ADVERTISEMENT

ಉಡಿಕೇರಿಯ ಕೃಷಿ ಬೆಳಕು

ಭೂ ರಮೆ – 3

ಅನಿತಾ ಪೈಲೂರು
Published 8 ಸೆಪ್ಟೆಂಬರ್ 2014, 19:30 IST
Last Updated 8 ಸೆಪ್ಟೆಂಬರ್ 2014, 19:30 IST

‘ಎಲೆಕೋಸು, ಹೂಕೋಸು, ಆಲೂಗಡ್ಡೆ, ನವಿಲುಕೋಲು- ಇವಿಷ್ಟು ಬಿಟ್ರೆ ಈ ಭಾಗದಲ್ಲಿ ದಿನನಿತ್ಯ ಬಳಸುವ ಬೇರೆ ಎಲ್ಲಾ ತರಕಾರಿಗಳನ್ನೂ ಬೆಳೀತೀವಿ...’ ಇದು, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಉಡಿಕೇರಿಯಲ್ಲಿರುವ ಲಕ್ಷ್ಮಿ ಲೋಕೂರ ಅವರ ಮಾತು. ಅವರ ಹೊಲದಲ್ಲಿ ತರಕಾರಿಗಳ ತೋರಣ.

ಕೃಷಿ ಕುಟುಂಬದ ಹಿನ್ನೆಲೆಯಿರುವ ಲಕ್ಷ್ಮಿ ಓದು, ಉದ್ಯೋಗ ಎಂದು ಒಂದಷ್ಟು ವರ್ಷ ಪಟ್ಟಣದ ಗದ್ದಲದಲ್ಲಿ ಕಳೆದು ಹೋದರೂ, ಕೃಷಿಯೆಡೆಗಿನ ಪ್ರೀತಿ ಮನದಲ್ಲಿ ಮೊಳಕೆ ಒಡೆದಿತ್ತು. 2002ರಲ್ಲಿ ಕೃಷಿಯನ್ನೇ ವೃತ್ತಿಯನ್ನಾಗಿಸಿಕೊಂಡರು. ಲಕ್ಷ್ಮಿ ಅವರ ದೃಢತೆಯನ್ನು ಮನಗಂಡು ಅವರ ತಂದೆ-ತಾಯಿ ಬೆಂಬಲದೊಂದಿಗೆ ಮಾರ್ಗದರ್ಶನವನ್ನೂ ನೀಡಿದರು. ಮೊದಲಿಗೆ ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯವರು ನಡೆಸುವ ಕೃಷಿ ಡಿಪ್ಲೊಮಾ ತರಬೇತಿ ಪಡೆದರು.

‘ಈ ತರಬೇತಿ ಪಡೆದ ಪ್ರಥಮ ಮಹಿಳೆ ನಾನು’ ಎನ್ನುತ್ತಾರೆ ಲಕ್ಷ್ಮಿ. ಸ್ವಾವಲಂಬಿ ಕೃಷಿಕರನ್ನು ಭೇಟಿ ಮಾಡಿ ವಿಚಾರ ವಿನಿಮಯ ಮಾಡುತ್ತಾರೆ. ಧಾರವಾಡದ ಕೃಷಿವಿಶ್ವವಿದ್ಯಾಲಯದಿಂದಲೂ ಅಗತ್ಯ ಮಾಹಿತಿ ಪಡೆಯುತ್ತಾರೆ. ಆರಂಭದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಪ್ರಯೋಗ ಆರಂಭಿಸಿದರು. ರಾಸಾಯನಿಕ ರಹಿತ ಕೃಷಿಯ ವಿವಿಧ ಮಾದರಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದನ್ನು ಅಳವಡಿಸಿಕೊಳ್ಳಲಾರಂಭಿಸಿದರು. ಮಗಳ ಆಸಕ್ತಿ, ಶ್ರದ್ಧೆಯನ್ನು ಗಮನಿಸಿದ ಪಾಲಕರು ತಮ್ಮ ಏಳು ಎಕರೆ ಹೊಲದ ಉಸ್ತುವಾರಿಯನ್ನು ಅವರಿಗೆ ವಹಿಸಿದರು.

ಕೃಷಿಗಿಳಿದ ನಂತರದ ಮೊದಲ ಮಳೆ ಲಕ್ಷ್ಮಿ ಅವರ ನೆನಪಲ್ಲಿ ಚಿರನೂತನ. ಮಳೆಹನಿ ದಟ್ಟವಾಗುತ್ತಿದ್ದಂತೆ ತಂದೆಯ ಜೊತೆ ಹೊಲದಲ್ಲೆಲ್ಲಾ ಓಡಾಡಿ, ಮಳೆಕೊಯ್ಲಿನ ನೀಲನಕಾಶೆ ಸಿದ್ಧಪಡಿಸಿದರು. ಹೀಗೆ ನಿರ್ಮಾಣವಾದ ಒಡ್ಡು, ಇಂಗುಗುಂಡಿಗಳಿಂದಾಗಿ ಅವರ ಹೊಲವಿಂದು ಬಹುಮಟ್ಟಿಗೆ ನೀರ ನೆಮ್ಮದಿಯನ್ನು ಪಡೆದಿದೆ.

ಹೆಚ್ಚು ನೀರಿನ ಅಗತ್ಯವಿರುವ ಬೆಳೆಯ ದಾಹವನ್ನು ತಣಿಸಲು ಒಂದು ಕೊಳವೆಬಾವಿ ಇದೆ. ಅಗತ್ಯವಿರುವಲ್ಲಿ ಹನಿ ನೀರಾವರಿ ಪದ್ಧತಿ. ಎಲ್ಲೂ ನೀರಿನ ಪೋಲು ಇಲ್ಲ. ನೀರಿಂಗಿಸುವಿಕೆಗೆ ಪೂರಕವಾಗಿ ಬೇಲಿಗುಂಟ ಬೇವು, ಹುಣಸೆ, ಬಿದಿರು, ಗಾಳಿ, ಗ್ಲಿರಿಸೀಡಿಯಾ ಇನ್ನಿತರ ಸ್ಥಳೀಯ ಗಿಡಗಳನ್ನು ನೆಟ್ಟಿದ್ದಾರೆ.

ಬೆಳೆಗಳ ಮೇಳ
ಮಿಶ್ರ ಬೆಳೆ, ಪ್ರಕೃತಿಯ ನಿಯಮಗಳನ್ನು ಆಧರಿಸಿದ ಕೃಷಿ, ಕಾರ್ಮಿಕರ ನಿರ್ವಹಣೆ, ಹೊಲದಲ್ಲೇ ಗೊಬ್ಬರ-ಜೈವಿಕ ಕೀಟನಾಶಕಗಳ ತಯಾರಿ, ಮಾರುಕಟ್ಟೆಯ ವಿಶ್ಲೇಷಣೆ, ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ... ಹೀಗೆ ಹತ್ತಾರು ವಿಷಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದರಿಂದಲೇ ಲಕ್ಷ್ಮಿ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದ್ದಾರೆ. ಕೃಷಿಯಿಂದ ಬಂದ ಆದಾಯದ ಬಹುಭಾಗವನ್ನು ಕೃಷಿಯಲ್ಲೇ ತೊಡಗಿಸಿಕೊಳ್ಳುತ್ತಾರೆ. ಮೊದಲಿದ್ದ ಹೊಲಕ್ಕೆ ಮತ್ತೆ ಹತ್ತು ಎಕರೆ ಸೇರಿದೆ. ಇನ್ನೂ ಆರು ಎಕರೆ ಲಾವಣಿಗೆ ಪಡೆದು ಒಟ್ಟು 24 ಎಕರೆ ಪ್ರದೇಶದಲ್ಲಿ ಸುಸ್ಥಿರ ಕೃಷಿಯನ್ನು ಸಾಕಾರಗೊಳಿಸುತ್ತಿದ್ದಾರೆ.

ಹನ್ನೆರಡು ಎಕರೆ ಪ್ರದೇಶ ತರಕಾರಿಗೆ ಮೀಸಲು. ಪ್ರತಿ ಋತುವಿನಲ್ಲೂ ಕನಿಷ್ಠ ಹತ್ತರಿಂದ ಹನ್ನೆರಡು ತರಹದ ತರಕಾರಿ ಇಲ್ಲಿ ಲಭ್ಯ. ಪ್ರತಿಯೊಂದು ತರಕಾರಿಯಲ್ಲಿಯೂ ಲಭ್ಯವಿರುವ ತಳಿಗಳ ಸಂಗ್ರಹಕ್ಕೆ ಪ್ರಯತ್ನ. ಅವರಲ್ಲಿರುವ ಒಂಬತ್ತು ವಿಧದ ಅವರೇಕಾಯಿ ಅವರ ಹುಡುಕಾಟಕ್ಕೆ ಪುರಾವೆ.

ಎರಡು ಎಕರೆ ಪ್ರದೇಶದಲ್ಲಿ ತೋಟಗಾರಿಕಾ ಸಸ್ಯಗಳನ್ನು ಬೆಳೆದಿದ್ದಾರೆ. ನುಗ್ಗೆ, ಚಿಕ್ಕು, ಸಾಗುವಾನಿ, ಪಪ್ಪಾಯ, ಸೀತಾಫಲ, ಅಂಜೂರ, ಸೀಬೆ, ಮಾವು, ಬಾಳೆ ಹೀಗೆ ಪಟ್ಟಿ ಮುಂದುವರೆಯುತ್ತದೆ. ದಸರಾ, ದೀಪಾವಳಿ ಸಮಯಕ್ಕೆ ಕೊಯ್ಲಾಗುವಂತೆ ಎರಡು ಹಂತದಲ್ಲಿ ಚೆಂಡುಹೂವು ಮತ್ತು ಸೇವಂತಿಗೆ ಬೆಳೆಯುತ್ತಾರೆ. ಮೊಗ್ಗು ಬಿರಿಯುವ ಹೊತ್ತಿಗೆ ಮೂರು ಎಕರೆ ಪ್ರದೇಶದಲ್ಲಿರುವ ಹೂ ಗಿಡಗಳ ಮಧ್ಯೆ ಕಡ್ಲೆ, ಜೋಳ ಬಿತ್ತುತ್ತಾರೆ. ಒಂದು ಎಕರೆ ಪ್ರದೇಶದಲ್ಲಿ ಹೆಸರು. ಉಳಿದ ಭಾಗವನ್ನು ಗೋಧಿ, ರಾಗಿ, ನವಣೆ, ಸಾವಿ, ಹುರುಳಿ, ತೊಗರಿ ಇನ್ನಿತರ ದ್ವಿದಳ ಧಾನ್ಯಗಳು, ಔಷಧೀಯ ಸಸ್ಯ, ಎಣ್ಣೆ ಕಾಳುಗಳು ಆಕ್ರಮಿಸಿವೆ.

ಬೆಳೆಗಳ ಹಂಚಿಕೆ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುತ್ತದೆ. ರಾಜ್ಯದ ವಿವಿಧ ಸಾವಯವ ಕೃಷಿ ಪ್ರಯತ್ನಗಳೊಡನೆ ಉತ್ತಮ ಬಾಂಧವ್ಯವಿರುವ ಲಕ್ಷ್ಮಿ ತಾವು ಬೆಳೆಯಲಾಗದ ಆಹಾರ ಪದಾರ್ಥಗಳನ್ನು ಇತರರಿಂದ ವಿನಿಮಯ ರೂಪದಲ್ಲಿ ಕೊಳ್ಳುತ್ತಾರೆ. ಕೆಲ ಕಳೆಸಸ್ಯಗಳನ್ನು ಕೀಟನಾಶಕ, ಬಲೆ ಬೆಳೆಗಳಾಗಿ ಬಳಸಿಕೊಂಡಿದ್ದಾರೆ.

ಮೊದಲು ವಾಣಿಜ್ಯದ ಉದ್ದೇಶದಿಂದ ಹೈನುಗಾರಿಕೆ ಮಾಡುತ್ತಿದ್ದರೂ, ಸದ್ಯ ಹೊಲ-ಮನೆ ಬಳಕೆಗೆ ಅಗತ್ಯವಿರುವಷ್ಟು ಹಸುಗಳಿವೆ. ಕೊಟ್ಟಿಗೆ ಗೊಬ್ಬರದ ಜೊತೆಗೆ ಎರೆಗೊಬ್ಬರಕ್ಕೂ ತೋಟದಲ್ಲೇ ವ್ಯವಸ್ಥೆ ಮಾಡಿಕೊಂಡಿದ್ದಾರೆ. ತೋಟದ ತ್ಯಾಜ್ಯವೆಲ್ಲ ಎರೆಗೊಬ್ಬರಕ್ಕೆ ಮೂಲವಸ್ತು. ಹೊಲಕ್ಕೆ ಉಪಯೋಗಿಸಿ ಮಿಕ್ಕ ಗೊಬ್ಬರವನ್ನು ಮಾರಾಟ ಮಾಡುತ್ತಾರೆ. ಹೊಲದ ಮುಚ್ಚಿಗೆ ತೇವಾಂಶ ಕಾಪಾಡಲು ಸಹಕರಿಸುತ್ತದೆ.

ಪರಿಸರದಲ್ಲಿನ ಸಂಕೇತಗಳನ್ನು ಗಮನಿಸಿ ವರ್ಷದ ಮಳೆಯ ಸಾಧ್ಯತೆಯನ್ನು ನಾಲ್ಕೈದು ತಿಂಗಳ ಹಿಂದೆಯೇ ಅಂದಾಜು ಮಾಡುತ್ತಾರೆ. ಅದಕ್ಕೆ ಸರಿಯಾಗಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಕಳೆದ ವರ್ಷದ ಕಡುಬರಗಾಲದಲ್ಲಿಯೂ ರೂಪಾಯಿಗೆ ನಾಲ್ಕಾಣೆಯಷ್ಟು ಬೆಳೆ ತೆಗೆಯುವುದು ಸಾಧ್ಯವಾಯಿತು. ಸಮಸ್ಯೆಗಳು ಆವಿಷ್ಕಾರಗಳಿಗೆ ದಾರಿ ಮಾಡಿಕೊಡುತ್ತವೆ ಎಂಬ ಭರವಸೆ ಅವರದು.

ಕಾರ್ಮಿಕರು ಕಾರ್ಮಿಕರಲ್ಲ...
ಕೃಷಿಯಲ್ಲಿ ಯಾವತ್ತೂ ಮಾಲೀಕ, ಕೆಲಸಗಾರ ವ್ಯವಸ್ಥೆಯಲ್ಲ ಎಂದೇ ನಂಬಿದ ಲಕ್ಷ್ಮಿ ಅವರು ಕಾರ್ಮಿಕರನ್ನು ಮನೆಯ ಸದಸ್ಯರೆಂದೇ ತಿಳಿದಿದ್ದಾರೆ. ಹೊಲದಲ್ಲಿ ಮನೆ ಮಾಡಿ ತಾಯಿ-ತಂದೆಯ ಜೊತೆ ಲಕ್ಷ್ಮಿ ವಾಸಿಸುತ್ತಾರೆ. ಮೂರು ಮಂದಿ ಕೃಷಿ ಸಹಾಯಕರೂ ಇಲ್ಲೇ ಉಳಿಯುತ್ತಾರೆ. ವಾರಕ್ಕೊಮ್ಮೆ ಊರೊಳಗಿರುವ ಮನೆಗೆ ಹೋಗಿ ಬರುತ್ತಾರೆ. ಉಳಿದ ಆರು ಮಂದಿ ಬೆಳಗ್ಗಿನಿಂದ ಸಾಯಂಕಾಲದವರೆಗೆ ಹೊಲದಲ್ಲಿ ದುಡಿಯುತ್ತಾರೆ.

ಒಂದೇ ಕುಟುಂಬವೆಂಬಂತೆ ಅನ್ಯೋನ್ಯತೆ. ಅವರವರ ಆಸಕ್ತಿ, ಕೌಶಲವನ್ನು ಹೊಂದಿಕೊಂಡು ಕೆಲಸಗಳ ಹಂಚಿಕೆ. ಕೃಷಿಯ ಎಲ್ಲಾ ವಿಭಾಗಗಳಲ್ಲೂ ಪರಿಣತಿ ಪಡೆದಿರುವ ಲಕ್ಷ್ಮಿ ಸಹಾಯಕರಿಗೆ ಸಮನಾಗಿ ದುಡಿಯುತ್ತಾರೆ.  ‘ನಮ್ಮ, ಊಟ, ವಸತಿ, ಔಷಧಿ ಎಲ್ಲ ಅಕ್ಕನೇ ನೋಡಿಕೊಳ್ತಾರೆ. ಮನೆಯಲ್ಲಿ ಮದುವೆ, ಓದು, ಆರೋಗ್ಯದ ಸಮಸ್ಯೆ ಹೀಗೆ ದುಡ್ಡಿನ ಅವಶ್ಯಕತೆ ಇದ್ದರೂ ಸಹಾಯ ಮಾಡ್ತಾರೆ’ ಎನ್ನುತ್ತಾರೆ ಕೃಷಿ ಸಹಾಯಕ ಚನ್ನಮಲ್ಲಪ್ಪ ಕಾಜಗಾರ.

ಅವಳಿ ನಗರದ ಗ್ರಾಹಕರು
ಉಡಿಕೇರಿಯ ಸಾವಯವ ಕೃಷಿ ಪ್ರಯೋಗಗಳ ಪ್ರಯೋಜನ ಪಡೆಯುತ್ತಿರುವವರಲ್ಲಿ ಹುಬ್ಬಳ್ಳಿ-ಧಾರವಾಡ ವಾಸಿಗಳು ಪ್ರಮುಖರು. ಹುಬ್ಬಳ್ಳಿಯಲ್ಲಿ ಒಂದು ಗುಂಪು, ಧಾರವಾಡದ ಐದಾರು ಕಡೆಗಳಲ್ಲಿ ವಾರಕ್ಕೆ ಒಂದು ದಿನ ಲಕ್ಷ್ಮಿ ಅವರ ‘ಪ್ರೇರಣ ನಾಚುರಲ್ಸ್’ ತರಕಾರಿ ಮತ್ತಿತರ ಆಹಾರ ಪದಾರ್ಥಗಳನ್ನು ಪೂರೈಸುತ್ತಿದೆ. ಮಂಗಳೂರಿಗೂ ಕಳುಹಿಸುತ್ತಾರೆ. 

‘ಸಾಂಪ್ರದಾಯಿಕ ಮಾರುಕಟ್ಟೆಯ ದರದಲ್ಲಿ ರಾಸಾಯನಿಕ ರಹಿತ ಆಹಾರ ಪದಾರ್ಥಗಳು ದೊರೆಯುವುದು ಸಂತಸದ ವಿಷಯ. ತಾಜಾ, ರುಚಿಕರವಾದ ತರಕಾರಿ ಸಿಗುವುದು ಸಮಾಧಾನ ತಂದಿದೆ. ವೈವಿಧ್ಯ ಹೆಚ್ಚಿಸಲು ಸಾಕಷ್ಟು ಅವಕಾಶವುಂಟು’ ಎನ್ನುತ್ತಾರೆ ಕಳೆದ ನಾಲ್ಕು ವರ್ಷಗಳಿಂದ ಗ್ರಾಹಕರಾಗಿರುವ ಧಾರವಾಡ ಕೃಷಿವಿಶ್ವ ವಿದ್ಯಾಲಯದ ಬೇಸಾಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಹೆಚ್.ಬಿ. ಬಬಲಾದ.

‘ಚಿಕ್ಕವರಿಂದ ಹಿಡಿದು ಹಿರಿ ವಯಸ್ಸಿನವರೆಗೆ ಜನರು ನಮ್ಮ ಪದಾರ್ಥಗಳಿಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮಧ್ಯವರ್ತಿಗಳಿಗೆ ತಾವಿಲ್ಲದ ಈ ವ್ಯವಹಾರದಲ್ಲಿ ಜನರ ಆಹಾರದ ಆದ್ಯತೆಗಳನ್ನು ಅರಿಯುವುದೂ, ಉತ್ತಮ ಆಹಾರ ಅಭ್ಯಾಸ ಬೆಳೆಸಲು ಪ್ರೇರೇಪಿಸುವುದೂ ಸಾಧ್ಯವಾಗಿದೆ’ ಎನ್ನುವ ಲಕ್ಷ್ಮಿ ಬದಲಾಗುತ್ತಿರುವ ಹವಾಮಾನದ ಹಿನ್ನೆಲೆಯಲ್ಲಿ ಬೆಳೆ ಸಾಧ್ಯತೆಗಳ ಕುರಿತು ನಿರಂತರ ಅಧ್ಯಯನ ಮಾಡುತ್ತಿದ್ದಾರೆ.

ಎಲ್ಲದಕ್ಕಿಂತ ಹೆಚ್ಚಾಗಿ ಸುಸ್ಥಿರತೆಯೆಡೆಗೆ ಹೆಜ್ಜೆ ಇಡಲು ಇತರರಿಗೂ ಪ್ರೇರಣೆ ನೀಡುತ್ತಿದ್ದಾರೆ. ಇವರನ್ನು ಕೇವಲ ಇ- ಮೇಲ್‌ ಮೂಲಕ ಸಂಪರ್ಕಿಸಬಹುದು. ವಿಳಾಸ: laxmilokur@gmail.com  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.