ನಾಲ್ಕು ವರ್ಷಗಳ ಹಿಂದಿನ ಒಂದು ದಿನ. ಮಹಾರಾಷ್ಟ್ರದ ದಾಪೋಲಿ ತಾಲ್ಲೂಕಿನ ಮುರುಡ್‌ನಲ್ಲಿರುವ ‘ಕ್ಷಿತಿಜ ಹೋಟೆಲ್’ ಗೆ ಬಂದ ಗ್ರಾಹಕರಿಗೆ ಅಚ್ಚರಿ. ಅಂದು ಚಪಾತಿಯ ಜೊತೆಗೆ ಆಲೂ ಸಬ್ಜಿಯ ಬದಲು ಆ ಪ್ರದೇಶದಲ್ಲಿ ಹೇರಳವಾಗಿ ಸಿಗುವ ಹಲಸಿನ ಪಲ್ಯ ನೀಡಲಾಗಿತ್ತು.
ಪರ ಊರಿಂದ ಬರುವ ಪ್ರವಾಸಿಗಳು ‘ಸ್ಥಳೀಯ ಆಹಾರ ಏನಿದೆ’ ಎಂದು ವಿಚಾರಿಸುವಾಗ ಹೋಟೆಲ್ ಮಾಲೀಕ ಉಪೇಂದ್ರ ಅವರಿಗೆ ಊರಿನಲ್ಲಿ ಸಮೃದ್ಧವಾಗಿರುವ, ಪ್ರಾದೇಶಿಕ ಸೊಗಡಿರುವ ಹಲಸನ್ನು ಅಡುಗೆಯಲ್ಲಿ ಬಳಸಲು ಪ್ರೇರಣೆಯಾಯಿತು. 2010ರಿಂದ ಹಲಸು ಪ್ರಯೋಗ ಶುರು ಮಾಡಿದರು.
ಉಪೇಂದ್ರ ರೈತರಿಂದ ನೇರವಾಗಿ ಇಲ್ಲವೇ ಸಗಟು ಮಾರುಕಟ್ಟೆಯಿಂದ ತಿರುಳುಹಲಸನ್ನು (ಬೀಜ ಇನ್ನೂ ಎಳೆಯದಿರುತ್ತದೆ) ಖರೀದಿಸುತ್ತಾರೆ. ಹಲಸನ್ನು ಕತ್ತರಿಸಿ, ಸ್ವಚ್ಛ ಮಾಡಿ ಬೇಯಿಸುತ್ತಾರೆ. ತೊಳೆ, ಬೀಜ ಎರಡನ್ನೂ ಉತ್ಪನ್ನದಲ್ಲಿ ಸೇರಿಸುತ್ತಾರೆ. ಕೊನೆ ಉತ್ಪನ್ನ ಹಲಸಿನ ತೂಕದ ಅರ್ಧದಷ್ಟು ಇರುತ್ತದೆ. ಕೃತಕ ಸಂರಕ್ಷಕಗಳ ಬಳಕೆ ಇಲ್ಲ.
ಈ ಕ್ರಮದಲ್ಲಿ ಹಲಸಿನ ಸಹಜ ಗುಣಗಳು ಉಳಿಯುವುದರಿಂದ ಅಡುಗೆ ರುಚಿಯಾಗುತ್ತದೆ. ಆದರೆ, ಉತ್ಪನ್ನವನ್ನು ಶೀತ ಪೆಟ್ಟಿಗೆಯಲ್ಲಿ ಇಡಬೇಕು. ಮೈನಸ್ 15 ರಿಂದ 10 ಡಿಗ್ರಿ ಸೆಲ್ಷಿಯಸ್ ಉಷ್ಣತೆ ಸೂಕ್ತ ಎನ್ನುತ್ತಾರೆ. ಒಂದೊಮ್ಮೆ ತಂಪು ಪೆಟ್ಟಿಗೆಯಿಂದ ಹೊರತೆಗೆದರೆ ಒಂದು ಗಂಟೆಯೊಳಗೆ ಬಳಸಬೇಕು. ಇಲ್ಲದಿದ್ದರೆ ಫ್ರೀಜರ್‌ನಲ್ಲಿಡಬೇಕು. ಫ್ರೀಜರ್‌ನಲ್ಲಿಟ್ಟರೆ ಎಂಟು ತಿಂಗಳು ಬಳಸಬಹುದು ಎನ್ನುತ್ತಾರೆ ಉಪೇಂದ್ರ.
ಈ ಸಿದ್ಧ ಉತ್ಪನ್ನವನ್ನು ಬಳಸಿ ಹತ್ತು-ಹದಿನೈದು ನಿಮಿಷದಲ್ಲಿ ಅಡುಗೆ ತಯಾರಿಸಲು ಸಾಧ್ಯ ಎಂಬ ಅರಿವಾದಂತೆ, ಊರಿನ ಇತರೆ ಹೋಟೆಲ್‌ಗಳಿಂದ ಉತ್ಪನ್ನಕ್ಕೆ ಬೇಡಿಕೆ ಬಂತು. ಕಳೆದ ಒಂದೂವರೆ ವರ್ಷಗಳಿಂದ ‘ಚೈತ್ರಪಾಲವಿ’ ಹೆಸರಿನಲ್ಲಿ ಅಡುಗೆಗೆ ಸಿದ್ಧ ಹಲಸನ್ನು ಮಾರಾಟ ಮಾಡುತ್ತಿದ್ದಾರೆ. ಕಾಲು ಕಿಲೋ ಪ್ಯಾಕ್‌ಗೆ 40 ರೂಪಾಯಿ. ಸ್ನೇಹಿತರೊಬ್ಬರು ರೂಪಿಸಿದ ಹಲಸು ಕತ್ತರಿಸುವ ಯಂತ್ರವನ್ನು ಪರೀಕ್ಷಾರ್ಥವಾಗಿ ಬಳಸುತ್ತಿದ್ದಾರೆ. ಇದರಲ್ಲಿ ಆರು ಗಂಟೆಯಲ್ಲಿ 90ಕಿಲೋ ಹಲಸು ತುಂಡರಿಸಲು ಸಾಧ್ಯವಾಗುತ್ತಿದೆ. ಈ ಋತುವಿನಲ್ಲಿ ಐದು ಟನ್ ‘ರೆಡಿ ಟು ಕುಕ್’ ಹಲಸು ಉತ್ಪಾದಿಸುವ ಪ್ರಯತ್ನದಲ್ಲಿದ್ದಾರೆ. ಬೇರೆ ನಗರಗಳಲ್ಲೂ ಮಾರುಕಟ್ಟೆ ಮಾಡುವ ಯೋಜನೆಯೂ ಇದೆ.
ಇತ್ತ, ತಮಿಳುನಾಡಿನ ವೆಲ್ಲೂರಿನಲ್ಲಿರುವ ಸೆಲ್ವರಾಜನ್ ಹಲಸಿನ ಬೀಜದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಯಶಸ್ವಿಯಾಗಿದ್ದಾರೆ. ಮಾಲ್ಟ್, ಬೇಕರಿ ಉತ್ಪನ್ನಗಳ ತಯಾರಿಕೆಯ ಜೊತೆಗೆ, ಧಾನ್ಯಗಳ ಹಿಟ್ಟಿನ (ಮುಖ್ಯವಾಗಿ ಗೋಧಿ ಹಿಟ್ಟು) ಜೊತೆಯಾಗಿಯೂ ಹಲಸಿನ ಬೀಜದ ಹುಡಿಯನ್ನು ಬಳಸಲು ಸಾಧ್ಯ ಎಂಬುದನ್ನು ಕಂಡುಕೊಂಡಿದ್ದಾರೆ. ಗ್ಲುಟೇನ್ ರಹಿತ ಎಂಬ ಅಂಶ ಹಲಸಿನ ಬೀಜದ ಉಪಯೋಗವನ್ನು ಇನ್ನಷ್ಟು ಹೆಚ್ಚಿಸಬಲ್ಲದು ಎನ್ನುತ್ತಾರೆ ಸೆಲ್ವರಾಜನ್. ಉತ್ತಮ ಪ್ರತಿಕ್ರಿಯೆಯೂ ಸಿಗುತ್ತಿರುವುದು ಅವರನ್ನು ಹಲಸಿನ ಮೌಲ್ಯವರ್ಧನೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ.
ಕರ್ನಾಟಕ, ಕೇರಳ, ಮಹಾರಾಷ್ಟ್ರ - ಈ ಮೂರು ರಾಜ್ಯಗಳಲ್ಲಿ ಇಂತಹ ಹತ್ತಾರು ಪ್ರಯತ್ನಗಳು ಹೊಸ ವೇಗ ಪಡೆದುಕೊಳ್ಳುತ್ತಿದೆ. ಬೇಕರಿಗಳಲ್ಲಿಯೂ ಹಲಸಿನ ಬಳಕೆಯ ಪ್ರಯೋಗಗಳಾಗುತ್ತಿವೆ. ಕರ್ನಾಟಕ ಹಾಲು ಮಹಾಮಂಡಲ (ಕೆ.ಎಂ.ಎಫ್) ಹಲಸಿನ ಐಸ್‌ಕ್ರೀಮ್ ಮಾಡಲು ನಿರ್ಧರಿಸಿದೆ. ರೈತಗುಂಪುಗಳಿಗೆ ಇದೊಂದು ಉತ್ತಮ ಅವಕಾಶ. ‘ಬಹು ಬಳಕೆಯ ಸಾಧ್ಯತೆಯುಳ್ಳ ಹಲಸನ್ನು ಉದ್ಯಮದ ಅಗತ್ಯಕ್ಕೆ ತಕ್ಕಂತೆ ಪೂರೈಸಲು ಸಾಧ್ಯವಾದರೆ ಬೇಡಿಕೆ ಖಂಡಿತವಾಗಿಯೂ ಹೆಚ್ಚುತ್ತದೆ. ಹಲಸಿಗೆ ಆ ಸಾಮರ್ಥ್ಯವಿದೆ’ ಎನ್ನುತ್ತಾರೆ ಬೆಂಗಳೂರಿನ ಬಿಕೇಸ್ ಬೇಕರಿಯ ಬಿ.ಎಸ್. ಭಟ್.
ಕಷ್ಟವೆನಿಸಿರುವ ಹಲಸಿನ ಸಂಸ್ಕರಣೆ ಬೆಳೆಗಾರರಿಗೆ ಹೊಸ ಅವಕಾಶವನ್ನು ತೆರೆದಿಟ್ಟಿರುವುದಂತೂ ಸತ್ಯ. ತಮ್ಮ ಬೆಳೆಯನ್ನು, ತಾವೇ ಸಂಸ್ಕರಿಸಿ ಮಾರಾಟ ಮಾಡಲು ಸಾಧ್ಯವಾಗುವಂತೆ ಕನಿಷ್ಠ ತಂತ್ರಜ್ಞಾನದ ನೆರವು ಲಭ್ಯವಾದರೆ, ಹಲಸಿನ ಬಳಕೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಸದ್ಯ ಹಲಸು ರಾಸಾಯನಿಕ ರಹಿತ. ಉತ್ತಮ ಆರೋಗ್ಯಕ್ಕೆ ಪೂರಕ. ಎಳೆ ಹಲಸು, ತಿರುಳು ಹಲಸು, ಬಲಿತ ಹಲಸು, ಹಲಸಿನ ಹಣ್ಣು ಮತ್ತು ಬೀಜ - ಹೀಗೆ ಐದು ರೀತಿಗಳಲ್ಲ್ಲಿ ಬಳಸಬಹುದಾದ ಈ ಬೆಳೆ ಸ್ಥಳೀಯ ಆಹಾರ ಭದ್ರತೆಯನ್ನು ಸಾಕ್ಷಾತ್ಕರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಬಲ್ಲದು.
ಕೇರಳ ಮತ್ತು ಕರ್ನಾಟಕದಲ್ಲಿ ಹಲಸಿನ ಬೆಳೆ, ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳು ಆಗುತ್ತಿವೆ. ಹಲಸುಸ್ನೇಹಿಗಳೆಲ್ಲಾ ಜೊತೆಗೂಡುವ ಹಲಸು ಮೇಳಗಳು ಒಂದಷ್ಟು ಹೊಸ ಯೋಚನೆ, ಯೋಜನೆಗಳಿಗೆ ಅವಕಾಶ ಮಾಡಿಕೊಡುತ್ತವೆ. ಕಳೆದ ಐದಾರು ವರ್ಷಗಳಲ್ಲಿ ಸುಮಾರು 50 ಹಲಸು ಮೇಳಗಳು ವಿವಿಧೆಡೆಗಳಲ್ಲಿ ಆಯೋಜಿಸಲಾಗಿದೆ. ಇದರಿಂದ ಹಲಸಿನ ಕುರಿತ ಮಿಥ್ಯೆಗಳು ದೂರವಾಗುತ್ತಿವೆ. ಮನೆಯ ಮಟ್ಟಿಗಾದರೂ ವರ್ಷಪೂರ್ತಿ ಬರುವಂತೆ ಸಂಗ್ರಹಿಸಿ ಇಡುವ ವಿವಿಧ ವಿಧಾನಗಳನ್ನು ಜನರು ಅಳವಡಿಸಿಕೊಳ್ಳುತ್ತಿದ್ದಾರೆ.
ದಕ್ಷಿಣ ಕನ್ನಡದಲ್ಲಿ ರೈತರು ಉದ್ಯಮಗಳಿಗೆ ಹಲಸನ್ನು ಒದಗಿಸಲಾರಂಭಿಸಿದ್ದಾರೆ. ಉತ್ತರ ಕನ್ನಡದ ಕೃಷಿಕರು ಒಂದು ಹೆಜ್ಜೆ ಮುಂದೆ ಹೋಗಿ ಹಲಸಿನ ಹತ್ತಾರು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾರಂಭಿಸಿದ್ದಾರೆ. ಹಲಸು ಆಧರಿತ ಗೃಹೋದ್ಯಮ ಹಲವು ಕುಟುಂಬಗಳು ಆರ್ಥಿಕವಾಗಿ ನೆಲೆಯೂರಲು ಕಾರಣವಾಗಿದೆ. ಕೃಷಿಕರ ಮನೆಯ ಸಮಾರಂಭಗಳಲ್ಲೂ, ಹಲಸು ಬೆಳೆಯುವ ಊರುಗಳಲ್ಲೂ, ಹಲಸು ಮತ್ತೆ ಊಟದ ಮೇಜಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದೆ. ಪಂಚತಾರಾ ಹೋಟೆಲುಗಳಿಗೂ ಪ್ರವೇಶ ಪಡೆದು ಹೆಸರು ಗಳಿಸುತ್ತಿದೆ. ಕೇರಳ, ಕರ್ನಾಟಕಗಳ ಚಿಕ್ಕ ಪುಟ್ಟ ಪೇಟೆಗಳಲ್ಲೂ ಹಲಸು ಅಂಗಡಿಗಳಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಸತೊಡಗಿದೆ; ಮಾರಿಯೂ ಹೋಗುತ್ತಿದೆ.
‘ಹಲಸು ನಮಗೆ ಲಾಭ ತಂದಿದೆ ಎಂದು ಗಟ್ಟಿದನಿಯಲ್ಲಿ ಹೇಳಬಲ್ಲೆ’ ಎನ್ನುತ್ತಾರೆ ತೂಬುಗೆರೆ ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿ ರವಿಕುಮಾರ್. ಇಲ್ಲಿನ ಹಲಸು ತನ್ನ ರುಚಿ, ಬಣ್ಣ ಹಾಗೂ ಗುಣಮಟ್ಟದಿಂದಾಗಿ ಪ್ರಸಿದ್ಧ. ದಶಕದ ಹಿಂದೆ ಮಧ್ಯವರ್ತಿಗಳು ಕೇಳಿದ ಬೆಲೆಗೆ ಹಣ್ಣು ನೀಡಿ ಕೈ ತೊಳೆದುಕೊಳ್ಳುತ್ತಿದ್ದ ಈ ಪ್ರದೇಶದ ಬೆಳೆಗಾರರು ಇಂದು ಸಂಘಟಿತರಾಗಿದ್ದಾರೆ. ಉತ್ತಮ ತಳಿಗಳನ್ನು ಆಯ್ದು, ತಾವೇ ನೇರವಾಗಿ ಮಾರಾಟ ಮಾಡುತ್ತಿದ್ದಾರೆ.
ಎಲ್ಲೆಡೆಯೂ ಸಲ್ಲುವ ಹಲಸು
ಹಲಸು ಸುಲಭವಾಗಿ ಲಭ್ಯವಾದಾಗ ಹಣ್ಣಿನ ಕುರಿತ ಕೀಳರಿಮೆ ಕಡಿಮೆಯಾಗಿ, ತಲಾವಾರು ಬಳಕೆ ಹೆಚ್ಚಾಗಬಹುದು. ವಾತಾವರಣದ ಸಮತೋಲನ ಕಾಪಾಡುವ, ಆಹಾರ ಹಾಗೂ ವಾಣಿಜ್ಯಿಕವಾಗಿ ಮಹತ್ವವಿರುವ ಹಲಸಿಗೆ ಇರುವ ಇನ್ನೊಂದು ತೊಡರು ‘ಸೀಮಿತ ಅವಧಿಯ ಬೆಳೆ’ ಎಂಬ ಹಣೆಪಟ್ಟಿ. ಹಲಸಿನ ವಿಚಾರಗಳು ವಿನಿಮಯವಾಗುತ್ತಿದ್ದಂತೆ, ಅಕಾಲಿಕ ಹಲಸು, ಸರ್ವಋತು ಹಲಸಿನ ತಳಿಗಳು ಬೆಳಕಿಗೆ ಬರುತ್ತಿದೆ. ಹಲಸಿನ ಬಳಕೆ ಹೆಚ್ಚಲು ಮೌಲ್ಯವರ್ಧನೆ ಹೇಗೆ ಸಹಕಾರಿಯೋ, ಹಲಸಿನ ಲಭ್ಯತೆ ನಿರಂತರವಾಗಿರುವುದೂ ಅಷ್ಟೇ ಮುಖ್ಯ. ಹೀಗಾಗಿ, ಎಲ್ಲಾ ಕಾಲದಲ್ಲಿಯೂ ಫಸಲು ನೀಡುವ ತಳಿಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವುದು ಮುಖ್ಯ. ಅಕಾಲಿಕ ಹಲಸು ಮೇಳಗಳನ್ನೂ ಈ ನಿಟ್ಟಿನಲ್ಲಿ ಆಯೋಜಿಸಬಹುದು.
ಜನರು ರಾಸಾಯನಿಕರಹಿತ ಆಹಾರದೆಡೆ ಮುಗಿ ಬೀಳುತ್ತಿರುವ ಸದ್ಯದ ಸನ್ನಿವೇಶದಲ್ಲಿಯೂ ‘ಸಂಪೂರ್ಣ ಸಾವಯವ’ ಹಲಸು ಮರದಡಿಯಲ್ಲಿ ಕೊಳೆತುಹೋಗುತ್ತಿರುವುದು ವಿಪರ್ಯಾಸ. ಒಂದು ಅಂದಾಜಿನ ಪ್ರಕಾರ ಶೇಕಡಾ 70ರಷ್ಟು ಹಲಸು ಹಾಳಾಗಿ ಹೋಗುತ್ತಿದೆ. ವ್ಯವಸ್ಥಿತ ಕೃಷಿ ಹಾಗೂ ಮಾರುಕಟ್ಟೆಯ ಕೊರತೆಯೇ ಇದಕ್ಕೆ ಕಾರಣ. ಕಳೆದೊಂದು ದಶಕದಲ್ಲಿ ರೈತರು ಎಚ್ಚೆತ್ತುಕೊಂಡಿದ್ದಾರೆ.
‘ಹಲಸು ಕೇಳದೇ ಹಣ್ಣು ಕೊಡುವ ಮರ; ಬೀಜ ಬಿಸಾಕಿದರೆ ಸಾಕು ಬೇರೆ ಯಾವ ಆರೈಕೆಯೂ ಬೇಡ’ ಎನ್ನುವ ಮನಸ್ಥಿತಿ ಬದಲಾಗುತ್ತಿದೆ. ಹಲಸಿನ ತಳಿಗಳು, ಹಣ್ಣಿನ ಗುಣದ ಕುರಿತು ಅರಿವು ಮೂಡುತ್ತಿದೆ. ಗಿಡ ಕೊಂಡು ನೆಡಲಾರಂಭಿಸಿದ್ದಾರೆ. ‘ಸ್ಥಳೀಯ ಸಂಪನ್ಮೂಲ ಹಾಗೂ ಜ್ಞಾನವನ್ನು ಉಪಯೋಗಿಸುವಂತಹ ಹಲಸು ಕೇಂದ್ರಿತ ಸಮುದಾಯ ಗಳನ್ನು ರೂಪಿಸಬೇಕು. ಆಗ ಬಳಕೆಯ ಪ್ರಮಾಣ ಹೆಚ್ಚು ತ್ತದೆ’ ಎನ್ನುತ್ತಾರೆ ಹಲಸಿನ ಮೌಲ್ಯವರ್ಧನೆ ತರಬೇತಿಗಳನ್ನು ಆಯೋಜಿಸುವ ಸಕ್ಕರಾಯಪಟ್ಟಣದ ಶಿವಣ್ಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.