ADVERTISEMENT

ನೆಲದ ಸೊಗಡಿಗೆ ಮರುಳಾಗಿ...

ಮನು ಎಚ್‌.ಎಸ್‌.ಹೆಗ್ಗೋಡು
Published 5 ಮೇ 2014, 19:30 IST
Last Updated 5 ಮೇ 2014, 19:30 IST

ಇಂದುಮತಿ ಶಾಲೆ ಕಾಲೇಜು ಎಲ್ಲಾ ಮುಗಿಸಿ ಮದುವೆ ಆದ ಮೇಲೆಯೂ ಕೃಷಿ ವ್ಯವಸಾಯ, ಹೈನು ಅಂತೆಲ್ಲಾ ಯೋಚಿಸಿದವರೇ ಅಲ್ಲ. ಅಪ್ಪ ಅಮ್ಮನ ಜೊತೆ ಪೇಟೆಯಲ್ಲಿಯೇ ಹುಟ್ಟಿ ಬೆಳೆದಿದ್ದು. ಓದಿದ್ದು ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎಸ್ಸಿ).
ಪತಿ ಮೈಸೂರಿನಲ್ಲಿ ಉದ್ಯೋಗಸ್ಥರಾಗಿದ್ದರಿಂದ ಹಳ್ಳಿ ಜೀವನದ ಪ್ರಮೇಯವೇ ಬರಲಿಲ್ಲ. ಹಬ್ಬಕ್ಕೆ, ರಜಕ್ಕೆ ಎಂದು ಪತಿಯ ಜೊತೆ ಆಗಾಗ ಅವರ ಹಳ್ಳಿಮನೆಗೆ ಹೋಗಿಬರುತ್ತಿದ್ದರು ಅಷ್ಟೆ. ಆಗಲೂ ತೋಟದ ಬಗ್ಗೆ, ಹಸುಗಳ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಅಕ್ಕಿ ಬೇಯಿಸಿ ಅನ್ನ ಮಾಡೋದು ಬಿಟ್ಟರೆ ಅಕ್ಕಿ ಹೇಗೆ ಬೆಳೀತಾರೆ ಅನ್ನೋದನ್ನು ಹತ್ತಿರದಿಂದ ಕೂಡ ನೋಡಿರಲಿಲ್ಲ.

10 ವರ್ಷಗಳ ಹಿಂದೆ ಕುಟುಂಬದಲ್ಲಾದ ಏರುಪೇರಿನಿಂದ ಪತಿಯ ಊರಿನ ಜಮೀನು ಪಾಲಾಗಿ, ಇವರ ಪಾಲಿಗೆ ಬಂದ ಜಮೀನು ಕಡೆಗಣನೆಗೆ ಒಳಗಾಗುವುದರಲ್ಲಿತ್ತು. ಕಾರ್ಮಿಕರ ಕೊರತೆಯನ್ನು ಅನುಭವಿಸುತ್ತಿರುವ ಇಂದಿನ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು ಹಳ್ಳಿಯಲ್ಲೇ ಹುಟ್ಟಿಬೆಳೆದವರಿಗೂ ಕಷ್ಟಸಾಧ್ಯವೆನಿಸಿದೆ. ಇಂಥ ಸಂದರ್ಭದಲ್ಲಿಯೂ ಇಂದುಮತಿ ಇಲ್ಲಿ ಪಾರಂಪರಿಕ ಅಡಿಕೆ ಕೃಷಿ ಜೊತೆಗೆ ತೆಂಗು, ಕಾಳುಮೆಣಸು ಅಲ್ಲದೇ ಸಾವಯವ ಬಳಸಿ ಏಳು ಎಕರೆಗಳಷ್ಟು ಭತ್ತದ ಬೇಸಾಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಅವರು ಬೇಸಾಯ ಕೈಗೊಂಡಿರುವ ಹಳ್ಳಿ ಹೆಸರು ಆತವಾಡಿ. ಇದು ಇರುವುದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡಿನ ಸಮೀಪ.

ದಶಕದ ಹಿಂದೆ ಮನೆಯ ಆಸ್ತಿ ಪಾಲಾದಾಗ ಮಗ ಇನ್ನೂ ಹೈಸ್ಕೂಲ್ ವಿದ್ಯಾರ್ಥಿ, ಮಗಳು ಆತನಿಗಿಂತಲೂ ಚಿಕ್ಕವಳು. ಓದಿನಲ್ಲಿ ಅಷ್ಟು ಆಸಕ್ತಿ ತೋರದ ಮಗನ ಭವಿಷ್ಯದ ಬಗ್ಗೆಯೂ ಚಿಂತೆ ಇತ್ತು ಇಂದುಮತಿ ಅವರಿಗೆ. ಮುಂದೆ ಅದೂ ಇದೂ ಅಂತೆಲ್ಲ ಓದಿ ಮಗ ಮನೆಯಲ್ಲೇ ಕೂರುವಂತಾಗುವ ಬದಲು ಚಿಕ್ಕ ವಯಸ್ಸಿ ನಿಂದಲೇ ಕೃಷಿ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದು ಅವನ ಭವಿಷ್ಯದ ದೃಷ್ಟಿಯಿಂದಲೂ ಭದ್ರವೆನಿಸಿ ಆ ವರ್ಷವೇ ಊರಿಗೆ ಬಂದು ನೆಲೆ ನಿಲ್ಲುವ ತೀರ್ಮಾನ ಮಾಡಿದ್ದು.

ಅಂದುಕೊಂಡಂತೆಯೆ ಎಲ್ಲವೂ ಆಗಬೇಕಲ್ಲ! ಮಕ್ಕಳಿನ್ನೂ ಚಿಕ್ಕವರು, ಪತಿಯಿಂದ ಕೇವಲ ಮೌನ ಸಮ್ಮತಿ!ಪಾಲಿಗೆ ಬಂದ ಜಮೀನು ಊರಿನಿಂದ ದೂರದಲ್ಲಿರುವ ಕಾರಣ ಪ್ರತ್ಯೇಕ ಮನೆ ನಿರ್ಮಿಸುವುದು ಮೊದಲಿಗೆ ಎದುರಾದ ಸವಾಲು.

ಛಲಕ್ಕೆ ಬಿದ್ದು ತಾವೊಬ್ಬರೇ ಹಳ್ಳಿಗೆ ಬಂದ ಇಂದುಮತಿ ಒಂದು ಗೋದಾಮು ಆಕಾರದ ಮನೆ ನಿರ್ಮಿಸಿ, ಅದರಲ್ಲೇ ಒಂಟಿಯಾಗಿ ವಾಸಿಸುತ್ತಾ ಕೃಷಿ ವೃತ್ತಿ ಆರಂಭಿಸಿದರು. ಇದೀಗ ಅವರ ಕೃಷಿ ಬದುಕು 10 ವರ್ಷ ಕಂಡಿದೆ. ಹಳ್ಳಿಯಲ್ಲಿ ಇರುವ ಸಾಮಾಜಿಕ ಭದ್ರತೆಯನ್ನು ವಿಶೇಷವಾಗಿ ಪ್ರಶಂಸಿಸುವ ಇಂದುಮತಿ, ಆರಂಭದಲ್ಲಿ ಕೃಷಿ ಬಗ್ಗೆ ಏನೂ ಗೊತ್ತಿಲ್ಲದೆ ಎಲ್ಲವನ್ನು ಸ್ಥಳೀಯರಿಂದಲೇ ಕಲಿತದ್ದಾಗಿ ಹೇಳಿಕೊಳ್ಳುತ್ತಾರೆ.

ಇಂದು ಅವರು ವಾಸಿಸುತ್ತಿದ್ದ ಗೋದಾಮಿಗೆ ಹೊಂದಿಕೊಂಡಂತೆ ಬಂಗಲೆಯಂತಹ ಮನೆ ನಿರ್ಮಾಣವಾಗಿದೆ. ಆ ಮನೆಯಲ್ಲಿ ನೆರೆಹೊರೆಯವರೆಲ್ಲ ಮೆಚ್ಚುವಂತೆ ಬದುಕುತ್ತಿದ್ದಾರೆ. ಮನೆಗೆ ತಾಗಿದಂತೆ ಕೊಟ್ಟಿಗೆಯೂ ಇದ್ದು, ಅಲ್ಲಿ ನಾಟಿ ಹಸುಗಳಿವೆ. ಮನೆ ತುಂಬಾ ಓಡಾಡುವ ಬೆಕ್ಕುಗಳು, ತೋಟಕ್ಕೂ, ಮನೆಗೂ ಬೆಂಗಾವಲಾಗಿ ಓಡಾಡುವ ನಾಯಿಗಳು ಬದುಕಿನ ಸಮೃದ್ಧಿಯನ್ನು ಹೆಚ್ಚಿಸಿವೆ.
ಕಾನೂನು ಪದವಿ ಓದಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಇವರ ಮಗನೂ ಕೃಷಿ ಕೆಲಸಕ್ಕೆ ಕೈ ಜೋಡಿಸುತ್ತಾರೆ. ‘ಸಂದರ್ಭ ಬಂದಾಗಲೆಲ್ಲ ಮಗನೇ ಗದ್ದೆ ಉಳುಮೆ ಮಾಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಕೂಡಾ ಆತನೇ’ ಎನ್ನುವಾಗ ಇಂದುಮತಿ ಅವರ ಮಾತಲ್ಲಿ‌ಮಗನ ಬಗ್ಗೆ ಸಾರ್ಥಕ ಮನೋಭಾವ ಮೂಡುತ್ತದೆ. ಅಡಿಕೆ ಸುಲಿಯಲು ಯಂತ್ರ ಬಳಸುತ್ತಿರುವ ಇವರು, ಕೃಷಿ ಚಟುವಟಿಕೆಗಳನ್ನು ನಿಧಾನವಾಗಿ ಯಾಂತ್ರೀಕರಣಗೊಳಿಸುವ ಪ್ರಯತ್ನದಲ್ಲಿ ಇದ್ದಾರೆ. 

‘ತೋಟದಲ್ಲಿ ಮಿಶ್ರ ಬೆಳೆ ಸುಲಭ ಸಾಧ್ಯವಾದರೆ, ಭತ್ತದ ಗದ್ದೆಯಲ್ಲಿ ಸಾಧ್ಯವಿಲ್ಲ. ಭತ್ತ ಏಕ ದಳ ಧಾನ್ಯ. ಆದ್ದರಿಂದ ಪರ್ಯಾಯವಾಗಿ ದ್ವಿದಳ ಬೆಳೆಯುವುದು ಮಣ್ಣಿನ ಫಲವತ್ತತೆ ದೃಷ್ಟಿಯಿಂದ ಸೂಕ್ತ. ಆದ್ದರಿಂದ ನಾನು ಭತ್ತದ ಕಟಾವಿನ ನಂತರ ಗದ್ದೆ ಹದವಿರುವ ಸಮಯದಲ್ಲೇ ಹುರುಳಿ, ಉದ್ದು, ಹೆಸರು, ಬವಡೆ, ಎಳ್ಳು, ಅಲಸಂದೆ ಇಂತಹ ಮನೆ ಬಳಕೆಗೆ ಉಪಯೋಗ ಅಗುವಂತಹ ಬೆಳೆಗಳನ್ನು ತುಂಬಾ ಸುಲಭದಲ್ಲಿ ಬೆಳೆಯುತ್ತೇನೆ. ಇಂತಹ ದ್ವಿದಳ ಬೆಳೆಗಳಿಂದ ಮಣ್ಣಿಗೆ ಸ್ವಾಭಾವಿಕವಾಗಿ ಸಾರಜನಕದ ಪೂರೈಕೆ ಆಗುವುದೇ ಇದರ ಗುಟ್ಟು’ ಎನ್ನುವ ಇಂದುಮತಿಯವರು, ಇಂತಹ ಕೃಷಿಯಿಂದ ತಾವು ಹೇಗೆ ಪ್ರಯೋಜನ ಪಡೆದುಕೊಂಡಿದ್ದು ಎಂಬುದನ್ನು ವಿವರಿಸುತ್ತಾರೆ.
‘ಹಸುಗಳೇ ಕೃಷಿಯ ಜೀವಾಳ, ಹಳ್ಳಿಯ ಅಥವಾ ಕೃಷಿಯ ಕನಸು ಕಾಣುವವರು ಕಡ್ಡಾಯವಾಗಿ ಪಶು ಸಂಗೋಪನೆಯನ್ನು ಕಲಿಯಲೇಬೇಕು’ ಎನ್ನುತ್ತಾರೆ.

ಶತಮಾನಗಳಿಂದ ಖಾಲಿ ಇದ್ದ ಗದ್ದೆಯ ಮೇಲುಗಡೆ ಇರುವ ಬಯಲು ಪ್ರದೇಶದಲ್ಲಿ ಇಂದು ಹೆಚ್ಚು ನೀರು ಬೇಡದ ನೆಲ್ಲಿ ಕಾಯಿ, ಮಾವಿನ ಮಿಡಿ ಹಾಗೂ ಸಪೋಟ ಗಿಡಗಳನ್ನು ನೆಟ್ಟು ಬೆಳೆಸಿ ವಾರ್ಷಿಕ ಒಂದಷ್ಟು ಹೆಚ್ಚಿನ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ ಇಂದುಮತಿ. ಸಾಂಪ್ರದಾಯಿಕವಲ್ಲದ ಬೆಳೆಗಳನ್ನು ಬೆಳೆಯುವುದರ ಜೊತೆ ಜೊತೆಗೆ ಅದರ ಮಾರುಕಟ್ಟೆಯನ್ನು ರೈತರೇ ಸಹಕಾರ ಮನೋಭಾವದಿಂದ ಸೃಷ್ಟಿಸಿಕೊಳ್ಳುವ ಅನಿವಾರ್ಯತೆಯನ್ನು  ಅರ್ಥಮಾಡಿಕೊಂಡಿರುವ ಇವರು, ಹಳ್ಳಿಯಲ್ಲಿ ಸಹಬಾಳ್ವೆ ತುಂಬಾ ಮುಖ್ಯವಾದದ್ದು ಎನ್ನುತ್ತಾರೆ. ಬಿಡುವಿನ ಸಮಯದಲ್ಲಿ ಬೆಳೆದ ಬಸಳೆ, ತೊಂಡೆ ಮುಂತಾದ ತರಕಾರಿಗಳನ್ನು ಮನೆ ಬಳಕೆಗೆ ಮಾತ್ರವಲ್ಲದೇ ಅಕ್ಕ ಪಕ್ಕದವರಿಗೆ ಹಂಚುವುದರಲ್ಲೂ ಇರುವ ಸಂತೋಷ ಈ ಕೃಷಿಯಲ್ಲಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಇವರ ಸಂಪರ್ಕಕ್ಕೆ 81978 00412.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.