ADVERTISEMENT

ಎಂಬಿಎ ಯುವಕನ ವೈವಿಧ್ಯ ಕೃಷಿ

ನೆಲದ ನಂಟು - 10

ಕಲಾವತಿ ಹೆಗಡೆ
Published 7 ಏಪ್ರಿಲ್ 2014, 19:30 IST
Last Updated 7 ಏಪ್ರಿಲ್ 2014, 19:30 IST

ಅಡಿಕೆ, ತೆಂಗು, ಭತ್ತ ಕಂಗೊಳಿಸುವ ಮಲೆನಾಡಿನಲ್ಲಿ ಯುವಕರಿಗೆ ಕೃಷಿ ಎಂದರೆ ಏಕೋ ತಾತ್ಸಾರ. ‘ಶಿಕ್ಷಣ ಪಡೆಯಬೇಕು, ನೌಕರಿ ಸೇರಬೇಕು, ಪಟ್ಟಣಗಳಿಗೆ ವಲಸೆ ಹೋಗಬೇಕು’ ಎಂಬುದು ಇಲ್ಲಿನ ಬಹುತೇಕ ಯುವಕರ  ಘೋಷವಾಕ್ಯ. ಆದ್ದರಿಂದ ಪಾರಂಪರಿಕ ಕೃಷಿ ಎನ್ನುವುದು ಇತಿಹಾಸದ ಪುಟ ಸೇರುವ ಆತಂಕ ಎದುರಿಸುತ್ತಿದೆ.

ಇದಕ್ಕೆ ಅಪವಾದ ಎಂಬಂತೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಅರಳಗೋಡು ಸಮೀಪದ ವೆಂಕಟೇಶ ಸಂಪ ಎಂ.ಬಿ.ಎ ಪದವಿ ಪಡೆದುಕೊಂಡಿದ್ದರೂ 24ನೇ ವಯಸ್ಸಿನಿಂದಲೇ ಕೃಷಿ ಕಾಯಕದಲ್ಲಿ ತೊಡಗಿಕೊಂಡು ಯಶಸ್ವಿ ಕೃಷಿಕರಾಗಿದ್ದಾರೆ.

ಹೊಸ ಹೊಸ ಕೃಷಿ ಪದ್ಧತಿ ನಡೆಸುವ ಇಚ್ಛೆ ಹೊಂದಿರುವ ಇವರು ಸಾಗರ ತಾಲ್ಲೂಕಿನ ಉಳ್ಳೂರು ಸಮೀಪದ ಚಿತ್ರಟ್ಟೆಮಠ ಎಂಬ ಹಳ್ಳಿಯ ಬಳಿ ೧೦ ಎಕರೆ ಜಮೀನು ಖರೀದಿಸಿ ಕೃಷಿ ನಡೆಸುತ್ತಿದ್ದಾರೆ. ಹೊಲದಲ್ಲಿ ೧೫ ಅಡಿ ವಿನ್ಯಾಸದ ತೆರೆದ ಬಾವಿಯಿದ್ದು, ಸಾಕಷ್ಟು ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಕೇವಲ ಸಾಂಪ್ರದಾಯಿಕ ಅಡಿಕೆ ಅಥವಾ ಭತ್ತದ ಕೃಷಿ ಕೈಗೊಳ್ಳುವ ಬದಲು ಇವುಗಳ ಜೊತೆ ಜೊತೆಗೆ ಮಿಶ್ರಬೆಳೆಯಾಗಿ ಹಲವು ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಇವರು ತಮ್ಮ ಹೊಲದಲ್ಲಿ ಸಂಪೂರ್ಣ ಸಾವಯವ ಪದ್ಧತಿ ಅಳವಡಿಸಿಕೊಂಡಿದ್ದು, ಜೀವಾಮೃತ ನೀಡಿ ಭೂಮಿಯನ್ನು ಫಲವತ್ತುಗೊಳಿಸಿದ್ದಾರೆ.

೧೦ ಎಕರೆ ವಿಸ್ತೀರ್ಣದಲ್ಲಿ ೪ ಎಕರೆಯಷ್ಟು ಜಾಗದಲ್ಲಿ ಅಡಿಕೆ ತೋಟ ನಿರ್ಮಿಸುತ್ತಿದ್ದಾರೆ. ಉಳಿದ ಜಾಗದಲ್ಲಿ ಭತ್ತ, ತೆಂಗು, ಬಾಳೆ, ಅನಾನಸ್, ಪಪ್ಪಾಯ, ಶುಂಠಿ, ಅರಿಶಿಣ ಇತ್ಯಾದಿ ಬಗೆ ಬಗೆಯ ಬೆಳೆಗಳನ್ನು ಬೆಳೆಯುತ್ತಾರೆ. ಅಡಿಕೆ ಸಸಿಗಳ ನಡುವೆ ನಿಂಬು, ಕೋಕೊ, ಬಾಳೆ ಇತ್ಯಾದಿ ಅಂತರ ಬೆಳೆಯನ್ನೂ ಕೈಗೊಂಡಿದ್ದಾರೆ.

ಈ ತೋಟದಲ್ಲಿ ಸುಮಾರು ಒಂದು ಸಾವಿರ ಬಾಳೆ ಗಿಡ ಬೆಳೆಸಿ ಒಂದು ಫಸಲು ಪಡೆದಿದ್ದಾರೆ. ಇವುಗಳ ನಡುವೆ ಅಂತರ ಬೆಳೆಯಾಗಿ ೪೦೦ ಕೋಕೊ ಗಿಡ, ೨೫೦ ನಿಂಬೆ ಸಸಿ, ೫೦ ಕಾಫಿ ಸಸಿ, ೨೦ ಲವಂಗದ ಗಿಡ, ಸುಮಾರು ೧೦೦ ಅಡಿಕೆ ಮರಗಳಿಗೆ ಕಾಳು ಮೆಣಸಿನ ಬಳ್ಳಿ ಹಬ್ಬಿಸಿದ್ದಾರೆ. ಕಾಫಿ ಮತ್ತು ಕಾಳು ಮೆಣಸು ಫಸಲು ಬಿಡಲಾರಂಭಿಸಿದ್ದು ಇವರ ಶ್ರಮಕ್ಕೆ ತಕ್ಕಂತೆ ಫಸಲು ಸಹ ಉತ್ತಮವಾಗಿದೆ.

ಸಾವಯವ ಪದ್ಧತಿ ಅಳವಡಿಸಿಕೊಂಡಿರುವ ಇವರು ನೈಸರ್ಗಿಕ ಕೃಷಿ ಮತ್ತು ಫುಕುವೋಕ  ಮಾದರಿಯ ವಿಧಾನಗಳಿಂದ ಕೃಷಿ ನಡೆಸುತ್ತಿದ್ದಾರೆ. ಬೆಲ್ಲ, ಮಣ್ಣು, ಕಡಲೆ ಹಿಟ್ಟು, ಗೋಧಿ ಹಿಟ್ಟು, ಸೆಗಣಿ ಮತ್ತು ಗೋಮೂತ್ರಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಣ ಮಾಡಿ ಜೀವಾಮೃತ ತಯಾರಿಸುತ್ತಾರೆ.

ಪ್ರತಿ ತಿಂಗಳಿಗೊಮ್ಮೆ ದ್ರವ ಜೀವಾಮೃತ ಮತ್ತು ಪ್ರತಿ ೬ ತಿಂಗಳಿಗೊಮ್ಮೆ ಘನ ಜೀವಾಮೃತ ನೀಡುತ್ತಾರೆ. ಬೇಸಿಗೆಯಲ್ಲಿ ಕಾಡಿನ ತರಗಲೆಗಳನ್ನು ತೋಟದ ನೆಲಕ್ಕೆ ಮುಚ್ಚಿ ತೇವಾಂಶ ಉಳಿಯುವಂತೆ ನೋಡಿಕೊಳ್ಳುತ್ತಾರೆ. ನವೆಂಬರ್ ತಿಂಗಳಿನಿಂದ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸುವ ಇವರು ೩ ದಿನಕ್ಕೊಮ್ಮೆ ನೀರು ಸಿಗುವಂತೆ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ. ಜೂನ್ ತಿಂಗಳ ಆರಂಭದಲ್ಲಿ ತೋಟದ ನೆಲಕ್ಕೆ ಸುಣ್ಣವನ್ನು ಹಾಕಿ ಕೊಳೆ ರೋಗ ಬರದಂತೆ ನೋಡಿಕೊಳ್ಳುತ್ತಾರೆ. ಈ ವರ್ಷ ಅತ್ಯಧಿಕ ಮಳೆ ಸುರಿದರೂ ಇವರ ತೋಟದ ಅಡಿಕೆ ಮರಗಳಿಗೆ ಕೊಳೆ ರೋಗ ಬರದಿರುವುದು ಗಮನಾರ್ಹ.

ವಿದ್ಯಾವಂತ ಯುವಕರು ಕೃಷಿಯತ್ತ ಹೆಚ್ಚು ಹೆಚ್ಚು ತೊಡಗಿಕೊಳ್ಳಬೇಕು ಎಂಬ ಉತ್ಕಟ ಇಚ್ಛೆಯುಳ್ಳ ಇವರು ಹಲವು ಸಭೆ ಸಮಾರಂಭಗಳಲ್ಲಿ ಈ ಬಗ್ಗೆ ಉಪನ್ಯಾಸ ನೀಡುತ್ತಾರೆ.

ತಮ್ಮ ಸ್ನೇಹಿತರೊಂದಿಗೆ ಸೇರಿ ‘ಸಂಪದ ಜನ ಜಾಗೃತಿ ಬಳಗ’ ಎಂಬ ವೇದಿಕೆ ನಿರ್ಮಿಸಿಕೊಂಡಿದ್ದಾರೆ. ರಕ್ತದಾನ, ನೇತ್ರದಾನ, ಜೀವದಾನ ಮತ್ತು ಸಾವಯವ ಕೃಷಿ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ವಿದ್ಯಾವಂತ ಯುವಕರು ಕೃಷಿ ಕಾರ್ಯ ಕೈಗೊಳ್ಳುವುದರ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ಸದಾ ಕ್ರಿಯಾಶೀಲವಾಗಿ ತೊಡಗಬೇಕು, ಉತ್ತಮ ಹವ್ಯಾಸ ರೂಢಿಸಿಕೊಂಡು ಇತರರಿಗೆ ಮಾರ್ಗದರ್ಶನ ನೀಡಬೇಕೆಂಬುದು ಇವರ ತತ್ವ. ಹಲವು ಧಾರಾವಾಹಿಗಳಲ್ಲಿ ಕಿರುತೆರೆಯ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ರೇಡಿಯೊ ಸಂದರ್ಶನದಲ್ಲಿ ಹಲವು ಸಲ ಪಾಲ್ಗೊಂಡು ಯುವಕರಿಗೆ ಮಾರ್ಗದರ್ಶನ ನೀಡಿದ್ದಾರೆ.

೧೯ನೇ ವಯಸ್ಸಿನಲ್ಲಿಯೇ ‘ಸಂಪದ ಸಾಲು’ ಎಂಬ ಮಾಸ ಪತ್ರಿಕೆ ಆರಂಭಿಸಿದ ಇವರು ಅದರ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಾ ಕೃಷಿ ಮತ್ತು ಗ್ರಾಮೀಣ ಬದುಕಿನ ಕುರಿತು ಲೇಖನ ಬರೆಯುತ್ತಿದ್ದಾರೆ.

ಮಲೆನಾಡಿನ ಯುವಕರು ಕೃಷಿಯಲ್ಲಿ ತೊಡಗಿಕೊಂಡು ಹೊಸ ಪ್ರಯೋಗ, ನವೀನ ತಂತ್ರಜ್ಞಾನ ಮತ್ತು ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಲಾಭದ ಹಾದಿಯಲ್ಲಿ ಮುನ್ನಡೆಯಬೇಕು ಎಂಬ ಆಶಯದೊಂದಿಗೆ ಯುವಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.  ಮಾಹಿತಿಗಾಗಿ ೯೪೪೮೨ ೧೯೩೪೭.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.