ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ತಿನ್ನುವ ಚಟವೇ? ವೇಗವಾಗಿ ನಡೆಯಿರಿ...

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಕೆಲ ಮಹಿಳೆಯರಿಗೆ ಯಾವಾಗಲೂ ತಿನ್ನುತ್ತಾ ಇರಬೇಕು ಎನ್ನಿಸುತ್ತದೆ. ತೂಕ ಕಮ್ಮಿ ಮಾಡಿಕೊಳ್ಳುವ ಆಸೆ ಇದ್ದರೂ ತಿನ್ನುವುದನ್ನು ಬಿಡಲಾಗುವುದಿಲ್ಲ.

ಇಂಥವರು ತಮ್ಮಿಷ್ಟದ ತಿಂಡಿ ಎದುರಿಗಿದ್ದರೂ ಎಷ್ಟು ಬೇಕು ಅಷ್ಟು ಮಾತ್ರ ಸೇವಿಸಿ ತೂಕದ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳಬಹುದು? ತುಂಬಾ ವರ್ಷಗಳಿಂದ ಅಮೆರಿಕದ ಲಾಫ್‌ಬೋರೊ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ಕಾಡುತ್ತಿದ್ದ ಈ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದಾರೆ. ಅದೇನೆಂದರೆ ಮಹಿಳೆಯರು ಹೆಚ್ಚಿನ ವ್ಯಾಯಾಮ ಅಥವಾ ವೇಗದ ನಡಿಗೆ ಮಾಡಬೇಕು ಎನ್ನುವುದು.

ವ್ಯಾಯಾಮ ಅಥವಾ ನಡಿಗೆಯಿಂದ ತೂಕ ಕಮ್ಮಿ ಮಾಡಿಕೊಳ್ಳಬಹುದು ಎಂಬ ಅಂಶ ಎಲ್ಲರಿಗೂ ತಿಳಿದದ್ದೇ. ಆದರೆ ಈ ಸಂಶೋಧನೆಯಿಂದ ಕಂಡುಬಂದ ವಿಷಯ ಏನೆಂದರೆ ಪದೇ ಪದೇ ತಿನ್ನಲು ಹಂಬಲಿಸುವವರು ಕೂಡ ವ್ಯಾಯಾಮ ಮಾಡುವುದರಿಂದ ಕಡಿಮೆ ತಿನ್ನುವಂತಾಗುತ್ತಾರೆ ಎಂಬುದು. ಈ ಸತ್ಯವನ್ನು ವಿಜ್ಞಾನಿಗಳು ಕಂಡುಕೊಂಡಿದ್ದು 12 ಮಹಿಳೆಯರನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ. ಈ ಮಹಿಳೆಯರ ಪೈಕಿ ಕೆಲವರು ಡಯೆಟ್‌ ಮಾಡುವವರಿದ್ದರೆ, ಇನ್ನು ಕೆಲವರು ಹೇಗೆ ಬೇಕೋ ಹಾಗೆ ತಿನ್ನುವವರು ಇದ್ದರು. ಮತ್ತೆ ಕೆಲವರು ವ್ಯಾಯಾಮ ಸರಿಯಾಗಿ ಮಾಡುವವರು ಇದ್ದರು.

ಈ ಎಲ್ಲ ಮಹಿಳೆಯರನ್ನು ಒಟ್ಟಿಗೆ ಸೇರಿಸಿ ಅವರಿಗೆ ಯಾವುದೇ ರೀತಿ ವ್ಯಾಯಾಮಕ್ಕೆ ಅವಕಾಶ ನೀಡದೇ ಪಥ್ಯಾಹಾರ ನೀಡಲಾಯಿತು. ಆಹಾರವನ್ನು 836 ಕ್ಯಾಲೊರಿಗಳಿಗೆ ಸೀಮಿತ ಮಾಡಲಾಗಿತ್ತು. ಮಹಿಳೆಯರ ಅರಿವಿಗೆ ಬಾರದೇ ಈ ಆಹಾರ ನೀಡಲಾಗುತ್ತಿತ್ತು. ಕೆಲ ದಿನಗಳ ನಂತರ ಎಲ್ಲ ಮಹಿಳೆಯರ ತೂಕ ಅಳೆಯಲಾಯಿತು. ಒಂದು ಹಂತದ ಪ್ರಯೋಗ ಇಲ್ಲಿಗೆ ಮುಗಿಯಿತು.

ಎರಡನೇ ಹಂತದಲ್ಲಿ, ಈ ಮಹಿಳೆಯರಿಗೆ ಪ್ರತಿದಿನ 90ನಿಮಿಷಗಳ ಕಾಲ ಥ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡಿಸಲಾಯಿತು. ಈ ವ್ಯಾಯಾಮದಿಂದ ಪ್ರತಿದಿನ 836 ಕ್ಯಾಲೊರಿ ಕರಗಿಸುವ ರೀತಿ ಥ್ರೆಡ್‌ಮಿಲ್‌ ಅನ್ನು ನಿಗದಿ ಮಾಡಲಾಗಿತ್ತು. ವ್ಯಾಯಾಮದ ನಂತರ ಪ್ರತಿದಿನವೂ ಇಷ್ಟ ಪಟ್ಟಷ್ಟು ಆಹಾರ ಸೇವಿಸುವಂತೆ ಹೇಳಲಾಯಿತು. ಕೆಲ ದಿನಗಳ ನಂತರ ಎಲ್ಲರ ತೂಕವನ್ನು ಪುನಃ ಅಳೆಯಲಾಯಿತು. ಇಲ್ಲಿಗೆ ಎರಡನೆಯ ಹಂತವೂ ಮುಗಿಯಿತು.

ಎರಡೂ ಹಂತಗಳಲ್ಲಿ ತೂಕದ ಪ್ರಮಾಣ ಗಮನಿಸಿದಾಗ ಸಂಶೋಧಕರಿಗೆ ಅಚ್ಚರಿಯಾಯಿತು. ಏಕೆಂದರೆ ಮೊದಲ ಹಂತದಲ್ಲಿ ಪಥ್ಯಾಹಾರ ಮಾತ್ರ ನೀಡಲಾಗಿದ್ದರೂ, ಎರಡನೆಯ ಹಂತದಲ್ಲಿ ಬೇಕೆನಿಸುವಷ್ಟು ಆಹಾರ ನೀಡಲಾಗಿದ್ದರೂ ಮಹಿಳೆಯರು ಎರಡನೇ ಹಂತದಲ್ಲಿಯೇ ಕಡಿಮೆ ಆಹಾರ ಸೇವನೆ ಮಾಡಿದ್ದರು. ಮೊದಲ ಹಂತದಲ್ಲಿ 944ಕ್ಯಾಲೊರಿ ಆಹಾರ ಸೇವಿಸಿದ್ದರೆ ವ್ಯಾಯಾಮದ ನಂತರದ ಎರಡನೇ ಹಂತದಲ್ಲಿ ತಿಂದದ್ದು ಕೇವಲ 660 ಕ್ಯಾಲೊರಿ ಆಹಾರ!

‘ಪುರುಷರಿಗೂ ಇದು ಅನ್ವಯ ಆದರೂ ಮಹಿಳೆಯರ ದೇಹ ರಚನೆಯನ್ನು ಪುರುಷರಿಗೆ ಹೋಲಿಸಿದಾಗ ಮಹಿಳೆಯರಿಗೆ ಇಂಥ ವ್ಯಾಯಾಮದ ಅಗತ್ಯವಿದೆ. ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ತಿನ್ನುವ ಆಸೆಯಾಗುವ ಕಾರಣ, ಅವರಲ್ಲಿ ಬೊಜ್ಜು ಹೆಚ್ಚುವುದು. ಆದ್ದರಿಂದ ಇಂಥ ಪ್ರಯೋಗಕ್ಕೆ ಅವರು ಒಡ್ಡಿಕೊಳ್ಳುವುದು ಅಗತ್ಯ’ ಎನ್ನುತ್ತಾರೆ ವಿಶ್ವವಿದ್ಯಾಲಯದ ಡಾ. ಡೇವಿಡ್‌ ಸ್ಟೆನ್ಸೆಲ್‌. ಅವರು ಈ ಅಧ್ಯಯನದ ನೇತೃತ್ವ ವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT