ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುನಾಡು ನನ್ನ ತವರು: ಪವನ್

Last Updated 30 ಜನವರಿ 2018, 9:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತೆಲುಗು ನಟ ಮತ್ತು ಜನಸೇನಾ ಪಕ್ಷದ ಸಂಸ್ಥಾಪಕ ಕೆ.ಪವನ್‌ ಕಲ್ಯಾಣ್‌ ಅವರು ಸೋಮವಾರ ಸಂಜೆ ನಗರ ಹೊರವಲಯದ ಕೆ.ವಿ.ಕ್ಯಾಂಪಸ್‌ನಲ್ಲಿರುವ ಕೆ.ವಿ.ಮತ್ತು ಪಂಚಗಿರಿ ದತ್ತಿಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ಭೇಟಿ ಸ್ಥಳೀಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಕಾಂಗ್ರೆಸ್‌ ಮುಖಂಡರೂ ಆಗಿರುವ ನವೀನ್ ಕಿರಣ್ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದು, ನಾನು ಕೂಡ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿ ಎಂದು ಹಿಂದೊಮ್ಮೆ ಹೇಳಿಕೊಂಡಿದ್ದರು. ಆದರೆ ಶಾಸಕ ಡಾ.ಕೆ.ಸುಧಾಕರ್‌ ಅವರು ಕಾಂಗ್ರೆಸ್‌ ಹೈಕಮಾಂಡ್‌ಗೆ ಆಪ್ತರಾಗಿರುವ ಕಾರಣ ಈ ಬಾರಿ ಕೂಡ ಅವರಿಗೆ ಟಿಕೆಟ್‌ ನೀಡಲಾಗುತ್ತದೆ ಎನ್ನುತ್ತವೆ ‘ಕೈ’ ಪಾಳೆಯದ ಮೂಲಗಳು.

ಹೀಗಾಗಿ, ಸದ್ಯ ನವೀನ್‌ ಕಿರಣ್‌ ಅವರ ರಾಜಕೀಯ ನಡೆ ನಿಗೂಢವಾಗಿದೆ. ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಾ ಅಥವಾ ಯಾವುದಾದರೂ ಟಿಕೆಟ್‌ನಿಂದ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿರುವ ನಡುವೆಯೇ ನೆರೆಯ ಆಂಧ್ರಪ್ರದೇಶದ ‘ಪವರ್ ಸ್ಟಾರ್’ ಅವರು ನವೀನ್‌ ಕಿರಣ್‌ ಅವರನ್ನು ಭೇಟಿ ಮಾಡಿದ್ದು ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ನವೀನ್‌ ಕಿರಣ್‌ ಅವರ ಮನೆಯಲ್ಲಿ ಉಪಾಹಾರ ಸೇವಿಸಿ ಕೆಲ ಹೊತ್ತಿನ ಬಳಿಕ ಕ್ಯಾಂಪಸ್‌ನಲ್ಲಿ ನೆರೆದವರನ್ನು ಉದ್ದೇಶಿಸಿ ಹತ್ತು ನಿಮಿಷ ಮಾತನಾಡಿದ ಪವನ್‌ ಕಲ್ಯಾಣ್‌, ‘ಕರ್ನಾಟಕ ಎಂದರೆ ನನಗೆ ತವರು ಮನೆ ಇದ್ದಂತೆ. ಈ ಗಡಿಭಾಗದಲ್ಲಿ ಜನರು ಭೇದಭಾವ ಮಾಡುವುದಿಲ್ಲ. ಇಲ್ಲಿನ ಭಾಷಾ ಸಾಮರಸ್ಯ ಕಂಡು ನನಗೆ ಕರ್ನಾಟಕದ ಮೇಲೆ ವಿಶೇಷ ಪ್ರೀತಿ ಇದೆ’ ಎಂದು ಹೇಳಿದರು.

‘ನವೀನ್ ಕಿರಣ್ ತಮ್ಮ ಕುಟುಂಬದ ಸದಸ್ಯರಂತಿದ್ದಾರೆ. ಗಡಿಭಾಗದಲ್ಲಿ ಅವರ ಕುಟುಂಬ ಅನೇಕ ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಬಂದಿದೆ. ಅವರು ರಾಜಕೀಯ ಪ್ರವೇಶ ಮಾಡಿದರೆ ಶುದ್ಧ ರಾಜಕಾರಣ ನಡೆಸುತ್ತಾರೆ ಎನ್ನುವ ವಿಶ್ವಾಸವಿದೆ. ಅವರಿಗೆ ಮುಂಬರುವ ಚುನಾವಣೆಯಲ್ಲಿ ಜನರು ಆರ್ಶೀವಾದ ಮಾಡಬೇಕು’ ಎಂದು ತಿಳಿಸಿದರು.

ಈ ಭೇಟಿಯ ಬೆನ್ನಲ್ಲೇ, ನವೀನ್‌ ಕಿರಣ್‌ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನಸೇನೆ ಪಕ್ಷದಿಂದ ಕಣಕ್ಕಿಳಿಯುತ್ತಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಇನ್ನೊಂದೆಡೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪವನ್‌ ಕಲ್ಯಾಣ್‌ ಅವರು ಆಪ್ತರಾಗಿದ್ದಾರೆ. ಅವರ ಮೂಲಕ ಲಾಬಿ ನಡೆಸಿ ಸ್ಥಳೀಯ ಜೆಡಿಎಸ್‌ ಟಿಕೆಟ್‌ ಪಡೆಯಲು ನವೀನ್‌ ಕಿರಣ್‌ ಯೋಜನೆ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಅವರನ್ನು ಸಂಪರ್ಕಿಸಲಾಯಿತು. ಸಂಪರ್ಕಕ್ಕೆ ಸಿಗಲಿಲ್ಲ.

ಈ ಕುರಿತು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್ ಅವರನ್ನು ಕೇಳಿದರೆ, ‘ಕುಮಾರಸ್ವಾಮಿ ಅವರಿಗೆ ಪವನ್‌ ಕಲ್ಯಾಣ್‌ ಆಪ್ತರಾಗಿರುವುದು ನಿಜ. ಆದರೆ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ರಾಜಕಾರಣದಲ್ಲಿ ಯಾವ ಹೊತ್ತಿ ಏನೂ ಬೇಕಾದರೂ ನಡೆಯಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT