ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ, ಬ್ಯಾಂಕ್ ಮತ್ತು ಸುಸ್ತಿ

Last Updated 12 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಆಗಿನ್ನೂ 2010ರ ಆರಂಭಿಕ ಕಾಲ. ಆಧುನಿಕ ಬದಲಾವಣೆಯ ಉತ್ತುಂಗದಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉತ್ಸಾಹಿ ಅಧ್ಯಕ್ಷರಾಗಿದ್ದ ಒ.ಪಿ.ಭಟ್ (2006-11) ಹೊಸದಾಗಿ ಅಳವಡಿಸಿಕೊಳ್ಳಲಿದ್ದ ತಂತ್ರಜ್ಞಾನವೊಂದನ್ನು ಅನಾವರಣಗೊಳಿಸುತ್ತಿದ್ದರು. ಅವರು ಇತರ ಸಾಮಾನ್ಯ ಸಾರ್ವಜನಿಕ ವಲಯದ ಘಟಕಗಳ ಮುಖ್ಯಸ್ಥರಂತಿರಲಿಲ್ಲ. ಮಹತ್ವಾಕಾಂಕ್ಷೆಯಿಟ್ಟುಕೊಂಡು ಸಾಧಿಸುವುದೆಂದರೆ ಅವರಿಗೆ ಪ್ರೀತಿ. ನವ ತಂತ್ರಜ್ಞಾನದ ಉದ್ಘಾಟನಾ ಕಾರ್ಯಕ್ರಮವನ್ನು ಕಾರ್ಪೊರೇಟ್ ಜಗತ್ತಿನ ವರ್ಷದ ಅತಿದೊಡ್ಡ ಘಟನೆಯಾಗಿಸಲು ಅವರು ಬಯಸಿದ್ದರು.

ಮುಂಬೈನ ಬ್ರಾಬೋರ್ನ್‌ ಸ್ಟೇಡಿಯಂ ಅನ್ನು ಬಾಡಿಗೆಗೆ ಪಡೆದು, ವಾಣಿಜ್ಯೋದ್ಯಮದ ಖ್ಯಾತನಾಮರನ್ನೆಲ್ಲ ಆಮಂತ್ರಿಸಿದ್ದರು. ಅವರೆಲ್ಲ ಬಂದರು ಕೂಡ. ತಮ್ಮ ಪ್ರತಿ ಅತಿಥಿಯನ್ನೂ ಭಟ್‌ ಖುದ್ದಾಗಿ ಆಹ್ವಾನಿಸಿದ್ದರು (ಈ ಲೇಖಕನೂ ಸೇರಿದಂತೆ). ಲೇಸರ್‍ ಪ್ರದರ್ಶನದೊಡನೆ ಭಟ್‌ ತಮ್ಮ ವಿಷಯ ಮಂಡನೆ ಆರಂಭಿಸಿದರು. ಸ್ಟೇಡಿಯಂನಲ್ಲಿದ್ದ ಎಲ್ಲ ದೀಪಗಳನ್ನೂ ಆರಿಸಲಾಗಿತ್ತು. ಹಲವು ದುಂಡು ಮೇಜುಗಳಲ್ಲಿ ಆಸೀನರಾಗಿದ್ದ ಅತಿಥಿಗಳು ಈ ಪ್ರದರ್ಶನವನ್ನು ಮೆಚ್ಚಿ ಚಪ್ಪಾಳೆ ತಟ್ಟಿ ಶ್ಲಾಘಿಸಿದರು. ಆಗ ಎಲ್ಲರ ಗಮನಸೆಳೆಯುವಂತಹ ಸದ್ದು ಎಡಬದಿಯಿಂದ ಕೇಳಿಬಂತು.

ಲೇಸರ್‍ ಬೆಳಕಿನ ಪ್ರತಿಫಲನದಲ್ಲಿ, ಅತ್ಯಂತ ಪ್ರಮುಖರಂತೆ ಕಾಣುತ್ತಿದ್ದ ಸುಮಾರು ಹತ್ತು-ಹನ್ನೆರಡು ಮಂದಿಯ ನೆರಳುಗಳು ಕಂಡುಬಂದವು. ವಿಜಯ್‌ ಮಲ್ಯ ತಮ್ಮ ಹೌದಪ್ಪಗಳು, ಸೇವಕರು, ಅಂಗರಕ್ಷಕರೊಡನೆ ತಮ್ಮದೇ ಶೈಲಿಯಲ್ಲಿ ಬಹು ವೈಭವದಿಂದ ಒಳಬರುತ್ತಿದ್ದರು. ಒಬ್ಬ ವ್ಯಕ್ತಿಯಂತೂ ಅವರ ಎರಡು ಮೊಬೈಲ್ ಫೋನ್‌ಗಳನ್ನು ಹೊಳೆಯುವ ಬೆಳ್ಳಿ ತಟ್ಟೆಯಲ್ಲಿ ಹಿಡಿದು ಬರುತ್ತಿದ್ದ. ಅವರ ಹುಡುಗರು ದಷ್ಟಪುಷ್ಟವಾಗಿ, ಎತ್ತರವಾಗಿ, ಕಡುಬಣ್ಣದ ಸೂಟ್ (ವಿವಿಐಪಿಗಳ ಭದ್ರತಾ ಸೈನಿಕರ ಸಫಾರಿ ತರಹದ ಉಡುಪು ಇರಬೇಕೆಂದು ನನ್ನ ನೆನಪು) ಹಾಕಿಕೊಂಡು ಅವರ ಅಧಿಕಾರದ ಛಾಯೆಯಲ್ಲಿ ಬೆಳಗುತ್ತಿದ್ದರು.

ಇದೆಲ್ಲದರ ಪ್ರಭಾವಳಿ ಹೇಗಿತ್ತೆಂದರೆ, ಭಟ್ ತಮ್ಮ ವಿಷಯ ಮಂಡನೆಯನ್ನು ಅಲ್ಲಿಗೇ ನಿಲ್ಲಿಸಿ  ವಿದ್ಯುದ್ದೀಪಗಳನ್ನು ಬೆಳಗಿಸುವಂತೆ ಸೂಚಿಸಿದರು. ಈ ರೀತಿ ಕಾರ್ಯಕ್ರಮ ನಿಲ್ಲಿಸಿದವರಾರೆಂಬುದು ಗೊತ್ತಾಗುತ್ತಿದ್ದಂತೆಯೇ ಅಲ್ಲಿ ಗುಸುಗುಸು ಶುರುವಾಯಿತು. ಬಹುತೇಕ ಮೆಚ್ಚುಗೆಯ ಇಲ್ಲವೇ ಹೊಟ್ಟೆಕಿಚ್ಚಿನ ಮಾತುಗಳು ಕೇಳಿಬಂದವು. ‘ಬಾಸ್, ಏನೇ ಹೇಳಿ, ನೀವು ವಿಜೆಎಮ್ ತರಹ ಸಾಲ ಪಡೆಯುವಂತಿರಬೇಕು ನೋಡಿ’ ಎಂದು ನನ್ನ ಮೇಜಿನಲ್ಲಿದ್ದ ಉದ್ಯಮಿ ನಾಯಕರೊಬ್ಬರು ಹೇಳಿದರು. ‘ತಮಗೆ ಅತಿ ಹೆಚ್ಚು ಸಾಲ ಕೊಟ್ಟವರ ಪಾರ್ಟಿಯನ್ನೇ ನಿಲ್ಲಿಸಬಲ್ಲ ಶಕ್ತಿ ಅವರಿಗಿದೆ. ಅಷ್ಟಾದರೂ ಅವರನ್ನು ಇಜ್ಜತ್‌ನಿಂದಲೇ (ಗೌರವಯುತವಾಗಿ) ನೋಡಿಕೊಳ್ಳಲಾಗುತ್ತದೆ ನೋಡಿ’ ಎಂದರು. ಹಾಗಿತ್ತು ಮಲ್ಯ ಅವರ ಶಕ್ತಿ.

2010ರಲ್ಲಿ ಅದಾಗಲೇ ನಷ್ಟ ಮತ್ತು ಸಾಲದ ಸುಳಿಯಲ್ಲಿ ಅವರಿದ್ದರೆಂಬುದು ನೆನಪಿರಲಿ. ಕಡಿಮೆ ಬಡ್ಡಿ ಹಾಗೂ ಹಣಕಾಸಿನ ಸುಲಭ ಲಭ್ಯತೆ ಇದ್ದರೂ 2008ರ ನಂತರದ ಪ್ರೋತ್ಸಾಹಕ ಸಾಲದ ಪ್ಯಾಕೇಜ್‌ಗಳನ್ನು ವಿತರಿಸುವ ಕಾಲ ಅದಾಗಿತ್ತೆಂಬುದೂ ನೆನಪಿರಲಿ. ಪೆಟ್ರೋಲಿಯಂ ಬೆಲೆ ಹೆಚ್ಚುತ್ತಿತ್ತು. ಆದರೂ ಆ ಕಾಲದಲ್ಲಿ ಅವರ ಮಹತ್ವಾಕಾಂಕ್ಷೆಯನ್ನು ತಡೆಯುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಸಾಲ ಕೊಟ್ಟ ಯಾವುದೇ ಸಾರ್ವಜನಿಕ ಬ್ಯಾಂಕ್ ಅವರಿಗೆ ಎಚ್ಚರಿಕೆಯ ಮಾತು ಹೇಳುವಷ್ಟು ಶಕ್ತವಾಗಿತ್ತೆಂದು ನಾನು ನಂಬುವುದಿಲ್ಲ. ಅವರ ಪಾರ್ಟಿಗಳಿಗೆ ಆಹ್ವಾನ ಪಡೆಯುವುದರಿಂದ ಅವರೆಲ್ಲ ಪುಳಕಗೊಳ್ಳುತ್ತಿದ್ದರು ಮತ್ತು ತಮ್ಮ ಬಳಿ ಬಂದಾಗ ಅವರನ್ನು ಗೌರವಿಸುತ್ತಿದ್ದರು. ಮಲ್ಯ ಆವರೆಗೆ ಭಾರತದ ಯಾವ ಉದ್ಯಮಿಯೂ ಮಾಡದ ಸಾಧನೆ ಮಾಡಿದ್ದರು: ಮತ್ತೆಮತ್ತೆ ಸಾಲ ಪಡೆಯುತ್ತಿದ್ದರೂ, ಬ್ಯಾಂಕುಗಳಿಗೆ ಬಹುಬೇಕಾದ ‘ಬಂಗಾರದ ಕೋಳಿ’ಯಂತಾಗಿದ್ದರು. ಅವರ ಬ್ಯಾಲೆನ್ಸ್‌ ಶೀಟ್‌ಗಳನ್ನು ನೋಡಿದರೆ ಅವರು ಸಂಭವನೀಯ ಸುಸ್ತಿದಾರ ಆಗಬಹುದಾದ ಎಲ್ಲ ಸಾಧ್ಯತೆ ಇದ್ದಿದ್ದರ ನಡುವೆಯೂ.

ಇದು ಡಾ. (ಗೌರವಪೂರ್ವಕವಾಗಿ ಕೊಡಮಾಡಿದ ಪದವಿ) ವಿಜಯ್‌ ಮಲ್ಯರ ಜೀವನ ಮತ್ತು ಅವರ ಕಾಲದ ಬಗ್ಗೆ ಒಳನೋಟವನ್ನು ನೀಡುವುದಿಲ್ಲ. ಅವರು ಉದ್ಯಮವನ್ನು ನಿಭಾಯಿಸುವ, ಅವುಗಳನ್ನು ಕೂಡಿಸುವ, ಬೇರ್ಪಡಿಸುವ ಗುಟ್ಟುಗಳನ್ನು ಬಹಿರಂಗಪಡಿಸುವ ಕೌಶಲವೂ ನನಗಿಲ್ಲ. ಆದರೆ ಮಲ್ಯರ ಕರ್ತೃತ್ವಶಕ್ತಿ ಬಗ್ಗೆ ಸಂದೇಹಪಡುವಂತಿರಲಿಲ್ಲ. ಉದಾಹರಣೆಗೆ, ಶೀಘ್ರ ಬದಲಾವಣೆಗಳ 2007-8ರ ಉತ್ತುಂಗದಲ್ಲಿ ಅಪ್ರಯೋಜಕ ಡೆಕ್ಕನ್ ಏರ್‌ಲೈನ್ಸ್ ಅನ್ನು ₹ 2100 ಕೋಟಿ ಬೆಲೆಗೆ ಕೊಂಡುಕೊಂಡಾಗ, ಕಿಂಗ್‌ಫಿಶರ್‌ ಅನ್ನು ಡೆಕ್ಕನ್‌ ‘ತನ್ನೊಳಗೆ ಸೇರಿಸಿಕೊಂಡಿತು’. ಏಕೆಂಬುದು ಪ್ರತಿಯೊಬ್ಬರಿಗೂ ಗೊತ್ತು.

ನಾಗರಿಕ ವಿಮಾನ ಯಾನ ಸಚಿವಾಲಯದ (ಈಗಲೂ ಜಾರಿಯಲ್ಲಿರುವ) ತಿಳಿಗೇಡಿ ಕಾನೂನೊಂದನ್ನು ಅವರು ದಾಟಬೇಕಿತ್ತು. ಅದೆಂದರೆ, ದೇಶದ ಹೊರಗೆ ವಿಮಾನ ಹಾರಿಸಲು ವಿಮಾನಯಾನ ಸಂಸ್ಥೆ ಕನಿಷ್ಠ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರಬೇಕು ಎಂಬುದು. ಕಿಂಗ್‌ಫಿಶರ್‍ 2005ರಲ್ಲಿ ಆರಂಭಗೊಂಡಿತ್ತು. ಆದರೆ ಮಲ್ಯ ಅವಸರದಲ್ಲಿದ್ದರು. ಈ ಹಕ್ಕು ಪಡೆಯಲು ಡೆಕ್ಕನ್ ಅನ್ನು ಖರೀದಿಸಿದ ಅವರು ಅದರಲ್ಲಿ ತಮ್ಮ ವಿಮಾನಯಾನ ಸಂಸ್ಥೆಯನ್ನು ಸೇರಿಸಿದರು. ‘ಎಷ್ಟೊಂದು ಕರ್ತೃತ್ವಶಾಲಿ’ ಎಂದು ಹೇಳಿ ಅವರ ಶಕ್ತಿಸಾಮರ್ಥ್ಯ ಮತ್ತು ಅಧಿಕಾರಶಾಹಿಗೆ ಚಳ್ಳೆಹಣ್ಣು ತಿನ್ನಿಸಿ ಅದರ ನಿಯಂತ್ರಣಹೀನತೆಯನ್ನು ತೋರಿಸಿ ಚೇಷ್ಟೆ ಮಾಡಿದ್ದಕ್ಕಾಗಿ ಅವರಿಗೆ ನೀವು ಚಪ್ಪಾಳೆ ತಟ್ಟಬಹುದು. ಆದರೆ ಹಾಗೆ ಮಾಡಿದ್ದಕ್ಕಾಗಿ ಅವರಿಗೆ ನೀವು ಸಾಲ ಕೊಡುತ್ತೀರಾ?

ಬ್ಯಾಂಕುಗಳ, ಅದರಲ್ಲೂ ಸಾರ್ವಜನಿಕ ರಂಗದ ಬ್ಯಾಂಕುಗಳ ಸ್ಥಾನದಲ್ಲಿ ನಿಂತು ನೋಡಿ. ಮಲ್ಯ ಕೇವಲ ಒಬ್ಬ ಉದ್ಯಮಿ ಆಗಿರಲಿಲ್ಲ. ಸಂಸತ್ತಿನ ಪ್ರಮುಖ ಸದಸ್ಯರಾಗಿ ವಾಜಪೇಯಿಯವರ ಎನ್‌ಡಿಎ ಹಾಗೂ ಮನಮೋಹನ್‌ ಸಿಂಗ್‌ ಅವರ ಯುಪಿಎಯ ಬಹುತೇಕ ಸಚಿವರನ್ನು ಅವರ ಮೊದಲ ಹೆಸರಿನಿಂದ ಕರೆಯುವಷ್ಟು ಸಲುಗೆ ಹೊಂದಿದ್ದರು. ಎರಡನೇ ಸಲ ಸಂಸದರಾಗಿ, ಪ್ರಮುಖ ಸಲಹಾ ಸಮಿತಿಗಳ  ಸದಸ್ಯರಾಗಿದ್ದರು. ಹ್ಞಾಂ, ಆಶ್ಚರ್‍ಯಪಡಬೇಡಿ, ಇದರಲ್ಲಿ ನಾಗರಿಕ ವಿಮಾನಯಾನ ಮತ್ತು ರಸಗೊಬ್ಬರ ಸಮಿತಿಯೂ ಸೇರಿತ್ತು (ಮಂಗಳೂರು ಪೆಟ್ರೊಕೆಮಿಕಲ್ ಮತ್ತು ರಸಗೊಬ್ಬರ ಕಾರ್ಖಾನೆಗೂ ಅವರು ಒಡೆಯ). ಹಿತಾಸಕ್ತಿ ಸಂಘರ್ಷದ ಬಗ್ಗೆ ಭಾರತೀಯ ಸಂಸತ್ತಿಗೇ ಕಾಳಜಿಯಿಲ್ಲದಿರುವಾಗ ಕನಸುಕಂಗಳ ಬಡ ಬ್ಯಾಂಕರುಗಳನ್ನೇಕೆ ಹಳಿಯುತ್ತೀರಿ?

ಅವರೆಲ್ಲ, ಐಪಿಎಲ್ ಪಂದ್ಯಗಳು ಹಾಗೂ ದೇಶದ ಅತ್ಯಂತ ಸೆಕ್ಸಿ, ಅತ್ಯಂತ ಶಕ್ತರು, ಖ್ಯಾತನಾಮರು, ಚಿತ್ರತಾರೆಯರು, ರೂಪದರ್ಶಿಯರು, ರಾಜಕಾರಣಿಗಳು, ಅಧಿಕಾರಿ ವರ್ಗ, ಅಗ್ರ ಪತ್ರಕರ್ತರು, ಮಾಧ್ಯಮ ಕುಳಗಳ ಜೊತೆ ಭುಜಕ್ಕೆ ಭುಜ ಹಚ್ಚುತ್ತಿದ್ದ ಮಲ್ಯ ಅವರ ಪಾರ್ಟಿಗಳು ಮತ್ತು ಕಾರ್ಯಕ್ರಮಗಳಿಗೆ ಆಮಂತ್ರಣ ಪಡೆಯಲು ಸೆಣಸುತ್ತಿದ್ದರು. ಮಲ್ಯ ಅವರಿಗೆ ಸಾಲ ಕೊಡುವುದೆಂದರೆ, ಅಧಿಕಾರ ಮತ್ತು ಗ್ಲಾಮರ್‍ ವಿಶ್ವಕ್ಕೆ ಸೀಸನ್ ಟಿಕೆಟ್ ಸಿಕ್ಕಂತಾಗುತ್ತಿತ್ತು ಬ್ಯಾಂಕಿನವರಿಗೆ. ಸಾಲ ಪಡೆದು ಮಲ್ಯ ಬ್ಯಾಂಕುಗಳಿಗೆ ಉಪಕಾರ ಮಾಡಿದ್ದಾರೆ ಎಂಬಂತಿತ್ತು. ಭಾರತದ ವಿಮಾನಯಾನ ವ್ಯವಸ್ಥೆ ನೆಲ ಕಚ್ಚುತ್ತಿದೆ ಎಂದು ಪ್ರತಿಯೊಂದು ವಿಮರ್ಶೆಯೂ ಹೇಳುತ್ತಿದ್ದಾಗಲೇ ಈ ಬೆಳವಣಿಗೆ ನಡೆಯುತ್ತಿದ್ದುದು. ನ್ಯಾಯವಾಗಿ ನೋಡಿದರೆ, ಕಾರ್ಪೊರೇಟ್ ರಂಗದ ಅತ್ಯಂತ ಸ್ಪರ್ಧಾತ್ಮಕ, ಭಾರಿ ಪ್ರಮಾದಗಳ ಕಾಲ ಅದಾಗಿತ್ತೆಂಬುದನ್ನು ಗಮನಿಸಬೇಕು.

ಮಾರುಕಟ್ಟೆಯ ಹೆಚ್ಚಿನ ಪಾಲಿಗಾಗಿ ನಡೆಯುವ ಈ ಆತ್ಮಘಾತುಕ ಹೊಡೆದಾಟದಲ್ಲಿ, ಜೆಟ್ ಏರ್‌ವೇಸ್‌ ಕೂಡ ಡೆಕ್ಕನ್‌ನಷ್ಟೇ ಅಪ್ರಯೋಜಕವಾಗಿದ್ದ ಸಹಾರಾವನ್ನು ಪಡೆದುಕೊಂಡಿತು. ಅದೂ ₹ 2,000 ಕೋಟಿ ಸಾಲದ ಹಣದಲ್ಲಿ. ಈ ಬಗೆಯ ಸ್ಪರ್ಧಾತ್ಮಕ ಹುಚ್ಚಾಟ, ಭಾರತೀಯ ವಿಮಾನಯಾನ ವ್ಯವಸ್ಥೆಯನ್ನೇ ಬಹುತೇಕ ಬಲಿ ತೆಗೆದುಕೊಂಡಿತು. ಈ ಬಗೆಯ ಸ್ವಾಧೀನದಿಂದ ಕಿಂಗ್‌ಫಿಶರ್‌ಗೆ ಉಸಿರುಗಟ್ಟಿದರೆ, ಜೆಟ್ ತನ್ನ ಅವಸಾನದಂಚಿನ ಅನುಭವ ಪಡೆಯಿತು. ಆದರೆ ಮಲ್ಯ ಅವರಿಗಿಲ್ಲದ ಒಂದು ವಿಶೇಷ ಗುಣ ಇದರ ಸಂಸ್ಥಾಪಕರಲ್ಲಿತ್ತು. ಅದೆಂದರೆ ಅವರಿಗಿದ್ದ ಕೊನೆಯಿಲ್ಲದ, ಉತ್ಪ್ರೇಕ್ಷೆ ಎನಿಸುವ ನಮ್ರತೆ ಮತ್ತು ‘ನಾನು ತಪ್ಪು ಮಾಡಿಬಿಟ್ಟೆ’ ಎಂದು ಹೇಳಿಕೊಳ್ಳುವ ಗುಣ. ಈ ಗುಣವಿಲ್ಲದೆ ಇತರರ ಹಣವನ್ನು ಎಂದಿಗೂ ಮುಟ್ಟಬಾರದು- ಅದು ಸಾಲವಾಗಲಿ, ಷೇರಾಗಿರಲಿ.

ಮಲ್ಯ ಅವರ ಕತೆ ನಾವು ಎಷ್ಟೊಂದು ಸರಳವಾಗಿ ಸ್ವಜನ ಪಕ್ಷಪಾತಿಗಳಾಗಿಬಿಡುತ್ತೇವೆ ಎಂಬುದನ್ನು ಹೇಳುತ್ತದೆ. ವಿಜಯ್‌ ಮಲ್ಯ ಮಾತ್ರವಲ್ಲದೆ ಇತರ ಅನೇಕರು ಮೇಲಕ್ಕೇರುವಲ್ಲಿ ಹಾಗೂ ಬೀಳುವಲ್ಲಿ ನಮ್ಮ ಸಂಸತ್ತು, ರಾಜಕಾರಣ, ಅಧಿಕಾರಿ ವರ್ಗ, ಮಾಧ್ಯಮ, ಬ್ಯಾಂಕುಗಳೆಲ್ಲ ಪಾತ್ರ ವಹಿಸಿವೆ. ಸಮಾಜವಾದದ ರಕ್ಷಣೆಯ ನೆಪದಲ್ಲಿ ನಾವು ಶಕ್ತಿಶಾಲಿಗಳ ದೈತ್ಯ ಹಾಗೂ ಶಾಶ್ವತವಾದ ಸಂಬಂಧವನ್ನು ಕಟ್ಟಿ ಬೆಳೆಸಿದ್ದೇವೆ. ಇಲ್ಲಿ ಬ್ಯಾಲೆನ್ಸ್‌ ಶೀಟ್‌ಗಳಿಗಿಂತ ಈ ಶಕ್ತರೊಂದಿಗಿನ ಸುದೀರ್ಘ ಒಡನಾಟ ಮತ್ತು ಸಂಪರ್ಕ ಜಾಲವೇ ಹೆಚ್ಚು ಮುಖ್ಯವಾಗುತ್ತದೆ. ಹೀಗಾಗಿ ನಮ್ಮ ಬಹುತೇಕ ಸಾಂಪ್ರದಾಯಿಕ ಉದ್ಯಮಿಗಳಿಗೆ ನಮ್ಮ ಕುಬ್ಜ ‘ಸರ್ಕಾರ್‍’ ಅನ್ನು ಸಾಕಷ್ಟು ತೃಪ್ತಿಗೊಳಿಸಿ ತಮ್ಮ ಜೇಬಿಗಿಳಿಸಿಕೊಳ್ಳುವ ಕಲೆ ಚೆನ್ನಾಗಿಯೇ ಗೊತ್ತಿದೆ. ಅದೀಗ ಸ್ವಲ್ಪ ಮಟ್ಟಿಗೆ ಬದಲಾಗುತ್ತಿದೆ. ಮಲ್ಯ ಅವರು ಇಷ್ಟಪಡಲಿ ಬಿಡಲಿ, ಮಾಧ್ಯಮವು ಈ ಧನಾತ್ಮಕ ಬದಲಾವಣೆಯಲ್ಲಿ ಪಾತ್ರ ವಹಿಸುತ್ತಿದೆ. ಹಾಗೆ ನೋಡಿದರೆ, ಅವರು ಸ್ವಾಧೀನಪಡಿಸಿಕೊಂಡು ದಿವಾಳಿಯೆಬ್ಬಿಸಿದ ಉದ್ಯಮಗಳಲ್ಲಿ ಮಾಧ್ಯಮ ಸಂಸ್ಥೆಯೂ ಸೇರಿದೆ. ಹೆಚ್ಚು ವಿವರಗಳಿಗೆ ದಯಮಾಡಿ ನನ್ನ ಮಿತ್ರ ಎಂ.ಜೆ.ಅಕ್ಬರ್‌ ಅವರನ್ನು ಕೇಳಿ.

ಸುಧಾರಣೆಗಳ ನಂತರದ ಕಾಲದ ಭಾರತದಲ್ಲಿ ಬ್ಯಾಂಕುಗಳು ಒತ್ತಡಕ್ಕೊಳಗಾಗುವುದು ಹೊಸದೇನಲ್ಲ. ಈಚೆಗೆ ಇಂತಹ ಬಿಕ್ಕಟ್ಟು ಬಂದದ್ದು 2002-03(?)ರಲ್ಲಿ. ಆಗ ನಾನು ಸಂಪಾದಿಸುತ್ತಿದ್ದ ‘ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ತನಿಖಾ ವರದಿಗಳ ಸರಣಿಯನ್ನೇ ಸಮರ್‍ ಹಲರ್ನ್‌ಕರ್‍ ಅವರ ನೇತೃತ್ವದಲ್ಲಿ ಪ್ರಕಟಿಸಿದೆವು. ಅದನ್ನು ‘ದಿ ಗ್ರೇಟ್ ಇಂಡಿಯನ್ ಬ್ಯಾಂಕ್ ರಾಬರಿ’ ಎಂದು ಕರೆದೆವು. ಪತ್ರಾಗಾರ ತೆಗೆದು ನೋಡಿ. ಮೂವತ್ತಕ್ಕೂ ಹೆಚ್ಚು ಕಂತುಗಳ ಈ ಸರಣಿಯಲ್ಲಿ  ಇಂದಿನ ಹಲವು ‘ಖ್ಯಾತನಾಮ’ರ ಹೆಸರುಗಳಿವೆ. ಬಾಲಿವುಡ್‌ನ ಖಾನ್‌ಗಳಂತೆ, ನಮ್ಮ ಪ್ರಮುಖ ಸಾಲಗಾರರು ಸಹ ಸದಾ ಹಚ್ಚಹಸಿರು; ಅವರ ಅಭಿಮಾನಿಗಳಂತೆಯೇ ಬ್ಯಾಂಕುಗಳಿಗೂ ಅವರ ಬಗ್ಗೆ ಅಂಥವೇ ಕನಸುಕಂಗಳಿವೆ. ಈ ಸರಣಿಯು ಎನ್‌ಡಿಎ ಸರ್ಕಾರಕ್ಕೆ ಕಿರಿಕಿರಿ ಉಂಟು ಮಾಡಿತು. ನಾವು ಎಲ್ಲೆ ಮೀರುತ್ತಿದ್ದೇವೆ ಎಂದು ದೂರುವ ಕೆಲವು ಸಂದೇಶಗಳು ‘ಮೇಲಿನ’ ಕೆಲವರಿಂದ  ಬಂದವು.

ಒಂದು ಮಧ್ಯಾಹ್ನ ದೊಡ್ಡ ಮನುಷ್ಯರೊಬ್ಬರು ಕರೆ ಮಾಡಿದರು. ‘ಅರೆ, ಕಿತ್ನೆ ದಿನ್ ಚಲಾಯೇಂಗೆ ಇಸ್ ಸೀರೀಸ್ ಕೊ ಆಪ್, ಪೂರಾ ವರ್ಷ್‌?’ (ಇನ್ನೂ ಎಷ್ಟು ದಿನ ಈ ಸರಣಿ ಪ್ರಕಟಿಸುತ್ತೀರಿ, ಇಡೀ ವರ್ಷವೇ?) ಎಂದು ಅವರು ಕೇಳಿದ್ದರು.

‘ಇಲ್ಲ ಅಟಲ್‌ಜಿ. ಯಾರಾದರೂ ಈ ಪಟ್ಟಿಗೆ ಸೇರಬೇಕೆಂದರೆ, ₹500 ಕೋಟಿಗಿಂತ ಹೆಚ್ಚು ಬಾಕಿ ಹೊಂದಿದವರಾಗಿರಬೇಕು. ಹಾಗಾಗಿ ಇನ್ನು ಕೆಲವೇ ದಿನ ಮಾತ್ರ’ ಎಂದೆ.

‘ಹಾಗಾದರೆ ಬಾಲೂಜಿಯನ್ನೇಕೆ ಸೇರಿಸಿದ್ದೀರಿ? ಅವರು ಬಾಕಿದಾರರಾಗಿರುವ ಸಾಲ ಕೇವಲ 35 ಕೋಟಿ’ ಎಂದು ಹೇಳಿದರು.

‘ಏಕೆಂದರೆ ಅವರೊಬ್ಬ ಎಂ.ಪಿ. ಮತ್ತು ಸಚಿವರು ಅಟಲ್‌ಜಿ. ಹಾಗಾಗಿ ಕಡಿಮೆ ಮೊತ್ತವಿದ್ದರೂ ಅವರು ಈ ಪಟ್ಟಿಗೆ ಸೇರಲು ಅರ್ಹರಾಗುತ್ತಾರೆ. ಇಂತಹ ಪ್ರಕರಣಗಳಲ್ಲಿ ಎಂ.ಪಿ.ಗಳಿಗೆ ಅಳತೆಗೋಲು ಸ್ವಲ್ಪ ಕಡಿಮೆ ಇರಲೇಬೇಕು’ ಎಂದೆ. ಅವರಿಂದ ಬುದ್ಧಿವಾದ ಹೇಳಿಸಿಕೊಳ್ಳದಂತೆ ಮಾತಾಡಿ ಪಾರಾದೆ. ಎನ್‌ಡಿಎ ಸಂಪುಟದಲ್ಲಿದ್ದ ಡಿಎಂಕೆ ಪಕ್ಷದ ಟಿ.ಆರ್‍.ಬಾಲು ರೋಗಗ್ರಸ್ತ ಉದ್ದಿಮೆಯೊಂದರ ಮಾಲೀಕರಾಗಿದ್ದು, 35 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿದ್ದರು.

ಈಗ ನಾವು ಗೌರವಾನ್ವಿತ ಎಂ.ಪಿ.ಯೊಬ್ಬರು 17 ಸಾರ್ವಜನಿಕ ಬ್ಯಾಂಕುಗಳ ₹ 9,000 ಕೋಟಿ ಸಾಲಕ್ಕೆ ಸುಸ್ತಿದಾರರಾಗಿದ್ದು, ಲಂಡನ್‌ನಿಂದ ಟ್ವಿಟರ್‌ನಲ್ಲಿ ನಮಗೆ ಬುದ್ಧಿಮಾತು ಹೇಳಿದರೆ ಕೇಳಿಸಿಕೊಳ್ಳುತ್ತೇವೆ. ನಾವು ಬಹು ದೂರ ಸಾಗಿ ಬಂದಿದ್ದೇವೆ, ನಿಜಕ್ಕೂ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT