ಅದು ಜೋಕಟ್ಟೆಯ ಎಚ್‌ಪಿಸಿಎಲ್ ಪುನರ್ವಸತಿ ಕಾಲೊನಿ. ಅವರ ಹೆಸರು ಫೈರುನ್ನಿಸಾ. ನಿದ್ದೆ ಮಾಡದೆ ಎಷ್ಟೋ ದಿನಗಳಾದಂತಹ ಮುಖಭಾವ. ಎಂಟು ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ. ಆದರೆ ಕಳೆದ ವರ್ಷದಿಂದ ಅವರಿಗೆ ನಿದ್ದೆ ತುಂಬ ಕಡಿಮೆಯಾಗಿದೆ. ಕಾರಣ ಅವರ ಮನೆಯ ಕೇವಲ 15 ಮೀಟರ್ ದೂರದಲ್ಲಿ ಪೆಟ್ರೋಲಿಯಂ ಕೋಕ್ ಅನ್ನು ಟ್ರಕ್‌ಗಳಿಗೆ ತುಂಬಿಸಲಾಗುತ್ತಿದೆ. ದಿನವಿಡೀ ಅಸಾಧ್ಯವಾದ ಕೆಟ್ಟ ವಾಸನೆ. ಮನೆಯನ್ನು ದಿನಾ ಒರೆಸಿದರೂ ತುಂಬಿಕೊಳ್ಳುತ್ತಲೇ ಇರುವ ಕಪ್ಪು ಮಸಿ. ಮನೆಯ ಗೋಡೆಗಳ ತುಂಬ ಬಿರುಕುಗಳು. ಕಿವಿಗಡಚಿಕ್ಕುವ ಶಬ್ದ, ಮನೆ ಪಕ್ಕದ ಬಾವಿಯ ನೀರನ್ನೂ ಕುಡಿಯುವಂತಿಲ್ಲ.

ಅಲ್ಲೇ ಪಕ್ಕದ ಮನೆಯಲ್ಲಿ ಸುಮಾರು 80 ವರ್ಷದ ಟಿ.ಕೆ.ಅಹಮ್ಮದ್ ಕೆಮ್ಮುತ್ತಲೇ ಇದ್ದಾರೆ. ‘ನನ್ನ ಪಾಲಿಗೆ ಇದೇ ನರಕ. ಯಾವಾಗ ಜೀವ ಹೋಗುತ್ತದೋ ಎದುರು ನೋಡುತ್ತಿದ್ದೇನೆ. ಇವರು ಕೆಲಸ ನಿಲ್ಲಿಸುತ್ತಲೂ ಇಲ್ಲ, ಜೀವ ಹೋಗುತ್ತಲೂ ಇಲ್ಲ...’

ಸ್ವಲ್ಪ ಮುಂದಕ್ಕೆ ಚಲಿಸಿದರೆ ಜೋಕಟ್ಟೆಯ ನಿರ್ಮುಂಜೆ. ಅಲ್ಲಿನ ಮಹಮ್ಮದ್, ವಾರಿಜ, ಲಕ್ಷ್ಮಿ, ದೇವಕಿ ಅವರಿಗೆಲ್ಲ ಕಳೆದ ಒಂದು ವರ್ಷದಿಂದ ಒಂದಿಲ್ಲೊಂದು ಕಾಯಿಲೆ. ಕೆಮ್ಮು, ಉಬ್ಬಸವಂತೂ ಇದ್ದೇ ಇದೆ. ಪಕ್ಕದಲ್ಲೇ ಶೇಖರ್ ಅಂಚನ್ ಅವರ ಭವ್ಯ ಮನೆ. ನವ ಮಂಗಳೂರು ಬಂದರಿನಲ್ಲಿ ಉದ್ಯೋಗದಲ್ಲಿದ್ದ ಅವರು ಮೂರು ವರ್ಷಗಳ ಹಿಂದೆ ನಿವೃತ್ತಿ ವೇಳೆ ಸಿಕ್ಕಿದ ಹಣದಲ್ಲಿ ತಮ್ಮ ಮೂವರು ಮಕ್ಕಳಿಗೆಂದು ಮನೆ ಕಟ್ಟಿಸಿದ್ದರು. ಕಷ್ಟಪಟ್ಟು ದುಡಿದು ಮಾಡಿದ ಮನೆ ಈ ಸ್ಥಿತಿಗೆ ಬಂತಲ್ಲಾ ಎಂದು ಹಲುಬುವುದು ಬಿಟ್ಟರೆ ಅವರಿಗೆ ಬೇರೆ ದಾರಿಯೇ ಇಲ್ಲ. ಎಲ್ಲಿ ನೋಡಿದರಲ್ಲಿ ಕೋಕ್ ಮಸಿ. ಗಬ್ಬು ವಾಸನೆ. ಮನೆ ಮಾರೋಣ ಎಂದರೆ ಖರೀದಿಸುವವರೇ ಇಲ್ಲ.

ಜೋಕಟ್ಟೆ ಅರೆಕೆರೆ ವಿಜಯ ವಿಠಲ ಭಜನಾ ಮಂದಿರದ ಸಮೀಪ ಸುಶೀಲಾ ಅವರಿಗೆ ತೀವ್ರ ಸ್ವರೂಪದ ಚರ್ಮರೋಗ. ವರ್ಷದಿಂದೀಚೆ ಅಲರ್ಜಿಯಿಂದ ತುರಿಕೆ ಹೆಚ್ಚಾಗಿದೆಯಂತೆ. ಅಲ್ಲೇ ಸಮೀಪದ ಸರೋಜಾ, ಕೇಶವ, ಹೇಮಾ, ಗುಲಾಬಿ, ಶೋಭಿತಾ, ಜಾಕೋಬ್ ಅವರ ಮನೆಗಳಲ್ಲೆಲ್ಲ ಒಂದಲ್ಲ ಒಂದು ಸಮಸ್ಯೆ. ದಿನಾ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ. ಜೋಕಟ್ಟೆ ಪೇಜಾವರದ ಸೆಲ್ವಿಯಾ ಕಳೆದ ಒಂದು ವರ್ಷದಿಂದ ತೀವ್ರ ತಲೆನೋವು, ವಾಂತಿಯಿಂದ ಬಳಲುತ್ತಿದ್ದಾರೆ.

ದಿನಾ ಮಸಿಯ ಸ್ನಾನ. ಅವರ ಪಕ್ಕದ ಮನೆಯ ಮರಿಯಾ ಅವರಲ್ಲಿಗೆ ನೆಂಟರು ಬರುವುದೇ ಅಪರೂಪವಾಗಿಬಿಟ್ಟಿದೆಯಂತೆ. ಮಸಿ ಮಾಲಿನ್ಯದಿಂದ ರೋಸಿ ಹೋದ ಕೆಲವರು ಮನೆ ತೊರೆದಿದ್ದಾರೆ. ಇನ್ನೆಲ್ಲಿಯೋ ಬಾಡಿಗೆ ಮನೆಯಲ್ಲಿದ್ದಾರೆ. ಕೋಕ್, ಸಲ್ಫರ್ ಘಟಕದಿಂದ ಕೇವಲ 500 ಮೀಟರ್ ದೂರದಲ್ಲಿರುವ ನಿರ್ಮುಂಜೆ ಭಾಗದಲ್ಲಿ ಇಂತಹ ಹತ್ತಾರು ಮನೆಗಳನ್ನು ಕಾಣಬಹುದು.

ಕೆಲವು ತಿಂಗಳಿಂದೀಚೆಗೆ ಸ್ಥಾವರ ಪ್ರದೇಶದಲ್ಲಿ ಒಮ್ಮಿಂದೊಮ್ಮೆಲೆ ದೊಡ್ಡ ಶಬ್ದ ಕೇಳಿಸಿ ಬೆಂಕಿ ಮೇಲೇಳುತ್ತದೆ. ನಮ್ಮ ಎದೆಯೇ ಒಡೆದು ಹೋಗುವಂಥ ಸನ್ನಿವೇಶ. ಎರಡು, ಮೂರು ಬಾರಿ ಇಂತಹ ಘಟನೆ ನಡೆದಿದೆ. ನಮ್ಮ ಜೀವ, ಆಸ್ತಿಪಾಸ್ತಿಗೆ ಯಾವ ಹೊತ್ತಲ್ಲಿ ಅಪಾಯ ಉಂಟಾಗುತ್ತದೋ ಎಂಬ ಚಿಂತೆ ಕಾಡತೊಡಗಿದೆ ಎನ್ನುತ್ತಾರೆ ಬಿ.ಎಸ್.ಹುಸೇನ್.

ಮಂಗಳೂರು ನಗರದ ಹೊರವಲಯದ ಜೋಕಟ್ಟೆಯ ಸುಮಾರು 800 ಮನೆಗಳಲ್ಲೂ ಇಂತಹ ಒಂದಿಲ್ಲೊಂದು ಸಮಸ್ಯೆ. ಸದ್ಯ ಯಾವುದೇ ಕಾಯಿಲೆ ಇಲ್ಲ ಎಂದು ಹೇಳಿಕೊಂಡವರ ಮನೆಯಲ್ಲಾದರೂ ನೆಮ್ಮದಿ ಉಂಟೇ? ಅದೂ ಇಲ್ಲ. ಇಡೀ ಊರಿಗೇ ವ್ಯಾಪಿಸಿದ ದುರ್ವಾಸನೆಯಿಂದ ಯಾರೊಬ್ಬರೂ ಹೊರತಲ್ಲ. ದಿನವಿಡೀ ಕಿವಿಗಡಚಿಕ್ಕುವ ಶಬ್ದವನ್ನು ಕಿಟಕಿ ಮುಚ್ಚಿದರೂ ತಡೆಯಲು ಸಾಧ್ಯವಾಗುತ್ತಿಲ್ಲ.

ಒತ್ತೊತ್ತಾದ ಜನವಸತಿ ಪ್ರದೇಶ ಜೋಕಟ್ಟೆಯ ಸಮೀಪದಲ್ಲೇ ಮಂಗಳೂರು ರಿಫೈನರೀಸ್ ಆಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಕಂಪೆನಿಯ ಪೆಟ್ರೋಲಿಯಂ ಕೋಕ್ ಮತ್ತು ಸಲ್ಫರ್ ಘಟಕಗಳನ್ನು ಸ್ಥಾಪಿಸಿದ್ದರ ಫಲ ಇದು. ಇಲ್ಲಿ ಪೆಟ್‌ಕೋಕ್, ಸಲ್ಫರ್ ಉತ್ಪಾದನೆ ಆರಂಭವಾಗಿ ಒಂದೂವರೆ ವರ್ಷವಾಗುತ್ತ ಬಂದಿದೆ. ಜನರ ಸಮಸ್ಯೆಗಳ ಸರಮಾಲೆಗೂ ವರ್ಷ ಸಂದಿದೆ.

ಎಂಆರ್‌ಪಿಎಲ್‌ಗಾಗಿ ಸ್ವಾಧೀನಪಡಿಸಿಕೊಂಡ ನಿವೇಶನದಿಂದ ಹೊರಭಾಗದಲ್ಲಿ ಇರುವ ಇವರೆಲ್ಲ ನಿರ್ವಸಿತರಲ್ಲ. ಹೀಗಾಗಿ ಎಂಆರ್‌ಪಿಎಲ್ ಕಂಪೆನಿಯಲ್ಲಿ ಉದ್ಯೋಗ ಸಿಗಲಿಲ್ಲ. ಆದರೆ ಕಂಪೆನಿಯಿಂದ ನೇರ ದುಷ್ಪರಿಣಾಮ ಅನುಭವಿಸುವುದು ತಪ್ಪಲಿಲ್ಲ. ಪಕ್ಕದಲ್ಲೇ ಎಚ್‌ಪಿಸಿಎಲ್ ಪುನರ್ವಸತಿ ಪ್ರದೇಶ ಇದೆಯಲ್ಲ, ಅಲ್ಲಿನ ಜನರದು ದುಪ್ಪಟ್ಟು ತೊಂದರೆಯ ಬದುಕು. ಅವರಿಗೆ ಬಾಣಲೆಯಿಂದ ಬೆಂಕಿಗೆ ಬಿದ್ದ ಸ್ಥಿತಿ. ಎಚ್‌ಪಿಸಿಎಲ್ ಘಟಕಕ್ಕಾಗಿ ಭೂಮಿ ಕಳೆದುಕೊಂಡವರಿಗೆ ಇಲ್ಲಿ ನೆಲೆ ಕಲ್ಪಿಸಲಾಗಿತ್ತು. ಆದರೆ ಅಲ್ಲೇ ಪಕ್ಕದಲ್ಲಿ ಕೋಕ್ ಘಟಕ ಸ್ಥಾಪಿಸಿ ಅವರ ಜೀವನವನ್ನು ಸಂಪೂರ್ಣ ಬರಡಾಗಿ ಮಾಡಲಾಗಿದೆ.

ಜೋಕಟ್ಟೆ ಜನ ವರ್ಷದಿಂದೀಚೆಗೆ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಅವರ ನೋವನ್ನು ಕೇಳಿದವರೇ ಇಲ್ಲ. ತೀವ್ರ ಮಾಲಿನ್ಯ ಉಂಟುಮಾಡುವ ಕೋಕ್‌ನಂಥ ಸ್ಥಾವರವನ್ನು ಜನವಸತಿ ಪ್ರದೇಶದಿಂದ ದೂರದಲ್ಲಿ ಎಂಆರ್‌ಪಿಎಲ್‌ನ ಆವರಣದೊಳಗೆ ಸ್ಥಾಪಿಸುವ ಅವಕಾಶ ಇದ್ದರೂ ಅದನ್ನು ಮಾಡದೆ ಊರಿನ ಅಂಚಿಗೆ ತಂದು ಸ್ಥಾಪಿಸಿದ್ದು ಯಾಕಾಗಿಯೋ, ಹಲವು ವರ್ಷಗಳ ಮೇಲೂ ಉತ್ತರ ಸಿಗದ ಪ್ರಶ್ನೆ ಇದು.

ಎಂಆರ್‌ಪಿಎಲ್‌ನ ಯೋಜನೆಗಾಗಿ ಸುಮಾರು 3 ಸಾವಿರ ಎಕರೆ ಪ್ರದೇಶ ಸ್ವಾಧೀನ ಮಾಡಿಕೊಂಡಾಗ ತೀವ್ರ ಮಾಲಿನ್ಯ ಉಂಟುಮಾಡುವ ಕೋಕ್ ಘಟಕವನ್ನು ಜನವಸತಿ ಪ್ರದೇಶದ ಬಳಿಯಲ್ಲೇ ಸ್ಥಾಪಿಸಿದ್ದರ ಉದ್ದೇಶವೇನು? ಹಾಗಿದ್ದರೆ ಜನರನ್ನು ಅಲ್ಲಿಂದ ಒಕ್ಕಲೆಬ್ಬಿಸಿಲ್ಲ ಏಕೆ ಎಂಬುದೇ ಯಕ್ಷ ಪ್ರಶ್ನೆ. ‘ಜನರಿಗೆ ಹಾನಿ ಉಂಟುಮಾಡಬೇಕು ಎಂಬ ಉದ್ದೇಶದಿಂದ ಹೀಗೆ ಮಾಡಿಲ್ಲ, ಸಮಸ್ಯೆಗಳೇನೇ ಇದ್ದರೂ, ಅದನ್ನು ಬಗೆಹರಿಸುತ್ತೇವೆ’ ಎಂದು ಕಂಪೆನಿ ಹಿರಿಯ ಅಧಿಕಾರಿಯೊಬ್ಬರು ಭರವಸೆ ನೀಡುತ್ತಾರೆ. ‘ಕಂಪೆನಿ ಇಂತಲ್ಲೇ ಸ್ಥಾಪನೆಗೊಳ್ಳಬೇಕು ಎಂದು ಸೂಚಿಸುವ ಅಧಿಕಾರ ನಮಗೆ ಇಲ್ಲ, ಮಾಲಿನ್ಯ ಉಂಟಾದರೆ ಮಾತ್ರ ಕಂಪೆನಿಯನ್ನು ಪ್ರಶ್ನಿಸಬಹುದಷ್ಟೇ, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಬಹುದು’ ಎಂಬುದು ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರ ಪ್ರತಿಕ್ರಿಯೆ.

‘ಬೃಹತ್ ಕಂಪೆನಿಯ ಮುಂದೆ ಜನಸಾಮಾನ್ಯರ ನೋವು, ದುಮ್ಮಾನಕ್ಕೆ ಬೆಲೆ ಸಿಗುತ್ತಿರಲೇ ಇಲ್ಲ. ಮಾಡಿದ ಮನವಿಗಳಿಗೆ ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಥಳೀಯ ಜನಪ್ರತಿನಿಧಿಗಳು ಕಿವಿಗೊಡಲಿಲ್ಲ. ಆಗ ಜನರು ಸಂಘಟಿತರಾಗುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ. ಹೀಗಾಗಿಯೇ ಜೋಕಟ್ಟೆ ನಾಗರಿಕರ ಹೋರಾಟ ಸಮಿತಿ ರಚಿಸಬೇಕಾಯಿತು’ ಎಂದು ಹೇಳುತ್ತಾರೆ ಸಾಮಾಜಿಕ ಕಾರ್ಯಕರ್ತ ಹಾಗೂ ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ. ಅವರ ನೇತೃತ್ವದಲ್ಲಿ, ಬಿ.ಎಸ್.ಹುಸೇನ್ ಅವರ ಅಧ್ಯಕ್ಷತೆಯಲ್ಲಿ ಸ್ಥಾಪನೆಗೊಂಡ ನಾಗರಿಕರ ಹೋರಾಟ ಸಮಿತಿ ಕಳೆದ ಅಕ್ಟೋಬರ್‌ನಲ್ಲಿ ಮೊದಲ ವಾರ್ಷಿಕೋತ್ಸವ ಆಚರಿಸಿಕೊಂಡಿದೆ.

ಇಂದು ಜೋಕಟ್ಟೆಯ ಜನ ಅದೆಷ್ಟು ಜಾಗೃತಗೊಂಡಿದ್ದಾರೆ ಎಂದರೆ, ನಿರಂತರ ಬೆಂಕಿ ಉಗುಳುತ್ತಲೇ ಇರುವ ಎಂಆರ್‌ಪಿಎಲ್ ಘಟಕದ ಚಿಮಿಣಿಗಳಲ್ಲಿ ಒಂದಿಷ್ಟು ಅಧಿಕ ಬೆಂಕಿಯ ಜ್ವಾಲೆ ಕಾಣಿಸಿಕೊಂಡರೂ ಓಡೋಡಿ ಬರುತ್ತಾರೆ, ದುರ್ವಾಸನೆ ಹೆಚ್ಚಾದಂತೆ ಕಂಪೆನಿಯ ಹಿರಿಯ ಅಧಿಕಾರಿಗಳಿಗೇ ದೂರವಾಣಿ ಕರೆ ಹೋಗುತ್ತದೆ. ಪಕ್ಕದಲ್ಲಿ ಹರಿಯುತ್ತಿರುವ ತೊರೆಯಲ್ಲಿ ತೈಲ ಮಿಶ್ರಿತ ನೀರು ಹರಿದು ಬರುತ್ತಿರುವುದು ಕಂಡ ತಕ್ಷಣ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೇ ಸ್ಥಳಕ್ಕೆ ಧಾವಿಸಬೇಕಾಗುತ್ತದೆ. ಕೋಕ್ ಘಟಕದಿಂದ ಮಸಿ ಹಾರುವುದು ಜಾಸ್ತಿಯಾದರೆ ಕಂಪೆನಿ ಪರಿಸರ ಅಧಿಕಾರಿಯನ್ನೇ ಸ್ಥಳಕ್ಕೆ ಕರೆಸಿ ಅವರ ಕೈಯಿಂದಲೇ ಮಸಿ ಒರೆಸುವ ಸನ್ನಿವೇಶವೂ ಸಾಧ್ಯವಾಗಿದೆ. ಜೋಕಟ್ಟೆ ಜನ ಈಗ ಕೇಳುತ್ತಿರುವುದಿಷ್ಟೇ, ಒಂದೋ ನಮ್ಮನ್ನು ಇಲ್ಲಿಂದ ಪೂರ್ತಿಯಾಗಿ ಸ್ಥಳಾಂತರಿಸಿ, ಇಲ್ಲವೇ ಕೋಕ್, ಸಲ್ಫರ್ ಘಟಕ ಸ್ಥಳಾಂತರಿಸಿ ಎಂದು.

‘ಜನವಸತಿಯಿಂದ ಕೇವಲ 15 ಮೀಟರ್ ದೂರದಲ್ಲಿ ಕಾರ್ಯಾಚರಿಸುತ್ತಿರುವ ಕೋಕ್ ಘಟಕದ ವಿನ್ಯಾಸದಲ್ಲೇ ದೋಷ ಇದೆ. ಯೋಜನೆಗೆ ಆಯ್ದುಕೊಂಡ ಸ್ಥಳವೇ ಸರಿಯಾಗಿಲ್ಲ. ಜನವಸತಿ ಪ್ರದೇಶದ ಸಮೀಪದಲ್ಲೇ ಇಂತಹ ಅಪಾಯಕಾರಿ ಘಟಕಗಳನ್ನು ಆರಂಭಿಸುವಾಗ ತೆಗೆದುಕೊಳ್ಳಬೇಕಾದ ಯಾವ ಮುನ್ನೆಚ್ಚರಿಕೆಯನ್ನೂ ತೆಗೆದುಕೊಂಡಿಲ್ಲ. ಹೀಗಾಗಿ ದೇಶದ ಹೆಮ್ಮೆಯ ಕಂಪೆನಿ ಸ್ಥಳೀಯ ಜನರ ಸಮಸ್ಯೆಗೂ ಒಂದಿಷ್ಟು ಗಮನ ಹರಿಸಬೇಕು’ ಎಂದು ಹೇಳುತ್ತಾರೆ ಮುನೀರ್ ಕಾಟಿಪಳ್ಳ.

ಆದರೆ ಕಂಪೆನಿಯ ಹಿರಿಯ ಅಧಿಕಾರಿಗಳು ಈ ಆರೋಪವನ್ನು ಅಲ್ಲಗಳೆಯುತ್ತಾರೆ. ‘ಇಂತಹ ಘಟಕ ಮಂಗಳೂರಲ್ಲೇ ಪ್ರಥಮವಾಗಿ ಸ್ಥಾಪಿಸಿದ್ದಲ್ಲ. ಬೇರೆಡೆಯೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಇದೀಗ ತಂತ್ರಜ್ಞಾನ ಸುಧಾರಿಸಿದೆ, ಅದನ್ನು ಬಳಸಿಕೊಂಡು ತೊಂದರೆಯನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸುತ್ತಿದ್ದೇವೆ’ ಎಂದು ಎಂಆರ್‌ಪಿಎಲ್ ಅಧಿಕಾರಿಗಳು ಹೇಳುತ್ತಾರೆ.

‘ಕಂಪೆನಿ ಏನೇ ಹೇಳಲಿ, ಜೋಕಟ್ಟೆ ಪ್ರದೇಶದಲ್ಲಿ ಮಸಿಯಿಂದ ಮಾಲಿನ್ಯ ಆಗುತ್ತಿರುವುದು ನಿಜ. ಒಂದೂವರೆ ವರ್ಷದಲ್ಲಿ ನಾನು ಎರಡು ಬಾರಿ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಜನರ ಕಷ್ಟವನ್ನು ಕಣ್ಣಾರೆ ಕಂಡಿದ್ದೇನೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ್ದೇನೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇಲ್ಲಿ ಕೈಗೊಳ್ಳಬೇಕಾದ ವಿಚಾರಗಳು ರಾಜ್ಯ ಸರ್ಕಾರ ನಿಭಾಯಿಸಬಹುದಾದ ಸಂಗತಿಗಳಲ್ಲ. ಕೇಂದ್ರವೇ ಇದನ್ನು ಬಗೆಹರಿಸಬೇಕು.

ಜೋಕಟ್ಟೆ ಪ್ರದೇಶದಲ್ಲಿ ಎಲ್ಲೆಲ್ಲಿ ಮಸಿಯಿಂದ ಮಾಲಿನ್ಯ ಉಂಟಾಗುತ್ತದೋ ಅಂಥ ಸ್ಥಳವನ್ನು ಎಂಆರ್‌ಪಿಎಲ್ ಕಂಪೆನಿ ತನ್ನ ಸ್ವಾಧೀನಕ್ಕೆ ಪಡೆಯಬೇಕು. ಹೊಸ ಭೂಸ್ವಾಧೀನ ಕಾಯ್ದೆಯಂತೆ ನಿವಾಸಿಗಳಿಗೆ ಸೂಕ್ತ ಪರಿಹಾರ, ಉದ್ಯೋಗ, ಬದಲಿ ನಿವೇಶನ ನೀಡಿ ಅವರನ್ನು ಒಕ್ಕಲೆಬ್ಬಿಸಬೇಕು. ಕಂಪೆನಿ ಹೀಗೆ ಮಾಡದ ಹೊರತು ಜೋಕಟ್ಟೆಯ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದು ಸಂಶಯ’ ಎಂದು ಹೇಳುತ್ತಾರೆ ರಾಜ್ಯದ ಅರಣ್ಯ, ಪರಿಸರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ.

‘ಜನ ಇಂದಲ್ಲ, ಐದಾರು ವರ್ಷಗಳ ಹಿಂದೆಯೇ ಪ್ರತಿಭಟನೆ ನಡೆಸಬೇಕಿತ್ತು. ಆದರೆ ಮೂರನೇ ಹಂತದ ಅಭಿವೃದ್ಧಿಯಲ್ಲಿ ಎಂತಹ ಘಟಕಗಳು ಸ್ಥಾಪನೆಗೊಳ್ಳುತ್ತವೆ ಎಂಬ ಕಲ್ಪನೆ ಜನರಿಗೆ ಇದ್ದಂತಿರಲಿಲ್ಲ. ಹೀಗಾಗಿ ಸಮಸ್ಯೆ ಆರಂಭವಾದ ಮೇಲಷ್ಟೇ ಜನ ಪ್ರತಿಭಟನೆಗೆ ಇಳಿಯುವಂತಾಗಿದೆ. ಕೋಕ್, ಸಲ್ಫರ್ ಘಟಕವನ್ನು ಸಂಪೂರ್ಣವಾಗಿ ಸ್ಥಳಾಂತರಿಸಲು ಈ ಹಂತದಲ್ಲಿ ಸಾಧ್ಯವೇ ಇಲ್ಲವೆಂದಾದರೆ, ಸಂಕಷ್ಟದಲ್ಲಿರುವ ಜನರನ್ನು ಸ್ಥಳಾಂತರಿಸುವುದಷ್ಟೇ ಉಳಿದಿರುವ ದಾರಿ. ಎಂಆರ್‌ಪಿಎಲ್ ಅದನ್ನು ಮಾಡಬೇಕು’ ಎಂದು ಅವರು ಹೇಳುತ್ತಾರೆ.

ಕೇಂದ್ರವನ್ನು ಸ್ಥಳೀಯವಾಗಿ ಪ್ರತಿನಿಧಿಸುವ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಹ ಜನರ ಒಳಿತಿಗಾಗಿ ಕಂಪೆನಿ ಸ್ಥಾವರ ಸ್ಥಳಾಂತರಿಸುವ ಅಥವಾ ಜನರನ್ನು ಸ್ಥಳಾಂತರಿಸುವ ಕೆಲಸ ಮಾಡಲೇಬೇಕು ಎಂದು ಹೇಳುತ್ತಾರೆ. ‘ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಜೋಕಟ್ಟೆ ಜನರ ಕಷ್ಟದ ಅರಿವಾಗಿದೆ. ಜನರ ಜೀವ, ಆಸ್ತಿಪಾಸ್ತಿ ವಿಚಾರ ಬಂದಾಗ ಕಂಪೆನಿ ಹಿತಾಸಕ್ತಿಯನ್ನು ಪೋಷಿಸುವುದು ಸಾಧ್ಯವೇ ಇಲ್ಲ, ಕಂಪೆನಿ ಇಂದಲ್ಲ ನಾಳೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲೇಬೇಕು, ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ, ಕೇಂದ್ರವೂ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ಇದೆ’ ಎಂದು ಹೇಳುತ್ತಾರೆ ಅವರು.

ಜನ ಎಚ್ಚೆತ್ತ ಪರಿಣಾಮ ಮಾಲಿನ್ಯ ನಿಯಂತ್ರಣ ಮಂಡಳಿಯೂ ಆರು ಬಾರಿ ಕಂಪೆನಿಗೆ ನೋಟಿಸ್ ಕಳುಹಿಸಿದೆ. ಪ್ರತಿ ಬಾರಿಯೂ ಏನಾದರೂ ಒಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಲೇ ಇದ್ದ ಕಂಪೆನಿಗೆ ಇದೀಗ ಕಠಿಣ ಸವಾಲೇ ಎದುರಾಗಿದೆ. ಮಾಲಿನ್ಯ ಪ್ರಮಾಣವನ್ನು ಅಧ್ಯಯನ ನಡೆಸಲು ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಸ್ಥಾಪನೆಗೊಂಡ ಪರಿಣತರ ಸಮಿತಿ ಕೋಕ್, ಸಲ್ಫರ್ ಘಟಕದಿಂದ ಜೋಕಟ್ಟೆ ಜನವಸತಿ ಪ್ರದೇಶದಲ್ಲಿ ವಾಯು, ಶಬ್ದ ಮಾಲಿನ್ಯ ಉಂಟಾಗುತ್ತಿರುವುದನ್ನು ಬೆಟ್ಟುಮಾಡಿ ತೋರಿಸಿದೆ.

ಕಂಪೆನಿಯೂ ಇದನ್ನು ಒಪ್ಪಿಕೊಂಡಿದೆ. ಇನ್ನು ಎರಡು ವರ್ಷದೊಳಗೆ ಕೋಕ್ ಸ್ಥಾವರದ ಕೋಕ್ ಲೋಡಿಂಗ್ ಘಟಕವನ್ನು ಜನವಸತಿ ಪ್ರದೇಶದಿಂದ ದೂರಕ್ಕೆ ಅಂದರೆ ಯೋಜನಾ ಪ್ರದೇಶದ ಒಳಭಾಗಕ್ಕೆ ಸ್ಥಳಾಂತರಿಸುವುದಕ್ಕೆ ಅದು ಸಮ್ಮತಿಸಿದೆ. ಕೋಕ್ ಲೋಡಿಂಗ್ ಸ್ಥಾವರದ ಸ್ಥಳಾಂತರ ಎಂಬುದು ತಮಾಷೆ ವಿಚಾರವಲ್ಲ, ನೂರಾರು ಕೋಟಿ ರೂಪಾಯಿ ವೆಚ್ಚ ತಗುಲುವ ಕಾರ್ಯ ಇದು. ಜನರ ಕಷ್ಟ ನಿವಾರಣೆಗೆ ಕಂಪೆನಿ ಈ ಕೆಲಸವನ್ನು ಮಾಡಲು ಇದೀಗ ಮುಂದಾಗಿದೆ.

ಇನ್ನೊಂದು ಮುಖ
ಕೋಕ್ ಘಟಕದ ವಿರುದ್ಧ ನ್ಯಾಯಯುತವಾಗಿ ನಡೆಯುತ್ತಿದ್ದ ಹೋರಾಟ ಇಂದು ಇನ್ನೊಂದು ದಿಕ್ಕಿನಲ್ಲಿ ಸಾಗುತ್ತಿರುವ ಬಗ್ಗೆ ಸಂಶಯ ಆರಂಭವಾಗಿದೆ. ಮಂಗಳೂರು ವಿಶೇಷ ಆರ್ಥಿಕ ವಲಯದ (ಎಂಎಸ್‌ಇಜೆಡ್) ವತಿಯಿಂದ ಅಭಿವೃದ್ಧಿಪಡಿಸಲಾದ ಎಂಆರ್‌ಪಿಎಲ್ ಸಮೀಪದ ಇನ್ನಷ್ಟು ಪ್ರದೇಶಗಳಲ್ಲಿ ಹೊಸದಾಗಿ ತೈಲ ಕಂಪೆನಿಗಳು ಪೆಟ್ರೋಲಿಯಂ ಸಂಬಂಧಿತ ಉದ್ಯಮಗಳನ್ನು ಸ್ಥಾಪಿಸುತ್ತಿವೆ. ಇಲ್ಲಿಗೆ ಪಣಂಬೂರು, ಕೂಳೂರು, ಜೋಕಟ್ಟೆ ಮಾರ್ಗವಾಗಿಯೇ ಬೃಹತ್ ಯಂತ್ರೋಪಕರಣಗಳನ್ನು ಸಾಗಿಸಬೇಕಾಗುತ್ತದೆ. ಇಂತಹ ಯಂತ್ರಗಳನ್ನು ಜೋಕಟ್ಟೆ ರೈಲ್ವೆ ಗೇಟಿನ ಸಮೀಪ ತಡೆಹಿಡಿದು, ಹಣ ಸುಲಿಗೆ ಮಾಡುವ ದಂಧೆಯೂ ನಡೆಯುತ್ತಿದೆ.

‘ಒಂದು ಬೃಹತ್ ಯಂತ್ರೋಪಕರಣ ಈ ರಸ್ತೆಯಲ್ಲಿ ಸಾಗಿದರೆ ₹ 20ರಿಂದ 30 ಸಾವಿರ ತನಕ ಸುಲಿಗೆ ನಡೆಯುತ್ತಿದೆ, ಇಂಥ ಸುಲಿಗೆಯಲ್ಲಿ ಇದೇ ಹೋರಾಟ ಸಮಿತಿಯ ಕೆಲವರೂ ಇದ್ದಾರೆ. ನಾನೇ ಇದನ್ನು ನೋಡಿದ್ದೇನೆ. ಆದರೆ ಆ ಭಾಗದಲ್ಲಿ ಇರುವವರೆಲ್ಲರೂ ಒಂದಾಗಿರುತ್ತಾರೆ, ಆಕ್ಷೇಪಿಸಿದರೆ ನನ್ನ ಜೀವಕ್ಕೇ ಅಪಾಯ ಎದುರಾಗಬಹುದು. ಹೀಗಾಗಿ ಎಲ್ಲವನ್ನೂ ನೋಡುತ್ತ, ಏನೂ ಗೊತ್ತಿಲ್ಲದವರಂತೆ ಇದ್ದುಬಿಡುತ್ತೇನೆ’ ಎಂದರು ವ್ಯಾಪಾರಿಯೊಬ್ಬರು.

‘ಸುಲಿಗೆ ನಡೆಸುವುದು ಒಂದು ಬಗೆಯ ದಂಧೆ, ಈ ಹಿಂದೆ ಹೋರಾಟ ಸಮಿತಿಯಲ್ಲಿ ಕಾಣಿಸಿಕೊಂಡ ಹಲವರಿಗೆ ಎಂಆರ್‌ಪಿಎಲ್‌ನಲ್ಲಿ ಉದ್ಯೋಗ ದೊರೆತಿದೆ. ಬಳಿಕ ಅವರ ಹೋರಾಟವೆಲ್ಲ ನಿಂತುಹೋಗಿದೆ. ತಮ್ಮ ಸ್ವಂತ ಲಾಭಕ್ಕಾಗಿ ಇಂತಹ ಹೋರಾಟದಲ್ಲಿ ತೊಡಗಿಸಿಕೊಂಡವರ ಸಂಖ್ಯೆಯೇ ಅಧಿಕ ಇದೆ. ಹೀಗಾಗಿ ಈ ಭಾಗದ ಜನರಲ್ಲಿ ಇದೀಗ ಗೊಂದಲ ನಿರ್ಮಾಣವಾಗಿದೆ’ ಎಂದು ಅವರು ಹೇಳುತ್ತಾರೆ.

‘ಎಂಆರ್‌ಪಿಎಲ್‌ಗಾಗಿ ಕೆಐಎಡಿಬಿ ಭೂಮಿ ಸ್ವಾಧೀನ ಮಾಡಿಕೊಂಡರೆ ಒಂದು ಮನೆಗೆ ₹ 7 ಲಕ್ಷದಂತೆ ಪರಿಹಾರ, ಉದ್ಯೋಗ ಸಿಗುತ್ತದೆ. ಇದನ್ನೇ ಲಾಭ ಮಾಡಿಕೊಳ್ಳಲು ಹೊರಟಿರುವ ಈ ಭಾಗದ ಕೆಲವರು ಒಂದೊಂದು ಮನೆಯಲ್ಲೂ ಏಳೆಂಟು ನಕಲಿ ಡೋರ್ ನಂಬರ್ ಮಾಡಿಸಿಕೊಂಡುಬಿಟ್ಟಿದ್ದಾರೆ. ಒಂದು ವೇಳೆ ಭೂಸ್ವಾಧೀನ ಮಾಡಿಕೊಂಡಾಗ ಎಲ್ಲ ಡೋರ್ ನಂಬರ್‌ಗೂ ಪರಿಹಾರ ದೊರಕಬೇಕು ಎಂಬುದು ಅವರ ದುರುದ್ದೇಶ. ಜನರ ಈ ಮೋಸ ಅರಿತೇ ಇಲ್ಲಿ ಇನ್ನಷ್ಟು ಭೂಸ್ವಾಧೀನಕ್ಕೆ ಕಂಪೆನಿ ಮುಂದಾಗಿಲ್ಲ’ ಎಂದು ಅವರು ವಿವರಿಸುತ್ತಾರೆ.

ಆದರೆ ಈ ಆರೋಪ ಒಪ್ಪದ ಮುನೀರ್ ಕಾಟಿಪಳ್ಳ, ‘ಹೋರಾಟ ಸಮಿತಿಯ ಹೆಸರಲ್ಲಿ ಸುಲಿಗೆ ನಡೆಸುವುದಕ್ಕೆ ಖಂಡಿತ ಅವಕಾಶ ಕೊಡುವುದಿಲ್ಲ. ಕೆಲವರು ಅವಕಾಶದ ಲಾಭ ಮಾಡಿಕೊಂಡರೆ ಅದಕ್ಕೂ, ಹೋರಾಟ ಸಮಿತಿಗೂ ಸಂಬಂಧವಿಲ್ಲ. ಇಂತಹ ಸುಲಿಗೆಯನ್ನು ತಡೆಗಟ್ಟಬೇಕಾದುದು ಆಡಳಿತದ ಕೆಲಸ. ಅಕ್ರಮ ಡೋರ್ ನಂಬರ್ ಇದೆ ಎಂದಾದರೆ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾದುದೂ ಕಂದಾಯ/ ಜಿಲ್ಲಾಡಳಿತದ ಕೆಲಸ’ ಎನ್ನುತ್ತಾರೆ.

ಏನಿದು ಕೋಕ್ ಬಿಕ್ಕಟ್ಟು?: ಕರ್ನಾಟಕದ ಏಕೈಕ ಕಚ್ಚಾತೈಲ ಶುದ್ಧೀಕರಣ ಘಟಕ ಎಂಆರ್‌ಪಿಎಲ್. 1988ರಲ್ಲಿ ಸರ್ಕಾರಿ ಸ್ವಾಮ್ಯದ ಎಚ್‌ಪಿಸಿಎಲ್ ಮತ್ತು ಎ.ವಿ.ಬಿರ್ಲಾ ಗುಂಪಿನ ಮೆ.ಐಆರ್‌ಐಎಲ್ ಆಂಡ್ ಅಸೋಸಿಯೇಟ್ಸ್ ಜತೆಗೂಡಿ ಆರಂಭಿಸಿದ ಕಂಪೆನಿ ಇದು. ಆರಂಭದಲ್ಲಿ ಈ ತೈಲ ಶುದ್ಧೀಕರಣ ಘಟಕದ ಸಾಮರ್ಥ್ಯ ಇದ್ದುದು ವಾರ್ಷಿಕ 30 ಲಕ್ಷ ಟನ್‌ಗಳಷ್ಟೇ (ಇಂದು ಅದರ ಸಾಮರ್ಥ್ಯ 5 ಪಟ್ಟು ಹೆಚ್ಚಿದೆ.

ಅಂದರೆ ವಾರ್ಷಿಕ 1.5 ಕೋಟಿ ಟನ್ ಕಚ್ಚಾತೈಲ ಶುದ್ಧೀಕರಣ ಇಲ್ಲಿ ನಡೆಯುತ್ತಿದೆ. ಇದನ್ನು 1.80 ಕೋಟಿ ಟನ್‌ಗೆ ಹೆಚ್ಚಿಸುವ ಪ್ರಯತ್ನದಲ್ಲಿ ಕಂಪೆನಿ ಇದೆ). 2003ರ ಮಾರ್ಚ್ 28ರಂದು ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಆದಿತ್ಯ ಬಿರ್ಲಾ ಗುಂಪಿನ ಸಂಪೂರ್ಣ ಷೇರನ್ನು ತನ್ನದಾಗಿಸಿಕೊಂಡು ಎಂಆರ್‌ಪಿಎಲ್ ಅನ್ನು ತನ್ನ ಅಂಗಸಂಸ್ಥೆಯನ್ನಾಗಿ ಮಾಡಿಕೊಂಡಿತು. ವಾರ್ಷಿಕ 70 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುವ ಎಂಆರ್‌ಪಿಎಲ್ ಇಂದು ಸಂಪೂರ್ಣ ಕೇಂದ್ರ ಸರ್ಕಾರಿ ಒಡೆತನದ ‘ಮಿನಿರತ್ನ’ ಕಂಪೆನಿ.

ತೈಲ ಶುದ್ಧೀಕರಣ ಎಂದರೆ ಅದೊಂದು ಬಹಳ ಸಂಕೀರ್ಣ ಕ್ರಿಯೆ. ಕಚ್ಚಾ ತೈಲವು ವಿಮಾನ ಇಂಧನ, ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ನಾಫ್ತಾ, ಪಾಲಿಪ್ರೊಪಿಲೀನ್, ಡಾಂಬರು ಮುಂತಾಗಿ ಪರಿವರ್ತನೆಯಾಗುವ ಹಂತದಲ್ಲಿ ಹಲವಾರು ಪ್ರಕ್ರಿಯೆಗಳಿವೆ. ರಿಫೈನರಿಯೊಂದರಲ್ಲಿ ಕೊನೆಯ ಉತ್ಪಾದನೆಯೇ ಪೆಟ್ರೋಲಿಯಂ ಕೋಕ್ ಅಥವಾ ಪೆಟ್‌ಕೋಕ್. ಕಲ್ಲಿದ್ದಲಿನಂತೆ ಕಾಣುವ ಈ ಪೆಟ್‌ಕೋಕ್‌ನಲ್ಲಿ ಹೆಚ್ಚಿನ ಪಾಲು ಕಾರ್ಬನ್ (ಇಂಗಾಲ), ವಿವಿಧ ಪ್ರಮಾಣದಲ್ಲಿ ಸಲ್ಫರ್ (ಗಂಧಕ) ಮತ್ತು ಘನ ಲೋಹಗಳು ಇರುತ್ತವೆ. ಬ್ಯಾಟರಿ, ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪಾದನೆಗೆ ಇದು ಬಳಕೆಯಾಗುತ್ತದೆ. ಕಳಪೆ ದರ್ಜೆಯ ಪೆಟ್‌ಕೋಕ್‌ನಲ್ಲಿ ಗಂಧಕದ ಅಂಶ ಅಧಿಕ ಇರುತ್ತದೆ. ಇದನ್ನು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಇಂಧನವಾಗಿ, ಸಿಮೆಂಟ್ ಕಾರ್ಖಾನೆಗಳಲ್ಲಿ ಕಚ್ಚಾ ಸಾಮಗ್ರಿಯಾಗಿ ಬಳಸಲಾಗುತ್ತದೆ.

ಎಂಆರ್‌ಪಿಎಲ್‌ನ 3ನೇ ಹಂತದ ಘಟಕದಲ್ಲಿ ಕ್ರೂಡ್ ಡಿಸ್ಟಿಲೇಷನ್ ಯೂನಿಟ್, ಡಿಲೇಯ್ಡ್ ಕೋಕರ್ ಯೂನಿಟ್, ಪೆಟ್ರೊಕೆಮಿಕಲ್ ಫ್ಲೂಯಿಡೈಸ್ಡ್ ಕೆಟಲಿಕ್ ಕ್ರ್ಯಾಕಿಂಗ್ ಯೂನಿಟ್ ಮತ್ತು ಪಾಲಿಮರ್ ಗ್ರೇಡ್ ಪ್ರೊಪಿಲಿನ್ ರಿಕವರಿ ಯೂನಿಟ್, ಪಾಲಿಪ್ರೊಪಿಲಿನ್ ಯೂನಿಟ್, ಕೋಕರ್ ಹೆವಿ ಗ್ಯಾಸ್ ಆಯಿಲ್ ಹೈಡ್ರೊಟ್ರೀಟಿಂಗ್ ಯೂನಿಟ್, ಡೀಸೆಲ್ ಹೈಡ್ರೊ ಡಿ ಸಲ್ಫರೈಸೇಷನ್ ಯೂನಿಟ್, ಹೈಡ್ರೋಜನ್ ಜನರೇಷನ್ ಯೂನಿಟ್, ಸಲ್ಫರ್ ರಿಕವರಿ ಯೂನಿಟ್‌ಗಳನ್ನು ಸ್ಥಾಪಿಸಲಾಗಿದೆ.

ವಿವಿಧ ಪೆಟ್ರೋಲಿಯಂ ಉತ್ಪನ್ನಗಳ ತಯಾರಿಕೆಗೆ ಹಾಗೂ ಕಚ್ಚಾತೈಲ ಸಂಸ್ಕರಣೆಗೆ ಈ ಎಲ್ಲ ಘಟಕಗಳೂ ಬೇಕು. ಕೋಕ್ ಮತ್ತು ಸಲ್ಫರ್ ಘಟಕಗಳು ಸಹ ಇತರ ಘಟಕಗಳಂತೆ ಯೋಜನಾ ಪ್ರದೇಶದೊಳಗೆ ಇದ್ದಿದ್ದರೆ ಅಂದರೆ ಜನವಸತಿ ಪ್ರದೇಶಗಳಿಂದ ದೂರ ಇದ್ದಿದ್ದರೆ ಜನರಿಂದ ಇಂತಹ ವಿರೋಧ ವ್ಯಕ್ತವಾಗುತ್ತಿರಲಿಲ್ಲ. ಆದರೆ ಮಾಲಿನ್ಯ ಉಂಟುಮಾಡುವ ಸಲ್ಫರ್, ಅದಕ್ಕಿಂತಲೂ ಮುಖ್ಯವಾಗಿ ಕೋಕ್ ಘಟಕವನ್ನು ಜನವಸತಿ ಪ್ರದೇಶದ ಬಳಿಯಲ್ಲೇ ಸ್ಥಾಪಿಸಿ ಜನರ ವಿರೋಧ ಕಟ್ಟಿಕೊಳ್ಳುವಂತಾಗಿದೆ.

ಹೋರಾಟದ ಹಾದಿ: ಜೋಕಟ್ಟೆ ಸಮೀಪ ಕೋಕ್ ಘಟಕ ಸ್ಥಾಪನೆಯಾಗುತ್ತಿರುವ ವಿಷಯ ಜನರಿಗೆ ಗೊತ್ತೇ ಇರಲಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿನ ಕಾಮಗಾರಿಗಳನ್ನು ಜನ ದಿನಾ ಮನೆಯಂಗಳದಲ್ಲಿ ನಿಂತು ನೋಡುತ್ತಿದ್ದವರು. ಎಂಆರ್‌ಪಿಎಲ್‌ನ 1 ಮತ್ತು 2ನೇ ಘಟಕದಲ್ಲಿ ಇರುವಂತೆ ಇದೂ ಒಂದು ಪೆಟ್ರೋಲಿಯಂ ಸಂಸ್ಕರಣಾ ಘಟಕ, ಅದರ ಪಾಡಿಗೆ ಅದು ಕೆಲಸ ಮಾಡುತ್ತಿರುತ್ತದೆ ಎಂದೇ ಜನ ಭಾವಿಸಿದ್ದರು. ಆದರೆ ಒಂದೂವರೆ ವರ್ಷದ ಹಿಂದೆ ಕೋಕ್ ಉತ್ಪಾದನೆ ಯಾವಾಗ ಆರಂಭವಾಯಿತೋ, ಜನರನ್ನು ಅಟ್ಟಿಸಿಕೊಂಡು ಬಂತು ದೂಳು, ಮಸಿ. ಜತೆಗೆ ಹೊಟ್ಟೆಯನ್ನು ಕಲಕುವ ದುರ್ವಾಸನೆ.

ಒಂದಷ್ಟು ದಿನ ಜನ ಸುಮ್ಮನಿದ್ದರು, ಯಾರ್‍ಯಾರಿಗೋ ಹೇಳಿ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅದಕ್ಕೆ ಬೆಲೆ ಸಿಗಲೇ ಇಲ್ಲ. ಕೊನೆಗೆ ಜನ ಸಂಘಟಿತರಾಗಲೇಬೇಕಾಯಿತು. ಜನರ ಹೋರಾಟಕ್ಕೆ ಶಕ್ತಿ ತುಂಬಿದ್ದೇ ಮುನೀರ್ ಕಾಟಿಪಳ್ಳ ಅವರ ನೇತೃತ್ವದ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ. ಒಂದು ವರ್ಷದಲ್ಲಿ ಮಾಲಿನ್ಯದ ಕಾರಣಕ್ಕೇ ಈ ಸಮಿತಿ ಕರೆಯಂತೆ ನಾಲ್ಕು ಬಾರಿ ಜೋಕಟ್ಟೆ ಬಂದ್ ಆಚರಿಸಿದೆ. 12 ಬಾರಿ ಪ್ರತಿಭಟನಾ ಸಭೆಗಳು, ಮೆರವಣಿಗೆಗಳು ನಡೆದಿವೆ.

ಕಳೆದ ಫೆಬ್ರುವರಿಯಲ್ಲಿ ಕುತ್ತೆತ್ತೂರಿನಲ್ಲಿರುವ ಎಂಆರ್‌ಪಿಎಲ್‌ನ ಮುಖ್ಯ ಪ್ರವೇಶ ದ್ವಾರದ ಬಳಿ ‘ರಾಶಿ ಹೆಣಗಳ ಪ್ರದರ್ಶನ’ ಪ್ರತಿಭಟನೆ ನಡೆದಿದೆ. ಇಂತಹ ಹೋರಾಟಗಳನ್ನು ಸಂಘಟಿಸಿದ್ದಕ್ಕಾಗಿ ಮುನೀರ್ ಕಾಟಿಪಳ್ಳ ಅವರ ವಿರುದ್ಧ ಐದಾರು ಕೇಸ್‌ಗಳೂ ದಾಖಲಾಗಿವೆ. ‘ಎಂಆರ್‌ಪಿಎಲ್‌ನಿಂದ ಪರಿಸರಕ್ಕೆ, ಜನರ ಜೀವನದ ಮೇಲೆ ಭಾರಿ ಹಾನಿ ಉಂಟಾಗುತ್ತಿದೆ, ಜನರಿಗೆ ಅನ್ಯಾಯ ಆಗುವುದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ರಾಜ್ಯ, ಕೇಂದ್ರ ಸರ್ಕಾರಗಳು, ವಿವಿಧ ಇಲಾಖೆಗಳು ಕಣ್ಣುಮುಚ್ಚಿ ಕುಳಿತರೂ ಜನರ ಜೀವನ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ’ ಎನ್ನುತ್ತಾರೆ ಸಮಿತಿ ಅಧ್ಯಕ್ಷ ಬಿ.ಎಸ್.ಹುಸೇನ್.

ಎಂಆರ್‌ಪಿಎಲ್ ಘಟಕ ಸ್ಥಾಪನೆಯಾಗಿ ಹಲವಾರು ವರ್ಷಗಳ ಕಾಲ ಕಂಪೆನಿಯನ್ನು ಗ್ರೆಗರಿ ಪತ್ರಾವೊ ಅವರು ಏಕಾಂಗಿಯಾಗಿ ಎದುರಿಸಿದ್ದರು. ಕೊನೆಗೂ ಅವರು ತಮ್ಮ ಜಮೀನನ್ನು ಕಂಪೆನಿಗೆ ಬಿಟ್ಟುಕೊಟ್ಟು ಇದೀಗ ಕುತ್ತೆತ್ತೂರಿನಲ್ಲಿ ನೆಲೆಸಿದ್ದಾರೆ. ಆದರೆ ಇದೀಗ ಜೋಕಟ್ಟೆಯನ್ನು ಒಳಗೊಂಡ ತೋಕೂರು, ಕಳವಾರು, ಕೆಂಜಾರು ಗ್ರಾಮಗಳು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಎದ್ದು ನಿಂತಿವೆ. ಈ ಪೈಕಿ ಜೋಕಟ್ಟೆ ಭಾಗದ ಜನರು ಕಂಪೆನಿ ವಿರುದ್ಧ ನೇರ ಸಂಘರ್ಷಕ್ಕೇ ನಿಂತಿದ್ದು, ಇಡೀ ಊರನ್ನು ಎದುರು ಹಾಕಿಕೊಳ್ಳುವುದು ಸಾಧ್ಯವಾಗದೆ ಕಂಪೆನಿ ಕೋಕ್ ಘಟಕದ ಡಂಪಿಂಗ್ ಯಾರ್ಡ್ ಅನ್ನು ಸ್ಥಾವರದ ಒಳಭಾಗಕ್ಕೆ ಸ್ಥಳಾಂತರಿಸಲು ಒಪ್ಪಿಕೊಂಡಿದೆ.

ಬಹು ಉದ್ದೇಶಿತ, ರಾಷ್ಟ್ರ ನಿರ್ಮಾಣದಂತಹ ಯೋಜನೆ ರೂಪಿಸುವಾಗ ಸಿದ್ಧತೆಗಳು ಭಾರಿ ಪ್ರಮಾಣದಲ್ಲಿ ಮೊದಲಾಗಿಯೇ ನಡೆದಿರಬೇಕು. ಮುಖ್ಯವಾಗಿ ಜನಬಳಕೆಯ ರಸ್ತೆಯ ಬದಲಾಗಿ ಮೊಗಸಾಲೆ (ಕಾರಿಡಾರ್) ರಸ್ತೆ ನಿರ್ಮಿಸಿ ಅದರಲ್ಲೇ ಸರಕು ಸಾಗಣೆ ನಡೆಯಬೇಕು ಎಂಬ ನಿಯಮ ಇದೆ. ಆದರೆ ಮಂಗಳೂರಿನಲ್ಲಿ ಅದಕ್ಕೆ ವಿರುದ್ಧ ಬೆಳವಣಿಗೆ ನಡೆದಿದೆ. ಪೆಟ್ರೋಲಿಯಂ ಘಟಕಗಳು ಸ್ಥಾಪನೆಗೊಂಡ ಬಳಿಕ ಇದೀಗ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ಕೈಹಾಕಲಾಗಿದೆ. ಕಾರಿಡಾರ್ ರಸ್ತೆ ಮತ್ತು ಮುಂದಿನ ಹಂತದ ವಿಸ್ತರಣೆ ಯೋಜನೆಗಳಿಗೆ ಮೂಲಸೌಲಭ್ಯ ಒದಗಿಸುವುದು ಮಂಗಳೂರು ವಿಶೇಷ ಆರ್ಥಿಕ ವಲಯದ (ಎಂಎಸ್‌ಇಜೆಡ್) ಕೆಲಸ. ಜನ ಸಂಚಾರದ ರಸ್ತೆಗಳನ್ನು ಇದುವರೆಗೆ ಎಂಆರ್‌ಪಿಎಲ್‌ನ ವಾಹನಗಳು ಹಾಳು ಮಾಡಿಬಿಟ್ಟಿವೆ. ಜನ ಹೋರಾಟ ನಡೆಸಿದ್ದರಿಂದ ಕೊನೆಗೂ ಕಾರಿಡಾರ್ ರಸ್ತೆಯ ಕಾಮಗಾರಿ ಆರಂಭವಾಗಿದೆ.

(ಕೈಗಾರಿಕಾ ಪ್ರಾಂಗಣದಿಂದ ಸರಕು ಸಾಗಣೆಯ ಉದ್ದೇಶದಿಂದ ಎಂಎಸ್ಇಜೆಡ್ ಪ್ರದೇಶದಿಂದ ಪಣಂಬೂರು ತನಕ ನಿರ್ಮಾಣಗೊಳ್ಳುತ್ತಿರುವ ರಸ್ತೆಯಿದು. ಎಂಆರ್‌ಪಿಎಲ್‌ನ 3ನೇ ಘಟಕ ಸ್ಥಾಪನೆಯಾಗಿರುವುದು ಎಂಎಸ್‌ಇಜೆಡ್ ಅಭಿವೃದ್ಧಿಪಡಿಸಿದ ನಿವೇಶನದಲ್ಲಿ. ಎಂಎಸ್‌ಇಜೆಡ್ ಇತರ ಹಲವಾರು ಕಂಪೆನಿಗಳಿಗೂ ಮೂಲಸೌಲಭ್ಯ ಒದಗಿಸಿಕೊಡುವ ಕೆಲಸ ಮಾಡುತ್ತಿದೆ. ಇಂತಹ ರಸ್ತೆ ಜನಸಾಮಾನ್ಯರು ಬಳಸುವ ರಸ್ತೆಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಡುವಂತಿರಬಾರದು ಮತ್ತು ಫಲ್ಗುಣಿ ನದಿ ದಂಡೆಯಲ್ಲಿ ನಿರ್ಮಾಣವಾಗುತ್ತಿರುವ ಈ ರಸ್ತೆ ಕಾಮಗಾರಿ ಸೂಕ್ಷ್ಮ ಪರಿಸರ, ಕರಾವಳಿ ನಿಯಂತ್ರಣ ವಲಯ (ಸಿಆರ್‌ಜೆಡ್) ನಿಯಮಗಳನ್ನು ಉಲ್ಲಂಘಿಸಬಾರದು ಎಂಬ ಷರತ್ತು ವಿಧಿಸಲಾಗಿದೆ. ಹೀಗಾಗಿ ಫ್ಲೈಓವರ್ ರೂಪದಲ್ಲಿ ಕಾರಿಡಾರ್ ರಸ್ತೆ ನಿರ್ಮಾಣಗೊಳ್ಳುತ್ತಿದೆ).

ಎಲ್ಲವೂ ಸರಿಯಾಗಿಯೇ ಇದೆ: ‘ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸ್ಥಾಪನೆಗೊಂಡ ಘಟಕಗಳು ಈ ಕೋಕ್ ಮತ್ತು ಸಲ್ಫರ್ ಘಟಕಗಳು. ಕೋಕ್ ಹಗುರಪುಡಿ ಅಲ್ಲ. ಗಾಳಿಯಲ್ಲಿ ಅದು ಹಾರಾಡಲು ಸಾಧ್ಯವಿಲ್ಲ. ಡಂಪಿಂಗ್ ಯಾರ್ಡ್‌ಗೆ ಬಂದು ಹೋಗುವ ಟ್ರಕ್‌ಗಳ ಚಕ್ರಕ್ಕೆ ಸಿಲುಕಿ ಪುಡಿಯಾದ ಕೋಕ್ ಗಾಳಿಯಲ್ಲಿ ಒಂದಿಷ್ಟು ದೂರ ಹಾರಿ ಜೋಕಟ್ಟೆ ಪ್ರದೇಶದಲ್ಲಿ ಮಸಿ ಮಾಲಿನ್ಯ ಉಂಟಾಗಿದೆ. ಜನರಿಗೆ ತೊಂದರೆಯಾಗುತ್ತದೆ ಎಂಬುದನ್ನು ಅರಿತು ಕನ್ವೇಯರ್ ಬೆಲ್ಟ್ ಅನ್ನು ಸಂಪೂರ್ಣ ಮುಚ್ಚಿ, ಸದಾ ನೀರು ಚಿಮುಕಿಸುತ್ತಲೇ ಒಂದಿಷ್ಟು ಕೋಕ್ ಪುಡಿಯೂ ಗಾಳಿಯಲ್ಲಿ ಹಾರಾಡದಂತೆ ಮಾಡಲಾಗಿದೆ’ ಎಂದು ಕಂಪೆನಿ ಹೇಳುತ್ತಿದೆ. ಕಂಪೆನಿ ತಾನು ಹೇಳಿದಂತೆ ಮಾಡಿರುವುದು ಮೇಲ್ನೋಟಕ್ಕೇ ಕಾಣಿಸುತ್ತಿದೆ.

‘ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಕಂಪೆನಿಗೆ ಸ್ಥಳೀಯ ಜನರಿಗೆ ತೊಂದರೆ ಕೊಡುವ ಯಾವ ಉದ್ದೇಶ ಇಲ್ಲ. ಕಂಪೆನಿಗೆ ಭೂಸ್ವಾಧೀನ ಮಾಡಿಕೊಟ್ಟ ಸ್ಥಳದಲ್ಲಿ ಕಂಪೆನಿ ಉನ್ನತ ತಂತ್ರಜ್ಞಾನದೊಂದಿಗೆ ಕೋಕ್, ಸಲ್ಫರ್ ಘಟಕ ಸ್ಥಾಪಿಸಿದೆ. ಶಬ್ದ ಮಾಲಿನ್ಯವೂ ನಿಗದಿತ ಪ್ರಮಾಣದಲ್ಲೇ ಇದೆ’ ಎಂದು ಕಂಪೆನಿ ಅಧಿಕಾರಿಗಳು ಹೇಳುತ್ತಾರೆ. (ಜೋಕಟ್ಟೆ ಜನವಸತಿ ಪ್ರದೇಶದಲ್ಲಿ ಕೋಕ್–ಸಲ್ಫರ್ ಘಟಕದಿಂದ ಕೇಳಿಸುವ ಶಬ್ದದ ಪ್ರಮಾಣ 45 ಡೆಸಿಬಲ್‌ಗಿಂತ ಹೆಚ್ಚಿರಬಾರದು ಎಂದು ತಜ್ಞರ ಸಮಿತಿ ಸೂಚಿಸಿದೆ.

ಹೋರಾಟಗಾರರು ತಮ್ಮ ಬಳಿಯಲ್ಲೇ ಶಬ್ದಮಾಲಿನ್ಯ ಅಳೆಯುವ ಮಾಪಕ ಇಟ್ಟುಕೊಂಡಿದ್ದು, ಸಾಮಾನ್ಯ ದಿನಗಳಲ್ಲಿ 60ರಿಂದ 65 ಡೆಸಿಬಲ್‌ನಷ್ಟು ಶಬ್ದ ಅವರ ಮಾಪಕದಲ್ಲಿ ಕಾಣಿಸುತ್ತಿರುವುದು ವಾಸ್ತವ) ‘ಡಂಪಿಂಗ್ ಯಾರ್ಡ್‌ಗೆ ಬರುವ ಟ್ರಕ್‌ಗಳ ಚಕ್ರಕ್ಕೆ ಸಿಲುಕಿದ ಕೋಕ್ ಪುಡಿ ಹಾರಿದ್ದು ನಿಜವಾದರೂ ಆರೋಗ್ಯ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ. ಕಾಂಪೌಂಡ್‌ನ ಸುತ್ತಲೂ 30 ಅಡಿ ಎತ್ತರಕ್ಕೆ ತಡೆಗೋಡೆ ನಿರ್ಮಿಸಲು ಸ್ಥಳೀಯ ಜನತೆ ಅವಕಾಶ ನೀಡಬೇಕಿತ್ತು.

ಇದರಿಂದ ಹೆಚ್ಚಿನ ಸಮಸ್ಯೆ ಬಗೆಹರಿಯುತ್ತಿತ್ತು’ ಎಂದು ‘ಪ್ರಜಾವಾಣಿ’ಗೆ ಹಿರಿಯ ಅಧಿಕಾರಿಗಳು ತಿಳಿಸಿದರು. (30 ಅಡಿ ಎತ್ತರದ ತಡೆಗೋಡೆ ನಿರ್ಮಿಸಿದರೆ ಮಸಿ ಹಾರಾಡುವ ಪ್ರಮಾಣ ಕಡಿಮೆಯಾಗದು. ತನ್ನ ಚಟುವಟಿಕೆಗಳನ್ನು ಜನರು ನೋಡಬಾರದು ಎಂಬ ಕಾರಣಕ್ಕೇ ಈ ತಡೆಗೋಡೆ ನಿರ್ಮಿಸಲು ಕಂಪೆನಿ ಮುಂದಾಗಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೋರಾಟಕ್ಕಿಳಿದ ಸ್ಥಳೀಯರು ತಡೆಗೋಡೆ ನಿರ್ಮಾಣವನ್ನು ತಡೆಹಿಡಿದಿದ್ದಾರೆ.)

‘ಜೋಕಟ್ಟೆಯ ಜನ ಕೋಕ್ ಘಟಕದಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದಾದರೆ ಎಂಆರ್‌ಪಿಎಲ್ ಸ್ಥಾವರದ ಆವರಣದೊಳಗೆ ಇರುವ ಕಂಪೆನಿಯ 600ಕ್ಕೂ ಅಧಿಕ ಕುಟುಂಬಗಳಿಗೂ ಇದೇ ತೊಂದರೆ ಬರಬೇಕಿತ್ತು. ಕೋಕ್ ಘಟಕದ ಮಾಲಿನ್ಯವೇ ಸಮಸ್ಯೆಗೆ ಕಾರಣ ಎಂದು ಇದುವರೆಗೆ ಯಾವ ವೈದ್ಯರೂ ಅಧಿಕೃತವಾಗಿ ತಿಳಿಸಿಲ್ಲ, ವೈಜ್ಞಾನಿಕವಾಗಿಯೂ ದೃಢಪಟ್ಟಿಲ್ಲ. ಇಲ್ಲಿ ಸಲ್ಫರ್, ಕೋಕ್ ಘಟಕ ಸ್ಥಾಪಿಸಿರುವುದು ರಾಜ್ಯ ಮಾತ್ರವಲ್ಲ, ಇಡೀ ದಕ್ಷಿಣ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಂದ ಆಗುವ ಮಾಲಿನ್ಯ ಕಡಿಮೆಗೊಳಿಸಲು. ಇದನ್ನು ಜನ ಅರ್ಥೈಸಿಕೊಳ್ಳಬೇಕು’ ಎನ್ನುತ್ತಾರೆ ಅಧಿಕಾರಿಗಳು.

(ಕೋಕ್ ಘಟಕದ ಸಮೀಪದಲ್ಲೇ ಇರುವ ವೈದ್ಯರೊಬ್ಬರ ಬಳಿ ಘಟಕದಿಂದ ಜನರಿಗೆ ಉಸಿರಾಟದ ತೊಂದರೆ ಕಾಣಿಸಿದೆಯೇ ಎಂದು ಕೇಳಿದಾಗ ಅವರಿಂದ ನಕಾರಾತ್ಮಕ ಉತ್ತರ ಬಂತು. ‘ಘಟಕ ಆರಂಭವಾಗುವುಕ್ಕೆ ಮೊದಲು ಹೇಗಿದೆಯೋ ಅದೇ ಪರಿಸ್ಥಿತಿ ಈಗಲೂ ಇದೆ. ಜನರು ಸಾಮಾನ್ಯ ಕಾಯಿಲೆಗಳಿಗೆ ಬರುತ್ತಿದ್ದಾರೆ. ಆದರೆ ಘಟಕ ಆರಂಭವಾದ ಬಳಿಕ ಕೆಟ್ಟ ವಾಸನೆಯಂತೂ ಬರುತ್ತಿದೆ. ಶಬ್ದ ಮಾಲಿನ್ಯ ಅಷ್ಟೇನೂ ಇಲ್ಲ’ ಎಂದರು.)

‘ಎಂಆರ್‌ಪಿಎಲ್ ಒಂದು ಸರ್ಕಾರಿ ಸ್ವಾಮ್ಯದ ಕಂಪೆನಿ. ಹೀಗಾಗಿ ಪ್ರತಿಭಟನೆ ಮಾಡುವವರು ಈ ಕಂಪೆನಿಯನ್ನೇ ಹೆಚ್ಚು ಗುರಿಯಾಗಿ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಟ್ಟ ವಾಸನೆಗೆ ಮೂಲ ಕೇವಲ ಎಂಆರ್‌ಪಿಎಲ್ ಅಲ್ಲ, ಸಮೀಪದಲ್ಲೇ ಬಿಎಎಸ್‌ಎಫ್ ರಾಸಾಯನಿಕ ಕಾರ್ಖಾನೆಯೂ ಇದೆ. ಪ್ರತಿಭಟನಾಕಾರರು ಆ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ?’ ಎಂಬ ಬೇಸರವೂ ಕಂಪೆನಿ ಅಧಿಕಾರಿಗಳಲ್ಲಿದೆ. ಮಂಗಳೂರಿನ ಸೆರಗಲ್ಲಿ ಎಂಆರ್‌ಪಿಎಲ್ ಎಂಬ ಕೆಂಡವೊಂದೇ ಅಡಗಿರುವುದಲ್ಲ, ಅಂತಹ ಹಲವಾರು ಅಪಾಯಕಾರಿ ಉದ್ಯಮಗಳು ಸ್ಥಾಪನೆಗೊಂಡಿದ್ದನ್ನೂ ಗಮನಿಸಬೇಕು.

5 ಅಪಾಯಕಾರಿ ಕೈಗಾರಿಕೆಗಳು: ಕೈಗಾರಿಕೆಗಳನ್ನು ಅವುಗಳಿಂದ ಹೊರಹೊಮ್ಮುವ ಮಾಲಿನ್ಯಕ್ಕೆ ತಕ್ಕಂತೆ ‘ರೆಡ್’ ‘ಆರೆಂಜ್’ ಮತ್ತು ‘ಗ್ರೀನ್’ ಎಂಬ ವಿಭಾಗ ಮಾಡಲಾಗುತ್ತದೆ. ‘ರೆಡ್’ ವಿಭಾಗ ಎಂದರೆ ಅತ್ಯಧಿಕ ಪ್ರಮಾಣದಲ್ಲಿ ಮಾಲಿನ್ಯ ಹೊರಹೊಮ್ಮುವ ಕೈಗಾರಿಕೆಗಳು. ಮಂಗಳೂರು ಸಮೀಪ 5 ಉದ್ಯಮಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ‘ರೆಡ್’ ವಿಭಾಗಕ್ಕೆ ಸೇರಿಸಿದೆ. ಅವುಗಳೆಂದರೆ ಎಂಆರ್‌ಪಿಎಲ್, ಬಿಎಎಸ್‌ಎಫ್, ಎಂಸಿಎಫ್, ಒಎಂಪಿಎಲ್ ಮತ್ತು ಸಿಕ್ವೆಂಟ್ ಸೈಂಟಿಫಿಕ್ ಲಿಮಿಟೆಡ್.

ಬೈಕಂಪಾಡಿಯಿಂದ ಸುರತ್ಕಲ್ ನಡುವಿನ ಪ್ರದೇಶದಲ್ಲಿ ಈ ಎಲ್ಲ ಕೈಗಾರಿಕೆಗಳೂ ಇವೆ. ಬೈಕಂಪಾಡಿ, ಸುರತ್ಕಲ್‌ಗಳು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳಾದರೆ, ಜೋಕಟ್ಟೆಯನ್ನು ಒಳಗೊಂಡ ತೋಕೂರು, ಪೆರ್ಮುದೆ, ಕೆಂಜಾರು, ಕಳವಾರು, ಬಾಳ ಮೊದಲಾದವುಗಳು ಮಂಗಳೂರಿಗೆ ತಾಗಿಕೊಂಡೇ ಇರುವ ನೆರೆಹೊರೆ ಗ್ರಾಮ ಪಂಚಾಯಿತಿಗಳು. ಬಾಳ ಗ್ರಾಮವನ್ನು ಬಹುತೇಕ ಪೂರ್ತಿ ಬಳಸಿಕೊಂಡು ಎಂಆರ್‌ಪಿಎಲ್ ಸ್ಥಾಪನೆಗೊಂಡಿದೆ.

ಎಂಆರ್‌ಪಿಎಲ್‌ನಲ್ಲಿ ಕಚ್ಚಾ ತೈಲವನ್ನು ಶುದ್ಧೀಕರಿಸಿ ವಿಮಾನ ಇಂಧನ, ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸಹಿತ 30ಕ್ಕೂ ಅಧಿಕ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ. ಒಎಂಪಿಎಲ್ ಕಂಪೆನಿಯಲ್ಲಿ ಭಾರಿ ಪ್ರಮಾಣದಲ್ಲಿ ಪೆರಾಕ್ಸ್ಲೀನ್ ಮತ್ತು ಬೆಂಝೀನ್ ತಯಾರಾಗುತ್ತದೆ. ಬಿಎಎಸ್‌ಎಫ್ ಹಾಗೂ ಎಂಸಿಎಫ್ ಕಂಪೆನಿಗಳಲ್ಲಿ ಕೂಡ ಹಲವು ರಾಸಾಯನಿಕಗಳನ್ನು ಉತ್ಪಾದಿಸಲಾಗುತ್ತಿದೆ. ಸಿಕ್ವೆಂಟ್ ಸೈಂಟಿಫಿಕ್ ಕಂಪೆನಿ ಔಷಧ ತಯಾರಿಕಾ ಸಂಸ್ಥೆ.

ಮಂಗಳೂರು ಒಂದು ಕಡೆ ನೇತ್ರಾವತಿ, ಇನ್ನೊಂದು ಕಡೆ ಗುರುಪುರ ನದಿಗಳಿಂದ ಸುತ್ತುವರಿದ ನಗರ. ಕೂಳೂರಿನಲ್ಲಿ ಗುರುಪುರ ನದಿ ಹರಿಯುತ್ತದೆ. ಇಲ್ಲೇ ಸಮೀಪ ಐಒಸಿಎಲ್, ಕುದುರೆಮುಖ ಕಬ್ಬಿಣದ ಅದಿರು ಸ್ಥಾವರ, ಎನ್‌ಎಂಪಿಟಿ ಬಂದರು ಇದೆ. ಪಕ್ಕದಲ್ಲೇ ಇದೆ ಎಂಸಿಎಫ್. ಬೈಕಂಪಾಡಿಯಿಂದ ಸುರತ್ಕಲ್‌ನ ಎನ್‌ಐಟಿಕೆವರೆಗೂ ದೇಶದ ಮಟ್ಟಿಗೆ ಭಾರಿ ಮಹತ್ವದ, ಭಾರಿ ಅಪಾಯಕಾರಿ ಕಾರ್ಖಾನೆಗಳಿವೆ.

ಮತ್ತೊಂದೆಡೆ ಇರುವುದೇ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಹೀಗಾಗಿ ಕಡಲ ತೀರದ ಮಂಗಳೂರು ಅತ್ಯಂತ ಸೂಕ್ಷ್ಮ ಪ್ರದೇಶ. ಈಗಾಗಲೇ ಪಡುಬಿದ್ರಿ ಸಮೀಪದ ಪಾದೂರು ಮತ್ತು ಮಂಗಳೂರು ಹೊರವಲಯದ ಪೆರ್ಮುದೆಯಲ್ಲಿ ಎರಡು ಬೃಹತ್ ಭೂಗತ ಕಚ್ಚಾತೈಲ ಸಂಗ್ರಹಾಗಾರಗಳನ್ನು ಸ್ಥಾಪಿಸಲಾಗಿದೆ. ಎನ್‌ಎಂಪಿಟಿ ಸಮೀಪ ಮುಂದಿನ ದಿನಗಳಲ್ಲಿ ದ್ರವೀಕೃತ ನೈಸರ್ಗಿಕ ಅನಿಲ ಘಟಕ ಸ್ಥಾಪನೆಗೊಳ್ಳಲಿದೆ.

ಮುಂಬೈ ದಾಳಿ ಬಳಿಕ ಸಮುದ್ರ ಕಿನಾರೆಗಳ ನಗರಗಳೆಲ್ಲವೂ ಯಾವಾಗಲೂ ಉಗ್ರರ ದಾಳಿಗೆ ಒಳಗಾಗುವ ಸಾಧ್ಯತೆ ಇರುವ ಸ್ಥಳಗಳಾಗಿಯೇ ಗುರುತಿಸಿಕೊಂಡಿವೆ. ಸಹಜವಾಗಿಯೇ ಮಂಗಳೂರು ಪಾಲಿಗೆ ಎಂಆರ್‌ಪಿಎಲ್, ಒಎಂಪಿಎಲ್, ಬಿಎಎಸ್ಎಫ್, ಎಂಸಿಎಫ್‌ನಂತಹ ಘಟಕಗಳು ಸೆರಗಲ್ಲಿ ಕೆಂಡ ಇಟ್ಟುಕೊಂಡಂತಹ ಕಾರ್ಖಾನೆಗಳು. ಎನ್‌ಎಂಪಿಟಿಯಲ್ಲೂ ದೊಡ್ಡ ಪ್ರಮಾಣದ ತೈಲ ಜೆಟ್ಟಿಗಳಿವೆ. ಎಲ್ಲೇ ಏನೇ ಒಂದು ಸಣ್ಣ ಅನಾಹುತ ಆದರೂ ಇಡೀ ಮಂಗಳೂರು ನಗರ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ.

ಹೀಗಾಗಿ ಮಂಗಳೂರು ಸುತ್ತಮುತ್ತಲಿನ ಅಪಾಯಕಾರಿ ಕಾರ್ಖಾನೆಗಳು ಮೊದಲಾಗಿ ಮಾಲಿನ್ಯ ಹಾಗೂ ಎರಡನೆಯದಾಗಿ ಸುರಕ್ಷತೆ ದೃಷ್ಟಿಯಿಂದ ಬಹಳ ಸೂಕ್ಷ್ಮ ಸ್ಥಾವರಗಳು. ಬಂದರು ನಗರದ ಸುತ್ತಮುತ್ತ ಇಂತಹ ಅಪಾಯವನ್ನು ಮೈಮೇಲೆ ಹಾಕಿಕೊಂಡು ಅಭಿವೃದ್ಧಿ ಸಾಧಿಸಬೇಕಾಗುತ್ತದೆ ಎಂಬ ಮಾತು ಸಾಮಾನ್ಯವಾದರೂ, ಜನರ ಜೀವ, ಆಸ್ತಿಪಾಸ್ತಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಎಂಆರ್‌ಪಿಎಲ್‌ನಿಂದ ಮಂಗಳೂರಿನ ಆರ್ಥಿಕ ಚಿತ್ರಣ ಬದಲಾಗಿರುವುದು ನಿಜ. ಯೋಜನಾ ಪ್ರದೇಶದಲ್ಲಿ 1,200ರಷ್ಟು ಮಂದಿಗೆ ಕಾಯಂ ಉದ್ಯೋಗ ಲಭಿಸಿದ್ದರೆ, 4 ಸಾವಿರಕ್ಕೂ ಅಧಿಕ ಮಂದಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಸುತ್ತಮುತ್ತಲಿನ ಅನೇಕ ಮಂದಿಯ ಜೀವನ ಮಟ್ಟ ಎಂಆರ್‌ಪಿಎಲ್‌ನಿಂದಾಗಿ ಸುಧಾರಿಸಿದೆ. ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ ಬದಲಿ ನಿವೇಶನ, ಅರ್ಹತೆ ಇದ್ದವರಿಗೆ ಉದ್ಯೋಗ ಲಭಿಸಿದೆ. ಆದರೆ ಭಾರಿ ಕಷ್ಟ ಎದುರಾಗಿರುವುದು ಯೋಜನಾ ಪ್ರದೇಶದಿಂದ ಹೊರಗಡೆ ಇರುವವರಿಗೆ.

ಇವರು ಸಂತ್ರಸ್ತರಲ್ಲ. ಕೋಕ್ ಮಸಿ, ದುರ್ವಾಸನೆಯಿಂದಾಗಿ ಇವರ ಜಮೀನಿಗೆ ಬೇಡಿಕೆ ಇಲ್ಲ. ಹಾಗಂತ ಎಂಆರ್‌ಪಿಎಲ್ ಸಮೀಪದ ಜಮೀನು, ಜಮೀನಿನಲ್ಲಿರುವ ಅಂತರ್ಜಲ ಪೂರ್ತಿಯಾಗಿ ಮಲಿನಗೊಂಡಿದೆ ಎಂಬುದೂ ಸಾಬೀತಾಗಿಲ್ಲ. ದೇಶಕ್ಕೆ ಭಾರಿ ಒಳಿತು ಉಂಟುಮಾಡುತ್ತಿರುವ ಭವ್ಯ ಕಂಪೆನಿಯನ್ನು ನೋಡುತ್ತ ದಿನಾ ಕಣ್ಣೀರು ಹಾಕುವ ದುರ್ಗತಿ ಇಲ್ಲಿನ ಜನರದು.

‘ಮಿನಿರತ್ನ’ ಕಂಪೆನಿ ತನ್ನೂರಿಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ರೂಪದಲ್ಲಿ ನೀಡಿದ ಕೊಡುಗೆ ಅಂತಹ ದೊಡ್ಡದೇನಿಲ್ಲ. ಮಂಗಳೂರಿನಲ್ಲಿ ಲೇಡಿಗೋಶನ್ ಆಸ್ಪತ್ರೆಗೆ ₹ 24 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ಕಟ್ಟಡ ನಿರ್ಮಿಸಲಾಗುತ್ತಿದೆ. ಎಂಆರ್‌ಪಿಎಲ್‌ನ ಪ್ರಧಾನ ಕಚೇರಿ ಇರುವ ಕುತ್ತೆತ್ತೂರಿಗೂ ಕಂಪೆನಿಯ ನೆರವು ದೊರಕಿದ್ದು ಅಷ್ಟಕ್ಕಷ್ಟೇ. ‘2014–15ನೇ ಸಾಲಿನಲ್ಲಿ ₹4.81 ಕೋಟಿ ಮೊತ್ತದ ಕೊಡುಗೆಗಳನ್ನು, ಕಾಮಗಾರಿಗಳನ್ನು ಸಿಎಸ್‌ಆರ್ ಅಡಿಯಲ್ಲಿ ಕಂಪೆನಿ ನಿಭಾಯಿಸಿದೆ.

ಈಗಾಗಲೇ ಆರಂಭವಾಗಿರುವ ಲೇಡಿಗೋಶನ್ ಆಸ್ಪತ್ರೆಯ ಕಟ್ಟಡ ಕಾಮಗಾರಿ ಮುಂದುವರಿದಿದೆ. ಚೇಳ್ಯಾರಿನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ವಿತರಣೆ, ಚೇಳ್ಯಾರು ಪುನರ್ವಸತಿ ಕೇಂದ್ರದಲ್ಲಿ ಉಚಿತ ಪ್ರಾಥಮಿಕ ಆರೋಗ್ಯ ಕೇಂದ್ರ ನಿಭಾವಣೆ, ಎಂಆರ್‌ಪಿಎಲ್ ಸುತ್ತಮುತ್ತಲಿನ ಶಾಲಾ, ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ, ಎಲ್‌ಪಿಜಿ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ’ ಎಂದು ಕಂಪೆನಿ ಹೇಳಿಕೊಂಡಿದೆ.

ಆದರೆ ಎಂಆರ್‌ಪಿಎಲ್ ಸಮೀಪದ ರಸ್ತೆಗಳ ದುರಸ್ತಿಯಂಥ ಅಗತ್ಯ ಕಾರ್ಯಗಳಿಗೆ ಹಣ ಸಂದಾಯವಾಗಿಲ್ಲ. ಹೀಗಾಗಿ ಎಂಆರ್‌ಪಿಎಲ್‌ನ ಕಾಂಪೌಂಡ್ ಸಮೀಪದ ರಸ್ತೆಯಲ್ಲಿ ಸಂಚರಿಸಲು ಅಸಾಧ್ಯ ಸ್ಥಿತಿ ಇದೆ. ಕುತ್ತೆತ್ತೂರನ್ನು ಒಳಗೊಂಡ ಪೆರ್ಮುದೆ ಗ್ರಾಮ ಪಂಚಾಯಿತಿ ಇನ್ನೊಂದು ಲ್ಯಾಪ್‌ಟಾಪ್ ತೆಗೆದುಕೊಳ್ಳಲೂ ಸಾಧ್ಯವಿಲ್ಲದಂಥ ಬಡತನದಲ್ಲಿದೆ.

‘ಎಂಆರ್‌ಪಿಎಲ್ ಕಾಂಪೌಂಡ್ ಸಮೀಪ ರಸ್ತೆಗಳು ಈಗಾಗಲೇ ಸ್ವಾಧೀನಪಡಿಸಿಕೊಂಡ ಸ್ಥಳದಲ್ಲಿ ಬರುತ್ತದೆ. ಅಲ್ಲಿ ತಾಂತ್ರಿಕವಾಗಿ ಸಾರ್ವಜನಿಕರು ಸಂಚಾರ ನಡೆಸುವಂತಿಲ್ಲ. ಜನರಿಗೆ ತೊಂದರೆ ಕೊಡುವುದು ಬೇಡ ಎಂಬ ಕಾರಣಕ್ಕೆ ಸದ್ಯ ಅಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕೊಡಲಾಗಿದೆ’ ಎಂದು ಸಮಜಾಯಿಷಿ ನೀಡುತ್ತಾರೆ ಕಂಪೆನಿ ಅಧಿಕಾರಿಗಳು.

ಎಂಆರ್‌ಪಿಎಲ್‌ನ ಮುಂದಿನ ಹಂತದ ವಿಸ್ತರಣಾ ಯೋಜನೆಗಳಿಗಾಗಿ 1,050 ಎಕರೆ ಜಮೀನು ಬೇಕಾಗುತ್ತದೆ. ಎಕ್ಕಾರು, ಪೆರ್ಮುದೆ, ತಿಬಾರು ಮತ್ತು ಕುತ್ತೆತ್ತೂರು ಗ್ರಾಮಗಳಲ್ಲಿ ಈಗಾಗಲೇ ಈ ಜಮೀನು ಗುರುತಿಸುವ ಕೆಲಸವೂ ನಡೆದಿದೆ. ಕೋಕ್ ಘಟಕದಿಂದ ಜೋಕಟ್ಟೆ ಒಳಗೊಂಡ ತೋಕೂರು, ಕಳವಾರು, ಕೆಂಜಾರು ಗ್ರಾಮಗಳು ಬಹಳ ಕಷ್ಟ ಪಡುತ್ತಿವೆ. ಮುಂದೆ ವಿಸ್ತರಣಾ ಪ್ರದೇಶಗಳಲ್ಲಿ ಎಂತಹ ಮಾಲಿನ್ಯ ಉಂಟುಮಾಡುವ ಘಟಕಗಳು ಸ್ಥಾಪನೆಗೊಳ್ಳಬಹುದೋ ಎಂಬ ಭೀತಿ ಜನರನ್ನು ಕಾಡತೊಡಗಿದೆ.

ಆದರೆ ‘ಪೆಟ್ರೋಲಿಯಂ ಹಬ್’ ನಿರ್ಮಾಣದ ಕನಸು ಪೂರ್ತಿಯಾಗಿ ಈಡೇರಬೇಕಾದರೆ ಇನ್ನಷ್ಟು ಜಮೀನು ಬೇಕಾಗುತ್ತದೆ ಎಂಬುದನ್ನು ಜಿಲ್ಲಾಡಳಿತವೇ ಒಪ್ಪಿಕೊಳ್ಳುತ್ತದೆ. ‘ಈಗಾಗಲೇ ಸ್ವಾಧೀನಪಡಿಸಿಕೊಂಡು ಘಟಕ ಸ್ಥಾಪನೆಗೊಂಡ ಸ್ಥಳದಲ್ಲಿ ಸಮರ್ಪಕವಾಗಿ ಜಮೀನಿನ ಬಳಕೆ ಆಗಿಲ್ಲ’ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಪೆಟ್‌ಕೋಕ್ ಘಟಕವನ್ನು ಪೂರ್ತಿಯಾಗಿ ಸ್ಥಳಾಂತರಗೊಳಿಸದೆ ಅಥವಾ ಕೋಕ್ ಘಟಕದಿಂದ ತೊಂದರೆಗೆ ಒಳಗಾಗುವ ಪ್ರದೇಶವನ್ನು ಪೂರ್ತಿಯಾಗಿ ಕಂಪೆನಿ ಸ್ವಾಧೀನಪಡಿಸಿಕೊಳ್ಳುವವರೆಗೆ ತನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದು ಜೋಕಟ್ಟೆ ನಾಗರಿಕರ ಹೋರಾಟ ಸಮಿತಿ ಹೇಳುತ್ತಿದೆ. ಕೋಕ್ ಡಂಪಿಂಗ್ ಘಟಕವನ್ನಷ್ಟೇ ಸ್ಥಳಾಂತರಿಸುವುದಕ್ಕೆ ಕಂಪೆನಿ ಇದೀಗ ಒಪ್ಪಿಕೊಂಡಿದೆ.

ಜೋಕಟ್ಟೆ ನಾಗರಿಕರು ತಮ್ಮ ನ್ಯಾಯೋಚಿತ ಹೋರಾಟದಲ್ಲಿ ಗೆದ್ದರೇ, ಬಿದ್ದರೇ? ಕಂಪೆನಿ ತನ್ನ ಮಾತುಗಳನ್ನು ಉಳಿಸಿಕೊಂಡು ತಮ್ಮ ಸ್ಥಾವರದ ಸುತ್ತಮುತ್ತಲಿನ ಜನರ ಬದುಕನ್ನು ಹಸನಾಗಿಸಿತೇ? ಬರಡಾಗಿಸಿತೇ ಎಂಬುದನ್ನು ತಿಳಿಯಲು ಇನ್ನೂ ಕನಿಷ್ಠ 2 ವರ್ಷ ಕಾಯಲೇಬೇಕು. ಸಮಸ್ಯೆಯಿಂದ ಕೂಡಿದ ಜೋಕಟ್ಟೆ ಜನವಸತಿ ಪ್ರದೇಶವನ್ನು ಎಂಆರ್‌ಪಿಎಲ್ ಸ್ವಾಧೀನಪಡಿಸಿಕೊಳ್ಳುವ ಮನಸ್ಸು ಮಾಡುತ್ತದೆಯೇ ಎಂಬುದಂತೂ ಸಾವಿರಾರು ಕೋಟಿ ರೂಪಾಯಿಗಳ ಪ್ರಶ್ನೆ.

‘ಮಾಲಿನ್ಯ ಆಗುತ್ತಿರುವುದು ನಿಜ’
ಜೋಕಟ್ಟೆ ಜನರ ಒತ್ತಾಯದ ಮೇರೆಗೆ ಜಿಲ್ಲಾಡಳಿತ ರಚಿಸಿದ ಪರಿಣತರ ತಂಡದ ನೇತೃತ್ವ ವಹಿಸಿದ್ದವರು ಸುರತ್ಕಲ್‌ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕದ ರಸಾಯನ ವಿಜ್ಞಾನ ವಿಭಾಗದ ಪ್ರೊಫೆಸರ್ ಡಾ.ಜಿ.ಶ್ರೀನಿಕೇತನ್. ತಂಡದಲ್ಲಿ ಎಂಆರ್‌ಪಿಎಲ್ ನಿರ್ದೇಶಕ ವೆಂಕಟೇಶ್, ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಹಿರಿಯ ಪರಿಸರ ಅಧಿಕಾರಿ ಎನ್.ಲಕ್ಷ್ಮಣ್, ನಾಗರಿಕ ಹೋರಾಟ ಸಮಿತಿಯ ಪರವಾಗಿ ನರೇಂದ್ರ ನಾಯಕ್, ಮುನೀರ್ ಕಾಟಿಪಳ್ಳ, ಬಿ.ಎಸ್.ಹುಸೇನ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಯೂ ಆದ ಸದಸ್ಯ ಸಂಯೋಜಕ ರಾಜಶೇಖರ ಪುರಾಣಿಕ್ ಇದ್ದರು. ಪೆಟ್‌ಕೋಕ್ ಉತ್ಪಾದಿಸುವ ಡಿಲೇಯ್ಡ್ ಕೋಕರ್ ಯೂನಿಟ್, ಸಲ್ಫರ್ ಉತ್ಪಾದನೆಯ ಸಲ್ಫರ್ ರಿಕವರ್ ಯೂನಿಟ್ ಮತ್ತು ಪೆಟ್‌ಕೋಕ್ ಲೋಡಿಂಗ್ ಪ್ರದೇಶಗಳಿಗೆ ಯಂತ್ರೋಪಕರಣಗಳೆಲ್ಲ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗಲೇ ಈ ತಂಡ ಭೇಟಿ ನೀಡಿತ್ತು.

ಘಟಕದಿಂದಾಗುತ್ತಿರುವ ಸಮಸ್ಯೆಗಳನ್ನು ಪರಿಣತರ ತಂಡ ಗುರುತಿಸಿಕೊಂಡು ಎಂಆರ್‌ಪಿಎಲ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅದರಂತೆ ಜನವಸತಿ ಪ್ರದೇಶದ ಸಮೀಪದಲ್ಲೇ ಇರುವ ಪೆಟ್‌ಕೋಕ್ ನಿರ್ವಹಣೆಯ 3 ಸೈಲೊಗಳನ್ನು 500 ಮೀಟರ್‌ನಷ್ಟು ಒಳಭಾಗಕ್ಕೆ ಸ್ಥಳಾಂತರಿಸಲು ಕಂಪೆನಿ ಒಪ್ಪಿದೆ. ಅಲ್ಲಿ ಮುಂದಿನ ದಿನಗಳಲ್ಲಿ ಒಟ್ಟು ಆರು ಸೈಲೊಗಳೊಂದಿಗೆ ಡಂಪಿಂಗ್ ಘಟಕ ಸ್ಥಾಪನೆಗೊಳ್ಳಲಿದ್ದು, ಜನವಸತಿ ಪ್ರದೇಶದ ಬಳಿ ಮುಂದೆ ಪೆಟ್‌ಕೋಕ್ ಲೋಡಿಂಗ್ ಕಾರ್ಯ ನಡೆಯುವುದಿಲ್ಲ.

ಇದಕ್ಕೆ 2 ವರ್ಷ ಬೇಕು ಎಂದು ಕಂಪೆನಿ ತಿಳಿಸಿದೆ. ರೈಲ್ವೆ ಬೋಗಿಗಳಿಗೇ ಕೋಕ್ ತುಂಬಿಸುವ ನಿಟ್ಟಿನಲ್ಲಿ ಕೊಂಕಣ ರೈಲ್ವೆ ನಿಗಮ ಸಮೀಕ್ಷೆ ಪೂರ್ಣಗೊಳಿಸಿದೆ ಎಂದು ತಿಳಿಸಲಾಗಿದೆ. ದುರ್ನಾತ ಬರುವುದು ಸಲ್ಫರ್ ಘಟಕದಿಂದಲೇ ಎಂಬುದು ದೃಢಪಟ್ಟಿದೆ. ದ್ರವೀಕೃತ ಸಲ್ಫರ್ ಅನ್ನು ಬಯಲು ಪ್ರದೇಶಕ್ಕೆ ಪಂಪ್ ಮಾಡುವುದನ್ನು ಸ್ಥಗಿತಗೊಳಿಸಲು, ಸ್ಟೋರೇಜ್ ಘಟಕದಲ್ಲಿ ಸಲ್ಫರ್ ಉಂಡೆಗಳನ್ನು ಮಾತ್ರ ದಾಸ್ತಾನು ಮಾಡಲು ಕಂಪೆನಿ ಒಪ್ಪಿಕೊಂಡಿದೆ. ದುರ್ವಾಸನೆ ಬರುವುದಕ್ಕೆ ಇನ್ನೊಂದು ಕಾರಣ ಸ್ಲೋಪ್ ಸ್ಟೋರೇಜ್ ಟ್ಯಾಂಕ್ ಆಗಿದ್ದು, ಇಲ್ಲಿಂದ ದುರ್ವಾಸನೆ ಬರುವುದನ್ನು ತಪ್ಪಿಸಲು ಸ್ಟೀಮ್ ರಿಂಗ್ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಕಂಪೆನಿ ಹೇಳಿದೆ.

ಆದರೆ ಜೋಕಟ್ಟೆ ಪ್ರದೇಶದಲ್ಲಿ ಎಂಆರ್‌ಪಿಎಲ್‌ನಿಂದಾಗಿಯೇ ಅಂತರ್ಜಲ ಮಲಿನಗೊಂಡಿರುವುದನ್ನು ಕಂಪೆನಿ ಒಪ್ಪಿಕೊಂಡಿಲ್ಲ. ಜೋಕಟ್ಟೆ ಪ್ರದೇಶದಲ್ಲಿ ಕಾಲಕಾಲಕ್ಕೆ ಅರ್ಹ ಪ್ರಯೋಗಾಲಯಗಳಿಂದ ಗಾಳಿಯ ಗುಣಮಟ್ಟ ಪರೀಕ್ಷೆ (ಆಂಬಿಯಂಟ್ ಏರ್ ಕ್ವಾಲಿಟಿ ಮಾನಿಟರಿಂಗ್– ಎಎಕ್ಯುಎಂ), ತೆರೆದ ಬಾವಿಗಳಲ್ಲಿನ ನೀರಿನ ಗುಣಮಟ್ಟ ಮತ್ತು ಶಬ್ದ ಮಾಲಿನ್ಯದ ತಪಾಸಣೆಯನ್ನು ಮಾಡಿಸುತ್ತಲೇ ಇರಬೇಕು ಎಂದು ತಜ್ಞ ಸಮಿತಿ ಸೂಚಿಸಿದೆ.

ಜೋಕಟ್ಟೆಯಲ್ಲಿ ಆರೋಗ್ಯ ತಪಾಸಣೆ ಕಾಲಕಾಲಕ್ಕೆ ನಡೆಯುತ್ತಲೇ ಇರಬೇಕು ಎಂದು ಹೇಳಿರುವ ಸಮಿತಿ, ಕೋಕ್–ಸಲ್ಫರ್ ಘಟಕ ಮತ್ತು ಜನವಸತಿ ಪ್ರದೇಶದ ನಡುವೆ ಸಾಕಷ್ಟು ಖಾಲಿ ಸ್ಥಳ ಇಲ್ಲದಿರುವುದೇ ಉದ್ಯಮ ವಿರುದ್ಧ ಜನ ರೊಚ್ಚಿಗೇಳಲು ಕಾರಣ ಎಂಬುದನ್ನು ಬೆಟ್ಟುಮಾಡಿ ತೋರಿಸಿದೆ. ನೆರೆಹೊರೆಯ ಜನರಲ್ಲಿ ಇರುವ ಅಪನಂಬಿಕೆ ಮತ್ತು ಸುಳ್ಳು ಮಾಹಿತಿ ಹರಡದಂತೆ ನೋಡಿಕೊಳ್ಳಲು ಎಂಆರ್‌ಪಿಎಲ್ ಅಧಿಕಾರಿಗಳು ಪಾರದರ್ಶಕ ಮತ್ತು ವಿಶ್ವಾಸ ವೃದ್ಧಿಸುವಂತಹ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ಸಮಿತಿ ಸೂಚಿಸಿದೆ. (ಉನ್ನತ ಮಟ್ಟದ ಸಮಿತಿ ನಡೆಸಿದ ಸಭೆಗಳು, ಕಂಡುಕೊಂಡ ಸತ್ಯಾಂಶಗಳು ಮತ್ತು ಸಮಿತಿಯ ಮುಂದೆ ಕಂಪೆನಿ ಮಾಡಿಕೊಂಡ ಬದ್ಧತೆಗಳ ವಿವರ ‘ಪ್ರಜಾವಾಣಿ’ ಬಳಿ ಇದೆ).

ಕಾಲ ಮಿಂಚಿ ಹೋಗಿದೆ. ಘಟಕವನ್ನು ಪೂರ್ತಿ ಸ್ಥಳಾಂತರಿಸಲೂ ಸಾಧ್ಯವಿಲ್ಲ, ದಟ್ಟಣೆಯಿಂದ ಕೂಡಿರುವ ಜೋಕಟ್ಟೆಯ ಜನವಸತಿ ಪ್ರದೇಶವನ್ನು ಬೇರೆಡೆಗೆ ಸಾಗಿಸುವುದೂ ಅಸಾಧ್ಯ. ಕಂಪೆನಿ ಮತ್ತು ಜನ ಹೊಂದಿಕೊಂಡು ಹೋಗುವುದೇ ಉಳಿದಿರುವ ದಾರಿ
-ಎ.ಬಿ.ಇಬ್ರಾಹಿಂ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ಮಸಿ ಮಾಲಿನ್ಯ ಆಗುತ್ತಿರುವುದನ್ನು ಸ್ವತಃ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರೇ ಗುರುತಿಸಿದ್ದಾರೆ. ಕೋಕ್–ಸಲ್ಫರ್ ಘಟಕವನ್ನು ಸ್ಥಳಾಂತರಿಸುತ್ತಾರೋ, ಜನರನ್ನು ಸ್ಥಳಾಂತರಿಸುತ್ತಾರೋ, ಎಂಆರ್‌ಪಿಎಲ್ ಏನಾದರೊಂದು ಕೆಲಸ ಮಾಡಲೇಬೇಕು.
-ನಳಿನ್ ಕುಮಾರ್ ಕಟೀಲ್, ಸಂಸದ

ಜೋಕಟ್ಟೆಯಲ್ಲಿ ಎಂಆರ್‌ಪಿಎಲ್‌ನಿಂದ ತೊಂದರೆ ಆಗುತ್ತಿರುವುದು ನಿಜ. ನಾನು ಎರಡು ಬಾರಿ ಭೇಟಿ ಕೊಟ್ಟು ಜನರ ಕಷ್ಟ ಆಲಿಸಿದ್ದೇನೆ. ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಮಸಿ ಹಾರುವ ಪ್ರದೇಶವನ್ನು ಎಂಆರ್‌ಪಿಎಲ್ ಕಂಪೆನಿ ಸ್ವಾಧೀನಪಡಿಸಿಕೊಳ್ಳುವುದೇ ಸಮಸ್ಯೆಗೆ ಇರುವ ಪರಿಹಾರ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲಿದೆ.
-ಬಿ.ರಮಾನಾಥ ರೈ, ರಾಜ್ಯದ ಅರಣ್ಯ, ಪರಿಸರ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ

ಎಂಆರ್‌ಪಿಎಲ್ ಕೋಕ್ ಘಟಕದಲ್ಲಿನ ವಿನ್ಯಾಸದಲ್ಲೇ ತೊಂದರೆ ಇದೆ. ಜನವಸತಿ ಪ್ರದೇಶದ ಸಮೀಪದಲ್ಲೇ ಘಟಕ ಸ್ಥಾಪಿಸಿದ ಕಂಪೆನಿ ಜನರಿಗೆ ಒಂದಿಷ್ಟೂ ಕಷ್ಟ ಆಗದಂತೆ ನೋಡಿಕೊಳ್ಳಬೇಕಿತ್ತು. ಆದರೆ ಅದರಲ್ಲಿ ಸಂಪೂರ್ಣ ವಿಫಲವಾಗಿದೆ. ಜನರಿಗೆ ನೆಮ್ಮದಿ ಸಿಗದ ಹೊರತು ಹೋರಾಟ ಕೊನೆಗೊಳ್ಳುವುದಿಲ್ಲ.
-ಮುನೀರ್ ಕಾಟಿಪಳ್ಳ, ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.