ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕಿಯೇ ಮ್ಯಾನ್ಮಾರ್ ಮುಂದಾಳು

ವಿದೇಶ ವಿದ್ಯಮಾನ
Last Updated 13 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಮ್ಯಾನ್ಮಾರ್‌ ಅಧ್ಯಕ್ಷರ ಹುದ್ದೆಗೆ ನ್ಯಾಷನಲ್ ಲೀಗ್ ಫಾರ್‌ ಡೆಮಾಕ್ರಸಿ (ಎನ್‌ಎಲ್‌ಡಿ) ಮುಖ್ಯಸ್ಥೆ ಆಂಗ್ ಸಾನ್ ಸೂಕಿ ಅವರು ತಮ್ಮ ಮಾಜಿ ಕಾರು ಚಾಲಕ ಯು ಹಟಿನ್ ಕೈವ್‌ ಅವರ ಹೆಸರನ್ನು ಸೂಚಿಸಿದ್ದಾರೆ. ಎನ್‌ಎಲ್‌ಡಿಯ ಮತ್ತೊಬ್ಬ ಅಭ್ಯರ್ಥಿ ಹಾಗೂ ಸೇನಾ ಬೆಂಬಲಿತ ಅಭ್ಯರ್ಥಿಯೊಬ್ಬರು ಕಣದಲ್ಲಿದ್ದರೂ, ಕೈವ್‌ ಅವರೇ ಮ್ಯಾನ್ಮಾರ್‌ನ ಮುಂದಿನ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.

ಅಷ್ಟಕ್ಕೂ ಸೂಕಿಯೇ ನೇರವಾಗಿ ಅಧ್ಯಕ್ಷರಾಗಲು ತೊಡಕಾಗಿದ್ದು, ಮ್ಯಾನ್ಮಾರ್‌ನ ಸಂವಿಧಾನ. ಸಂವಿಧಾನದ ಪ್ರಕಾರ ಅಲ್ಲಿನ ಅಧ್ಯಕ್ಷರಾಗುವ ವ್ಯಕ್ತಿಯ ಪತಿ ಅಥವಾ ಪತ್ನಿ ಹಾಗೂ ಮಕ್ಕಳು ವಿದೇಶಿ ಪೌರತ್ವ ಹೊಂದಿರಬಾರದು. ಸೂಕಿ ಅವರ ಪತಿ (ದಿವಂಗತ) ಮತ್ತು ಇಬ್ಬರು ಮಕ್ಕಳು ಬ್ರಿಟನ್ ಪೌರತ್ವ ಹೊಂದಿದ್ದಾರೆ. ಸೂಕಿ ಅಧ್ಯಕ್ಷರಾಗದಂತೆ ನೋಡಿಕೊಳ್ಳಲು ವಿರೋಧಿ ಪಾಳಯಕ್ಕೆ ಈ ಕಾನೂನು ಸಾಕಾಯಿತು. ಇದನ್ನು ಅರಿತಿದ್ದ ಸೂಕಿ ಈಗ ಅಧ್ಯಕ್ಷರ ಸ್ಥಾನಕ್ಕೆ ತಮ್ಮ ಆಪ್ತ ಕೈವ್ ಅವರ ಹೆಸರನ್ನು ಸೂಚಿಸಿದ್ದಾರೆ.

ತಮ್ಮ ಮಾಜಿ ಕಾರು ಚಾಲಕನನ್ನು ಅಧ್ಯಕ್ಷರನ್ನಾಗಿಸುವ ಮೂಲಕ ಸೂಕಿ ಅಧಿಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಟೀಕೆ ಇದರ ಹಿಂದೆಯೇ ಕೇಳಿಬಂದಿದೆ. ಕೈವ್‌ ನೆಪ ಮಾತ್ರಕ್ಕೆ ಅಧ್ಯಕ್ಷರಾಗಿರುತ್ತಾರೆ, ಸೂಕಿಯೇ ಎಲ್ಲವನ್ನೂ ನಿಯಂತ್ರಿಸಲಿದ್ದಾರೆ. ಹಿಂದೆ ನಿರಂಕುಶ ಪ್ರಭುತ್ವ ನಡೆಸಿದ್ದ ಸೇನಾ ಆಡಳಿತಕ್ಕೂ ಇದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ ಎಂದು ಸೂಕಿ ಅವರ ವಿರೋಧಿಗಳು ಲೇವಡಿ ಮಾಡುತ್ತಿದ್ದಾರೆ. ವಿರೋಧಿಗಳ ಟೀಕೆಯಲ್ಲೂ ತುಸು ಸತ್ಯವಿದೆ.

ಸೂಕಿ ಗೃಹಬಂಧನದಲ್ಲಿದ್ದಾಗಲೂ ಕೈವ್ ಅವರ ಬೆನ್ನಿಗೆ ನಿಂತಿದ್ದರು. ಗೃಹ ಬಂಧನದಿಂದ ಬಿಡುಗಡೆಯಾದ ನಂತರ ಸೂಕಿ ಪ್ರಜಾಪ್ರಭುತ್ವಕ್ಕಾಗಿ ಜನರನ್ನು ಒಗ್ಗೂಡಿಸಲು ಮ್ಯಾನ್ಮಾರ್‌ನಾದ್ಯಂತ ತಿರುಗಾಡಿದ್ದರು. ಹಳ್ಳಿ ಹಳ್ಳಿಗೆ ಭೇಟಿ ಇತ್ತು, ಪ್ರಜಾಪ್ರಭುತ್ವ ಸರ್ಕಾರದ ಅಗತ್ಯತೆಯನ್ನು ಜನ ಸಾಮಾನ್ಯರಿಗೆ ಮನವರಿಕೆ ಮಾಡಿದ್ದರು. ಈ ಎಲ್ಲಾ ಕೆಲಸ ಮಾಡುವಾಗ ಕೈವ್, ಸೂಕಿ ಅವರ ಜತೆಗಿದ್ದರು. ಸೂಕಿ ದೇಶ ತಿರುಗುವಾಗ ಕೈವ್, ಅವರ ಕಾರು ಚಾಲಕರಾಗಿದ್ದರು.

ಸೂಕಿ ಬಾಲ್ಯದಲ್ಲಿ  ಕೈವ್ ಅವರ ಸಹಪಾಠಿಯಾಗಿದ್ದರು. ಸೂಕಿ ಅವರ ತಾಯಿಯ ಹೆಸರಿನ ಚಾರಿಟಬಲ್‌ ಟ್ರಸ್ಟ್‌ ಒಂದರಲ್ಲಿ ಅವರು ಸದಸ್ಯರಾಗಿದ್ದಾರೆ. ದಶಕಗಳ ಕಾಲ ಸೂಕಿ ಕುಟುಂಬದ ಜತೆ ಒಡನಾಟದಲ್ಲಿದ್ದವರು ಕೈವ್. ಈವರಗೆ ಸೂಕಿ ಸೂಚಿಸಿದ ಬಹುತೇಕ ಕೆಲಸಗಳನ್ನು ಅವರು ಶಿರಸಾವಹಿಸಿ ಪಾಲಿಸಿದ್ದಾರೆ. ಹೀಗಾಗಿ ಸೂಕಿ ಹೇಳುವುದನ್ನು ಕೈವ್‌ ಮಾಡುತ್ತಾರೆ ಎಂಬುವುದರಲ್ಲಿ ಎರಡನೇ ಮಾತಿಲ್ಲ.

ಕೈವ್‌ ಮ್ಯಾನ್ಮಾರ್‌ನ ಅಧ್ಯಕ್ಷರಾಗುವುದನ್ನು ತಡೆಯಲು ಸೇನೆಗೆ ಹಾಗೂ ಪ್ರಜಾಪ್ರಭುತ್ವ ವಿರೋಧಿಗಳಿಗೆ ಅವಕಾಶವೇ ಇಲ್ಲ. ತಮ್ಮ ಕೈಗೊಂಬೆಯಂತಿರುವ ಕೈವ್ ಅಧಿಕಾರದಲ್ಲಿದ್ದರೆ, ಅಧಿಕಾರ ತಮ್ಮ ಕೈಲಿದ್ದಂತೆಯೇ ಎಂಬುದು ಸೂಕಿ ಅವರಿಗೂ ಸ್ಪಷ್ಟವಾಗಿ ತಿಳಿದಿದೆ. ಹೀಗಾಗಿ ದೇಶವನ್ನು ಸೂಕಿ ಅವರೇ ಮುನ್ನಡೆಸಲಿದ್ದಾರೆ ಎಂದು ಅವರ ಬೆಂಬಲಿಗರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೂಕಿ ಅವರ ಈ ನಡೆಯ ಹಿಂದೆ ಮತ್ತೊಂದು ಮಹತ್ವದ ಕಾರಣವಿದೆ. ದಶಕಗಳ ಹೋರಾಟದ ಫಲವಾಗಿ ಮ್ಯಾನ್ಮಾರ್‌ನಲ್ಲಿ ಈಚೆಗಷ್ಟೇ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿದೆ. ದೇಶದ ಅಧ್ಯಕ್ಷಗಿರಿ ಸೇನಾ ಬೆಂಬಲಿತ ಅಭ್ಯರ್ಥಿಯ ಪಾಲಾದರೆ ಬಹುಮತವಿದ್ದರೂ ಪ್ರಜಾಪ್ರಭುತ್ವವಾದಿಗಳು ಅಧಿಕಾರ ಕಳೆದುಕೊಂಡಂತಾಗುತ್ತದೆ. ಇದಕ್ಕೆ ಆಸ್ಪದ ನೀಡದಂತೆ ನೋಡಿಕೊಳ್ಳುವ ಗುರುತರ ಹೊಣೆ ಸೂಕಿ ಅವರ ಮೇಲಿತ್ತು.

ಅಭದ್ರ ನಾಯಕತ್ವದ ಪರಿಸ್ಥಿತಿಯಲ್ಲಿ ಸೇನೆಯೊಂದಿಗೆ ಜಗ್ಗಾಡುವುದು ಸೂಕಿ ಅವರಿಗೆ ಬೇಕಿರಲಿಲ್ಲ. ಜನಪರ ಕಾರ್ಯಾಂಗ ಹಾಗೂ ಸಮರ್ಪಕ  ನ್ಯಾಯಾಂಗವಿಲ್ಲದೇ ಇರುವ  ದೇಶವನ್ನು ಮತ್ತೆ ಹೊಸದಾಗಿ ಕಟ್ಟುವ ಬೆಟ್ಟದಂತಹ ಕೆಲಸ ಅವರ ಮುಂದಿದೆ. ಆಪ್ತರ ಹೊರತಾಗಿ ಎನ್‌ಎಲ್‌ಡಿಯ ಇತರರಿಗೆ ಅಧ್ಯಕ್ಷರ ಸ್ಥಾನ ವಹಿಸುವುದೂ ಸೂಕಿ ಅವರನ್ನು ಅಧಿಕಾರದಿಂದ ದೂರ ಇಡುತ್ತದೆ. ಅಲ್ಲದೇ ಬೇರೆ ಯಾರೇ ಅಧ್ಯಕ್ಷರಾದರೂ ದೇಶ ಕಟ್ಟುವ ಈ ಕೆಲಸದಲ್ಲಿ ಸೂಕಿ ಅವರಿಗೆ ಬಯಸಿದ ಬೆಂಬಲ ಸಿಗಲಾರದು. 

ಈ ಅಪಾಯವನ್ನೂ ಅವರು ಗ್ರಹಿಸಿದಂತಿದೆ. ಹೀಗಾಗಿ ತಾವು ಸೂಚಿಸಿದಂತೆ ನಡೆಯುವ ಕೈವ್‌ ಅವರನ್ನು ಅಧ್ಯಕ್ಷರ ಸ್ಥಾನದಲ್ಲಿ ಕೂರಿಸಲು ಅವರು ಮುಂದಾಗಿದ್ದಾರೆ. ಆದರೆ ಸೂತ್ರವನ್ನು ತಾವೇ ಹಿಡಿದಿದ್ದಾರೆ. ಇದರಿಂದ ದೇಶದ ಸಂವಿಧಾನವನ್ನೂ ಪಾಲಿಸಿದಂತಾಗುತ್ತದೆ ಜತೆಗೆ ಅಧಿಕಾರ ಪಡೆದಂತೆಯೂ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT