ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ರಕ್ಷಣೆ ಎನ್ನುವುದು ರಿಲೇ ಆಟವಿದ್ದಂತೆ

ವಾರದ ಸಂದರ್ಶನ
Last Updated 12 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಎಂ.ಎಲ್‌. ಮಧುರವೀಣಾ ಅವರು ಸಿಐಡಿಯ ಮಾನವ ಕಳ್ಳಸಾಗಣೆ ನಿಗ್ರಹ ದಳದಲ್ಲಿ (ಎಎಚ್‌ಟಿಯು) ಏಕೈಕ ಮಹಿಳಾ ಎಸ್ಪಿ. ಪೊಲೀಸ್‌ ಇಲಾಖೆಯಲ್ಲಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ವೇಶ್ಯಾಗೃಹ, ಮಾನವ ಕಳ್ಳ ಸಾಗಾಣಿಕೆಯಂಥ ಸ್ಥಳಗಳ ಮೇಲೆ ದಾಳಿ ನಡೆಸಿ ಹಲವಾರು ಸಂತ್ರಸ್ತರನ್ನು ರಕ್ಷಣೆ ಮಾಡಿದ್ದಾರೆ. ಮಾನವ ಹಕ್ಕುಗಳನ್ನು ಪ್ರತಿಪಾದಿಸುತ್ತ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆಗಳನ್ನು ಹತ್ತಿಕ್ಕುವಲ್ಲಿ ಶ್ರಮಿಸುತ್ತಿರುವ ಅವರ ಸಂದರ್ಶನ ಇಲ್ಲಿದೆ:

*ಮಾನವ ಕಳ್ಳಸಾಗಣೆ ಎಂದರೇನು?
ಕಾರ್ಮಿಕರಿಗೆ ಕಾನೂನುಬದ್ಧವಾಗಿ ಬರಬೇಕಿರುವ ಕೂಲಿಯನ್ನು ನೀಡದೇ ಜೀತಕ್ಕೆ ಇಟ್ಟುಕೊಳ್ಳುವುದು, ಅವರನ್ನು ಒಂದೆಡೆ ಕೂಡಿಹಾಕಿ ಸರಿಯಾದ ಊಟ–ವಸತಿ ನೀಡದೇ ದುಡಿಸಿಕೊಳ್ಳುವುದು, ಅವರಿಗೆ ಯಾವುದೇ ರೀತಿಯ ಸ್ವಾತಂತ್ರ್ಯ ನೀಡದೇ ದಿನಪೂರ್ತಿ ಕೆಲಸಕ್ಕೆ ಒಡ್ಡುವುದು ಇವೆಲ್ಲ ಮಾನವ ಕಳ್ಳಸಾಗಣೆ ಎನಿಸುತ್ತವೆ. ಇದರಲ್ಲಿ ಲೈಂಗಿಕ ಶೋಷಣೆ (ವೇಶ್ಯಾವಾಟಿಕೆ), ಬಾಲಕಾರ್ಮಿಕ ಸಮಸ್ಯೆ, ಜೀತ ಪದ್ಧತಿ ಎಲ್ಲವೂ ಸೇರಿಕೊಳ್ಳುತ್ತವೆ.

*ಮಾನವ ಕಳ್ಳಸಾಗಣೆ ದಂಧೆ ನಮ್ಮ ರಾಜ್ಯದಲ್ಲಿ ಯಾವ್ಯಾವ ಭಾಗಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ?
ಇದು ಎಲ್ಲಾ ಊರುಗಳಲ್ಲೂ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇದರ ಕೇಂದ್ರಬಿಂದು ಬೆಂಗಳೂರು. ಉತ್ತರ ಭಾರತದಲ್ಲಿ ಬಡ ಕಾರ್ಮಿಕರ ಸಂಖ್ಯೆ ಹೆಚ್ಚಿರುವ ಕಾರಣ, ಹೆಚ್ಚಿನ ಹಣದ ಆಮಿಷ ಒಡ್ಡಿ ಇಟ್ಟಿಗೆಗೂಡು ಕಾರ್ಖಾನೆ, ಗಾಜಿನ ಕಾರ್ಖಾನೆ, ಬ್ಯಾಗ್‌ ತಯಾರಿಕೆ, ಊದಿನಕಡ್ಡಿ ಕಾರ್ಖಾನೆ ಇತ್ಯಾದಿಗಳಲ್ಲಿ ಜೀತಕ್ಕೆ ಇಟ್ಟುಕೊಳ್ಳಲಾಗುತ್ತಿದೆ. ಹಲವು ಕಡೆ ಗಣಿಗಾರಿಕೆಗಳಲ್ಲೂ ಇವರನ್ನು ಬಳಸಿಕೊಳ್ಳಲಾಗುತ್ತಿದೆ. ಉತ್ತರ ಕರ್ನಾಟಕದ ಜನರೂ ಇದಕ್ಕೆ ಬಲಿಯಾಗುತ್ತಿದ್ದಾರೆ.

*ಇಂಥ ದಂಧೆಯ ಹಿಂದಿರುವ ಕೈ ಯಾರದ್ದು? ಅವರ ಜಾಲ ಯಾವ ರೀತಿ ಕೆಲಸ ಮಾಡುತ್ತದೆ?
ಇದರ ಹಿಂದೆ ದೊಡ್ಡ ಜಾಲವೇ ಇದೆ. ಒಂದು ಜಾಲದ ಸುಳಿವು ಸಿಗುವುದರೊಳಗೆ ಇನ್ನೊಂದು ಜಾಲ ಹುಟ್ಟಿಕೊಳ್ಳುತ್ತದೆ. ಇವರು ಹೆಚ್ಚಾಗಿ ಇಡೀ ಕುಟುಂಬದ ಮಂದಿಯನ್ನು ಜೀತಕ್ಕೆಂದು ಒಟ್ಟಿಗೇ ಕರೆತರುತ್ತಾರೆ. ಆರಂಭದಲ್ಲಿ ಕರೆತರುವಾಗ  ಕುಟುಂಬಕ್ಕೆ ಒಂದಿಷ್ಟು ಮುಂಗಡ ಹಣ ನೀಡಲಾಗುತ್ತದೆ. ಆ ಹಣಕ್ಕೆ ಬಡ್ಡಿ, ಚಕ್ರಬಡ್ಡಿ ಎಂದೆಲ್ಲಾ ಹಾಕುತ್ತ ಆ ಕಾರ್ಮಿಕರು ಸಾಯುವವರೆಗೂ ಮುಂಗಡ ಹಣ ತೀರಿಸದ ಹಾಗೆ ಮಾಡಲಾಗುತ್ತದೆ. ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೆ ಅವರಿಗೆ ಅಮಾನುಷವಾಗಿ ಹೊಡೆದು–ಬಡಿದು ಇರಿಸಿಕೊಳ್ಳಲಾಗುತ್ತದೆ. ಹೀಗೆ ಕರೆತರುವುದರ ಹಿಂದೆ ಬಹಳ ಕೈಗಳು ಕೆಲಸ ಮಾಡುತ್ತವೆ. ಕಾರ್ಖಾನೆಗಳ ಮಾಲೀಕರು, ಏಜೆಂಟರು ಇಲ್ಲಿ ಮುಖ್ಯ ಪಾತ್ರಧಾರಿಗಳಾಗಿದ್ದರೆ ಅವರ ಕೈಕೆಳಗೆ ಹಲವಾರು ಮಂದಿ ಕೆಲಸ ಮಾಡುತ್ತಿರುತ್ತಾರೆ.

*ಹೆಣ್ಣು ಮಕ್ಕಳ ಸಾಗಣೆಯ ಬಗ್ಗೆ ಏನೆನ್ನುತ್ತೀರಿ?
ಇದಂತೂ ಈಗೀಗ ಹೆಚ್ಚಾಗಿ ಬಿಟ್ಟಿದೆ. ಬಡತನದಲ್ಲಿರುವ ಅಸಹಾಯಕ ಹೆಣ್ಣು ಮಕ್ಕಳನ್ನೇ ತಲೆಹಿಡುಕರು ಗುರಿಯಾಗಿಸಿಕೊಳ್ಳುತ್ತಾರೆ ಕುಟುಂಬದಲ್ಲಿನ ಒಡಕು, ಅಪ್ಪ–ಅಮ್ಮನ ಮುರಿದ ದಾಂಪತ್ಯ... ಇಂಥ ಪರಿಸ್ಥಿತಿಯಲ್ಲಿ ಮಕ್ಕಳು ಮಾನಸಿಕ ಹಿಂಸೆ ಅನುಭವಿಸುತ್ತಾರೆ. ಶಾಲೆಗೆ ಹೋಗದೇ ಅಲ್ಲಿ ಇಲ್ಲಿ ಅಡ್ಡಾಡುತ್ತಾರೆ. ಇಂಥವರಿಗಾಗಿ ಹುಡುಕುತ್ತಿರುವ ತಲೆಹಿಡುಕರು  ಅವರಿಗೆ  ಕೆಲಸದ, ಮದುವೆಯ ಆಮಿಷ ಒಡ್ಡುತ್ತಾರೆ. ಇದರ ಜೊತೆಗೆ, ಹೊರರಾಜ್ಯಗಳಿಂದ ಕೆಲಸ ಅರಸಿ ಬರುವ ಮತ್ತು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಕಡಿಮೆ ಕೂಲಿ ಪಡೆಯುವ ಹೆಣ್ಣು ಮಕ್ಕಳಿಗೆ ಹೆಚ್ಚು ಹಣ ದೊರಕಿಸಿಕೊಡುವ ಆಸೆ ತೋರಿಸಲಾಗುತ್ತದೆ. ನಂತರ ವೇಶ್ಯಾವಾಟಿಕೆಗೆ ನೂಕಲಾಗುತ್ತದೆ. ತಾವೇನು ಮಾಡುತ್ತಿದ್ದೇವೆ ಎಂಬ ಅರಿವು ಆಗುವ ಮೊದಲೇ ಚಕ್ರವ್ಯೂಹದಂತಿರುವ ಪಾಪದ ಕೂಪಕ್ಕೆ ಹೋಗಿಬಿಟ್ಟಿರುತ್ತಾರೆ. ಹೊರಕ್ಕೆ ಬರುವುದು ಅಸಾಧ್ಯವಾಗಿಬಿಡುತ್ತದೆ.

*ಅಕ್ರಮ ದಂಧೆಯಲ್ಲಿ ತೊಡಗಿರುವವರ ಮತ್ತು ನಿಮ್ಮ (ಪೊಲೀಸರ) ಕಣ್ಣುಗಳು ಪರಸ್ಪರ ಹಿಂಬಾಲಿಸುತ್ತಲೇ ಇರುತ್ತವೆ.  ರಂಗೋಲಿ ಕೆಳಗೆ ನುಸುಳುವವರು ಯಾರು?
ಮಾನವ ಕಳ್ಳಸಾಗಣೆ, ವೇಶ್ಯಾವಾಟಿಕೆ ದಂಧೆ ನಡೆಸುವವರ ಮೇಲೆ ನಡೆಯುವ ಯಾವುದೋ ಒಂದು ರಕ್ಷಣಾ ಕಾರ್ಯಾಚರಣೆ ವೇಳೆ ದಂಧೆಕೋರರು ನಮ್ಮನ್ನು ಗಮನಿಸಿದರೆ ಸಾಕು. ಸದಾ ನಮ್ಮ ಚಲನವಲನಗಳ ಮೇಲೆ ನಿಗಾ ಇಡುತ್ತಾರೆ. ಕಳ್ಳರಿಗಿಂತ ಪೊಲೀಸರು ಚುರುಕಾಗಿ ಇದ್ದರೆ ಮಾತ್ರ ಮೇಲುಗೈ ಸಾಧಿಸಲು ಸಾಧ್ಯ. ಅವರನ್ನು ಮಣ್ಣು ಮುಕ್ಕಿಸಬಹುದು.

*ಇಲ್ಲಿಯವರೆಗೆ ಎಷ್ಟು ಮಂದಿಗೆ ಮಣ್ಣು ಮುಕ್ಕಿಸಿದ್ದೀರಿ? ಎಷ್ಟು ಮಂದಿ ಸಂತ್ರಸ್ತರನ್ನು ರಕ್ಷಣೆ ಮಾಡಿದ್ದೀರಿ?
ಈ ಆರು ವರ್ಷಗಳಲ್ಲಿ ನಮ್ಮ ಇಲಾಖೆಯಿಂದ 120 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು 437 ಮಂದಿಯನ್ನು ಜೈಲಿಗೆ ಕಳುಹಿಸಲಾಗಿದೆ.  ಜೀತದಾಳುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ, ವೇಶ್ಯಾವಾಟಿಕೆಗೆ ನೂಕಲಾಗಿದ್ದ 250 ಮಹಿಳೆಯರು, 253 ಬಾಲಕರು ಹಾಗೂ 97 ಬಾಲಕಿಯರನ್ನು ರಕ್ಷಿಸಲಾಗಿದೆ.

*ಒಮ್ಮೆ ರಕ್ಷಣೆಗೆ ಒಳಗಾದ ಸಂತ್ರಸ್ತರು ಪುನಃ ತಮ್ಮ ದಂಧೆಗೇ ವಾಪಸಾಗುವ ಆರೋಪವಿದೆ. ಇಂಥವರ ನಿಖರ ಮಾಹಿತಿ ಲಭ್ಯವೇ?
ಪುನಃ ಅದೇ ದಂಧೆಗೆ ಹೋದವರ ಕರಾರುವಾಕ್ಕಾದ  ಅಂಕಿ-ಅಂಶ ಲಭ್ಯವಿಲ್ಲ. ನಾವು ದಾಳಿಗೆ ಹೋದಾಗ ಸಂತ್ರಸ್ತರ ಮುಖವನ್ನು ನೋಡಿದರೆ ಹಿಂದೆ ಅವರನ್ನು ರಕ್ಷಣೆ ಮಾಡಿದ್ದ ನೆನಪು ಆಗುತ್ತದೆ. ಆದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಿರ್ವಹಿಸುವ ವ್ಯವಸ್ಥೆ ಇಲ್ಲ. ಇದು ಆಗಬೇಕಿದೆ. ಪೊಲೀಸರು ಪದೇ ಪದೇ ವರ್ಗವಾಗಿ ಬೇರೆ ಕಡೆಗಳಿಗೆ ಹೋಗುವ ಕಾರಣ, ಪುನಃ ದಂಧೆಗೆ ಹೋಗುವವರ ಬಗ್ಗೆ ಗಮನ ಹರಿಸಲು ಆಗುತ್ತಿಲ್ಲ.

*ಇಂಥ ದಂಧೆಕೋರರನ್ನು ಹತ್ತಿಕ್ಕಲು ಇಷ್ಟೆಲ್ಲಾ ಇಲಾಖೆಗಳು ಇದ್ದರೂ ಅವರದ್ದೇ ಕೈ ಮೇಲಾಗುತ್ತಿದೆ ಎನಿಸುತ್ತದಲ್ಲ?
ನೋಡಿ... ಇದೊಂದು ರೀತಿಯಲ್ಲಿ ರಿಲೇ ಆಟವಿದ್ದಂತೆ. ಈ ಆಟದಲ್ಲಿ ಇರುವ ಎಲ್ಲ ಆಟಗಾರರೂ ವೇಗವಾಗಿ ಓಡಿದರೆ ಮಾತ್ರ ಗುರಿ ಮುಟ್ಟಿ ಗೆಲುವು ಸಾಧಿಸಲು ಸಾಧ್ಯ. ಇಲ್ಲೂ ಹಾಗೆ. ನಮ್ಮ ವ್ಯಾಪ್ತಿಯ ಕೆಲಸ ಎಂದರೆ ಸಂತ್ರಸ್ತರನ್ನು ರಕ್ಷಣೆ ಮಾಡಿ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಗೆ ಕೊಡುವುದು. ಅವರು ತಮ್ಮ ಕೆಲಸ ನಿರ್ವಹಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು. ಹೀಗೆ ಎಲ್ಲ ಇಲಾಖೆಯವರೂ ರಿಲೇ ಆಟಗಾರರ ರೀತಿಯಲ್ಲಿ ತಮ್ಮ ಜವಾಬ್ದಾರಿ ಅರಿತು  ವೇಗವಾಗಿ ಕೆಲಸ ಮುಗಿಸಿದರೆ ಖಂಡಿತವಾಗಿಯೂ ಇಂಥ ಅನಿಷ್ಟ ಪದ್ಧತಿಯನ್ನು ತೊಡೆದುಹಾಕಲು ಸಾಧ್ಯವಿದೆ.

*ದಂಧೆಕೋರರ ಬಗ್ಗೆ ಕಾನೂನು ಏನು ಹೇಳುತ್ತದೆ?
ಜೀತಪದ್ಧತಿ ನಿರ್ಮೂಲನಾ ಕಾಯ್ದೆಗೆ 2013ರಲ್ಲಿ ತಿದ್ದುಪಡಿ ತರಲಾಗಿದ್ದು  ಇಂಥ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಜೀವಾವಧಿವರೆಗೂ ಶಿಕ್ಷೆ ವಿಧಿಸುವ ಅವಕಾಶ ಇದೆ.

*ನಿಮ್ಮ ವಿಷಯಕ್ಕೆ ಬರುವುದಾದರೆ, ವೇಶ್ಯಾಗೃಹಗಳಂಥ ಸೂಕ್ಷ್ಮ ಸ್ಥಳಗಳ ಮೇಲೆ ದಾಳಿ ನಡೆಸುವಾಗ ಮಧ್ಯರಾತ್ರಿಯಾದರೂ ಹೋಗಲೇಬೇಕು. ಮಹಿಳೆಯಾಗಿ ನಿಮಗೆ ಭಯ ಎನಿಸುವುದಿಲ್ಲವೆ?
ಹಾವು ಕಚ್ಚಿದಾಗ ಅದು ವಿಷದ ಹಾವೋ ಅಲ್ಲವೋ ಎಂದು ತಿಳಿಯುವ ಮೊದಲೇ ಹೃದಯಾಘಾತವಾಗಿ ಸಾಯುವವರಿದ್ದಾರೆ. ಇಂತಹ ಉತ್ತರ ಕುಮಾರರು ಎಲ್ಲಾ ಕಡೆ ಇದ್ದಾರೆ ಬಿಡಿ. ಅಂಥ ಉತ್ತರ ಕುಮಾರ ಆಗಬಾರದು ಎಂದರೆ ಧೈರ್ಯದಿಂದ ಮುನ್ನುಗ್ಗಬೇಕು. ರಕ್ಷಣಾ ಕಾರ್ಯಾಚರಣೆಗೆ ಹೋಗುವಾಗ ನಾನು ಹೆಣ್ಣು, ನಾನು ಗಂಡು ಎನ್ನುವ ಪ್ರಶ್ನೆ ಬರುವುದಿಲ್ಲ. ಅಲ್ಲಿರುವ ಗುರಿ ಸಂತ್ರಸ್ತರನ್ನು ರಕ್ಷಣೆ ಮಾಡುವುದು, ಅಪರಾಧಿಗಳನ್ನು ಮಟ್ಟ ಹಾಕುವುದು ಅಷ್ಟೇ. ನಾನು ಕೆಲಸವನ್ನು ಇಷ್ಟಪಟ್ಟು ಮಾಡುತ್ತೇನೆ. ದಾಳಿ ನಡೆಸುವುದರಲ್ಲಿ ಸಾಕಷ್ಟು ಪಳಗಿದ್ದೇನೆ. ಕೆಲವು ಪುರುಷರಿಗಿಂತಲೂ ಹೆಚ್ಚಿನ ಕೆಲಸವನ್ನು ನಿರ್ಭೀತಿಯಿಂದ ಮಾಡುತ್ತಿರುವ ಹೆಮ್ಮೆ ನನಗಿದೆ.

*ದಾಳಿಗೆ ಹೋಗುವ ಮುನ್ನ ಸಿದ್ಧತೆ ಹೇಗೆ?
ಅಬ್ರಹಾಂ ಲಿಂಕನ್ ಹೇಳಿದ್ದಾರೆ– ‘ಐದು ನಿಮಿಷಗಳಲ್ಲಿ ಮರ ಕಡಿಯುವುದು ನಿನ್ನ ಗುರಿಯಾಗಿದ್ದರೆ ಅಷ್ಟೂ  ನಿಮಿಷಗಳನ್ನು ಮರ ಕಡಿಯಲು ಮೀಸಲು ಇಡಬೇಡ. ಬದಲಿಗೆ ಮೊದಲ ಮೂರು ನಿಮಿಷಗಳಲ್ಲಿ ಗರಗಸವನ್ನು ಹರಿತ ಮಾಡು, ಉಳಿದ ಎರಡು ನಿಮಿಷಗಳಲ್ಲೇ ಮರ ಕಡಿಯಬಹುದು’ ಎಂದು. ಇಲ್ಲೂ ಹಾಗೆ. ಪೂರ್ವತಯಾರಿ ಮುಖ್ಯವಾಗುತ್ತದೆ. ಮೊದಲು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆಯುತ್ತೇನೆ. ನನ್ನ ಕಿರಿಯ ಸಹೋದ್ಯೋಗಿಗಳೊಂದಿಗೆ ಪ್ರತಿಯೊಂದು ಅಂಶವನ್ನೂ ಕೂಲಂಕಷವಾಗಿ ಚರ್ಚಿಸುತ್ತೇನೆ. ಪ್ರತಿ ಅಧಿಕಾರಿ/ಸಿಬ್ಬಂದಿಗೂ ರಕ್ಷಣಾ ಕಾರ್ಯದಲ್ಲಿ ಅವರವರದೇ ಆದ ಪಾತ್ರವನ್ನು ನೀಡುತ್ತೇನೆ. ಅದನ್ನವರು ಸಮರ್ಪಕವಾಗಿ ನಿರ್ವಹಿಸಿದರೆ ಸಾಕು ಯಶಸ್ಸೇ. ನಮ್ಮ ಇಲಾಖೆಯಲ್ಲಿ ಹಲವು ಗೋಪ್ಯತೆ ಕಾಪಾಡಬೇಕಿರುವ ಕಾರಣ, ಹೆಚ್ಚಿನ ಮಾಹಿತಿಗಳನ್ನು ನಾನು ನೀಡುವುದು ಅಸಾಧ್ಯ.

*ನಿಮ್ಮ ಕೆಲಸಕ್ಕೂ ಅಪರಾಧಿಗಳ ಬೆದರಿಕೆಗೂ ನಂಟು ಇದ್ದದ್ದೇ ಅಲ್ಲವೆ?
ಬೆದರಿಕೆಗಳಿಗೆ ನನ್ನ ನಂಟು ಬೆಳೆಸಲು ಸಾಧ್ಯವಾಗಲಿಲ್ಲ ಬಿಡಿ. ಒಮ್ಮೆ ಹೆದರಿದರೆ ಮುಂದೆ ಅದೇ ಅಭ್ಯಾಸವಾಗಿಬಿಡುವ ಅಪಾಯವಿದೆ. ಸತ್ಯಾಂಶಗಳನ್ನು ಆಧರಿಸಿ ಕೆಲಸ ಮಾಡಿದರೆ ಯಾವುದೇ ಬೆದರಿಕೆಗೆ ಸೊಪ್ಪು ಹಾಕುವ ಅವಶ್ಯಕತೆ ಬರುವುದಿಲ್ಲ. ಏನೋ ಚರ್ಚೆ ಮಾಡುವ ನೆಪದಲ್ಲಿ ಬಂದು ಪರೋಕ್ಷವಾಗಿ ಮಾತಿನಲ್ಲಿಯೇ ಹೆದರಿಕೆ ಹುಟ್ಟಿಸಲು ಪ್ರಯತ್ನಿಸುವವರೂ ಇದ್ದಾರೆ. ಇಂಥದ್ದಕ್ಕೆಲ್ಲ ಗಮನ ಕೊಡಬಾರದು ಅಷ್ಟೇ.

*ನೀವು ದಾಳಿ ನಡೆಸುವ ಸಂದರ್ಭದಲ್ಲಿ ಆರೋಪಿಗಳು ಅಥವಾ ಸಂತ್ರಸ್ತರು ಜೀವದ ಹಂಗು ತೊರೆದು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರಲ್ಲ. ಆ ಅನುಭವ ಹೇಗಿದೆ?
ಅಬ್ಬಾ! ಅದೊಂದು ರೀತಿಯಲ್ಲಿ ಭಯ ಹುಟ್ಟಿಸುವಂಥದ್ದು. ಎಷ್ಟೋ ಮಂದಿ ನಮ್ಮಿಂದ ತಪ್ಪಿಸಿಕೊಳ್ಳಲು 3–4 ಮಹಡಿಗಳ ಮೇಲಿನಿಂದ ಜಿಗಿಯುವುದೂ ಇದೆ. ಎರಡು ತಿಂಗಳ ಹಿಂದೆ ಬೆಂಗಳೂರಿನ ಬಡಾವಣೆಯೊಂದರಲ್ಲಿ ದಾಳಿ ಕೈಗೊಂಡಾಗ ಹೆಣ್ಣು ಮಗಳೊಬ್ಬಳು ತಪ್ಪಿಸಿಕೊಳ್ಳಲು ಹೋಗಿ ಮಹಡಿ ಮೇಲಿನಿಂದ ಜಿಗಿದು ಬಿಟ್ಟಳು. ಕೈ ನರ ತುಂಡಾಯಿತು. ಬಾಲ್ಯದಲ್ಲಿ ಕಲಿತ ಪ್ರಥಮ ಚಿಕಿತ್ಸೆ ನೆನಪಿಸಿಕೊಂಡ ನಾನು ರಕ್ತಸ್ರಾವ ಆಗಬಾರದೆಂದು ಕೈಯನ್ನು ಸ್ವಲ್ಪ ಮೇಲಕ್ಕೆ ಎತ್ತಿ ಹಿಡಿಯುವಂತೆ ಹೇಳಿ, ಕರವಸ್ತ್ರದಿಂದ ಗಾಯದ ಕೆಳಗೆ ಕಟ್ಟಿ ಹೆಚ್ಚಿನ ರಕ್ತಸ್ರಾವವಾಗದಂತೆ ನೋಡಿಕೊಂಡೆ. ಎಷ್ಟೋ ಸಮಯದಲ್ಲಿ ನಾವು ಓಡಬೇಡಿ ಎಂದರೂ ಅವರು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿರುವುದಿಲ್ಲ. ಹೀಗೇನಾದರೂ ಆದಲ್ಲಿ ಕೂಡಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುತ್ತೇವೆ. ನಂತರ ಕಾನೂನಿನಂತೆ ಕ್ರಮ ತೆಗೆದುಕೊಳ್ಳುತ್ತೇವೆ.

*ಇಷ್ಟು ವರ್ಷಗಳ ಅನುಭವದಲ್ಲಿ ತುಂಬಾ ರಿಸ್ಕ್ ಕಾರ್ಯಾಚರಣೆ ಎನಿಸಿದ್ದು ಯಾವುದು?
ಹಾಗೆ ನೋಡಿದರೆ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ರಿಸ್ಕ್‌ ಕೆಲಸವೇ. ದೂರದ ಗೊತ್ತಿಲ್ಲದ ಊರಿಗೆ ಹೋಗಿ ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಮಹಿಳೆಯರನ್ನು ಅಥವಾ ಜೀತದಾಳುಗಳನ್ನು ರಕ್ಷಣೆ ಮಾಡುವುದು ಸುಲಭದ ಕೆಲಸ ಅಲ್ಲ. ಈ ರೀತಿ ದಾಳಿ ಮಾಡಲು ಹೋದಾಗ ನಾವು ಸಮವಸ್ತ್ರದಲ್ಲಿ ಇರುವುದಿಲ್ಲ. ಆದ್ದರಿಂದ ಸ್ಥಳೀಯರಿಗೆ ಹಾಗೂ ಸಂತ್ರಸ್ತರಿಗೆ ಮೊದಲು ನಮ್ಮ ಮೇಲೆ ನಂಬಿಕೆ ಬರುವ ಹಾಗೆ ಮಾಡಬೇಕಾಗುತ್ತದೆ. ನಾವೇ ಪೊಲೀಸ್ ಅಧಿಕಾರಿಗಳು ಎಂದು ಅವರಿಗೆ ಮನದಟ್ಟು ಮಾಡುವುದು ಒಂದು ರೀತಿಯಲ್ಲಿ ಚಾಲೆಂಜಿಂಗ್. ಕೆಲವೊಂದು ಸೂಕ್ಷ್ಮ ಸ್ಥಳಗಳಿಗೆ ತೆರಳುವ ತನಕ ಒಂದು ರೀತಿ ಆತಂಕ ಆಗುತ್ತದೆಯೇ ವಿನಾ ಸ್ಥಳಕ್ಕೆ ಹೋದ ಮೇಲೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವುದು ತಿಳಿದುಬಿಡುತ್ತದೆ.

*ನಿಮ್ಮದು 24/7 ಕೆಲಸ. ವೈಯಕ್ತಿಕ ಕೆಲಸಗಳಿಗೆ ಹೇಗೆ ಸಮಯ ಹೊಂದಿಸಿಕೊಳ್ಳುತ್ತೀರಿ?
ಯುದ್ಧಭೂಮಿಯಲ್ಲಿ ಸೆಣಸುವ ಯೋಧರು ಪ್ರತಿದಿನ ಕರ್ತವ್ಯ ಮುಗಿದ ನಂತರ ಮನೆಗೆ ಹೋಗುವುದಿಲ್ಲವಲ್ಲ! ಅವರಿಗೆ ಹೋಲಿಸಿದರೆ ನಮ್ಮ ಕಷ್ಟ ಏನೇನೂ ಅಲ್ಲ. ಅವರೇ ನನಗೆ ಪ್ರೇರಣೆ. ಕೆಲಸದ ಒತ್ತಡದ ನಡುವೆಯೂ ಸಮಯ ಹೊಂದಿಸಿಕೊಳ್ಳುತ್ತೇನೆ.  ರಂಗಭೂಮಿಗೂ ನನಗೂ ಮೊದಲಿನಿಂದಲೂ ನಂಟು. ಆದರೆ ಸರ್ಕಾರಿ ನೌಕರರು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂಬ  ನಿಯಮ ಇರುವ ಕಾರಣ ಅದು ಸಾಧ್ಯವಾಗುತ್ತಿಲ್ಲ. ಆದರೆ ಸಮಯ ಸಿಕ್ಕಾಗಲೆಲ್ಲ ನಾಟಕ ನೋಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT