ADVERTISEMENT

ಕುಬೇರರ ಊರಲ್ಲಿ ಹಸಿವಿನಿಂದ ಸಾವು?

ಶಶಿಕಾಂತ್ ಎಸ್. ಶೆಂಬೆಳ್ಳಿ
Published 31 ಮಾರ್ಚ್ 2020, 2:01 IST
Last Updated 31 ಮಾರ್ಚ್ 2020, 2:01 IST
ಅನ್ನ, ನೀರು ಸಿಗದೆ ಹೊಸಪೇಟೆಯ ರಸ್ತೆಬದಿಯಲ್ಲಿ ಮೃತಪಟ್ಟ ಅಪರಿಚಿತ ವ್ಯಕ್ತಿಯ ಶವವನ್ನು ನಗರಸಭೆಯ ಸಿಬ್ಬಂದಿ ಕಸ ಸಾಗಿಸುವ ವಾಹನದಲ್ಲಿ ಸಾಗಿಸಿದರು
ಅನ್ನ, ನೀರು ಸಿಗದೆ ಹೊಸಪೇಟೆಯ ರಸ್ತೆಬದಿಯಲ್ಲಿ ಮೃತಪಟ್ಟ ಅಪರಿಚಿತ ವ್ಯಕ್ತಿಯ ಶವವನ್ನು ನಗರಸಭೆಯ ಸಿಬ್ಬಂದಿ ಕಸ ಸಾಗಿಸುವ ವಾಹನದಲ್ಲಿ ಸಾಗಿಸಿದರು   

ಹೊಸಪೇಟೆ: ಸಕಾಲಕ್ಕೆ ಅನ್ನ, ನೀರು ಸಿಗದೆ ಗಣಿ ನಗರಿಯ ರಸ್ತೆ ಬದಿಯಲ್ಲಿ ವಾರದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ವಿಚಿತ್ರವೆಂದರೆ ಇಬ್ಬರ ಶವಗಳನ್ನು ನಗರಸಭೆಯ ಕಸ ವಿಲೇವಾರಿ ಮಾಡುವ ವಾಹನದಲ್ಲಿ ಸಾಗಿಸಲಾಗಿದೆ. ಅನ್ನ ಸಿಗದೆ ರಸ್ತೆಬದಿಯಲ್ಲಿ ಶವವಾಗಿ ಬಿದ್ದವರೂ ಯಾರೆಂಬುದೂ ಇದುವರೆಗೆ ಗೊತ್ತಾಗಿಲ್ಲ.

ತಾಲ್ಲೂಕಿನಲ್ಲಿ ಒಂದು ಅಂದಾಜಿನ ಪ್ರಕಾರ, ನಿರ್ಗತಿಕರು, ಭಿಕ್ಷುಕರು, ಅಲೆಮಾರಿಗಳ ಸಂಖ್ಯೆ ಏಳರಿಂದ ಎಂಟು ಸಾವಿರಕ್ಕೂ ಅಧಿಕವಿದೆ. ಕೆಲವರು ರೈಲು ನಿಲ್ದಾಣ, ಬಸ್‌ ನಿಲ್ದಾಣದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುವವರಿದ್ದರೆ, ಕೆಲವರು ದೇವಸ್ಥಾನ, ಮತ್ತೆ ಕೆಲವು ಮಂದಿ ಊರೆಲ್ಲ ಸುತ್ತಾಡಿ ಎಲ್ಲಿ ಕತ್ತಲಾಗುತ್ತದೆಯೋ ಅಲ್ಲಿಯೇ ಉಳಿದು ಬಿಡುತ್ತಾರೆ.

ADVERTISEMENT

ಆದರೆ, ಎಲ್ಲೆಡೆ ಕೊರೊನಾ ಸೋಂಕು ಹರಡದಂತೆ ತಡೆಯಲು ಲಾಕ್‌ಡೌನ್‌ ಘೋಷಿಸಿರುವುದರಿಂದ ಬಹುತೇಕರ ಪತ್ತೆ ಇಲ್ಲದಂತಾಗಿದೆ. ಇನ್ನು, ನಗರ ಹೊರವಲಯದ ಜಂಬುನಾಥಹಳ್ಳಿಯಲ್ಲಿ 200ಕ್ಕೂ ಅಧಿಕ ಮಂದಿ ಅಲೆಮಾರಿಗಳಿದ್ದು, ಸಹಾಯಕ್ಕೆ ಅವರು ಅಂಗಲಾಚಿದ್ದಾರೆ.

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಅನೇಕ ಜನ ಗಣಿ ಉದ್ಯಮಿಗಳಿದ್ದಾರೆ. ಆದರೆ, ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಿಗೆ ಬಂದವರೂ ಬೆರಳೆಣಿಕೆಗಿಂತ ಕಡಿಮೆ. ಪತ್ತಿಕೊಂಡ ಕುಟುಂಬದವರು ನಗರದಲ್ಲಿ ಔಷಧ ಸಿಂಪಡಣೆಗೆ ಉಚಿತವಾಗಿ ವಾಹನಗಳನ್ನು ಕೊಟ್ಟಿದ್ದಾರೆ. ಇನ್ನು, ಎಂ.ಜೆ. ನಗರದಲ್ಲಿನ ಉದ್ಯಮಿಗಳು ಸ್ವಂತ ಖರ್ಚಿನಿಂದ ಬಡಾವಣೆಯ ತುಂಬೆಲ್ಲಾ ಔಷಧ ಹೊಡೆಸಿದ್ದಾರೆ. ಇದಿಷ್ಟು ಹೊರತುಪಡಿಸಿದರೆ ಬಹುತೇಕರು ನಮಗೂ ಸಮಾಜಕ್ಕೂ ಸಂಬಂಧವಿಲ್ಲ ಎನ್ನುವಂತೆ ದೂರವೇ ಉಳಿದುಕೊಂಡಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ.

‘ನಗರದಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಗುಡಿ, ಗುಂಡಾರಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ಕೊಡುತ್ತಾರೆ. ಆದರೆ, ಸಂಕಷ್ಟದ ಪರಿಸ್ಥಿತಿಯಲ್ಲಿ ಯಾರೊಬ್ಬರೂ ಬಡವರ ಸಹಾಯಕ್ಕೆ ಮುಂದೆ ಬರದಿರುವುದು ದುರದೃಷ್ಟಕರ. ಕ್ಷೇತ್ರದಿಂದ ಗೆದ್ದು ಮಂತ್ರಿಯಾಗಿರುವ ಆನಂದ್‌ ಸಿಂಗ್‌ ಕೂಡ ಈ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಹೇಳಿದರು.

‘ಬೇರೆ ಕಡೆಗಳಲ್ಲಿ ಶ್ರೀಮಂತರು ಕೋಟಿ ಕೋಟಿ ದೇಣಿಗೆ ನೀಡುತ್ತಿದ್ದಾರೆ. ನಮ್ಮೂರಿನ ಕುಬೇರರು ಅಷ್ಟು ಕೊಡುವುದು ಬೇಡ. ಎಷ್ಟು ಜನ ಬಡವರು, ಭಿಕ್ಷುಕರಿದ್ದಾರೆ. ಅವರನ್ನು ಗುರುತಿಸಿ, ಕನಿಷ್ಠ ಒಂದು ಹೊತ್ತು ಹೊಟ್ಟೆ ತುಂಬ ಊಟ ಕೊಟ್ಟರೆ ಸಾಕಿತ್ತು. ಆದರೆ, ಈಗ ತಡವಾಗಿದೆ. ಯಾರೊಬ್ಬರೂ ನೆರವಿಗೆ ಮುಂದೆ ಬರದ ಕಾರಣ ಜಿಲ್ಲಾಡಳಿತವೇ ಈಗ ಮುಂದಾಗಿರುವುದು ಉತ್ತಮ ಕೆಲಸ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

‘ಜನ ಮನೆಯೊಳಗೆ ಇರಬೇಕೆಂದು ಸರ್ಕಾರ ಹೇಳುತ್ತದೆ. ಆದರೆ, ಅನೇಕರಿಗೆ ಮನೆಯೇ ಇಲ್ಲ. ಹಲವು ಮಂದಿ ತುಂಗಭದ್ರಾ ಕಾಲುವೆಯ ಪಕ್ಕ ನೆಲೆಸಿದ್ದಾರೆ. ಅವರಿಗೆ ಒಂದು ಹೊತ್ತಿನ ಆಹಾರ ಸಿಗುತ್ತಿಲ್ಲ. ಯಾರೋ ಶ್ರೀಮಂತರಿಗೆ ಕಾಯದೆ ಜಿಲ್ಲಾಡಳಿತವೇ ನೆರವಿಗೆ ಮುಂದೆ ಬರಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸೋಮಶೇಖರ್‌ ಬಣ್ಣದಮನೆ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.