ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಕೊಟ್ಟು–ಪಡೆಯುವುದೇ ಜೀವನ...

Last Updated 10 ಮಾರ್ಚ್ 2016, 19:45 IST
ಅಕ್ಷರ ಗಾತ್ರ

ಶಿವರಾಜಕುಮಾರ್‌ ಅವರ ವೃತ್ತಿಬದುಕೀಗ ಮೂರು ದಶಕ ತುಂಬಿದೆ. ಐವತ್ತು ದಾಟಿದ ನಂತರವೂ ದೈಹಿಕವಾಗಿ ಹಾಗೂ ಮಾನಸಿಕವಾಗಿ ತಾರುಣ್ಯ ಉಳಿಸಿಕೊಂಡಿರುವ ಶಿವಣ್ಣ, ತಮ್ಮ ವೃತ್ತಿಬದುಕು ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.

* ಚಿತ್ರರಂಗಕ್ಕೆ ಬಂದು ಮೂರು ದಶಕಗಳಾದವು. ಒಬ್ಬ ಕಲಾವಿದನಾಗಿ ಇದೊಂದು ದೊಡ್ಡ ಸಾಧನೆ ಅಲ್ಲವೇ?
ಸಾಧನೆ ಅನ್ನುವುದಕ್ಕಿಂತ ಅದರ ಹಿಂದೆ ಇರುವ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅಪ್ಪ– ಅಮ್ಮ, ಕುಟುಂಬ, ಫ್ರೆಂಡ್ಸ್, ಸಹ ಕಲಾವಿದರು, ಚಿತ್ರೋದ್ಯಮದ ತಂತ್ರಜ್ಞರು, ಅಭಿಮಾನಿಗಳು ಎಲ್ಲ... ಹೀಗೆ. ನನ್ನ ಪಾಲಿಗೆ ಈ ಅವಕಾಶ ಸಿಕ್ಕಿದ್ದೇ ಅದೃಷ್ಟ. ಇತರ ಭಾಷೆಗಳ ಚಿತ್ರೋದ್ಯಮದ ನೈತಿಕ ಬೆಂಬಲವೂ ಸಿಕ್ಕಿದೆ. ಧನುಷ್‌ನಿಂದ ಹಿಡಿದು ಅಮಿತಾಭ್‌ವರೆಗೆ ಎಲ್ಲರ ಬೆಂಬಲ ಪಡೆದೆ. ಅದರಿಂದ ಇದೆಲ್ಲ ಆಯಿತು. ಮೂವತ್ತು ವರ್ಷ ಚಿತ್ರರಂಗದಲ್ಲಿ ಇರುವುದೇನೂ ಸುಲಭವಲ್ಲ. ನನ್ನ ಪಾಲಿಗೆ ಸಿಕ್ಕಿದ ಅವಕಾಶವದು. ಅದರ ಜತೆಗೆ, ನಾನು ಅವಕಾಶಗಳನ್ನು ಹೇಗೆ ಬಳಸಿಕೊಂಡೆ ಎಂಬುದರ ಮೇಲೆಯೂ ಈ ವೃತ್ತಿ ಜೀವನ ನಿಂತಿದೆ.

* ವೈವಿಧ್ಯಮಯ ಪಾತ್ರಗಳು ನಿಮ್ಮದಾದವು. ಅಂಥ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ ಇತ್ತೇ? ಅಥವಾ ಅವು ತಾವಾಗಿಯೇ ಒದಗಿಬಂದದ್ದೇ?
ಅದಕ್ಕೆಲ್ಲ ನನಗೆ ಸಿಕ್ಕ ನಿರ್ದೇಶಕರೇ ಕಾರಣ. ಸಿಂಗೀತಂ ಶ್ರೀನಿವಾಸ್ ಅವರಿಂದ ಹಿಡಿದು ವಿಜಯಾರೆಡ್ಡಿ, ನಾಗಾಭರಣ, ಉಪೇಂದ್ರ, ಪ್ರೇಮ್, ವರ್ಮಾ, ಪಿ. ವಾಸು, ಹರ್ಷ, ಕಬಡ್ಡಿ ಬಾಬು, ಯೋಗಿ ಇನ್ನಿತರ ನಿರ್ದೇಶಕರು ನನ್ನನ್ನು ನಾಯಕನನ್ನಾಗಿಸಿ ಸಿನಿಮಾ ಮಾಡಲು ಮುಂದಾಗಿದ್ದರಿಂದಲೇ ವಿವಿಧ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿತು. ಒಬ್ಬ ಕಲಾವಿದನಾಗಿ ಅಂಥ ವೈವಿಧ್ಯಮಯ ಪಾತ್ರಗಳು ನನಗೆ ಸಿಕ್ಕಿದ್ದು ಅದೃಷ್ಟ ಹಾಗೂ ಹೆಮ್ಮೆ ಮೂಡಿಸುವ ಸಂಗತಿ.

* ಹಿರಿಯ ನಿರ್ದೇಶಕರ ಸಿನಿಮಾಗಳಲ್ಲಿ ಕೆಲಸ ಮಾಡಿದ ನೀವು ಕಿರಿಯ ನಿರ್ದೇಶಕರ ಜತೆಗೂ ಕೆಲಸ ಮಾಡುತ್ತಿದ್ದೀರಿ. ಏನಾದರೂ ವ್ಯತ್ಯಾಸ ಕಾಣುತ್ತಿದೆಯೇ?
ಹಿರಿಯ ನಿರ್ದೇಶಕರ ಕಾರ್ಯವೈಖರಿಯೇ ಬೇರೆ ತರಹದ್ದು. ಈಗಿನ ಯುವ ನಿರ್ದೇಶಕರಿಗೆ ಬೇರೆಯದೇ ಆದ ದೂರದೃಷ್ಟಿ ಹಾಗೂ ಜಾಣ್ಮೆ ಎರಡೂ ಇವೆ. ಅವರು ಮೂವತ್ತು ವರ್ಷ ಅನುಭವವಿರುವ ನನ್ನಂಥ ಕಲಾವಿದನ ಜತೆ ಕೆಲಸ ಮಾಡುವ ಉದ್ದೇಶ ಹೊಂದಿದ್ದಾರೆ ಅಂದ ಮೇಲೆ ಅವರ ಮನಸ್ಸಿನಲ್ಲೇನೋ ಇದೆ. ಮನಸ್ಸು ಮಾಡಿದ್ದರೆ ಅದೇ ಪಾತ್ರಕ್ಕೆ ಅವರು ಪುನೀತ್, ದರ್ಶನ್, ಸುದೀಪ್, ಯಶ್ ಅವರನ್ನು ಹಾಕ್ಕೊಳ್ಳಬಹುದಿತ್ತು. ಆದರೆ ಶಿವಣ್ಣನನ್ನು ಯಾವ ರೀತಿ ತೋರಿಸಬಲ್ಲೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಅಂದರೆ ನಾನು ಅವರ ಮನಸ್ಸಿಗೆ ಮುಟ್ಟಿದ್ದೇನೆ ಎಂದರ್ಥ.

* ಯುವ ನಿರ್ದೇಶಕರ ಸಿನಿಮಾದಲ್ಲಿ ಅಭಿನಯಿಸುವಾಗ ಚಿತ್ರೀಕರಣದ ಸಮಯದಲ್ಲಿ ಏನಾದರೂ ಸಲಹೆ– ಸೂಚನೆ ಕೊಡುತ್ತೀರಾ?
ನಾನು ಕೂಡ ಒಬ್ಬ ಕಲಾವಿದ ತಾನೇ? ಏನಾದರೂ ತಪ್ಪು ಮಾಡಬಹುದಲ್ಲವೇ? ಹೀಗಾಗಿ ಸಂಶಯ ಇದ್ದಾಗ ನಾನು ಖಂಡಿತ ಕೇಳುತ್ತೇನೆ. ಚಿತ್ರೀಕರಣ ನಡೆಯುವಾಗ ಏನಾದರೂ ಸಣ್ಣಪುಟ್ಟ ತಪ್ಪುಗಳು ಕಂಡುಬಂದರೆ, ಅದನ್ನು ಅವರಿಗೆ ಹೇಳುತ್ತೇನೆ. ಅವರು ಅದನ್ನು ಸ್ವೀಕರಿಸುತ್ತಾರೆ. ಕೊಟ್ಟು–ತೆಗೆದುಕೊಳ್ಳುವುದೇ ಜೀವನ.

* ಹಿರಿ–ಕಿರಿಯರು ಎಂಬ ಭೇದ ಭಾವವಿಲ್ಲದೇ ಶಿವರಾಜಕುಮಾರ್ ಎಲ್ಲರ ಜತೆಗೂ ಹೊಂದಿಕೊಂಡು ಹೋಗುತ್ತಾರೆ ಎಂಬ ಮಾತು ಚಿತ್ರರಂಗದಲ್ಲಿದೆ...
ಬಹುಶಃ ನಮ್ಮನ್ನು ಬೆಳೆಸಿದ ವಿಧಾನ ಅದಕ್ಕೆ ಕಾರಣವಿರಬಹುದು. ಮನುಷ್ಯ ದೇಹ ಹುಳಿ, ಉಪ್ಪು, ಖಾರ ಎಲ್ಲದರ ರುಚಿ ನೋಡಿರುತ್ತದೆ. ಅದರಂತೆ ನನಗೂ ಒಮ್ಮೊಮ್ಮೆ ಸಿಟ್ಟು ಬರುತ್ತದೆ. ಆದರೆ ಅದು ಕೆಲವೇ ನಿಮಿಷ ಮಾತ್ರ ಇರುತ್ತದೆ. ಇವತ್ತು ನಾವಿಬ್ಬರು ಜಗಳವಾಡಿದೆವು ಎಂದುಕೊಳ್ಳೋಣ. ನಾಳೆ ನಿಮ್ಮ ಮುಖ ನಾವು ನೋಡಬೇಕು; ನನ್ನ ಮುಖ ನೀವು ನೋಡಬೇಕು, ಅಲ್ಲವೇ? ಮನುಷ್ಯ ತಪ್ಪು ಮಾಡುವುದು ಸಹಜ. ಅದನ್ನು ತಿದ್ದಿಕೊಂಡು, ಕ್ಷಮಿಸಿ– ಕ್ಷಮೆ ಯಾಚಿಸುವುದು ಒಳ್ಳೆಯ ಗುಣ. ಬರೀ ಖಾರ ಹಿಡಿದುಕೊಂಡೇ ಹೋದರೆ ಬದುಕು ರುಚಿಹೀನವಾಗಿರುತ್ತದೆ!

* ಕಮರ್ಷಿಯಲ್ ಹೊರತಾಗಿ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಚಿತ್ರಗಳಲ್ಲಿ ಅಭಿನಯಿಸಬೇಕು ಅನಿಸಿದೆಯೇ? ಉದಾಹರಣೆಗೆ ‘ಚಿಗುರಿದ ಕನಸು’...
ಖಂಡಿತ ಅನಿಸುತ್ತದೆ. ಶೀಘ್ರದಲ್ಲೇ ಶುರುವಾಗಲಿರುವ ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಅಂಥದೇ ಕಥೆ. ಯೋಗಿ ಅದರ ನಿರ್ದೇಶನ ಮಾಡುತ್ತಿದ್ದಾರೆ. ಮನುಷ್ಯನಿಗೆ ತನ್ನ ಮೂಲಬೇರುಗಳನ್ನು ತಡಕಾಡುವ ಯತ್ನ ಇರಬೇಕು. ಇವತ್ತಿನ ಬದುಕಷ್ಟೇ ಇಡೀ ಜೀವನ ಅಲ್ಲ. ಹಾಗಿದ್ದ ಮೇಲೆ ನಮ್ಮ ಬೇರುಗಳು ಎಲ್ಲಿವೆ? ಹುಡುಕಾಟದ ಪ್ರಯತ್ನ ಈ ಚಿತ್ರದಲ್ಲಿದೆ. ವಿದೇಶದಲ್ಲಿ ಓದಿ ಭಾರತಕ್ಕೆ ಬರುವ ಯುವಕ, ತನ್ನ ಮೂಲವನ್ನು ಹುಡುಕಿಕೊಂಡು ಹಳ್ಳಿಗೆ ಹೋಗುವುದು ಕಥೆಯ ಎಳೆ.

* ಸಿನಿಮಾಗಳಲ್ಲಿ ರೈತರನ್ನು ಹಾಡಿ ಹೊಗಳಲಾಗುತ್ತದೆ. ಆದರೆ ವಾಸ್ತವದಲ್ಲಿ ರೈತರ ಹೋರಾಟ ನಡೆದಾಗಲೆಲ್ಲ ಚಿತ್ರರಂಗದ ಗೈರುಹಾಜರಿ ಬಗ್ಗೆ ದೂರು ಕೇಳಿಬರುತ್ತಿದೆ...?
ಉಳಿದವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ ಒಂದು ಸಂಗತಿ ಹೇಳುತ್ತೇನೆ. ಬಾಲ್ಯದಲ್ಲಿ ನಮ್ಮನ್ನು ಅಪ್ಪಾಜಿ ಗಾಜನೂರಿಗೆ ಕರೆದುಕೊಂಡು ಹೋಗುತ್ತಿದ್ದರು. ರೈತರ ಜತೆ ಸೇರಿ ನಾನು ಹಲವು ಸಲ ಉಳುಮೆ ಮಾಡಿದ್ದೇನೆ, ಬಿತ್ತಿದ್ದೇನೆ. ರೈತರ ಸಂಕಷ್ಟದ ಬಗ್ಗೆ ನನಗೆ ಗೊತ್ತಿದೆ. ಆದರೆ ಇದು ಶಿವಣ್ಣನಿಗೊಬ್ಬನಿಗೇ ಸಂಬಂಧಿಸಿದ ವಿಷಯವಲ್ಲ.

ರಾಜ್ಯದ ಎಲ್ಲ ವರ್ಗಗಳ ಜನರೂ ಮಾತಾಡಬೇಕು. ಕೊನೆಗೆ ಸರ್ಕಾರ ಮಾತಾಡಬೇಕು. ರೈತರ ಹೋರಾಟಗಳಿಗೆ ಚಿತ್ರರಂಗ ಯಾವಾಗಲೂ ನೈತಿಕ ಬೆಂಬಲ ಕೊಡುತ್ತದೆ. ಆದರೆ ನಾವು ಅಂಥ ಹೋರಾಟಗಳಲ್ಲಿ ಪಾಲ್ಗೊಂಡಾಗ ನಮ್ಮನ್ನು ಸ್ಟಾರ್ ಥರ ನೋಡಬೇಡಿ. ಒಬ್ಬ ಸಾಮಾನ್ಯ ಮನುಷ್ಯನನ್ನಾಗಿ ನೋಡಿ. ಆಗ ಅದರ ಮೌಲ್ಯವೇ ಬೇರೆ ಆಗುತ್ತದೆ. ಇಡೀ ದೇಶಕ್ಕೇ ರೈತ ಬೆನ್ನೆಲುಬು. ಅವರ ಹೋರಾಟಕ್ಕೆ ನಾವು ಬೆಂಬಲ ಕೊಡದೇ ಇರುತ್ತೇವೆಯೇ?

* ಶೂಟಿಂಗ್ ಮಧ್ಯೆ ಸಿಗುವ ಸಮಯವನ್ನು ಹೇಗೆ ಕಳೆಯುತ್ತೀರಿ?
ಮಕ್ಕಳ ಜತೆ ಊರೂರು ಸುತ್ತುವುದು ನನಗೆ ಬಲು ಇಷ್ಟ. ಬೇರೆ ಬೇರೆ ತಿಂಡಿ ತಿನಿಸು ಸವಿಯುತ್ತೇನೆ. ಹೆಚ್ಚಾಗಿ ಕುಟುಂಬದ ಜತೆಗೇ ಟೈಮ್ ಪಾಸ್ ಮಾಡುತ್ತೇನೆ.

* ಐವತ್ತು ದಾಟಿದರೂ ಯುವಕನಂತೆಯೇ ಕಾಣುತ್ತೀರಿ. ದೈಹಿಕ ಕಸರತ್ತು ಮಾತ್ರ ಇದಕ್ಕೆ ಕಾರಣವೇ?
ಅದೊಂದೇ ಅಲ್ಲ. ನನಗೆ ಸಿಗುವ ನೈತಿಕ ಬೆಂಬಲವೇ ನಾನು ಹೀಗೆ ಇರಲು ಕಾರಣ. ಕೇವಲ ಜಿಮ್‌ನಲ್ಲಿ ಬೆವರಿಳಿಸಿ ದೇಹ ದಂಡಿಸಿಕೊಂಡರೆ ಒಂದಷ್ಟು ವರ್ಷ ಮಾತ್ರ ಮೈಕಟ್ಟು ಕಾಪಾಡಿಕೊಳ್ಳಬಹುದು. ಆದರೆ ನಾನು ನಂಬಿರುವುದು ‘ಪಾಸಿಟಿವ್ ಎನರ್ಜಿ’ಯನ್ನು. ಹಾಗಂದರೆ ಬೇರೇನಲ್ಲ; ಕುಟುಂಬದವರು, ಸ್ನೇಹಿತರು ಹಾಗೂ ನಾನು ಬದುಕುತ್ತಿರುವ ಈ ಸಮಾಜದಿಂದ ಸಿಗುವ ಎನರ್ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT