ನನಗೆ ಮೊದಲಿನಿಂದಲೂ ಕೃಷಿಯತ್ತ ಒಲವಿತ್ತು. ಪದವಿ ಮುಗಿಸಿ ಕೃಷಿ ಮಾಡೋಣ ಎಂದುಕೊಂಡೆ. ಪದವಿಯಲ್ಲಿ ಉತ್ತಮ ಅಂಕಗಳು ಬಂದವು. ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಮಾಡಲು ಹೋದೆ. ಅಲ್ಲಿ ಉಪನ್ಯಾಸಕ ಹುದ್ದೆ ಸಿಕ್ಕಿತು, ವಿದ್ಯಾರ್ಥಿ ವೇತನವೂ ದಕ್ಕಿತು. ಅದರಲ್ಲಿಯೇ ಪಿಎಚ್.ಡಿ ಮಾಡಲೂ ಆಹ್ವಾನ ಬಂದಿತು. ಆದರೆ, ಅದೇ ಮಾರ್ಗದಲ್ಲಿಯೇ ಹೋದರೆ ನನ್ನ ಕನಸನ್ನು ನನಸು ಮಾಡಲಾಗುವುದಿಲ್ಲ ಎಂದು ಕೂಡಲೇ ನನ್ನ ಹುಟ್ಟೂರು ಧಾರವಾಡದ ಮನಗುಂಡಿಗೆ ವಾಪಸ್ ಬಂದೆ. ಹಾಲಿನ ಡೇರಿ ಮಾಡಿದೆ.
ವಿದೇಶದಲ್ಲಿ ಪಿಎಚ್.ಡಿ ಬಿಟ್ಟು ದನ ಕಾಯಲು ಬರ್ತೀನಿ ಎಂದರೆ ಎಂಥ ತಂದೆ–ತಾಯಿಯಾದರೂ ಬೇಸರ ಮಾಡಿಕೊಳ್ಳುವುದು ಸಹಜ. ಅದರಂತೆ, ಬ್ಯಾಂಕಿನ ನಿವೃತ್ತ ಅಧಿಕಾರಿಯಾಗಿರುವ ನನ್ನ ತಂದೆಯೂ ಆರಂಭದಲ್ಲಿ ಬೇಸರ ಮಾಡಿಕೊಂಡರು. ಆದರೆ, ಹಾಲಿನ ಡೇರಿ ಮಾಡಲೇ ಬೇಕು ಎಂಬ ನನ್ನ ಹಟ, ಬದ್ಧತೆ ಕಂಡು, ನಂತರ ಅವರೂ ಕೈ ಜೋಡಿಸಿದ್ದಾರೆ.
ಡೇರಿಗಿಂತಲೂ ಮುಖ್ಯವಾಗಿ, ಬಯೋ ಡೀಸೆಲ್ ಉತ್ಪಾದನಾ ಘಟಕ ಮಾಡಬೇಕು ಎಂಬ ಗುರಿ ನನಗಿತ್ತು. ಆದರೆ, ಅದಕ್ಕೆ ಬೇಕಾದ ಕಚ್ಚಾ ವಸ್ತುಗಳು ಅಥವಾ ಉಪ ಉತ್ಪನ್ನಗಳು ಸಿಗುವುದು ಕಷ್ಟ. ಆರ್ಥಿಕವಾಗಿಯೂ ಅದೊಂದರಿಂದಲೇ ಬೆಳವಣಿಗೆ ಕಷ್ಟ ಎಂದುಕೊಂಡು ಮೊದಲಿಗೆ ಹಾಲಿನ ಡೇರಿ ಆರಂಭಿಸಿದ್ದೇನೆ.
ಬಯೋ ಡೀಸೆಲ್ ಘಟಕದಲ್ಲಿ ಸಿಗುವ ಕಚ್ಚಾ ವಸ್ತುಗಳು, ಹಾಲಿನ ಡೇರಿಗೆ ಅಗತ್ಯವಾದರೆ, ಹಾಲಿನ ಉತ್ಪಾದನಾ ಘಟಕದಿಂದ ಬರುವ ಕಚ್ಚಾ ವಸ್ತುಗಳು ಬಯೋ ಡೀಸೆಲ್‌ಗೆ ಅಗತ್ಯವಾಗಿರುತ್ತದೆ. ಈ ನಿಟ್ಟಿನಿಂದ ಭವಿಷ್ಯದಲ್ಲಿ ಬಯೋ ಡೀಸೆಲ್ ಉತ್ಪಾದನಾ ಘಟಕ ಪ್ರಾರಂಭಿಸುವ ಉದ್ದೇಶವಿದೆ.
ಯೋಜನೆ ಸ್ಪಷ್ಟವಿರಬೇಕು
‘ನಾನು ಘಟಕಕ್ಕಾಗಿ 100 ರೂಪಾಯಿ ಖರ್ಚು ಮಾಡಿದರೆ, ಅದರಲ್ಲಿ 60ರಿಂದ 70 ರೂಪಾಯಿ ಹಸುಗಳ ಆಹಾರಕ್ಕಾಗಿಯೇ ವಿನಿಯೋಗಿಸುತ್ತೇನೆ. ಇದರಿಂದ ಹಸುಗಳ ಆರೋಗ್ಯ ಸುಧಾರಿಸುತ್ತದೆ. ಉತ್ತಮ ಕರುಗಳನ್ನು ಹಾಕುವುದರಿಂದ ಸಹಜವಾಗಿಯೇ ಜಾನುವಾರುಗಳ ಸಂಖ್ಯೆ ಹೆಚ್ಚುತ್ತದೆ. ಲಾಭವೂ ಬರುತ್ತದೆ.
ಡೇರಿಗಾಗಿ ಶೆಡ್ ನಿರ್ಮಾಣ ಮಾಡಬೇಕೆಂದು ವಿಚಾರಿಸಿದಾಗ, ಕೆಲವರು ಚದರ ಅಡಿಗೆ ₹800 ಖರ್ಚು ಆಗುತ್ತದೆ ಎಂದರು. ಚದರ ಅಡಿಗೆ ಕೇವಲ ₹240 ಖರ್ಚು ಮಾಡಿ ಗುಣಮಟ್ಟದ ಘಟಕ ನಿರ್ಮಿಸಿ ತೋರಿಸಿದ್ದೇನೆ. ಘಟಕ ಆರಂಭಿಸಿದ ನಂತರ, ಅದನ್ನು ಹೇಗೆ ಉದ್ಯಮವಾಗಿ ಬೆಳೆಸಬೇಕು ಎಂಬ ಬಗ್ಗೆ ಸ್ಪಷ್ಟ ಯೋಜನೆ ರೂಪಿಸಿ ಅದನ್ನು ಅನುಷ್ಠಾನಕ್ಕೆ ತರಬೇಕು. ನಾನು ‘ನಿಸರ್ಗ’ ಹೆಸರಿನಲ್ಲಿ ಪ್ಯಾಕೆಟ್ ಮಾಡಿ ಹಾಲನ್ನು ಮಾರುತ್ತಿದ್ದೇನೆ.
‘ಯೋಗಿ ಫಾರ್ಮ್ಸ್’ ಉತ್ಪನ್ನದ ಹೆಸರಿನಲ್ಲಿ ಆಹಾರ ಇಲಾಖೆಯಲ್ಲಿ ನೋಂದಣಿಯನ್ನೂ ಮಾಡಿಸಿದ್ದೇನೆ. ‘ಮೂರು ಗಂಟೆ ವರ್ಸಸ್ ಮೂರು ದಿನ’ ಎಂಬ ಪರಿಕಲ್ಪನೆಯೊಂದಿಗೆ ಇದು ಸಾಗಿದೆ. ಹಾಲು ಕರೆದು ಮೂರು ಗಂಟೆಗಳೊಳಗೆ ಗ್ರಾಹಕರ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಬೇರೆ ಕಂಪೆನಿಯ ಹಾಲು ಗ್ರಾಹಕರ ಮನೆ ತಲುಪುವುದಕ್ಕೆ ಮೂರು ದಿನ ಬೇಕಾಗುತ್ತದೆ.
ಪ್ರತಿ ದಿನ 60 ಲೀಟರ್ ಮಾರಾಟ ಮಾಡುತ್ತಿದ್ದೇನೆ. ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಆ ಸಂದರ್ಭ, ಬೇಡಿಕೆಯಷ್ಟು ಹಾಲು ಪೂರೈಸುವುದು ಕಷ್ಟ. ಮಾರುಕಟ್ಟೆಯಲ್ಲಿ ಆರ್ಡರ್ ಹಿಡಿಯುವುದು ಸವಾಲಲ್ಲ. ಅದನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲು. ಆದ್ದರಿಂದ ಉತ್ಪಾದನೆಯ ಶೇ70ರಷ್ಟು ಮಾತ್ರ ಮಾರಾಟ ಮಾಡುತ್ತೇನೆ.
ಆಹಾರ, ಔಷಧೋಪಚಾರ
ಹಸುಗಳ ಆಹಾರಕ್ಕಾಗಿ ಹುಲ್ಲು ಬೆಳೆಯುವ ವ್ಯವಸ್ಥೆ ಮಾಡಿಕೊಂಡಿದ್ದೇನೆ. ಎರಡೂವರೆ ಎಕರೆಯಲ್ಲಿ ವಿವಿಧ ಬಗೆಯ ಹುಲ್ಲು, ಕಾಳುಗಳನ್ನು ಸಂಪೂರ್ಣ ಸಾವಯವ ವಿಧಾನದಲ್ಲಿ ಬೆಳೆಯುತ್ತಿದ್ದೇನೆ. ಗಿಡಗಳು ಹಾಳಾಗದಿರಲು ಸುತ್ತಲೂ ಬಫರ್ ಝೋನ್ ಸೃಷ್ಟಿಸಲಾಗಿದೆ. ಸೆಗಣಿ ಮತ್ತು ಮೂತ್ರ ಬಳಸಿಕೊಂಡು ಗೊಬ್ಬರ ತಯಾರಿಸಲಾಗುತ್ತಿದೆ. ಒಂದು ಟನ್‌ಗೆ ₹6000ದಂತೆ ಇದನ್ನು ಮಾರಾಟ ಮಾಡುತ್ತೇನೆ.
ಹಸು ಅಥವಾ ಎಮ್ಮೆಗೆ ಹಾರ್ಮೋನ್ಸ್ ಅಥವಾ ಸ್ಟಿರಾಯಿಡ್ ಇಂಜೆಕ್ಷನ್ ಕೊಡಬಾರದು. ಅವುಗಳಿಗೆ ಹುಷಾರಿಲ್ಲ ಎಂದ ತಕ್ಷಣವೇ ರೋಗನಿರೋಧಕ ಇಂಜೆಕ್ಷನ್ ಕೊಡಬಾರದು. 24 ತಾಸು ಕಾದು ನೋಡಬೇಕು. ನಂತರವೂ ಅವುಗಳ ಸ್ಥಿತಿ ಗಂಭೀರವಾಗಿದೆ ಎಂದರೆ ಮಾತ್ರ ಪಶು ವೈದ್ಯರ ಬಳಿ ಕರೆದುಕೊಂಡು ಹೋಗಬೇಕು. ಯಾವುದೇ ಕರುವಿಗೆ, ಅದು ಆಕಳಿನ ಹೊಟ್ಟೆಯಿಂದ ಹೊರಬಂದ ನಂತರವೇ ಅದಕ್ಕೆ ರೋಗನಿರೋಧಕ ಶಕ್ತಿ ಬರುತ್ತದೆ.
ಅದು ಒಂದು ಗಂಟೆಯೊಳಗೆ ಎಷ್ಟು ಗಿಣ್ಣು ಕುಡಿಯಬೇಕು ಎನಿಸುತ್ತದೆ ಅಷ್ಟು ಕುಡಿಸಬೇಕು. ಕರು ಹಾಕಿದ ತಕ್ಷಣವೇ ಹಾಲನ್ನು ಕರೆಯಬಾರದು. ತಕ್ಷಣ ಹಾಲು ಕರೆದರೆ ‘ಮಿಲ್ಕ್ ಫೀವರ್’ ಬರುತ್ತದೆ. ಹಸುವಿನಲ್ಲಿ ಕ್ಯಾಲ್ಸಿಯಂ ಕಡಿಮೆಯಾದರೆ, ಕರುವಿನ ಆರೋಗ್ಯಕ್ಕೆ ಕಷ್ಟ. ದಿನಕ್ಕೆ 16ರಿಂದ 18 ಗಂಟೆಗಳನ್ನು ನಾನು ಪ್ರಾಣಿಗಳೊಂದಿಗೆ ಕಳೆಯಲು ಸಿದ್ಧ ಇದ್ದೇನೆ ಎಂಬುವರು ಘಟಕ ಪ್ರಾರಂಭಿಸಬೇಕು.
ಪ್ರಾರಂಭದಲ್ಲಿಯೇ ಲಾಭ ನಿರೀಕ್ಷೆ ಮಾಡಬಾರದು. ಕಡಿಮೆ ಸಂಖ್ಯೆಯ ಹಸು ಅಥವಾ ಎಮ್ಮೆಗಳೊಂದಿಗೆ ಘಟಕ ಪ್ರಾರಂಭಿಸಿ, ಕ್ರಮೇಣ ಹಸುಗಳ ಸಂಖ್ಯೆ ಹೆಚ್ಚಿಸುತ್ತಾ ಹೋಗಬೇಕು. ದೊಡ್ಡ ಪ್ರಮಾಣದಲ್ಲಿ ಪ್ರಾರಂಭ ಮಾಡಿ, ನಷ್ಟ ಸಂಭವಿಸಿದ ಕೂಡಲೇ ಡೇರಿ ಮುಚ್ಚುವುದು ಸರಿಯಲ್ಲ. ಲಾಭ–ನಷ್ಟಕ್ಕಿಂತ ಮಿಗಿಲಾಗಿ ನಾವು ಆ ಪ್ರಾಣಿಗಳ ಜೀವನದಲ್ಲಿ ಆಟವಾಡಿದಂತಾಗಬಾರದು.
ಗರಿಷ್ಠ ಲಾಭ ಬೇಕು
ರೈತರ ಒಕ್ಕೂಟವೊಂದನ್ನು ರಚಿಸಿ, ಅವರಿಂದ ಉತ್ಪನ್ನ ಸಂಗ್ರಹಿಸಿ ಮಾರಾಟ ಮಾಡುವ ಕಂಪೆನಿನಿರ್ಮಿಸುವ ಉದ್ದೇಶ ಹೊಂದಿದ್ದೇನೆ. ಯಾವುದೇ ಉತ್ಪನ್ನವನ್ನು ಮಾರಾಟ ಮಾಡಿದ ನಂತರ, ಉತ್ಪನ್ನಕ್ಕೂ, ರೈತನಿಗೂ ಸಂಬಂಧವೇ ಇರುವುದಿಲ್ಲ. ತನ್ನ ಉತ್ಪನ್ನಕ್ಕೆ ₹60 ಬೆಲೆ ಇದ್ದಾಗ ವ್ಯಾಪಾರಿಗಳು ಅವನಿಂದ ಕೊಂಡುಕೊಳ್ಳುತ್ತಾರೆ. ಅದನ್ನು ಗ್ರಾಹಕರಿಗೆ ಮಾರಾಟ ಮಾಡಿದಾಗ ಆ ಉತ್ಪನ್ನದ ಬೆಲೆ ₹90 ಆಗಿರುತ್ತದೆ. ಆದರೆ, ಲಾಭ ಮಾತ್ರ ರೈತನಿಗೆ ಸಿಕ್ಕಿರುವುದಿಲ್ಲ. ಈ ನಿಟ್ಟಿನಲ್ಲಿ ರೈತನಿಂದ ನೇರವಾಗಿ ಗ್ರಾಹಕನಿಗೆ ಉತ್ಪನ್ನ ಮಾರಾಟ ಮಾಡುವುದು, ಆ ಲಾಭ ಪೂರ್ತಿ ರೈತನಿಗೆ ಸಿಗುವಂತೆ ಮಾಡಬೇಕು. ಆದರೆ, ಸಾವಯವ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಬೇಕು ಎಂಬ ಉದ್ದೇಶವಿದೆ. ಈ ಯೋಜನೆಗೆ ಈಗಾಗಲೇ ಐದಾರು ಜನ ಕೈಜೋಡಿಸಿದ್ದಾರೆ.
ರೈತರು ಹೊಸಬರನ್ನು ತಮ್ಮ ಜೊತೆ ಸೇರಿಸಿಕೊಳ್ಳುವುದಕ್ಕೆ ಇನ್ನೂ ಸಿದ್ಧರಾಗಿಲ್ಲ. ಇದರಲ್ಲಿ ಅವರ ತಪ್ಪೂ ಇಲ್ಲ. ಅವರನ್ನು ಮೊದಲಿನಿಂದ ಎಲ್ಲರೂ ದುರುಪಯೋಗ ಪಡಿಸಿಕೊಳ್ಳುತ್ತಾ ಬಂದಿದ್ದಾರೆ. ಕಳಪೆ ಬೀಜ, ಗೊಬ್ಬರ ಕೊಟ್ಟು, ಇಳುವರಿ ಹೆಚ್ಚು ಬರುತ್ತದೆ ಎಂದು ಅವರಿಗೆ ಮೋಸ ಮಾಡಿದ್ದಾರೆ. ಹಾಗಾಗಿ, ಸುಶಿಕ್ಷಿತರು ಎನಿಸಿಕೊಂಡವರನ್ನು ಕಂಡ ಕೂಡಲೇ ರೈತರು ಅವರನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ಜೊತೆ ನಾವು ಓಡಾಡಿ, ನಾವೂ ನಿಮ್ಮವರೇ ಎಂದು ಮನವರಿಕೆ ಮಾಡಿಕೊಡುವ ಅವಶ್ಯಕತೆ ಹೆಚ್ಚಿದೆ.
ಡೇರಿ ಆರಂಭಿಸುವ ಮೊದಲು, ಬೆಂಗಳೂರಿನ ಎನ್‌ಡಿಆರ್‌ಎನಲ್ಲಿ, ಹೆಸರಘಟ್ಟದಲ್ಲಿ, ಧಾರವಾಡ ಕೃಷಿ ವಿ.ವಿ, ಕೆಎಂಎಫ್‌ನಲ್ಲಿ ಈ ಬಗ್ಗೆ ತರಬೇತಿ ಕೊಡುತ್ತಾರೆ. ಅಲ್ಲಿ ತರಬೇತಿ ಪಡೆದುಕೊಂಡರೆ ತುಂಬಾ ಒಳ್ಳೆಯದು.
ಫೀಡಿಂಗ್ ಮತ್ತು ಬ್ರೀಡಿಂಗ್ ಕಡೆ ಗಮನ ಹರಿಸಿದರೆ ಡೇರಿ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ‘ನಾಕ ತಿಂಗಳಾಗ ಸಾವ್ಕಾರ ಎಮ್ಮಿ ತಗೀತಾನ ನೋಡ್ರಿ ಎಂದು ಮಾತಾಡಿಕೊಂಡಿದ್ವಿ... ಆದ್ರ ಅದನ್ನ ನೀವು ಸುಳ್ ಮಾಡದ್ರಿ ಸಾಹೇಬ್ರ’ ಎಂದು ರೈತರು ಹೇಳಿದಾಗ ಸಾರ್ಥಕವೆನಿಸುತ್ತದೆ.
ಮೊದಲು ನಾಯಿ ಸಾಕಿ !
ಹಾಲಿನ ಡೇರಿ ಆರಂಭಿಸಲು ಬಯಸುವವರು ಹಸು ಮತ್ತು ಎಮ್ಮೆಗಳನ್ನು ಸಾಕುವುದಕ್ಕೂ ಮುನ್ನ ಒಂದು ನಾಯಿಯನ್ನು ಸಾಕಬೇಕು. ಪ್ರಾಣಿಯೊಂದು ನಮ್ಮಿಂದ ಏನೇನು ನಿರೀಕ್ಷಿಸುತ್ತದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಅದರ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತೇವೆ ಎಂದು ಮನಗಂಡ ನಂತರವೇ ಹಾಲಿನ ಡೇರಿ ಪ್ರಾರಂಭಕ್ಕೆ ಮನಸು ಮಾಡಬಹುದು ಎಂದು ಗೌರಿಶಂಕರ ಸಲಹೆ ನೀಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.