ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಮಂತಿಕೆ ಎಂಬುದು ಗುರಿಯಲ್ಲ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಭೌಗೋಳಿಕರಣದ ಈ ಆಧುನಿಕ ಯುಗದಲ್ಲಿ ಶ್ರೀಮಂತರು ಅತೀ ಶ್ರೀಮಂತರಾಗುತ್ತಾರೆ; ಬಡವರು ಕಡುಬಡವರಾಗುತ್ತಾ ಬರುತ್ತಾರೆ ಎಂಬ ಮಾತು ಸರ್ವೇಸಾಮಾನ್ಯವಾಗಿ ಕೇಳಿ ಬರುತ್ತದೆ. ‘ಈ ಲೋಕದ ಒಟ್ಟಾರೆ ಜನಸಂಖ್ಯೆಯ ಅರ್ಧದಷ್ಟು ಜನರಲ್ಲಿರುವಷ್ಟು ಸಂಪತ್ತು ಜಗತ್ತಿನ 62 ಆಗರ್ಭ ಶ್ರೀಮಂತರಲ್ಲಿದೆ ಎಂಬ ಒಕ್ಸ್‌ಫಾಮ್ ಸಂಸ್ಥೆಯ ವರದಿಯು ಈ ಮಾತನ್ನು ಇನ್ನಷ್ಟು ಪುಷ್ಟೀಕರಿಸುತ್ತದೆ. ಈ ಕಾರಣದಿಂದ ಜನ ಸಾಮಾನ್ಯರಲ್ಲಿ ಶ್ರೀಮಂತರು/ಜಮೀನ್ದಾರರ ಬಗ್ಗೆ ಒಳ್ಳೆಯ ಅಭಿಪ್ರಾಯವಿರುವುದಿಲ್ಲ. ಪ್ರಾಯಶಃ ಈ ಶ್ರೀಮಂತಿಕೆ ಅಪ್ರಾಮಾಣಿಕತೆ ಹಾಗೂ ಅನ್ಯಾಯದಿಂದ ಗಳಿಸಿದ್ದಿರಬೇಕು ಎಂಬ ಊಹೆಯಿಂದ ಈ ಅಭಿಪ್ರಾಯವು ಬೆಳೆದಿರಬಹುದು.

ಶ್ರೀಮಂತಿಕೆಯು ಕೆಟ್ಟದಲ್ಲ, ಶ್ರೀಮಂತನು ಕೆಟ್ಟವನಲ್ಲ. ಆದರೆ ಐಹಿಕ ಶ್ರೀಮಂತಿಕೆಯು ಒಂದು ಗುರಿಯಲ್ಲ, ಬದಲಾಗಿ ಗುರಿ ಸಾಧನೆಗೆ ಸಹಾಯವಾಗುವ ಒಂದು ಸಾಧನವಷ್ಟೇ. ಆದರೆ, ಈ ಸಾಧನದ  ಸದುಪಯೋಗವಾಗದಿದ್ದರೆ ಗುರಿ ಸಾಧನೆ ಅಸಾಧ್ಯವಾಗುತ್ತದೆ.

ಆಗರ್ಭ ಶ್ರೀಮಂತನೊಬ್ಬನು ನಯವಾದ ಬೆಲೆಬಾಳುವ ವಸ್ತ್ರಗಳನ್ನು ಧರಿಸಿಕೊಂಡು ನಿತ್ಯವೂ ಸಮೃದ್ಧಿಯಾಗಿ ಮೃಷ್ಟಾನ್ನ ಭೋಜನ ಮಾಡುತ್ತಿದ್ದ. ಅವನ ಬಂಗಲೆಯ ದ್ವಾರದ ಬಳಿ ಲಾಜರನೆಂಬ ಭಿಕ್ಷುಕನೊಬ್ಬ ಬಿದ್ದುಕೊಂಡಿರುತ್ತಿದ್ದ. ಆ ಭಿಕ್ಷುಕನಿಗೆ ಮೈ ತುಂಬಾ ಹುಣ್ಣು. ಐಶ್ವರ್ಯವಂತನ ಮೇಜಿನಿಂದ ಬೀಳುವ ರೊಟ್ಟಿಯ ತುಂಡುಗಳನ್ನು ತಿನ್ನಲು ಅವನು ಆಸೆಪಡುತ್ತಿದ್ದ. ಬೀಡಾಡಿ ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು. ಒಂದು ದಿನ ಆ ಭಿಕ್ಷುಕನು ಸತ್ತನು ಹಾಗೂ ದೇವದೂತರು ಅವನನ್ನು ಪಿತಾಮಹ ಅಬ್ರಹಾಮನ ಸನ್ನಿಧಿಗೆ ತೆಗೆದುಕೊಂಡು ಹೋದರು; ಶ್ರೀಮಂತನೂ ಸತ್ತನು; ಅವನನ್ನು ನೆಲದಲ್ಲಿ ಹೂಳಲಾಯಿತು.

ಪಾತಾಳದೊಳಗೆ ಯಾತನೆಯಲ್ಲಿದ್ದ ಶ್ರೀಮಂತನು ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ಸ್ವರ್ಗಲೋಕದಲ್ದಿ ಪಿತಾಮಹ ಅಬ್ರಹಾಮನ ಸನ್ನಿಧಿಯಲ್ಲಿದ್ದ ಲಾಜರನನ್ನು ನೋಡಿ ತನ್ನ ಮೇಲೆ ದಯೆತೋರಬೇಕೆಂದು ಅಬ್ರಹಾಂನನ್ನು ಕೇಳಿಕೊಳ್ಳುತ್ತಾನೆ. ಅದಕ್ಕೆ ಅಬ್ರಹಾಮನು, ನೀನು ನಿನ್ನ ಜೀವಿತಕಾಲದಲ್ಲಿ ಎಲ್ಲ ಸೌಕರ್ಯಗಳಿಂದ ಸುಖವಾಗಿ ಜೀವಿಸಿದ್ದಿ. ಲಾಜರನು ಪಟ್ಟ ಕಷ್ಟವನ್ನು ನೆನಪಿಸಿಕೊ. ಆದರೆ ಈಗ ಅವನು ಸುಖಪಡುತ್ತಿದ್ದಾನೆ. ನೀನು ಯಾತನೆ ಪಡುತ್ತಿದ್ದೀಯೆಷ್ಟೇ ಎಂದು ಉತ್ತರಿಸಿದನು.

ಯೇಸುಸ್ವಾಮಿ ನೀಡಿದ ಈ ಉದಾಹರಣೆಯಲ್ಲಿರುವ ಶ್ರೀಮಂತ ಅನ್ಯಾಯ, ಅನೀತಿಯಿಂದ ಶ್ರೀಮಂತನಾದವನಲ್ಲ; ತನ್ನ ದುಡಿಮೆಯ ಫಲವನ್ನು ಅವನು ಅನುಭವಿಸುತ್ತಿದ್ದ.  ಹೀಗಿದ್ದಾಗ್ಯೂ ‘ಸತ್ತ ಮೇಲೆ ಪಾತಾಳದಲ್ಲಿ ಕಷ್ಟಪಡಲು ಆ ಶ್ರೀಮಂತನು ಮಾಡಿದ ಪಾಪವೇನು? ತನ್ನ ಬಂಗಲೆಯ ದ್ವಾರದ ಬಳಿ ಅಸಹಾಯಕನಾಗಿ ಬಿದ್ದಿದ್ದ ಲಾಜರನ ಮೇಲೆ ಕಣ್ಣೆತ್ತಿಯೂ ನೋಡದೆ, ಅವನಿಗಾಗಿ ತನ್ನ ಕಿರುಬೆರಳಿನ ಸಹಾಯವನ್ನೂ ಮಾಡದೇ ಇದ್ದುದು ಶ್ರೀಮಂತನ ಅಕ್ಷಮ್ಯ ಅಪ ರಾಧವಾಗಿತ್ತು. ತನ್ನ ಶ್ರೀಮಂತಿಕೆಯನ್ನು ಉನ್ನತ ಗುರಿಸಾಧನೆಯ ಸಾಧನವನ್ನಾಗಿ ಬಳಸದೇ ಇದ್ದುದಕ್ಕಾಗಿ ತಕ್ಕ ಶಿಕ್ಷೆಯನ್ನು ಅವನು ಅನುಭವಿಸಿದ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT