ಧಾರವಾಡ ಸಾಹಿತ್ಯ ಸಂಭ್ರಮದ ಈ ಆವೃತ್ತಿಯಲ್ಲಿ ‘ಸಂಸ್ಕೃತಿ ಸಂವಾದ’ ಎಂಬ ಉಪಶೀರ್ಷಿಕೆ ಸೇರಿಕೊಂಡಿರುವುದು ಅರ್ಥಪೂರ್ಣ. ಸಂವಾದರಾಹಿತ್ಯದ, ಸಂವಾದಶೂನ್ಯತೆಯ ನಮ್ಮ ಈ ಕಾಲದಲ್ಲಿ ಸಂವಾದ ಸಂಸ್ಕೃತಿಯ ನಿರ್ಮಾಣಕ್ಕೆ ಈ ಸಮಾವೇಶ ತನ್ನ ಕಾಣಿಕೆಯನ್ನು ಸಲ್ಲಿಸೀತು ಎಂಬುದು ನನ್ನ ಆಶಯ. ಈ ಪ್ರಶ್ನೆಯನ್ನು ನಮ್ಮ ಆಧುನಿಕ ಚರಿತ್ರೆಯ ಒಟ್ಟು ಪರಿಪ್ರೇಕ್ಷ್ಯದಲ್ಲಿ ಇಟ್ಟು ನೋಡುವ ಪ್ರಯತ್ನವನ್ನು ನಾನು ಮಾಡಬಯಸುತ್ತೇನೆ. ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ, ಜಾಗತಿಕ ಮಟ್ಟದಲ್ಲಿ ಅಸಹನೆ, ಅಸಹಿಷ್ಣುತೆಗಳ ಅಧಿಕೃತ ಉದ್ಘಾಟನೆಯಾಯಿತು ಎನ್ನಬಹುದು.

ಅಸಹಿಷ್ಣುತೆ, ಅಸಹನೆಗಳು ಪರಮೋಚ್ಚ ಸ್ಥಿತಿಯನ್ನು ತಲುಪಿದ ಶತಮಾನ ಇದು. ಜರ್ಮನಿಯಲ್ಲಿ ಹಿಟ್ಲರನ ಫ್ಯಾಸಿಸಂ ಜನಾಂಗೀಯ ದ್ವೇಷವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡು ಅಲ್ಪಸಂಖ್ಯಾತರ ಮೇಲೆ ಅವ್ಯಾಹತ ದಬ್ಬಾಳಿಕೆಯನ್ನೂ ವ್ಯವಸ್ಥಿತ ನರಮೇಧವನ್ನೂ ನಡೆಸಿತು. ಸೋವಿಯತ್ ಯೂನಿಯನ್ನಿನಲ್ಲಿ ಸ್ಟಾಲಿನ್ನನ ನಿರಂಕುಶ ಪ್ರಭುತ್ವವು ಸಮತಾವಾದದ ಹೆಸರಿನಲ್ಲಿ ಭಿನ್ನಮತೀಯರ ಮೇಲೆ ದೌರ್ಜನ್ಯ ನಡೆಸಿ ಹಿಂಸೆಯನ್ನು ಅಧಿಕೃತಗೊಳಿಸಿತು. ಭಿನ್ನಮತ ಕುರಿತ ಅಸಹಿಷ್ಣುತೆ– ತಮಗಾಗದವರನ್ನು ನಿವಾರಿಸಿಕೊಳ್ಳಲು ರಾಜಕೀಯ ಸಿದ್ಧಾಂತಗಳ ಬಳಕೆ, ಹಿಂಸೆಯ ಸಂಸ್ಥೀಕರಣ– ಈ ಅಜೆಂಡಾಗಳಲ್ಲಿ ಬಲಪಂಥೀಯ, ಎಡಪಂಥೀಯರ ನಡುವೆ ಯಾವ ಮೂಲಭೂತ ವ್ಯತ್ಯಾಸವೂ ಇಲ್ಲ. ಇಬ್ಬರೂ ಸಂವಾದ, ಚರ್ಚೆಗಳನ್ನು ಒಲ್ಲರು. ತಾವು ಹೇಳಿದ್ದೇ ಸರಿ, ತಾವು ಪ್ರತಿಪಾದಿಸಿದ್ದೇ ಸತ್ಯ ಎಂಬ ಹಟ ಮತ್ತು ಧಾರ್ಷ್ಟ್ಯ ಇವರದು.

ಭಾರತ ಉಪಖಂಡದ ವಿಭಜನೆ ಮತ್ತು ಹೊಸ ರಾಷ್ಟ್ರಪ್ರಭುತ್ವಗಳ ಹುಟ್ಟಿನಲ್ಲಿಯೇ ಹಿಂಸೆ ಅಂತರ್ಗತವಾಗಿದೆ. ಸಂವಾದದ ದಾರಿಯನ್ನು ಬಿಟ್ಟು ಸಂಘರ್ಷದ ದಾರಿ ಹಿಡಿದದ್ದಕ್ಕೇ ಇಂದಿನವರೆಗೂ ಹಿಂಸೆ–ಅಸಹನೆ ಮುಂದುವರಿದಿರುವುದಷ್ಟೇ ಅಲ್ಲ, ವೃದ್ಧಿಯಾಗುತ್ತಲೇ ಬಂದಿದೆ. ನೂರಾರು ವರ್ಷಗಳಿಂದ ಬಾಳ್ವೆ ನಡೆಸುತ್ತಿದ್ದ ಎರಡು ಸಮುದಾಯಗಳ ನಡುವೆ ಸಂವಾದ ಮುರಿದು ಬಿದ್ದ ರಾಜಕೀಯ ಪರಿಣಾಮಗಳು ಘೋರವಾಗಿವೆ.

ಇತಿಹಾಸದ ವ್ಯಂಗ್ಯವೆಂದರೆ, ಹೀಗೆ ಹುಟ್ಟಿದ ಪಾಕಿಸ್ತಾನವು ಕೆಲವೇ ವರ್ಷಗಳಲ್ಲಿ ಮತ್ತೊಂದು ವಿಭಜನೆಗೆ ಸಾಕ್ಷಿಯಾಗಬೇಕಾಯಿತು. ಧರ್ಮದ ಹೆಸರಿನಲ್ಲಿ ಸೃಷ್ಟಿಯಾದ ದೇಶವು ಭಾಷೆಯ ಹೆಸರಿನಲ್ಲಿ ಒಡೆಯಿತು. ಆದರೆ ಬಂಗಾಳಿ ಭಾಷೆಯು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಗಳನ್ನು ಇನ್ನೂ ಭಾಷೆಯ ನೆಲೆಯಲ್ಲಿ ಒಗ್ಗೂಡಿಸಲು ಸಾಧ್ಯವಾಗಿಲ್ಲ ಎಂಬ ವಾಸ್ತವವೂ ನಮ್ಮನ್ನು ಅಣಕಿಸುತ್ತಿದೆ. ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯಿಂದ ಹೊಸಬಗೆಯ ಹಿಂಸೆ ಮತ್ತು ಅಸಹನೆಗಳು ಜನ್ಮ ತಾಳಿದವು. ಈ ಎಲ್ಲ ಗಾಯಗಳು ಇನ್ನೂ ಒಣಗಿಲ್ಲ, ವಾಸಿಯಾಗಿಲ್ಲ. ಈಚೆಗೆ ವಿಭಜನೆಗೊಂಡ ತೆಲುಗು ಭಾಷಿಕರ ನಾಡು ತೆಲಂಗಾಣ–ಆಂಧ್ರಗಳಾಗಿ ಒಡೆದು ಭಾಷೆ ಒಂದಾದರೂ ತನ್ನ ಹುಟ್ಟಿನಲ್ಲಿಯೇ ಜಲ–ನೆಲ ವಿವಾದಗಳನ್ನು ಸೃಷ್ಟಿಸಿಕೊಂಡು ಸಂಘರ್ಷದ ಹಾದಿಯಲ್ಲಿ ಸಾಗಿದೆ.

ದೇಶ ಸ್ವತಂತ್ರವಾದ ಸುಮಾರು ಇಪ್ಪತ್ತೈದೇ ವರ್ಷಗಳಲ್ಲಿ ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಸಂವಾದ ಮುರಿದು ಬಿದ್ದಿತು. ಈ ಸಂವಾದರಹಿತ ಸನ್ನಿವೇಶವೇ ತುರ್ತು ಪರಿಸ್ಥಿತಿಯ ಘೋಷಣೆಗೆ ನಾಂದಿಯಾಯಿತು. ಅದಾದ ಇಪ್ಪತ್ತೈದು ವರ್ಷಗಳ ನಂತರ ಆಳುವ ಮತ್ತು ವಿರೋಧ ಪಕ್ಷಗಳ ಸ್ಥಾನಗಳು ಅದಲು ಬದಲಾಗಿವೆ. ಅಂದು ಸ್ವಾತಂತ್ರ್ಯ ಹರಣ ಮಾಡಿದವರು ಇಂದು ಸ್ವಾತಂತ್ರ್ಯದ ಮಾತು ಆಡುತ್ತಿದ್ದಾರೆ. ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಇಂದು ಸರ್ವಾಧಿಕಾರಿಗಳಾಗಿ, ಫ್ಯಾಸಿಸ್ಟರಾಗಿ ಮೆರೆಯುತ್ತಿದ್ದಾರೆ.

ಸಂವಾದದ ಅಪೇಕ್ಷೆಯ, ಸಹಿಷ್ಣುತೆಯ ಸಾಂಕೇತಿಕ ಉದಾಹರಣೆಗಳೂ ಇಂದು ದುರ್ಲಭವಾಗಿವೆ. ಲೋಹಿಯಾ ವಿರುದ್ಧ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ನೆಹರೂ ಬಯಸಿದ್ದರು. ವಾಜಪೇಯಿ ಸಂಸತ್ತಿನಲ್ಲೇ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಾಗ ಇಂದಿರಾಗಾಂಧಿ ಅವರ ಸೀಟಿನ ಬಳಿಗೆ ಹೋಗಿ ರಾಜೀನಾಮೆ ಅಂಗೀಕಾರಕ್ಕೆ ಒತ್ತಾಯಿಸದಂತೆ ಅವರ ಮನ ಒಲಿಸಿದ್ದರು. ಆದರೆ ಇಂದು ಕಾಂಗ್ರೆಸ್ಸಿಗೆ ಸಂಸತ್ತಿನಲ್ಲಿ ವಿರೋಧ ಪಕ್ಷದ ಮಾನ್ಯತೆ ನೀಡುವ ಔದಾರ್ಯವನ್ನು ನರೇಂದ್ರ ಮೋದಿ ಅವರು ತೋರಿಸುತ್ತಲೇ ಇಲ್ಲ. ಅಧಿಕೃತ ವಿರೋಧ ಪಕ್ಷ ಇಲ್ಲದೆಯೇ ರಾಜ್ಯಭಾರ ನಡೆಸಲು ಅವರು ನಿರ್ಧರಿಸಿದ್ದಾರೆ.

ಎಮರ್ಜೆನ್ಸಿಯಲ್ಲಿ ಯು.ಆರ್. ಅನಂತಮೂರ್ತಿ – ಎಸ್.ಎಲ್. ಭೈರಪ್ಪ ಜಂಟಿಯಾಗಿ ಹೋರಾಡಿದ್ದರು. ಇಂದು ಮಾಧ್ಯಮಗಳು ‘ಅನಂತಮೂರ್ತಿ ವರ್ಸಸ್ ಭೈರಪ್ಪ’ ಎಂಬ ಸನ್ನಿವೇಶವನ್ನು ನಿರ್ಮಾಣ ಮಾಡಿವೆ. ಪರನಿಂದಾ ಶ್ರವಣ ಕುತೂಹಲವನ್ನೇ ತಮ್ಮ ಬಂಡವಾಳ ಮಾಡಿಕೊಂಡಿರುವ ಮಾಧ್ಯಮಗಳು ಹೊಸ ಹೊಸ ಸಂಘರ್ಷಗಳನ್ನು ಹುಟ್ಟಿಸಿ ತಮ್ಮ ಟಿ.ಆರ್.ಪಿ.ಯನ್ನೂ ಪ್ರಸಾರವನ್ನೂ ವೃದ್ಧಿಸಿಕೊಳ್ಳುವ ವ್ಯಾಪಾರದಲ್ಲಿ ತೊಡಗಿವೆ.

ಯಾವುದೇ ಅರ್ಥಪೂರ್ಣ ಚರ್ಚೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ನಡೆಯುತ್ತಿಲ್ಲ. ಸಂಘರ್ಷದ ರುಚಿ ಮತ್ತು ರೋಚಕತೆಗಳಿಗಾಗಿ ಮಾತ್ರ ಪ್ರಾತಿನಿಧ್ಯದಲ್ಲಿ ಮೇಲ್ನೋಟದ ವೈವಿಧ್ಯವನ್ನು ತೋರಲಾಗುತ್ತಿದೆ. ಭಿನ್ನ ವಲಯಗಳನ್ನು ಪ್ರತಿನಿಧಿಸುವವರು ಪರಸ್ಪರ ಕೆಸರು ಎರಚಾಟದಲ್ಲಿ ತೊಡಗಿಕೊಂಡರೆ ಟೀವಿ ನಿರೂಪಕ ಅದನ್ನು ಎಂಜಾಯ್ ಮಾಡುತ್ತಾ ಮುಗುಳ್ನಗುತ್ತಾ ಕುಳಿತಿರುತ್ತಾನೆ. ಅಷ್ಟೇ ಅಲ್ಲ, ಹಾಗೆ ಮಾಡಲು ತನ್ನ ಅತಿಥಿಗಳನ್ನು ಪ್ರಚೋದಿಸುತ್ತಿರುತ್ತಾನೆ. ಈ ಸೋ ಕಾಲ್ಡ್ ಚರ್ಚೆಗಳೂ ಸಂವಾದಗಳೂ ಟೀವಿ ಸೀರಿಯಲ್‌ಗಳಂತೆ, ರಿಯಾಲಿಟಿ ಶೋಗಳಂತೆ ಮನರಂಜನೆಯ ಸರಕುಗಳಾಗಿ ಪ್ರೇಕ್ಷಕರಿಗೆ ಮಾರಾಟವಾಗುತ್ತಿವೆ.

ಗಣರಾಜ್ಯ ನಿರ್ಮಾಣವಾದಾಗ ಅಸೆಂಬ್ಲಿ – ಪಾರ್ಲಿಮೆಂಟುಗಳೇ ಹೊಸಕಾಲದ ದೇವಾಲಯಗಳು ಎಂದು ಹಲವರು ಹೆಮ್ಮೆಯಿಂದ, ಕಾವ್ಯಾತ್ಮಕವಾಗಿ ಹೇಳಿದ್ದರು. ಆದರೆ ಇಂದು ಅವು ಪರಸ್ಪರ ಅಸಹನೆಯ – ಅಸಹಿಷ್ಣುತೆಯ ಕೇಂದ್ರಗಳಾಗಿವೆ. ಅರ್ಥಪೂರ್ಣ ಸಂವಾದದ ಬದಲು ಕಲಾಪಗಳ ಬಹಿಷ್ಕಾರ, ಸದನದ ಒಳಗೆ ಗದ್ದಲ, ಸಭಾತ್ಯಾಗಗಳಿಂದ ಅಸೆಂಬ್ಲಿ –ಪಾರ್ಲಿಮೆಂಟುಗಳು ಸುದ್ದಿ ಮಾಡುತ್ತಿವೆ. ಅರ್ಥಪೂರ್ಣ ಚರ್ಚೆ – ಸಂವಾದಗಳಿಲ್ಲದೆಯೇ ದೇಶದ ಬದುಕನ್ನೂ ಜನಸಾಮಾನ್ಯರ ನಿತ್ಯ ಜೀವನವನ್ನೂ ನಿರ್ಣಾಯಕವಾಗಿ ಪ್ರಭಾವಿಸಬಲ್ಲ ಮಸೂದೆಗಳು ಅಂಗೀಕೃತವಾಗಿ ಜನಕಂಟಕವಾಗಿವೆ.

ಈ ಸಂವಾದರಾಹಿತ್ಯ ಸ್ಥಿತಿಗೆ ಪ್ರಸ್ತುತ ರಾಜಕಾರಣದ ಒಟ್ಟೂ ಸ್ವರೂಪವೂ ಕಾರಣವಾಗಿದೆ. ಈಗ ರಾಜಕೀಯ ಪಕ್ಷಗಳ ಒಟ್ಟಾರೆ ಸಿದ್ಧಾಂತ ಮತ್ತು ಪ್ರಣಾಳಿಕೆಗಳಲ್ಲಿ ಅಂಥ ಮೂಲಭೂತ ವ್ಯತ್ಯಾಸಗಳಿಲ್ಲ. ಎಡ, ಬಲ, ಮಧ್ಯಮ ಪಕ್ಷಗಳ ಆರ್ಥಿಕ ನೀತಿ, ವಿದೇಶಾಂಗ ನೀತಿ, ಅಭಿವೃದ್ಧಿಯನ್ನು ಕುರಿತ ನೀತಿ, ನಾಡಿನ ಜನರ ಶಿಕ್ಷಣ–ಆರೋಗ್ಯ ಕುರಿತ ನೀತಿ, ಪರಿಸರವನ್ನು ಕುರಿತ ನೀತಿ ಇವುಗಳನ್ನು ಗಮನಿಸಿದರೆ ಹೆಚ್ಚೂಕಡಿಮೆ ಒಬ್ಬರು ಪ್ರತಿಪಾದಿಸುತ್ತಿರುವುದನ್ನೇ ಮತ್ತೊಬ್ಬರು ಬೇರೆ ನುಡಿಗಟ್ಟುಗಳಲ್ಲಿ ಪುನರುಚ್ಚರಿಸುತ್ತಿದ್ದಾರೆ ಎನಿಸುತ್ತದೆ. ಅಂದರೆ ಅರ್ಥಪೂರ್ಣವಾದ ಸೈದ್ಧಾಂತಿಕ ಸಂಘರ್ಷ ಕೂಡ ಈಚಿನ ವರ್ಷಗಳಲ್ಲಿ ನಡೆಯುತ್ತಿಲ್ಲ. ಕೇವಲ ಅಧಿಕಾರವನ್ನು ಹಿಡಿಯಲು ಜನರ ಸೂಕ್ಷ್ಮ ಭಾವನೆಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಮೇಲುನೋಟಕ್ಕೆ ಜನಪ್ರಿಯ ಎನ್ನಿಸುವಂಥ ಯೋಜನೆಗಳನ್ನೇ ಹಮ್ಮಿಕೊಳ್ಳಲಾಗುತ್ತಿದೆ. ಇದರ ವಾರಸುದಾರಿಕೆಯ ಹಕ್ಕಿಗಾಗಿ ಮಾತ್ರ ರಾಜಕೀಯ ಪಕ್ಷಗಳು ತಮ್ಮ ತಮ್ಮಲ್ಲಿ ಅಸೆಂಬ್ಲಿ–ಪಾರ್ಲಿಮೆಂಟುಗಳಲ್ಲಿ ಬಡಿದಾಡುತ್ತಿವೆ. ಇವುಗಳಿಗೆ ಸಿದ್ಧಾಂತಗಳ ಹೆಸರುಗಳನ್ನು, ಬಣ್ಣಗಳನ್ನು ನೀಡಲಾಗುತ್ತಿದೆ. ಮತ್ತೂ ಒಂದು ವಿಷಯದಲ್ಲಿ ಈ ಎಲ್ಲ ಪಕ್ಷಗಳಲ್ಲಿ ಘೋಷಿತ–ಅಘೋಷಿತ ಸಹಮತ ಇದೆ. ಅದು ಅಭಿವ್ಯಕ್ತಿ ಸ್ವಾತಂತ್ರ್ಯ, ಭಿನ್ನಮತಗಳನ್ನು ಕುರಿತ ತೀವ್ರ ಅಸಹನೆ. ಹಾಗಾಗಿ ಕಾನೂನು ಮತ್ತು ಸುವ್ಯವಸ್ಥೆಯ ಹೆಸರಿನಲ್ಲಿ ಎಲ್ಲ ಪಕ್ಷಗಳ ಸರ್ಕಾರಗಳೂ ಲೇಖಕ–ಕಲಾವಿದ–ಚಳವಳಿಗಾರರನ್ನು ಒಂದಲ್ಲಾ ಒಂದು ರೀತಿಯಲ್ಲಿ ಬಗ್ಗು ಬಡಿಯಲು ಪ್ರಯತ್ನಿಸುತ್ತಲೇ ಇವೆ.

ಪುಸ್ತಕ – ನಾಟಕ – ಚಲನಚಿತ್ರಗಳನ್ನು ಬ್ಯಾನ್ ಮಾಡುವುದರಲ್ಲಿ ಯಾವ ಸರ್ಕಾರವೂ ಹಿಂದೆ ಬಿದ್ದಿಲ್ಲ. ಈಗ ಒಂದು ಸರ್ಕಾರ, ರಾಜಕೀಯ ಪಕ್ಷ ಜನಸಾಮಾನ್ಯರ ಆಹಾರಪದ್ಧತಿಯನ್ನು ಕುರಿತು ತನ್ನ ಅಸಹನೆಯನ್ನು ಬಹಿರಂಗವಾಗಿ ಸಾರುತ್ತಿದ್ದರೆ, ಅದಕ್ಕಿಂತ ಭಿನ್ನವೆಂದು ಹೇಳಿಕೊಳ್ಳುತ್ತಿರುವ ಮತ್ತೊಂದು ಸರ್ಕಾರವು ಭಾರತದ ಸಂವಿಧಾನ ಮತ್ತು ಇಂಡಿಯನ್ ಪೀನಲ್ ಕೋಡ್ ನಿರ್ವಹಿಸಬಹುದಾದ ವಿಷಯಗಳನ್ನು ಮೌಢ್ಯಗಳ, ಮೂಢನಂಬಿಕೆಗಳನ್ನು ತಡೆಯುವ ಮಸೂದೆ ತರುವುದಾಗಿ ಸಾರುತ್ತಾ ತಾನು ಪ್ರಗತಿಪರ ಎಂದು ಬಿಂಬಿಸಿಕೊಳ್ಳುವ ಹಾಸ್ಯಾಸ್ಪದ ಪ್ರಯತ್ನದಲ್ಲಿ ತೊಡಗಿದೆ.

ಸಮಾನ ಪ್ರಾಥಮಿಕ ಶಿಕ್ಷಣ, ಕನ್ನಡ ಭಾಷೆಯ ಅನುಷ್ಠಾನ, ರೈತರ ಆತ್ಮಹತ್ಯೆ, ಲೋಕಾಯುಕ್ತ ಸಂಸ್ಥೆಯ ನಿರ್ವಹಣೆ ಮುಂತಾದ ತುರ್ತಿನ ವಿಷಯಗಳಲ್ಲಿ ತಲೆಕೆಡಿಸಿಕೊಳ್ಳದ ಸರ್ಕಾರ ಜನರ ನಂಬಿಕೆಗಳಲ್ಲಿ ಮೂಗುತೂರಿಸುವ ಅವಸರವನ್ನು ತೋರಿಸುತ್ತಿರುವುದು ಆಶ್ಚರ್ಯಕರ. ಸುಧಾರಣಾ ಚಳವಳಿಗಳಿಂದ, ಸಂವಿಧಾನ ಮತ್ತು ಪೀನಲ್ ಕೋಡುಗಳ ಅನುಷ್ಠಾನದಿಂದ ಎಲ್ಲ ಬಗೆಯ ಶೋಷಣೆಗಳನ್ನು ತಡೆಯುವ ಪ್ರಯತ್ನಗಳು ತಂತಾನೇ ನಡೆಯುತ್ತಿರುವಾಗ ‘ವಾಸ್ತು’ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿರುವ ಪ್ರಭುತ್ವವು ಸಾಮಾನ್ಯ ಜನರ ನಂಬಿಕೆಗಳ ಬಗ್ಗೆ ಹೀಗೆ ತಲೆಕೆಡಿಸಿಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ. ತಾನು ಪ್ರಗತಿಪರವೆಂದು ಪ್ರದರ್ಶಿಸಿಕೊಳ್ಳಲು ಈ ಮಾರ್ಗ ಹಿಡಿದಿರುವ ರಾಜ್ಯದ ದುರವಸ್ಥೆ ಇದು.

ಈ ವಿಷಯದಲ್ಲಿ ಸಾಹಿತಿಗಳಿಂದಲೇ ಕೂಡಿರುವ ನಮ್ಮ ಸಾಹಿತ್ಯ ಅಕಾಡೆಮಿಗಳ ಪಾತ್ರವೂ ಪ್ರಶ್ನಾರ್ಹವಾಗಿವೆ. ದೇಶದ ಗಣ್ಯ ಲೇಖಕರು ಹತ್ಯೆಗೆ ಒಳಗಾದಾಗಲೂ ನಮ್ಮ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಮೌನ ಮತ್ತು ನಿರ್ಲಕ್ಷ್ಯಗಳು ದಿಗ್ಭ್ರಾಂತಿ ಹುಟ್ಟಿಸಿದೆ. ಅದಕ್ಕಿಂತ ಹೆಚ್ಚಾಗಿ ಆ ಕುರಿತ ಪ್ರತಿಭಟನೆಯನ್ನು ಹೀಯಾಳಿಸುವ, ಅವಮಾನಿಸುವ ಪ್ರವೃತ್ತಿ ನಾಚಿಕೆಗೇಡಿನ ವಿಷಯವಾಗಿದೆ. ತನ್ನ ಮೌನದಿಂದ ಕೇಂದ್ರ ಸಾಹಿತ್ಯ ಅಕಾಡೆಮಿ ಅಸಹನೆ–ಅಸಹಿಷ್ಣುತೆಯ ಸಂಸ್ಕೃತಿಯನ್ನು ಸಮರ್ಥಿಸುತ್ತಿದ್ದರೆ, ಕರ್ನಾಟಕ ರಾಜ್ಯ ಸರ್ಕಾರವು ನೇಮಿಸಿದ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ವರ್ತನೆಯೂ ಸಂದೇಹ ಹುಟ್ಟಿಸುವಂತಿದೆ. ಹೊಡಿ, ಬಡಿ, ಸುಡಿ ಎಂಬ ನುಡಿಗಟ್ಟಿನಲ್ಲಿ ನಾಡಿನಾದ್ಯಂತ ಭಾಷಣ ಮಾಡುತ್ತಾ ಅಸಹನೆಯ ಸಂಸ್ಕೃತಿಯನ್ನು ಬಹಿರಂಗವಾಗಿ ಪ್ರಕಟಿಸುತ್ತಿರುವ ಲೇಖಕರೊಬ್ಬರಿಗೆ ಅಧಿಕೃತವಾಗಿ ಗೌರವ ಪ್ರಶಸ್ತಿಯನ್ನು ನೀಡಿ ಅಕಾಡೆಮಿಯು ಇಂಥ ನಡವಳಿಕೆಗೆ ತನ್ನ ಅಂಗೀಕಾರದ ಮುದ್ರೆಯನ್ನು ಒತ್ತಿಬಿಟ್ಟಿದೆ.

ಎಲ್ಲವನ್ನೂ ದ್ವಿದಳ ವಿಭಜನೆಯ– ಬೈನರಿಯ– ಸರಳ ನೆಲೆಯಲ್ಲಿ ಗ್ರಹಿಸಿ ಆ ಪಕ್ಷ ಅಥವಾ ಈ ಪಕ್ಷ ವಹಿಸಲು ಜನಸಾಮಾನ್ಯರ ಮೇಲೆ ಒತ್ತಡ ಹಾಕಲಾಗುತ್ತಿರುವುದು ಸದ್ಯದ ವಿದ್ಯಮಾನಗಳ ಮುಖ್ಯ ಲಕ್ಷಣವಾಗಿದೆ. ಅದು ಅಥವಾ ಇದು– ಐದರ್ ಆರ್– ಎಂಬ ಸರಳ ವಿಭಜನೆಯು ಎರಡು ಅತಿಗಳ ನಡುವಣ ವಿಶಾಲ ಅವಕಾಶವನ್ನು ಸಂಪೂರ್ಣವಾಗಿ ಮರೆತಂತಿದೆ. ಸದ್ದಾಂ ಹುಸೇನನನ್ನು ಪದಚ್ಯುತಗೊಳಿಸಿ ಅವನ ಹತ್ಯೆ ಮಾಡಿದಾಗ ಅಮೆರಿಕದ ಅಧ್ಯಕ್ಷರು ಘೋಷಿಸಿದ್ದರು– ಇಡೀ ಪ್ರಪಂಚಕ್ಕೆ ಕರೆಕೊಟ್ಟಿದ್ದರು: ‘ನೀವು ಒಂದೋ ನನ್ನ ಜೊತೆಗಿರಬೇಕು ಅಥವಾ ಸದ್ದಾಂ ಹುಸೇನ್ ಜೊತೆಗಿರಬೇಕು’.

ಅಂದರೆ ಆಯ್ಕೆ ಎರಡೇ ಎರಡು: ಸಾಮ್ರ್ಯಾಜ್ಯಶಾಹಿ ಅಟ್ಟಹಾಸ ಅಥವಾ ಉಗ್ರಗಾಮೀ ರಾಜಕಾರಣ. ಮೂರನೆಯ, ನಾಲ್ಕನೆಯ ಆಯ್ಕೆಯ ಸಾಧ್ಯತೆಯನ್ನೇ ಅಧ್ಯಕ್ಷರ ವಾಗ್ವಿಲಾಸ ವಿಶ್ವದ ಜನರಿಗೆ ನಿರಾಕರಿಸಿತ್ತು. ಇಂದು ಭಾರತದಲ್ಲಿಯೂ ಇಂಥ ಒತ್ತಡವನ್ನು ಹೇರಲಾಗುತ್ತಿದೆ. ನೀವು ಆ ಕಡೆ ಇದ್ದೀರೋ ಈ ಕಡೆ ಇದ್ದೀರೋ ಎಂಬುದನ್ನು ದೂಸರಾ ಮಾತಿಲ್ಲದೆ ಹೌದು ಅಥವಾ ಇಲ್ಲ ಎಂದು ಕ್ವಿಜ್‌ನಲ್ಲಿ ಉತ್ತರಿಸಿದಂತೆ ಉತ್ತರಿಸಬೇಕಾದ ಒತ್ತಡ ಇದು.

ಈ ವಿದ್ಯಮಾನವು ನಮ್ಮ ಸೃಜನಶೀಲ ಲೇಖಕರನ್ನೂ ಬಿಟ್ಟಿಲ್ಲ. ಎರಡು ಅತಿಗಳ ನಡುವಣ ವಿಶಾಲ ಅವಕಾಶದಲ್ಲಿ ಸಂಚರಿಸುತ್ತ ಸತ್ಯದ ತದ್ವಿರುದ್ಧ ಮುಖಗಳನ್ನು, ಬಹುಮುಖಗಳನ್ನು ಏಕತ್ರ ಗ್ರಹಿಸುವ ಮಹತ್ವಾಕಾಂಕ್ಷೆಯನ್ನು ಲೇಖಕರಿಗೆ ನಿರಾಕರಿಸಲಾಗುತ್ತಿದೆ. ಸತ್ಯದ ಬಹುಮುಖಿ ಶೋಧದ ಅವಕಾಶವನ್ನು ಕಿತ್ತುಕೊಳ್ಳಲಾಗುತ್ತಿದೆ. ಬೈನರಿ ರಾಜಕಾರಣವು ಲೇಖಕರಿಗೆ ಸರಳವಾದ, ಒಂದೇ ವಿಚಾರಕ್ಕೆ ಬದ್ಧವಾದ, ಒಂದೇ ಸಿದ್ಧಾಂತಕ್ಕೆ ಬದ್ಧವಾದ ನಿಲುವುಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದೆ. ಕಾಲದ ಈ ಒತ್ತಡಕ್ಕೆ ನಮ್ಮ ಮುಖ್ಯ ಲೇಖಕರೂ ಒಳಗಾಗುತ್ತಿರುವುದು ಕಳವಳಕಾರಿಯಾಗಿದೆ.

ಉದಾಹರಣೆಗೆ ಯು.ಆರ್. ಅನಂತಮೂರ್ತಿ ಮತ್ತು ಗಿರೀಶ ಕಾರ್ನಾಡ್. ಅನಂತಮೂರ್ತಿ ತಮ್ಮ ಸಂಕೀರ್ಣ ನಡಿಗೆಯ ಡಯಲೆಕ್ಟಿಕಲ್ ಸ್ವರೂಪದ ಶೋಧನಾತ್ಮಕ ಶೈಲಿಯ ಬರವಣಿಗೆಯಿಂದ ಒಂದು ವಿಚಾರವನ್ನು ಏಕಮುಖವಾಗಿ ಸಮರ್ಥಿಸುವ ಅಥವಾ ಟೀಕಿಸುವ ಡಿಬೇಟಿನ ಶೈಲಿಗೆ ತಮ್ಮ ಕೊನೆಗಾಲದಲ್ಲಿ ಹೊರಳಿದ್ದು ಈ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಅವರ ಮರಣೋತ್ತರ ಪ್ರಕಟಣೆ ‘ಹಿಂದುತ್ವ ಅಥವಾ ಹಿಂದ್ ಸ್ವರಾಜ್’ ತುಂಬಾ ಅನ್ ಟಿಪಿಕಲ್ ರೈಟಿಂಗ್ ಆಫ್ ಅನಂತಮೂರ್ತಿ. ಮೋದಿ ಮೈಮೇಲೆ ಬಂದಂತಿದೆ. ಮೋದಿ ಅನಂತಮೂರ್ತಿ ಮನಸ್ಸನ್ನು ಅವರ ಕೊನೆಗಾಲದಲ್ಲಿ ಎಷ್ಟು ಆಕ್ರಮಿಸಿಬಿಟ್ಟಿದ್ದರು ಅಂದರೆ– ಅನಂತಮೂರ್ತಿ ತಮ್ಮ ಎಂದಿನ ದ್ವಂದ್ವ, ಆಂಬಿವಲೆನ್ಸ್‌ಗಳನ್ನು ಮೋದಿಗಾಗಿ ಬಲಿಕೊಟ್ಟುಬಿಟ್ಟರು.

ಈ ಮಾತು ಗಿರೀಶ ಕಾರ್ನಾಡರಿಗೂ ಅನ್ವಯಿಸುತ್ತದೆ. ತುಘಲಕ್‌ನನ್ನು ಗ್ರಹಿಸಿದಂತೆ ಅವರು ಟಿಪ್ಪೂ ಸುಲ್ತಾನನನ್ನು ಗ್ರಹಿಸಲಾರದೇ ಹೋಗಿದ್ದಾರೆ. ಇದು ಅವರ ನಾಟಕಕ್ಕೂ ಅನ್ವಯಿಸುತ್ತದೆ, ಅವರ ಸಾರ್ವಜನಿಕ ಮಾತುಗಳಿಗೂ ಅನ್ವಯಿಸುತ್ತದೆ. ಮಾಸ್ತಿಯವರು ತಮ್ಮ ‘ಚೆನ್ನಬಸವ ನಾಯಕ’ದಲ್ಲಿ ಹೈದರಾಲಿಯನ್ನು ಚಿತ್ರಿಸಿರುವ ಹದ ಗಿರೀಶರ ಟಿಪ್ಪೂ ಚಿತ್ರಣದಲ್ಲಿ ಸಂಪೂರ್ಣ ಕಾಣೆಯಾಗಿದೆ. ನಮ್ಮ ಕಾಲ ತನ್ನ ಇಬ್ಬರು ಸೃಜನಶೀಲ ಲೇಖಕರನ್ನು ಬಲಿ ತೆಗೆದುಕೊಂಡ ಪರಿ ಇದು. ನಮ್ಮ ವಿಮರ್ಶೆಯೂ ಇಂಥ ಬೈನರಿ ರಾಜಕಾರಣಕ್ಕೆ ಬಲಿಯಾಗುವ ಎಲ್ಲ ಲಕ್ಷಣಗಳನ್ನೂ ತೋರುತ್ತಿದೆ.

ಇನ್ನೊಂದು ಅತಿಗೆ ಹೋಗಿ ನಮ್ಮ ಹಿರಿಯ ಕಾದಂಬರಿಕಾರರಾದ ಭೈರಪ್ಪನವರು ಬಲಪಂಥದ ಎಲ್ಲ ವಿಕೃತಿಗಳನ್ನು ಸಮರ್ಥಿಸುವಂಥ ಜಾಳುಜಾಳಾದ ಕಾದಂಬರಿಗಳನ್ನು ಬರೆದರು. ಉದಾಹರಣೆಗೆ ‘ಆವರಣ’. ಅವರ ಹಿಂದಿನ ಎಷ್ಟೋ ಕಾದಂಬರಿಗಳು ಸಮೃದ್ಧ ಜೀವನಾನುಭವದಿಂದ ಮೂಡಿದ ಬರಹಗಳಾಗಿದ್ದರೆ ಈಚಿನ ಕಾದಂಬರಿಗಳು ಕೆಲವು ವಿಚಾರಗಳ, ಸಿದ್ಧಾಂತಗಳ ಸಮರ್ಥನೆಗಳಿಗಾಗಿಯೇ ಬರೆದ ಕಥಾರೂಪಿ ಪಾಂಫ್ಲೆಟ್‌ಗಳ ಹಾಗೆ ಕಾಣುತ್ತವೆ. ಈಗ ನಮ್ಮ ದೊಡ್ಡ ಲೇಖಕರುಗಳಿಗೂ ಮನುಷ್ಯರು ಕಾಣಿಸುತ್ತಿಲ್ಲ.

ವಿಚಾರಗಳು ಮಾತ್ರ ಅವರ ಮನಸ್ಸನ್ನು ಆವರಿಸಿಬಿಟ್ಟಿವೆ. ಕೆಲವೇ ವರ್ಷಗಳ ಹಿಂದೆ ಕರ್ನಾಟಕ ಸರ್ಕಾರವು ಪು.ತಿ.ನ. ಅವರ ‘ಶ್ರೀಹರಿಚರಿತ’ ಮತ್ತು ಎ.ಎನ್. ಮೂರ್ತಿರಾವ್ ಅವರ ‘ದೇವರು’ ಕೃತಿಗೆ ಒಟ್ಟಿಗೇ ಪಂಪ ಪ್ರಶಸ್ತಿ ಪ್ರಕಟಿಸಿದಾಗ ಯಾರೂ ಪು.ತಿ.ನ. ವರ್ಸಸ್ ಮೂರ್ತಿರಾವ್ ಎಂಬ ಪರಿಭಾಷೆಯಲ್ಲಿ ಮಾತನಾಡಿರಲಿಲ್ಲ. ಆದರೆ ಈಚಿನ ವರ್ಷಗಳಲ್ಲಿ ‘ಅನಂತಮೂರ್ತಿ ವರ್ಸಸ್ ಭೈರಪ್ಪ’ ಎಂಬ ಮಾತು ಎಷ್ಟು ಜನಪ್ರಿಯವಾಗಿದೆ ಎಂದರೆ ಅದರ ಆಚೆಗೆ ಯೋಚಿಸುವ ಸಾಧ್ಯತೆಗಳನ್ನು ನಿರಾಕರಿಸಲಾಗುತ್ತಿದೆ.

ಕನ್ನಡದ ಹೊರಗಡೆಯೂ ಪರಿಸ್ಥಿತಿ ಬೇರೆಯಲ್ಲ ಎಂದು ಹಲವರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ, ತಮ್ಮ ಕಾಲದೇಶಗಳಲ್ಲಿ ನಿಂತು ಗಾಢವಾಗಿ ಯೋಚಿಸಿದ ಇಬ್ಬರು ಐರೋಪ್ಯ ಲೇಖಕರು ನೆನಪಾಗುತ್ತಾರೆ. ಒಬ್ಬ ಇ.ಎಂ. ಫಾರ್‌ಸ್ಟರ್, ಮತ್ತೊಬ್ಬ ಡೆರಿಡಾ. ಫಾರ್‌ಸ್ಟರ್ ‘ಟಾಲರೆನ್ಸ್’ ಎಂಬ ಪ್ರಬಂಧ ಬರೆದಿದ್ದಾನೆ. ಡೆರಿಡಾ ‘ಹಾಸ್ಪಿಟ್ಯಾಲಿಟಿ’ ಎಂಬ ಪರಿಕಲ್ಪನೆಯ ಸುತ್ತ ಜಿಜ್ಞಾಸೆ ನಡೆಸಿದ್ದಾನೆ. ‘ಮನುಷ್ಯಕುಲವನ್ನು ಅಮೂರ್ತವಾಗಿ ಪ್ರೀತಿಸುತ್ತೇವೆ ಎಂಬುದು ಒಂದು ದೊಡ್ಡ ಅಸಂಬದ್ಧ. ನಾವು ಪ್ರೀತಿಸುವುದನ್ನಲ್ಲ, ಸಹಿಸಿಕೊಳ್ಳುವುದನ್ನು ಕಲಿತುಕೊಳ್ಳಬೇಕು’ ಎಂದು ಫಾರ್‌ಸ್ಟರ್ ಪ್ರತಿಪಾದಿಸುತ್ತಾನೆ.

ಯುದ್ಧಗಳಿಂದ ತತ್ತರಿಸಿ ಹೋಗಿದ್ದ ಯೂರೋಪಿನ ಸಂದರ್ಭದಲ್ಲಿ ಪ್ರೀತಿ ಎಂಬ ಮಾತು ಎಂಥ ಬೊಗಳೆ ಎಂಬುದು ಅವನಿಗೆ ಗೊತ್ತಿತ್ತು. ಆದುದರಿಂದ ಅವನು ಪ್ರೀತಿಗೆ ಬದಲು ಸಹನೆ ಎಂಬ ಮೌಲ್ಯವನ್ನು ಮುಂದೆ ಮಾಡಿದ. ಪ್ರೀತಿ ಕಷ್ಟ, ಸಹನೆಯನ್ನು ಪ್ರಯತ್ನಪೂರ್ವಕವಾಗಿ ರೂಢಿಸಿಕೊಳ್ಳಬಹುದು. ಏಕೆಂದರೆ ಅದು ಸಾಮಾಜಿಕವಾಗಿಯೂ ನಿತ್ಯಜೀವನದಲ್ಲಿ ಒಂದು ಉಪಯುಕ್ತ ಮೌಲ್ಯ. ಸಹನೆ, ಸಹಿಷ್ಣುತೆಗಳು ಪ್ರೀತಿಯನ್ನು ಮುನ್ನೋಡುತ್ತವೆಯೆ? ಫಾರ್‌ಸ್ಟರ್ ಆ ಬಗ್ಗೆ ಏನನ್ನೂ ಹೇಳುವುದಿಲ್ಲ. ಆದರೂ ಇನ್ನೊಬ್ಬನನ್ನು, ಇನ್ನೊಂದು ಜಾತಿ–ವರ್ಗ–ಜನಾಂಗ–ಧರ್ಮ–ಸಮುದಾಯವನ್ನು ಕೇವಲ ಸಹಿಸಿಕೊಳ್ಳುತ್ತೇನೆಂಬುದು ಅಂಥ ದೊಡ್ಡ ಮೌಲ್ಯವೆನಿಸಬಹುದೆ? ನಾನು ಅವನನ್ನು ದ್ವೇಷಿಸುತ್ತೇನೆ, ಆದರೆ ಸಹಿಸಿಕೊಳ್ಳುತ್ತೇನೆ ಎಂದರೆ ನಿಜವಾಗಿ ಏನು ಹೇಳಿದಂತಾಯಿತು? ಸ್ಪಷ್ಟವಾಗುವುದಿಲ್ಲ. ಡೆರಿಡಾ ಹಾಸ್ಪಿಟ್ಯಾಲಿಟಿಯ ಬಗ್ಗೆ ಮಾತನಾಡುತ್ತಾನೆ. ‘ಎಲ್ಲರನ್ನೂ ಬಿಟ್ಟುಕೋಬೇಕು, ಅತಿಥಿಗಳೆಂಬಂತೆ ಪರಿಭಾವಿಸಬೇಕು’ ಎಂದು ಹೇಳುತ್ತಾನೆ. ನಾವು ಒಳ್ಳೆಯ ಆತಿಥೇಯರಾಗಿರಬೇಕು ಎನ್ನುತ್ತಾನೆ.

ಆದರೆ ಇಲ್ಲಿಯೂ ಒಂದು ಸಮಸ್ಯೆ ಇದೆ ಎಂದು ಡೆರಿಡಾ ಹೇಳುತ್ತಾನೆ. ಅದೆಂದರೆ ಅತಿಥಿಗಳು ತಾವು ಹೊರಗಿನವರೆಂದು ಮೊದಲು ಒಪ್ಪಿಕೊಳ್ಳಬೇಕಾಗುತ್ತದೆ. ತಾವು ಬಂದಿರುವುದು ಮತ್ತೊಬ್ಬರ ಮನೆಗೆ ಎಂಬ ಎಚ್ಚರವೂ ಇರಬೇಕಾಗುತ್ತದೆ. ಒಳ್ಳೆಯ ಆತಿಥ್ಯವೇನೋ ಸಿಗಬಹುದು. ಆದರೆ ‘ನಿಮ್ಮದೇ ಮನೆ ಎಂದು ತಿಳಿದುಕೊಳ್ಳಿ, ಫೀಲ್ ಅಟ್ ಹೋಂ’ ಎಂದು ಅತಿಥೇಯ ವಿನಯಪೂರ್ವಕ ಹೇಳಿದರೂ ನಿಜವಾಗಿ ಇದು ನಿಮ್ಮ ಮನೆಯಲ್ಲ ಎಂಬ ಇಂಗಿತವೂ ಅದರಲ್ಲಿ ಅಂತರ್ಗತವಾಗಿರುತ್ತದೆ. ಅಷ್ಟೇ ಅಲ್ಲ ಅವನು ಆತಿಥೇಯನ ‘ಟರ್ಮ್ಸ್ ಮತ್ತು ಕಂಡೀಷನ್’ಗಳನ್ನು ಒಪ್ಪಿ ಬರಬೇಕಾಗುತ್ತದೆ. ಇತರರನ್ನು ಕೇವಲ ಸಹಿಸಿಕೊಳ್ಳುವುದಕ್ಕಿಂತ ಅತಿಥಿಗಳೆಂಬಂತೆ ಕಾಣುವುದು ಅದಕ್ಕಿಂತ ಉತ್ತಮ ವರ್ತನೆಯೆ?
ಇವೆಲ್ಲಕ್ಕಿಂತ ಬಸವಣ್ಣನವರ ಮಾತುಗಳು ಇನ್ನೂ ಇನ್‌ಕ್ಲೂಸಿವ್ ಎನ್ನಿಸುವುದಿಲ್ಲವೆ?

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ,
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ,
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.
ಆದರೆ, ಆದರ್ಶ ದೊಡ್ಡದಾದಷ್ಟೂ ಅನುಷ್ಠಾನ ಇನ್ನೂ ಕಷ್ಟ ಎಂಬುದನ್ನು ಮರೆಯುವಂತಿಲ್ಲ.

(ಧಾರವಾಡ ಸಾಹಿತ್ಯ ಸಂಭ್ರಮ–೨೦೧೬ರ ‘ಸಂಸ್ಕೃತಿ ಸಂವಾದ’ ಗೋಷ್ಠಿಯ ಆಶಯ ಭಾಷಣ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.