ಇಂದು `ಭಾರತೀಯ ವಿಜ್ಞಾನ ಕಾಂಗ್ರೆಸ್'ನ 100ನೇ ವರ್ಷಾಚರಣೆ ಕೋಲ್ಕತ್ತದಲ್ಲಿ ಆರಂಭವಾಗುತ್ತಿದೆ. ಹಿಂದೆಂದೂ ಕಾಣದಷ್ಟು ಅದ್ಧೂರಿಯ ಮೇಳ ಅದು. ಇದೇ ಮೊದಲ ಬಾರಿಗೆ ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಇಬ್ಬರೂ ಒಟ್ಟೊಟ್ಟಿಗೆ ವೇದಿಕೆ ಏರಿ ಭಾರತೀಯ ವಿಜ್ಞಾನಕ್ಕೆ ಜೈಕಾರ ಹಾಕಲಿದ್ದಾರೆ.

ಇಷ್ಟು ವರ್ಷ ಪ್ರತಿ ಜನವರಿ 3ರಂದು ತಪ್ಪದೆ ಅಂದಂದಿನ ಪ್ರಧಾನ ಮಂತ್ರಿಯವರು ಐದು ದಿನಗಳ `ಸೈನ್ಸ್ ಕಾಂಗ್ರೆಸ್ ಸಮಾವೇಶ'ವನ್ನು ಉದ್ಘಾಟನೆ ಮಾಡುತ್ತಿದ್ದರು. ಈ ಸಲದ ಉದ್ಘಾಟನೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ನಡೆಯಲಿದೆ.

ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಈ ಮಹಾ ಸಮ್ಮೇಳನಕ್ಕೆ, ಯಾವ ವಿಜ್ಞಾನಿಯೂ ಅಲ್ಲ, ಸ್ವತಃ ಪ್ರಧಾನ ಮಂತ್ರಿಯವರು ಸರ್ವಾಧ್ಯಕ್ಷರಾಗಿರುತ್ತಾರೆ. ಹಿಂದೆ 1947ರಲ್ಲಿ ಜವಾಹರಲಾಲ್ ನೆಹರೂ ಹೀಗೇ ಸರ್ವಾಧ್ಯಕ್ಷರಾಗಿದ್ದರು. ಆದರೆ ಆಗಿನ್ನೂ ಸ್ವಾತಂತ್ರ್ಯ ಲಭಿಸಲು ಇನ್ನೂ ಏಳೂವರೆ ತಿಂಗಳು ಬಾಕಿ ಇತ್ತು. ಇವೆರಡು ಸಂದರ್ಭ ಬಿಟ್ಟರೆ ಪ್ರತಿ ಬಾರಿಯೂ ಒಬ್ಬ ಘನತೆವೆತ್ತ ವಿಜ್ಞಾನಿಯೊ ಇಲ್ಲವೆ ಸರ್ ಎಂ. ವಿಶ್ವೇಶ್ವರಯ್ಯರಂಥ ಎಂಜಿನಿಯರೊ ಸರ್ವಾಧ್ಯಕ್ಷರಾಗಿದ್ದರು.

ವಿಜ್ಞಾನ ಕಾಂಗ್ರೆಸ್ ಅಸ್ತಿತ್ವಕ್ಕೆ ಬರಲು ಇಬ್ಬರು ಬ್ರಿಟಿಷ್ ವಿಜ್ಞಾನಿಗಳು ಕಾರಣರಾದರೂ 1914ರಲ್ಲಿ ಅದರ ಮೊದಲ ಸಮಾವೇಶದ ಅಧ್ಯಕ್ಷತೆಯನ್ನು ಅಂದಿನ ಕಲಕತ್ತಾ ಹೈಕೋರ್ಟ್ನ ನ್ಯಾಯಮೂರ್ತಿ ಸರ್ ಅಶುತೋಷ್ ಮುಖರ್ಜಿ ವಹಿಸಿದ್ದರು.

ಅವರು ಗಣಿತ ಮತ್ತು ಭೌತವಿಜ್ಞಾನದ ಎಂ.ಎ ಜೋಡಿ ಪದವಿ ಪಡೆದ ಮೊದಲಿಗರಾಗಿದ್ದರು. ಜೊತೆಗೆ ಕಾನೂನು ಪದವಿಯನ್ನೂ ಪಡೆದಿದ್ದರು. ವಕೀಲರಾಗಿ, ನ್ಯಾಯಾಧೀಶರಾದ ನಂತರವೂ ಅವರು ಗಣಿತ ಮತ್ತು ಭೌತವಿಜ್ಞಾನದ ಪ್ರಬಂಧಗಳನ್ನು ಬರೆಯುತ್ತಿದ್ದರು.

ಆಧುನಿಕ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣದ ಆದ್ಯ ಪ್ರವರ್ತಕರೆಂದೇ ಖ್ಯಾತಿ ಪಡೆದ ಅವರು 1906ರಲ್ಲೇ ಬೆಂಗಾಲ್ ತಾಂತ್ರಿಕ ಸಂಸ್ಥೆಯನ್ನೂ ದೇಶದ ಪ್ರಥಮ ವಿಜ್ಞಾನ ಕಾಲೇಜನ್ನೂ ಸ್ಥಾಪಿಸಿದ್ದರು. ಐದು ಬಾರಿ ಕಲಕತ್ತಾ ವಿ.ವಿಯ ಉಪ ಕುಲಪತಿಯಾಗಿದ್ದರು.

ಅಶುತೋಷ್ ಮುಖರ್ಜಿಯವರ ಪ್ರತಿಭೆ, ಪಾಂಡಿತ್ಯ ಮತ್ತು ಸಂಘಟನಾ ಚಾತುರ್ಯ ಎಷ್ಟಿತ್ತೆಂದರೆ ಲಾರ್ಡ್ ಕರ್ಝನ್ ಇವರನ್ನು ತಮ್ಮ ದೇಶಕ್ಕೆ ಕರೆಸಿಕೊಳ್ಳಲು ಪದೇ ಪದೇ ಯತ್ನಿಸಿ ವಿಫಲನಾಗಿದ್ದ. ಬ್ರಿಟಿಷರು ನೀಡುವ ಶಿಕ್ಷಣದಿಂದ ಭಾರತದಲ್ಲಿ ಎಂತೆಂಥ ಪ್ರತಿಭೆಗಳು ಹೊಮ್ಮುತ್ತಿವೆ ಎಂದು ಆತ ತನ್ನ ತಾಯ್ನೊಡಿನಲ್ಲಿ ಪ್ರದರ್ಶಿಸಲು ಬಯಸಿದ್ದ.

ನಿಜಕ್ಕೂ ಅಂದಿನ ಕಾಲದಲ್ಲಿ ಕಲಕತ್ತೆಯಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮವಿತ್ತೆಂಬುದರಲ್ಲಿ ಸಂಶಯವಿಲ್ಲ. ಏಕೆಂದರೆ ಅಶುತೋಷ್ ಕ್ಲಾಸ್ಮೇಟ್ಗಳಲ್ಲಿ ಪ್ರಫುಲ್ಲ ಚಂದ್ರ ರೇ ಮತ್ತು ನರೇಂದ್ರ ನಾಥ ದತ್ತ (ವಿವೇಕಾನಂದ) ಕೂಡ ಮುಂದೆ ಅಂತರ ರಾಷ್ಟ್ರೀಯ ಖ್ಯಾತಿ ಪಡೆದರು.

ಆರಂಭದಲ್ಲೇ ಆ ನೂಕುಜೀಕು ಸಿಕ್ಕಿದ್ದರಿಂದಲೇ ಇರಬೇಕು, ಜಗದೀಶ ಚಂದ್ರ ಬೋಸ್ ಮೊದಲ್ಗೊಂಡು ಸತ್ಯೇಂದ್ರನಾಥ್ ಬೋಸ್, ಮೇಘನಾದ ಸಾಹಾ ಮುಂತಾದವರಿಂದಾಗಿ `ಬಂಗಾಳವೆಂದರೆ ಇತರ ಭಾರತಕ್ಕಿಂತ ಐವತ್ತು ವರ್ಷ ಮುಂದೆ' ಎಂಬ ಕೋಡು ಬಂಗಾಳಿಗಳಲ್ಲಿ ಮೂಡಿತ್ತು.

ಮಗನ ಸಮುದ್ರ ಯಾನಕ್ಕೆ ಅಶುತೋಷ್ ಅಮ್ಮ ಒಪ್ಪಿಗೆ ನೀಡಲಿಲ್ಲ. ಕರ್ಝನ್ ಪತ್ರ ಬರೆದರು: `ನಿಮಗೆ ಬ್ರಿಟನ್ನಿಗೆ ಹೋಗಲು ಭಾರತದ ವೈಸ್ರಾಯ್ ಮತ್ತು ಗವರ್ನರ್ ಜನರಲ್ ಖುದ್ದಾಗಿ ಆಜ್ಞಾಪಿಸಿದ್ದಾರೆಂದು ನಿಮ್ಮ ಅಮ್ಮನಿಗೆ ಹೇಳಿ' ಎಂಬ ಬೆದರಿಕೆ ಪತ್ರ ಅದು. ತುಸುವೂ ಅಳುಕದೆ, `ಈ ಅಶುತೋಷ್ ಮುಖರ್ಜಿ ತನ್ನ ತಾಯಿಯ ಆಜ್ಞೆಯೊಂದನ್ನು ಬಿಟ್ಟು ಬೇರೆ ಯಾರ ಆಜ್ಞೆಯನ್ನೂ ಪಾಲಿಸುವುದಿಲ್ಲ' ಎಂದು ಮಾರುತ್ತರ ಬರೆದರು.

ಟಿಳಕರಂತೆ ಭರ್ಜರಿ ಪೊದೆ ಮೀಸೆ ಹೊತ್ತು `ಬೆಂಗಾಲ್ ಟೈಗರ್' ಎಂದೇ ಬ್ರಿಟಿಷರಿಂದ ಬಿರುದು ಗಳಿಸಿದ್ದ ಅಶುತೋಷ್ ಮುಖರ್ಜಿ ಕುರಿತು ಅಂದಿನ ಫ್ರಾನ್ಸಿನ ಚಿಂತಕ ಸಿಲ್ವಿಯನ್ ಲೆವೈ `ಇವರಿಗೆ ಸಮನಾದ ಪಾಂಡಿತ್ಯ ಉಳ್ಳವರು ಇಡೀ ಯುರೋಪ್ನಲ್ಲೇ ಯಾರೂ ಇಲ್ಲ' ಎಂದು ಬರೆದಿದ್ದರು.

ಎಳೆಯರಲ್ಲಿ ಪ್ರತಿಭೆಯ ಮೊಳಕೆಯನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಅಶುತೋಷ್ ಅವರ ಪ್ರತಿಭೆಯ ವಿಶೇಷ ಲಕ್ಷಣವಾಗಿತ್ತು. ಗಣಿತ ಕೋವಿದ ಶ್ರಿನಿವಾಸ ರಾಮಾನುಜನ್ ಮತ್ತು ಸಿ.ವಿ. ರಾಮನ್ ಇಬ್ಬರನ್ನೂ ಮೊದಲು ಗುರುತಿಸಿ ಸಂಶೋಧನ ಸೌಲಭ್ಯ ಒದಗಿಸಿದ ಶ್ರೇಯ ಇವರದ್ದಾಗಿತ್ತು.

ಇಂದೇನೋ ಶಿಷ್ಯರ ಪ್ರತಿಭೆಯ ದುರ್ಲಾಭ ಪಡೆದು ತಮ್ಮ ಸ್ವಂತದ ಪದೋನ್ನತಿ ಬಯಸುವ ಎಷ್ಟೊಂದು ವಿಜ್ಞಾನಿಗಳ, ಪಿಎಚ್ಡಿ ಗೈಡ್ಗಳ ಪ್ರಸಂಗವನ್ನು ನೋಡುತ್ತಿರುವ ನಾವು ಅಶುತೋಷ್ ಮುಖರ್ಜಿಯಂಥವರ ಉದಾಹರಣೆಗಳನ್ನು ಮತ್ತೆ ಮತ್ತೆ ಮೆಲುಕು ಹಾಕಬೇಕಾಗುತ್ತದೆ.

ವಿಜ್ಞಾನ ಕಾಂಗ್ರೆಸ್ನ ಹಿಂದಿನ 99 ವಾರ್ಷಿಕ ಸಮ್ಮೇಳನಗಳ ಸರ್ವಾಧ್ಯಕ್ಷರ ಪಟ್ಟಿಯನ್ನು, ಅವರ ಉಪನ್ಯಾಸದ ವಿಷಯಗಳ ಪಟ್ಟಿಯನ್ನು ನೋಡಿದರೆ ಆಧುನಿಕ ಭಾರತದ ವಿಜ್ಞಾನದ ಇತಿಹಾಸವೇ ಕಣ್ಣಿಗೆ ಕಟ್ಟುತ್ತದೆ. `ವಿಜ್ಞಾನಕ್ಕೆ ಒಂದು ಅವಕಾಶ ಕೊಡಿ' ಎಂದು 1945ರಲ್ಲಿ ನಾಗಪುರದಲ್ಲಿ ಶಾಂತಿಸ್ವರೂಪ್ ಭಟ್ನಾಗರ್ ಕರೆ ನೀಡಿದ್ದರೆ `ವಿಜ್ಞಾನಿಗಳಿಗೆ ಒಂದು ಅವಕಾಶ ಕೊಡಿ' ಎಂದು 1954ರಲ್ಲಿ ಹೈದರಾಬಾದ್ ಸಮ್ಮೇಳನದಲ್ಲಿ ಡಾ. ಎಸ್ ಎಲ್ ಹೋರಾ ಕರೆ ನೀಡಿದ್ದರು.

`ಗಣಿತವೆಂದರೆ ವಿಜ್ಞಾನದ ರಾಣಿಯೊ ಸೇವಕಿಯೊ?' ಎಂದು 1974ರಲ್ಲಿ ಪ್ರೊ ಆರ್.ಎಸ್. ಮಿಶ್ರಾ ಚರ್ಚಿಸಿದ್ದರು. ಹಳ್ಳಿಗಳ ಉದ್ಧಾರದ ವಿಷಯವಂತೂ ಪ್ರತಿ 30-40 ವರ್ಷಗಳಿಗೊಮ್ಮೆ ಈ ಮಹಾಮೇಳದ ಘೋಷವಾಕ್ಯವಾಗಿ ಬರುತ್ತಲೇ ಇದೆ. ಹಳ್ಳಿಗಳು ಮಾತ್ರ ಇದ್ದಲ್ಲೇ ಇವೆ, ಇನ್ನಷ್ಟು ದುರ್ಬಲವಾಗುತ್ತಿವೆ, ಆ ಮಾತು ಬೇರೆ.

ವಿಜ್ಞಾನ ಕಾಂಗ್ರೆಸ್ ತನ್ನ ಮೊದಲ 90 ವರ್ಷಗಳವರೆಗೆ `ಭಾರತದಲ್ಲಿ ವಿಜ್ಞಾನವನ್ನು ಹೇಗೆ ರೂಪಿಸಬೇಕು' ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿತ್ತು. ಈಚೀಚೆಗೆ ಅದರ ಒತ್ತುಗುರಿ ಬದಲಾಗುತ್ತಿದೆ. ವಿಜ್ಞಾನವನ್ನು ಬಳಸಿ ಭಾರತವನ್ನು ಹೇಗೆ ರೂಪಿಸಬೇಕು ಎಂಬುದು ಆದ್ಯತೆಯ ವಿಷಯವಾಗುತ್ತಿದೆ. ಅದೊಂದು ವಿಧದಲ್ಲಿ ಸೋಲೊಪ್ಪಿಕೊಂಡ ಹಾಗೇ.

ನಮ್ಮಲ್ಲಿ ವಿಜ್ಞಾನವನ್ನು ರೂಪಿಸಲು, ನಿರೀಕ್ಷಿತ ಎತ್ತರಕ್ಕೆ ಏರಿಸಲು ಸಾಧ್ಯವಾಗಲೇ ಇಲ್ಲ. ನೆಹರೂ ಅದೆಷ್ಟೇ ಉತ್ಸಾಹದಿಂದ ವಿಜ್ಞಾನವನ್ನು ತಂತ್ರಜ್ಞಾನವನ್ನು ರೂಪಿಸಲು ಬುನಾದಿ ಸೂತ್ರಗಳನ್ನು ಹಾಕಿದರೂ, ಸಿಎಸ್ಐಆರ್, ಡಿಆರ್ಡಿಓದಂಥ ಬೃಹತ್ ಸಂಸ್ಥೆಗಳನ್ನು ಸ್ಥಾಪಿಸಿ, ವಿಶ್ವವಿದ್ಯಾಲಯಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಿದರೂ ಅವೆಲ್ಲ ಬಿಳಿಯಾನೆಗಳೋ ಡೈನೊಸಾರ್ಗಳೋ ಆಗಿ ಕೂತಿವೆ.

ವಿಜ್ಞಾನಿಗಳ ಸಂಖ್ಯಾ ದೃಷ್ಟಿಯಿಂದ ನೋಡಿದರೆ ನಮ್ಮದು ಮೂರನೆಯ ಅತಿ ಬಲಾಢ್ಯ ರಾಷ್ಟ್ರವೇನೊ ಹೌದು. ಆದರೆ ತುಂಬ ಜೊಳ್ಳು ಸೇರಿಕೊಂಡಿದ್ದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಅದೊಂದು ಲೇವಡಿಯ ವಿಷಯವೇ ಆಗಿದೆ. ಬೆರಳೆಣಿಕೆಯಷ್ಟು ನೊಬೆಲ್ ಪ್ರಶಸ್ತಿಗಳು ಬಂದಿದ್ದರೂ ಅವೆಲ್ಲ ವಿದೇಶದಲ್ಲಿ ಸಂಶೋಧನೆ ಮಾಡಿದ ಭಾರತೀಯರಿಗೆ ಬಂದಿವೆ.

ಜಗತ್ತಿನಲ್ಲಿ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವವರ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಅದಕ್ಕೆಂದು ನಾವು ತೆರುವ ಡಾಲರ್ಗಳ ಬಹುಪಾಲು ಕೊಲ್ಲಿರಾಷ್ಟ್ರಗಳ ದಲ್ಲಾಳಿಗಳಿಗೇ ಹೋಗುತ್ತಿದೆ. ನಮ್ಮ ವಿಜ್ಞಾನಿಗಳ ಶ್ರಮಕ್ಕೆ ನಮ್ಮಲ್ಲೇ ಬೆಲೆ ಇಲ್ಲದಂತಾಗಿದೆ.

ಈಚೀಚೆಗಂತೂ ವಿಜ್ಞಾನಕ್ಕೆ ರಾಷ್ಟ್ರದ ಗಡಿಗಳೇ ನಗಣ್ಯವಾಗುತ್ತಿದೆ. ಪ್ರಮುಖ ಸಂಶೋಧನೆಗಳೆಲ್ಲ ವಿದೇಶೀ ಹೂಡಿಕೆದಾರರ, ಖಾಸಗಿ ಕಂಪನಿಗಳ ಪಾಲಾಗುತ್ತಿದೆ. ವಿದೇಶಗಳಲ್ಲಿ `ಅಪಾಯಕಾರಿ'ಎಂದು ತಡೆ ಹಿಡಿದಿದ್ದ ಸಂಶೋಧನೆಗಳೆಲ್ಲ ಭಾರತಕ್ಕೆ ಬರುತ್ತಿವೆ.

ಭಾರತೀಯ ನೆಲವನ್ನು ಮನಬಂದಂತೆ ಮಲಿನ ಮಾಡುವ ಬಯೊಟೆಕ್ ಸಂಶೋಧನೆಗಳು ನಮ್ಮಲ್ಲಿ ನಡೆಯತೊಡಗಿವೆ. ನಮ್ಮ ಪ್ರಜೆಗಳನ್ನು ಗಿನಿಪಿಗ್ಗಳಂತೆ ಬಳಸಿಕೊಂಡು ಔಷಧ ದ್ರವ್ಯಗಳನ್ನು ಯಾವುದೋ ದೇಶದಲ್ಲಿ ರೂಪಿಸಲಾಗುತ್ತಿದೆ. ಇನ್ನೇನು ಪರಮಾಣು ಸ್ಥಾವರ ಕಟ್ಟುವ ನೆಪದಲ್ಲಿ ನಡೆಯುವ ಸರಣಿ ಸಂಶೋಧನೆಗಳಿಗೆ ನಾವು ಬಾಗಿಲು ತೆರೆದಿದ್ದೇವೆ.

ನಮ್ಮ ದೇಶಕ್ಕಾಗಿ ದುಡಿಯುತ್ತಿದ್ದ ವಿಜ್ಞಾನಿಗಳು ಸಾಲು ಸಾಲಾಗಿ ಖಾಸಗಿ ಕಂಪನಿಗಳಿಗೆ ತಮ್ಮ ಅನುಭವಗಳನ್ನು ಹೊತ್ತು ಸಾಗಿಸುತ್ತಿದ್ದಾರೆ. ಸರ್ಕಾರದ ರಕ್ಷಣಾ ಸಂಶೋಧನ ಸಂಸ್ಥೆ (ಡಿಆರ್ಡಿಓ) ಒಂದರಲ್ಲೇ ಕಳೆದ ಆರು ವರ್ಷಗಳಲ್ಲಿ 700ಕ್ಕೂ ಹೆಚ್ಚು ವಿಜ್ಞಾನಿಗಳು ರಾಜೀನಾಮೆ ನೀಡಿ ಹೊರಕ್ಕೆ ನಡೆದಿದ್ದಾರೆ.

ಹಿಂದೆ, ನಮ್ಮ ದೇಶದ ಐಐಟಿಗಳಲ್ಲಿ ಓದಿ ವಿದೇಶಗಳಿಗೆ ವಲಸೆ ಹೋಗುತ್ತಿದ್ದ `ಪ್ರತಿಭಾ ಪಲಾಯನ' ವನ್ನು ತಡೆಗಟ್ಟಲೆಂದು ಏನೆಲ್ಲ ಸ್ಕೀಮುಗಳು ತಯಾರಾಗಿದ್ದವು. ಈಗ ಭಾರತದ ಒಳಗೇ ಸರ್ಕಾರಿ ಸಂಸ್ಥೆಯಿಂದ ಖಾಸಗಿ ಕಂಪನಿಗಳಿಗೆ ಕುಶಾಗ್ರಮತಿಗಳು ದಾಟುತ್ತಿದ್ದಾರೆ.

ಅವರನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ ಎಂಬುದಕ್ಕೆ ಸಮಿತಿಗಳು ರೂಪುಗೊಂಡು ವರದಿಗಳು ಗುಡ್ಡೆಬಿದ್ದಿವೆ. ಅವನ್ನು ಕಾರ್ಯಗತ ಮಾಡಬೇಕಾದ ಇಲಾಖಾ ಮುಖ್ಯಸ್ಥರೇ ವಶೀಲಿಯಿಂದ ಮೇಲೆ ಬಂದವರೂ ಪ್ರತಿಭೆ ನಂದಿದವರೂ ಸ್ವಜನ ಪಕ್ಷಪಾತಿಗಳೂ ಆಗಿದ್ದರೆ ವ್ಯವಸ್ಥೆಯ ಸುಧಾರಣೆ ಎಂತು? ಆದ್ದರಿಂದಲೇ ಇರಬೇಕು ಒಂದು ರಾಷ್ಟ್ರವಾಗಿ ವಿಜ್ಞಾನದ ಬೆಳವಣಿಗೆಗೆ ಭಾರತ ಎಂಥ ಕೊಡುಗೆ ನೀಡಬಹುದು ಎಂಬುದಕ್ಕಿಂತ ವಿಜ್ಞಾನ- ತಂತ್ರಜ್ಞಾನದಿಂದ ನಮಗೆಷ್ಟು ಸಿಕ್ಕೀತು ಎಂಬುದೇ ಮುಖ್ಯವಾಗುತ್ತಿದೆ.

ನಮ್ಮ ದೇಶ `ಮುಂದಿನ 20 ವರ್ಷಗಳಲ್ಲಿ ಬಲಾಢ್ಯ ರಾಷ್ಟ್ರವಾಗಿ ರೂಪುಗೊಳ್ಳಲಿದೆ ಎಂಬುದರ ಮುನ್ಸೂಚನೆಗಳು ಸಿಗುತ್ತಿವೆ' ಎಂದು ಸೈನ್ಸ್ ಕಾಂಗ್ರೆಸ್ನ ನೂರನೆಯ ಅಧಿವೇಶನದ ಮುಖವಾಣಿಯಲ್ಲಿ ಮುದ್ರಿಸಲಾಗಿದೆ. ನಾವು `ಸೂಪರ್ ಪವರ್' ಆಗಬೇಕೆಂದಿದ್ದರೆ ವಿಜ್ಞಾನವನ್ನು ಹೆಚ್ಚು ಹೆಚ್ಚಾಗಿ ದುಡಿಸಿಕೊಳ್ಳಬೇಕಿದೆ ಎಂಬ ಧ್ವನಿ ಅದರಲ್ಲಿದೆ.

ಆದರೆ ವಿಜ್ಞಾನ ತಂತ್ರಜ್ಞಾನದ ಬೆಂಬಲ ಅದೆಷ್ಟೇ ಸಿಕ್ಕರೂ ಭಾರತ ಸೂಪರ್ ಪವರ್ ಆಗಲು ಸಾಧ್ಯವಿಲ್ಲ ಏಕೆ ಎಂಬುದಕ್ಕೆ ರಾಮಚಂದ್ರ ಗುಹಾ ಹತ್ತು ಅಡೆತಡೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ನಮ್ಮಳಗಿರುವ ಭ್ರಷ್ಟತೆ, ತೀರ ಎಡಪಂಥೀಯ ಹಾಗೂ ತೀರ ಬಲಪಂಥೀಯ ಉಗ್ರ ನಡವಳಿಕೆ, ಸರ್ಕಾರಿ ಸಂಘಸಂಸ್ಥೆಗಳ ಅವನತಿ, ಬಡವ-ಶ್ರಿಮಂತರ ನಡುವೆ ಹೆಚ್ಚುತ್ತಿರುವ ಅಂತರ, ರಾಜಕೀಯ ಛಿದ್ರೀಕರಣ, ಗಡಿತಂಟೆ, ಮತೀಯ ಅಸಹಿಷ್ಣುತೆ, ಪರಿಸರ ಸಮಸ್ಯೆಗಳು, ರಾಷ್ಟ್ರದ ಹಿತ ಕಾಯುವಲ್ಲಿ ಮಾಧ್ಯಮಗಳ ನಿರಾಸಕ್ತಿ, ನೆರೆರಾಷ್ಟ್ರಗಳಲ್ಲಿ ನಿರಂತರ ಅಭದ್ರತೆ ಇವೆಲ್ಲವುಗಳ ಬಗ್ಗಡದಲ್ಲಿ ವಿಜ್ಞಾನ-ತಂತ್ರಜ್ಞಾನಗಳಿಂದ ನಾವು ಬಲಿಷ್ಠರಾಗುತ್ತೇವೆ ಎನ್ನುವಂತಿಲ್ಲ.

ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ 99ನೇ ಸಮ್ಮೇಳನಕ್ಕೆ ಒಂದೆರಡಲ್ಲ, 16 ಸಾವಿರ ಪ್ರತಿನಿಧಿಗಳು ಬಂದಿದ್ದರು. ಕುಂಭಮೇಳವನ್ನು ಹೋಲುವ ಜಾತ್ರೆಯೇ ಅದಾಗಿತ್ತು. ವಿಜ್ಞಾನದ ಸಾಮಾನ್ಯ ಪದವೀಧರರೂ ಸೈನ್ಸ್ ಕಾಂಗ್ರೆಸ್ನ ಪ್ರತಿನಿಧಿಯಾಗಿ ಮೋಜಿನ ಪ್ರವಾಸಕ್ಕೆಂಬಂತೆ ವಿಶೇಷ ಟ್ರೇನ್ಗಳಲ್ಲಿ ಸಕುಟುಂಬ ಸಪರಿವಾರ ಹೋಗುತ್ತಾರೆ.

ಈ ವರ್ಷವಂತೂ ಮಕ್ಕಳ ಸೈನ್ಸ್ ಕಾಂಗ್ರೆಸ್, ಮಹಿಳೆಯರ ಸೈನ್ಸ್ ಕಾಂಗ್ರೆಸ್ ಕೂಡ ಇರುವುದರಿಂದ ಪ್ರವಾಸಿಗರ ಮೇಳವೇ ಆಗಲಿದೆ. ಕಳೆದ ವರ್ಷ ಅಲ್ಲಿನ ಗದ್ದಲದಲ್ಲಿ ಪ್ರಧಾನಿ ಡಾ. ಸಿಂಗ್ ಕ್ಷೀಣಸ್ವರದಲ್ಲಿ `ಚೀನೀಯರು ಮುಂದಕ್ಕೆ ಧಾವಿಸುತ್ತಿದ್ದಾರೆ, ನಾವು ಹಿಂದಿದ್ದೇವೆ' ಎಂದು ಹೇಳಿದ್ದು ಯಾರ ಕಿವಿಗೆ ತಟ್ಟಿತೊ ಬಿಟ್ಟಿತೊ?

ವಿಜ್ಞಾನ ಕಾಂಗ್ರೆಸ್ ಎಂಬುದು ನಮ್ಮ ಸಾಹಿತ್ಯ ಸಮ್ಮೇಳನಗಳ ವಿರಾಟ್ ರೂಪವಷ್ಟೆ. ಅಲ್ಲಿನ ಗೌಜು ಗದ್ದಲದಲ್ಲಿ ಗಂಭೀರವಾದ ಯಾವ ಚಿಂತನೆಯೂ ಸಾಧ್ಯವಿಲ್ಲ. ಚೆನ್ನೈನ ವಿಜ್ಞಾನ ಮೇಳದಲ್ಲಿ ಪ್ರತಿನಿಧಿಗಳು ಹಾಸಿಗೆ ದಿಂಬುಗಳಿಗಾಗಿ, ಭುವನೇಶ್ವರದಲ್ಲಿ ಊಟ-ತಿಂಡಿಗಾಗಿ ನಡೆಸಿದ ಹೋರಾಟಗಳೇ ಅಲ್ಲಿನ ಗೋಷ್ಠಿಗಳಿಗಿಂತ ಮುಖ್ಯ ಸುದ್ದಿಗಳಾಗಿದ್ದವು.

ಈ ವರ್ಷ ಕೋಲ್ಕತ್ತದ ಸಾಲ್ಟ್ಲೇಕ್ ಸುತ್ತ ಸಿಹಿ ನೀರಿಗಾಗಿ ಹೋರಾಟ ನಡೆಯದಿದ್ದರೆ ಸಾಕು. ಇಷ್ಟಕ್ಕೂ 2013ನೇ ಇಸವಿಯನ್ನು, `ಜಲ ಸಹಕಾರದ ವರ್ಷ' ಎಂದು ಘೋಷಿಸಲಾಗಿದೆ; ಅದು ನೆನಪಿದ್ದರೆ ಸಾಕು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.