ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಪೋವಾ ಇದೇನಿದು?

Last Updated 14 ಮಾರ್ಚ್ 2016, 5:00 IST
ಅಕ್ಷರ ಗಾತ್ರ

ಏಳರ ಹರೆಯದ ಮಗಳು ಮರಿಯಾ ಶರಪೋವಾ ಜತೆ ಅಮೆರಿಕಕ್ಕೆ ಬಂದಾಗ ಯೂರಿ ಶರಪೋವಾ ಬಳಿ ಇದ್ದದ್ದು 700 ಡಾಲರ್‌ ಮಾತ್ರ (ಅಂದಾಜು ₹ 46 ಸಾವಿರ).

ಮಗಳನ್ನು ವಿಶ್ವದ ಅಗ್ರಮಾನ್ಯ ಟೆನಿಸ್‌ ಆಟಗಾರ್ತಿಯಾಗಿ ಬೆಳೆಸಬೇಕೆಂಬುದು ಯೂರಿ ಅವರ ಕನಸಾಗಿತ್ತು.  ಅದಕ್ಕಾಗಿ ರಷ್ಯಾದಿಂದ ಅಮೆರಿಕಕ್ಕೆ ವಾಸ್ತವ್ಯ ಬದಲಿಸಿದ್ದರು. ತಂದೆಯ ಕನಸನ್ನು ಮರಿಯಾ ನನಸಾಗಿಸಿದ್ದು ಮಾತ್ರವಲ್ಲದೆ, ಜಗತ್ತಿನ ಅತೀ ಶ್ರೀಮಂತ ಆಟಗಾರ್ತಿಯಾಗಿ ಬೆಳೆದದ್ದು ಈಗ ಇತಿಹಾಸ.

1986ರ ಚೆರ್ನೋಬಿಲ್‌ ಪರಮಾಣು ದುರಂತದಲ್ಲಿ ತೊಂದರೆ ಅನುಭವಿಸಿದ್ದವರಲ್ಲಿ ಶರಪೋವಾ ಕುಟುಂಬವೂ ಸೇರಿತ್ತು. ಆ ಬಳಿಕ ನ್ಯಾಗನ್‌ ಎಂಬಲ್ಲಿಂದ ರಷ್ಯಾದ ಸೋಚಿಗೆ ವಾಸ ಬದಲಿಸಿದ್ದ ಯೂರಿ, 1994 ರಲ್ಲಿ ಅಮೆರಿಕಕ್ಕೆ ಬಂದು ನೆಲೆಸಿದ್ದರು. 

ಫ್ಲಾರಿಡಾದಲ್ಲಿರುವ ಐಎಂಜಿ ಟೆನಿಸ್‌ ಅಕಾಡೆಮಿಗೆ ಮಗಳನ್ನು ಸೇರಿಸುವುದು ಯೂರಿ ಹೆಬ್ಬಯಕೆಯಾಗಿತ್ತು. ಅದಕ್ಕಾಗಿ ಹಣ ಹೊಂದಿಸಲು ಅವರು ಪಾತ್ರೆ ತೊಳೆಯುವ ಕೆಲಸವನ್ನೂ ಮಾಡಿದ್ದರು!

ಕಷ್ಟದಿಂದ ಬೆಳೆಸಿದ ಆ ಮಗಳು ಇದೀಗ ಅಂದಾಜು ₹ 1340 ಕೋಟಿ ಸಂಪತ್ತಿನ ಒಡತಿಯಾಗಿದ್ದಾರೆ. ಹೌದು. ಮರಿಯಾ ಶರಪೋವಾ ಸಾಗಿಬಂದ ಹಾದಿ ಹಾಲಿವುಡ್‌ ಸಿನಿಮಾದ ಕಥೆಯಷ್ಟೇ ರೋಚಕವಾದುದು. ಇದೀಗ ಆ ರೋಚಕ ಕಥೆಗೆ ಅನಿರೀಕ್ಷಿತ ತಿರುವು ದೊರೆತಿದೆ.

ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿರುವ ಈ ಆಟಗಾರ್ತಿಯ ವೃತ್ತಿಜೀವನ ‘ದುರಂತ ಅಂತ್ಯ’ ಕಾಣುವ ಅಪಾಯಕ್ಕೆ ಸಿಲುಕಿದೆ.

17ನೇ ವಯಸ್ಸಿನಲ್ಲೇ ಗ್ರ್ಯಾಂಡ್‌ ಸ್ಲಾಮ್‌ ಗರಿ
ಐಎಂಜಿ ಅಕಾಡೆಮಿಯಲ್ಲಿ ತರಬೇತಿ ಪಡೆದ ಶರಪೋವಾ ತಮ್ಮ 14ರ ಹರೆಯದಲ್ಲಿ ವೃತ್ತಿಪರ ಆಟಗಾರ್ತಿಯಾಗಿ ಬದಲಾಗಿದ್ದರು. 2004 ರಲ್ಲಿ ವಿಂಬಲ್ಡನ್‌ ಹುಲ್ಲುಹಾಸಿನಲ್ಲಿ ಮಿರುಗುವ ಟ್ರೋಫಿಗೆ ಮುತ್ತಿಕ್ಕಿ ಟೆನಿಸ್‌ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದರು. ಹೊಸ ತಾರೆಯೊಂದು ಉದಯಿಸಿದ್ದನ್ನು ಟೆನಿಸ್‌ ಪ್ರೇಮಿಗಳು ಬೆರಗುಗಣ್ಣಿನಿಂದ ನೋಡಿದ್ದರು.

ಚೊಚ್ಚಲ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಗೆಲುವು ಶರಪೋವಾ ಅವರ ಜೀವನದ ದಿಕ್ಕನ್ನೇ ಬದಲಿಸಿತು. ಈ ‘ಗ್ಲಾಮರಸ್‌’ ತಾರೆಯನ್ನು ತಮ್ಮ ಪ್ರಚಾರ ರಾಯಭಾರಿಯನ್ನಾಗಿಸಲು ಹಲವು ಕಂಪೆನಿಗಳು ಮುಗಿಬಿದ್ದವು.

ಆ ಬಳಿಕ ಕ್ಷಿಪ್ರಗತಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆದ ಶರಪೋವಾ ಇದೀಗ ಅಭಿಮಾನಿಗಳ ತೆಗಳಿಕೆಗೆ ಗುರಿಯಾಗಿದ್ದಾರೆ. ನಿಷೇಧಿತ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದೇನೆ ಎಂಬುದನ್ನು ಅವರು ಕಳೆದ ಸೋಮವಾರ ಬಹಿರಂಗಪಡಿದಾಗ ಅಭಿಮಾನಿಗಳಿಗೆ ಅಚ್ಚರಿ, ಆಘಾತ ಉಂಟಾಗಿತ್ತು.

ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ನಿಷೇಧಿಸಿರುವ ‘ಮೆಲ್ಡೋನಿಯಮ್‌’ ಅನ್ನು ಸೇವಿಸುತ್ತಿದ್ದುದನ್ನು ಅವರು ಒಪ್ಪಿಕೊಂಡಿದ್ದಾರೆ.

ಎಚ್ಚರಿಕೆ ಕಡೆಗಣಿಸಿದ್ದರು
‘ಮೆಲ್ಡೋನಿಯಮ್‌’ ಅನ್ನು ವಾಡಾ ನಿಷೇಧಿತ ಮದ್ದುಗಳ ಪಟ್ಟಿಯಲ್ಲಿ ಸೇರಿಸಿದ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ’ ಎಂದು ಶರಪೋವಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಆದರೆ ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ವಿಚಾರಣೆಯ ಬಳಿಕ ತಿಳಿಯಬಹುದು. ಏಕೆಂದರೆ 2015ರ ಡಿಸೆಂಬರ್‌ನಲ್ಲಿ ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌) ಮತ್ತು ಮಹಿಳಾ ಟೆನಿಸ್‌ ಸಂಸ್ಥೆ (ಡಬ್ಲ್ಯುಟಿಎ)  ಈ ಬಗ್ಗೆ ಕ್ರೀಡಾಪಟುಗಳಿಗೆ ಐದು ಸಲ ಎಚ್ಚರಿಕೆ ಕೊಟ್ಟಿತ್ತು. ಶರಪೋವಾ ಅವರಿಗೂ ಐದು ಇ–ಮೇಲ್‌ಗಳನ್ನು ಕಳುಹಿಸಿತ್ತು.

ಮರಿಯಾ ಶರಪೋವಾ ತಮಗೆ ಬಂದಿರುವ ಇ–ಮೇಲ್‌ಗಳನ್ನು ನೋಡಿಲ್ಲವೇ? ನೋಡಿದ್ದರೂ ನಿಷೇಧಿತ ಮದ್ದುಗಳ ಪಟ್ಟಿಯನ್ನು ಪರಿಶೀಲಿಸಲಿಲ್ಲವೇ? ಎಂಬ ಪ್ರಶ್ನೆಗಳು ಕಾಡುತ್ತಿವೆ.

‘ವೈದ್ಯರ ಸೂಚನೆಯಂತೆ ಕಳೆದ ಹತ್ತು ವರ್ಷಗಳಿಂದ ಈ ಮದ್ದು ಸೇವಿಸುತ್ತಿದ್ದೇನೆ’ ಎಂದೂ ಶರಪೋವಾ ಹೇಳಿದ್ದರು. ಆದರೆ ‘ಮೆಲ್ಡೋನಿಯಮ್‌’ ತಯಾರಿಸುವ ಲಾಟ್ವಿಯ ದೇಶದ ಔಷದ ತಯಾರಿಕಾ ಕಂಪೆನಿ, ‘ವೈದ್ಯರು ಸಾಧಾರಣವಾಗಿ ನಾಲ್ಕರಿಂದ ಆರು ವಾರಗಳವರೆಗೆ ಈ ಮದ್ದು ಸೇವಿಸಲು ಸೂಚಿಸುವರು’ ಎಂದಿದೆ.

ಇದಕ್ಕೆ ಉತ್ತರ ನೀಡಿರುವ ಶರಪೋವಾ ಅವರ ವಕೀಲ ಜಾನ್‌ ಹ್ಯಾಗರ್ಟಿ, ‘ಕಂಪೆನಿ ನಿಜವನ್ನೇ ಹೇಳಿದೆ.  ಶರಪೋವಾ ಅದನ್ನು ಪ್ರತಿದಿನ ಸೇವಿಸುತ್ತಿರಲಿಲ್ಲ. ನಾಲ್ಕರಿಂದ ಆರು ವಾರಗಳ ಕಾಲ, ವರ್ಷದಲ್ಲಿ ಎರಡು ಮೂರು ಬಾರಿ ಅಥವಾ ವೈದ್ಯರ ಸೂಚನೆಯಂತೆ ಸೇವಿಸಬಹುದು ಎಂದು ಕಂಪೆನಿ ತಿಳಿಸಿದೆ. 10 ವರ್ಷಗಳಿಂದ ಸೇವಿಸುತ್ತಿದ್ದೇನೆ ಎಂದ ಮಾತ್ರಕ್ಕೆ ಅವರು ಪ್ರತಿ ದಿನವೂ ಸೇವಿಸುತ್ತಿದ್ದರು ಎಂದು ಭಾವಿಸುವುದು ತಪ್ಪು’ ಎಂದಿದ್ದಾರೆ.

ಪಶ್ಚಿಮ ಯೂರೋಪ್‌ನ ರಾಷ್ಟ್ರಗಳಲ್ಲಿ ಈ ಮದ್ದು ವ್ಯಾಪಕವಾಗಿ ಬಳಸಲಾಗುತ್ತಿದೆ. ಇಲ್ಲಿನ ದೇಶಗಳಲ್ಲಿ ಈ ಮದ್ದನ್ನು ಅಥ್ಲೀಟ್‌ಗಳೇ ಹೆಚ್ಚಾಗಿ ಬಳಸುತ್ತಿರುವುದು ವಾಡಾ ಗಮನಕ್ಕೆ ಬಂದಿದೆ. ಆದ್ದರಿಂದ ಇದರ ಬಗ್ಗೆ ಅಧ್ಯಯನ ನಡೆಸಿತ್ತು. ಸ್ಪರ್ಧಿಗಳ ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತದೆ ಎಂಬುದನ್ನು ಪತ್ತೆಹಚ್ಚಿದ ಬಳಿಕವೇ ಇದನ್ನು ನಿಷೇಧಿತ ಮದ್ದುಗಳ ಪಟ್ಟಿಗೆ ಸೇರಿಸಿತ್ತು.

ಅಮೆರಿಕದ ಆಹಾರ ಮತ್ತು ಔಷಧ ಸಂಸ್ಥೆ (ಎಫ್‌ಡಿಎ) ಅಮೆರಿಕದಲ್ಲಿ ಇದರ ಮಾರಾಟಕ್ಕೆ ಅನುಮತಿ ಕೊಟ್ಟಿಲ್ಲ. ಆದ್ದರಿಂದ ಈ ಮದ್ದನ್ನು ಶರಪೋವಾ ಎಲ್ಲಿಂದ ಪಡೆಯುತ್ತಿದ್ದರು ಎಂಬ ಪ್ರಶ್ನೆ ಕೂಡಾ ಎದ್ದಿದೆ.

ಸಂಪತ್ತು ಕರಗುವುದೇ?
ಶರಪೋವಾ ಬಹುಮಾನ ಮೊತ್ತವಾಗಿ ಪಡೆದ ಹಣಕ್ಕಿಂತ ಎಷ್ಟೋ ಪಟ್ಟು ಅಧಿಕ ಹಣವನ್ನು ಜಾಹೀರಾತು ಹಾಗೂ ಇತರ ವಾಣಿಜ್ಯ ವ್ಯವಹಾರಗಳ ಮೂಲಕ ಗಳಿಸಿದ್ದಾರೆ. ಇದಕ್ಕೆ ಅವರ ಸೌಂದರ್ಯ ಕೂಡಾ ಕಾರಣ.

‘ಸೌಂದರ್ಯವೂ ಮುಖ್ಯ. ಜನರು ನನ್ನನ್ನು ಇಷ್ಟಪಡಲು ಇದೂ ಕಾರಣ ಎಂಬುದು ತಿಳಿದಿದೆ. ಅದರಲ್ಲಿ ತಪ್ಪೇನೂ ಇಲ್ಲ. ನಾನೇ ನನ್ನನ್ನು ಕುರೂಪಿಯಾಗಿಸಲು ಬಯಸುವುದಿಲ್ಲ’ ಎಂದು ಶರಪೋವಾ ಒಮ್ಮೆ ಹೇಳಿದ್ದರು.

ಆದರೆ ಸೌಂದರ್ಯದ ಜತೆಗೆ ಉತ್ತಮ ನಡವಳಿಕೆ ಅಗತ್ಯ ಎಂಬುದು ಅವರಿಗೆ ಈಗ ಮನದಟ್ಟಾಗುತ್ತಿರಬಹುದು. ಏಕೆಂದರೆ ಕೆಲವು ಕಂಪೆನಿಗಳು ಅವರಿಂದ ದೂರ ಸರಿಯತೊಡಗಿವೆ.

ಪ್ರಮುಖ ಕ್ರೀಡಾ ಸಾಮಗ್ರಿ ತಯಾರಿಕಾ ಕಂಪೆನಿ ‘ನೈಕಿ’ ಈ ಆಟಗಾರ್ತಿಯ ಜತೆಗಿನ ಒಪ್ಪಂದ ರದ್ದುಪಡಿಸಿದೆ. ಜರ್ಮನಿಯ ಕಾರು ಕಂಪೆನಿ ಪೋರ್ಷೆ ಮತ್ತು ಸ್ವಿಟ್ಜರ್‌ಲೆಂಡ್‌ನ ವಾಚ್‌ ತಯಾರಿಕಾ ಕಂಪೆನಿ ಟ್ಯಾಗ್‌ ಹ್ಯೂವರ್‌ ಒಪ್ಪಂದವನ್ನು ನವೀಕರಿಸುವುದಿಲ್ಲ ಎಂದು ಹೇಳಿದೆ.

ಫ್ಲಾರಿಡಾ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಐಷಾರಾಮಿ ಬಂಗಲೆ ಹೊಂದಿರುವ ಶರಪೋವಾ ಅವರಿಗೆ ‘ಸಂಪತ್ತು ಕರಗಿಹೋಗದಂತೆ’ ನೋಡುವ ಸವಾಲು ಕೂಡಾ ಎದುರಾಗಿದೆ.

ಎಂದೆಂದಿಗೂ ಕಪ್ಪು ಚುಕ್ಕೆ
ಶರಪೋವಾ ಅವರನ್ನು ಐಟಿಎಫ್ ತಾತ್ಕಾಲಿಕವಾಗಿ ಅಮಾನತು ಮಾಡಿದೆಯಾದರೂ ಪೂರ್ಣಪ್ರಮಾಣದ ಶಿಕ್ಷೆಯನ್ನು ಪ್ರಕಟಿಸಿಲ್ಲ.

ಉದ್ದೀಪನ ಮದ್ದು ಸೇವನೆ ಸಾಬೀತಾಗಿರುವುದರಿಂದ ನಾಲ್ಕು ವರ್ಷಗಳ ಅಮಾನತು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಮದ್ದು ಸೇವನೆ ಮಾಡಿದ ಪರಿಸ್ಥಿತಿ ಹಾಗೂ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಂಡ ನಂತರ ಶಿಕ್ಷೆಯ ಪ್ರಮಾಣ ನಿಗದಿಯಾಗಲಿದೆ.

‘ನನ್ನ ವೃತ್ತಿಜೀವನವು ಈ ರೀತಿ ಕೊನೆಗೊಳ್ಳಲು ಇಷ್ಟಪಡುವುದಿಲ್ಲ. ಮತ್ತೆ ಆಡಲು ಅವಕಾಶ ದೊರೆಯುವ ವಿಶ್ವಾಸವಿದೆ’ ಎಂದು ಶರಪೋವಾ ಭರವಸೆ ವ್ಯಕ್ತಪಡಿಸಿದ್ದಾರೆ.

ಶರಪೋವಾ ಮರಳಿ ಅಂಗಳಕ್ಕೆ ಬಂದು ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಯೇ ಗೆಲ್ಲಲಿ. ಈ ಘಟನೆ ಮಾತ್ರ ಅವರ ಜೀವನದುದ್ದಕ್ಕೂ ಕಪ್ಪು ಚುಕ್ಕೆಯಾಗಿಯೇ ಉಳಿಯಲಿದೆ.

*****
ಇದೇ ಮೊದಲಲ್ಲ
ಟೆನಿಸ್‌ನಲ್ಲಿ ಸ್ಪರ್ಧಿಗಳು ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದ ಹಲವು ಪ್ರಕರಣಗಳು ಈ ಹಿಂದೆ ನಡೆದಿವೆ.

ಅಮೆರಿಕದ ಆಂಡ್ರೆ ಅಗಾಸ್ಸಿ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಅವರ ಹೆಸರೂ ಕೂಡಾ ‘ಕಳಂಕಿತರ’ ಪಟ್ಟಿಯಲ್ಲಿದೆ. ಅಗಾಸ್ಸಿ ಮತ್ತು ಹಿಂಗಿಸ್‌ ಅವರ ಬಳಿಕ ಜನಪ್ರಿಯ ಸ್ಪರ್ಧಿಯೊಬ್ಬರು ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದದ್ದು ಇದೇ ಮೊದಲು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT