ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿರಾಕಲ್ ಗಾರ್ಡನ್’ ಮರಳುಗಾಡಿನ ನಂದನ

Last Updated 12 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ದುಬೈನಲ್ಲಿನ ‘ಮಿರಾಕಲ್‌ ಗಾರ್ಡನ್‌’ ವಿಶ್ವದ ಅತಿ ದೊಡ್ಡ ‘ಹೂವುಗಳ ಉದ್ಯಾನ’. ಸೌಂದರ್ಯ ಜಗತ್ತಿನ ಬಣ್ಣ–ಬೆರಗುಗಳೆಲ್ಲ ಈ ಉದ್ಯಾನದಲ್ಲಿ ಒಟ್ಟಾಗಿ ಮೇಳೈಸಿದಂತಿದೆ.

ಮರುಭೂಮಿ, ಮಳೆ ಬೀಳದ ಪ್ರದೇಶ ಎನ್ನುವ ತನ್ನ ಕೊರತೆಗಳನ್ನು ಮರೆಸುವಂತೆ– ವಿಶ್ವದ ಅತಿ ಎತ್ತರದ ಕಟ್ಟಡ, ವಿಶ್ವದ ಅತಿ ಎತ್ತರದ ಹೋಟೆಲ್‌, ಮಾನವ ನಿರ್ಮಿತ ದ್ವೀಪಗಳಲ್ಲಿಯೇ ಅತ್ಯಂತ ದೊಡ್ಡದಾದ ‘ಪಾಮ್‌ ಐಲ್ಯಾಂಡ್‌’ ನಿರ್ಮಾಣದ ಖ್ಯಾತಿಯನ್ನು ದುಬೈ ತನ್ನದಾಗಿಸಿಕೊಂಡಿದೆ. ಕಲ್ಪನೆಯನ್ನು ಸಾಕಾರಗೊಳಿಸುವ ಕಾರ್ಯಕ್ಷಮತೆಯೊಂದಿಗೆ, ಮನುಷ್ಯನ ಸಾಧ್ಯತೆಗಳನ್ನು ಈ ವಾಸ್ತುಶಿಲ್ಪಗಳಲ್ಲಿ ಅಗಾಧವಾಗಿ ವಿಸ್ತರಿಸಲಾಗಿದೆ. ಮರುಭೂಮಿಯಲ್ಲಿ ಹಿಮದಲ್ಲಿ ಜಾರುವ ಕ್ರೀಡೆ, ಸ್ಕೀಯಿಂಗ್‌ ಆಡಬಹುದಾದ ಹಿಮದ ರೆಸಾರ್ಟ್‌ ನಿರ್ಮಿಸಿ ವೈರುಧ್ಯದ ಒಂದು ತುದಿಯನ್ನು ತಲುಪಿರುವ ಅವರು, ವಿಶ್ವದ ಅತಿದೊಡ್ಡ ಹೂವುಗಳ ಉದ್ಯಾನವನವನ್ನು ನಿರ್ಮಿಸಿ ಪವಾಡ ಸೃಷ್ಟಿಸಿದ್ದಾರೆ.

ಎಲ್ಲಿ ನೋಡಿದರೂ ತಾಜಾ ಹೂಗಳು! ಬುಟ್ಟಿ ತುಂಬಾ ಹೂ, ಹೂವಿನ ಕಮಾನುಗಳು, ಹೂವಿನ ಗಡಿಯಾರ, ಹೂವಿನ ಮನೆಗಳು, ಹೂವಿನ ಹಡಗು, ಕಾರು, ಸೈಕಲ್, ಸ್ವಚ್ಛ ಕೊಳದ ನಡುವೆ ಕಾರಂಜಿ, ಸುತ್ತಲೂ ಹೂವುಗಳ ರಾಶಿ... ಅದೊಂದು ವರ್ಣನಾತೀತ ಹೂಗಳ ಲೋಕ. ವಿವಿಧ ಬಣ್ಣಗಳ ಪಿಟೋನಿಯ ಮತ್ತು ಜಿರೇನಿಯಮ್‌ಗಳು ಅಲ್ಲಿ ಹೆಚ್ಚು. ಹಲವು ದೇಶಗಳ ವಿಸ್ಮಯಕಾರಿ ಹೂಗಳೂ ಅಲ್ಲಿವೆ. ಆದರೆ, ಒಂದೇ ಒಂದು ಕಳೆ, ಕಸ, ಬಾಡಿದ ಹೂಗಳು, ಕಳಿತ ಎಲೆ– ಯಾವುದೂ ಅಲ್ಲಿಲ್ಲ. ಎಲ್ಲವೂ ತಾಜಾ ಹೂಗಳು, ನಳನಳಿಸುವ ಹೂಗಿಡಗಳು.

ಮಿರಾಕಲ್ ಗಾರ್ಡನ್‌! ಹೆಸರೇ ಸೂಚಿಸುವಂತೆ ಇದೊಂದು ಅದ್ಭುತ. ಕಣ್ಮನಗಳನ್ನು ತಣಿಸುವ ಹೂರಾಶಿಯ ನಂದನವನ. ಇಲ್ಲಿಯ ಪ್ರಸಿದ್ಧ ತಾಣವಾದ ‘ಅರೇಬಿಯನ ರಾಂಚಸ್’ ಬಳಿಯ ದುಬೈ ಲ್ಯಾಂಡ್ ಎಂಬಲ್ಲಿ 72 ಸಾವಿರ ಚದರ ಮೀಟರ್‌ ಜಾಗದಲ್ಲಿ ಈ ಉದ್ಯಾನವನ ಹರಡಿಕೊಂಡಿದೆ. 4 ಕಿಮೀ ವ್ಯಾಪ್ತಿಯುಳ್ಳ ಕಾಲುದಾರಿ ಹೊಂದಿರುವ ಈ ಉದ್ಯಾನವನದಲ್ಲಿ ಕಣ್ಣಿಗೆ ನಿಲುಕುವವರೆಗೂ ಕಾಣುವ  ಹೂಗಳು. ಎಲ್ಲಿ ನೋಡಿದರೂ ಬಣ್ಣಗಳು. ಫೆಬ್ರುವರಿ 14, 2013ರ ‘ಪ್ರೇಮಿಗಳ ದಿನ’ದಂದು ಉದ್ಘಾಟನೆಗೊಂಡ ಈ ಉದ್ಯಾನವನ ಮರುಭೂಮಿಯಲ್ಲಿನ ಓಯಸಿಸ್‌ನಂತಿದೆ. ಕೇವಲ ಗಗನಚುಂಬಿ ಕಟ್ಟಡಗಳ ನಗರ ದುಬೈ ಎಂಬುದಕ್ಕೆ ಅಪವಾದವೆನ್ನುವಂತೆ ‘ಮಿರಾಕಲ್ ಗಾರ್ಡನ್‌’ ಸೃಷ್ಟಿಯಾಗಿದೆ.

ನೀರೇ ಇಲ್ಲದ ಮರುಭೂಮಿಯಲ್ಲಿ ‘ಅಕ್ಬರ್ ಲ್ಯಾಂಡ್ ಸ್ಕೇಪಿಂಗ್ ಅಂಡ್ ಅಗ್ರಿಕಲ್ಚರಲ್ ಕಂಪೆನಿ’ಯು ಪವಾಡದ ರೀತಿಯಲ್ಲಿ ಸೃಷ್ಟಿಸಿರುವ ಈ ಉದ್ಯಾನವನಕ್ಕೆ ಇಟ್ಟ ಹೆಸರು ಅನ್ವರ್ಥಕವಾಗಿದೆ. 45 ದಶಲಕ್ಷ ಹೂಗಳು ಇಲ್ಲಿವೆ ಎಂದು ಅಂದಾಜು ಮಾಡಲಾಗಿದೆ. ಬೇರೆ ಬೇರೆ ಋತುಗಳಲ್ಲಿ ಬೇರೆ ಬೇರೆ ರೀತಿಯ ಹೂಗಳನ್ನಿಲ್ಲಿ ಬೆಳೆಸುತ್ತಾರೆ. ಹೃದಯದ ಆಕಾರ, ನಕ್ಷತ್ರದಾಕಾರ, ಪಿರಮಿಡ್, ವಿವಿಧ ಅಂತಸ್ತುಗಳಲ್ಲಿ ಸಿಂಗಾರಗೊಂಡ ಹೂಗಳು, ಎರಡು ಬದಿಗಳಲ್ಲಿ ಹೂಗಳಿಂದ ನಿರ್ಮಿತವಾದ ಗೋಲಗಳು, ಕಾಲುದಾರಿಯಲ್ಲಿ ಬಣ್ಣಬಣ್ಣದ ಹೂಗಳ ಚಪ್ಪರ ಹಾಗೂ ಹೂಗಳಲ್ಲಿ ಮಿಂದೆದ್ದ ವಿಂಟೇಜ್ ಕಾರುಗಳು... ವೈವಿಧ್ಯಮಯ ಆಕಾರಗಳಲ್ಲಿ ಹೂಗಳನ್ನು ಬೆಳೆಸಲಾಗಿದೆ.

ವಿಶ್ವದ ವಿವಿಧ ದೇಶಗಳಿಂದ ಇಲ್ಲಿಗೆ ಹೂಗಿಡಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಹೂಗಳ ಜಲಪಾತ, ದೈತ್ಯಾಕಾರದ ಹೂನವಿಲುಗಳು, ಅತಿದೊಡ್ಡ ಗಡಿಯಾರ, ತಲೆಕೆಳಗಾಗಿ ನಿಂತ ಮನೆ, ಕಾರುಗಳು, 18 ಮೀಟರ್‌ ಎತ್ತರದ ಬುರ್ಜ್‌ ಖಲೀಫಾದ ಪ್ರತಿಕೃತಿ, ರೈಲು, ವಿಂಡ್‌ಮಿಲ್‌, ಐಫೆಲ್‌ ಟವರ್‌ ಮುಂತಾದ ಹಲವು ವೈಶಿಷ್ಠ್ಯಗಳು ಇಲ್ಲಿವೆ. ಇಲ್ಲಿನ ಹೂಗಳೆಲ್ಲ ಹಲವು ದಿನಗಳ ಕಾಲ ಅರಳಿ ಸುವಾಸನೆ ಹೊಮ್ಮಿಸುವ ಸಾಮರ್ಥ್ಯ ಹೊಂದಿದೆ. ಸರ್ವೇಸಾಧಾರಣ ಹೂಗಳಿಂದ ಹಿಡಿದು ಏಷಿಯಾ ಮತ್ತು ದಕ್ಷಿಣ ಅಮೆರಿಕದ ಕಾಡುಗಳಲ್ಲಿ ಕಂಡುಬರುವ ಅಪರೂಪದ ಹೂಗಳನ್ನಿಲ್ಲಿ ಬೆಳೆಸಲಾಗಿದೆ.

11 ದಶ ಲಕ್ಷ ಡಾಲರ್‌ ವೆಚ್ಚದಲ್ಲಿ ರೂಪುಗೊಂಡಿರುವ ಈ ಉದ್ಯಾನವನದ ನಿರ್ಮಾಣದಲ್ಲಿ ಅತ್ಯುತ್ತಮ ಸಸ್ಯಶಾಸ್ತ್ರಜ್ಞರು, ತೋಟಗಾರರು ಮತ್ತು ಪರಿಸರ ಜ್ಞಾನವುಳ್ಳವರು ಶ್ರಮಿಸಿದ್ದಾರೆ. ಮಿರಾಕಲ್‌ ಗಾರ್ಡನ್‌ಗೆ ಪ್ರತಿನಿತ್ಯ 7 ಲಕ್ಷ 57 ಸಾವಿರ ಲೀಟರ್‌ ನೀರಿನ ಅಗತ್ಯವಿದೆ. ಸಮುದ್ರದ ಉಪ್ಪುನೀರಿನ ಲವಣದ ಅಂಶವನ್ನು ಸೋಸಿ ಕುಡಿಯುವ ನೀರನ್ನು ತಯಾರಿಸಿಕೊಳ್ಳುವ ದುಬೈನಲ್ಲಿ ನೀರು ಪೆಟ್ರೋಲಿಗಿಂತಲೂ ದುಬಾರಿ. ಆದರೂ ಕಣ್ಣಿಗೆ ಕಾಣದಂತೆ ನೆಲದಡಿಯಲ್ಲಿ ಹನಿನೀರಾವರಿ ಪೈಪ್‌ಗಳನ್ನು ಅಳವಡಿಸಿದ್ದಾರೆ. ತ್ಯಾಜ್ಯ ನೀರಿನ ಮರುಬಳಕೆಯನ್ನಿಲ್ಲಿ ಮಾಡಲಾಗಿದೆ. 

‘ಮಿರಾಕಲ್ ಗಾರ್ಡನ್‌’ನ ಮತ್ತೊಂದು ವಿಶೇಷ ಎಂದರೆ ಹೂಗಳಿಂದ ಆವೃತವಾದ ಅತ್ಯಂತ ಉದ್ದದ ಗೋಡೆ. ಉದ್ಯಾನವನವನ್ನು ಸುತ್ತುವರೆದಿರುವ ಒಂದು ಕಿ.ಮೀ ವ್ಯಾಸದ ಹೂವಿನ ಗೋಡೆಯು ವಿಶ್ವದ ಅತಿ ದೊಡ್ಡ ಹೂವಿನ ಗೋಡೆ ಎನ್ನುವ ಖ್ಯಾತಿಗೊಳಗಾಗಿದೆ. ಮತ್ತೊಮ್ಮೆ ಮಗದೊಮ್ಮೆ ಆಗಮಿಸುವ ಪ್ರವಾಸಿಗರಿಗೆ ಸದಾ ಹೊಸತಾಗಿ, ತಾಜಾ ಆಗಿ ಕಾಣಿಸಬೇಕೆಂದು ಹೂವಿನ ಪ್ರದರ್ಶನವನ್ನಿಲ್ಲಿ ಆಗಾಗ ಬದಲಿಸುತ್ತಿರುತ್ತಾರೆ. ಆದರೆ ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ದುಬೈ ತಾಪಮಾನ ಅತ್ಯಧಿಕವಾಗಿರುವುದರಿಂದ ಪ್ರವಾಸಿಗರಿಗೆ ಉದ್ಯಾನವನಕ್ಕೆ ಪ್ರವೇಶವಿರುವುದಿಲ್ಲ.

ಇಲ್ಲಿ ಗಿಡಗಳನ್ನು ಬೆಳೆಸುವುದಷ್ಟೇ ಅಲ್ಲ, ಅದರ ನಿರ್ವಹಣೆ ಮತ್ತು ಸ್ವಚ್ಛತೆಯಲ್ಲೂ ಶಿಸ್ತು ಎದ್ದು ಕಾಣುತ್ತದೆ. ವೃದ್ಧರಿಗೆ ಮತ್ತು ನಡೆಯಲಾರದವರಿಗೆ ಸುತ್ತಾಡಲು ಪರಿಸರ ಸ್ನೇಹಿ ವಾಹನಗಳನ್ನು ಇಟ್ಟಿದ್ದಾರೆ. ಅವುಗಳಲ್ಲಿ ಕುಳಿತು ಇಡೀ ಉದ್ಯಾನವನವನ್ನು ಸುತ್ತಾಡಿ ಬರಬಹುದು. ‘ಮಿರಾಕಲ್ ಗಾರ್ಡನ್‌’ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಹಲವಾರು ಆಕರ್ಷಣೆಗಳನ್ನು ಸೇರಿಸಿದ್ದಾರೆ. ಸುಗಂಧ ಹೂಗಳ ಉದ್ಯಾನ, 15 ಮೀಟರ್‌ನ ಸಮಯವನ್ನು ತೋರಿಸುವ ಗಡಿಯಾರ, ಬಣ್ಣಗಳ ಛತ್ರಿಗಳನ್ನು ಅಳವಡಿಸಿರುವ ಕಾಲುದಾರಿ, ಚಿಟ್ಟೆಗಳ ಉದ್ಯಾನ, ಮುಂತಾದವು.

ಗಡಿಯಾರದ ಮೇಲೆ ದಿನಾಂಕವನ್ನೂ ನಮೂದಿಸಿದ್ದು, ತಾವು ಉದ್ಯಾನವನಕ್ಕೆ ಭೇಟಿ ನೀಡಿರುವ ಸಮಯ ಮತ್ತು ದಿನದ ನೆನಪಿಗೆ ಅದರ ಮುಂದೆ ಪ್ರವಾಸಿಗರು ಛಾಯಾಚಿತ್ರ ತೆಗೆಸಿಕೊಳ್ಳುತ್ತಾರೆ. ಚಿಟ್ಟೆಗಳ ಉದ್ಯಾನದಲ್ಲಿ 26 ಪ್ರಭೇದದ 15 ಸಾವಿರ ಚಿಟ್ಟೆಗಳಿವೆ. ನೀರಿಲ್ಲದ, ಬರಡಾದ ಮರಳಿನ ನೆಲದಲ್ಲಿ ಮಣ್ಣು, ಸಸ್ಯ, ನೀರನ್ನು ಬೇರೆಡೆಯಿಂದ ತಂದು ಸಹಜ ಸುಂದರ ಹೂಬನವನ್ನಾಗಿ ಪರಿವರ್ತಿಸಿರುವುದು ನಿಜಕ್ಕೂ ಪವಾಡವೇ. ಎಲ್ಲವೂ ಇದ್ದು, ಅದರ ಸದ್ಬಳಕೆ ಮಾಡಿಕೊಳ್ಳದಿರುವವರಿಗೆ ‘ಮಿರಾಕಲ್‌ ಗಾರ್ಡನ್‌’ ಪಾಠದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT