ADVERTISEMENT

ವಾಯುವಿಳಂಗ ವಿಷ: ಜಾನುವಾರು ನಾಶ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಹೊಸ ಆವಿಷ್ಕಾರಗಳು ಹಲವಾರು ವರ್ಷಗಳನ್ನೇ ತೆಗೆದುಕೊಳ್ಳುತ್ತವೆ. ಉದಾಹರಣೆಗೆ ವಿದ್ಯುತ್ ಬಲ್ಬ್ ಕಂಡು ಹಿಡಿಯಲು ದಶಕಗಳೇ ಬೇಕಾದವು. ಕಾರಣ `ವಾಯುವಿಳಂಗ~ ಗಿಡದ ವಿಷ ಬಾಧೆಯ ಬಗ್ಗೆ ಲೇಖನ ಬರೆಯುವ ಮುನ್ನ ಅದನ್ನು ಪತ್ತೆ ಮಾಡಲು ಪಟ್ಟ ಪಡಿಪಾಟಲನ್ನು ಓದುಗರಿಗೆ ತಿಳಿಸಲೇ ಬೇಕು ಅನಿಸುತ್ತಿದೆ. 

ನನಗೆ ತಿಳಿವಳಿಕೆ ಬಂದಾಗಿನಿಂದ ನಮ್ಮೂರು ಯಲ್ಲಾಪುರದಲ್ಲಿ  `ಮುಕಳಿ ಬೀಗುವ ಕಾಯಿಲೆ~ ಎಂಬ ಒಂದು ವಿಚಿತ್ರ ಕಾಯಿಲೆ ಎಮ್ಮೆ ಮತ್ತು ದನಗಳಲ್ಲಿ ಬರುತ್ತಿತ್ತು. ಈ ರೋಗ ಬಂದ ಜಾನುವಾರಿನ ಕತೆ ಮುಗೀತು ಎಂದೇ ಅರ್ಥ.
 
ನಮ್ಮಪ್ಪ ಇದಕ್ಕೆ ಹಲವು ನಾಟಿ ಔಷಧಿ ಮತ್ತು ಪಶು ವೈದ್ಯರಿಂದ ಚಿಕಿತ್ಸೆ ಮಾಡಿಸಿದರೂ ಸಹ ಉಳಿಯುವ ಸಾಧ್ಯತೆ ತುಂಬಾ ಕಡಿಮೆ ಇತ್ತು ಎಂಬುದು ನನ್ನ ಮಸುಕು ನೆನಪು.

ನಾನು ಯಲ್ಲಾಪುರದಲ್ಲಿ ಪಿಯು ಮುಗಿಸಿ ಬೀದರಿನ ಪಶುವೈದ್ಯಕೀಯ ಕಾಲೇಜಿನಲ್ಲಿ ಬಿವಿಎಸ್‌ಸಿ ಸೇರಿದ್ದು ಒಂದು ಆಕಸ್ಮಿಕ. ನಂತರ ಔಷಧ ಶಾಸ್ತ್ರ ಮತ್ತು ವಿಷಶಾಸ್ತ್ರದಲ್ಲಿ ಉತ್ತರ ಪ್ರದೇಶದ ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಸ್ನಾತಕೋತ್ತರ ಶಿಕ್ಷಣ ಮುಗಿಸಿ ನೌಕರಿಗೆ ಸೇರಿದ್ದು ತಾಳಗುಪ್ಪದ ಪಶು ಚಿಕಿತ್ಸಾಲಯದಲ್ಲಿ.

ಇಲ್ಲಿಯೇ ನನ್ನ ಕಾಯಕ ಪ್ರಾರಂಭ.

ಮಲೆನಾಡು ಭಾಗದಲ್ಲಿ ಇರುವ ವಿವಿಧ ವಿಚಿತ್ರ ಕಾಯಿಲೆಗಳಲ್ಲಿ ಈ ಹಿಂಭಾಗ ಬೀಗುವ ಕಾಯಿಲೆಯೂ ಒಂದಾಗಿತ್ತು. ಅಲ್ಲೊಂದು ಇಲ್ಲೊಂದು ರೋಗಗಳು ಬರುವುದು, ಯಾವುದೋ ಚಿಕಿತ್ಸೆಗೆ ಬದುಕಿದರೆ ನಸೀಬು; ಇಲ್ಲದಿದ್ದರೆ ಇಲ್ಲ.

ನಂತರ ನಾನು ನಿರ್ಧಾರ ಮಾಡಿದ್ದು `ನಮ್ಮ ಭಾಗದ ಕಾಯಿಲೆಗಳಿಗೆ ಅಮೆರಿಕದ ಪುಸ್ತಕಗಳನ್ನು ಓದಿದ ನಾವು ಚಿಕಿತ್ಸೆ ನೀಡಲು ಕಷ್ಟ. ಇದಕ್ಕೆ ಪರಿಹಾರ ನಾವೇ ಕಂಡು ಹಿಡಿಯಬೇಕು~ ಅನ್ನುವುದು. ಅದಕ್ಕೆ ಪ್ರಥಮವಾಗಿ ಮಾಡಿದ ಪ್ರಯತ್ನ ಬಸರಿಸೊಪ್ಪಿನ ವಿಷ ಬಾಧೆಯ ಬಗ್ಗೆ.
 
ಕೆಲವು ಕರುಗಳಿಗೆ ಅದರ ಸೊಪ್ಪು ತಿನ್ನಿಸಿ ಕಾಯಿಲೆ ಬರುವಂತೆ ಮಾಡಿ ನಂತರ ಚಿಕಿತ್ಸೆ ಕಂಡು ಹಿಡಿದಿದ್ದು ಒಂದು ಯಶೋಗಾಥೆ. ಇದರಿಂದ ಸಾವಿರಾರು ಜಾನುವಾರುಗಳ ಮರಣ ತಪ್ಪಿಸಿದ ತೃಪ್ತಿ ಇದೆ. 

ನಂತರ ನನಗೆ ಸದಾ `ಜಾನುವಾರುಗಳ ಹಿಂಭಾಗದ ಕಾಯಿಲೆ~ಯದೇ ಚಿಂತೆ. ಇದಕ್ಕೆ ಯಾವುದೋ ವಿಷ ಬಾಧೆ ಕಾರಣ ಎಂದು ಗೊತ್ತಾದರೂ ಅದನ್ನು ಪತ್ತೆ ಮಾಡುವುದು ಕಷ್ಟವಾಗಿತ್ತು. ಏಕೆಂದರೆ ಸಾವಿರಾರು ಸಸ್ಯ ಸಂಕುಲದ ಮಧ್ಯ ಮೇಯಲು ಹೋಗುವ ಮಲೆನಾಡು ಗಿಡ್ಡ ಜಾನುವಾರುಗಳು ಯಾವ ಗಿಡ ಮೇಯುತ್ತವೆ ಎಂದು ಹೇಳಲಾರದ ಪರಿಸ್ಥಿತಿಯಿತ್ತು.

ನಂತರ  ನಾನು ಬೆಂಗಳೂರಿನ ಪಶು ವೈದ್ಯ ಕಾಲೇಜಲ್ಲಿ ಡಾಕ್ಟರೇಟ್ ಮುಗಿಸಿ ಅಲ್ಲೆೀ ಪ್ರಾಧ್ಯಾಪಕನಾಗಿ ಸೇರಿ  ಕರ್ನಾಟಕದ ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನೆ ಮಾಡುವಾಗ ಭಟ್ಕಳ, ಸಿದ್ದಾಪುರ, ಶಿರಸಿ ಮತ್ತು ಮುಖ್ಯವಾಗಿ ಯಲ್ಲಾಪುರದ ವಿವಿಧ ಭಾಗಗಳಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಲೇ ಇತ್ತು.
 
ಈ ಮಧ್ಯೆ ಮೈಸೂರಿನ ಇಸ್ಕಾನ್‌ನವರ ಜಾನುವಾರುಗಳಿಗೂ ಈ ಕಾಯಿಲೆ ಬಂದಾಗ, ಮುಳ್ಳಿಲ್ಲದ ನಾಚಿಕೆ ಗಿಡದ ವಿಷ ಬಾಧೆ ಇದಕ್ಕೆ ಕಾರಣ ಎಂದು ಪತ್ತೆ ಹಚ್ಚಿದೆವು. ಆದರೆ ಈ ಸಸ್ಯ ದಾವಣಗೆರೆ ಜಿಲ್ಲೆ ಚನ್ನಗಿರಿ ಸುತ್ತಮುತ್ತ ಬಿಟ್ಟರೆ ಉಳಿದ ಕಡೆ ತೀರಾ ವಿರಳ.

ಆದರೂ ರೋಗ ಮಾತ್ರ ಬರುತ್ತಲೇ ಇತ್ತು. 2006 ನೇ ಸಾಲಿನಲ್ಲಿ ಯಲ್ಲಾಪುರದಲ್ಲಿ ಈ ರೋಗ ಬಹಳ ಜಾನುವಾರುಗಳಲ್ಲಿ ಕಾಣಿಸಿಕೊಂಡಿತ್ತು. ಆಗ ಅಲ್ಲೆೀ ಮೊಕ್ಕಾಂ ಹೂಡಿ ಜಾನುವಾರುಗಳು ಮೇಯುವ ಜಾಗ ನೋಡಿ ಅಂದಾಜಿಗೆ ಯಾವ ಗಿಡದ ವಿಷ ಬಾಧೆಯಿರಬಹುದು ಎಂಬ ಬಗ್ಗೆ ತಲೆ ಕೆಡಿಸಿಕೊಂಡೆ.
 
ಜಾನುವಾರು ಆಸ್ಪತ್ರೆಯಲ್ಲಿ ಕೆಲವು ಕರುಗಳನ್ನು ಕೂಡಿ ಹಾಕಿ ಅವುಗಳಿಗೆ ಆಗ ಹೇರಳವಾಗಿ ಸಿಗುತ್ತಿದ್ದ ಕಣಗಲ ಹಣ್ಣು, ಕೌಲು ಕಾಯಿ, ಬಿದಿರು ಸೊಪ್ಪು ಇತ್ಯಾದಿ ತಿನ್ನಿಸಿ ನೋಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂದರೆ ಇವುಗಳಿಂದ ತೊಂದರೆ ಇಲ್ಲ ಎಂಬುದು ಖಚಿತವಾಯ್ತು.

ಮರು ವರ್ಷ ಮತ್ತೆ ಅದೇ ರಾಗ. ಕಿರವತ್ತಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಮತ್ತೆ ಕಾಯಿಲೆ ಬಂದಿತ್ತು. ನಾನು ತೀರಾ ಆಸ್ತಿಕನಲ್ಲದಿದ್ದರೂ ನಾಸ್ತಿಕನಲ್ಲ. ಏಕೋ ಈ ಬಾರಿ ಈ ಕಾಯಿಲೆಯ ಪತ್ತೆ ಮಾಡಲೇಬೇಕೆಂದು ಅನಿಸಿತು.
 
ಶಿರಸಿಯಲ್ಲಿ ಇಳಿದು ಮಾರಿಕಾಂಬಾ ದೇವಸ್ಥಾನಕ್ಕೆ ಹೋಗಿ ದೇವಿಯಲ್ಲಿ ಈ ಸಾರಿಯಾದರೂ ಸಹ ಈ ರೋಗದ ಕಾರಣ ತಿಳಿಯಲಿ ಎಂದು ಹರಸಿಕೊಂಡೆ. ನಂತರ ಯಲ್ಲಾಪುರಕ್ಕೆ ಹೋಗಿ ತಪಾಸಣೆ ಮಾಡುವಾಗ ಗೊತ್ತಾಗಿದ್ದು ನೂರಾರು ವರ್ಷಗಳಿಂದ ನಿಗೂಢವಾಗಿದ್ದ `ಮುಕಳಿ ಬೀಗುವ ರೋಗಕ್ಕೆ~ ವಾಯುವಿಳಂಗ ಗಿಡ ಕಾರಣ ಅಂತ.
 
