ಮಂಗಗಳ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕದ ಹಣ್ಣುಗಳ ಬೆಳೆಗಾರರು ಇಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಬಾಳೆ ಹಣ್ಣಿನ ತೋಟ ಮಾಡುವವರಿಗಂತೂ ಇದರ ಉಪಟಳ ಅಷ್ಟಿಷ್ಟಲ್ಲ.
ಏನೇನೋ ಉಪಾಯಗಳನ್ನು ಮಾಡಿ ಸೋತವರು ಅದೆಷ್ಟೋ ಮಂದಿ. ಪಟಾಕಿ ಸಿಡಿಸಿ, ಮದ್ದುಗುಂಡು ಬಳಸಿ, ಬಾಳೆ ಹಣ್ಣುಗಳಲ್ಲಿ ವಿಷ ಬೆರೆಸಿ... ಹೀಗೆ ಏನೆ ಮಾಡಿದರೂ ಅವೆಲ್ಲವೂ ತಾತ್ಕಾಲಿಕ ಪರಿಹಾರಗಳಷ್ಟೇ. ಕೆಲವು ದಿನಗಳಲ್ಲೇ ಮತ್ತೆ ಅವು ಪ್ರತ್ಯಕ್ಷ. ಆದರೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಹಾಗೆ ಬಾಳೆ ಹಣ್ಣನ್ನು ಬಳಸಿಯೇ ಬಾಳೆ ತೋಟಕ್ಕೆ ಮಂಗನ ಹಾವಳಿ ತಪ್ಪಿಸುತ್ತಿದ್ದಾರೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕೆಲವು ಬಾಳೆ ಬೆಳೆಗಾರರು.
ಇದಕ್ಕಾಗಿ ಅವರು ಆಯ್ದುಕೊಂಡಿರುವುದು ‘ಪೂವನ್’ ತಳಿಯ ತಮಿಳುನಾಡು ಮೂಲದ ಬಾಳೆ. ಇದನ್ನು ಸುಗಂಧಿ ಎಂದೂ ಕರೆಯಲಾಗುತ್ತದೆ. ಈ ತಳಿಯ ಗಿಡವನ್ನು ತೋಟದ ಅಂಚುಗಳಲ್ಲಿ ಹಾಕಬೇಕು. ಏಕೆಂದರೆ ತೋಟಕ್ಕೆ ಮಂಗಗಳು ನುಗ್ಗುವಾಗ ಅದರ ಲಕ್ಷ್ಯ ಈ ಬಾಳೆಹಣ್ಣಿನೆಡೆ ಹೋಗುತ್ತದೆ. ಬಾಳೆ ನೋಡಿ ಕೋತಿಗಳೆಂದಾದರೂ ಸುಮ್ಮನೆ ಬಿಟ್ಟಾವೇ? ಅದರ ಸುಗಂಧಕ್ಕೇ ಮಾರು ಹೋಗುವ ಕೋತಿಗಳು ಅದಕ್ಕೆ ಬಾಯಿ ಹಾಕುತ್ತವೆ. ತಿಂದು ತೇಗುತ್ತವೆ ಕೂಡ. ಆದರೆ ಅದಕ್ಕೆ ಏನಾಗುತ್ತದೋ ಗೊತ್ತಿಲ್ಲ, ಅಲ್ಲಿಂದ ಕಾಲುಕಿತ್ತರೆ ಮತ್ತೆ ಬರುವುದಿಲ್ಲ!
ಸುಗಂಧಿ ಬಗ್ಗೆ ಒಂದಿಷ್ಟು...
ಇವು ಮಂಗಗಳಿಗೆ ಬಾಧಕ ಎಂದಾಯಿತು. ಹಾಗೆಂದು ನಾವು ಇದನ್ನು ತಿನ್ನಬಾರದೆಂದು ಇಲ್ಲ. ಈ ಬಾಳೆಗೂ ಭಾರಿ ಬೇಡಿಕೆ ಇದೆ. ಗೊನೆಯೊಂದಕ್ಕೆ ನೂರು ರೂಪಾಯಿಗಳವರೆಗೂ ಸಿಗುತ್ತವೆ. ಪ್ರತಿ ಬಾಳೆ ಗಿಡ ಸುಮಾರು 220 ಕಾಯಿಗಳನ್ನು ಬಿಡುತ್ತದೆ. ಕಾಯಿಗಳು ಗಾತ್ರದಲ್ಲಿ ಚಿಕ್ಕದಿರುತ್ತವೆ. ಹುಳಿ ಸಿಹಿ ಮಿಶ್ರಿತವಾಗಿರುವ ಹಣ್ಣು. ಒಳಗೆ ಕಲ್ಲಿನಷ್ಟು ಗಟ್ಟಿಯ ಚಿಕ್ಕ ಚಿಕ್ಕ ಬೀಜಗಳು ಇರುತ್ತವೆ.
ಚೆನ್ನಾಗಿ ಕಳಿತಿರುವ ಹಣ್ಣು ತಿಂದೀರೋ ಬಚಾವಾದಂತೆ. ಏಕೆಂದರೆ ಹಣ್ಣಾದಾಗ ಬೀಜವೂ ಕಳಿಯುವ ಕಾರಣ ಅದು ಹಲ್ಲಿಗೆ ಸಿಗುವುದಿಲ್ಲ. ಇದು ಹಣ್ಣಾಗದೇ ಇರುವಾಗ ಅಂದರೆ ಸ್ವಲ್ಪ ಕಾಯಿ ಇರುವಾಗಲೇ ತಿಂದರೆ ಬೀಜ ಹಲ್ಲಿಗೆ ಸಿಕ್ಕಿ ತೊಂದರೆಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಇದನ್ನು ಏಕಾಏಕಿ ನುಂಗಿದರೆ ಬೇಧಿಯೂ ಕಟ್ಟಿಟ್ಟ ಬುತ್ತಿ ಎಂದು ಆ ಭಾಗದ ಜನರು ಹೇಳುತ್ತಾರೆ. ಈ ಗಿಡಕ್ಕೆ ಎಲೆ ಚುಕ್ಕೆ ರೋಗ ಮತ್ತು ಪನಾಮಾ ಸೊರಗು ರೋಗಗಳೂ ಬಾಧಿಸುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.