ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸೇವೆ ಸರ್ವಾಧಿಕಾರದ ಸುಪ್ಪತ್ತಿಗೆಯೇ?

Last Updated 9 ಮಾರ್ಚ್ 2016, 19:35 IST
ಅಕ್ಷರ ಗಾತ್ರ

ತಮ್ಮ ಒಳ ಉಡುಪನ್ನು ಒಗೆಯಲು ನಿರಾಕರಿಸಿದ ನ್ಯಾಯಾಂಗ ಇಲಾಖೆಯ ನೌಕರಳೊಬ್ಬಳಿಗೆ ನ್ಯಾಯಾಧೀಶರೊಬ್ಬರು ನೋಟಿಸ್ ಕೊಟ್ಟ ಸುದ್ದಿ ವರದಿಯಾಗಿದೆ! (ಪ್ರ.ವಾ., ಮಾರ್ಚ್‌ 5).

ಮೇಲಧಿಕಾರಿಗಳ ಮನೆಗೆಲಸಕ್ಕೆ ಹಾಗೂ ಹೆಂಡತಿ, ಮಕ್ಕಳು, ಸಂಬಂಧಿಕರ ಚಾಕರಿ ಮಾಡುವುದಕ್ಕಾಗಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಹೋಮ್ ಆರ್ಡರ್ಲಿ ಎಂಬ ವ್ಯವಸ್ಥೆ ಕೆಲವು ಇಲಾಖೆಗಳಲ್ಲಿ ಇದೆ. ಇನ್ನು ಕೆಲವು ಇಲಾಖೆಗಳಲ್ಲಿ ‘ಡಿ’ ದರ್ಜೆ ನೌಕರರನ್ನು ಮನೆಗೆಲಸಕ್ಕೆ ಬಳಸಬಾರದೆಂಬ ಕಾರಣಕ್ಕೆ ಹೋಮ್ ಆರ್ಡರ್ಲಿ ಭತ್ಯೆಯನ್ನು ನೀಡಲಾಗುತ್ತದೆ.

ಈ ಬಗೆಯ ಸೌಲಭ್ಯವಿಲ್ಲದ ಇಲಾಖೆಗಳಲ್ಲಿ ಅನಧಿಕೃತವಾಗಿ ಅಧೀನ ಸಿಬ್ಬಂದಿಯನ್ನು ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುವುದು ಸರ್ವವ್ಯಾಪಕವಾಗಿದೆ. ಮನೆಗೆಲಸಕ್ಕಾಗಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸರ್ಕಾರಿ ನೌಕರರನ್ನು ಬಳಸಿಕೊಳ್ಳುತ್ತಿರುವುದು ಎಗ್ಗಿಲ್ಲದೆ ನಡೆಯುತ್ತಿದೆ. ಇಂತಹ ನೌಕರರಿಗೆ ಸರ್ಕಾರದ ಬೊಕ್ಕಸದಿಂದ ಕೋಟ್ಯಂತರ ರೂಪಾಯಿ ಸಂಬಳ ರೂಪದಲ್ಲಿ ಸಂದಾಯವಾಗುತ್ತಿದೆ.

ಸರ್ಕಾರಿ ಸೇವೆ ಎಂದರೆ ಯಾವುದು? ಅಧಿಕಾರಿಗಳು ಮತ್ತು ರಾಜಕಾರಣಿಗಳ ಸೇವೆಯೇ ಅಥವಾ ಸರ್ಕಾರಕ್ಕೆ ಕರ ಸಂದಾಯ ಮಾಡುವ ಜನಸಾಮಾನ್ಯನ ಸೇವೆಯೇ? ಈ ದೇಶದ ಸಂವಿಧಾನದಲ್ಲಿ ಎಲ್ಲಿಯೂ ‘ಅಧಿಕಾರಿ’ ಎಂಬ ಶಬ್ದವನ್ನು ಬಳಸಿಲ್ಲ. ‘ಸಾರ್ವಜನಿಕ ಸೇವೆ’ ಎಂಬ ಶಬ್ದವನ್ನು ಬಳಸಲಾಗಿದೆ. ಇದರ ಅರ್ಥ ಇಷ್ಟೆ, ಸರ್ಕಾರಿ ಹುದ್ದೆಯಲ್ಲಿರುವ ಎಲ್ಲರೂ ಸಾರ್ವಜನಿಕರ ಸೇವಕರು. ಆದರೆ ಇಂದು  ನಡೆಯುತ್ತಿರುವುದು ಸಾರ್ವಜನಿಕರ ಸೇವೆಯಲ್ಲ, ಶೋಷಣೆ ಮತ್ತು ಸುಲಿಗೆ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ.

‘ಸಾರ್ವಜನಿಕ ಸೇವಕನು ಈ ದೇಶದ ಸಾಮಾನ್ಯ ಜನ ಎಂತಹ ನೀರು ಕುಡಿಯುತ್ತಾರೆಯೋ ಅಂತಹ ನೀರನ್ನೇ ಕುಡಿಯಬೇಕು, ಎಂತಹ ವಾತಾವರಣದಲ್ಲಿ ಬದುಕುತ್ತಿದ್ದಾರೋ ಅಂತಹ ವಾತಾವರಣದಲ್ಲೇ ಬದುಕಬೇಕು. ಅಂದಾಗ ಮಾತ್ರ ಅವರಿಗೆ ಜನರ ಕಷ್ಟ ಅರ್ಥವಾಗುತ್ತದೆ. ಅದು ಅಧಿಕಾರಿಗಳಿಗೆ ನೀಡಬೇಕಾದ ನಿಜವಾದ ತರಬೇತಿ’ ಎಂದು ಮಹಾತ್ಮ ಗಾಂಧಿ ಹೇಳಿದ್ದರು.

ಪ್ರತಿ ವ್ಯಕ್ತಿ ಎಂತಹುದೇ ಹುದ್ದೆಯಲ್ಲಿ ಇರಲಿ ತೀರಾ ಖಾಸಗಿಯಾದ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಬೇಕು. ಹಾಗೆ ಮಾಡಿಕೊಳ್ಳುವುದರಿಂದ ಘನತೆ ಹೆಚ್ಚಾಗುತ್ತದೆಯೇ ಹೊರತು ಅದು ಅವಮಾನಕರವಲ್ಲ. ಸ್ವಂತ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದರಿಂದ ದೈಹಿಕ ವ್ಯಾಯಾಮವೂ ಆಗುತ್ತದೆ ಜೊತೆಗೆ ಆರೋಗ್ಯವೂ ವೃದ್ಧಿಸುತ್ತದೆ.

ಒಮ್ಮೆ ಒಬ್ಬ ವಿದೇಶಿ ಪತ್ರಕರ್ತೆ ಮಹಾತ್ಮ ಗಾಂಧಿಯವರ ಸಂದರ್ಶನ ಮಾಡಲು ಸಬರಮತಿ ಆಶ್ರಮಕ್ಕೆ ಬಂದಿದ್ದರು. ಎಂದಿನಂತೆ ಚರಕದಲ್ಲಿ ನೂಲು ತೆಗೆಯುತ್ತಲೇ ಸಂದರ್ಶನ ನೀಡಿದ ಗಾಂಧೀಜಿ, ಇದ್ದಕ್ಕಿದ್ದಂತೆ ಚಟ್ಟನೆ ಎದ್ದು ಹೋಗಿ, ದೂರದಲ್ಲಿ ಕಟ್ಟಿದ್ದ ಆಡಿಗೆ ತುಸು ಹುಲ್ಲನ್ನು ಹಾಕಿ, ಅದರ ಮೈಯನ್ನು ನೇವರಿಸಿ ಬಂದು ಮತ್ತೆ ನೂಲುತ್ತಾ ಸಂದರ್ಶಕಳಿಗೆ ಉತ್ತರಿಸುತ್ತಾ ಕುಳಿತರು! ಗಾಂಧೀಜಿ ಮಹಾತ್ಮರಾದದ್ದು ಹೀಗೆ ಎಂದು ಮಹಾದೇವ ದೇಸಾಯಿ ನೆನಪಿಸಿಕೊಂಡಿದ್ದಾರೆ.

ಶ್ರಮಜೀವನ, ಸರಳತೆ ಮತ್ತು ಸಮಾನತೆಗೆ ಬಸವೇಶ್ವರರ ಕೊಡುಗೆ ಅನನ್ಯವಾದದ್ದು. ಅವರು ತಮ್ಮ ವಚನದಲ್ಲಿ ತನ್ನ ಕೆಲಸಗಳನ್ನು ಬೇರೆಯವರ ಕಡೆಯಿಂದ ಮಾಡಿಸಿಕೊಳ್ಳುವವರನ್ನು ಅತ್ಯಂತ ಕಟುವಾದ ಶಬ್ದಗಳಲ್ಲಿ ಎಚ್ಚರಿಸಿದ್ದಾರೆ: ತನ್ನಾಶ್ರಯದ ರತಿಸುಖವನು ತಾನುಂಬ ಊಟವನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ? ತನ್ನ ಲಿಂಗಕ್ಕೆ ಮಾಡುವ ನಿತ್ಯ ನೇಮವ ತಾ ಮಾಡಬೇಕಲ್ಲದೆ ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ.


(ಕೆಮ್ಮನೆ=ವ್ಯರ್ಥವಾಗಿ) ತತ್ವನಿಷ್ಠ ಮತ್ತು ಸೇವಾಪರ ನೌಕರರು, ಅಧಿಕಾರಿಗಳು, ರಾಜಕಾರಣಿಗಳು ಇಲ್ಲವೆಂದಲ್ಲ. ಆದರೆ ಅವರ ಸಂಖ್ಯೆ ದಿನೇ ದಿನೇ ಕುಸಿಯುತ್ತಿದೆ ಅಥವಾ ಹಾಗೆ ಕುಸಿಯುವಂತೆ ಮಾಡಲಾಗುತ್ತಿದೆ. ಆಳುವವರಿಗೆ ಜಾರ್ಜ್ ಫರ್ನಾಂಡಿಸ್, ಎ.ಕೆ.ಆಂಟನಿ, ಮಾಣಿಕ್ ಸರ್ಕಾರ್‌ ಅವರಂತಹ ವ್ಯಕ್ತಿಗಳು ಆದರ್ಶವಾಗಬೇಕಾಗಿತ್ತು.

ಆದರೆ, ತಮ್ಮ ಇಚ್ಛೆಗೆ ಅನುಗುಣವಾಗಿ ನಡೆದುಕೊಳ್ಳದ ಅಧಿಕಾರಿಗಳನ್ನು, ನೌಕರರನ್ನು ಇಕ್ಕಟ್ಟಿಗೆ ಸಿಕ್ಕಿಸುವ, ಅವರ ಮೇಲೆ ದೌರ್ಜನ್ಯ ಎಸಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮೇಲಧಿಕಾರಿಗಳು ತಮ್ಮ ತಪ್ಪನ್ನು, ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಅಧೀನ ಸಿಬ್ಬಂದಿಯ ಮೇಲೆ ರೇಗಾಡುವುದು, ದೋಷಾರೋಪ ಮಾಡುವುದು ಸರ್ಕಾರಿ ಇಲಾಖೆಗಳಲ್ಲಿ ಮಾಮೂಲಾಗಿಬಿಟ್ಟಿದೆ.

ದ್ವಿತೀಯ ದರ್ಜೆ ಗುಮಾಸ್ತರೊಬ್ಬರನ್ನು ಬಹಳಷ್ಟು ಬಾರಿ ಕಚೇರಿಯ ಸಮಯ ಮುಗಿದರೂ ಅವರ ಮೇಲಧಿಕಾರಿ ಮನೆಗೆ ಕಳುಹಿಸದೆ ತಮ್ಮ ಮುಂದೆ ನಿಲ್ಲಿಸಿಕೊಂಡು ಮನಸೋ ಇಚ್ಛೆ ಬೈಯುತ್ತಿದ್ದರಂತೆ. ತನ್ನ ಅಪ್ಪ ಕಚೇರಿಯಿಂದ ನಿತ್ಯವೂ ಏಕೆ ತಡವಾಗಿ ಮನೆಗೆ ಬರುತ್ತಾರೆ ಎಂದು ತಿಳಿಯಲು ಆ ಗುಮಾಸ್ತರ ಮಗ ಒಮ್ಮೆ ತಂದೆಯ ಕಚೇರಿಗೆ ಹೋಗುತ್ತಾನೆ.

ಅಲ್ಲಿ ತನ್ನ ತಂದೆಯನ್ನು ಮೇಲಧಿಕಾರಿ ಬೈಯುತ್ತಿದ್ದುದನ್ನು ಕಂಡ ಆ ಹುಡುಗನಿಗೆ ಮೈಯೆಲ್ಲ ಉರಿದುಹೋಗುತ್ತದೆ. ಆ ಅಧಿಕಾರಿಗಿಂತ ಮೇಲಿನ ಅಧಿಕಾರಿಯಾಗಿ ತಾನು ಬರಬೇಕು ಎಂದು ಆತ ಛಲ ತೊಟ್ಟ. ಹಾಗೆ ಛಲ ತೊಟ್ಟ ಹುಡುಗ ಮುಂದೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದ. ಅಂತಹ ಛಲದಂಕಮಲ್ಲ ಬೇರೆ ಯಾರೂ ಅಲ್ಲ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರು.

ಬದುಕು ಒಂದು ಚಕ್ರವಿದ್ದ ಹಾಗೆ. ಅದು ನಿರಂತರ ಸುತ್ತುತ್ತಿರುತ್ತದೆ. ಮೇಲೇರಿದವರು ಒಂದಲ್ಲ ಒಂದು ದಿನ ಕೆಳಗಿಳಿಯಲೇಬೇಕು. ಅಧಿಕಾರ ಎಂಬುದು ಹಾದಿ–ಬೀದಿ ಆಟದಲ್ಲಿ ಕುಣಿಯುವ ಕೋತಿ ಇದ್ದಂತೆ. ಅದು ಇಂದು ನಿಮ್ಮ ಮನೆಯ ಮುಂದೆ ಕುಣಿಯುತ್ತದೆ, ನಾಳೆ ಬೇರೆಯವರ ಮನೆಯ ಮುಂದೆ ಕುಣಿಯುತ್ತದೆ.

‘ಅಧಿಕಾರವನ್ನು ತಲೆಗೆ ಏರಿಸಿಕೊಂಡವನ ಹೆಗಲ ಮೇಲೆ ಅದರ ಕಾಲುಗಳು ಯಾವತ್ತೂ ಇರುತ್ತವೆ. ಸಮಯ ಸಿಕ್ಕಾಗ ಕುತ್ತಿಗೆಯನ್ನು ಹೊಸಕುತ್ತವೆ’ ಎಂದು ಪಾಟೀಲ ಪುಟ್ಟಪ್ಪ ಹೇಳಿದ್ದಾರೆ. ನಿವೃತ್ತಿಯಾಗಿ ಅಧಿಕಾರ ಕಳೆದುಕೊಂಡ ಕೆಲವರು ಅನಾಥರಂತೆ, ಹುಚ್ಚರಂತೆ ಹಳವಂಡಪಡುತ್ತ, ತಮ್ಮತಮ್ಮೊಳಗೆ ಏನೇನೋ ಗೊಣಗುತ್ತ ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಅಲೆದಾಡುವುದನ್ನು ನೋಡಿದರೆ, ಅವರ ಈ ಮಾತಿನಲ್ಲಿ ಎಷ್ಟು ಸತ್ಯವಿದೆ ಎಂಬುದು ಅರ್ಥವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT