ಹತ್ತಿ ನಮ್ಮ ದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆ. ನಮ್ಮ ರಾಜ್ಯದಲ್ಲಿ ಸುಮಾರು 5.5 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಹೆಕ್ಟೇರಿಗೆ ಸರಾಸರಿ 360 ಕಿ.ಗ್ರಾಂ ಇಳುವರಿಯಿದ್ದು ವಾರ್ಷಿಕ ಉತ್ಪಾದನೆ 8 ಲಕ್ಷ ಬೇಲ್‌ಗಳು ಎಂದು ಅಂದಾಜು.
ಈ ಬೆಳೆಯ ಬೆಳವಣಿಗೆಯಲ್ಲಿ ಆಂತರಿಕ ಅಂಶಗಳಾದ ದ್ಯುತಿಸಂಶ್ಲೇಷಣೆ ಮತ್ತು ಹಾರ್ಮೋನುಗಳ ಉತ್ಪತ್ತಿ, ಬಾಹ್ಯ ಅಂಶಗಳಾದ ವಾತಾವರಣ, ಪೋಷಕಾಂಶಗಳು ಮತ್ತು ನೀರಿನ ಲಭ್ಯತೆಗಳು ಮುಖ್ಯ ಪಾತ್ರ ವಹಿಸುತ್ತವೆ. ಈ ಅಂಶಗಳು ಒಂದನ್ನೊಂದು ಅವಲಂಬಿಸಿವೆ. ಬಾಹ್ಯ ಅಂಶಗಳಲ್ಲಿ ಏರುಪೇರಾದಾಗ ಸಸ್ಯದ ಆಂತರಿಕ ಕ್ರಿಯೆಯ ಮೇಲೆ ದುಷ್ಪರಿಣಾಮ ಆಗುತ್ತದೆ.
ಎಲೆ ಕೆಂಪಾಗುವಿಕೆ ಹತ್ತಿಗೆ ಕಾಡುವ ಪ್ರಮುಖ ಕಾಯಿಲೆಗಳಲ್ಲೊಂದು. ಇದು ಸಸ್ಯದ ಬೆಳವಣಿಗೆಯ ನೂರು ದಿನಗಳ ನಂತರ ಕಂಡುಬರುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ವಾತಾವರಣದಲ್ಲಿನ ಉಷ್ಣಾಂಶ ಕಡಿಮೆ ಇದ್ದಾಗ ಎಲೆಗಳಲ್ಲಿ ಪತ್ರ ಹರಿತ್ತು (ಕ್ಲೋರೋಫಿಲ್) ಉತ್ಪತ್ತಿಯಾಗದೇ ಯಾಂತೋಸೈನಿನ್ ಎಂಬ ವರ್ಣದ್ರವ್ಯ ಹೆಚ್ಚಾಗಿ ಎಲೆ ಕೆಂಪಾಗುತ್ತದೆ.
ಎಲೆ ಕೆಂಪಾಗುವಿಕೆಗೆ ಕಾರಣಗಳು
* ಎಲೆಯಲ್ಲಿ ಸಾರಜನಕದ ಪ್ರಮಾಣ ಶೇ 2 ಕ್ಕಿಂತ ಕಡಿಮೆಯಾದಾಗ ಎಲೆ ಕೆಂಪಾಗುವ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಸಾರಜನಕ ಮತ್ತು ಮ್ಯೋಗ್ನೇಶಿಯಂ ಪೋಷಕಾಂಶಗಳು ಪತ್ರ ಹರಿತ್ತು ಎಂಬ ವರ್ಣದ್ರವ್ಯದ ಕೇಂದ್ರ ಬಿಂದು.
ಇವೆರಡರ ಕೊರತೆಯಿಂದ ಪತ್ರ ಹರಿತ್ತಿನ ಉತ್ಪಾದನೆ ಕಡಿಮೆಯಾಗಿ ಎಲೆ ಕೆಂಪಾಗುತ್ತದೆ. ಇದಲ್ಲದೆ ಪೋಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ಕೊರತೆಯಿಂದಲೂ ಎಲೆ ಕೆಂಪಾಗುವಿಕೆ ಪ್ರಮಾಣ ಹೆಚ್ಚಬಹುದಾಗಿದೆ.
* ಚಳಿಗಾಲದಲ್ಲಿ ರಾತ್ರಿಯ ಉಷ್ಣತೆ ಶೀಘ್ರ ಇಳಿಮುಖವಾದಾಗ.
* ಮೂಡುಗಾಳಿ ಅಥವಾ ಒಣಗಾಳಿಯಿಂದ ಎಲೆಯಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಚಳಿಗಾಲದ ಒಣಗಾಳಿಯಲ್ಲಿ ತೇವಾಂಶ ಕಡಿಮೆಯಿರುವುದರಿಂದ.
* ಮಳೆಯ ಅಭಾವದಿಂದ ಮಣ್ಣಿನಲ್ಲಿನ ತೇವಾಂಶ ಕಡಿಮೆಯಾಗಿ ಪೋಷಕಾಂಶಗಳ ಕೊರತೆ.
ಈ ಎಲ್ಲ ಕಾರಣಗಳಿಂದ ಸಸ್ಯಗಳಲ್ಲಿ ಪ್ರಚೋದಕ ಹಾಗೂ ನಿರೋಧಕಗಳು ಮತ್ತು ಪೋಷಕಾಂಶಗಳ ಪ್ರಮಾಣದಲ್ಲಿ ಏರುಪೇರಾಗುತ್ತವೆ. ಈ ವ್ಯತ್ಯಾಸದಿಂದ ಒಟ್ಟು ಶರ್ಕರ ಪಿಷ್ಟ ಹೆಚ್ಚಾಗುವುದಲ್ಲದೆ ಟ್ಯಾನಿನ್ ಆಮ್ಲ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿ ಎಲೆಯಲ್ಲಿನ ರಸಸಾರ ಕಡಿಮೆಯಾಗಿ ಎಲೆ ಕೆಂಪು ಬಣ್ಣಕ್ಕೆ ತಿರುಗುತ್ತದೆ.
ಎಲೆ ಕೆಂಪಾದಾಗ ಎಲೆಗಳು ಉದುರುತ್ತವೆ. ಇದರಿಂದ ಗಿಡದ ಬೆಳವಣಿಗೆ ಕುಂಠಿತಗೊಂಡು ಕಾಯಿ ಕಟ್ಟೋದಿಲ್ಲ. ಇದು ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಸಂದರ್ಭದಲ್ಲಿ ಬೆಳೆ ಪೂರ್ಣ ಹಾಳಾದ ಉದಾಹರಣೆಯೂ ಇದೆ.
ಪರಿಹಾರ ಕ್ರಮಗಳು
* ಎಲೆ ಕೆಂಪುರೋಗದ ಲಕ್ಷಣಗಳು ಕಂಡು ಬಂದ ತಕ್ಷಣ ಅಥವಾ ಸಾಮಾನ್ಯವಾಗಿ ಕಂಡುಬರಬಹುದಾದ ಸಮಯದಲ್ಲಿ ನಿರ್ವಹಣೆ ಕ್ರಮಗಳನ್ನು ತೆಗೆದುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಪಸರಿಸದಂತೆ ನೋಡಿಕೊಳ್ಳುವುದು ಉತ್ತಮ.
* ಸಾಕಷ್ಟು ಪ್ರಮಾಣದ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಎರೆಹುಳು ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರಗಳನ್ನು ಒದಗಿಸುವುದು. ಜೊತೆಗೆ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಈ ಮೂರು ಪೋಷಕಾಂಶಗಳ ಸಮತೋಲನ ಗೊಬ್ಬರ ಒದಗಿಸಬೇಕು.
* ಮಣ್ಣಿನ ತೇವಾಂಶ ಕಡಿಮೆಯಾಗದಂತೆ ಕಾಪಾಡಿಕೊಳ್ಳಲು ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ತೆಳುವಾಗಿ ನೀರು ಹಾಯಿಸಬೇಕು. ರಸ ಹೀರುವ ಕೀಟ ಬಾಧೆಯನ್ನು ಸೂಕ್ತ ಕೀಟನಾಶಕಗಳಿಂದ ಹತೋಟಿ ಮಾಡಬೇಕು.
* ಹತ್ತಿ ಬೆಳೆಯ 60 ದಿನಗಳಲ್ಲಿ ಶೇ 1 ರ ಮೆಗ್ನೇಶಿಯಂ ಸಲ್ಫೇಟನ್ನು ಸಿಂಪಡಿಸಬೇಕು. ಮುಂಜಾಗ್ರತಾ ಕ್ರಮವಾಗಿ ಚಳಿಗಾಲ ಪ್ರಾರಂಭವಾಗುವುದಕ್ಕಿಂತ ಮೊದಲು ಶೇ 2 ರ ಡಿಎಪಿ ಅಥವಾ ಯೂರಿಯಾ ರಸಗೊಬ್ಬರ ದ್ರಾವಣವನ್ನು ಎಲೆಗಳಿಗೆ ಸಿಂಪಡಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.