ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನು–ಕೃಷಿಯಲ್ಲಿ ಯಶ ಕಂಡ ಸುನಂದಾ ಸೋಗಿ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಮಾಡುವ ಮನಸ್ಸಿದ್ದರೆ, ಜೊತೆಗೊಂದಿಷ್ಟು ಉತ್ಸಾಹವಿದ್ದರೆ ಮಹಿಳೆ ಮನೆ ಒಳ ಹೊರಗೂ ಸಮರ್ಥವಾಗಿ ನಿಭಾಯಿಸಬಲ್ಲಳು ಎಂಬುದಕ್ಕೆ ಉದಾಹರಣೆ ಹುಬ್ಬಳ್ಳಿಯ ಅಮರಗೋಳದ ಕೃಷಿ ಮಹಿಳೆ ಸುನಂದಾ ವಿರೂಪಾಕ್ಷಪ್ಪ ಸೋಗಿ.

ಇವರ ದುಡಿಮೆ ಬೆಳಿಗ್ಗೆ ಮನೆ ಬಿಟ್ಟರೆ ಸಂಜೆಯೊಳಗೆ ಮನೆ ಸೇರುವಂಥದ್ದಲ್ಲ; ಅದು ನಸುಕಿನಿಂದ ರಾತ್ರಿವರೆಗಿನ ನಿರಂತರ ದುಡಿಮೆ. ಮನೆಯ ಒಳ ಬಿಟ್ಟರೆ ಕೊಟ್ಟಿಗೆ, ಎರಡು ಕಿ.ಮೀ. ದೂರದ ಏಳೂವರೆ ಎಕರೆ ಹೊಲ ಇವರ ಕಾಯಕ ಕ್ಷೇತ್ರ. ಅದರಿಂದಲೇ ಚೆಲುವಾದ ಬದುಕು. ಅತ್ತೆ, ಮಾವ, ಗಂಡ, ಮೂವರು ಮಕ್ಕಳ ಜೊತೆಗಿನ ಸಂತೃಪ್ತ ಜೀವನ.

ಸುನಂದಾ ಅವರ ಕೃಷಿ ಕಾಯಕ, ಹೈನುಗಾರಿಕೆ ನಿರ್ವಹಣೆ ಪರಿಗಣಿಸಿ ಕಳೆದ ಸೆಪ್ಟೆಂಬರ್‌ನಲ್ಲಿ ಧಾರವಾಡದಲ್ಲಿ ನಡೆದ ಕೃಷಿ ಮೇಳದಲ್ಲಿ ಕೃಷಿ ವಿಶ್ವವಿದ್ಯಾಲಯವು ‘ಶ್ರೇಷ್ಠ ಯುವ ಕೃಷಿ ಮಹಿಳೆ’ ಪುರಸ್ಕಾರ ನೀಡಿ ಗೌರವಿಸಿದೆ. ಅವರ ಸಾಧನೆ ಕಾಣಲು ಅವರ ಮನೆಯ ಕೊಟ್ಟಿಗೆ, ಹೊಲಕ್ಕೇ ಹೋಗಬೇಕು.

ಕೃಷಿ ಕುಟುಂಬದಲ್ಲೇ ಜನಿಸಿದ್ದರಿಂದ ಗಂಡನ ಮನೆಯಲ್ಲಿ ಕೃಷಿ ಕೆಲಸಕ್ಕೆ ಒಗ್ಗಿಕೊಳ್ಳಲು ಸುನಂದಾ ಅವರಿಗೆ ಕಷ್ಟವೆನಿಸಲಿಲ್ಲ. ಪಿಯುಸಿ ಓದಿರುವ ಅವರು ಕೃಷಿ ಕುರಿತ ಬರಹಗಳನ್ನು ಹೈನುಗಾರಿಕೆ, ಕೃಷಿಯಲ್ಲಿ ಅಳವಡಿಸಿಕೊಂಡರು. ಹೈನುಗಾರಿಕೆ ಮತ್ತು ಹೊಲದಲ್ಲಿ ಕೃಷಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದನ್ನು ಬಿಟ್ಟು ಇನ್ನೊಂದಿಲ್ಲ ಎಂಬ ಸತ್ಯ ಅರಿತಿರುವ ಅವರು ಎರಡನ್ನೂ ಸಮವಾಗಿ ತೂಗಿಸಿಕೊಂಡು ಹೋಗುತ್ತಿದ್ದಾರೆ.

ಈಗವರ ಕೊಟ್ಟಿಗೆಯಲ್ಲಿ ನಾಲ್ಕು ಎಚ್‌ಎಫ್‌ ಆಕಳು, ಒಂದು ಎಮ್ಮೆ, ಐದು ಕರುಗಳು ಇದ್ದು, ಎರಡು ಹೊತ್ತಿನಿಂದ 20 ಲೀಟರ್‌ ಹಾಲು ಹಿಂಡುತ್ತಾರೆ. ಮನೆಗೆ ಬಳಸಿಕೊಂಡು ಉಳಿದದ್ದನ್ನು ಡೇರಿಗೆ ಹಾಕುತ್ತಾರೆ. ಸೆಗಣಿಯಿಂದ ಮನೆಗೆ ಗೋಬರ್‌ ಗ್ಯಾಸ್‌ ವ್ಯವಸ್ಥೆ ಹೊಂದಿದ್ದಾರೆ. ಒಂದಷ್ಟು ಸೆಗಣಿಯನ್ನು ಭರಣಿ ತಟ್ಟಿ ಸ್ನಾನಕ್ಕಾಗಿ ಒಲೆಗೆ ಒಟ್ಟಲು ಬಳಸುತ್ತಾರೆ. ಒಟ್ಟಿನಲ್ಲಿ ಇವರಿಗೆ ಒಲೆ ಉರಿಸಲು ಕಟ್ಟಿಗೆಯ ಪ್ರಮೇಯವೇ ಇಲ್ಲ. ಹೈನುಗಾರಿಕೆಯಿಂದ ಲಭ್ಯ ಗೊಬ್ಬರವನ್ನು ತಮ್ಮದೇ ಹೊಲಕ್ಕೇ ಸಂಪೂರ್ಣವಾಗಿ ಬಳಸಿಕೊಳ್ಳುತ್ತಾರೆ.

ಅದೇ ರೀತಿ ಹೊಲದಲ್ಲಿ ಕೂಡ ಒಂದೇ ಕೃಷಿ ಬೇಸಾಯವನ್ನು ನೆಚ್ಚಿಕೊಂಡಿಲ್ಲ. ಕುಸುಬಿ, ಹತ್ತಿ, ಗೋಧಿ, ಕಡಲೆ, ಗೋವಿನ ಜೋಳ, ಹೆಸರು, ಉದ್ದು, ಆಲೂಗಡ್ಡೆ, ಕಾಯಿಪಲ್ಲೆ ಬೆಳೆಯುತ್ತಾರೆ. ಅಡುಗೆಗಾಗಿ ಅಗತ್ಯ ಎಲ್ಲ ತರಕಾರಿಗಳನ್ನೂ ಮನೆಯಲ್ಲೇ ಬೆಳೆದುಕೊಂಡು, ಮಾರುಕಟ್ಟೆಗೂ ಹಾಕುತ್ತಾರೆ.

ಜೋಳದ ದಂಟು, ಹೊಟ್ಟುಗಳನ್ನು ದನ–ಕರುಗಳಿಗೆ ಮೇವಾಗಿ ಬಳಸುತ್ತಾರೆ. ಅವರ ಮನೆ ಹಿಂದೆ ಮನೆ ಎತ್ತರದಷ್ಟು ಮೇವಿನ ಮೂರು ಬಣವಿಗಳು ಇವೆ. ಅವರ ಹೈನುಗಾರಿಕೆಗೆ ಅವು ಒಂದು ವರ್ಷದ ಮೇವು. ಕುಸುಬಿ ಎಣ್ಣೆಯನ್ನು ಮನೆ ಬಳಕೆಗಾಗುವಷ್ಟು ಬಳಸಿಕೊಂಡು ಉಳಿದ ಎಣ್ಣೆಯನ್ನು ಮಾರುತ್ತಾರೆ. ಅದರಿಂದ ಬರುವ ಹಿಂಡಿ ಹಾಲು ಹಿಂಡುವ ಆಕಳಿಗೆ ಆಹಾರ.

ಅವರ ಕೃಷಿ ಮಳೆಯಾಧಾರಿತವಾದ್ದರಿಂದ ಮಳೆ ಕೈಕೊಟ್ಟರೆ ಕೃಷಿಯಲ್ಲಿ ಹಿನ್ನಡೆ. ಆದ್ದರಿಂದ ಅವರೀಗ ತಮ್ಮ ಜಮೀನಿನಲ್ಲಿ ಕೃಷಿ ಭಾಗ್ಯ ಹೊಂಡ ನಿರ್ಮಿಸುವ ಚಿಂತನೆಯಲ್ಲಿದ್ದಾರೆ. ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನೂ ಅಳವಡಿಸಿಕೊಂಡಿದ್ದಾರೆ.

ಕೃಷಿ ಕಾಯಕವನ್ನು ಸುನಂದಾ ಅವರು ಪತಿ ವಿರೂಪಾಕ್ಷಪ್ಪ ಸೋಗಿ ಜೊತೆಗೂಡಿ ನಿರ್ವಹಿಸುತ್ತಾರೆ. ಆಗಾಗ ಹೊಸ ಹೊಸ ಕೃಷಿ ಪ್ರಯೋಗಗಳನ್ನು ಅಳವಡಿಸಿಕೊಳ್ಳುತ್ತಾರೆ.
ಸಂಪರ್ಕಕ್ಕೆ:  9481728391.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT