ADVERTISEMENT

ಗಿಡಗಳ ಬೆಳವಣಿಗೆಗೆ ಸುಲಭೋಪಾಯ

ಸವಿತಾ ಬೆಂಗಳೂರು
Published 19 ಮೇ 2014, 19:30 IST
Last Updated 19 ಮೇ 2014, 19:30 IST
ಗಿಡಗಳ ಬೆಳವಣಿಗೆಗೆ ಸುಲಭೋಪಾಯ
ಗಿಡಗಳ ಬೆಳವಣಿಗೆಗೆ ಸುಲಭೋಪಾಯ   

ಗಿಡಗಳನ್ನು ನೆಟ್ಟರೆ ಸಾಲದು, ಅವುಗಳ ಆರೈಕೆಯನ್ನೂ ಸರಿಯಾದ ರೀತಿ ಮಾಡಬೇಕು. ಸುಲಭದಲ್ಲಿ ಗಿಡಗಳನ್ನು ರಕ್ಷಿಸಿಕೊಳ್ಳಲು ಹಾಗೂ ಹೂದಾನಿಗಳಲ್ಲಿನ ಹೂವನ್ನು ಹೆಚ್ಚು ಕಾಲ ತಾಜಾ ಆಗಿರುವಂತೆ ನೋಡಿಕೊಳ್ಳಬಹುದಾದ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

*ಗುಲಾಬಿ ಗಿಡದ ಎಲೆಗಳಿಗೆ ಹುಳು ಬಿದ್ದಿದ್ದರೆ ಅದಕ್ಕೆ ಸೆಗಣಿ ಮತ್ತು ಒಲೆಯ ಬೂದಿ ಇವೆರಡನ್ನೂ ನೀರಿನಲ್ಲಿ ಕಲೆಸಿ ಎಲೆಗಳ ಮೇಲೆ ಚಿಮುಕಿಸಿ. ಹುಳುಗಳು ಎಲೆಗಳ ಹತ್ತಿರ ಸುಳಿಯುವುದಿಲ್ಲ.

*ಹೂದಾನಿಗಳಲ್ಲಿ ಹೂವುಗಳಿಡುವ ಮುನ್ನ ಅದರ ನೀರಿಗೆ ಒಂದು ಚಮಚ ಇದ್ದಿಲು ಪುಡಿ ಹಾಕಿ. ನೀರನ್ನು ಬದಲಾಯಿಸದೇ ಹೂವುಗಳು ದೀರ್ಘಾವಧಿವರೆಗೆ ಗಿಡದಲ್ಲಿರುವಷ್ಟೇ ಹೊಚ್ಚ ಹೊಸದಾಗಿ ಇರುತ್ತವೆ.

*ಕರಿಬೇವಿನ ಸಸಿಗೆ ಪ್ರತಿ ದಿನವೂ ಒಂದು ಬಟ್ಟಲಿನಷ್ಟು ಹುಳಿ ಮಜ್ಜಿಗೆ ಹಾಕಿದರೆ ಅದು ಚೆನ್ನಾಗಿ ಬೆಳೆಯುತ್ತದೆ.

*ಗಿಡದಿಂದ ಕತ್ತರಿಸಿ ಕುಂಡಗಳಲ್ಲಿ ಜೋಡಿಸಿದ ಹೂವುಗಳು ದೀರ್ಘಕಾಲ ಹೊಸತಾಗಿ ಇರಲು ಅದನ್ನಿಟ್ಟ ನೀರಿಗೆ ತುಸು ಉಪ್ಪು ಹಾಕಿ.

*ಹೂದಾನಿಯಲ್ಲಿ ಹೂವುಗಳನ್ನು ಜೋಡಿಸುವಾಗ ಚಿಟಿಕೆ ಉಪ್ಪು, ಇದ್ದಿಲ ಚೂರನ್ನು ನೀರಿಗೆ ಹಾಕಿ. ಹೂವಿನ ತೊಟ್ಟಿನ ತುದಿಯನ್ನು ಕೊಂಚ ಕತ್ತರಿಸಿ. ಅವು ನೀರಿನಲ್ಲಿ ಮುಳುಗಿದ ಭಾಗದಲ್ಲಿ ಎಲೆ, ಚಿಗುರು ಇರಕೂಡದು. ಏಕೆಂದರೆ ಅವು ಶೀಘ್ರವಾಗಿ ಕೊಳೆಯುತ್ತವೆ.

*ಹಾಗಲಕಾಯಿ, ಪಡುವಲಕಾಯಿ, ಕುಂಬಳಕಾಯಿ ಮುಂತಾದ ಬಳ್ಳಿ ತರಕಾರಿಗಳು ಕೆಲವೊಂದು ವೇಳೆ ಕಾಯಿ ಬಿಡುತ್ತಿಲ್ಲವಾದರೆ ಅಥವಾ ಬಿಟ್ಟು ಮಾರನೆಯ ದಿನವೇ ಬಿದ್ದು ಹೋಗುತ್ತಿರುವುದಾದರೆ ಅಂತಹ ಬಳ್ಳಿಗಳನ್ನು ಸ್ವಲ್ಪ ಸೀಳಿ ಇಂಗು ಇಟ್ಟು ಬಾಳೆ ನಾರಿನಿಂದ ಕಟ್ಟಿ. ಕಾಯಿ ಬಿಡಲು ಪ್ರಾರಂಭಿಸುತ್ತವೆ.

*ಹೂದಾನಿಯಲ್ಲಿ ಇಟ್ಟ ಹೂವು ಬಾಡಿ ಹೋಗುತ್ತಿದ್ದರೆ ‘ಆಸ್ಟ್ರೀನ್‌’ ಮಾತ್ರೆಯನ್ನು ಪುಡಿ ಮಾಡಿ ಕುಂಡದಲ್ಲಿರುವ ನೀರಿನಲ್ಲಿ ಬೆರೆಸಿ ಕಲಕಿ. ಮೂರು ದಿನಗಳವರೆಗೆ ಹೂವುಗಳು ಕಳೆಯಾಗಿರುತ್ತವೆ.

*ಹೂವಿನ ಕುಂಡದಲ್ಲಿ ಉಪ್ಪು ಹಾಕಿದ ನೀರಿನಲ್ಲಿ ಕತ್ತರಿಸಿ ಇಟ್ಟ ಹೂವುಗಳು ಬೇಗ ಬಾಡುವುದಿಲ್ಲ.

*ಹೂವಿನ ಕುಂಡದಲ್ಲಿ ಸಕ್ಕರೆ ಅಥವಾ ಗ್ಲುಕೋಸ್‌ ಪುಡಿ ಹಾಕಿದರೆ ಹೂ ಚೆನ್ನಾಗಿ ಇರುತ್ತದೆ.

*ಈರುಳ್ಳಿ ಸಿಪ್ಪೆ ಹಾಕಿ ಟೀ ಚರಟವನ್ನು ಗುಲಾಬಿ ಗಿಡದ ಬುಡದಲ್ಲಿ ಹಾಕಿ ಮಣ್ಣು ಮುಚ್ಚಿದರೆ ಗಿಡ ಸೊಂಪಾಗುವುದಲ್ಲದೇ ಹೆಚ್ಚು ಹೂವುಗಳು ಬಿಡುತ್ತವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.