ADVERTISEMENT

ಬಂಜರು ನೆಲದಲ್ಲಿ ಭಾರಿ ಬೆಳೆ

ಪ್ರಕಾಶ ಎನ್.ಮಸಬಿನಾಳ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST
ಜಿ.9 ತಳಿಯ ಗಿಡದಲ್ಲಿ ಬೆಳೆದ ಬಾಳೆಗೊನೆ
ಜಿ.9 ತಳಿಯ ಗಿಡದಲ್ಲಿ ಬೆಳೆದ ಬಾಳೆಗೊನೆ   

ಪದವಿ ಪಡೆದು ನೌಕರಿ ಗಿಟ್ಟಿಸಿಕೊಂಡರೂ, ನೌಕರಿಗಿಂತ ಕೃಷಿಯೇ ಅಮೂಲ್ಯ ಎಂದು ಬಂಜರು ಭೂಮಿಯಲ್ಲಿ ಬಾಳೆ ಬೆಳೆದು ಯಶಸ್ಸು ಕಂಡಿದ್ದಾರೆ ವಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮುಳವಾಡ ಗ್ರಾಮದ ಬಸವರಾಜ ಸಿದ್ದಾಪುರ.

ಶಿಕ್ಷಕ ಹಾಗೂ ಸಾಹಿತಿ ಪ.ಗು.ಸಿದ್ದಾಪುರ ಅವರ ಮಗನಾಗಿರುವ ಬಸವರಾಜ ಅವರ ಈ ಕೃಷಿ ವೃತ್ತಿಗೆ ತಂದೆಯೇ ಪ್ರೇರಣೆ. ತಂದೆಯ ಇಚ್ಛೆಯಂತೆ ಬಿಎಸ್‌ಸಿ ಹಾರ್ಟಿಕಲ್ಚರ್ ಪದವಿ ಪಡೆದ ಅವರು ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲಸ ತೃಪ್ತಿ ತರಲಿಲ್ಲ. ಸ್ವಂತ ಕೃಷಿಯಲ್ಲಿ ತೊಡಗಬೇಕು ಹಾಗೂ ರೈತರಿಗೆ ಕೃಷಿಯಲ್ಲಿ ಆಸಕ್ತಿ ಹೆಚ್ಚಿಸುವ ಕೆಲಸ ಮಾಡಬೇಕು ಎಂಬ ಇಚ್ಛೆಯಾಯಿತು. ಕೆಲಸ ಬಿಟ್ಟು ಗ್ರಾಮಕ್ಕೆ ಬಂದರು. ಕೃಷಿ ಆರಂಭಿಸಬೇಕೆಂದರೆ ಸ್ವಂತ ಕೃಷಿ ಭೂಮಿ ಇಲ್ಲ. ತಂದೆ ಹಾಗೂ ಕುಟುಂಬ ಸದಸ್ಯರ ಸಹಕಾರದಿಂದ ಕೃಷಿಗೆ ಯೋಗ್ಯವಲ್ಲದ ನಾಲ್ಕು ಎಕರೆ ಬಂಜರು ಜಮೀನನ್ನು ಖರೀದಿಸಿದರು. ಅದನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲು ಒಂದಷ್ಟು ಹಣ ಖರ್ಚು ಮಾಡಿ ಯಶಸ್ವಿಯಾದರು. ಜಮೀನಿನಲ್ಲಿ ಕೊಳವೆ ಬಾವಿಯೊಂದನ್ನು ತೋಡಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿದರು.

ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಸದೆ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ಬಾಳೆ ಗಿಡಗಳನ್ನು ಬೆಳೆಯಬೇಕು ಎಂಬ ಯೋಚನೆಯೊಂದಿಗೆ ಎರಡು ಎಕರೆ ಜಮೀನಿನಲ್ಲಿ ಜಿ.9 ತಳಿಯ ಬಾಳೆ ಸಸಿಗಳನ್ನು ನೆಟ್ಟು ಅದಕ್ಕೆ ಸಮಯಕ್ಕನುಗುಣವಾಗಿ ಹನಿ ನೀರಾವರಿ ಮೂಲಕ ನೀರು ಹಾಯಿಸುವುದರೊಂದಿಗೆ ಅಗತ್ಯಕ್ಕನುಗುಣವಾಗಿ ಗೊಬ್ಬರ ನೀಡಿ ಉತ್ತಮ ಫಸಲು ತೆಗೆದರು. `ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬಂತೆ, 1,800 ಬಾಳೆಗಿಡದಲ್ಲಿ ವರ್ಷಕ್ಕೆ 45 ರಿಂದ 50 ಟನ್ ಬಾಳೆ ಫಸಲನ್ನು ಬೆಳೆದಿದ್ದೇನೆ. ಖರ್ಚು ತೆಗೆದು ಅಂದಾಜು 2.5ಲಕ್ಷ ರೂಪಾಯಿ ಆದಾಯ ಬಂದಿದೆ' ಎಂದು ಬಸವರಾಜ ಅವರು ತಮ್ಮ ಕೃಷಿ ಯಾತ್ರೆಯನ್ನು ವಿವರಿಸುತ್ತಾರೆ.

ಪಟ್ಟಾ ಪದ್ಧತಿ
ಬೆಳೆದು ನಿಂತ ಬಾಳೆ ಗಿಡಗಳು ಮರಿ ಹಾಕಿದ ಮೇಲೆ ಬಾಗದಂತೆ ನೋಡಿಕೊಳ್ಳಲು ಕಟ್ಟಿಗೆಯ ಕೋಲು ನಿಲ್ಲಿಸುವುದು ಹಳೆಯ ಪದ್ಧತಿ. ಅದರ ಬದಲಿಗೆ ಪಟ್ಟಾ ಪದ್ಧತಿ ಅನುಸರಿಸಿದರೆ ಖರ್ಚು ಕಡಿಮೆ ಬರುತ್ತದೆ. ಬಾಳೆ ಗಿಡಗಳು ಮರಿಹಾಕಿದ ನಂತರ ಎರಡು ಬಾಳೆಗಿಡಗಳನ್ನು ಸೇರಿಸಿ ಬೆಲ್ಟ್ ಹಾಕುವುದೇ ಪಟ್ಟಾ ಪದ್ಧತಿ. ಇದರಿಂದ ಖರ್ಚನ್ನು ಉಳಿಸಬಹುದು, ಅಲ್ಲದೇ ಹೆಚ್ಚು ಇಳುವರಿ ಪಡೆಯುವ ಸಾಧ್ಯತೆಯು ಇದೆ ಎಂದು ಬಸವರಾಜ ಹೇಳುತ್ತಾರೆ.

ಬಸವರಾಜ ಅವರ ಮಾರ್ಗದರ್ಶನದಲ್ಲಿ ಬಾಳೆ ಸಸಿಗಳನ್ನು ಹಾಕಿರುವ ಗ್ರಾಮದ ರೈತ ರಮೇಶ ಮಂಟೂರ ಅವರು ಬಾಳೆ ಗಿಡದ ಸಾಲುಗಳ ಮಧ್ಯದಲ್ಲಿ ಬೆಳ್ಳುಳ್ಳಿ ಬೆಳೆದು ಉತ್ತಮ ಲಾಭ ಪಡೆದುಕೊಂಡಿದ್ದಾರೆ. ಇವರು ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಬಾಳೆ ಸಸಿ (ನರ್ಸರಿ) ತಯಾರಿಸಿ ಅವುಗಳನ್ನು ರೈತರಿಗೆ ಪೂರೈಸುವುದರೊಂದಿಗೆ ಅವರ ತೋಟಗಳಿಗೆ ಭೇಟಿ ನೀಡಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಇವರು ತಯಾರಿಸಿದ ಬಾಳೆ ಸಸಿಗಳನ್ನು ವಿಜಾಪುರ, ಕೊಪ್ಪಳ, ರಾಯಚೂರು, ಗದಗ, ಗುಲ್ಬರ್ಗಾ, ಬಾಗಲಕೋಟೆ ಹಾಗೂ ಮಹಾರಾಷ್ಟ್ರದ ಕೆಲ ರೈತರಿಗೆ ವಿತರಿಸಿದ್ದಾರೆ. ಜಿ-9 ತಳಿಯ ಬಾಳೆ ಸಸಿಗಳನ್ನು ತಯಾರಿಸುವ ಇವರು ಇದುವರೆಗೆ ಪ್ರತಿ ಸಸಿಗೆ 13 ರೂಪಾಯಿಯಂತೆ ಅಂದಾಜು 12 ಲಕ್ಷ ಸಸಿಗಳನ್ನು ರೈತರ ತೋಟಗಳಿಗೆ ತಲುಪಿಸಿ ಸೈ ಎನಿಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ನರ್ಸರಿಗೆ ಹೆಚ್ಚು ಗಮನ ಹರಿಸಿ ಜಿ.9 ತಳಿಯ ಬಾಳೆ ಸಸಿಗಳನ್ನು ಪೂರೈಸುವುದರೊಂದಿಗೆ ರೈತರ ತರಬೇತಿ ಕೇಂದ್ರವನ್ನು ಆರಂಭಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ. 

ಮನಸ್ಸಿದ್ದರೆ ಮಾರ್ಗ
ಬಾಳೆ ತೋಟಕ್ಕೆ ಆರಂಭದಲ್ಲಿ 40 ಸಾವಿರದವರೆಗೆ ಖರ್ಚು ಬರುತ್ತದೆ. ಇತರ ಬೆಳೆಗಳಿಗೆ ಹೋಲಿಸಿದಾಗ ಈ ಖರ್ಚು ಅಷ್ಟಾಗಿ ಹೊರೆಯಾಗಲಾರದು. ಒಂದೇ ವರ್ಷದಲ್ಲಿ ಖರ್ಚು ತೆಗೆದು 2 ಲಕ್ಷದವರೆಗೆ ಲಾಭ ಪಡೆಯಬಹುದು. ಮನಸ್ಸಿದ್ದರೆ ಮಾರ್ಗ ಎಂಬಂತೆ ರೈತರು ಮನಸ್ಸು ಮಾಡಬೇಕು, ಕಡಿಮೆ ನೀರಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿ ಅಗತ್ಯಕ್ಕನುಗಣವಾಗಿ ಗೊಬ್ಬರವನ್ನು ನೀಡಿದರೆ ಉತ್ತಮ ಫಸಲು ತೆಗೆಯಬಹುದು ಎಂಬುದು ಬಸವರಾಜ ಅವರ ಅನುಭವದ ಮಾತುಗಳಾಗಿವೆ.

`ನಾನು ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಕೆಲವರು ವಿರೋಧಿಸಿದರು. ಆಗಾಗ್ಗೆ ಬರಗಾಲದಿಂದ ತತ್ತರಿಸುವ ಈ ಭಾಗದಲ್ಲಿ ನೀರಿನ ಕೊರತೆ ಎದುರಿಸಬೇಕಾಗುತ್ತದೆ. ಅಷ್ಟಾಗಿ ಲಾಭ ಬರುವುದಿಲ್ಲ. ನಿನ್ನ ಯೋಚನೆ ಬದಲಿಸಿ ಉದ್ಯೋಗಕ್ಕೆ ಸೇರಿಕೋ ಎಂದು ಹಲವರು ಸಲಹೆ ನೀಡಿದರು. ಆದರೆ ನಾನು ಕೃಷಿ ತೋಟಗಾರಿಕೆಗೆ ಸಂಬಂಧಿಸಿದ ಪದವಿ ಪಡೆದಿರುವುದರಿಂದ ಹಾಗೂ ಖಾಸಗಿ ಕಂಪೆನಿಯಲ್ಲಿ ಅಂಗಾಂಶ ಕೃಷಿಯಲ್ಲಿ ಕಾರ್ಯ ನಿರ್ವಹಿಸಿದ್ದರಿಂದ ಕೃಷಿಯನ್ನೇ ಆಯ್ಕೆ ಮಾಡಿದೆ' ಎನ್ನುತ್ತಾರೆ ಬಸವರಾಜ.

ಸಂಪರ್ಕಕ್ಕೆ 9739172848.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT