ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮ್‌ಕಾರ್ಡ್‌ನಿಂದ ನೇಣುಗಂಬದವರೆಗೆ...

Last Updated 12 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ವಿಜಯಪುರ ಮೂಲದ ವೈಜಯಂತಿ ಚಿಕ್ಕಮಗಳೂರಿನಲ್ಲಿ ಸರ್ಕಾರಿ ನೌಕರಿಯಲ್ಲಿದ್ದರು. ಅಲ್ಲಿ ಮಗಳ ಜೊತೆ ವಾಸವಾಗಿದ್ದರು. ವಾರಾಂತ್ಯದಲ್ಲಿ ವಿಜಯಪುರಕ್ಕೆ ಬಂದು ಕುಟುಂಬದವರ ಜೊತೆ ಇದ್ದು ಪುನಃ ವಾಪಸಾಗುತ್ತಿದ್ದರು. ಅದು 2007ರ ಜೂನ್‌ 17. ವೈಜಯಂತಿ ವಿಜಯಪುರದಿಂದ ಚಿಕ್ಕಮಗಳೂರಿಗೆ ವಾಪಸಾಗುತ್ತಿದ್ದರು. ಪ್ರತಿ ಬಾರಿಯಂತೆ ಆಗಿದ್ದರೆ ಅಂದೂ ಅವರು ಮುಂಜಾನೆ ಐದೂವರೆ–ಆರು ಗಂಟೆಗೆ ಮನೆಯಲ್ಲಿ ಇರಬೇಕಿತ್ತು. ಅಮ್ಮನಿಗಾಗಿ ಮಗಳು ಕವಿತಾ ಕಾಯುತ್ತಿದ್ದಳು. ಗಂಟೆ ಏಳಾಗಿ ಒಂಬತ್ತಾದರೂ ಅಮ್ಮನ ಸುಳಿವಿಲ್ಲ.

ಫೋನ್‌ ಕೂಡ ‘ಸ್ವಿಚ್‌ ಆಫ್‌’ ಆಗಿತ್ತು. ಮಧ್ಯಾಹ್ನವಾಗಿ ರಾತ್ರಿಯಾದರೂ ಅಮ್ಮ ಬರಲೇ ಇಲ್ಲ. ಮನೆಯವರೆಲ್ಲಾ ಮೂರು ದಿನ ಹುಡುಕಾಟ ನಡೆಸಿದರು. ಸುಳಿವು ಸಿಗಲಿಲ್ಲ. ನಂತರ ಕವಿತಾ ‘ಅಮ್ಮ ಕಾಣೆಯಾಗಿದ್ದಾಳೆ’ ಎಂದು ಪೊಲೀಸ್‌ ಠಾಣೆಯಲ್ಲಿ ಅದೇ 20ರಂದು ದೂರು ದಾಖಲು ಮಾಡಿದಳು. ದೂರಿನಲ್ಲಿ ತಾಯಿಯ ಮೊಬೈಲ್‌ ಫೋನ್‌ ಸಂಖ್ಯೆಯನ್ನು ನಮೂದು ಮಾಡಿದಳು.

ವೈಜಯಂತಿ ಕಾಣೆಯಾಗಿದ್ದಾರೆ ಎನ್ನುವುದನ್ನು ಬಿಟ್ಟರೆ ಅವರ ಮನೆಯವರ ಬಳಿ ಏನೂ ಮಾಹಿತಿ ಇರಲಿಲ್ಲ. ಪರಿಚಯಸ್ಥರು, ಸಂಬಂಧಿಗಳು ಏನಾದರೂ ಅನಾಹುತ ಮಾಡಿರಬಹುದು ಎನ್ನಲು ಯಾರ ಮೇಲೂ ಅವರಿಗೆ ಸಂದೇಹವೇ ಇರಲಿಲ್ಲ. ಯಾವೊಂದು ಸುಳಿವು ನೀಡಲು ಅವರು ಶಕ್ಯರಿರಲಿಲ್ಲ. ಆದ್ದರಿಂದ ಇದೊಂದು ರೀತಿಯಲ್ಲಿ ಪೊಲೀಸರಿಗೆ ಸವಾಲೇ ಆಯಿತು. ಇದರ ತನಿಖೆಯನ್ನು ಹೊತ್ತರು ತೀಕ್ಷ್ಣ ಹಾಗೂ ಸೂಕ್ಷ್ಮ ಬುದ್ಧಿಯ ಸಬ್‌ ಇನ್ಸ್‌ಪೆಕ್ಟರ್‌ ಆಗಿದ್ದ ಸತ್ಯನಾರಾಯಣ ಅವರು (ಈಗ ಡಿವೈಎಸ್ಪಿ–ಲೋಕಾಯುಕ್ತ). ಇವರಿಗೆ ನೆರವಾದವರು ಇನ್ಸ್‌ಪೆಕ್ಟರ್‌ ಆಗಿದ್ದ ನಾಗರಾಜ್‌ (ಈಗ ಡಿವೈಎಸ್ಪಿ– ವಿಚಕ್ಷಣದಳ: ಶಿವಮೊಗ್ಗ)

ವೈಜಯಂತಿಯವರ ಕೊಲೆಯಾಗಿದ್ದರೆ ಅವರ ಶವವಾದರೂ ಸಿಗಬೇಕಿತ್ತು. ಅದೂ ಸಿಕ್ಕಿರಲಿಲ್ಲ. ಹಣಕ್ಕಾಗಿ ಯಾರಾದರೂ ಅಪಹರಣ ಮಾಡಿದ್ದರೆ ಮೊಬೈಲ್‌ ಕರೆ ಮಾಡೇ ಮಾಡುತ್ತಾರೆ, ಆಗ ಟವರ್‌ ಪತ್ತೆ ಹಚ್ಚಿ ಅಪರಾಧಿಯನ್ನು ಕಂಡುಹಿಡಿಯಬಹುದು ಎಂದು ಮನದಲ್ಲಿಯೇ ಲೆಕ್ಕಹಾಕಿದರು ಈ ಪೊಲೀಸ್‌ ತನಿಖಾಧಿಕಾರಿಗಳು. ಅದು ಬಿಟ್ಟರೆ ಅಪರಾಧಿಯನ್ನು ಕಂಡುಹಿಡಿಯುವುದು ಸುಲಭದ ಮಾತಾಗಿರಲಿಲ್ಲ. ಫೋನ್‌ ಕರೆ ಬರಲಿಲ್ಲ. ವೈಜಯಂತಿಯವರ ಫೋನ್‌ ಕೂಡ ಸ್ವಿಚ್‌ ಆಫ್‌ ಆಗಿತ್ತು. ಆದರೂ ಈ ಪ್ರಕರಣವನ್ನು ಭೇದಿಸಲೇಬೇಕು ಎಂಬ ಪಣತೊಟ್ಟರು ಅವರು. ಅಪರಾಧಿ ಏನಾದರೊಂದು ಸುಳಿವು ಬಿಟ್ಟೇ ಇರುತ್ತಾನೆ ಎಂಬ ವಿಶ್ವಾಸದಿಂದ ತನಿಖೆ ಮುಂದುವರಿಸಿದರು.

ವೈಜಯಂತಿಯವರು ಕಾಣೆಯಾದ ದಿನದಿಂದ ಅವರ ಮೊಬೈಲ್‌ ಫೋನ್‌ನಿಂದ ಹೋದ ಕರೆಗಳ ಕುರಿತು ತನಿಖೆ ಶುರುವಿಟ್ಟುಕೊಂಡರು. ಆಗ ಅವರಿಗೆ ಸಿಕ್ಕ ಸುಳಿವು ಎಂದರೆ ವೈಜಯಂತಿ ಕಾಣೆಯಾದ ಮಾರನೆಯ ದಿನವೂ ಅವರ ಸಿಮ್‌ ಬಳಸಿ ಕರೆ ಹೋಗಿದ್ದು. ಇಷ್ಟು ಸಾಕಾಯಿತು ತನಿಖಾಧಿಕಾರಿಗಳಿಗೆ. ಸಿಮ್‌ ಕಂಪೆನಿಗೆ ಹೋಗಿ ಸಮಗ್ರ ಮಾಹಿತಿ ಪಡೆದರು. ಫೋನಿನ ಐಎಂಇಐ ಸಂಖ್ಯೆಯಿಂದ ಅದು ವೈಜಯಂತಿ ಅವರದ್ದೇ ಎಂದು ತಿಳಿಯಿತು. ಆ ಫೋನಿನಿಂದ ಕರೆ ಹೋಗಿದ್ದ ವ್ಯಕ್ತಿಯ ಬೆನ್ನಟ್ಟಿ ಹೋದಾಗ, ಉಸ್ಮಾನ್‌ ಎಂಬಾತ ಸಿಕ್ಕಿಬಿದ್ದ.

ಘಟನೆ ನಡೆದ ಮಾರನೆಯ ದಿನ ಆ ಫೋನ್‌  ಬಳಸಿ ಆತ ಕರೆಗಳನ್ನು ಮಾಡಿದ್ದ. ಅವನನ್ನು ವಿಚಾರಣೆಗೆ ಒಳಪಡಿಸಿದಾಗ ಆ ಫೋನನ್ನು ತನ್ನ ಸಂಬಂಧಿಯಿಂದ ಪಡೆದುಕೊಂಡಿರುವುದಾಗಿ ಹೇಳಿದ. ಆ ಸಂಬಂಧಿಕನನ್ನು ಹುಡುಕಿದ ಪೊಲೀಸರಿಗೆ ಕೊನೆಗೂ ಮೊಬೈಲ್‌ ಫೋನ್‌ ಸಿಕ್ಕಿತು. ಆ ಫೋನ್‌ ತನ್ನ ಅಮ್ಮನದ್ದೇ ಎಂದು ಕವಿತಾ ಗುರುತಿಸಿದಳು. ಅದರ ಆಧಾರದ ಮೇಲೆಯೇ ತನಿಖೆ ಮುಂದುವರಿಸಿದ ಪೊಲೀಸರಿಗೆ ಮೊಹಮ್ಮದ್‌ ಸಿಕ್ಕಿಬಿದ್ದ. ಮೊದಲು ತಾನು ಮಾಡಿದ ಕುಕೃತ್ಯವನ್ನು ಒಪ್ಪಿಕೊಳ್ಳದಿದ್ದರೂ ಪೊಲೀಸರ ತೀವ್ರ ವಿಚಾರಣೆಗೆ ಅಂತೂ ಬಾಯಿಬಿಟ್ಟ.

ಘಟನೆ ನಡೆದ ದಿನ ವಿಜಯಪುರ–ಮೈಸೂರು ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ಗೆ ಬಂದಿದ್ದ ವೈಜಯಂತಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಚೆಕ್‌ಪೋಸ್ಟ್‌ ಬಳಿ ಇಳಿದು ಮನೆಗೆ ಹೋಗಲು ವಾಹನಕ್ಕಾಗಿ ಕಾಯುತ್ತಿದ್ದರು. ಆಗ ಬಂದದ್ದು ಈ ಮೊಹಮ್ಮದ್‌. ಟಾಟಾ ಸುಮೊ ಚಾಲನೆ ಮಾಡಿಕೊಂಡು ಬಂದಿದ್ದ ಇವನ ಕಣ್ಣು ವೈಜಯಂತಿ ಹಾಗೂ ಅವರು ಧರಿಸಿದ್ದ ಒಡವೆಗಳ ಮೇಲೆ ಬಿತ್ತು. ಚಿಕ್ಕಮಗಳೂರಿಗೆ ಡ್ರಾಪ್‌ ಕೊಡುವುದಾಗಿ ಹೇಳಿದ ಆತನ ಮಾತನ್ನು ವೈಜಯಂತಿ ನಂಬಿಬಿಟ್ಟರು. ಟ್ಯಾಕ್ಸಿಯಲ್ಲಿ ಕುಳಿತುಕೊಂಡ ವೈಜಯಂತಿ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಮೊಹಮ್ಮದ್‌ ಅವರ ಮೇಲೆ ಅತ್ಯಾಚಾರ ಎಸಗಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಒಡವೆಗಳನ್ನು ದೋಚಿ ಹೋದ. ಯಾರಿಗೂ ಸಂದೇಹ ಬರಬಾರದು ಎಂದುಕೊಂಡು ಶವವನ್ನು ಚಾರ್ಮಾಡಿ ಘಾಟ್‌ನಲ್ಲಿ ಎಸೆದು ಹೋಗಿದ್ದ...

ಹೀಗೆ ಮೊಹಮ್ಮದ್‌ ಎಲ್ಲವನ್ನೂ ಪೊಲೀಸರ ಎದುರು ಬಾಯಿಬಿಟ್ಟ ತಕ್ಷಣ ಶವವನ್ನು ಹುಡುಕಿ ಪೊಲೀಸರು ಚಾರ್ಮಾಡಿ ಘಾಟ್‌ ಬಳಿ ಹೋದರು. ಕೊಲೆ ನಡೆದು ತುಂಬಾ ದಿನಗಳಾಗಿದ್ದರಿಂದ ಶವ ಸಿಗಲಿಲ್ಲ, ಬದಲಿಗೆ ಅಲ್ಲಿ ಪೊಲೀಸರಿಗೆ ಒಂದಿಷ್ಟು ಮೂಳೆಗಳು ಸಿಕ್ಕವು. ಆ ಮೂಳೆಗಳ ಪಕ್ಕದಲ್ಲಿ ಇದ್ದ ಸೀರೆ ಮತ್ತು ಒಳಲಂಗವನ್ನು ಕವಿತಾ ತಮ್ಮ ತಾಯಿಯದ್ದೇ ಎಂದು ಗುರುತಿಸಿದಳು. ಮೂಳೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ‘ಸೂಪರ್‌ ಇಂಪೊಸಿಷನ್‌’ ಪರೀಕ್ಷೆಗೆ ಒಳಪಡಿಸಿದಾಗ ವೈಜಯಂತಿ ಅವರದ್ದೇ ಎಂದು ತಿಳಿಯಿತು.

ಇಷ್ಟೆಲ್ಲಾ ಆದ ಮೇಲೆ ಅತ್ಯಾಚಾರ, ಕೊಲೆ, ದರೋಡೆ, ಸಾಕ್ಷ್ಯ ನಾಶ ಇತ್ಯಾದಿ ಆರೋಪಗಳಡಿ ಮೊಹಮ್ಮದನ ಮೇಲೆ ದೋಷಾರೋಪಣೆ ಪಟ್ಟಿಯನ್ನು ಪೊಲೀಸರು ಚಿಕ್ಕಮಗಳೂರಿನ ಕೋರ್ಟ್‌ಗೆ ಸಲ್ಲಿಸಿದರು. ಆರೋಪಿ ತನ್ನ ತಪ್ಪನ್ನು ಪೊಲೀಸರ ಎದುರಿಗೆ ಒಪ್ಪಿಕೊಂಡಿದ್ದರೂ ಕಾನೂನಿಗೆ ಸೂಕ್ತ ಸಾಕ್ಷ್ಯಾಧಾರಗಳು ಬೇಕಲ್ಲ?  ಕೊಲೆ ನಡೆದ ಬಗ್ಗೆ ಯಾವುದೇ ಪ್ರತ್ಯಕ್ಷ ಸಾಕ್ಷಿಗಳೇ ಇರಲಿಲ್ಲ. ಇಡೀ ಪ್ರಕರಣ ಕೇವಲ ಸಿಮ್‌ ಕಾರ್ಡ್‌, ಮೊಬೈಲ್‌ನ ಐಎಂಇಐ ಸಂಖ್ಯೆ ಮೇಲೆ ನಿಂತಿತ್ತು. ತನಿಖೆ ಹಂತದಲ್ಲಿ ಸಿಕ್ಕ ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ಆರೋಪಿಯನ್ನು ಅಪರಾಧಿಯನ್ನಾಗಿಸುವ ಹೊಣೆ ಪ್ರಾಸಿಕ್ಯೂಷನ್‌ ಮೇಲಿತ್ತು.

ಸಾಕ್ಷ್ಯಾಧಾರಗಳನ್ನು ಕಲೆ ಹಾಕುವ ಪ್ರಯತ್ನದಲ್ಲಿದ್ದ ಪೊಲೀಸರ ನೆರವಿಗೆ ಬಂದದ್ದು ವೈಜಯಂತಿ ಅವರ ಮೈಮೇಲಿದ್ದ ಒಡವೆಗಳು. ಈ ಒಡವೆಗಳನ್ನು ಮೊಹಮ್ಮದ್‌ ತನ್ನ ಸ್ನೇಹಿತ ಚೌಡಪ್ಪ ಎಂಬುವವರಲ್ಲಿ ಅಡವಿಟ್ಟಿದ್ದ. ಆ ಒಡವೆಗಳನ್ನು ನೋಡಿದ್ದ ಚೌಡಪ್ಪನಿಗೆ ಅಚ್ಚರಿಯಾಗಿತ್ತು. ಏಕೆಂದರೆ ಆ ಒಡವೆಗಳ ಡಿಸೈನ್‌ ಹಿಂದೂ ಸಂಪ್ರದಾಯದಂತೆ ಇತ್ತು. ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಮೊಹಮ್ಮದ್‌ ಬಳಿ ಹಿಂದೂಗಳ ಆಭರಣ ಹೇಗೆ ಬಂತು ಎಂದು ಚೌಡಪ್ಪ ವಿಚಾರಿಸಿದ್ದಾಗ ಮೊದಲು ಆತ ಅದು ತನ್ನ ಹೆಂಡತಿಯದ್ದು ಎಂದಿದ್ದ. ಆದರೆ ಅದು ಮುಸ್ಲಿಂ ಮಹಿಳೆಯರು ಧರಿಸುವ ಆಭರಣದ ರೀತಿ ಇಲ್ಲದ್ದರಿಂದ ಪದೇ ಪದೇ ವಿಚಾರಿಸಿದಾಗ ಮೊಹಮ್ಮದ್‌ ಅನಿವಾರ್ಯವಾಗಿ ಕೊಲೆ ವಿಷಯವನ್ನು ತಿಳಿಸಿದ್ದ.

ವಿಚಾರಣೆ ವೇಳೆ ಚೌಡಪ್ಪ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಅವರು ಮೊಹಮ್ಮದ್‌ ತಮ್ಮ ಬಳಿ ಕೊಲೆ ವಿಷಯ ತಿಳಿಸಿದ್ದನ್ನು ಒಪ್ಪಿಕೊಂಡರು. ಘಟನೆ ನಡೆದ ದಿನ ಟಾಟಾ ಸುಮೊ ಅನ್ನು ತಾವು ಆರೋಪಿಗೆ ನೀಡಿದ್ದ ಬಗ್ಗೆ ಅದರ ಮಾಲೀಕರು ತಿಳಿಸಿದರು. ಹೀಗೆ ಒಂದಕ್ಕೊಂದು ಎಲ್ಲಾ ಘಟನೆಗಳನ್ನು ಸೇರಿಸುತ್ತಾ ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವ ಮೂಲಕ ಮೊಹಮ್ಮದನೇ ಕೊಲೆ ಮಾಡಿರುವುದಾಗಿ ಸರ್ಕಾರಿ ವಕೀಲರಾದ ಓ.ಎಲ್‌.ಮಹೇಂದ್ರ ಅವರು ಕೋರ್ಟ್‌ಗೆ ತಿಳಿಸಿದರು. ಇದೊಂದು ಅತ್ಯಂತ ಹೀನಾಯ ಕೃತ್ಯ ಎಂದು ತಿಳಿಸಿದ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ನಟರಾಜನ್‌ ಅವರು 2009ರ ಮಾರ್ಚ್‌ ತಿಂಗಳಿನಲ್ಲಿ ಗಲ್ಲುಶಿಕ್ಷೆ ವಿಧಿಸಿದರು.

ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತು.  ನ್ಯಾಯಮೂರ್ತಿ ಕೆ.ಶ್ರೀಧರರಾವ್‌ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆ ನಡೆಯಿತು. ‘ಈ ಪ್ರಕರಣ ಕೇವಲ ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ನಿಂತಿದೆ. ಹಾಗಿದ್ದ ಮೇಲೆ ಇಂಥ ಪ್ರಕರಣಗಳಲ್ಲಿ ಗಲ್ಲುಶಿಕ್ಷೆಯಂಥ ಕಠೋರ ಶಿಕ್ಷೆ ಉಚಿತವಲ್ಲ’ ಎಂದು ಮೊಹಮ್ಮದ್‌ ಪರ ವಕೀಲ ಆನಂದ್‌ ವಾದಿಸಿದರು. 

ಆಗ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿದ್ದ ನಾನು ‘ಇಂಥ ಹೀನ ಕೃತ್ಯ ನಡೆಸಿರುವವನಿಗೆ ಮರಣದಂಡನೆಯೇ ಸರಿಯಾದ ಶಿಕ್ಷೆ’ ಎಂದು ಪ್ರತಿವಾದಿಸಿದೆ. ‘ಕೋಪದ ಕೈಗೆ ಬುದ್ಧಿಕೊಟ್ಟು ಕೊಲೆ ಮಾಡಿದವರಿಗೂ, ಹೀಗೆ ಗೊತ್ತಿದ್ದೂ ಗೊತ್ತಿದ್ದೂ ಅಮಾಯಕ ಹೆಣ್ಣು ಮಗಳ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಿದ್ದೂ ಅಲ್ಲದೇ ಶವವನ್ನು ಎಲ್ಲೋ ಎಸೆದುಹೋಗಿರುವಂಥ ಹೀನ ಕೃತ್ಯ ಎಸಗಿದವರಿಗೂ ವ್ಯತ್ಯಾಸವಿದೆ. ಇಂಥ ಸಮಾಜಕಂಟಕರಿಗೆ ಗಲ್ಲುಶಿಕ್ಷೆಯೇ ಸರಿಯಾದದ್ದು’ ಎಂದು ಬಲವಾಗಿ ವಾದಿಸಿದೆ. ಮರಣದಂಡನೆಯನ್ನು ಯಾವ್ಯಾವ ಸಂದರ್ಭಗಳಲ್ಲಿ ಕೊಡಬಹುದು ಎಂಬ ಬಗ್ಗೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪುಗಳ ಕುರಿತು ನ್ಯಾಯಮೂರ್ತಿಗಳ ಗಮನ ಸೆಳೆದೆ. ನನ್ನ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದರು.

‘ಇಂಥವರಿಗೆ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿದರೆ ಅದು ಸಮಾಜಕ್ಕೆ ಮಾಡುವ ಅನ್ಯಾಯವಾಗುತ್ತದೆ. ಸಾರ್ವಜನಿಕ ವಾಹನಗಳ ಓಡಾಟ ಹೆಚ್ಚಿಗೆ ಇಲ್ಲದಂಥ ಇಂಥ ಸ್ಥಳಗಳಲ್ಲಿ ಎಲ್ಲರೂ ಖಾಸಗಿ ವಾಹನದ ಮೇಲೆಯೇ ಅವಲಂಬಿತರಾಗಿದ್ದಾರೆ. ಅದನ್ನೇ ಬಂಡವಾಳವಾಗಿಸಿಕೊಂಡು ಈ ರೀತಿ ವಾಹನ ಚಾಲಕರೇ ಕೊಲೆಗಡುಕರಾಗಿ ಪರಿವರ್ತಿತರಾದರೆ ಜನರ ಗತಿಯೇನು?’ ಎಂದ ನ್ಯಾಯಮೂರ್ತಿಗಳು ‘ಇದೊಂದು ವಿರಳದಲ್ಲಿ ವಿರಳವಾಗಿರುವ ಪ್ರಕರಣವಾಗಿದೆ’ ಎಂದು ಉಲ್ಲೇಖಿಸಿ 2010ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಗಲ್ಲುಶಿಕ್ಷೆಯನ್ನು ಕಾಯಂ ಮಾಡಿದರು.

ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ಮೊಹಮ್ಮದ್‌ 2011ರಲ್ಲಿ ಸಲ್ಲಿಸಿರುವ ವಿಶೇಷ ಮೇಲ್ಮನವಿ ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಕಾದು ಕುಳಿತಿದೆ (ಆದ್ದರಿಂದ ಘಟನೆ ಕುರಿತು ಹೆಚ್ಚಿನ ಮಾಹಿತಿ ತಿಳಿಸುವುದು ಕಷ್ಟ). ತನಿಖಾಧಿಕಾರಿಗಳು ಮನಸ್ಸು ಮಾಡಿದರೆ ಎಂಥ ಕ್ಲಿಷ್ಟಕರವಾಗಿರುವ ಪ್ರಕರಣವನ್ನೂ ಭೇದಿಸಬಹುದು ಎನ್ನುವುದಕ್ಕೆ, ಒಂದು ಸಿಮ್‌ ಕಾರ್ಡ್‌ನಿಂದ ಗಲ್ಲುಶಿಕ್ಷೆಯವರೆಗೆ ಒಯ್ದ ಈ ಘಟನೆಯೇ ಸಾಕ್ಷಿಯಾಗಿದೆ.

(ಲೇಖಕ ರಾಜ್ಯದ ಮಾಜಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹಾಗೂ ಹೈಕೋರ್ಟ್‌ ವಕೀಲ)
(ಮುಂದಿನ ವಾರ: ಬಲಿ ಕೊಟ್ಟ ಸ್ವಾಮೀಜಿ ಬಿಡುಗಡೆಯಾದದ್ದು ಹೇಗೆ...?)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT