ADVERTISEMENT

ಸಾಧನೆಗೆ ಸಂದ ಪ್ರಶಸ್ತಿ

ಜಿ.ಚಂದ್ರಕಾಂತ
Published 19 ಜನವರಿ 2011, 19:30 IST
Last Updated 19 ಜನವರಿ 2011, 19:30 IST

ಗುಲ್ಬರ್ಗ ತಾಲ್ಲೂಕಿನ ಭೀಮಳ್ಳಿಯ ರೈತ ಶಿವಲಿಂಗಪ್ಪ ಬಸವಣ್ಣಪ್ಪ ಚೋರಗತ್ತಿ ಬೇಸಾಯದಲ್ಲಿ ಅಪಾರ ಅನುಭವಿ. ಪಿತ್ರಾರ್ಜಿತವಾಗಿ ಬಂದ ಹನ್ನೆರಡು ಎಕರೆ ಬರಡು (ಮಡ್ಡಿ)ಭೂಮಿಯನ್ನು ಅವರು ಈಗ ಫಲವತ್ತಾದ ನೀರಾವರಿ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ. ಎಕರೆಗೆ ಒಂದೆರಡು ಚೀಲ ಧಾನ್ಯ ಬೆಳೆಯುವುದೂ ದುಸ್ತರವಾಗಿದ್ದ ಈ ಭೂಮಿಯಲ್ಲಿ ಸಮಗ್ರ ನೀರು ನಿರ್ವಹಣೆ ಹಾಗೂ ಬೇಸಾಯ ಪದ್ಧತಿ ಅಳವಡಿಸಿಕೊಂಡು ಯಶಸ್ಸು ಪಡೆದಿದ್ದಾರೆ.

ಈ ಸಾಧನೆಗಾಗಿ ಅವರಿಗೆ ರಾಜ್ಯ ಕೃಷಿ ಇಲಾಖೆ 2009-10ನೇ ಸಾಲಿನ ‘ಕೃಷಿ ಪಂಡಿತ ಪ್ರಶಸ್ತಿ’ ನೀಡಿ ಗೌರವಿಸಿದೆ.
ಪಿಯುಸಿವರೆಗೆ ಓದಿರುವ ಶಿವಲಿಂಗಪ್ಪ ಅವರು ಕಳೆದ 30-35 ವರ್ಷಗಳಿಂದ ಬೇಸಾಯ ಮಾಡುತ್ತಿದ್ದಾರೆ. ಆರಂಭದ ವರ್ಷಗಳಲ್ಲಿ ಅವರು ಅಪಾರ  ಕಷ್ಟ-ನಷ್ಟ ಅನುಭವಿಸಿದ್ದರು.

1980ರಲ್ಲಿ ಅವರು 60 ಅಡಿ ಆಳದ ತೆರೆದ ಬಾವಿ  ತೋಡಿಸಿದರೂ ಅದರಲ್ಲಿ ನೀರು ಬೀಳಲಿಲ್ಲ. ಆದರೆ ಅವರು ಧೈರ್ಯ ಕಳೆದುಕೊಳ್ಳಲಿಲ್ಲ.  ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನ ಪಡೆದು 2005-06ರಲ್ಲಿ ಎರಡು ಚೆಕ್ ಡ್ಯಾಂಗಳನ್ನು  ತಮ್ಮ ಹೊಲದಲ್ಲಿ ನಿರ್ಮಿಸಿಕೊಂಡರು.

ಮಳೆಗಾಲದಲ್ಲಿ ಈ ಚೆಕ್ ಡ್ಯಾಂಗಳು ತುಂಬಿದವು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ತೆರೆದ ಬಾವಿ ತುಂಬಿತು. ಹನ್ನೆರಡು ಎಕರೆ ಹೊಲವನ್ನು ಹಲವು ಭಾಗಗಳನ್ನಾಗಿ ಮಾಡಿ ಹೊಲದಲ್ಲಿ ಬೀಳುವ ಮಳೆಯ ನೀರು ಹೊರಕ್ಕೆ ಹರಿ ಹೋಗದಂತೆ ತಡೆದರು.  ಎರಡು ಮೋಟರ್‌ಗಳು ನಿರಂತರವಾಗಿ ನಡೆದರೂ ಬಾವಿಯಲ್ಲಿನ ನೀರು ಖಾಲಿಯಾಗುವುದಿಲ್ಲ.

ಶಿವಲಿಂಗಪ್ಪ ಪ್ರಾರಂಭದಲ್ಲಿ  5 ಎಕರೆಯಲ್ಲಿ ಪಪ್ಪಾಯಿ ಬೆಳೆದರು ಸೂಕ್ತ ಬೆಲೆ ದೊರಕದ ಕಾರಣ ಮಾರುತಿ ವ್ಯಾನಿನಲ್ಲಿ ಪಪ್ಪಾಯಿ ಹಣ್ಣುಗಳನ್ನು ತುಂಬಿಕೊಂಡು ಮಾರಾಟ ಮಾಡಿ ಸುಮಾರು 4.50 ಲಕ್ಷ ರೂ. ಆದಾಯ ಪಡೆದರು. 2008-09ರಲ್ಲಿ 5 ಎಕರೆಯಲ್ಲಿ ಸಂಕೇಶ್ವರ-265 ತಳಿಯ ಕಬ್ಬನ್ನು ಬೆಳೆದು ಪ್ರತಿ ಎಕರೆಗೆ 70 ಟನ್ ಇಳುವರಿ ಪಡೆದಿದ್ದಾರೆ. ಬೇಸಾಯದ ಆದಾಯದಿಂದ ಈಗ ಎಂಟು ಎಕರೆ ಭೂಮಿ ಖರೀದಿಸಿದ್ದಾರೆ.

ಪ್ರಸ್ತುತ 5 ಎಕರೆ ತೊಗರಿ, 5 ಎಕರೆ ಕಬ್ಬು, 2 ಎಕರೆ ಜೋಳ, 2 ಎಕರೆ ರೇಷ್ಮೆ, ಎರಡೂವರೆ ಎಕರೆ ಬಾಳೆ, ಅರ್ಧ ಎಕರೆ ಅರಶಿಣ ಮತ್ತು ಸುಗಂಧರಾಜ ಭತ್ತ, ಒಂದು ಎಕರೆ ಗುಲ್ಫಡಿ ಹೂ ಬೆಳೆದಿದ್ದಾರೆ. ಒಂದು ಎಕರೆಯಲ್ಲಿ ಕಬ್ಬಿನ ಬೀಜೋತ್ಪಾದನೆ ಕೈಗೊಂಡಿದ್ದಾರೆ. ಇದಲ್ಲದೆ 100 ತೆಂಗು,10 ಮಾವು, 55 ಸಪೋಟ, 10 ಅಂಜೂರ ಮರಗಳು ಮತ್ತು  60 ಕರಿಬೇವಿನ ಗಿಡಗಳನ್ನು ಬೆಳೆದಿದ್ದಾರೆ.

ಶಿವಲಿಂಗಪ್ಪ ಹೈನುಗಾರಿಕೆಯನ್ನೂ ಕೈಗೊಂಡಿದ್ದಾರೆ. ಆರು ದೇಸಿ ಆಕಳು ಸಾಕಿದ್ದಾರೆ. ಗೊಬ್ಬರ ಅನಿಲ ಘಟಕ ಸ್ಥಾಪಿಸಿದ್ದಾರೆ.ಅವರ ಕುಟುಂಬಕ್ಕೆ ಬೇಕಾಗುವಷ್ಟು ಗ್ಯಾಸ್ ಲಭಿಸುತ್ತದೆ.ಕಳೆದ 5 ವರ್ಷಗಳಿಂದ ಸಾವಯವ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಎರೆಹುಳು ಗೊಬ್ಬರ ಮತ್ತು ಜೀವಾಮೃತ ಘಟಕಗಳನ್ನು  ಪ್ರಾರಂಭಿಸಿದ್ದಾರೆ. ವರ್ಷಕ್ಕೆ 600ಚೀಲ ಎರೆಹುಳು ಗೊಬ್ಬರ ಉತ್ಪಾದಿಸಿ ಅದನ್ನು ತಮ್ಮ ಹೊಲದಲ್ಲಿಯೇ ಉಪಯೋಗಿಸಿ ಭೂಮಿಯ ಫಲವತ್ತತೆ ಹೆಚ್ಚಿಸಿಕೊಂಡಿದ್ದಾರೆ.

ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡುವ ಶಿವಲಿಂಗಪ್ಪ ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ. ಸಮಗ್ರ ನೀರು ನಿರ್ವಹಣೆ, ಅರಣ್ಯ-ಕೃಷಿ ಪದ್ಧತಿ ಅಳವಡಿಸಿಕೊಂಡು ಮಳೆ ಮತ್ತು ಬಾವಿ ನೀರನ್ನು ಚಾಣಾಕ್ಷ್ಯತನದಿಂದ ಬಳಸಿಕೊಂಡು ಬೇಸಾಯ ಮಾಡುವ ಅವರ ಕ್ರಮ ಜಿಲ್ಲೆಯ ರೈತರಿಗೆ ಅನುಕರಣೀಯ. ಅವರ ಮೊಬೈಲ್ ನಂಬರ್- 9945870671.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.