ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸೆಗೆ ತಿರುಗಿದ ‘ಮೈಸೂರು ಬಂದ್‌’

ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ಪ್ರಕರಣ
Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಮೈಸೂರು: ಪಕ್ಷದ ಕಾರ್ಯಕರ್ತ ರಾಜು (33) ಹತ್ಯೆ ಖಂಡಿಸಿ ಬಿಜೆಪಿ ಸೋಮವಾರ ಕರೆ ನೀಡಿದ್ದ  ‘ಮೈಸೂರು ಬಂದ್‌’ ಹಿಂಸಾ ರೂಪಕ್ಕೆ ತಿರುಗಿತು. ಆಟೊ, ದ್ವಿಚಕ್ರ ವಾಹನ ಭಸ್ಮವಾಗಿದ್ದು, ಹಲವು ವಾಹನಗಳು ಜಖಂಗೊಂಡಿವೆ. ಪರಿಸ್ಥಿತಿ ಉದ್ವಿಗ್ನವಾಗಿದೆ.

ಬಂದ್‌ನಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಬೆಳಿಗ್ಗೆ 8 ಗಂಟೆಗೆ ಬೀದಿಗಿಳಿದ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ನಗರ ಬಸ್‌ ನಿಲ್ದಾಣದಿಂದ ಬಸ್‌ಗಳು ಹೊರಬರದಂತೆ ಸಯ್ಯಾಜಿರಾವ್‌ ರಸ್ತೆಯಲ್ಲಿ ಧರಣಿ ಕುಳಿತರು. ಬಳಿಕ ಗ್ರಾಮಾಂತರ ಬಸ್‌ ನಿಲ್ದಾಣಕ್ಕೆ ತೆರಳಿ ಬಸ್‌ ಸಂಚಾರ ಸ್ಥಗಿತಕ್ಕೆ ಯತ್ನಿಸಿದರು. ಆಗ ನಡೆದ ಕಲ್ಲು ತೂರಾಟದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೊ ಸೇರಿದಂತೆ ಮೂರು ಬಸ್‌ಗಳ ಗಾಜುಗಳು ಪುಡಿಯಾದವು.

ಪ್ರತಿಭಟನಾಕಾರರು ದ್ವಿಚಕ್ರ ವಾಹನಗಳಲ್ಲಿ ವಿವಿಧೆಡೆ ತೆರಳಿ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದರು. ಹೀಗಾಗಿ ಕೆ.ಆರ್‌ ವೃತ್ತ, ಸಯ್ಯಾಜಿರಾವ್‌ ರಸ್ತೆ, ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಇರ್ವಿನ್‌ ರಸ್ತೆ ಸೇರಿದಂತೆ ವಿವಿಧ ರಸ್ತೆಗಳು ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಬಿಕೋ ಎನ್ನುತ್ತಿದ್ದವು. ದೇವರಾಜ ಹೂ ಮತ್ತು ಹಣ್ಣಿನ ಮಾರುಕಟ್ಟೆಗೆ ನುಗ್ಗಿದ ಗುಂಪೊಂದು ಮಳಿಗೆಗಳ ಮೇಲೆ ದಾಳಿ ನಡೆಸಿತು.
ಲಘು ಲಾಠಿ ಪ್ರಹಾರ: ವಿವಿಧ ರಸ್ತೆಗಳಲ್ಲಿ ಗುಂಪು ಗುಂಪಾಗಿ ಸಾಗಿದ ಪ್ರತಿಭಟನಾಕಾರರು ಬೆಳಿಗ್ಗೆ 11.30ರ ಸುಮಾರಿಗೆ ರಾಜು ಶವಪರೀಕ್ಷೆ ನಡೆಯುತ್ತಿದ್ದ ಶವಾಗಾರಕ್ಕೆ ನುಗ್ಗಲು ಯತ್ನಿಸಿದರು. ಈ ಪ್ರಯತ್ನ ವಿಫಲಗೊಳಿಸಿದ ಪೊಲೀಸರು ಲಾಠಿ ಬೀಸಿ ಎಲ್ಲರನ್ನು ಚದುರಿಸಿದರು. ಅಲ್ಲದೆ, ಸುಮಾರು 300 ಮಂದಿ ಏಕಾಏಕಿ ಮಂಡಿಮೊಹಲ್ಲಾದ ಗಲ್ಲಿಗಳಿಗೆ ನುಗ್ಗಿ ಭೀತಿ ಸೃಷ್ಟಿಸಿದರು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಕೆ.ಟಿ ಸ್ಟ್ರೀಟ್‌ಗೆ ನುಗ್ಗುತ್ತಿದ್ದ ಗುಂಪನ್ನು ತಡೆದರು. ರಸ್ತೆಗೆ ಅಡ್ಡವಾಗಿ ಗಸ್ತು ವಾಹನ ‘ಗರುಡಾ’ವನ್ನು ನಿಲ್ಲಿಸಿದರು. ಇದರಿಂದ ಕೆರಳಿದ ಗುಂಪು ‘ಗರುಡಾ’ ವಾಹನವನ್ನು ಜಖಂಗೊಳಿಸಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮತ್ತೆ ಲಘು ಲಾಠಿ ಪ್ರಹಾರ ನಡೆಸಿದರು. ಶವಾಗಾರದ ಎದುರು ಧರಣಿ ನಡೆಸುತ್ತಿದ್ದ ಗುಂಪೊಂದು ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ನಾಲ್ವರ ಮೇಲೆ ಹಲ್ಲೆ ನಡೆಸಿತು.

ಆಟೊ, ಬೈಕ್‌ ಭಸ್ಮ: ಮಧುಮೇಹದಿಂದ ಬಳಲುತ್ತಿದ್ದ ತಂದೆ ಗಫಾರ್‌ ಬೇಗ್‌ ಅವರನ್ನು ಗೌಸಿಯಾನಗರದ ನಿವಾಸಿ ನೂರುಲ್ಲಾ ಎಂಬುವವರು ತಮ್ಮ ಆಟೊದಲ್ಲಿ ಕೆ.ಆರ್‌. ಆಸ್ಪತ್ರೆಗೆ ಕರೆತಂದಿದ್ದರು. ಮಧ್ಯಾಹ್ನ 2.10ರ ಸುಮಾರಿಗೆ ಆಸ್ಪತ್ರೆ ಆವರಣಕ್ಕೆ ನುಗ್ಗಿದ ಗುಂಪು  ಆಟೊಗೆ ಬೆಂಕಿ ಹಚ್ಚಿತು. ಎನ್‌.ಆರ್‌ ಮೊಹಲ್ಲಾದ ಶಿವಾಜಿ ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಿದ್ದ ಬೈಕ್‌ಗೂ ಬೆಂಕಿ ಹಚ್ಚಿತು. 

ನಿಷೇಧ ಇದ್ದರೂ ಮೆರವಣಿಗೆ: ನಿಷೇಧಾಜ್ಞೆ ನಡುವೆಯೂ ಬಿಜೆಪಿ ಮುಖಂಡರು ರಾಜು ಶವವನ್ನು ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರದಿಂದ ಕ್ಯಾತಮಾರನಹಳ್ಳಿಗೆ ಮೆರವಣಿಗೆಯಲ್ಲಿ ಕೊಂಡೊಯ್ದರು. ಅಲ್ಲಿ ರಾಜು ನಿವಾಸದ ಎದುರು ಶವವನ್ನು ಅಂತಿಮ ದರ್ಶನಕ್ಕೆ ಇಟ್ಟ ವೇಳೆ ಕಲ್ಲುತೂರಾಟ ನಡೆಯಿತು. ಆಗ ಪೊಲೀಸರು ಲಾಠಿ ಬೀಸಿ ಪರಿಸ್ಥಿತಿ ನಿಯಂತ್ರಿಸಿದರು. ಬಿಗಿ ಭದ್ರತೆಯಲ್ಲಿ ಕ್ಯಾತಮಾರನಹಳ್ಳಿ ರುದ್ರಭೂಮಿಯಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು.

ಎಸಿಪಿ ನೇತೃತ್ವದ ತಂಡ:  ಹತ್ಯೆ ತನಿಖೆಯನ್ನು ನಗರ ಅಪರಾಧ ವಿಭಾಗಕ್ಕೆ (ಸಿಸಿಬಿ) ವಹಿಸಲಾಗಿದೆ. ದುಷ್ಕರ್ಮಿಗಳ ಪತ್ತೆಗೆ ಎಸಿಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕ್ಯಾತಮಾರನಹಳ್ಳಿಯ ವಿವಾದಿತ ಸ್ಥಳದಲ್ಲಿ ನಿರ್ಮಾಣವಾಗಿರುವ ‘ಅಲಿಮ್‌ ಸಾದಿಯಾ ಅರೆಬಿಕ್‌ ಶಾಲೆ’ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲಾಗಿದೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಜಿಲ್ಲಾಧಿಕಾರಿ ಸಿ. ಶಿಖಾ ಸೂಚಿಸಿದ್ದಾರೆ.

ರೌಡಿಶೀಟರ್‌ ಪಟ್ಟಿಯಲ್ಲಿ: ‘ಭಾನುವಾರ ಹಗಲೇ ಹತ್ಯೆಯಾದ ರಾಜು ಅವರ ಹೆಸರು ರೌಡಿ ಪಟ್ಟಿಯಲ್ಲಿತ್ತು. ಕೋಮು ಭಾವನೆಗೆ ಧಕ್ಕೆ ಉಂಟು ಮಾಡುತ್ತಿದ್ದ ಆರೋಪದ ಮೇಲೆ ಉದಯಗಿರಿ ಠಾಣೆಯಲ್ಲಿ 2011ರಲ್ಲಿಯೇ ಅವರನ್ನು ರೌಡಿಪಟ್ಟಿಗೆ ಸೇರಿಸಲಾಗಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ವೃತ್ತಿಯಲ್ಲಿ ವಿದ್ಯುತ್‌ ಗುತ್ತಿಗೆದಾರರಾಗಿದ್ದ ರಾಜು, ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದರು. ಯುವತಿಯೊಬ್ಬಳ ವಿಚಾರಕ್ಕೆ ಸಂಬಂಧಿಸಿದಂತೆ ಈಚೆಗೆ ಎರಡು ಗುಂಪುಗಳ ನಡುವೆ ಗಲಾಟೆ ಕೂಡ ನಡೆದಿತ್ತು. ಹೀಗಾಗಿ, ಹಲವು ದಿಕ್ಕುಗಳಿಂದ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

 ರಾಜು ಅಂತ್ಯಕ್ರಿಯೆ ಮುಗಿಸಿ ರುದ್ರಭೂಮಿಯಿಂದ ವಾಪಸಾಗುತ್ತಿದ್ದವರ ಮೇಲೆ ಕಲ್ಲುತೂರಾಟ ನಡೆಯಿತು.

ಕಿಡಿಗೇಡಿಗಳ ಗಡಿಪಾರು 
ನವದೆಹಲಿ: ಮೈಸೂರಿನಲ್ಲಿ ಮತೀಯ ಸಾಮರಸ್ಯ ಕದಡಿದ ಕಿಡಿಗೇಡಿಗಳನ್ನು ಗಡಿಪಾರು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಹೇಳಿದರು.

‘ಮೈಸೂರಿನ ಘಟನೆ ದುರದೃಷ್ಟಕರ. ಗಲಭೆ ಹರಡಲು ಅವಕಾಶ ಕೊಡುವುದಿಲ್ಲ. ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜು ಕೊಲೆಗೆ ಕಾರಣವೇನೆಂದು ತಿಳಿದಿಲ್ಲ. ಏನೇ ಕಾರಣ ಇರಲಿ, ಹತ್ಯೆ ಆರೋಪಿಗಳನ್ನು ಕೂಡಲೇ ಬಂಧಿಸಲಾಗುವುದು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೆಲವು ಸಂಘಟನೆಗಳು ಪರಿಸ್ಥಿತಿ ಲಾಭ ಪಡೆಯಲು ಯತ್ನಿಸುತ್ತಿವೆ. ಅದಕ್ಕೆ ಅವಕಾಶ ಕೊಡುವುದಿಲ್ಲ. ಗಲಭೆ, ಲೂಟಿಯಲ್ಲಿ ಭಾಗಿಯಾದ ಸಮಾಜಘಾತುಕರನ್ನು ಪತ್ತೆ ಹಚ್ಚಿ ಗಡಿಪಾರು ಮಾಡಲಾಗುವುದೆಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸರ್ಕಾರಿ ಪರಿಹಾರಕ್ಕೆ ಶಿಫಾರಸು
ಮೃತ ರಾಜು ಕುಟುಂಬಕ್ಕೆ ಬಿಜೆಪಿ ₹ 5 ಲಕ್ಷ, ಹೋಟೆಲ್‌ ಉದ್ಯಮಿ ರಾಜೇಂದ್ರ ₹ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಬಿಜೆಪಿ ರಾಜ್ಯ ಘಟಕದ ವಕ್ತಾರ ಸಿ.ಟಿ. ರವಿ ಹಾಗೂ ಸಂಸದ ಪ್ರತಾಪಸಿಂಹ ಅವರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ₹ 5 ಲಕ್ಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT