ಲಲಿತ್ ಜತೆ ನಂಟು: ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ಏಕೆ?

ಕ್ರಿಕೆಟ್ ಹೊಲಸು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೂ ಮೆತ್ತಿಕೊಂಡಿದೆ. ಐಪಿಎಲ್ ಅಕ್ರಮಗಳ ಆರೋಪ ಎದುರಿಸುತ್ತಿರುವ ಲಲಿತ್ ಮೋದಿ ‘ವೀಸಾ ಹಗರಣ’ದಲ್ಲಿ ಬಿಜೆಪಿಯೂ ಸಿಕ್ಕಿಕೊಳ್ಳಬಹುದು ಎನ್ನುವ ಕಲ್ಪನೆ ಯಾರಿಗೂ ಇರಲಿಲ್ಲ. ಬೇರೆಯವರ ಮಾತು ಬಿಡಿ, ಸ್ವತಃ ಆ ಪಕ್ಷದ ಹಿರಿಯ ನಾಯಕರೇ ಊಹಿಸಿರಲಿಲ್ಲ. ಹಠಾತ್ತನೇ ಬಂದೆರಗಿರುವ ಹಗರಣದಿಂದ ಬಿಜೆಪಿ ನಾಯಕರು ಕಂಗಾಲಾಗಿದ್ದಾರೆ. ಅದರಿಂದ ಬಿಡಿಸಿಕೊಳ್ಳಲು ಎಲ್ಲ ವರಸೆಗಳನ್ನು ಬಳಸುತ್ತಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಈ ಒಂದು ವರ್ಷದಲ್ಲಿ ಯಾವುದೇ ಹಗರಣ ನಡೆದಿಲ್ಲವೆಂದು ಬೆನ್ನು ತಟ್ಟಿಕೊಳ್ಳುವಾಗಲೇ ವೀಸಾ ವಿವಾದ ಬಯಲಾಗಿದೆ.

ಭ್ರಷ್ಟಾಚಾರರಹಿತ, ಪಾರದರ್ಶಕ ಆಡಳಿತ ಕೊಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪಕ್ಷವೊಂದರ ಪ್ರಮುಖ ನಾಯಕರಿಬ್ಬರು ವಿವಾದದಲ್ಲಿ ಸಿಕ್ಕಿಕೊಂಡಿದ್ದಾರೆ. ಒಂದು ವಾರದಿಂದ ದೆಹಲಿಯಲ್ಲಿ ದೊಡ್ಡ ‘ನಾಟಕ’ ನಡೆಯುತ್ತಿದೆ. ಅನೇಕ ಪಾತ್ರಧಾರಿಗಳು ರಂಗದ ಮೇಲೆ ಬಂದು ಹೋಗಿದ್ದಾರೆ. ಪ್ರಧಾನಿ ಅವರ ಪ್ರವೇಶಕ್ಕಾಗಿ ಕಾಯಲಾಗುತ್ತಿದೆ. ಅವರು ಬಾರದೆ ನಾಟಕಕ್ಕೆ ತೆರೆ ಬೀಳುವುದು ಅನುಮಾನ.

ಐಪಿಎಲ್ ಅಕ್ರಮಗಳ ಉರುಳು ನರೇಂದ್ರ ಮೋದಿ ಅವರ ಮನೆ ಬಾಗಿಲಿಗೂ ಬಂದು ನಿಂತಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಮೇಲೆ ಬಂದಿರುವ ಸಂಶಯವನ್ನು ಪರಿಹರಿಸಬೇಕಾದ ನೈತಿಕ ಹೊಣೆ ಪ್ರಧಾನಿ ಅವರ ಮೇಲಿದೆ. ಆ ಹೊಣೆಗಾರಿಕೆಯಿಂದ ಅವರು ಪಲಾಯನ ಮಾಡುವಂತಿಲ್ಲ. ‘ಬಿಜೆಪಿ ವಿಭಿನ್ನವಾದ ಪಕ್ಷ. ನಾವೂ ಭ್ರಷ್ಟಾಚಾರ ಮಾಡುವುದಿಲ್ಲ. ಬೇರೆಯವರೂ ಭ್ರಷ್ಟಾಚಾರ ಮಾಡಲು ಬಿಡುವುದಿಲ್ಲ’ ಎಂದು ಹೇಳುತ್ತಿದ್ದ ಹಿರಿಯ ನಾಯಕರು ವೀಸಾ ವಿವಾದದಲ್ಲಿ ವಿತಂಡವಾದ ಮಾಡುತ್ತಿದ್ದಾರೆ. ತಮ್ಮ ತಪ್ಪು ಮರೆಮಾಚಲು ಮಾನವೀಯತೆಯ ಮುಖವಾಡ ಹಾಕಿಕೊಳ್ಳುತ್ತಿದ್ದಾರೆ.

ಸುಷ್ಮಾ, ರಾಜೇ ಅವರ ಮೇಲೆ ಬಂದಿರುವ ಆರೋಪಗಳು ಮೇಲ್ನೋಟಕ್ಕೇ ನಂಬುವಂತಿವೆ. ಅದನ್ನು ಸಂಪೂರ್ಣವಾಗಿ ಕೆದಕಿದರೆ ಪೂರ್ಣ ಸತ್ಯ ಹೊರಬರುತ್ತದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಲಲಿತ್ ಮೋದಿ ಅವರ ಪತ್ನಿ ಚಿಕಿತ್ಸೆ ಗಮನದಲ್ಲಿಟ್ಟುಕೊಂಡು ಮಾನವೀಯತೆ ದೃಷ್ಟಿಯಿಂದ ಯು.ಕೆ. ವೀಸಾ ಪಡೆಯಲು ನೆರವು ನೀಡಲಾಗಿದೆ ಎಂದು ಸುಷ್ಮಾ ಹೇಳಿದ್ದಾರೆ. ಅವರ ಪಾತ್ರ ಅಷ್ಟಕ್ಕೆ ಮಾತ್ರ ಸೀಮಿತವಾಗಿದ್ದರೆ ಯಾರೂ ಅನುಮಾನ ಪಡುತ್ತಿರಲಿಲ್ಲ. ವಿದೇಶಾಂಗ ಸಚಿವರ ಪತಿ ಹಾಗೂ ಪುತ್ರಿ ಐಪಿಎಲ್ ಮಾಜಿ ಮುಖ್ಯಸ್ಥರ ವಕೀಲರಾಗಿ ಕಾನೂನು ಸಲಹೆ ನೀಡಿದ್ದಾರೆ. ಸುಷ್ಮಾ ಲಂಡನ್‌ನಲ್ಲಿ ಲಲಿತ್ ಮೋದಿ ಏರ್ಪಡಿಸಿದ್ದ ಔತಣ ಕೂಟದಲ್ಲೂ ಭಾಗವಹಿಸಿದ್ದಾರೆ. ಅವರ ಪತಿ ಕೌಶಲ್ ಸ್ವರಾಜ್, ಲಲಿತ್ ಮೋದಿ ಅವರ ಆಹ್ವಾನದ ಮೇಲೆ ಮುಂಬೈ ಹೊಟೇಲ್‌ನಲ್ಲಿ ಆತಿಥ್ಯ ಸ್ವೀಕರಿಸಿದ್ದಾರೆ. ಈ ಹೊಟೇಲ್ ಬಿಲ್ ಬಿಸಿಸಿಐಗೆ ಹೋಗಿದೆ. ಬಿಲ್ ಪಾವತಿಸಲು ಬಿಸಿಸಿಐ ನಿರಾಕರಿಸಿದೆ. ಇದು ಹೊಸದಾಗಿ ಬೆಳಕಿಗೆ ಬಂದಿರುವ ಹಳೇ ಸುದ್ದಿ.

ಮೋದಿ ಅವರ ವೀಸಾ ದಾಖಲೆ ಬೆಂಬಲಿಸಿ ವಸುಂಧರಾ ಅವರು ಪತ್ರ ಕೊಟ್ಟಿದ್ದಾರೆ. ರಾಜೇ ಅವರ ಪುತ್ರ ದುಷ್ಯಂತ್ ಸಂಸ್ಥೆಯಲ್ಲಿ ಈ ಐಪಿಎಲ್ ಮುಖ್ಯಸ್ಥರು ಹಣ ಹೂಡಿದ್ದಾರೆ. ‘ರಾಜಸ್ತಾನ ಮುಖ್ಯಮಂತ್ರಿ ಹಾಗೂ ಮೋದಿ ನಡುವಿನ ವ್ಯವಹಾರಗಳನ್ನು ಕೆದಕುತ್ತಾ ಹೋದರೆ ಬೇಕಾದಷ್ಟು ಅಕ್ರಮಗಳು ಸಿಗುತ್ತವೆ’ ಎಂದು ರಾಜಸ್ತಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಳೆದ ವಾರ ಇಂಗ್ಲಿಷ್ ದೈನಿಕಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ‘2003ರಿಂದ 2008ರವರೆಗೆ ರಾಜೇ ಮೊದಲ ಸಲ ಮುಖ್ಯಮಂತ್ರಿ ಆಗಿದ್ದಾಗ ಮೋದಿ ಸೂಪರ್ ಸಿ.ಎಂ. ಆಗಿ ವರ್ತಿಸಿದರು’ ಎಂಬ ಸಂಗತಿಯನ್ನು ಗೆಹ್ಲೋಟ್ ಬಿಚ್ಚಿಟ್ಟಿದ್ದಾರೆ.

ನೈತಿಕತೆ, ಪ್ರಾಮಾಣಿಕತೆ ಮಂತ್ರ ಪಠಿಸುತ್ತಿರುವ ಬಿಜೆಪಿ ನಾಯಕರು ಸುಷ್ಮಾ, ವಸುಂಧರಾ ರಾಜೀನಾಮೆ ವಿಷಯದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಗಮನಿಸಿದರೆ ಕಾಂಗ್ರೆಸ್ ನಾಯಕರಿಗಿಂತಲೂ ಯಾವುದೇ ರೀತಿ ವಿಭಿನ್ನರಲ್ಲವೆಂಬ ಅನುಮಾನ ಬರುತ್ತದೆ. ನೈತಿಕ ರಾಜಕಾರಣಕ್ಕೆ ಬಿಜೆಪಿ ಬದ್ಧವಾಗಿದ್ದರೆ, ಇಬ್ಬರು ನಾಯಕರ ಮೇಲೆ ಆರೋಪ ಬಂದ ಕೂಡಲೇ ವಿಚಾರಣೆ ನಡೆಸಬೇಕಿತ್ತು. ಕನಿಷ್ಠ ಪಕ್ಷ ಆಂತರಿಕ ವಿಚಾರಣೆ ನಡೆಸಿ, ಸತ್ಯ ಸಂಗತಿ ಬಹಿರಂಗಪಡಿಸಬೇಕಿತ್ತು. ಹಾಗೆ ಮಾಡಿದ್ದರೆ ಮಾತು– ಕೃತಿ ನಡುವೆ ವ್ಯತ್ಯಾಸವಿಲ್ಲದ ಪಕ್ಷ ಎಂದು ಕರೆಸಿಕೊಳ್ಳಬಹುದಿತ್ತು.

ಲೋಕಸಭೆ ಚುನಾವಣೆ ವೇಳೆ ಬಿಜೆಪಿ ನಾಯಕರು ಮತದಾರರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಈಗ ಒಂದು ಅವಕಾಶ ಸಿಕ್ಕಿದೆ. ಅದನ್ನೂ ಅವರು ಕಳೆದುಕೊಳ್ಳುತ್ತಿದ್ದಾರೆ. ಅಮಿತ್ ಷಾ ಅವರಿಂದ ಹಿಡಿದು ವಕ್ತಾರರವರೆಗೆ ಎಲ್ಲರೂ ಒಂದೇ ರಾಗ ಹಾಡುತ್ತಿದ್ದಾರೆ. ನರೇಂದ್ರ ಮೋದಿ ಏನೂ ಹೇಳದೆ ಮೌನಕ್ಕೆ ಅಂಟಿಕೊಂಡಿದ್ದಾರೆ. ಸಚಿವರಾದ ರಾಜನಾಥ್ ಸಿಂಗ್, ವೆಂಕಯ್ಯ ನಾಯ್ಡು ಹಾಗೂ ಅರುಣ್ ಜೇಟ್ಲಿ ಅವರನ್ನು ಸುಷ್ಮಾ ಅವರ ಸಮರ್ಥನೆಗೆ ನೇಮಿಸಿದ್ದಾರೆ. ಮೂವರೂ ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಿರಿಯ ಸಚಿವರ ಪೈಕಿ ಸುಷ್ಮಾ ಅವರೂ ಒಬ್ಬರು. ಅವರ ಬಗ್ಗೆ ಸಚಿವ ಸಹೋದ್ಯೋಗಿಗಳು ಏನು ಹೇಳುತ್ತಾರೆ ಎನ್ನುವುದಕ್ಕಿಂತಲೂ, ಸರ್ಕಾರದ ಮುಖ್ಯಸ್ಥರಾಗಿರುವ ಪ್ರಧಾನಿ ನಿಲುವೇನು ಎನ್ನುವುದು ಮುಖ್ಯವಾಗುತ್ತದೆ.

ಪ್ರಧಾನಿ ಮಾತನಾಡಬೇಕಿತ್ತು. ಅವರೂ ಬೇಕಿದ್ದರೆ ಅಮಿತ್ ಷಾ ಅಥವಾ ಮಿಕ್ಕ ಸಚಿವರು ಹೇಳುವುದನ್ನೇ ಹೇಳಲಿ ಪರವಾಗಿಲ್ಲ. ಮತದಾರರು ಮೋದಿ ಅವರನ್ನೇ ನೋಡಿ ಬಿಜೆಪಿ ಬೆಂಬಲಿಸಿದ್ದು ಎನ್ನುವುದನ್ನು ಮರೆಯಬಾರದು. ಪ್ರಧಾನಿ ಮಾತನಾಡುವುದು ಕಡಿಮೆ. ಅವರ ಪರವಾಗಿ ಬೇರೆಯವರು ಮಾತನಾಡುತ್ತಾರೆಂಬ ವಾತಾವರಣವಿದ್ದರೆ ಬೇರೆ ಮಾತು. ಹಿಂದಿನ ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಹೆಚ್ಚು ಮಾತನಾಡಲಿಲ್ಲ. ಅವರು ಎಲ್ಲ ಹಗರಣಗಳನ್ನು ನೋಡಿಕೊಂಡು ಮೌನವಾಗಿದ್ದರು ಎಂಬ ಆರೋಪ ಹೊತ್ತರು. ಆದರೆ, ಎನ್‌ಡಿಎ ಪರಿಸ್ಥಿತಿ ಬೇರೆ. ಮೋದಿ ಅವರಿಗೆ ಗೊತ್ತಿಲ್ಲದೆ ಸಣ್ಣ ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ.

ಕಳೆದ ಹದಿಮೂರು ತಿಂಗಳಲ್ಲಿ ಮೋದಿ ಅವರು ಮಾತನಾಡಿದ್ದೇ ಹೆಚ್ಚು. ಅಮೆರಿಕ, ಚೀನಾ ಸೇರಿದಂತೆ ಹೋದ ಕಡೆಗಳಲ್ಲಿ ಕಾಂಗ್ರೆಸ್, ಅದರ ಹಗರಣಗಳನ್ನು ಹರಾಜು ಹಾಕಿದ್ದಾರೆ. ಸಣ್ಣಪುಟ್ಟ ವಿಷಯಗಳಿಗೂ ಟ್ವೀಟ್ ಮಾಡಿದ್ದಾರೆ. ಸುಷ್ಮಾ, ರಾಜೇ ವಿಷಯದಲ್ಲಿ ತುಟಿ ಬಿಚ್ಚಿಲ್ಲ ಅಷ್ಟೇ. ಅದಕ್ಕೆ ಬಿಜೆಪಿಯೊಳಗೆ ಬೇರೆ ಕಾರಣಗಳನ್ನೇ ಕೊಡಲಾಗುತ್ತಿದೆ. ಸದ್ಯಕ್ಕೆ ಪ್ರಧಾನಿ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಆರೋಪ ಹೊತ್ತವರ ಮೇಲೆ ಕ್ರಮ ಕೈಗೊಂಡರೂ ಕಷ್ಟ. ಬಿಟ್ಟರೂ ಕಷ್ಟ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ನೆಲ ಕಚ್ಚಿದ ಬಳಿಕ ಪಕ್ಷದೊಳಗೆ ಅವರ ವಿರೋಧಿಗಳ ಸಂಖ್ಯೆ ಹೆಚ್ಚಿದೆ. ಆದರೆ, ಯಾರಿಗೂ ಬಹಿರಂಗವಾಗಿ ಮಾತನಾಡುವ ಧೈರ್ಯವಿಲ್ಲ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ನಡೆಯುವ ಬಿಹಾರ ವಿಧಾನಸಭೆ ಚುನಾವಣೆ ಕೈಕೊಟ್ಟರೆ ಒಳಗೊಳಗೇ ಕುದಿಯುತ್ತಿರುವ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಮೋದಿ ಅವರ ಮೇಲೆ ಒತ್ತಡ ಹೆಚ್ಚಿದೆ. ಸದ್ಯಕ್ಕೆ ಅವರು ವಿವಾದ ಕುರಿತು ಮಾತನಾಡುವುದಿಲ್ಲ. ಅಕಸ್ಮಾತ್ ಮಾತನಾಡಿದರೂ ಸುಷ್ಮಾ, ವಸುಂಧರಾ ಅವರ ಮೇಲೆ ಕ್ರಮ ಕೈಗೊಳ್ಳುವ ಸಂಭವವಿಲ್ಲ. ಬಿಹಾರ ಚುನಾವಣೆ ಮುಗಿಯುತ್ತಿದ್ದಂತೆ ಸಂಪುಟ ಪುನರ್‌ರಚನೆ ಮಾಡಲಿದ್ದಾರೆ. ಆಗ ಬೇಡವಾದ ಸಚಿವರನ್ನು ಕೈ ಬಿಟ್ಟು ಬೇರೆಯವರನ್ನು ತೆಗೆದುಕೊಳ್ಳುತ್ತಾರೆ. ಸುಷ್ಮಾ ಹೋದರೂ ಅಚ್ಚರಿಯಿಲ್ಲ ಎಂದೂ ಹೇಳಲಾಗುತ್ತಿದೆ.

ಪ್ರಧಾನಿ ಹಾಗೂ ಸುಷ್ಮಾ ಅವರ ಸಂಬಂಧ ಸೌಹಾರ್ದವಾಗಿಲ್ಲ. ವಸುಂಧರಾ ಜತೆಗಿನ ಸಂಬಂಧವೂ ಅಷ್ಟೇ. ಹಿರಿಯ ನಾಯಕ ಅಡ್ವಾಣಿ ಅವರಿಗೆ ಸುಷ್ಮಾ ಹೆಚ್ಚು ನಿಷ್ಠರು. ಪ್ರಧಾನಿ ಹುದ್ದೆ ಆಕಾಂಕ್ಷಿಯಾಗಿದ್ದವರು. ಅವರಿಗೆ ಸಂಘ ಪರಿವಾರದ ಬೆಂಬಲವಿದೆ, ಇದರಿಂದಾಗಿ ಸುಷ್ಮಾ ಅವರನ್ನು ಸುಲಭವಾಗಿ ಪಕ್ಕಕ್ಕೆ ಸರಿಸಲು ಆಗುವುದಿಲ್ಲ. ವಸುಂಧರಾ ಯಾರಿಗೂ ಸೊಪ್ಪು ಹಾಕುವುದಿಲ್ಲ. ಅವರಿಗೆ ಯಾರ ಆಶ್ರಯವೂ ಬೇಕಿಲ್ಲ. ಎರಡು ವರ್ಷದ ಹಿಂದೆ ಏಕಾಂಗಿಯಾಗಿ ವಿಧಾನಸಭೆ ಚುನಾವಣೆ ಗೆಲ್ಲಿಸಿದ್ದಾರೆ. ಅವರೇ ರಾಜ್ಯದ ಪ್ರಭಾವಿ ನಾಯಕರು. ರಾಜಸ್ತಾನದೊಳಗೆ ಬೇರೆ ನಾಯಕರು ಕಾಲೂರಲು ಬಿಡುವುದಿಲ್ಲ. ಅದೇ ಕಾರಣಕ್ಕೆ ರಾಜೇ ಅವರನ್ನು ಕಂಡರೆ ಮೋದಿ, ಅಮಿತ್ ಷಾ ಅವರಿಗೆ ಅಷ್ಟಕಷ್ಟೆ. ಈ ಮಾತಿನಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಬಿಜೆಪಿಯೊಳಗೆ ಮತ್ತು ಹೊರಗೆ ಎಲ್ಲರಿಗೂ ಗೊತ್ತಿರುವ ಸಂಗತಿ.

ಸುಷ್ಮಾ ಮತ್ತು ವಸುಂಧರಾ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಿರಂತರ ಒತ್ತಡ ಹೇರುತ್ತಿದೆ. ವೀಸಾ ಹಗರಣದಲ್ಲಿ ‘ತಲೆ ದಂಡ’ ಪಡೆಯದಿದ್ದರೆ ಸಂಸತ್ತಿನ ಚಳಿಗಾಲ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಬಿಜೆಪಿಗೆ ಚಳಿಗಾಲ ಅಧಿವೇಶನ ತುಂಬಾ ಮಹತ್ವದ್ದು. ವಿವಾದಾತ್ಮಕ ಭೂಸ್ವಾಧೀನ ಮಸೂದೆ, ಸರಕು ಮತ್ತು ಸೇವಾ ತೆರಿಗೆ ಮಸೂದೆ ಒಳಗೊಂಡಂತೆ ಅನೇಕ ಪ್ರಮುಖ ಮಸೂದೆಗಳನ್ನು ಮಂಡಿಸಿ, ಅಂಗೀಕರಿಸುವ ಅವಸರ ಅದಕ್ಕಿದೆ. ಕಾಂಗ್ರೆಸ್ ನಾಯಕರನ್ನು ಹೇಗಾದರೂ ಬಗ್ಗಿಸಬೇಕೆಂದು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಬೇರೆ ಬೇರೆ ದಾರಿಗಳನ್ನು ಹುಡುಕುತ್ತಿದೆ.

ಬಿಜೆಪಿ ಸೇಡಿನ ರಾಜಕಾರಣಕ್ಕೂ ಕೈಹಾಕಿದೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಹಾಗೂ ಗುಜರಾತ್ ವಿರೋಧ ಪಕ್ಷದ ನಾಯಕ ಶಂಕರ್‌ಸಿಂಗ್ ವಘೇಲ ಅವರ ಹಳೇ ಪ್ರಕರಣಗಳಿಗೆ ಮರುಜೀವ ಕೊಟ್ಟಿದೆ. ಸಿಬಿಐ, ವೀರಭದ್ರ ಸಿಂಗ್ ಅಕ್ರಮ ಆಸ್ತಿ ಹಗರಣದಲ್ಲಿ ಹತ್ತು ತಿಂಗಳ ಹಿಂದೆ ಆರೋಪ ಸಾಬೀತುಪಡಿಸಲು ಸಾಕ್ಷ್ಯಾಧಾರಗಳಿಲ್ಲ ಎಂದು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು.
ಈಗ ಪುನಃ ಪ್ರಾಥಮಿಕ ತನಿಖಾ ವರದಿ ಕೊಟ್ಟಿದೆ. ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಹೇಗೆ ಕೆಲಸ ಮಾಡುತ್ತಿದೆ. ಅದರ ವಿಶ್ವಾಸಾರ್ಹತೆ ಹೇಗಿದೆ ಎಂದು ನೋಡುವುದಕ್ಕೆ ಇದೊಂದು ಪ್ರಕರಣ ಸಾಕು. ಸಿಬಿಐ ಬಾಲ ಬಡುಕ ಸಂಸ್ಥೆ. ಅದಕ್ಕೆ ಸ್ವಂತ ನಿರ್ಧಾರ ಮಾಡುವ ಅಧಿಕಾರವೇ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಅದರ ಬಾಲ ಹಿಡಿಯುತ್ತದೆ. ಬಿಜೆಪಿ ಬಂದರೆ ಅದರ ಹಿಂದೆ ಹೋಗುತ್ತದೆ. ಅದೇ ಕಾರಣಕ್ಕೆ ಸಿಬಿಐಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಬೇಕು ಎಂಬ ಬೇಡಿಕೆ ನಿರಂತರವಾಗಿ ಕೇಳಿಬರುತ್ತಿರುವುದು.

ವೀರಭದ್ರ ಸಿಂಗ್ ಅಥವಾ ವಘೇಲ ಅವರ ವಿರುದ್ಧದ ಪ್ರಕರಣಗಳನ್ನು ತನಿಖೆ ನಡೆಸುವುದಕ್ಕೆ ಬಹುಶಃ ಯಾರದೂ ಅಭ್ಯಂತರವಿಲ್ಲ. ಒಂದು ಸಲ ಸಾಕ್ಷ್ಯಧಾರಗಳಿಲ್ಲ ಎಂದು ಕೈಬಿಟ್ಟ ಪ್ರಕರಣವನ್ನು ಮತ್ತೆ ಮತ್ತೆ ಕೆದಕಿರುವುದರ ಹಿಂದಿನ ಉದ್ದೇಶ ಮಾತ್ರ ಪ್ರಶ್ನಾರ್ಹ. ಅದೂ ಹೋಗಲಿ, ಸಿಬಿಐ ಸಿಂಗ್ ವಿರುದ್ಧ ಪ್ರಾಥಮಿಕ ತನಿಖಾ ವರದಿ ಸಲ್ಲಿಸಿರುವ ಸಂದರ್ಭ ಅನುಮಾನಕ್ಕೆ ಎಡೆಮಾಡುತ್ತದೆ. ಸೇಡಿನ ರಾಜಕಾರಣಕ್ಕೆ ಬಿಜೆಪಿಯನ್ನು ಮಾತ್ರ ದೂರಿದರೆ ತಪ್ಪಾಗುತ್ತದೆ. ಕಾಂಗ್ರೆಸ್ ಇದನ್ನೇ ಮಾಡಿಕೊಂಡು ಬಂದಿದೆ. ತನ್ನ ಮೇಲೆ ಬಿದ್ದವರನ್ನು ಮಟ್ಟ ಹಾಕಲು ಸಿಬಿಐ ಅನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಹತ್ತಾರು ಪ್ರಕರಣಗಳನ್ನು ಹೆಸರಿಸಬಹುದು.
ಅದರಿಂದಾಗಿ ಸಿಬಿಐ ಅನ್ನು ಕೆಲವರು ‘ಕಾಂಗ್ರೆಸ್ ಬ್ಯುರೊ ಆಫ್ ಇನ್‌ವೆಸ್ಟಿಗೇಷನ್’ ಎಂದು ಲೇವಡಿ ಮಾಡಿದ್ದು.

ಲಲಿತ್ ಮೋದಿ ತಮ್ಮ ಜತೆ ಯಾವ ಯಾವ ಪಕ್ಷದ ರಾಜಕಾರಣಿಗಳು ಲಂಡನ್‌ನಲ್ಲಿ ಭೋಜನ ಮಾಡಿದ್ದಾರೆಂದು ಬಹಿರಂಗ ಮಾಡಿದ್ದಾರೆ. ಕ್ರಿಕೆಟ್ ಹೊಲಸು ಕಾಂಗ್ರೆಸ್‌ಗೂ ಮೆತ್ತಿಕೊಂಡಿದೆ. ಅದೇನೂ ಸಾಚಾ ಎಂದು ಹೇಳುವಂತಿಲ್ಲ. ಹಿಂದೆ ರಾಜಕಾರಣಿಗಳು– ಕ್ರಿಮಿನಲ್‌ಗಳು ಮತ್ತು ಪೊಲೀಸರ ನಡುವಣ ಅಪವಿತ್ರ ಮೈತ್ರಿ ಕುರಿತು ಟೀಕೆಗಳು ಬರುತ್ತಿದ್ದವು. ಈಗ ರಾಜಕಾರಣಿಗಳು– ಉದ್ಯಮಿಗಳು ಹಾಗೂ ಕ್ರಿಕೆಟ್ ನಡುವಣ ಇಂತಹದೇ ಅಪವಿತ್ರ ಮೈತ್ರಿ ಏರ್ಪಟ್ಟಿದೆ. ಕ್ರಿಕೆಟ್ ಲೋಕದ ಮೇಲೆ ಹಿಡಿತ ಸಾಧಿಸಲು ಎಲ್ಲರೂ ಮುಗಿಬೀಳುತ್ತಿದ್ದಾರೆ. ಶ್ರೀನಿವಾಸನ್ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಕ್ರಿಕೆಟ್ ಹೊಲಸು ಶುಚಿಗೊಳಿಸುವ ಮಾತನಾಡಿತು. ಕೋರ್ಟ್ ಮಾತನ್ನು ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ಕ್ರಿಕೆಟ್ ಹೊಲಸು ತೊಳೆಯುವ ಕೆಲಸ ಮಾಡದಿದ್ದರೆ, ಉದ್ಯಮಿಗಳು– ರಾಜಕಾರಣಿಗಳನ್ನು ಈ ಆಟದಿಂದ ಹೊರಗಿಡದಿದ್ದರೆ ಅದರ ಮೇಲಿನ ನಂಬಿಕೆ ಕಳೆದುಹೋಗಬಹುದು.
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.