ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜಯ್ ಸಿನಿಮೀಯ ನಡೆ

ವ್ಯಕ್ತಿ
Last Updated 27 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಪುಣೆಯ ಯೆರವಡಾ ಜೈಲಿನಿಂದ ಇತ್ತೀಚೆಗೆ ಬಿಡುಗಡೆಗೊಂಡ ಬಾಲಿವುಡ್‌ ನಟ ಸಂಜಯ್ ದತ್ ಬದುಕಿನ ಯಾನವೂ ಸಿನಿಮೀಯ ತಿರುವುಗಳೊಂದಿಗೇ ತಳಕು ಹಾಕಿಕೊಂಡಿದೆ. ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾದ ನಂತರದ 23 ವರ್ಷಗಳ ಕಾಲಾವಧಿಯಲ್ಲಿ, ಆರೋಪ ಮುಕ್ತಗೊಳ್ಳುವ ತಹತಹಿಕೆಯೊಂದಿಗೆ ಆತಂಕದ ಹೆಜ್ಜೆಯಿರಿಸಿದ ಅವರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಮತಬ್ಯಾಂಕ್‌ ಅನ್ನು ಕೇಂದ್ರೀಕರಿಸಿಕೊಂಡು, ಧರ್ಮಗಳ ನೆಲೆಯಲ್ಲಿ ಬಿರುಕುಗಳನ್ನು ಮೂಡಿಸುವ ನಕಾರಾತ್ಮಕ ರಾಜಕೀಯ ವಿಚಾರಧಾರೆ ಸಾಂಸ್ಥಿಕ ಸ್ವರೂಪವನ್ನು ಪಡೆದುಕೊಳ್ಳುವುದಕ್ಕೆ ಬೇಕಾದ ಅಖಾಡ ಸಿದ್ಧವಾಗುತ್ತಿದ್ದ ವೇಳೆಯಲ್ಲಿ ನಡೆದ ಸಂಜಯ್ ದತ್ ಬಂಧನ, ಹಲವು ಊಹಾಪೋಹಗಳಿಗೆ ನಾಂದಿ ಹಾಡಿತ್ತು. ಬಾಬ್ರಿ ಮಸೀದಿ ಧ್ವಂಸದ ನಂತರ ನಡೆದ ಮುಂಬೈ ಗಲಭೆ, ತದನಂತರದ ಘಟನಾವಳಿಗಳ ನಡುವಿನ ನಂಟು ಮತ್ತು ಭೂಗತ ಜಗತ್ತಿನವರೊಂದಿಗಿನ ಸಂಜಯ್ ಸ್ನೇಹ ಇವೆಲ್ಲವುಗಳ ನಡುವಿನ ಸಂಬಂಧದ ಭಾವವನ್ನು ಗಟ್ಟಿಗೊಳಿಸಿತ್ತು.

‘ಗಲಭೆ ಸೃಷ್ಟಿಸುವವರ ಬಗ್ಗೆ ತಂದೆ ವ್ಯಕ್ತಪಡಿಸಿದ ಅಸಮಾಧಾನಕ್ಕೆ ಪ್ರತಿಯಾಗಿ ನಮ್ಮ ಕುಟುಂಬಕ್ಕೆ ಬೆದರಿಕೆಯ ಕರೆಗಳು ಬಂದಿದ್ದವು. ಹೀಗಾಗಿ ಸ್ವಯಂ ರಕ್ಷಣೆಯ ಉದ್ದೇಶದೊಂದಿಗೆ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದೆ’ ಎಂಬ ಸ್ಪಷ್ಟನೆ ಸಂಜಯ್‌ ನೆರವಿಗೆ ಬರಲೇ ಇಲ್ಲ. ಒಂದು ಕಾಲದ ಖ್ಯಾತ ತಾರಾ ಜೋಡಿಯ ಪುತ್ರ ಎಂಬ ಹೆಗ್ಗಳಿಕೆ ಸಹ ಅವರ ದುರ್ಗಮ ಹಾದಿಯನ್ನು ಸುಗಮಗೊಳಿಸಲಿಲ್ಲ.

ಖ್ಯಾತ ನಟರಾದ ಸುನಿಲ್ ದತ್ ಮತ್ತು ನರ್ಗಿಸ್ ದತ್ ದಂಪತಿಯ ಮಗ ಎಂಬ ಕಲಾಪೂರ್ಣ ಹಿನ್ನೆಲೆಯ ವೈಶಿಷ್ಟ್ಯದ ಮಗ್ಗುಲನ್ನೇ ಮುರಿಯುವ ಹಾಗೆ ತಾರುಣ್ಯದಲ್ಲಿ ಸಂಭವಿಸಿದ ಅನಿರೀಕ್ಷಿತ ಘಟನೆಗಳು ಅವರನ್ನು ಜರ್ಝರಿತಗೊಳಿಸಿದವು. ಸುನಿಲ್ ದತ್ ತಮ್ಮ ಮಗ ಆರೋಪಮುಕ್ತನಾಗುವ ನಿರೀಕ್ಷೆಯಲ್ಲಿದ್ದರು. ಇಂಥದ್ದೊಂದು ಆಶಾಭಾವದೊಂದಿಗೇ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅವರನ್ನೂ ಭೇಟಿಯಾಗಿದ್ದರು. ಟಾಡಾ ಕಾಯ್ದೆಯಡಿ ಬಂಧಿತರಾದ ಸಂಜಯ್ ದತ್, ಠಾಕ್ರೆ ಮೃದು ಧೋರಣೆ ತಳೆದ ನಂತರ ಜಾಮೀನು ಪಡೆದಿದ್ದರು. ಆದರೆ, ಆ ಬಳಿಕ ಕಾನೂನು ಪ್ರಕ್ರಿಯೆಗಳು ನಿರಂತರವಾಗುತ್ತಲೇ ಹೋದವು.

ಯೌವನದಲ್ಲಿ ತಾಯಿಯನ್ನು ಕಳೆದುಕೊಂಡ ಹುಡುಗನೊಬ್ಬ ಅತೃಪ್ತ ಮನಸ್ಥಿತಿಯಲ್ಲಿ  ಬೆಳೆಯುತ್ತಾ, ಜನಪ್ರಿಯತೆಯ ಮನ್ನಣೆಯೊಂದಿಗೆ ನಟನೆ ಹಾದಿಯನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದಾಗಲೇ ವಿವಿಧ ಬಗೆಯ ಆಘಾತಗಳಿಗೆ ಮುಖಾಮುಖಿಯಾಗುವ ಸಂಕಟ ಮತ್ತು ಎಲ್ಲವೂ ಇದ್ದೂ ಅನಾಥ ಪ್ರಜ್ಞೆಯ ದಾರುಣ ಅನುಭವಕ್ಕೆ ಬಲಿಯಾಗಬೇಕಾದ ಅನಿವಾರ್ಯಗಳ ನಿಜದ ಕಥನವಾಗಿ ಸಂಜಯ್ ಜೀವನವು ವಿವಿಧ ತಿರುವುಗಳನ್ನು ಹಾದುಹೋಗಿದೆ.

ಅವರ ವ್ಯಕ್ತಿಗತ ಬದುಕು ಆರಂಭದಲ್ಲಿ ಮಾದಕದ್ರವ್ಯ ವ್ಯಸನದೊಂದಿಗೆ ಹಳಿತಪ್ಪಿತ್ತು. ತಮ್ಮ ಮೊದಲ ಸಿನಿಮಾ ‘ರಾಕಿ’ ಬಿಡುಗಡೆಗೊಂಡಾಗ ಸಂಜಯ್‌ಗೆ 22ರ ಹರೆಯ. ವಿಚಿತ್ರ ಸನ್ನಿವೇಶದಲ್ಲಿ, ಹೆತ್ತವರಿಂದ ಬೇರ್ಪಟ್ಟ ಹುಡುಗನೊಬ್ಬ ದೊಡ್ಡವನಾಗಿ ತಂದೆಯ ಕೊಲೆಗಡುಕರ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥೆಯನ್ನು ‘ರಾಕಿ’ ಆಧರಿಸಿತ್ತು. ಸೇಡು ತೀರಿಸಿಕೊಂಡ ನಂತರ ಹೆತ್ತ ತಾಯಿಯನ್ನು ಕಂಡುಕೊಳ್ಳುವ ಕಥನವಾಗಿ ಈ ಸಿನಿಮಾ ಕೊನೆಗೊಳ್ಳುತ್ತದೆ. ದುರಂತವೆಂದರೆ, ಕ್ಯಾನ್ಸರ್‌ನೊಂದಿಗೆ ಸೆಣಸಾಡುತ್ತಾ ತಮ್ಮ ಮುದ್ದಿನ ಮಗನ ಮೊದಲ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದ ನರ್ಗಿಸ್‌ ಆ ಆಸೆ ಕೈಗೂಡುವ ಮುನ್ನವೇ, ಅಂದರೆ ಸಿನಿಮಾ ಬಿಡುಗಡೆಗೊಳ್ಳುವ ನಾಲ್ಕು ದಿನಗಳ ಮುಂಚೆ ಕ್ಯಾನ್ಸರ್‌ಗೆ ಬಲಿಯಾಗಿದ್ದರು. ತಾಯಿಯ ಸಾವನ್ನು ಸುಲಭವಾಗಿ ಅರಗಿಸಿಕೊಳ್ಳಲಾಗದ ಸಂಜಯ್‌  ಆಘಾತಕ್ಕೊಳಗಾದರು.

ಇವೆಲ್ಲವುಗಳ ನಡುವೆಯೇ ಸಿನಿಮಾ ನಟನೆಯ ವೃತ್ತಿಪರ ಪಯಣವನ್ನು ನಿರಂತರವಾಗಿ ಕಾಯ್ದುಕೊಂಡು, ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದು ಸಂಜಯ್‌ ದತ್‌ ವಿಶೇಷ. ಕಳೆದ ಶತಮಾನದ ಕೊನೆಯ ಎರಡು ದಶಕಗಳಲ್ಲಿ ಅವರು  ಅಭಿನಯಿಸಿದ ಸಿನಿಮಾಗಳಲ್ಲಿ ರೌಡಿಸಂ ಬಿಂಬಿಸುವ ಕಥನಗಳೇ ಅವರನ್ನು ಹೆಚ್ಚು ಜನಪ್ರಿಯಗೊಳಿಸಿದವು. ಈ ಅವಧಿಯಲ್ಲಿ ಅವರು ಭಿನ್ನ ಕಥನಗಳನ್ನು ಆಧರಿಸಿದ ಸಿನಿಮಾಗಳಲ್ಲಿ ನಟಿಸಿದರೂ ರೌಡಿಸಂ ಸಿನಿಮಾಗಳಲ್ಲಿಯೇ ಹೆಚ್ಚು  ಗುರುತಿಸಿಕೊಂಡರು. ಅದಕ್ಕನುಗುಣವಾದ ಸಿನಿಮಾ ಕಥನಗಳನ್ನು ಅವರಿಗಾಗಿಯೇ ಹೆಣೆಯಲಾಯಿತು. ‘ಖಳನಾಯಕ್’, ‘ವಾಸ್ತವ್’ ಮತ್ತು ‘ಅಗ್ನಿಪಥ್’ ಸಿನಿಮಾಗಳು ಅವರ ವೃತ್ತಿಬದುಕನ್ನು ನವೀಕರಿಸಿದ ಹೆಗ್ಗಳಿಕೆಗೆ ಪಾತ್ರವಾದವು.

ಅವರು ಮೊದಲ ಬಾರಿ ಬಂಧನಕ್ಕೆ ಒಳಗಾದ ಎರಡು ವರ್ಷಗಳ ಮುನ್ನ, 1991ರಲ್ಲಿ  ತೆರೆಕಂಡ ‘ಸಾಜನ್’ ಸಿನಿಮಾ ರೌಡಿಸಂ ಕಥನಕ್ಕೆ ತದ್ವಿರುದ್ಧವಾದ ಕಥೆಯ ಎಳೆಯನ್ನು ಆಧರಿಸಿತ್ತು. ಅದರಲ್ಲಿ ಸಂಜಯ್ ಕವಿ ಹೃದಯದ ಪಾತ್ರಧಾರಿಯಾಗಿ ಅಮೋಘ ಅಭಿನಯ ನೀಡಿದ್ದರು. ಆ ಸಿನಿಮಾದ ಹಾಡುಗಳೆಲ್ಲವೂ ಸ್ನೇಹ ಮತ್ತು ಪ್ರೇಮದೊಂದಿಗಿನ ತ್ರಿಕೋನ ಕಥನದ ಮಾಧುರ್ಯದ ಧಾಟಿಗೆ ತಕ್ಕಂತೆಯೇ ರಚಿತವಾಗಿದ್ದವು. ತಾನು ಪ್ರೀತಿಸುತ್ತಿರುವ ಹುಡುಗಿಗೆ ತಾನು ಅಂಗವಿಕಲ ಎಂಬ ಸತ್ಯ  ಗೊತ್ತಾದರೆ ಹೇಗೆ ಎಂಬ ತಾಕಲಾಟದಲ್ಲಿಯೇ ತನ್ನ ಕವಿತ್ವವನ್ನು ಮುಚ್ಚಿಟ್ಟುಕೊಳ್ಳುವ ಮತ್ತು ಆ ಮೂಲಕ ತನ್ನ ಹುಡುಗಿಯನ್ನು ಆಪ್ತ ಸ್ನೇಹಿತ ಇಷ್ಟಪಟ್ಟ ಎಂಬ ಕಾರಣಕ್ಕಾಗಿ ಬಿಟ್ಟುಕೊಡಲು ಮುಂದಾಗುವ ಪಾತ್ರಕ್ಕೆ ಸಂಜಯ್ ತಮ್ಮ ಅಭಿನಯ ಸಾಮರ್ಥ್ಯದ ಮೂಲಕ ನ್ಯಾಯ ಒದಗಿಸಿಕೊಟ್ಟಿದ್ದರು.

ಆದರೆ, ಆ ಬಗೆಯ ಪಾತ್ರ ಸಾಧ್ಯತೆಗಳ ವಿಸ್ತರಣೆಯ ಬದಲು ಅವರ ನಟನಾ ಕೌಶಲವು ವಿಕೃತಿಯ ಸಿನಿಮಾ ಕಥನಗಳಿಗಷ್ಟೇ ಸೀಮಿತವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಅಂಥ ಕಥನಗಳನ್ನೇ ಮುನ್ನೆಲೆಗೆ ತಂದು ವಾಣಿಜ್ಯಿಕ ಲಾಭ ಕಂಡುಕೊಳ್ಳುವ ಹವಣಿಕೆ ಬಾಲಿವುಡ್‌ ಅನ್ನು ಆವರಿಸಿದ ಕಾಲಘಟ್ಟದಲ್ಲಿ, ವಿಕೃತಿಗಳನ್ನು ವೈಭವೀಕರಿಸುವ ಕಥನಗಳು ಸಂಜಯ್ ನಟನಾ ಕೌಶಲವನ್ನು ಸೀಮಿತಗೊಳಿಸಿದವು. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ‘ಮುನ್ನಾಭಾಯಿ’ ಸರಣಿ ಚಿತ್ರಕಥನ ಅವರ ವೃತ್ತಿಬದುಕಿನಲ್ಲಿ ವ್ಯಾಪಕ ಯಶಸ್ಸು ಕಂಡುಕೊಳ್ಳಲು ನೆರವಾಯಿತು.

ರೌಡಿಸಂ ವಲಯದಲ್ಲಿ ಗುರುತಿಸಿಕೊಂಡ ವ್ಯಕ್ತಿಯೊಬ್ಬ ಹುಡುಗಿಯ ಪ್ರೀತಿಯನ್ನು ಗಳಿಸಿಕೊಳ್ಳುವ ಸಲುವಾಗಿ ಎಂಬಿಬಿಎಸ್ ಪದವಿಯ ಕನಸನ್ನು ಸಾಕಾರಗೊಳಿಸಿಕೊಳ್ಳುವ ಕಥೆಯನ್ನು ಆಧರಿಸಿದ್ದ ‘ಮುನ್ನಾಭಾಯಿ ಎಂಬಿಬಿಎಸ್’ ಹಲವರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಬಗೆಯ ಸಿನಿಮಾಗಳಲ್ಲೂ ಅಭಿನಯಿಸಬಲ್ಲೆ ಎಂಬ ಭರವಸೆಯನ್ನು ಸಂಜಯ್ ಮೂಡಿಸಿದ್ದರು. ಇದೇ ಧಾಟಿಯ ಮತ್ತೊಂದು ಕಥೆಯೊಂದಿಗೆ ‘ಲಗೇ ರಹೋ ಮುನ್ನಾಭಾಯಿ’ ಸಿನಿಮಾ ಗುರುತಿಸಿಕೊಂಡಿತ್ತು. ಈ ಸಿನಿಮಾದಲ್ಲಿ ಹುಡುಗಿಯ ಪ್ರೀತಿಯನ್ನು ಗಳಿಸಿಕೊಳ್ಳಲು ರೌಡಿಸಂ ವಲಯದಲ್ಲಿ ಗುರುತಿಸಿಕೊಂಡ ವ್ಯಕ್ತಿಯೊಬ್ಬ ದಿಢೀರನೆ ಇತಿಹಾಸದ ಉಪನ್ಯಾಸಕನಾಗಿ, ಗಾಂಧಿವಾದಿಯಾಗಿ ಮಾರ್ಪಡುವ ಕಥೆಯಿತ್ತು. ಈ ಪಾತ್ರವನ್ನೂ ಸಂಜಯ್‌ ಭಿನ್ನವಾಗಿ ನಿರ್ವಹಿಸಿದ್ದರು.

ಸುಳ್ಳು ಹೇಳಿ ಪ್ರೀತಿಯನ್ನು ಬಹುದಿನಗಳವರೆಗೆ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಸತ್ಯವನ್ನು ಗಾಂಧಿಯ ಮೂಲಕ ಮನದಟ್ಟು ಮಾಡಿಕೊಳ್ಳುವ ಪಾತ್ರಧಾರಿಯಾಗಿ ಅವರು ಕಾಣಿಸಿಕೊಂಡಿದ್ದರು. ‘ದೇಶದಾದ್ಯಂತ ಪ್ರತಿಷ್ಠಾಪಿಸಿರುವ ನನ್ನ ಪ್ರತಿಮೆಗಳನ್ನು ಭಗ್ನಗೊಳಿಸಿ. ಇಟ್ಟುಕೊಳ್ಳುವುದಾದರೆ ನನ್ನ ಆದರ್ಶ ತತ್ವಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ’ ಎಂಬ ಗಾಂಧೀಜಿಯ ಸಂದೇಶವನ್ನು ಸಾರಿದ ಪಾತ್ರಧಾರಿಯಾಗಿ ಮೆಚ್ಚುಗೆ ಗಳಿಸಿದ್ದರು. ಆದರೆ ನಿಜಜೀವನದ ಬಂಧನ  ವೃತ್ತಾಂತವು ಈ ಬಗೆಯ ಸಿನಿಮಾದಲ್ಲಿನ ಸದಭಿರುಚಿಯ ಅವರ ಇಮೇಜಿಗೆ ಮಸಿ ಬಳಿದಿತ್ತು. ತೆರೆಯ ಮೇಲಿನ ನಟನೆ ಮತ್ತು ಅದನ್ನು ಗಮನಿಸಿ ಆರಾಧಿಸುವ ಜನರನ್ನು  ಕೇಂದ್ರೀಕರಿಸಿಕೊಂಡು ಬಾಲಿವುಡ್ ಸಿನಿಮಾಗಳಿಗೆ ಬಂಡವಾಳ ಹೂಡುವವರು ಹೆಚ್ಚಿನ ಆರ್ಥಿಕ ಲಾಭವನ್ನೇ ನಿರೀಕ್ಷಿಸುತ್ತಾರೆ. ಭೂಗತ ಜಗತ್ತಿನ ಹಣದಿಂದ ಪ್ರಬಲವಾಗುತ್ತಾ ಬಂದ ಬಾಲಿವುಡ್ ಮತ್ತೆ ಮತ್ತೆ ರೌಡಿಸಂ ಕಥನಗಳಿಗೇ ಹೊರಳಿಕೊಂಡಿದೆ.

ಈ ಹಾದಿಯಲ್ಲಿ ಸಂಜಯ್ ಸೇರಿದಂತೆ ಬಾಲಿವುಡ್ ನಟರು ಭೂಗತ ಜಗತ್ತಿನವರೊಂದಿಗೆ ಸ್ನೇಹ ಸಂಪಾದಿಸಿದ್ದಾರೆ. ಇದೇ ಸಂಜಯ್‌ ವ್ಯಕ್ತಿತ್ವದ ಬೆಳವಣಿಗೆಯ ಹಾದಿಗೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಿತು. ನಟನೊಬ್ಬ ತೆರೆಯ ಮೇಲೆ ಖಳನಾಯಕನಾಗಿ ವಿಜೃಂಭಿಸುವುದು, ಅಂಥ ಕಥನಗಳಿಗೆ ಹಣ ಹೂಡುವ ವಲಯದಲ್ಲಿ ಗುರುತಿಸಿಕೊಂಡ ಭೂಗತ ಜಗತ್ತಿನವರೊಂದಿಗಿನ ಸಲುಗೆಯ ಕಾರಣಕ್ಕಾಗಿಯೇ ಬಂಧನಕ್ಕೆ ಒಳಗಾಗುವುದು, ತದನಂತರ ಬದುಕಿನಲ್ಲೂ  ಖಳನಾಯಕನಾಗಿ ಗುರುತಿಸಿಕೊಳ್ಳುವುದು- ಇವೆಲ್ಲವೂ ಸಂಜಯ್ ನಿಜ ಜೀವನವನ್ನು ಸಿನಿಮೀಯವಾಗಿಸಿದ ಘಟನಾವಳಿಗಳು. ರಿಷಿ ಕಪೂರ್, ಅನುಪಮ್ ಖೇರ್, ಜೂಹಿ ಚಾವ್ಲಾ, ಮಹೇಶ್ ಭಟ್, ಸಾಜಿದ್ ಖಾನ್, ಮಾಧವನ್, ಶಿಲ್ಪಾ ಶೆಟ್ಟಿ ಸೇರಿದಂತೆ ಬಹುತೇಕ ಬಾಲಿವುಡ್ ಕಲಾವಿದರು ಸಂಜಯ್ ಬಿಡುಗಡೆಯನ್ನು ಸ್ವಾಗತಿಸಿದ್ದಾರೆ.

ಜೊತೆಗೇ, ಸೆಲೆಬ್ರಿಟಿ ಎಂಬ ಕಾರಣಕ್ಕೆ ಸನ್ನಡತೆಯ ನೆಪವೊಡ್ಡಿ ಅವಧಿಗೆ ಮುನ್ನವೇ ಬಿಡುಗಡೆಗೊಳಿಸುವ ನ್ಯಾಯದಾನದ ಔಚಿತ್ಯವನ್ನು ಹಲವರು ಪ್ರಶ್ನಿಸಿದ್ದಾರೆ. ಸಿನಿಮಾದಂತಹ ಅತ್ಯದ್ಭುತ ಮಾಧ್ಯಮ, ಅದರ ಮೂಲಕ ಗುರುತಿಸಿಕೊಳ್ಳುವ ನಾಯಕ ನಟರು ಸ್ವಯಂ ಸಂವಿಧಾನ ಮತ್ತು ನೈತಿಕ ಚೌಕಟ್ಟುಗಳನ್ನು ವಿಧಿಸಿಕೊಳ್ಳುವ ಅನಿವಾರ್ಯವನ್ನು ಸಂಜಯ್ ಬಂಧನ ಹಾಗೂ ಬಿಡುಗಡೆಯ ಸುದೀರ್ಘ ವೃತ್ತಾಂತವು ಸ್ಪಷ್ಟವಾಗಿ ಮನಗಾಣಿಸುತ್ತದೆ. ಬಾಲಿವುಡ್ ಸೇರಿದಂತೆ ದೇಶದ ವಿವಿಧ ಪ್ರಾದೇಶಿಕ ಭಾಷೆಗಳ ಸಿನಿಮಾ ರಂಗದ ನಾಯಕ ನಟರು ತಮ್ಮನ್ನು ಅಂಥದ್ದೊಂದು ಆತ್ಮವಿಮರ್ಶೆಗೆ ಒಡ್ಡಿಕೊಳ್ಳುವರೇ? ಆ ಮೂಲಕ ಮುಂದಿನ ಪೀಳಿಗೆ ಸದಭಿರುಚಿಯೊಂದಿಗೆ ಗುರುತಿಸಿಕೊಳ್ಳಲು ನೆರವಾಗುವರೇ? ಈ ನಿಟ್ಟಿನಲ್ಲಿ ಗಂಭೀರ ಚರ್ಚೆಗಳು ಏರ್ಪಡಬೇಕಾದ ಅಗತ್ಯವನ್ನು ಸಂಜಯ್‌ ಪ್ರಕರಣ ಒತ್ತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT