ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಕಸಿಯದಿರಿ

ಐಪಿಸಿ ಸೆಕ್ಷನ್‌ 124 (ಎ) ವಿವಾದ
Last Updated 11 ಮಾರ್ಚ್ 2016, 19:55 IST
ಅಕ್ಷರ ಗಾತ್ರ

ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಘಟನೆಗಳನ್ನು ಕಂಡಿದ್ದೇವಷ್ಟೆ. ಭಾರತೀಯ ದಂಡ ಸಂಹಿತೆಯ 124ಎ ಕಲಂನ ವಾಕ್‌ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ (ಭಾರತದ ಸಂವಿಧಾನದ ಮೂರನೇ ಭಾಗದಲ್ಲಿ ಇರುವ) ಅಂತಸ್ಸತ್ವವನ್ನೇ ಹತ್ತಿಕ್ಕುವುದರ ಮೇಲೆ ಈ ಘಟನೆಗಳು ಬೆಳಕು ಚೆಲ್ಲಿವೆ. ಜೆಎನ್‌ಯುನ ಕನ್ಹಯ್ಯಾ ಕುಮಾರ್‌ ಹಾಗೂ ಉಮರ್‌ ಖಾಲಿದ್‌ ಮೇಲೆ ಮಾಡಿರುವ ಆರೋಪಗಳು ರಾಷ್ಟ್ರದ್ರೋಹ ವರ್ಸಸ್‌ ಮುಕ್ತ ವಾಕ್‌ ಸ್ವಾತಂತ್ರ್ಯ ಕುರಿತ ಚರ್ಚೆಗೆ ಮತ್ತೆ ಗ್ರಾಸ ನೀಡಿವೆ. ಈ ವಿದ್ಯಾರ್ಥಿಗಳು ಮಾಡಿರುವ ಭಾಷಣಗಳು ದೇಶದ್ರೋಹಿ ಅಂಶಗಳನ್ನು ಒಳಗೊಂಡಿದ್ದವೇ ಅಥವಾ ಈ ದೇಶದ ನಾಗರಿಕರಾಗಿ ಅವರು ದೇಶದ್ರೋಹದ ಆರೋಪ ಸುತ್ತಿಕೊಂಡೀತೆಂಬ ಆತಂಕವಿಲ್ಲದೆ ವಾಕ್‌ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಅನುಭವಿಸಬಹುದೇ ಎನ್ನುವ ಪ್ರಶ್ನೆ ಸುತ್ತ ವಿವಾದ ಗಿರಕಿ ಹೊಡೆಯುತ್ತಿದೆ.

ದೇಶದ್ರೋಹದ ಆರೋಪ ನಿಜಕ್ಕೂ ಗಂಭೀರವಾದುದು. ಇದರ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ದೇಶದ್ರೋಹದ ಬಗೆಗಿನ ಕಾನೂನನ್ನು ಹಾಗೂ ಅದರ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ದೇಶದ್ರೋಹ ಕುರಿತ ಕಾನೂನುಗಳು, ಅದರಲ್ಲೂ ವಿಶೇಷವಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 124ಎ ವಸಾಹತುಶಾಹಿ ಕಾಲದ ಕಾನೂನುಗಳ ರೂಪುರೇಷೆಯನ್ನು ಹೊಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಇದನ್ನು ಮುಕ್ತ ವಾಕ್‌ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಬಳಸಿಕೊಳ್ಳುತ್ತಿವೆ. ಇಂಗ್ಲೆಂಡ್‌ನಲ್ಲಿ ಭಿನ್ನಮತವನ್ನು ಉಡುಗಿಸಲು ದೇಶದ್ರೋಹದ ಕಾನೂನನ್ನು ಬಹಳ ಹಿಂದೆ ಜಾರಿಗೆ ತಂದರು. ಬ್ರಿಟಿಷ್‌ ವಸಾಹತುಗಳು ಅದಕ್ಕೆ ಕಠೋರ ರೂಪ  ನೀಡಿದವು. ಭಾರತವೂ ಸೇರಿದಂತೆ ತಮ್ಮ ವಸಾಹತುಗಳಲ್ಲಿ ಏಳುತ್ತಿದ್ದ ರಾಷ್ಟ್ರೀಯತೆಯ ದನಿಯನ್ನು ಇಲ್ಲವಾಗಿಸುವುದು ಬ್ರಿಟಿಷ್‌ ಸಾಮ್ರಾಜ್ಯಶಾಹಿಗಳ ಉದ್ದೇಶವಾಗಿತ್ತು. 

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಮೊದಲು ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್‌, ಆ್ಯನಿ ಬೆಸೆಂಟ್‌ ಅವರಂಥವರು ಈ ಕಾನೂನಿನ ಕೂರಂಬಿಗೆ ಸಿಲುಕಿದವರಾಗಿದ್ದರು. ವಸಾಹತು ಆಡಳಿತ ಮುಗಿದ ಮೇಲೂ ಈ ಕಾನೂನುಗಳು ಉಳಿದುಕೊಂಡಿರುವುದು ಪರಿಸ್ಥಿತಿಯ ವ್ಯಂಗ್ಯ. ಅವು ಮಾಧ್ಯಮಗಳು, ಮಾನವ ಹಕ್ಕು ಹೋರಾಟಗಾರರು ಹಾಗೂ ದೇಶದಾದ್ಯಂತ ಇರುವ ಚಿಂತಕರ ದನಿ ಅಡಗಿಸಲು ಪದೇ ಪದೇ ಬಳಕೆಯಾಗುತ್ತಲೇ ಇವೆ.
ಯಾರ ಮೇಲೆ ದೇಶದ್ರೋಹದ ಆರೋಪ ಹೊರಿಸಬಹುದು ಎನ್ನುವುದನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 124ಎ ಹೀಗೆ ವಿವರಿಸುತ್ತದೆ: ‘ಯಾರೇ ಆಗಲಿ ಮಾತು ಅಥವಾ ಬರಹದ ಮೂಲಕ ಅಥವಾ ಸಂಕೇತಗಳ ಮೂಲಕ ಅಥವಾ ದೃಗ್ಗೋಚರ ಪ್ರಾತಕ್ಷಿಕೆಗಳಿಂದ ಭಾರತದಲ್ಲಿ ಆಡಳಿತದಲ್ಲಿರುವ ಸರ್ಕಾರ ಜಾರಿಗೆ ತಂದ ಕಾನೂನುಗಳನ್ನು ವಿರೋಧಿಸುವುದು ಅಥವಾ ಅದಕ್ಕೆ ಪ್ರಯತ್ನಿಸುವುದನ್ನು ಹಾಗೂ ನಿಂದಿಸುವುದನ್ನು ಮಾಡುವಂತಿಲ್ಲ’.

ದೇಶದ್ರೋಹದ ಅಪರಾಧವು ಎರಡು ಅಂಶಗಳಿಂದ ನಿರ್ಧಾರಿತವಾಗುತ್ತದೆ. ಒಂದು, ಭಾರತ ಸರ್ಕಾರಕ್ಕೆ ಅಗೌರವ ತೋರಿಸುವಂಥ ವಿರೋಧಿ ಧೋರಣೆ ತೋರುವುದು ಅಥವಾ ಅದಕ್ಕೆ ಕುಮ್ಮಕ್ಕು ಕೊಡುವುದು. ಇನ್ನೊಂದು, ಅಂಥ ವರ್ತನೆ ಅಥವಾ ಯತ್ನಗಳನ್ನು ಮಾತು, ಬರಹ ಅಥವಾ ಸಂಕೇತಗಳಿಂದ ಮಾಡುವುದು.

ಸೆಕ್ಷನ್‌ 124ಎ ಕುರಿತು ಮೊದಲು ದಾಖಲಾಗಿ, ಚರ್ಚಿತವಾದ ಪ್ರಕರಣಗಳಲ್ಲಿ  1962ರ ‘ಕೇದಾರನಾಥ್‌ ವರ್ಸಸ್ ಯೂನಿಯನ್‌ ಆಫ್‌ ಇಂಡಿಯಾ’ ಪ್ರಮುಖವಾದುದು. ಆ ಪ್ರಕರಣದಲ್ಲಿ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು ಹೀಗೆ ಹೇಳಿತ್ತು: ‘ಸರ್ಕಾರದ ಯಾವುದಾದರೂ ಕ್ರಮವನ್ನು ಕಟುವಾದ ಮಾತಿನಲ್ಲಿ ಅನುಮೋದಿಸಿಯೂ, ಅದು ಜನರನ್ನು ಹಿಂಸೆಗೆ ಪ್ರಚೋದಿಸದೇ ಇದ್ದರೆ ಶಿಕ್ಷಾರ್ಹವಲ್ಲ’. ಆಗ ಆ ಪೀಠವು ಇನ್ನೂ ಮುಂದುವರಿದು, ‘ಸರ್ಕಾರದ ನಡೆಯ ಕುರಿತು ಮಾತಿನ ಮೂಲಕ ಅಥವಾ ಬರಹದ ಮೂಲಕ ಟೀಕೆ ಟಿಪ್ಪಣಿ ಮಾಡುವ ಸ್ವಾತಂತ್ರ್ಯ ನಾಗರಿಕರಿಗೆ ಇದೆ. ಅದು ಜನರಲ್ಲಿ ಹಿಂಸೆಗೆ ಪ್ರಚೋದಿಸುವಂತೆ ಇರಬಾರದಷ್ಟೆ’ ಎಂದೂ ಸ್ಪಷ್ಟಪಡಿಸಿತ್ತು.

‘ಬಲವಂತ್‌ ಸಿಂಗ್‌ ವರ್ಸಸ್ ಸ್ಟೇಟ್‌ ಆಫ್‌ ಪಂಜಾಬ್‌’ ಇನ್ನೊಂದು ಆಸಕ್ತಿಕರ ಪ್ರಕರಣ. ಇಂದಿರಾ ಗಾಂಧಿ ಹತ್ಯೆಯ ನಂತರ ‘ಖಾಲಿಸ್ತಾನ್‌ ಜಿಂದಾಬಾದ್‌’, ‘ರಾಜ್‌ ಕರೇಗಾ ಖಾಲ್ಸಾ’ ಎಂಬ ಘೋಷಣೆಗಳನ್ನು ಕೂಗಿದ ಕೆಲವರ ಮೇಲೆ ರಾಷ್ಟ್ರದ್ರೋಹದ ಆರೋಪ ಹೊರಿಸಲಾಯಿತು. ಈ ಪ್ರಕರಣದಲ್ಲಿ ರಾಷ್ಟ್ರದ್ರೋಹಕ್ಕೆ ಕಾರಣವಾದ ಅಂಶಗಳು ಇಲ್ಲವೆಂಬ ತೀರ್ಮಾನಕ್ಕೆ ಸುಪ್ರೀಂಕೋರ್ಟ್‌ ಬಂದಿತು. ಈ ಘೋಷಣೆಗಳನ್ನು ಕೆಲವು ಬಾರಿ ಅಷ್ಟೇ ಕೂಗಿದ್ದು, ಸಿಖ್‌ ಸಮುದಾಯ ಹಾಗೂ ಮತ್ತಿತರ ಸಮುದಾಯಗಳ ಯಾರೂ ಇದರಿಂದ ಪ್ರಚೋದನೆಗೆ ಒಳಗಾಗಲಿಲ್ಲ ಎಂದು ಕೋರ್ಟ್‌ ಅಭಿಪ್ರಾಯಕ್ಕೆ ಬಂದಿತು. ಇದು ಸರ್ಕಾರಕ್ಕೆ ಅಗೌರವ ತೋರುತ್ತಾ, ಜನರನ್ನು ರೊಚ್ಚಿಗೆಬ್ಬಿಸುವ ಕೃತ್ಯವೇನೂ ಅಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿತು.

124ಎ ಪ್ರಕಾರ ದೇಶ ದ್ರೋಹ ಸಾಬೀತಾದರೆ ಜೀವಾವಧಿ ಶಿಕ್ಷೆ ನೀಡಬಹುದಾದ್ದರಿಂದ ಇದು ಯಾರದ್ದಾದರೂ ಮೇಲೆ ಹೊರಿಸಬಹುದಾದ ಸಣ್ಣ ಆರೋಪವಲ್ಲ. ಈ ಆರೋಪದ ಗಾಂಭೀರ್ಯವನ್ನು ಗಮನದಲ್ಲಿ ಇಟ್ಟುಕೊಂಡೇ ನ್ಯಾಯಾಲಯಗಳು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುತ್ತಾ ಬಂದಿವೆ. ಹಿಂಸೆಗೆ ಪ್ರಚೋದಿಸದೆ ಸರ್ಕಾರವನ್ನು ಟೀಕಿಸುವುದು ತಪ್ಪಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಸಂವಿಧಾನದ 19 (1)(ಎ) ವಿಧಿಯು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಅದನ್ನು ತಡೆಯುವ ಯತ್ನಗಳು ನಡೆದರೆ ಈ ವಿಧಿಯೇ ಅರ್ಥ ಇಲ್ಲದಂತಾಗುತ್ತದೆ.

ಜೆಎನ್‌ಯು ಪ್ರಕರಣದಲ್ಲಿ ಕನ್ಹಯ್ಯಾ ಕುಮಾರ್‌ ಹಾಗೂ ಉಮರ್‌ ಖಾಲಿದ್‌ ಹಿಂಸೆ ಪ್ರಚೋದಿಸುವ ಘೋಷಣೆಗಳನ್ನು ಕೂಗಿಲ್ಲ. ಸರ್ಕಾರವನ್ನು ನಿಂದಿಸುವ ಅಥವಾ ವಿರೋಧಿ ಹೇಳಿಕೆಗಳನ್ನೂ ನೀಡಿಲ್ಲ. ಕೆಲವರು ಆ ಭಾಷಣಗಳನ್ನು ಸರ್ಕಾರವನ್ನು ಟೀಕಿಸುವಂಥವು ಎಂದು ಹೇಳಿದ್ದಾರೆ. ಅದು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ.

ನ್ಯಾಯಾಲಯಗಳೇ ವಾಕ್‌ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯರಕ್ಷಿಸುವುದರಲ್ಲಿ ಗಟ್ಟಿ ನಿಲುವು ಹೊಂದಿರುವಾಗ, ಸರ್ಕಾರ ಹಾಗೂ ಪೊಲೀಸರೂ ಈ ಸಾಂವಿಧಾನಿಕ ರಕ್ಷಣೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವದ ಹೆಮ್ಮೆಯಾಗಿ ಟೀಕೆ–ಟಿಪ್ಪಣಿಗಳು ಒದಗಿಬಂದಿವೆ. ಅವುಗಳ ಕಾರಣಕ್ಕೆ ಒಂದು ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವುದು ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT