ADVERTISEMENT

ಹಸಿರು ಮನೆಯೊಳು ಶುಂಠಿ

ವಿ.ಬಾಲಕೃಷ್ಣ ಶಿರ್ವ
Published 17 ನವೆಂಬರ್ 2014, 19:30 IST
Last Updated 17 ನವೆಂಬರ್ 2014, 19:30 IST
ಶುಂಠಿ ಪಾಲಿಹೌಸ್‌ನಲ್ಲಿ ರಾಘವೇಂದ್ರ
ಶುಂಠಿ ಪಾಲಿಹೌಸ್‌ನಲ್ಲಿ ರಾಘವೇಂದ್ರ   

ಪಾಲಿಹೌಸ್‌ನಲ್ಲಿ  ತರಕಾರಿ ಬೆಳೆಯುವುದು ಈಗ ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ಕೃಷಿಕರು ಮೊತ್ತಮೊದಲ ಬಾರಿಗೆ ಶುಂಠಿಯನ್ನು ಪ್ರಾಯೋಗಿಕವಾಗಿ ಬೆಳೆಯುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಬೆಜ್ಜವಳ್ಳಿಗೆ ಪಯಣಿಸಿ, ಎಡಭಾಗದ ರಸ್ತೆಯಲ್ಲಿ ಸುಮಾರು ಎಂಟು ಕಿಲೋ ಮೀಟರ್ ಕ್ರಮಿಸಿದರೆ ಕೈಬಾವಿ ಎಂಬ ಗ್ರಾಮ ಸಿಗುತ್ತದೆ. ಇಲ್ಲಿ ಕಾಲಿಡುತ್ತಿದ್ದಂತೇ ಕೃಷಿಕ ರಾಘವೇಂದ್ರ ಅವರ 10 ಗುಂಟೆ ಜಾಗದಲ್ಲಿ ಹಸಿರು ಮನೆ ಕಾಣಬಹುದು. ಇದರೊಳಗೆ ಇಣುಕಿ ಹಾಕಿದರೆ, ಹುಲುಸಾಗಿ ಬೆಳೆದಿರುವ ರಾಶಿ ರಾಶಿ ಶುಂಠಿ ಕಾಣಿಸುತ್ತದೆ. ಮಹಾರಾಷ್ಟ್ರದ ರೈತರೊಬ್ಬರಿಂದ ಪ್ರೇರಿತರಾಗಿ ಇಲ್ಲಿಯೂ ಪಾಲಿಹೌಸ್ ಶುಂಠಿಯನ್ನು ಪ್ರಾಯೋಗಿಕವಾಗಿ ಬೆಳೆಯುತ್ತಿದ್ದಾರೆ. ಹಸಿರು ಮನೆಯೊಳಗೆ ಕೋಕೋಫಿಟ್ ಉಪಯೋಗಿಸಿ ಐದು ಅಡಿ ಅಗಲ 145 ಅಡಿ ಉದ್ದದ ಬೆಡ್‌ಗಳನ್ನು ನಿರ್ಮಿಸಿ ಅಲ್ಲಿ ಈ ಬೆಳೆ ಬೆಳೆಯುತ್ತಿದ್ದಾರೆ.

ಬೆಳೆಯುವುದು ಹೀಗೆ
ರಾಘವೇಂದ್ರ ಅವರು ಶುಂಠಿ ಬೆಳೆದಿರುವುದು ಹೀಗೆ: ಕೋಕೋಫಿಟ್ ಅರ್ಧ ತುಂಬಿಸಿ (ಎರೆಹುಳ ಗೊಬ್ಬರ ಮಿಶ್ರಣಗೊಳಿಸಿ) ಮೂರು ಗಿಣ್ಣುಗಳಿರುವ ಬೀಜ ಬಿತ್ತನೆ ಮಾಡಲಾಗಿದೆ. ಬಿತ್ತನೆ ಮಾಡುವಾಗ ಅರ್ಧ ಅಡಿ ಅಂತರವಿರಿಸಲಾಗಿದೆ. ಈ ವಿಧಾನದಲ್ಲಿ 10 ಗುಂಟೆ ಜಾಗಕ್ಕೆ ಆರು ಕ್ವಿಂಟಾಲ್ ಶುಂಠಿಯನ್ನು ಬಿತ್ತನೆ ಮಾಡಲಾಗಿದೆ.

ಬಿತ್ತನೆ ಮಾಡಿದ ನಂತರ ನಾಲ್ಕು ಇಂಚಿನಷ್ಟು ಮಿಶ್ರಣ  ತುಂಬಿಸಲಾಗಿದೆ. ಒಂದು ಬೆಡ್‌ಗೆ ಐದು ಡ್ರಿಪ್ ಲೈನ್ ಅಳವಡಿಸಲಾಗಿದೆ. ಇದರ ಮುಖಾಂತರ 15 ರಿಂದ 20 ನಿಮಿಷದವರೆಗೆ ವಾರಕ್ಕೆ ಮೂರು ಬಾರಿ ನೀರು ಕೊಡಬೇಕಾಗುತ್ತದೆ. ಮೈಕ್ರೋ ಸ್ಪ್ರಿಂಕ್ಲರ್ ಮುಖಾಂತರ ನೀರು ಒಂದರಿಂದ ಒಂದೂವರೆ ನಿಮಿಷದವರೆಗೆ ಹಾಯಿಸುತ್ತಾ ಇರಬೇಕು. ಇದಾದ ನಂತರ ಅಗತ್ಯ ಇರುವ ಗೊಬ್ಬರಗಳನ್ನು ನೀಡಬೇಕು. ಪಾಲಿಹೌಸ್‌ನಲ್ಲಿ ಬೆಳೆದುದರಿಂದ ಶುಂಠಿಗೆ ಯಾವುದೇ ರೋಗಬರುವ ಸಾಧ್ಯತೆ ಇರುವುದಿಲ್ಲ. ಹೆಚ್ಚೆಂದರೆ ಕಂಬಳಿ ಹುಳದ ಬಾಧೆ ಇದ್ದು, ಇದಕ್ಕೆ ಸೂಕ್ತ ಔಷಧ ಸಿಂಪಡನೆ ಮಾಡಬೇಕು ಎನ್ನುತ್ತಾರೆ ರಾಘವೇಂದ್ರ.

ಖರ್ಚು ವೆಚ್ಚ ಹೀಗಿದೆ
ಕೋಕೋಫಿಟ್ ನಿರ್ಮಾಣಕ್ಕೆ ಟನ್‌ಗೆ 3ಸಾವಿರ ರೂಪಾಯಿಯಂತೆ 50 ಟನ್‌ಗೆ ಎರಡೂವರೆ  ಲಕ್ಷ ರೂಪಾಯಿ ಖರ್ಚಾಗಿರುತ್ತದೆ. ಶುಂಠಿಗೆ 50 ಸಾವಿರ ರೂಪಾಯಿ ತಗುಲಿದೆ. ಹೀಗೆ ಒಟ್ಟು ಮೂರು ಲಕ್ಷದಷ್ಟು ವೆಚ್ಚವಾಗಿದೆ. ಪಾಲಿಹೌಸ್‌ನಲ್ಲಿರುವ ಇದೇ ಕೋಕೋಫಿಟ್‌ನಲ್ಲಿ ಮೂರರಿಂದ ನಾಲ್ಕು ವರ್ಷಗಳವರೆಗೆ ಯಾವುದೇ ಖರ್ಚಿಲ್ಲದೆ ಶುಂಠಿ ಬಿತ್ತನೆ ಮಾಡಲಿಕ್ಕೆ ಬಳಸಬಹುದಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಶುಂಠಿ ಕ್ವಿಂಟಾಲ್ಗೆ 4 ರಿಂದ 5 ಸಾವಿರ ರೂಪಾಯಿ ದರವಿದೆ. 100 ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆಯಿದೆ. ಕಡಿಮೆ ಎಂದರೂ 5 ಲಕ್ಷದಷ್ಟು ವರಮಾನ ಬರುವುದು ಖಚಿತ. ‘ಇತರ ಬೆಳೆ ಗಳಿಗೆ ಹೋಲಿಸಿದರೆ ಶುಂಠಿ ಯಾವುದೇ ಶ್ರಮವಿಲ್ಲದೆ ಬೆಳೆಯಬಹುದು’ ಎನ್ನುವುದು ರಾಘವೇಂದ್ರ ಅವರ ಅನುಭವದ ಮಾತು. ಅವರ ಸಂಪರ್ಕಕ್ಕೆ 9481001526 (ಸಂಜೆ 6ರಿಂದ 8) 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT