ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ask ಅಮೆರಿಕ

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

1. ಮಹೇಶ್ ಬಿ. ಕೊದ್ದಡ್ಡಿ ಶಹಾಪೂರ
ಅಮೆರಿಕದಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಬ್ಬರೂ ಸೇವೆಯಲ್ಲಿ ಲಭ್ಯವಿಲ್ಲದಿದ್ದಾಗ ಯಾರು ಅಧಿಕಾರವನ್ನು ಚಲಾಯಿಸುತ್ತಾರೆ?
ಅಮೆರಿಕ ಸಂಯುಕ್ತ ಸಂಸ್ಥಾನ ಸಂವಿಧಾನದ ಅನುಚ್ಛೇದ 2, ಕಲಂ 1ರ ಅನ್ವಯ ಅಧ್ಯಕ್ಷರು ಸೇವೆಗೆ ಲಭ್ಯರಿಲ್ಲದಿದ್ದಾಗ, ಉಪಾಧ್ಯಕ್ಷರು ಆ ಹೊಣೆಯನ್ನು ನಿಭಾಯಿಸಬೇಕು.

ಉಪಾಧ್ಯಕ್ಷರ ನಂತರದ ಉತ್ತರಾಧಿಕಾರಿಗಳ ಸರತಿಯನ್ನು ನಿರ್ಧರಿಸುವ ಜವಾಬ್ದಾರಿ ಅಲ್ಲಿನ ಸಂಸತ್ತಿನದ್ದು. ಅಲ್ಲಿನ ಸಂಸತ್ತು ಅಂಗೀಕರಿಸಿದ ಅಧ್ಯಕ್ಷರ ಉತ್ತರಾಧಿಕಾರಿ ಕಾಯ್ದೆ 1947 ಅನ್ವಯ, ಪ್ರತಿನಿಧಿ ಸಭೆಯ (ಕೆಳ ಮನೆ) ಸಭಾಪತಿಗಳು ಉತ್ತರಾಧಿಕಾರಿಗಳ ಸಾಲಿನಲ್ಲಿ ಮೂರನೆಯವರು. ಆ ತರುವಾಯ, ಸೆನೆಟ್‌ನ ಪ್ರೊ.ಟೆಮ್ ಅಧ್ಯಕ್ಷ, ವಿದೇಶಾಂಗ ಕಾರ್ಯದರ್ಶಿ (ಸೆಕ್ರೆಟರಿ ಆಫ್ ಸ್ಟೇಟ್), ಹಣಕಾಸು ಕಾರ್ಯದರ್ಶಿ (ಸೆಕ್ರೆಟರಿ ಆಫ್ ಟ್ರೆಷರಿ), ರಕ್ಷಣಾ ಕಾರ್ಯದರ್ಶಿ (ಸೆಕ್ರೆಟರಿ ಆಫ್ ಡಿಫೆನ್ಸ್), ಅಟಾರ್ನಿ ಜನರಲ್, ಆಂತರಿಕ ಕಾರ್ಯದರ್ಶಿ (ಸೆಕ್ರೆಟರಿ ಆಫ್ ಇಂಟೀರಿಯರ್) ಅವರು ಕ್ರಮವಾಗಿ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ನಂತರ ಸಂಪುಟದ ಇತರ ಖಾತೆಗಳ ಮುಖ್ಯಸ್ಥರು ಈ ಹೊಣೆಗಾರಿಕೆಯ ಸಾಲಿನಲ್ಲಿರುತ್ತಾರೆ.

ಅಧ್ಯಕ್ಷರ ಉತ್ತರಾಧಿಕಾರಿಗಳನ್ನು ನಿರ್ಧರಿಸುವ ಕಾಯ್ದೆಯು ಹಲವಾರು ಸಂದರ್ಭಗಳಲ್ಲಿ ಮಾರ್ಪಾಡಾಗಿರುವುದನ್ನು ಇತಿಹಾಸದುದ್ದಕ್ಕೂ ಕಾಣಬಹುದು. ಉದಾಹರಣೆಗೆ, ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ ಅವರ ಉತ್ತರಾಧಿಕಾರಿಯಾದ ಎರಡು ತಿಂಗಳ ತರುವಾಯ ಅಧ್ಯಕ್ಷ ಹ್ಯಾರಿ ಎಸ್ ಟ್ರೂಮನ್ ಅವರು ಉತ್ತರಾಧಿಕಾರಿ ಕಾಯ್ದೆಗೆ ಮಾರ್ಪಾಟು ತಂದರು.

ಅದರನ್ವಯ ಪ್ರತಿನಿಧಿ ಸಭೆಯ ಸಭಾಪತಿಗಳು ಹಾಗೂ ಸೆನೆಟ್‌ನ ಪ್ರೊ. ಟೆಮ್ ಅಧ್ಯಕ್ಷರು ಅನುಕ್ರಮವಾಗಿ ಉತ್ತರಾಧಿಕಾರಿಗಳಾಗುತ್ತಾರೆ. ಅಧ್ಯಕ್ಷ ಗಾದಿಗೆ ಉತ್ತರಾಧಿಕಾರಿಗಳನ್ನು ಅಧ್ಯಕ್ಷರೇ ನೇಮಕ ಮಾಡುವಂತಾಗಬಾರದು ಎಂಬ ಹಿನ್ನೆಲೆಯಲ್ಲಿ ಅಧ್ಯಕ್ಷ ಟ್ರೂಮನ್ ಅವರು ಈ ಮಾರ್ಪಾಡನ್ನು ತಂದರು. ಅಧ್ಯಕ್ಷ ಉತ್ತರಾಧಿಕಾರಿ ಕಾಯ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಮುಂದಿನ ಕೊಂಡಿಯಲ್ಲಿ ಪಡೆಯಬಹುದು:
http://www.senate.gov/artandhistory/history/minute/Presidential_Succession_Act.htm

2. ಡಾ.ಮಲ್ಲಿಕಾರ್ಜುನ ಕುಂಬಾರ, ರಾಜೂರ (ಜಿಲ್ಲಾ-ಗದಗ)
ಅಮೆರಿಕದ ಶಿಲ್ಪಕಲೆಯ ಬಗ್ಗೆ ವಿವರಿಸಿರಿ. ನಮ್ಮಂತೆ (ವೇಸರ, ನಾಗರ, ದ್ರಾವಿಡ)ಆ ಕಲೆಯನ್ನು ಹೇಗೆ ವಿಭಾಗಿಸುತ್ತಿರಿ?
ಭಾರತದಂತೆಯೇ ಅಮೆರಿಕದ ಶಿಲ್ಪಕಲೆಯೂ ಗ್ರೀಕ್, ಗೋಥಿಕ್ ರಿವೈವಲ್, ಆಧುನಿಕ, ಕ್ರಿಯಾತ್ಮಕ, ಐತಿಹಾಸಿಕ, ಆಧುನಿಕೋತ್ತರ ಎಂಬ ಹಲವಾರು ಶೈಲಿಗಳನ್ನು ಒಳಗೊಂಡಿದೆ.

ಅಲ್ಲದೇ, ಪ್ರಾದೇಶಿಕ ಸಂಸ್ಕೃತಿ ಹಾಗೂ ವಸ್ತುಗಳನ್ನು ಒಳಗೊಂಡ ಕೆಲವು ಪ್ರಭೇದಗಳೂ ಉಂಟು. ಶಿಲ್ಪಕಲೆಯ “ಎಕ್ಲೆಟಿಕ್~~ ಯುಗದಲ್ಲಿ ಆಧುನಿಕ ಹಾಗೂ ರಿವೈವಲ್ ಶೈಲಿಯಲ್ಲಿ ಅನೇಕ ಆಯ್ಕೆಗಳಿದ್ದವು. ಅಮೆರಿಕದ ಶಿಲ್ಪಕಲೆಯ ಪ್ರಸ್ತುತ ಒಲವು ಐತಿಹಾಸಿಕ ಸಂರಕ್ಷಣೆ. ಖ್ಯಾತ ವಾಸ್ತು ಶಿಲ್ಪಿಗಳೆಂದರೆ ವ್ಯಾಲೇಸ್ ನೆಫ್, ಫ್ರಾಂಕ್ ಲಾಯ್ಡ ರೈಟ್ ಹಾಗೂ ಫ್ರಾಂಕ್ ಗೆರಿ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ http://architecturestyles.org/2011/10/13/about-american-architectural-styles-an-introduction/ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು

3. ಸಂಪತ್ ಬೆಟ್ಟಗೆರೆ, ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ
ಭಾರತೀಯರು ಮಹಾಕಾವ್ಯಗಳೆಂದು ಪರಿಗಣಿಸುವ ವ್ಯಾಸ ಮಹಾಭಾರತ, ವಾಲ್ಮೀಕಿ ರಾಮಾಯಣಗಳಂತೆ ಅಮೆರಿಕದಲ್ಲಿ ಮಹಾಕಾವ್ಯ ಪರಂಪರೆ ಇದೆಯೇ? ಇದ್ದರೆ, ಭಾರತದಲ್ಲಿ ವಿಮರ್ಶೆ, ವಿಶ್ಲೇಷಣೆಗೆ ಒಳಪಡಿಸುವಂತೆ ಮುಕ್ತ ಚಿಂತನೆಯಿಂದ ಕೂಡಿವೆಯೇ? ಅವುಗಳ ಸಾಹಿತ್ಯಿಕ ಮಹತ್ವವೇನು? ಅಮೆರಿಕನ್ನರ ಜಾನಪದ, ಸಾಹಿತ್ಯ, ಸಂಸ್ಕೃತಿ ಕುರಿತು ವಿವರ ನೀಡಿ.

ಅಮೆರಿಕದಲ್ಲಿ ಅಭಿಜಾತ ಮಹಾಕಾವ್ಯಗಳ ಪರಂಪರೆಯಿಲ್ಲ. ನಮ್ಮ ಸಾಹಿತ್ಯದಲ್ಲೂ ನಾಯಕರು ಹಲವಾರು ಕಷ್ಟ ಪರಂಪರೆಗಳನ್ನು ಎದುರಿಸಿ, ಜಯಿಸುವ ಅನೇಕ ಕತೆಗಳುಂಟು. ಇವು ದೇಶದ ಕತೆಗಳನ್ನು ಪ್ರೇಕ್ಷಕರಿಗೆ ಹೇಳುವುದರ ಜತೆಗೆ ಈ ಕತೆಗಳೊಂದಿಗೆ ಪ್ರೇಕ್ಷಕರು ತಮ್ಮನ್ನು ತಾವು ಗುರುತಿಸಿಕೊಳ್ಳಲು ಸಾಧ್ಯವಾಗುವಂಥ ವಿಷಯಗಳನ್ನು ಹೊಂದಿರುತ್ತವೆ. ಶಾಲೆಗಳಲ್ಲಿ ಈ ಕತೆಗಳನ್ನು ಬೋಧಿಸಿ, ವಿಶ್ಲೇಷಿಸಲಾಗುತ್ತದೆ. ಅಂತೆಯೇ ಪತ್ರಕರ್ತರು ಹಾಗೂ ಬುದ್ದಿ ಜೀವಿಗಳೂ ಈ ಕತೆಗಳನ್ನು ಉಲ್ಲೇಖಿಸುತ್ತಾರೆ. ಅವನ್ನು ಸಾಮಾನ್ಯವಾಗಿ ಈ ಮುಂದೆ ಸೂಚಿಸುವಂತೆ ವಿಂಗಡಿಸಲಾಗುತ್ತದೆ:

ಕಠಿಣ ಪರಿಶ್ರಮ (ಕೆಲವೊಮ್ಮೆ ಅವನತಿ ಸಹ)- ಹೆರೆಷಿಯೋ ಆಜ್ಲರ್, ಗಾನ್ ವಿತ್ ದ ವಿಂಡ್, ದಿ ಗಾಡ್ ಫಾದರ್ ಚಿತ್ರಗಳು

ವ್ಯಕ್ತಿ ಹಾಗೂ ಸಮಷ್ಟಿ ಮೌಲ್ಯಗಳು- ಹಕಲ್ ಬರಿ ಫಿನ್, ಮೇನ್ ಸ್ಟ್ರೀಟ್
ಆದ್ಯ ಪ್ರವರ್ತಕರು ಅಂದರೆ Pioneering (ಪಾರಂಪರಿಕ ಕಾವ್ಯಗಳಿಗೆ ಬಲು ಹತ್ತಿರವಾದ ವಿಚಾರ) - ಪಾಲ್ ಬನ್ಯಾನ್ ಕತೆಗಳು, ಲೋನ್ ಸಮ್ ಡೋವ್
ಸಂಸ್ಕೃತಿಗಳ ಸಂಗಮ- ಮೀರಾ ನಾಯರ್ (ಮಿಸಿಸಿಪ್ಪಿ ಮಸಾಲಾ, ದಿ ನೇಮ್ ಸೇಕ್), ಇತರ ಸಿನಿಮಾಗಳಾದ ಬಾಬೆಲ್ ಹಾಗೂ ಕ್ರಷ್
ಮೌಖಿಕ ಹಾಗೂ ಲಿಖಿತ ಮಾಧ್ಯಮಗಳ ಮೂಲಕವಾಗಿಯೂ ಈ ಕತೆಗಳನ್ನು ಹೇಳಲಾಗಿದೆ. ತೀರಾ ಈಚೆಗೆ ಇವು ಚಲನಚಿತ್ರ ಹಾಗೂ ಟೆಲಿವಿಷನ್ ಮಾಧ್ಯಮದ ಮೂಲಕವೂ ಜನಮನವನ್ನು ಸೇರಿವೆ.

ಅಮೆರಿಕದಲ್ಲಿ ನೆಲೆಸಿದ ವಲಸಿಗರೂ, ತಮ್ಮ ಮೂಲ ನಾಡಿನ ಸಾಂಸ್ಕೃತಿಕ ಪರಂಪರೆ ಹಾಗೂ ಜಾನಪದವನ್ನು ತಂದಿದ್ದಾರೆ.

ಕತೆಗಳು, ಸಂಗೀತ, ಕರಕುಶಲ ಕಲೆ, ಆಹಾರ ಪದ್ಧತಿಗಳೂ ಅವುಗಳಲ್ಲಿ ಸೇರಿವೆ. ಝ್ಾ, ರಾಕ್ ಅಂಡ್ ರೋಲ್‌ಗಳಂಥ ಅಮೆರಿಕದ ಅನೇಕ ಕಲೆಗಳು ವಿವಿಧ ಭೂಪ್ರದೇಶಗಳ ಸಂಸ್ಕೃತಿಯ ಸಂಗಮ.

ಮುಂದಿನ ಪೀಳಿಗೆಗಾಗಿ ಈ ಬಗೆಯ ಅನೇಕ ಕಲಾ ಪ್ರಕಾರಗಳನ್ನು ಸಂಗ್ರಹಿಸಿ, ಸಂರಕ್ಷಿಸುವ ಮಹಾ ಕಾರ್ಯದಲ್ಲಿ ಸ್ಮಿತ್ ಸೋನಿಯನ್ ಸಂಸ್ಥೆ ತೊಡಗಿದೆ. ಅಮೆರಿಕ ಜನಪದ ಕುರಿತ ಹೆಚ್ಚಿನ ಮಾಹಿತಿಗೆ ಸ್ಮಿತ್ ಸೋನಿಯನ್ ಮ್ಯೂಸಿಯಂ ವೆಬ್ ಸೈಟಿಗೆ (www.folklife.si.edu) ಭೇಟಿ ನೀಡಿ.

4. ಗಂಗಮ್ಮ ಗುಡಿಹಾಳ್
ನಾನೀಗ ಪದವಿಯನ್ನು ಪೂರೈಸಿರುವೆ. ಉನ್ನತ ವ್ಯಾಸಂಗಕ್ಕಾಗಿ ಯೋಚಿಸುತ್ತಿರುವೆ. ನನಗೆ ವೀಸಾ ಬಗ್ಗೆ ಏನೂ ತಿಳಿದಿಲ್ಲ. ದಯವಿಟ್ಟು ಮಾರ್ಗದರ್ಶನ ಮಾಡುವಿರಾ?
ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕೆ ಅತಿ ಮುಖ್ಯವಾದ ಅಂಶ ಎಂದರೆ ಪೂರ್ವ ಯೋಜನೆ. ವಿದ್ಯಾರ್ಥಿ ವೀಸಾ ಪಡೆಯುವುದಕ್ಕಿಂತಲೂ ಮುಂಚಿತವಾಗಿಯೇ ನೀವು ಅಮೆರಿಕದ ಕಾಲೇಜು ಅಥವಾ ವಿಶ್ವವಿದ್ಯಾಲಯದ ಕೋರ್ಸ್ ಒಂದಕ್ಕೆ ಸೇರಿರಬೇಕು ಹಾಗೂ ಸೂಕ್ತ ದಾಖಲೆಗಳನ್ನು ಶಿಕ್ಷಣ ಸಂಸ್ಥೆಯಿಂದಲೂ ಪಡೆದಿರಬೇಕು. ಕಾಲೇಜು ಅಥವಾ ವಿಶ್ವವಿದ್ಯಾಲಯಗಳ ಆಯ್ಕೆ ಹಾಗೂ ಅರ್ಜಿ ಸಲ್ಲಿಸುವ ಕುರಿತು ಅಮೆರಿಕ- ಭಾರತ ಶಿಕ್ಷಣ ಪ್ರತಿಷ್ಠಾನವು (The United States-India Education
Foundation – USIEF) ತಮಗೆ ಸಾಕಷ್ಟು ನೆರವು ನೀಡುವುದು. ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುವ ಕುರಿತು ವಿದ್ಯಾರ್ಥಿಗಳಿಗೆ WTMCD ಸಲಹೆ ಹಾಗೂ ಮಾರ್ಗದರ್ಶನವನ್ನೂ ನೀಡುತ್ತದೆ. ಅದಕ್ಕಾಗಿ ದಯವಿಟ್ಟು www.usief.org.in ಹಾಗೂ www.educationusa.state.govವೆಬ್‌ಸೈಟುಗಳಿಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ದಯವಿಟ್ಟು ದೂರವಾಣಿ 044-28574131/4423 ಅಥವಾ ಇ- ಮೇಲ್ usiefchennai@usief.org.in ಸಂಪರ್ಕಿಸಿ.
ಅಮೆರಿಕ ಶಿಕ್ಷಣ ಸಂಸ್ಥೆಯೊಂದಕ್ಕೆ ಸೇರ್ಪಡೆಯಾದ ಬಳಿಕವಷ್ಟೇ ವಿದ್ಯಾರ್ಥಿ ವೀಸಾದ ಅಗತ್ಯ ಬರುತ್ತದೆ.

ವೀಸಾ ಪ್ರಕ್ರಿಯೆ ಕುರಿತ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಮುಂದಿನ ವೆಬ್‌ಸೈಟುಗಳಿಗೆ http://chennai.usconsulate.gov ಅಥವಾ www.ustraveldocs.com/inಭೇಟಿ ನೀಡಿ.

5. ಗಣೇಶ್ ಪ್ರಭಾಕರ ಶೇಟ್, ಸಾಗರ, ಶಿವಮೊಗ್ಗ
ವಿದೇಶಿಗರು ಅಮೆರಿಕದ ಪೌರತ್ವ ಪಡೆಯಬಹುದೇ? ಅದಕ್ಕಿರುವ ವಿಧಾನಗಳೇನು?
ವಿದೇಶಿಯರು ಅಮೆರಿಕ ಸಂಯುಕ್ತ ಸಂಸ್ಥಾನದ ಪೌರತ್ವ ಪಡೆಯಲು ಮೊದಲ ಹೆಜ್ಜೆ ಎಂದರೆ ಅಲ್ಲಿಗೆ ಸ್ಥಳಾಂತರ ಹೊಂದಿ, ಅಲ್ಲಿ ಬದುಕಲು ಹಾಗೂ ದುಡಿಯಲು ಸೂಕ್ತವಾದ ವಲಸೆ ವೀಸಾ ಪಡೆಯುವುದೇ ಆಗಿದೆ. ಅಲ್ಲಿನ ವಲಸೆ ಕಾಯ್ದೆಯ ಅನ್ವಯ, ಅಮೆರಿಕ ಸಂಯುಕ್ತ ಸಂಸ್ಥಾನಗಳ ಪೌರರ ಹಾಗೂ ಗ್ರೀನ್ ಕಾರ್ಡುದಾರರ (ಕಾನೂನುಬದ್ಧ ಶಾಶ್ವತ ನಿವಾಸಿಗಳು) ಕುಟುಂಬದ ಹತ್ತಿರದ ಸದಸ್ಯರಿಗೆ ವಲಸೆ ವೀಸಾಗಳು ಲಭ್ಯ. ಅಲ್ಲದೇ ಕೆಲವು ಸಂದರ್ಭಗಳಲ್ಲಿ ಅಮೆರಿಕದಲ್ಲಿ ಈಗಾಗಲೇ ನೆಲೆಸಿರುವ ವಿದೇಶಿ ವೃತ್ತಿಪರರಿಗೂ ಈ ಸೌಕರ್ಯ ದೊರಕುತ್ತದೆ.

ವಲಸೆ ವೀಸಾ ದೊರಕಿದ ಬಳಿಕ (ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಪ್ರವೇಶಿಸುತ್ತಿದ್ದಂತೆ ಅದನ್ನು ಗ್ರೀನ್ ಕಾರ್ಡ್ ಆಗಿ ಅಂದರೆ, ಕಾನೂನುಬದ್ಧ ಶಾಶ್ವತ ನಿವಾಸಿ ಸ್ಥಾನಮಾನ) ಅಮೆರಿಕದಲ್ಲಿ ನಿಗದಿತ ವರ್ಷಗಳ ಕಾಲ ನೆಲಸಿದರೆ, ಅಮೆರಿಕ ಪೌರರಾಗಲು ಅರ್ಜಿ ಹಾಕಬಹುದು.

ವಲಸೆ ವೀಸಾ ಪ್ರಕ್ರಿಯೆ ಸಾಕಷ್ಟು ಸಮಯ ತೆಗೆದುಕೊಳ್ಳತ್ತದೆ. ಅಂತೆಯೇ ಸಾಕಷ್ಟು ಸಿದ್ಧತೆಯನ್ನೂ ಬೇಡುತ್ತದೆ. ಭಾರತದಲ್ಲಿ ವಲಸೆ ವೀಸಾ ಪ್ರಕ್ರಿಯೆಯನ್ನು ಮುಂಬೈನಲ್ಲಿರುವ ಅಮೆರಿಕ ದೂತಾವಾಸದಲ್ಲಿ ಮಾತ್ರ ನಡೆಸಲಾಗುತ್ತದೆ.

ವಲಸೆ ವೀಸಾ ಅರ್ಹತೆ ಕುರಿತ ಹೆಚ್ಚಿನ ಮಾಹಿತಿಯನ್ನು ಪಡೆಯಲು ದಯವಿಟ್ಟು ಮುಂಬೈನಲ್ಲಿರುವ ಅಮೆರಿಕ ದೂತಾವಾಸದ ವೆಬ್ ಸೈಟಿಗೆ
http://mumbai.usconsulate.gov ಅಥವಾ www.ustraveldocs.com/in ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT