾವರಣ ಮಾಡುವ ‘ಎಡ್ಮಂಡ್ ಹ್ಯಾಲಿಯ ಸ್ವಗತ’ ಎನ್ನುವ ಲೇಖನ ವಿಶೇಷವಾದದ್ದು, ಹೇಳುವ ತಂತ್ರಗಾರಿಕೆಯೂ ಹೊಸತು. ಇಲ್ಲಿ ಒಂದೆರಡು ವಿಚಾರಗಳನ್ನು ಸ್ಪಷ್ಟಪಡಿಸುವುದು ಯುಕ್ತ.

ಆರಂಭದಲ್ಲಿರುವ ‘ಭ್ರಮಾಲೋಕದ ನೌಕೆಗಳು’ ಎಂಬ ಲೇಖನ ಪ್ಲೈಯಿಂಗ್ ಸಾಸರ್ ಬಗ್ಗೆ ಹೇಳಲು ತೊಡಗಿ ಇಂದಿನ ಅಂತರಿಕ್ಷ ವಿಜ್ಞಾನದ ಶೋಧದ ಹಿನ್ನೆಲೆಯಲ್ಲಿ ಇವೆಲ್ಲ ಭ್ರಮೆಗಳು ಎಂದು ತೋರಿಸಿಕೊಡುತ್ತದೆ. ವಾಸ್ತವವಾಗಿ ಇಂಥ ಲೇಖನ ಇನ್ನಷ್ಟು ವ್ಯಾಪಕವಾಗಿ ಇರಬೇಕಾಗಿತ್ತು. ಐಸ್‌ಕ್ರೀಂ ತೋರಿಸಿ ಬೆಲ್ಲ ಕೊಟ್ಟಂತಾಗಿದೆ. ಪ್ರಳಯ ಕುರಿತು 2012ರಲ್ಲಿ ಇಡೀ ಜಗತ್ತೇ ಸನ್ನಿ ಹಿಡಿದಂತೆ ವರ್ತಿಸಿದಾಗ, ಇದು ಬುರುಡೆ ಎಂದು ಜನಸಾಮಾನ್ಯರನ್ನು ಒಪ್ಪಿಸಲು ವಿಜ್ಞಾನಿಗಳು ತಿಣುಕಬೇಕಾಯಿತು. ಇಲ್ಲಿ ‘ಇಚ್ಛಾಮರಣಿಗಳು’ ಎಂಬ ಲೇಖನದಲ್ಲಿ ವಿಶ್ವನಾಥ್ ತರ್ಕಬದ್ಧವಾಗಿ ಸಾಮಾನ್ಯರೂ ಒಪ್ಪುವಂತೆ ಪ್ರಳಯವನ್ನು ಅಲ್ಲಗಳೆದಿದ್ದಾರೆ. ದೇವಕಣದಂತಹ ಅತ್ಯಂತ ಕ್ಲಿಷ್ಟ ವಿಷಯವನ್ನು ಜನಸಾಮಾನ್ಯರಿಗೆ ಅರ್ಥಮಾಡಿಸುವುದು ದೊಡ್ಡ ಸವಾಲು. ಇಲ್ಲೂ ಅದೇ ಎದುರಾಗಿದೆ.

ಕಪ್ಪು–ಬಿಳುಪು ಚಿತ್ರಗಳು ಇನ್ನಷ್ಟು ಸ್ಫುಟವಾಗಿ ಮುದ್ರಣವಾಗಬಹುದಿತ್ತು. ಈಗಂತೂ ಸಿ.ಟಿ.ಪಿ. (ಕಂಪ್ಯೂಟರ್ ಟು ಪ್ರಿಂಟ್) ತಂತ್ರಜ್ಞಾನ ಬಳಕೆಯಲ್ಲಿರುವಾಗ ಚಿತ್ರಗಳ ಗುಣಮಟ್ಟ ಕಾಯ್ದಕೊಳ್ಳುವುದು ಸಮಸ್ಯೆಯೇ ಅಲ್ಲ. ಬಹಳಷ್ಟು ಚಿತ್ರಗಳು ಮಸುಕಾಗಿವೆ. ಹಾಗೆಯೇ ಪದಪ್ರಯೋಗದ ಬಗ್ಗೆ ಒಂದುಮಾತು. ಪುಟ 77ರಲ್ಲಿ ‘ವೇದಶಾಲೆ’ ಎಂಬ ಪದಪ್ರಯೋಗವಿದೆ. ‘ವೇಧಶಾಲೆ’ ಎಂಬುದು ಸರಿಯಾದ ಪ್ರಯೋಗ. ಇನ್ನೂ ಸರಿಯಾದ ಪ್ರಯೋಗವೆಂದರೆ ‘ವೀಕ್ಷಣಾಲಯ’. ಅದು ಎಲ್ಲರಿಗೂ ಸುಲಭಗ್ರಾಹ್ಯ. ಜನಪ್ರಿಯ ವಿಜ್ಞಾನವನ್ನು ವಿಜ್ಞಾನಿಗಳೇ ಬರೆಯಬೇಕೆಂದಿಲ್ಲ. ಆದರೆ, ವಿಜ್ಞಾನಿಗಳೇ ಬರೆದಾಗ ಪರಿಕಲ್ಪನೆಯಲ್ಲಿ ಗೊಂದಲವಿರುವುದಿಲ್ಲ ಎಂಬುದಂತೂ ದಿಟ. ಇಲ್ಲಿನ ಬರಹಗಳು ಗಟ್ಟಿತನವನ್ನು ಕಾಪಾಡಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT