ಮೌಲ್ಯವರ್ಧನೆ ಮೂಲಕ ಹಲಸು ವರ್ಷವಿಡೀ ದೊರೆಯುವಂತೆ ಮಾಡುವ ಹೊಸ ಹೊಸ ಪ್ರಯತ್ನಗಳು ಆರಂಭವಾಗಿವೆ. ಹಲಸಿನ ಈ ಪ್ರಯೋಗಗಳು ಕೃಷಿಗೆ ಪೂರಕವಾಗಿದ್ದು, ಇವು ಗ್ರಾಮೀಣ ಆರ್ಥಿಕತೆಯನ್ನು ಎತ್ತಿ ಹಿಡಿಯಬಲ್ಲವು. ಜೊತೆಗೆ ಹಲಸುಪ್ರಿಯರಿಗೆ ವರ್ಷವಿಡೀ ಹಲಸು ತಿನ್ನುವ ಅವಕಾಶವನ್ನೂ ಒದಗಿಸಿಕೊಡಬಲ್ಲವು
ಹಲಸಿನ ಮೌಲ್ಯದ ಕುರಿತು ಅರಿವು ವಿಸ್ತಾರವಾದಂತೆ, ಈ ಹಣ್ಣನ್ನಾಧರಿಸಿ ಹತ್ತು ಹಲವು ಪ್ರಯೋಗಗಳೂ ನಡೆಯುತ್ತಿವೆ. ಕೃಷಿಕರು ಮೌಲ್ಯವರ್ಧನೆಯ ಮೂಲಕ ಹಲಸು ವರ್ಷದುದ್ದಕ್ಕೂ ಲಭ್ಯವಾಗುವಂತೆ ಮಾಡುತ್ತಿದ್ದರೆ, ಹಲಸಿನ ವೈವಿಧ್ಯಮಯ ಬಳಕೆಯ ಸಾಧ್ಯತೆ ಉದ್ಯಮ ವಲಯದ ಆಸಕ್ತಿಯನ್ನೂ ಅರಳಿಸಿದೆ.
ಹಲಸಿನ ಮೌಲ್ಯವರ್ಧನೆಯ ಪ್ರಯತ್ನವೊಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ತುಂಬೇಮನೆಯಲ್ಲಿ ಚಿಗುರೊಡೆದಿದೆ. ವಿನುತಾ ಹೆಗಡೆ ಹಲಸಿನ ಹಣ್ಣಿನ ಪಲ್ಪ್ ಒಣಗಿಸಲಾರಂಭಿಸಿದ್ದು ನಾಲ್ಕು ವರ್ಷದ ಹಿಂದೆ. ಮಳೆಗಾಲ ಬಂತೆಂದರೆ ಹಲಸಿನ ಸುಗ್ಗಿ. ಅಂತಹದೇ ಒಂದು ದಿನ ಕಡುಬು, ಪಾಯಸ ಮಾಡಿಯೂ ಉಳಿದಿದ್ದ ಹಣ್ಣನ್ನು ಈ ರೀತಿ ಒಣಗಿಸಿಡುವ ಯೋಚನೆ ಹೊಳೆದಿತ್ತು ವಿನುತಾ ಅವರಿಗೆ. ದಶಕಗಳ ಹಿಂದೆ ಮಲೆನಾಡು, ಕರಾವಳಿಯ ಮನೆಗಳಲ್ಲಿ ಸಾಮಾನ್ಯವಾಗಿದ್ದ ಹಲಸಿನ ಹಣ್ಣಿನ ಹಪ್ಪಳ ಅಥವಾ ಹಂಬಳವನ್ನು ಇಂದಿನ ಅವಶ್ಯಕತೆಗೆ ಸರಿಯಾಗಿ ತಯಾರಿಸುತ್ತಾರೆ ವಿನುತಾ.
ಹಲಸಿನ ಹಣ್ಣನ್ನು ಬೇಯಿಸಿ, ಕಾಲು ಭಾಗದಷ್ಟು ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ರುಬ್ಬುತ್ತಾರೆ. ಹಣ್ಣು ಬಹಳ ಸಿಹಿ ಆಗಿದ್ದರೆ ಸಕ್ಕರೆ ಕಡಿಮೆ ಸೇರಿಸಬಹುದು. ಆನಂತರ ಹಣ್ಣಿನ ಮಿಶ್ರಣವನ್ನು ಡ್ರೈಯರ್‌ನಲ್ಲಿ ಎರಡು-ಮೂರು ದಿನ ಒಣಗಿಸುತ್ತಾರೆ. ಬಿಸಿಲಿನಲ್ಲಿಯೂ ಒಣಗಿಸಬಹುದು. ಆದರೆ ಹಲಸಿನ ಹಣ್ಣು ಮಳೆಗಾಲದಲ್ಲಿ ಸಿಗುವುದರಿಂದ ಡ್ರೈಯರ್ ಬಳಕೆ ಹೆಚ್ಚು. ಅಂಬಲಿ (ತುಳುವ, ಬಿಳುವ) ಹಲಸು ಬಳಸುತ್ತಾರೆ. ಅದರ ತೊಳೆ ಮೆತ್ತಗಿರುವುದರಿಂದ ಕೆಲಸವೂ ಹಗುರ, ಉತ್ಪನ್ನವೂ ಮೃದುವಾಗಿರುತ್ತದೆ ಎನ್ನುವುದು ಅವರ ಅನುಭವ. ಮೂರು ಕೆ.ಜಿ. ಹಣ್ಣಿನ ಪಲ್ಪ್‌ನಿಂದ ಒಂದು ಕೆ.ಜಿ. ಒಣಪಲ್ಪ್ ಆಗುತ್ತದೆ. ಹಲಸಿನ ಪಲ್ಪ್ ಒಣಗಿಸುವಾಗ ಹದ ಕಾಪಾಡುವುದು ಮುಖ್ಯ.
ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ 1.20 ಲಕ್ಷ ಹೆಕ್ಟೇರ್ ಹಾಗೂ ಕರ್ನಾಟಕದಲ್ಲಿ 11,500 ಹೆಕ್ಟೇರ್ ವ್ಯಾಪ್ತಿಯಲ್ಲಿ ಹಲಸು ಬೆಳೆಯಿದೆ. ಭಾರತದಲ್ಲಿ ಹಲಸು ಬೆಳೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು ದ್ವಿತೀಯ ಹಾಗೂ ಕರ್ನಾಟಕ ತೃತೀಯ ಸ್ಥಾನದಲ್ಲಿದೆ. |
ಕಡಿಮೆ ಒಣಗಿಸಿದರೆ ತೀರಾ ಮೃದುವಾಗಿರುತ್ತದೆ, ರುಚಿಯೂ ಸ್ವಲ್ಪ ಹುಳಿ. ಬೇಗ ಹಾಳಾಗುತ್ತದೆ. ಅದೇ ಹೆಚ್ಚು ಒಣಗಿಸಿದರೆ ತಿನ್ನಲು ಕಷ್ಟ. ಹಿಂದೆ ಹಣ್ಣಿನ ಹಪ್ಪಳ ಮಾಡುವಾಗ ಸಕ್ಕರೆ ಸೇರಿಸುತ್ತಿರಲಿಲ್ಲ. ಬೇಕೆನಿಸಿದರೆ ಒಂದು ಚೂರು ಬೆಲ್ಲ ಬೆರೆಸುತ್ತಿದ್ದರು. ವಿನುತಾ ಸಕ್ಕರೆ ಸೇರಿಸದೆಯೂ ಒಣಗಿಸುತ್ತಾರೆ. ಸಕ್ಕರೆ ಇಲ್ಲದಿದ್ದರೆ ಒಣಗಿದಾಗ ನಾರಿನ ತರಹ ಆಗಿ ತಿನ್ನಲು ಕಷ್ಟವಾಗುತ್ತದೆ, ಆದುದರಿಂದ ಸಕ್ಕರೆಸಹಿತ ಹಣ್ಣಿನ ಹಪ್ಪಳಕ್ಕೆ ಆದ್ಯತೆ ಎನ್ನುತ್ತಾರೆ ವಿನುತಾ. ಮಕ್ಕಳನ್ನು ಚಾಕೊಲೇಟಿನಿಂದ ಇತ್ತ ಆಕರ್ಷಿಸಲು ಸ್ವಲ್ಪ ಸಿಹಿ ಇದ್ದರೆ ಚೆನ್ನ ಎನ್ನುವುದು ಅವರ ಅಭಿಪ್ರಾಯ.
ಸರಿಯಾದ ಹದ (ತೇವ ಇರಬಾರದು, ಪಲ್ಪ್ ಕೈಗೆ ಅಂಟಬಾರದು), ಬಣ್ಣ ಬಂದ ನಂತರ ಮೂರು ಇಂಚು ಉದ್ದ, ಒಂದೂವರೆ ಇಂಚು ಅಗಲ ಇರುವಂತೆ ಒಣಗಿದ ಹಣ್ಣಿನ ಪಲ್ಪ್ ಅನ್ನು ಕತ್ತರಿಸುತ್ತಾರೆ. ನಂತರ ಗಾಳಿಯಾಡದಂತೆ ಡಬ್ಬದಲ್ಲಿ ಶೇಖರಿಸುತ್ತಾರೆ. ಸಕ್ಕರೆ ಮತ್ತು ಒಂದು ಚಿಟಿಕೆ ಉಪ್ಪು ಬಿಟ್ಟರೆ ಬೇರೆ ಯಾವುದೇ ಪದಾರ್ಥಗಳನ್ನು ಬಳಸುವುದಿಲ್ಲ. ಸಂರಕ್ಷಕಗಳ ಬಳಕೆಯೂ ಇಲ್ಲ. ಆರು ತಿಂಗಳಿಗೂ ಹೆಚ್ಚು ಕಾಲ ರುಚಿ, ಬಣ್ಣ ಎರಡೂ ಕೆಡದೆ ಇರುತ್ತದೆ.
ಹೀಗಿದೆ ಮಾರುಕಟ್ಟೆ
ಹಣ್ಣಿನ ಹೊಸ ರುಚಿ ಮನೆಯವರಿಗೆಲ್ಲ ಇಷ್ಟವಾಯಿತು. ನೆರೆಮನೆಯ ಶ್ರೀಪಾದ ಹೆಗಡೆ ಅವರು ಹಣ್ಣಿನ ಹಪ್ಪಳದ ಮಾರುಕಟ್ಟೆಯ ಸಾಧ್ಯತೆಯನ್ನು ವಿವರಿಸಿ, ಮಾರಾಟದ ಜವಾಬ್ದಾರಿಯನ್ನೂ ವಹಿಸಿಕೊಂಡರು. ನಂತರದ ವರ್ಷಗಳಲ್ಲಿ ಶಿರಸಿಯ ಕದಂಬ ಮಾರುಕಟ್ಟೆ ಸಹಕಾರಿ ಸಂಸ್ಥೆಯ ಜೊತೆ ನೇರ ಸಂಪರ್ಕವೂ ಆಯಿತು. ಕದಂಬ ಸಂಸ್ಥೆ ‘ಜಾಕ್ ಬಾರ್’ ಹೆಸರಲ್ಲಿ ಹಣ್ಣಿನ ಒಣ ಪಲ್ಪ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಜಾಕ್ ಬಾರ್‌ಗೆ ಉತ್ತಮ ಬೇಡಿಕೆ ಇದೆ. ಹಲಸು ಮೇಳಗಳಲ್ಲಿ ಹೆಚ್ಚಾಗಿ ಬಿಕರಿಯಾಗುತ್ತಿದೆ. ಉತ್ಪನ್ನದ ಗುಣಮಟ್ಟ ಹಾಗೂ ಪ್ಯಾಕಿಂಗ್ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದೇವೆ ಎನ್ನುತ್ತಾರೆ ಕದಂಬ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವೇಶ್ವರ ಭಟ್. 50 ಗ್ರಾಂ ಪ್ಯಾಕೆಟ್‌ನಲ್ಲಿ ಪೂರೈಕೆಯಾಗುತ್ತಿದೆ. ಈ ವರ್ಷ ಇದುವರೆಗೆ ಆರು ಕ್ವಿಂಟಾಲ್ ಮಾರಾಟ ಆಗಿದೆ. ಶಿರಸಿ ಸಮೀಪದ ಹತ್ತಕ್ಕೂ ಹೆಚ್ಚು ಕುಟುಂಬಗಳು ಈ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿವೆ. ವಿನುತಾ ಸುತ್ತಲ ಮನೆಗಳಿಂದಲೂ ಹಣ್ಣನ್ನು ಕೊಳ್ಳುತ್ತಾರೆ. ಮೇ ಇಂದ ಜುಲೈ ವರೆಗೆ ಹಣ್ಣನ್ನು ಒಣಗಿಸುವ ಜವಾಬ್ದಾರಿ. ಮೊದಲ ವರ್ಷ ಆರೇಳು ಕೆ.ಜಿ. ಯಷ್ಟು ಹಣ್ಣಿನ ಒಣ ಪಲ್ಪ್ ತಯಾರಿಸಿದ್ದ ಅವರು ನಂತರದ ಎರಡು ವರ್ಷ ಒಂದೊಂದು ಕ್ವಿಂಟಾಲ್ ತಯಾರಿಸಿದ್ದರು. ಈ ಬಾರಿಯ ಉತ್ಪಾದನೆ ಸುಮಾರು ಎರಡು ಕ್ವಿಂಟಾಲ್. ಈ ಚಟುವಟಿಕೆ ಕೃಷಿಗೆ ಪೂರಕ, ಆದಾಯವೂ ತೃಪ್ತಿದಾಯಕ ಎನ್ನುವುದು ವಿನುತಾ ಅವರ ಅಭಿಪ್ರಾಯ.
ತೊಳೆ ತೆಗೆದು ಉಳಿದ ಭಾಗವನ್ನು ಹಸುವಿಗೆ ಮೇವಾಗಿ ನೀಡುತ್ತಾರೆ. ಇದರಿಂದ ಹಲಸಿನ ಋತುವಿನಲ್ಲಿ ದನದ ಹಿಂಡಿ ಸಾಮಾನ್ಯಕ್ಕಿಂತ ಅರ್ಧದಷ್ಟು ಸಾಕು ಎನ್ನುತ್ತಾರೆ ವಿನುತಾ ಅವರ ಪತಿ ಪರಮೇಶ್ವರ. ಹಲಸಿನ ಹಣ್ಣಿನ ಮೌಲ್ಯವರ್ಧನೆಗೆ ದೊರೆತ ಪ್ರತಿಕ್ರಿಯೆಯಿಂದ ಪ್ರೇರಿತರಾದ ವಿನುತಾ ಕಳೆದ ವರ್ಷದಿಂದ ಹಲಸಿನ ಬೀಜದ ಚಟ್ನಿ ಪುಡಿ ತಯಾರಿಸುತ್ತಿದ್ದಾರೆ. ಕಳೆದ ಒಂಬತ್ತು ತಿಂಗಳು ಮನೆಯವರೇ ಉಪಯೋಗ ಮಾಡಿ, ರುಚಿ, ಆರೋಗ್ಯ ಎರಡರಲ್ಲೂ ಯೋಗ್ಯ ಎಂದು ಕಂಡುಕೊಂಡಿದ್ದಾರೆ. ಇದೀಗ ಮಾರುಕಟ್ಟೆ ಮಾಡಲು ಉತ್ಸುಕರಾಗಿದ್ದಾರೆ.
ಮಳೆಗಾಲದಲ್ಲಿ ತೋಟದ ಕೆಲಸ ಸ್ವಲ್ಪ ಕಡಿಮೆ. ಈ ಚಟುವಟಿಕೆಯಿಂದ ಸಮಯದ ಸದುಪಯೋಗವೂ ಆಯ್ತು, ಹಣ್ಣು ಹಾಳಾಗುವುದನ್ನು ತಡೆಯುವುದೂ ಆಯ್ತು ಎನ್ನುತ್ತಾರೆ ವಿನುತಾ. ಸಂಪರ್ಕಕ್ಕೆ: 9480447859(ಸಾಯಂಕಾಲ 6ರಿಂದ 8ರವರೆಗೆ)
ಹೊಸ ಪ್ರಯೋಗ
ಸಾಂಪ್ರದಾಯಿಕ ಕ್ರಮಗಳ ಜೊತೆಗೆ ಹೊಸ ಪ್ರಯೋಗಗಳೂ ಸೇರಿ ಹಲಸು ಎಲ್ಲರಿಗೂ, ಎಲ್ಲೆಡೆಯೂ ಸಲ್ಲುವಂತಾಗಿದೆ. ಹಲಸಿನ ತೊಳೆಯನ್ನು ಉದ್ದಕ್ಕೆ ಕತ್ತರಿಸಿ ಜೇನಿನಲ್ಲಿ ಕಾಪಿಡುವ ಕ್ರಮ ಕೇರಳದಲ್ಲಿ ಹಿಂದಿನಿಂದಲೂ ಇದೆ. ಕೊಚಿನ್‌ನ ಹಾಲು ಮಾರಾಟ ಸಹಕಾರಿ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿ ನಿವೃತ್ತರಾಗಿರುವ ಸಿ.ವಿ. ಥಾಮಸ್ ಅವರು ಕೇರಳದ ಸಾಂಪ್ರದಾಯಿಕ ತಿನಿಸು ಚಕ್ಕ ವರಟ್ಟಿ (ಹಲಸಿನ ಬೆರಟಿ)ಯನ್ನು ದೊಡ್ಡ ಮಟ್ಟದಲ್ಲಿ ತಯಾರಿಸುತ್ತಿದ್ದಾರೆ. ತುಪ್ಪ ಹಾಗೂ ಸ್ವಲ್ಪ ಬೆಲ್ಲ ಸೇರಿಸಿ ಹಲ್ವಾಗಿಂತಲೂ ತೆಳುವಾದ ಹದ ಬರುವಂತೆ 9–10 ಗಂಟೆಗಳ ಕಾಲ ಉರುಳಿಯಲ್ಲಿ ಕಾಯಿಸಬೇಕು. ಒಂದೂವರೆ ವರ್ಷದಲ್ಲಿ 1.5 ಟನ್ ಚಕ್ಕ ವರಟ್ಟಿ ಮಾರಾಟ ಮಾಡಿದ್ದಾರೆ. ಫೇಡಾ ತಯಾರಿಕೆಯಲ್ಲಿ ಪರಿಣತಿ ಇರುವ ಅವರು ತಮ್ಮ ಮಿಲ್ಟೋ ಬ್ರಾಂಡ್‌ನಡಿಯಲ್ಲಿ ಹಲಸಿನ ಫೇಡಾ ಹಾಗೂ ಚಾಕೊಲೇಟ್ ತಯಾರಿಕೆಯನ್ನೂ ಪ್ರಾರಂಭಿಸಿದ್ದಾರೆ.
ದಕ್ಷಿಣ ಕನ್ನಡದ ಮುಳಿಯ ವೆಂಕಟಕೃಷ್ಣ ಶರ್ಮ ಅವರು ಹಲಸಿನ ಹಲ್ವಾ ತಯಾರಿಯಲ್ಲಿ ಯಶ ಕಂಡಿದ್ದಾರೆ. ಮಹಾರಾಷ್ಟ್ರದ ಥಾಣೆಯಲ್ಲಿರುವ ಶ್ರೀಪಾದ್ ಮೋಂಡ್ಕರ್ ತಮ್ಮ ಯುನಿಕೋ ಫ್ರುಟ್ಸ್ ಹೆಸರಿನ ಹಣ್ಣಿನ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಹಲಸಿನ ಹಣ್ಣಿನ ಜ್ಯೂಸ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಹಲಸಿನ ಹಣ್ಣನ್ನು ಕೇಕ್, ಐಸ್‌ಕ್ರೀಮ್, ಮಫಿನ್ ಮುಂತಾದ ಬೇಕರಿ ತಿನಿಸುಗಳ ತಯಾರಿಕೆಯಲ್ಲೂ ಬಳಸಲಾಗುತ್ತಿದೆ.
ಕೇವಲ ಎರಡು ಮೂರು ತಿಂಗಳು ಸಿಗುವ ಹಲಸು ಬಹುತೇಕರ ಬಾಯಲ್ಲಿ ನೀರು ತರುತ್ತಿದೆ. ಇನ್ನು ವರ್ಷಪೂರ್ತಿ ಹಲಸು ತಿನ್ನುವಂತಾದರೆ ಹೇಗಿರಬಹುದು?
ಇಂತಹ ವಿನೂತನ ಪ್ರಯೋಗಕ್ಕೆ ಮುಂದಾದವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಮ್ಮನಘಟ್ಟದ ಸಾವಯವ ಕೃಷಿಕ ಶಂಕರಪ್ಪ.
ಹೊಸದನ್ನು ಸಾಧಿಸಬೇಕೆಂಬ ಛಲ ಶಂಕರಪ್ಪ ಅವರದು. ಇದರ ಫಲವಾಗಿಯೇ ಎಂಟು ಎಕರೆ ತೋಟದಲ್ಲಿ ತೆಂಗು, ಅಡಿಕೆ, ಬಾಳೆ, ಏಲಕ್ಕಿ, ಮೆಣಸು, ವೀಳ್ಯದೆಲೆ, ಚಕ್ಕೋತ, ಅರಿಶಿಣ, ಮಾವು, ಹಲಸು ಬೆಳೆದಿದ್ದಾರೆ. ರಾಮನಗರದಿಂದ ವಿಶಿಷ್ಟ ತಳಿಯ ಇರುವೆ ತಂದು ತೋಟದಲ್ಲಿ ಹರಿಬಿಟ್ಟು ಕೆಂಜಿಗದ ಇರುವೆಗಳನ್ನು ಹತೋಟಿಗೆ ತಂದಿದ್ದಾರೆ. ಅಲ್ಲದೇ ಕಲ್ಯಾಣ ಮಂಟಪಗಳಿಂದ ಸಿಗುವ ಘನತ್ಯಾಜ್ಯ ಬಳಸಿ ಗೋಬರ್ ಗ್ಯಾಸ್ ತಯಾರಿಸಿದ್ದಾರೆ. ಇವೆಲ್ಲವುಗಳಿಂದ ಅವರ ತೋಟವಿಂದು ರೈತರಿಗೆ ಕೃಷಿ ಪಾಠಶಾಲೆಯಾಗಿದೆ.
ಹಲಸಿನ ಆಹಾರಕ್ಕೆ ಮುನ್ನುಡಿ
ಬೇಸಿಗೆಗೆ ಸೀಮಿತವಾದ ಹಲಸಿನ ಹಣ್ಣಿನ ಬೆಲೆ ಕುಸಿತ, ಅಪವ್ಯಯ ತಪ್ಪಿಸಲು ನೂತನ ಪ್ರಯೋಗವೊಂದನ್ನು ಶಂಕರಪ್ಪ ಮಾಡಿದ್ದಾರೆ. ಹಲಸು, ರೈತರಿಗೆ ಅನುಕೂಲವಾಗಲಿದೆ ಎಂಬ ಆಶಯ ಹೊಂದಿದ್ದಾರೆ. ಮೂರು ಮರಗಳಿಂದ ಸಿಗುವ ಹಲಸಿನ ತೊಳೆಗಳನ್ನೇ ಚಿಪ್ಸ್ ತಯಾರಿಕೆಗೆ ಬಳಸುತ್ತಿದ್ದಾರೆ. ಹಲಸಿನಲ್ಲಿ ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಮಾರುಕಟ್ಟೆ ಸೃಷ್ಟಿಸಬೇಕೆಂಬ ಆಸೆ ಇವರದ್ದು. ಅಡಿಕೆಯನ್ನು ಸಂರಕ್ಷಿಸುವಂತೆ ಹಲಸನ್ನು ಒಣಗಿಸಿದರೆ ವರ್ಷಪೂರ್ತಿ ಉಪಯೋಗಿಸಬಹುದು ಎಂದು ಉತ್ತರಿಸುತ್ತಾರೆ.
ರೈತರು ಸಾವಿರಾರು ಹಲಸು ಹಣ್ಣುಗಳನ್ನು ಟೆಂಪೊದಲ್ಲಿ ಹೊತ್ತೊಯ್ದು ವಾಹನ ಬಾಡಿಗೆಗಿಂತ ಕಡಿಮೆ ಬೆಲೆಗೆ ಕೊಟ್ಟು ಬರುವ ಬದಲು ಈ ವಿಧಾನ ಅನುಸರಿಸಿದರೆ ಲಾಭಗಳಿಸುವ ಉದ್ಯಮವನ್ನಾಗಿಸಿಕೊಳ್ಳಬಹುದು. ಸುಧಾರಿತ ತಂತ್ರಜ್ಞಾನ ಬಳಸಿದರೆ ಚಕ್ಕುಲಿ, ಪಾಯಸ, ಹಪ್ಪಳ, ಜಾಮ್, ಚಿಪ್ಸ್ ತಯಾರಿಕೆ ಮಾಡಬಹುದು ಎನ್ನುತ್ತಾರೆ ಅವರು.
ಸುಧಾರಿತ ಕತ್ತಿ
ಹಲಸನ್ನು ಕತ್ತರಿಸಲು ರೆಟ್ಟೆನೋವು ಬರುತ್ತದೆ ಎನ್ನುವ ಹಾಗಿಲ್ಲ. ಹಲಸನ್ನು ತೆಂಗಿನಕಾಯಿ ಸುಲಿಯುವಂತೆ ಕತ್ತರಿಸಲು ಸುಧಾರಿತ ಕತ್ತಿ ತಯಾರಿಸಿಕೊಂಡಿದ್ದಾರೆ. ಈ ಕತ್ತಿಯಿಂದ ಹಲಸು ಒಂದೇ ಏಟಿಗೆ ಎರಡು ಹೋಳಾಗುತ್ತದೆ. ಹೀಗೆ ಎಷ್ಟು ಹೋಳುಗಳನ್ನಾದರೂ ಮಾಡಿಕೊಂಡು, ನಂತರ ತೊಳೆಗಳನ್ನು ಸರಾಗವಾಗಿ ಬಿಡಿಸಬಹುದು.
ಡ್ರೈಯರ್ ಆವಿಷ್ಕಾರ
ಡ್ರೈಯರ್ ಯಂತ್ರಕ್ಕೆ 30 ಸಾವಿರ ರೂಪಾಯಿ ಖರ್ಚಾಗಿದೆ. 6X–7 ಅಡಿ ಅಗಲ ಮತ್ತು 4 ಅಡಿ ಎತ್ತರ ಇದೆ. ಇದರಲ್ಲಿ 7 ಟ್ರೇಗಳಿವೆ. ಟ್ರೇಗಳಲ್ಲಿ ಒಮ್ಮೆಗೆ 15 ಕೆ.ಜಿ. ಹಲಸು ತೊಳೆ ಹಾಕಬಹುದು. ಬೀಜ, ಸೋಲೆ ಬಿಡಿಸಿದ ಹಲಸಿನ ಚೂರುಗಳನ್ನು ಎರಡು ಗಂಟೆಗಳ ಕಾಲ 80 ಡಿಗ್ರಿ ಉಷ್ಣಾಂಶದಲ್ಲಿ, ನಂತರ 12ರಿಂದ 14 ಗಂಟೆ ಕಾಲ 50 ಡಿಗ್ರಿ ಉಷ್ಣಾಂಶದಲ್ಲಿಟ್ಟು ಒಣಗಿಸಬೇಕು. ಒಂದು ದಿನಕ್ಕೆ ಸರಾಸರಿ 7ರಿಂದ 8 ಕೆ.ಜಿ. ಒಣಗಿದ ಹಲಸಿನ ಚೂರುಗಳನ್ನು ಪಡೆಯಬಹುದು. ಈ ಚೂರುಗಳನ್ನು ವರ್ಷವಿಡೀ ಬಳಸಬಹುದು. ನೆನೆಸಿದರೆ ದೋಸೆಯನ್ನೂ ಮಾಡಬಹುದು. ಕುಟ್ಟಿ ಪುಡಿ ಮಾಡಿಕೊಂಡು ಪಾಯಸ, ಹೂರಣ ತಯಾರಿಸಬಹುದು. ಹಲಸಿನ ಬೀಜ ಒಣಗಿಸಿ ಅಡುಗೆ ಸಾಂಬಾರ್‌ಗೆ ಬಳಸಬಹುದು ಎನ್ನುತ್ತಾರೆ.
ಹಲಸಿನ ಚಿಪ್ಸ್
ನೀರಿನಂಶ ಕಡಿಮೆ ಇರುವ ಮತ್ತು ಹಣ್ಣಾಗಲು ಪಕ್ವವಾದ ಹಲಸು ಚಿಪ್ಸ್ ತಯಾರಿಕೆಗೆ ಸೂಕ್ತ. ಹಲಸಿನ ಕಾಯಿಯ ಬೀಜ, ಸೋಲೆ ತೆಗದು ತೊಳೆ ಬಿಡಿಸಿ ಸಣ್ಣ ಸಣ್ಣ ಚೂರುಗಳನ್ನಾಗಿಸಿಕೊಳ್ಳಬೇಕು. ನಂತರ ತಮ್ಮ ಇಚ್ಛೆಯ ಕಾದ ಅಡುಗೆ ಎಣ್ಣೆಯಲ್ಲಿ ಚೂರುಗಳನ್ನು ಹಾಕಿ ತೇಲಿಸಿ ಹೊರತೆಗೆದ ನಂತರ ಬಿಸಿ ಇರುವಾಗಲೇ ಮಸಾಲೆ ಪುಡಿಯನ್ನು ಉದುರಿಸಿ ಕುರುಂಕುರುಂ ಚಿಪ್ಸ್ ತಯಾರಿಸಿ ತಿನ್ನಬಹುದು. ಮಾಹಿತಿಗೆ ಸಂಪರ್ಕ ಸಂಖ್ಯೆ 7829743638.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.