ಇದೂ ಸಹ ಅಕಸ್ಮಾತ್ ಆಗಿ. ಕಿರವತ್ತಿಯಲ್ಲಿ ಗೌಳಿ ಜನಾಂಗದ ಹುಡುಗರು ಚುರುಕು. ಅವರ ಜೊತೆ ಹೋದಾಗ ಚಿಗುರಿದ ವಾಯುವಿಳಂಗ ಗಿಡದ ಭಾಗಗಳನ್ನು ಆಯ್ದುಕೊಂಡು ಜಾನುವಾರುಗಳು ತಿಂದು ಅವುಗಳ ಮೂತ್ರಪಿಂಡ ಹಾಳಾಗಿ ರೋಗ ಬಂದಿದೆ ಎಂಬುದು ಖಚಿತವಾಯ್ತು. ಒಟ್ಟಿನಲ್ಲಿ ಬಹುಶಃ ದೀರ್ಘ ಕಾಲದಿಂದ ನಿಗೂಢವಾಗಿದ್ದ ಕಾಯಿಲೆಯ ಕಾರಣ ಪತ್ತೆಯಾಗಿತ್ತು.

ಮುಂದೆ  ಪ್ರಯೋಗಗಳು ಸಿದ್ದಾಪುರ, ಯಲ್ಲಾಪುರ, ಚನ್ನಗಿರಿ, ರಿಪ್ಪನ್‌ಪೇಟೆ ಮುಂತಾದ ಕಡೆಯ ಪಶುವೈದ್ಯರ ಸಹಕಾರದೊಂದಿಗೆ ನಡೆದವು. ಒಟ್ಟಿನಲ್ಲಿ ಔಷಧಿ ಗಿಡವಾಗಿ ಬಳಸುವ ವಾಯುವಿಳಂಗ ಜಾಸ್ತಿ ತಿಂದರೆ ಮೂತ್ರ ಪಿಂಡಗಳನ್ನು ಹಾಳುಗೆಡವಿ ಹಿಂಭಾಗದಲ್ಲಿ ಊತ ಬರುವಂತೆ ಮಾಡುತ್ತದೆ ಎನ್ನುವುದು ಖಚಿತವಾಯ್ತು.

ಏನಿದು ಗಿಡ
ವಾಯುವಿಳಂಗ (ಚಿತ್ರ ನೋಡಿ)  ಮರಗಳ ಮಧ್ಯೆ ಹಾಗೂ ಸ್ವಲ್ಪ ತೇವಾಂಶ ಇರುವ ಕಡೆ ಹುಲುಸಾಗಿ ಬೆಳೆಯುತ್ತದೆ. ಅಕಸ್ಮಾತ್ತಾಗಿ ಜಾನುವಾರುಗಳಿಗೆ ಗಿಡದ ಸೊಪ್ಪನ್ನು ತಿನ್ನಿಸಿದಾಗ ವಿಷವಾಗಿ ಪರಿಣಿಮಿಸಿ ಸಾವನ್ನಪ್ಪಿದ ಘಟನೆ ಸಾಕಷ್ಟಿದೆ. ಪ್ರಾಯೋಗಿಕವಾಗಿ ಕರುಗಳಿಗೆ ಈ ಸೊಪ್ಪನ್ನು ತಿನ್ನಿಸಿ ಇದರ ವಿಷಬಾಧೆ ಹಾಗೂ ಚಿಕಿತ್ಸೆಯ ಕುರಿತು ಸಂಶೋಧನೆ ನಡೆಸಲಾಗಿದೆ.

ಜಾನುವಾರುಗಳು  ಬೆಟ್ಟದಲ್ಲಿ ಹುಲುಸಾಗಿ ಬೆಳೆಯುವ ವಾಯುವಿಳಂಗ ಸೊಪ್ಪನ್ನು ಯಥೇಚ್ಛವಾಗಿ ತಿಂದಾಗ ಮಾತ್ರ ರೋಗ ಲಕ್ಷಣಗಳು ಕಂಡು ಬರುತ್ತವೆ. ಎಪ್ರಿಲ್‌ನಿಂದ ಜೂನ್ ವರೆಗೆ ಸೊಪ್ಪು ಹುಲುಸಾಗಿ ಚಿಗುರುತ್ತಿದ್ದು, ಆಗ ಜಾನುವಾರುಗಳು ಇದನ್ನು ತಿಂದು ವಿಷ ಬಾಧೆಗೆ ಒಳಪಡುತ್ತವೆ.

 ಈ ಗಿಡದ ವೈಜ್ಞಾನಿಕ ವಿಶ್ಲೇಷಣೆಯಿಂದ ಇದರಲ್ಲಿ ಸೈನೈಡ್, ನೈಟ್ರೇಟ್, ಅಲ್ಕಲೋಯ್ಡ್ಸ, ಫ್ಲಾವೋನಾಯ್ಡ್ಸ, ಟರ್ಪೀನ್ಸ್, ಸ್ಟಿರಾಯ್ಡ್ಸ ಇತ್ಯಾದಿ ವಿಷಕಾರಿ ರಾಸಾಯನಿಕಗಳ ಸಂಕೀರ್ಣವೇ ಇದೆ ಎಂದು ತಿಳಿದು ಬಂದಿದೆ.

ರೋಗ ಲಕ್ಷಣ
ಸೊಪ್ಪು ತಿಂದ ಒಂದೆರಡು ದಿನ ಯಾವುದೇ ರೋಗ ಲಕ್ಷಣ ಕಾಣಿಸದು. ಜಾನುವಾರು ಆರೋಗ್ಯವಾಗಿದ್ದಂತೆ ಕಂಡು ಬರುವುದು. ಕ್ರಮೇಣ ಮೇವು ಚೀಲದ ನಿಷ್ಕ್ರಿಯತೆ ಪ್ರಾರಂಭವಾಗಿ ಜಾನುವಾರು ಮೇವು ತಿನ್ನುವುದನ್ನು ಬಿಡುತ್ತದೆ. ನಂತರ  ಮಲಬದ್ಧತೆಯ ಲಕ್ಷಣಗಳು ಕಂಡು ಬರುತ್ತವೆ.

ರೋಗದ ಪ್ರಾರಂಭಿಕ ಲಕ್ಷಣಗಳೆಂದರೆ ಒದ್ದಾಡುವುದು, ಉಸಿರಾಟದ ತೊಂದರೆ, ಜೊಲ್ಲು ಸುರಿಸುವುದು, ಕಣ್ಣಲ್ಲಿ ನೀರು ಬರುವುದು ಮತ್ತು ಶರೀರದ ತಾಪಮಾನ ಕಡಿಮೆಯಾಗುವುದು ಇತ್ಯಾದಿ. ಈ ಹಂತದಲ್ಲಿ ಜಾನುವಾರು ಆಹಾರ ಮತ್ತು ನೀರು ಸೇವನೆಯನ್ನು ನಿಲ್ಲಿಸುತ್ತದೆ.

ಸೊಪ್ಪನ್ನು ತಿಂದ 5-6 ದಿನಗಳ ನಂತರ ಮಲಬದ್ಧತೆ ಜಾಸ್ತಿಯಾಗುತ್ತದೆ ಮತ್ತು ಜಾನುವಾರು ಏಳಲು ತುಂಬಾ ಕಷ್ಟಪಡುತ್ತದೆ. ಈ ವಿಷಬಾಧೆಯ ಮುಖ್ಯ ಲಕ್ಷಣವೆಂದರೆ ಜಾನುವಾರಿನ ಹಿಂಭಾಗದಲ್ಲಿ ಅದರಲ್ಲೂ ಗುದದ್ವಾರದ ಸುತ್ತ ಮುತ್ತ ಮತ್ತು ಕೆಳ ಭಾಗದಲ್ಲಿ ಊತ ಪ್ರಾರಂಭವಾಗುವುದು.

ಎಮ್ಮೆ ಹಾಗೂ ಆಕಳುಗಳಲ್ಲಿ ಯೋನಿಯ ಸುತ್ತ ಗಣನೀಯ ಪ್ರಮಾಣದಲ್ಲಿ ಊತ ಕಂಡು ಬರುತ್ತದೆ. ಗಂಡು ಜಾನುವಾರುಗಳಲ್ಲಿ ವೃಷಣದ ಸುತ್ತ ಊತ ಕಂಡು ಬರುತ್ತದೆ. ಸಗಣಿ ಅತ್ಯಂತ ಘಟ್ಟಿಯಾಗಿ ಪ್ಲಾಸ್ಟಿಕ್‌ನಲ್ಲಿ ಸುತ್ತಿದಂತಿರುತ್ತದೆ. ರೋಗಕ್ಕೆ ತುತ್ತಾದ ಜಾನುವಾರುಗಳು 7-10 ದಿನಗಳಲ್ಲಿ ಸಾವನ್ನಪ್ಪುತ್ತವೆ.

ಪ್ರಾಯೋಗಿಕವಾಗಿ ಜಾನುವಾರುಗಳಿಗೆ ಈ ಸೊಪ್ಪನ್ನು ತಿನ್ನಿಸಿ ಅಭ್ಯಸಿಸಿದಾಗ ಮೇಲ್ಕಾಣಿಸಿದ ಎಲ್ಲಾ ಲಕ್ಷಣಗಳು ಕ್ರಮವಾಗಿ ಕಂಡು ಬಂದಿವೆ. ವಿಷಬಾಧೆಯಿಂದ ಸತ್ತ ಜಾನುವಾರಿನ ಮರಣೋತ್ತರ ಪರೀಕ್ಷೆಯಿಂದ ಅದರ ಮೂತ್ರ ಪಿಂಡಗಳು ಹಾಳಾಗಿರುವುದು ಕಂಡು ಬಂದಿದೆ.
 
ಸಾಮಾನ್ಯವಾಗಿ  200 ಕಿಲೋ ತೂಕದ ಜಾನುವಾರು 2-3 ಕಿಲೊ ಸೊಪ್ಪನ್ನು ತಿಂದಾಗ ತೀವ್ರತರದ ರೋಗ ಲಕ್ಷಣಗಳು ಕಂಡು ಬರುತ್ತವೆ. ಇದಕ್ಕಿಂತ ಕಡಿಮೆ ತಿಂದಾಗ ಅಲ್ಪ ಸ್ವಲ್ಪ ಪ್ರಮಾಣದ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಪಶುವೈದ್ಯರಿಂದ ಚಿಕಿತ್ಸೆ ನೀಡಿದರೆ ಜಾನುವಾರು ಚೇತರಿಸಿ ಕೊಳ್ಳುವ ಸಾಧ್ಯತೆ ಇದೆ. ವಿಷಬಾಧೆಯ ಪ್ರಾರಂಭಿಕ ಹಂತದಲ್ಲಿ ಮಾತ್ರ ಚಿಕಿತ್ಸೆ ಪರಿಣಾಮಕಾರಿಯಾಗುತ್ತದೆ. ಇದಕ್ಕೆ ನಿಖರವಾದ ಔಷಧ ಕಂಡು ಹಿಡಿಯಲು ಸಂಶೋಧನೆ ಮುಂದುವರೆದಿದೆ.
 
ಆದರೆ ಈ ಗಿಡದ ಸೊಪ್ಪನ್ನು ತಿಂದಾಗ ಮೂತ್ರ ಪಿಂಡಗಳು ಹಾನಿಯಾಗುತ್ತಿವೆ. ಮನುಷ್ಯನಲ್ಲೆೀ ಇದಕ್ಕೆ ಡಯಾಲಿಸಿಸ್ ಮತ್ತು ಮೂತ್ರ ಪಿಂಡದ ವರ್ಗಾವಣೆಯಂತ ವಿಧಾನಗಳಿದ್ದು ಪ್ರಾಣಿಗಳಲ್ಲಿ ಇದನ್ನು ಅಳವಡಿಸಿಕೊಳ್ಳುವ ದಿಸೆಯಲ್ಲಿ ಪ್ರಯೋಗ ಮಾಡಲಾಗುತ್ತಿದೆ.

ಮುನ್ನೆಚ್ಚರಿಕೆ
ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು  ಹಾಸನ ಇತ್ಯಾದಿ ಕಡೆ ಈ ಗಿಡವು ಹೇರಳವಾಗಿ ಕಾಡಿನಲ್ಲಿ ಲಭ್ಯವಿದ್ದು ಮಾರ್ಚ್‌ನಿಂದ  ಜೂನ್ ತಿಂಗಳುಗಳಲ್ಲಿ ಸೊಗಸಾಗಿ ಚಿಗುರಿಕೊಳ್ಳುತ್ತದೆ.
 
ಈ ಸಸ್ಯವನ್ನು ಜಾನುವಾರು ತಿನ್ನದಂತೆ ರೈತರು ಎಚ್ಚರಿಕೆ ವಹಿಸುವುದು ಒಳ್ಳೆಯದು. ಇದೇ ರೀತಿ ರೋಗವು ಮುಳ್ಳಿರುವ ಮತ್ತು ಮುಳ್ಳಿರದ ನಾಚಿಕೆ ಗಿಡವನ್ನು ಅತಿಯಾಗಿ ಜಾನುವಾರು ತಿಂದಾಗ ಬರುವುದನ್ನೂ ಸಹ ಗಮನಿಸಲಾಗಿದೆ. ಬೇರೆ ಸಸ್ಯಗಳೂ ಸಹ ಇದೇ ರೀತಿಯ ರೋಗಲಕ್ಷಣಗಳನ್ನು ಉಂಟು ಮಾಡುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು.

ಈ ಹಿಂಭಾಗ ಬೀಗುವ ಕಾಯಿಲೆಯನ್ನು ಹಲವಾರು ಸಸ್ಯಗಳು ಉಂಟು ಮಾಡುತ್ತವೆ. ಈ ಕುರಿತು ರೈತರು ಅಥವಾ ಪಶುವೈದ್ಯರು ಮಾಹಿತಿ ನೀಡಿದಲ್ಲಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಕಾರಣ ಪತ್ತೆ ಮಾಡಲು ಪ್ರಯತ್ನಿಸಲಾಗುವುದು. ಜಾನುವಾರಿನಲ್ಲಿ ವಾಯುವಿಳಂಗ ಗಿಡದ ವಿಷಬಾಧೆಯ ಬಗ್ಗೆ ರೈತರಲ್ಲಿ ಸೂಕ್ತ ಅರಿವು ಮೂಡಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಅದೇ ಈ ಲೇಖನದ ಉದ್ದೇಶ.

ತುರ್ತು ಚಿಕಿತ್ಸೆ
ಪ್ರಥಮ ಚಿಕಿತ್ಸೆಯಾಗಿ ರೈತರು ಹಿಂಭಾಗ ಬೀಗಿದಾಗ ಅದನ್ನು ಒಂದು ಒದ್ದೆ ಬಟ್ಟೆಯಲ್ಲಿ ಸುತ್ತಿ ನಿಧಾನವಾಗಿ ಹಿಂಡುತ್ತಾ ಊತವನ್ನು ಕಡಿಮೆ ಮಾಡಬೇಕು. ಕಾಗೆ, ಹಕ್ಕಿಗಳು ಆ ಭಾಗವನ್ನು ಕುಕ್ಕದಂತೆ ನೋಡಿಕೊಳ್ಳಬೇಕು. ಜಾನುವಾರು ಮಲಗುವಾಗ ಮುಂಭಾಗ ತಗ್ಗಿಸಿ ಹಿಂಭಾಗ ಎತ್ತರಿಸಿಕೊಂಡಂತೆ ನೋಡಿಕೊಳ್ಳಬೇಕು.
 ಮೊಬೈಲ್ 94480 59777

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT