ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಥ ಗೀತ ನಾಟಕದ ಆಗಮನ

ರಂಗಭೂಮಿ
Last Updated 14 ಜನವರಿ 2016, 19:30 IST
ಅಕ್ಷರ ಗಾತ್ರ

ರಂಗವಿನ್ಯಾಸವನ್ನು ವಿಶೇಷವಾಗಿ ರೂಪಿಸುವಲ್ಲಿ ನಿರ್ದೇಶಕ ಸುರೇಶ ಆನಗಳ್ಳಿ ಎತ್ತಿದಕೈ. ಅವರ ನಿರ್ದೇಶನದ ನಾಟಕ ಎಂದರೆ ವಿನ್ಯಾಸದಲ್ಲಿ ಹೊಸತನ ಇದ್ದೇ ಇರುತ್ತದೆ. ಅಂತಹದೊಂದು ನಿರೀಕ್ಷೆಯಲ್ಲಿ ಪ್ರೇಕ್ಷಕರು ನಾಟಕಕ್ಕೆ ಆಗಮಿಸುತ್ತಾರೆ. ಆದರೆ ಈ ಬಾರಿ ಆನಗಳ್ಳಿಯವರು ಸಂಗೀತದಲ್ಲೂ ಮೈಲುಗೈ ಸಾಧಿಸಿದ್ದಾರೆ. ‘ಆಗಮನ’ ಎಂಬ ಅವರ ಈ ಹೊಸ ನಾಟಕ ನೋಡುಗರನ್ನು ಸಂಗೀತಮಯ ಸಂಭಾಷಣೆಯಲ್ಲಿ ತೇಲಾಡಿಸಿತು. ಎಂದಿನಂತೆ ವಿನ್ಯಾಸವೂ ಅಪರೂಪದ್ದಾಗಿತ್ತು.

ಫ್ರೀಡ್ರಿಶ್ ಡ್ಯುರನ್‌ಮಟ್ ಎಂಬ ಸ್ವಿಸ್ ನಾಟಕಕಾರನ ಪ್ರೇರಣೆಯಿಂದ ‘ಆಗಮನ’ ಎಂಬ ಈ ಹೊಸ ನಾಟಕವನ್ನು ಅವರು ರಚಿಸಿ, ರಾಗ ಸಂಯೋಜಿಸಿ, ನಿರ್ದೇಶಿಸಿದ್ದಾರೆ. ಅವರದೇ ‘ಅನೇಕ’ ರಂಗತಂಡ ಕಲಾಗ್ರಾಮದಲ್ಲಿ ಈ ನಾಟಕ ಪ್ರಯೋಗಿಸಿತು.

‘ಆಗಮನ’ ಎಂದರೆ ಇಲ್ಲಿ ಹಣದ ಆಗಮನ. ಪ್ರೀತಿಸಿ ವಂಚಿಸಿದ ರಾಮಚಂದ್ರನ ವಿರುದ್ಧ ಸೇಡು ತೀರಿಸಿಕೊಳ್ಳಲು ಜಾನಕಿ ಈಗ ಜಾನಕಿ ಜಿಂಗಾನಿಯಾ ಆಗಿ ಭಾರಿ ಹಣದ ಪೆಟ್ಟಿಗೆಗಳೊಂದಿಗೆ ತನ್ನೂರಿಗೆ ಆಗಮಿಸುತ್ತಾಳೆ. ಊರಿನ ಗಣ್ಯರು ಅವಳಿಗೆ ರತ್ನಗಂಬಳಿಯ ಸ್ವಾಗತ ನೀಡುತ್ತಾರೆ. ಅವಳೀಗ ಪ್ರತಿಷ್ಠಿತ ವ್ಯಕ್ತಿ. ನಾಲ್ಕಾರು ಮದುವೆ ಮಾಡಿಕೊಂಡಿದ್ದಾಳೆ. ಕೋಟೆಗಟ್ಟಲೆ ಹಣ ಸಂಪಾದಿಸಿದ್ದಾಳೆ.

ನ್ಯಾಯಾಧೀಶರನ್ನು ಖರೀದಿಸಿ ಅವರನ್ನು ನಪುಂಸಕರಾಗಿಸಿ ತನ್ನ ತೊತ್ತುಗಳನ್ನಾಗಿ ಮಾಡಿಕೊಂಡಿದ್ದಾಳೆ! ಹಾಗೆ ನೋಡಿದರೆ ಜಾನಕಿಯನ್ನು ತೊರೆಯಲು ರಾಮನಿಗೆ ಬದುಕಿನ ಭದ್ರತೆ ಎಂಬ ಚಿಕ್ಕದೊಂದು ಕಾರಣವಿತ್ತು. ನಂತರ ಅವನು ಉಮಾಳನ್ನು ವರಿಸಿದ್ದಾನೆ.

ಊರಿನ ಚೇರ್‍ಮನ್, ಪೊಲೀಸ್ ಅಧಿಕಾರಿಗಳು, ಅರ್ಚಕ, ಮೇಷ್ಟ್ರು, ಡಾಕ್ಟರು ಜತೆಗೆ ರಾಮ-ಉಮಾ ಎಲ್ಲರಿಗೂ ಈಗ ಜಾನಕಿ ಜಿಂಗಾನಿಯಾ ಪ್ರತಿಷ್ಠೆಯ ಸಂಕೇತ. ತನ್ನ ಮೇಲೆ ಊರವರು ಇಟ್ಟ ಅಭಿಮಾನಕ್ಕೆ ಪ್ರತಿಯಾಗಿ ಹಣದ ಹೊಳೆ ಹರಿಸಲು ಅವಳು ಸಿದ್ಧ. ಇಂತಹ ಹಣ ನಮಗೆ ಬೇಡ ಎನ್ನುತ್ತಲೇ ಆ ಹಣಕ್ಕೆ ದಾಸರಾಗುವ ಆಷಾಡಭೂತಿ ಮನಸ್ಸುಗಳು ಇಲ್ಲಿ ಅನಾವರಣಗೊಂಡಿವೆ.

ವಂಚಿಸಿದವನ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ವಿಲಕ್ಷಣ ಪ್ರೇಮದ ಕತೆಯಂತೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಹಣ ಹೇಗೆ ಮನುಷ್ಯ ಸಂಬಂಧವನ್ನು ಶಿಥಿಲಗೊಳಿಸುತ್ತದೆ ಎಂಬ ವಿಷಾದ ಆಳದಲ್ಲಿ ಮಡುಗಟ್ಟುತ್ತದೆ. ಅಂತಿಮವಾಗಿ ಹಣವನ್ನು ಪ್ರೇಕ್ಷಕರತ್ತ ತೂರುವುದು ಅದರ ನಿರರ್ಥಕತೆಯನ್ನೂ ಹೇಳುತ್ತದೆ.

ಸಲೀಸಾದ ಕತೆಯ ಓಟವಿಲ್ಲದ ಇಂತಹದೊಂದು ಸಂಕೀರ್ಣ ವಸ್ತುವಿನ ನಿರೂಪಣೆಗೆ ನಿರ್ದೇಶಕರು ವಾಸ್ತವ (ರಿಯಲಿಸ್ಟಿಕ್) ಶೈಲಿಯ ನಿರೂಪಣೆ ಕೈಬಿಟ್ಟು; ಪಾತ್ರಗಳ ಆಂತರಿಕ ಅನುಭವವನ್ನು ಸಾಂಕೇತಿಕವಾದ ಶೈಲಿಪ್ರಧಾನ ಅಭಿವ್ಯಕ್ತಿಯ ಮೂಲಕ ನಿರೂಪಿಸುವ ಎಕ್ಸ್‌ಪ್ರೆಶನಿಸಂ ಮಾರ್ಗ ಅನುಸರಿಸಿದ್ದಾರೆ. ಇದು ಗೀತ ನಾಟಕಕ್ಕೆ ಸೂಕ್ತವಾಗಿ ಹೊಂದಿಕೊಂಡಿದೆ. ಬೋರಾಗದಂತೆ ನಾಟಕ ನೋಡಿಸಿಕೊಳ್ಳುತ್ತದೆ.

ಅಲ್ಲೊಂದು ಇಲ್ಲೊಂದು ಮಾತಿದೆ. ಉಳಿದಂತೆ ಸಂಭಾಷಣೆಯ ಬದಲಿಗೆ ಹಾಡಿವೆ. ಹಾಡು ಮಧುರವಾಗಿವೆ, ಕೇಳಲು ಸೊಗಸಾಗಿವೆ, ಆದರೆ ನೋಡುಗನ ಮೈ ಮರೆಸುವುದಿಲ್ಲ. ಹಾಗೆ ಮೈ ಮರೆಯಬಾರದು ಎಂಬುದು ನಿರ್ದೇಶಕರ ಉದ್ದೇಶ. ಹಣದ ಮುಂದೆ ಮನುಷ್ಯ ಸಂಬಂಧ ನಿರರ್ಥಕವಾಗುವುದನ್ನು ಅನುಭವವಾಗಿಸುತ್ತ ಸಾಗುತ್ತವೆ. ಸಂಭಾಷಣೆಯಲ್ಲಿ ಅಸಂಗತತೆ(ಅಬ್ಸರ್ಡ್) ಇದೆ. ಸಂಕೀರ್ಣವಾಗಿದೆ, ಧ್ವನಿಪೂರ್ಣವಾಗಿದೆ.

ಸುಸಂಗತ ಎಳೆಯಲ್ಲಿ ಸಾಗುವ ಕತೆಯ ಧಾರೆ ಇಲ್ಲದಿರುವುದರಿಂದ ಒಟ್ಟಾರೆ ಕತೆಯಲ್ಲಿ ಸ್ವಲ್ಪ ಗೊಂದಲ ಉಂಟಾದರೂ- ಉತ್ತಮವಾದ ಸಂಗೀತ ಮತ್ತು ವಿನ್ಯಾಸ ಅದನ್ನೆಲ್ಲ ಮರೆಸಿಬಿಡುತ್ತದೆ. ಶೈಲೀಕೃತ ಅಭಿನಯ, ಸಂಗೀತ, ವಿನ್ಯಾಸ ಎಲ್ಲವೂ ಒಂದಕ್ಕೊಂದು ಮಿಗಿಲಾಗಿದ್ದು ಒಂದು ಒಳ್ಳೆಯ ನಾಟಕ ನೋಡಿದ ರಸಾನುಭವ ಉಂಟಾಗುತ್ತದೆ.

ಗಾಲಿಗಳ ಮೇಲೆ ಉರುಳುವ ಹಣದ ಪೆಟ್ಟಿಗೆಗಳು ರಂಗಸಜ್ಜಿಕೆಯ ಪರಿಕರಗಳಾಗಿ ಇಡಿಯಾಗಿ ಆವರಿಸುತ್ತವೆ. ಅವೂ ಇಲ್ಲಿ ಪಾತ್ರಗಳೇ. ಕಪ್ಪು ಕನ್ನಡಕ ಧರಿಸಿರುವ ನ್ಯಾಯಾಧೀಶರು, ಹಳದಿ ಶೂಗಳು ಸಂಕೇತಗಳಾಗಿವೆ. ಯುವ ಜೋಡಿಗಳು ರಾಮ ಜಾನಕಿಯರ ಪ್ರತಿರೂಪವಾಗಿ ನಟಿಸಿರುವುದು ಧ್ವನಿಪೂರ್ಣವಾಗಿದೆ. ನಾಟಕದ ಓಟಕ್ಕೆ ಭಂಗ ಬಾರದ ಹಾಗೆ ದೃಶ್ಯ ಬದಲಾವಣೆಯನ್ನು ಪ್ರೇಕ್ಷಕರ ಸಮ್ಮುಖದಲ್ಲೆ ಮಾಡಲಾಗಿದೆ. ಪ್ರೇಕ್ಷಕರು ಭ್ರಮೆಯಲ್ಲಿ ಮೈಮರೆಯದಂತೆ ಮಾಡಲು ಈ ತಂತ್ರ ಸಹಕಾರಿಯಾಗಿದೆ.

ಇದೊಂದು ಗೀತ ನಾಟಕ (ಅಪೇರಾ). ಇಡೀ ನಾಟಕ ಹಾಡುಗಳ ಜಾಡಿನಲ್ಲೇ ಸಾಗುತ್ತದೆ. ಹಳೇ ಮೈಸೂರು ಭಾಗದ ಪೌರಾಣಿಕ ನಾಟಕಗಳಲ್ಲಿ ಒಂದು ಮಾತಿಗೆ ಎರಡು ಹಾಡುಗಳಿರುತ್ತವೆ. ವೃತ್ತಿ ರಂಗಭೂಮಿಯ ಪೂರ್ವಾರ್ಧದಲ್ಲಿ ಸಂಗೀತವೇ ಪ್ರಧಾನವಾಗಿದ್ದರೂ- ಅವು ಗೀತ ನಾಟಕಗಳಲ್ಲ. ಗೀತ ನಾಟಕಗಳನ್ನು ಹೆಚ್ಚು ರಚಿಸಿದವರು ಪುತಿನ. ಕಾರಂತರ ನಿರ್ದೇಶನದ ಪುತಿನರ ’ಗೋಕುಲ ನಿರ್ಗಮನ’ ಬಾಲಕ ಕೃಷ್ಣನ ಲೀಲೆಗಳನ್ನು ತಮಾಷೆಯಾಗಿ ಬಣ್ಣಿಸುತ್ತದೆ. ಆನಗಳ್ಳಿಯವರ ಈ ಗೀತ ನಾಟಕ ಮನುಷ್ಯ ಸಂಬಂಧದ ವೈರುಧ್ಯಗಳನ್ನ, ಅಸಂಗತತೆಯನ್ನು ಮೈಮರೆಯದ ಹಾಗೆ ನೋಡಿಸಿಕೊಳ್ಳುವ ಅನುಭವವಾಗಿಸುತ್ತದೆ.

ಹಾಡುಗಳ ರಚನೆ, ರಾಗ ಸಂಯೋಜನೆ ಎಲ್ಲವೂ ನಿರ್ದೇಶಕ ಸುರೇಶ್ ಆನಗಳ್ಳಿಯವರದು. ಹಿನ್ನೆಲೆ ಸಂಗೀತ ಚಂದನಾ ಹಾಗೂ ವಿಕ್ರಮ್ ವಶಿಷ್ಠ ಅವರದು. ಹಾಡಿದವರು ಅನನ್ಯಾ ಕವತ್ತಾರ್ ಜತೆಗೆ ಪಾತ್ರಧಾರಿಗಳೂ ಸಹ. ಹಾಡುಗಾರರನ್ನು ರಂಗಸ್ಥಳದ ಮಧ್ಯಭಾಗದಲ್ಲಿ ಪುಟ್ಟದೊಂದು ಪರದೆಯ ಮರೆಯಲ್ಲಿ ಕೂಡಿಸಿದ್ದು ಗೀತ ನಾಟಕಕ್ಕೆ ಒಪ್ಪಿಗೆಯಾಗಿತ್ತು. ಧ್ವನಿ ನಿಯಂತ್ರಣ ಕಿರಣ್ ಪ್ರಭು. ಪರಿಣಾಮಕಾರಿಯಾದ ಬೆಳಕು ಬೀರಿದವರು ಮಹದೇವಸ್ವಾಮಿ.

ಜಾನಕಿ ಜಿಂಗಾನಿಯಾ ಆಗಿ ಅರ್ಚನಾರಾವ್ ಸಮರ್ಥವಾಗಿ ಅಭಿನಯಿಸಿದರು. ಶೈಲೀಕೃತ ಅಭಿನಯದಲ್ಲಿ ಧ್ವನಿ ಹಾಗೂ ಭಾವನೆಗಳ ನಿಯಂತ್ರಣ ಇತ್ತು. ವಾಸ್ತವದಂತೆ ಗೋಚರವಾಗುವ ಶೈಲೀಕೃತ ನಟನೆಯನ್ನು ಅಧ್ಯಕ್ಷನ ಪಾತ್ರದಲ್ಲಿ ಐ.ಎಂ. ದುಂಡಸಿ ಚೆನ್ನಾಗಿ ಕಟ್ಟಿಕೊಟ್ಟರು.

ಪೊಲೀಸ್ ಇನ್ಸ್‌ಪೆಕ್ಟರ್- ಕಾರ್ತಿಕ್, ಅರ್ಚಕ-ಲಿಖಿತ್, ಮೇಷ್ಟ್ರು-ಭರತ್ ಭಾರದ್ವಾಜ್, ವೈದ್ಯರು- ವಿನಯ್ ರಾಜಗೌರಿ, ನಪುಂಸಕ ಸೇವಕರಾಗಿ ಕಿರಣ್ ಮಂಡ್ಯ ಮತ್ತು ಅಚ್ಯತ, ಅಧ್ಯಕ್ಷನ ಹೆಂಡತಿ- ನೇತ್ರಾವತಿ, ನ್ಯಾಯಾಧೀಶರಾಗಿ ಜಗದೀಶ ಗೌಡ ಹಾಗೂ ವಿನೋದ ಅಥಣಿ, ಉಮಾದೇವಿಯಾಗಿ ಉಮಾ ಹಾಗೂ ಸಿತಾರ, ಮಗಳ ಪಾತ್ರದಲ್ಲಿ ರತ್ನ, ರಾಮು- ಜಾನಕಿ ಪ್ರತಿರೂಪದ ಜೋಡಿಗಳಾಗಿ ಆದಿತ್ಯ ಭಾರದ್ವಾಜ್ ಹಾಗೂ ಬೇಬಿ ಶ್ಯಾಮಿಲಿ ಎಲ್ಲರೂ ತಮ್ಮದೇ ಆದ ಶೈಲಿ ರೂಢಿಸಿಕೊಂಡು ಉತ್ತಮವಾಗಿ ನಟಿಸಿದರು.

ಕನ್ನಡಕ್ಕೆ ಈ ನಾಟಕ ಹೊಸತಲ್ಲ. ಜಯತೀರ್ಥ ಜೋಶಿ ನೀನಾಸಮ್‌ಗೆ ’ಕನಕಾಗಮನ’ ಎಂಬ ಈ ನಾಟಕ ನಿರ್ದೇಶಿಸಿದ್ದರು. ಸುರೇಶ್ ಆನಗಳ್ಳಿಯವರೇ ’ಶ್ರೀಮತಿ ಹೆಗಡೆ ಭೇಟಿ ಪ್ರಕರಣ’ ಎಂಬ ಶೀರ್ಷಿಕೆಯಡಿ ಪ್ರದರ್ಶಿಸಿದ್ದರು. ಆದರೆ ಈ ಸಲ ಸಂಪೂರ್ಣವಾಗಿ ಗೀತನಾಟಕವಾಗಿ ಪುನರ್‌ರಚಿಸಿ, ಹಣದ ಪೆಟ್ಟಿಗೆಗಳ ವಿನ್ಯಾಸ ರೂಪಿಸಿ ಮರುಹುಟ್ಟು ನೀಡಿದ್ದಾರೆ. ಕನ್ನಡ ಗೀತ ನಾಟಕ ಪ್ರಕಾರಕ್ಕೆ ಉತ್ತಮವಾದ ಕೊಡುಗೆಯನ್ನೂ ಸುರೇಶ ಆನಗಳ್ಳಿ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT