ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮನ್ನೂ ಕಾಡುವುದೇ ನಿಫಾ?

Last Updated 25 ಮೇ 2018, 19:30 IST
ಅಕ್ಷರ ಗಾತ್ರ

ಪಕ್ಕದ ಕೇರಳದಲ್ಲಿ ‘ನಿಫಾ’ ಸೋಂಕಿನಿಂದ ಒಂದರ ಬೆನ್ನಿಗೆ ಒಂದರಂತೆ ಸಾವುಗಳು ಸಂಭವಿಸುತ್ತಿದ್ದು, ರಾಜ್ಯದ ಜನರಲ್ಲೂ ಈ ಸೋಂಕಿನ ಕುರಿತು ಆತಂಕ ಹೆಚ್ಚುತ್ತಿದೆ. ಏನಿದು ‘ನಿಫಾ’, ಅದರಿಂದ ತೊಂದರೆ ಹೇಗೆ, ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಏನು? ಇಲ್ಲಿದೆ ಮಾಹಿತಿ:

ಏನಿದು ನಿಫಾ (NiV) ಸೋಂಕು?

ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕು ಇದು. ಹಂದಿಗಳು ಇಲ್ಲವೇ ಬಾವಲಿಗಳ ಮೂಲಕ ಅದು ಮನುಷ್ಯರಿಗೆ ಹರಡುತ್ತದೆ. ಮಲೇಷ್ಯಾದ ಕಂಪುಂಗ್‌ ಸುಂಗೈ ನಿಫಾ ಎಂಬಲ್ಲಿ ಹಂದಿ ಸಾಕಾಣಿಕೆಯಲ್ಲಿ ನಿರತರಾದ ರೈತರಿಗೆ ಈ ಸೋಂಕು ತಗಲಿರುವುದು (1998–99) ಮೊದಲ ಬಾರಿಗೆ ವರದಿಯಾಗಿದ್ದರಿಂದ ಇದಕ್ಕೆ ‘ನಿಫಾ’ ಎಂದು ನಾಮಕರಣ ಮಾಡಲಾಗಿದೆ. ಮಲೇಷ್ಯಾದ ಈ ಪ್ರಕರಣ ವರದಿಯಾಗಿ ಎರಡು ವರ್ಷಗಳ ಬಳಿಕ ಬಾಂಗ್ಲಾದೇಶದಲ್ಲೂ ಸೋಂಕು ಕಾಣಿಸಿಕೊಂಡಿತು. ಅಲ್ಲಿಂದ ಈಚೆಗೆ ಭಾರತದ ಪೂರ್ವ ಭಾಗದಲ್ಲಿ ‘ನಿಫಾ’ ಆಗಾಗ ದಾಳಿ ಮಾಡುತ್ತಲೇ ಇದೆ. ಅದೀಗ ದಕ್ಷಿಣದ ರಾಜ್ಯಗಳಿಗೂ ಹಬ್ಬಿದೆ.

ಭಾರತದಲ್ಲಿ ‘ನಿಫಾ’ ಮೊದಲು ಕಾಣಿಸಿಕೊಂಡಿದ್ದು ಎಲ್ಲಿ?

ಬಾಂಗ್ಲಾದೇಶದಲ್ಲಿ (2001) ಈ ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲೇ ಪಶ್ಚಿಮ ಬಂಗಾಲದ ಸಿಲಿಗುರಿಗೂ ದಾಳಿ ಮಾಡಿತ್ತು. ಎರಡನೇ ಬಾರಿ ‘ನಿಫಾ’ ಕಾಣಿಸಿಕೊಂಡಿದ್ದು 2007ರಲ್ಲಿ; ಅದೂ ಪಶ್ಚಿಮ ಬಂಗಾಲದ ನಾಡಿಯಾ ಜಿಲ್ಲೆಯಲ್ಲಿ. ಭಾರತದಲ್ಲಿ ಈ ಸೋಂಕು ಹರಡುವಲ್ಲಿ ಹಂದಿಗಳ ಪಾತ್ರವಿಲ್ಲ. ಕಲುಷಿತ ನೀರು ಹಾಗೂ ಸೇಂದಿ ಮೂಲಕ ಅದು ಹರಡಿದೆ ಎನ್ನುವುದು ವೈದ್ಯಕೀಯ ಸಂಶೋಧಕರ ಅಭಿಮತ.

ಮಲೇಷ್ಯಾ, ಸಿಂಗಪುರ, ಬಾಂಗ್ಲಾದೇಶ ಹಾಗೂ ಭಾರತದಲ್ಲಿ 1998ರಿಂದ 2008ರ ಅವಧಿಯಲ್ಲಿ ಸುಮಾರು 300 ಜನ ‘ನಿಫಾ’ ದಾಳಿಗೆ ತುತ್ತಾಗಿದ್ದಾರೆ ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆ ನೀಡುವ ಮಾಹಿತಿ.

ಸೋಂಕು ತಗಲಿದರೆ ಏನಾಗುತ್ತದೆ?

‘ನಿಫಾ’ ಸೋಂಕುಪೀಡಿತ ವ್ಯಕ್ತಿಯ ಮಿದುಳು ಹಾಗೂ ಹೃದಯದ ಮಾಂಸಖಂಡಗಳಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತದೆ. ದೇಹ ಸ್ವಾಧೀನ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಒಂದುವೇಳೆ ಸೋಂಕಿನ ಪ್ರಮಾಣ ತೀವ್ರವಾಗಿದ್ದರೆ ಅದರ ದಾಳಿಗೆ ತುತ್ತಾದ ವ್ಯಕ್ತಿ ಸಾವನ್ನಪ್ಪುವ ಸಂಭವ ಕೂಡ ಇದೆ.

ಸೋಂಕುಪೀಡಿತರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳೇನು?

ಸೋಂಕು ತಗಲಿದ 5ರಿಂದ 14 ದಿನಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಜ್ವರ, ತಲೆನೋವು, ಮೈ–ಕೈ ನೋವು, ಗಂಟಲು ನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವುದು, ಪದೇ ಪದೇ ವಾಂತಿ ಆಗುವುದು, ಗೊಂದಲಕಾರಿ ಮನಸ್ಥಿತಿ ಕಾಡುವುದು, ನಿದ್ದೆ ಮಂಪರು ಆವರಿಸುವುದು, ಶ್ವಾಸಕೋಶದ ಜ್ವರದಿಂದ ಬಳಲುವುದು ಇಲ್ಲವೇ ಕೋಮಾಕ್ಕೆ ಜಾರುವುದು ಮುಖ್ಯ ಲಕ್ಷಣಗಳು.

ಸೋಂಕು ಪತ್ತೆ ಹೇಗೆ?

ರಕ್ತ ಹಾಗೂ ಮೂತ್ರ ಪರೀಕ್ಷೆಯ ಮೂಲಕ ದೇಹದಲ್ಲಿ ಸೋಂಕಿನ ಉಪಸ್ಥಿತಿಯನ್ನು ಪತ್ತೆ ಮಾಡಬಹುದು. ಅದೇ ರೋಗಿಗಳು ಸಾವಿಗೀಡಾದ ಪ್ರಕರಣ
ಗಳಾದರೆ ಮಿದುಳಿನ ಅಂಗಾಂಶವನ್ನು ಪರೀಕ್ಷೆಗೆ ಒಳಪಡಿಸಬಹುದು.

ಸೋಂಕಿನಿಂದ ಮುಕ್ತರಾಗಲು ಚಿಕಿತ್ಸೆ ಲಭ್ಯವಿದೆಯೇ?

‘ನಿಫಾ’ದಿಂದ ಮುಕ್ತರಾಗಲು ಸದ್ಯ ಯಾವುದೇ ಔಷಧಿ ಅಥವಾ ಲಸಿಕೆ ಲಭ್ಯವಿಲ್ಲ. ಸೋಂಕಿನಿಂದ ಉಂಟಾಗುವ ಕಾಯಿಲೆಯ ತೀವ್ರತೆಯನ್ನು ಕಡಿಮೆ ಮಾಡಲು ಪೂರಕವಾದ ಚಿಕಿತ್ಸೆಯನ್ನಷ್ಟೆ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ.

ನಿಫಾ ಕುರಿತು ವೈದ್ಯರು ಹೇಳುವುದೇನು?

ಉಳಿದ ವೈರಾಣುಗಳಂತೆಯೇ ‘ನಿಫಾ’ ಕೂಡ ಒಂದು ಸೋಂಕು. ಆದರೆ, ನರವ್ಯೂಹ ಹಾಗೂ ಶ್ವಾಸಕೋಶದ ಮೇಲೆ ಅದು ದಾಳಿ ಮಾಡುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಸೂಕ್ತ ಔಷಧಿ ಲಭ್ಯವಿಲ್ಲದಿದ್ದರೂ ಪೂರಕ ಚಿಕಿತ್ಸೆ ಲಭ್ಯವಿದೆ. ಆ ಮೂಲಕ ‘ನಿಫಾ’ ಪ್ರಭಾವವನ್ನು ತಗ್ಗಿಸಲು ಸಾಧ್ಯವಿದೆ.

ಸೋಂಕಿನ ಬಾಧೆಗೆ ಒಳಗಾಗದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು?

ಬಾಧಿತ ಪ್ರದೇಶಗಳಿಂದ ಬಂದ ಖರ್ಜೂರವನ್ನು ತಿನ್ನಬಾರದು ಹಾಗೂ ತಾಳೆ ರಸವನ್ನು (ಸೇಂದಿ) ಕುಡಿಯಬಾರದು. ಬಾವಲಿಗಳು ಕಚ್ಚಿದ ಹಣ್ಣುಗಳನ್ನು ಸಹ ಬಳಸಕೂಡದು. ಸೋಂಕುಪೀಡಿತ ವ್ಯಕ್ತಿಗಳು ಹಾಗೂ ಪ್ರಾಣಿಗಳಿಂದ ದೂರ ಇರಬೇಕು. ಸಾಕಿದ ಹಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು ದೃಢಪಟ್ಟರೆ ಅವುಗಳ ಹನನ ಮಾಡಬೇಕು.

ರಾಜ್ಯದಲ್ಲಿ ಈ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆಯೇ?

ತಾಳೆ ಮರಗಳು ಹೆಚ್ಚಾಗಿರುವ ಹಾಗೂ ಬಾವಲಿಗಳು ಬಿಡಾರ ಹೂಡಿದ ಪ್ರದೇಶಗಳಲ್ಲಿ ಈ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬಂದು–ಹೋಗುವವರ ಸಂಖ್ಯೆ ಹೆಚ್ಚಾಗಿರುವ ಕಾರಣ ರಾಜಧಾನಿಯಲ್ಲಿ ವಾಸವಾಗಿರುವವರು ಮುಂಜಾಗ್ರತೆ ವಹಿಸುವುದು ಒಳಿತು.

ಕೇರಳಕ್ಕೆ ಪ್ರವಾಸ ಹೋಗಲು ಯೋಜನೆ ಹಾಕಿಕೊಂಡವರು ಅದನ್ನು ಮುಂದೂಡಬೇಕೇ?

ಸೋಂಕುಪೀಡಿತ ವ್ಯಕ್ತಿಯಿಂದ ಇತರರಿಗೆ ‘ನಿಫಾ’ ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಪ್ರವಾಸದ ಕುರಿತು ಎಚ್ಚರಿಕೆಯಿಂದ ಇರುವುದು ಅಗತ್ಯ. ಹಾಗೆಯೇ ತಿನ್ನುವ ಹಣ್ಣುಗಳು ವೈರಾಣು ವಾಹಕವಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಕೂಡ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT