ಆಕಳುಗಳಿಗೆ ಬರುವ ಅನೇಕ ಕಾಯಿಲೆಗಳ ಪೈಕಿ ‘ಹಾಲು ಜ್ವರ’ವೂ ಒಂದು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಹೋದರೆ ಅದು ಆಕಳಿನ ಪ್ರಾಣವನ್ನೂ ತೆಗೆಯಬಹುದು. ಆದ್ದರಿಂದ ರೈತರು ಯಾವೆಲ್ಲ ಮುಂಜಾಗರೂಕತಾ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಬೆಂಗಳೂರಿನ ಪಶು ವೈದ್ಯಕೀಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಎನ್.ಬಿ. ಶ್ರೀಧರ ಇಲ್ಲಿ ಮಾಹಿತಿ ನೀಡಿದ್ದಾರೆ.
*ಏನಿದು ಹಾಲು ಜ್ವರ?
ಉ: ಮಿಶ್ರ ತಳಿ ಜಾನುವಾರುಗಳನ್ನು ಕರು ಹಾಕಿದ ನಂತರ ಕಾಡುವ ಸಾಮಾನ್ಯವಾದ ಒಂದು ಕಾಯಿಲೆಯೆಂದರೆ ಹಾಲುಜ್ವರ. ಕರು ಹಾಕಿದ 12 ರಿಂದ 24 ಗಂಟೆಯ ಒಳಗೆ ಇದು ಕಾಣಿಸಿಕೊಳ್ಳಬಹುದು. ಇದನ್ನು ರೂಢಿಗತವಾಗಿ ‘ಹಾಲು ಜ್ವರ’ ಎಂದು ಕರೆಯಲಾಗುವುದು.
*ಈ ರೋಗ ಬರಲು ಕಾರಣಗಳೇನು?
ಉ: ಹಾಲು ಜ್ವರವು ಆಕಳು ಕರು ಹಾಕಿದ ಆಕಳಿನಿಂದ ಹಾಲನ್ನು ಹಿಂಡಿದಾಗ ಬರುವ ಒಂದು ಸಾಮಾನ್ಯ ಕಾಯಿಲೆ. ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಗಣನೀಯವಾಗಿ ಕಡಿಮೆಯಾದಾಗ ಈ ರೋಗ ಕಂಡುಬರುತ್ತದೆ. ಇದೇ ಸಮಯದಲ್ಲಿ ಎಲುಬು, ಮಾಂಸ ಮತ್ತು ಪಿತ್ತ ಜನಕಾಂಗದಲ್ಲಿ ಶೇಖರವಾದ ಕ್ಯಾಲ್ಸಿಯಂ ರಕ್ತಕ್ಕೆ ಸೂಕ್ತ ಸಮಯಕ್ಕೆ ಬಿಡುಗಡೆಯಾಗದೇ ಹೋದಾಗ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ತೀವ್ರವಾಗಿ ಇಳಿಮುಖವಾಗುತ್ತದೆ.
ಕೆಲವು ಸಲ ಪ್ಯಾರಥಾರ್ಮೋನ್ ಎಂಬ ಚೋದಕ ದ್ರವ ಕರು ಹಾಕಿದ ತಕ್ಷಣ ಸೂಕ್ತ ಪ್ರಮಾಣದಲ್ಲಿ, ಸೂಕ್ತ ಸಮಯದಲ್ಲಿ ಪ್ಯಾರಾಥೈರಾಯ್ಡ್ ನಿರ್ನಾಳ ಗ್ರಂಥಿಗಳ ಮುಖಾಂತರ ಬಿಡುಗಡೆಯಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಎಲುಬುಗಳಿಂದ ಕ್ಯಾಲ್ಸಿಯಂ ಕೂಡ ಬಿಡುಗಡೆಯಾಗುವುದಿಲ್ಲ. ಇದರಿಂದ ಕರು ಹಾಕಿದ ತಕ್ಷಣ ಆಕಳಿನಿಂದ ಹಾಲನ್ನು ಹಿಂಡಿದಾಗ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಹಾಲಿನಲ್ಲಿ ಹೊರಟು ಹೋಗುತ್ತದೆ. ಆಗ ತೀವ್ರವಾದ ಕ್ಯಾಲ್ಸಿಯಂ ಕೊರತೆಯುಂಟಾಗಿ ಹಾಲುಜ್ವರ ಬರುತ್ತದೆ. ಏಕೆಂದರೆ ಹಲವಾರು ಶಾರೀರಿಕ ಕ್ರಿಯೆಗಳು ಕ್ಯಾಲ್ಸಿಯಂ ಅನ್ನು ಅವಲಂಬಿಸಿವೆ.
*ರೋಗ ಲಕ್ಷಣಗಳು ಯಾವುವು?
ಉ: ಈ ಕಾಯಿಲೆಯಲ್ಲಿ ಆಕಳಿನಲ್ಲಿ ಜ್ವರವಿರುವುದಿಲ್ಲ. ಬದಲಾಗಿ ಶರೀರದ ತಾಪಮಾನ ಕಡಿಮೆಯಾಗುತ್ತದೆ. ಶೇ 6 ರಷ್ಟು ಹಾಲು ಹಿಂಡುವ ಈ ಕಾಯಿಲೆ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತದೆಯಾದರೂ ಕೆಲವೊಮ್ಮೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಜಾನುವಾರು ಮರಣವನ್ನಪ್ಪುವ ಸಾಧ್ಯತೆ ಇದೆ.
ಈ ರೋಗಕ್ಕೆ ತುತ್ತಾದ ಆಕಳಿಗೆ ಪ್ರಾರಂಭಿಕ ಹಂತದಲ್ಲಿ ಎದ್ದು ನಿಲ್ಲಲು ಆಗುವುದಿಲ್ಲ. ಎದ್ದು ನಿಂತುಕೊಂಡರೂ ಬಹಳ ಹೊತ್ತು ನಿಲ್ಲಲು ಆಗುವುದಿಲ್ಲ. ನಡೆದಾಡಲು ಆಗದಷ್ಟು ನಿಶ್ಶಕ್ತಿ ಇರುತ್ತದೆ ಮತ್ತು ನಡೆದಾಡುವಾಗ ತೊಡರಿಕೊಂಡು ನಡೆಯುತ್ತದೆ. ಮೇವು ತಿನ್ನುವುದು ಮತ್ತು ಮೆಲುಕಾಡಿಸುವುದು ಗಣನೀಯವಾಗಿ ಕಡಿಮೆಯಾಗುತ್ತದೆ.ಆಕಳು ತಲೆ ಎತ್ತಲೂ ಕಷ್ಟ ಪಟ್ಟು, ಕುತ್ತಿಗೆಯನ್ನು ಒಂದು ಬದಿಗೆ ವಾಲಿಸಿಕೊಂಡು ಮಲಗುತ್ತದೆ.
ಸೆಗಣಿಯು ಗಟ್ಟಿಯಾಗಿ ಮಲಬದ್ಧತೆ ಉಂಟಾಗುತ್ತದೆ. ಮೈ ನಡುಗುವಿಕೆ, ಒದ್ದಾಟ ಮತ್ತು ಕಣ್ಣು ಗುಡ್ಡೆಯನ್ನು ಹೊರಳಿಸುವಿಕೆ ಇತ್ಯಾದಿ ಲಕ್ಷಣಗಳು ಕೆಲವು ಸಲ ಕಾಣಿಸಬಹುದು. ಕೆಲವು ಸಲ ಈ ಕಾಯಿಲೆ ಕರು ಹಾಕುವ ಮೊದಲೇ ಬರುವ ಸಾಧ್ಯತೆ ಇರುತ್ತದೆ. ಆಕಳಿನ ಶರೀರದ ತಾಪಮಾನ ಕಡಿಮೆಯಾಗುತ್ತ ಬಂದಂತೆ ಆಕಳು ಕೋಮಾ ಅವಸ್ಥೆಯನ್ನು ತಲುಪಬಹುದು. ಕೆಲವೊಮ್ಮೆ ಹಾಲುಜ್ವರವು ಕಿಟೋಸಿಸ್ ಎಂಬ ರಕ್ತದಲ್ಲಿ ಗ್ಲೂಕೋಸ್ ಅಂಶ ಕಡಿಮೆಯಾಗಿ ಬರುವ ಕಾಯಿಲೆಯ ಜೊತೆಯೇ ಬರಬಹುದು. ಸೂಕ್ತ ಚಿಕಿತ್ಸೆ ದೊರೆಯದೇ ಹೋದಲ್ಲಿ ಸಾವು ಸಂಭವಿಸಬಹುದು.
*ಇದಕ್ಕೆ ಚಿಕಿತ್ಸೆ ಇದೆಯೆ?
ಉ: ತಜ್ಞ ಪಶುವೈದ್ಯರು ಸೂಕ್ತವಾದ ಕ್ಯಾಲ್ಸಿಯಂ ದ್ರಾವಣವನ್ನು ರಕ್ತನಾಳಕ್ಕೆ ಚುಚ್ಚುಮದ್ದಿನ ಮೂಲಕ ನೀಡುವುದರ ಮೂಲಕ ಆಕಳನ್ನು ಬದುಕಿಸಬಲ್ಲರು. ಸಾಮಾನ್ಯವಾಗಿ ಕಾಯಿಲೆಗೆ ತುತ್ತಾದ ಜಾನುವಾರುಗಳು ಮೊದಲ ಚಿಕಿತ್ಸೆಗೇ ಸ್ಪಂದಿಸುತ್ತವೆ. ಆದರೆ ಕೆಲವು ಜಾನುವಾರುಗಳಿಗೆ ಎರಡು ಅಥವಾ ಮೂರು ಚಿಕಿತ್ಸೆ ಬೇಕಾದೀತು. ಕೆಲವು ಆಕಳುಗಳಲ್ಲಿ ಚಿಕಿತ್ಸೆ ನಂತರವೂ ರೋಗಲಕ್ಷಣಗಳು ಮರುಕಳಿಸಬಹುದು. ಆಗ ಮಾತ್ರ ತುಂಬಾ ಎಚ್ಚರವಹಿಸಿ ಚಿಕಿತ್ಸೆ ನೀಡದಿದ್ದಲ್ಲಿ ಆಕಳು ಕಾಯಂ ಆಗಿ ನೆಲಹಿಡಿಯುವ ಸಾಧ್ಯತೆ ಇದೆ.
*ಯಾವೆಲ್ಲ ಮುಂಜಾಗ್ರತೆ ತೆಗೆದುಕೊಳ್ಳಬೇಕು?
ಉ: ಕರು ಹಾಕಿದ ಜಾನುವಾರಿಗೆ ಹಾಲುಜ್ವರ ಬಂದಾಗ ತಕ್ಷಣ ತಜ್ಞ ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಬೇಕು. ಆಕಳಿನ ಶರೀರದ ತಾಪಮಾನ ಕಡಿಮೆಯಾಗದಂತೆ ತಡೆಯಲು ಆಕಳನ್ನು ಬೆಚ್ಚಗಿನ ಸ್ಥಳದಲ್ಲಿ ಮಲಗಿಸಬೇಕು. ಕೆಲವು ಸಲ ಬಾಧಿತ ಆಕಳಿಗೆ ಗೋಣಿ ಚೀಲ ಅಥವಾ ಕಂಬಳಿ ಹೊದೆಸಬಹುದು. ಯಾವುದೇ ಕಾರಣಕ್ಕೂ ಯಾವುದೇ ಔಷಧಿಯನ್ನು ಕುಡಿಸಲು ಪ್ರಯತ್ನಿಸಬಾರದು.
ಇಂತಹ ಸಂದರ್ಭದಲ್ಲಿ ಔಷಧಿಯು ಶ್ವಾಸನಾಳಕ್ಕೆ ಹೋಗಿ ಆಕಳು ಸಾಯುವ ಸಾಧ್ಯತೆ ಇದೆ. ಆಕಳು ಒದ್ದಾಡುವಾಗ ಗಾಯವಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಬಹಳ ಹೊತ್ತು ಮಲಗುವುದರಿಂದ ಮೈಮೇಲೆ ಒತ್ತು ಹುಣ್ಣುಗಳಾಗುವ ಸಾಧ್ಯತೆ ಇದೆ. ಕಾರಣ ಆಕಳನ್ನು ಮೆತ್ತಗಿನ ಸ್ಥಳದಲ್ಲಿ ಮಲಗಿಸಬೇಕು ಮತ್ತು ಅದು ಎದ್ದು ನಿಲ್ಲಲು ಶ್ರಮ ಪಡುವಾಗ ಸ್ವಲ್ಪ ಆಧಾರ ನೀಡಬೇಕು.
*ಹಾಲುಜ್ವರ ಬರದಂತೆ ತಡೆಗಟ್ಟುವಿಕೆ ಹೇಗೆ?
ಉ: ಉತ್ತಮ ಗುಣಮಟ್ಟದ ಒಣಮೇವನ್ನು ಆಕಳು ಗರ್ಭ ಧರಿಸಿದಾಗ ನೀಡುವುದು ಒಳ್ಳೆಯದು. ಕೆಲವು ರೈತರು ತಮ್ಮ ಆಕಳುಗಳಿಗೆ ಗರ್ಭ ಧರಿಸಿದಾಗ, ಅದೂ ಏಳು ತಿಂಗಳ ನಂತರ ಕ್ಯಾಲ್ಸಿಯಂ ಚುಚ್ಚುಮದ್ದನ್ನು ಕೊಡಿಸುವ ಪರಿಪಾಠ ಹೊಂದಿರುತ್ತಾರೆ. ಇದರಿಂದ ಕರು ಹಾಕಿದ ನಂತರ ಪ್ಯಾರಾಥಾರ್ಮೋನ್ ಚೋದಕ ದ್ರವ ಬಿಡುಗಡೆಯಾಗದೆ ಆಕಳಿನಲ್ಲಿ ಕ್ಯಾಲ್ಸಿಯಂ ಶೇಖರಣೆ ಸಾಕಷ್ಟು ಇದ್ದರೂ ಅದು ರಕ್ತದಲ್ಲಿ ಬಿಡುಗಡೆಯಾಗದೇ
ಹಾಲುಜ್ವರ ಬರುವ ಸಾಧ್ಯತೆ ಇದೆ. ಮತ್ತೊಂದು ವಿಧಾನವೆಂದರೆ ಸುಮಾರು ಒಂದು ಕೆ.ಜಿ ಸುಣ್ಣವನ್ನು 10 ಲೀಟರ್ ನೀರಿನಲ್ಲಿ ಕರಗಿಸಿ ಪ್ರತಿ ದಿನವೂ ಮೇಲೆ ಸಂಗ್ರಹವಾಗುವ ಸುಣ್ಣದ ತಿಳಿ ನೀರನ್ನು ಸುಮಾರು 100 ಮಿಲಿಯನ್ನು ದಿನಕ್ಕೊಮ್ಮೆ ನೀಡಿದರೆ ಹಾಲು ಜ್ವರ ಬರಲಾರದು ಎಂಬ ಪ್ರತೀತಿ ಇದೆ. ಆದರೆ ಸುಣ್ಣದ ತಿಳಿ ನೀರಿನ ಪ್ರಮಾಣ ಯಾವುದೇ ಕಾರಣಕ್ಕೂ ಹೆಚ್ಚು ನೀಡಬಾರದು. ಇದರಿಂದ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣ ಜಾಸ್ತಿಯಾಗುತ್ತದೆ. ಸೂಕ್ತವಾದ ಖನಿಜ ಮಿಶ್ರಣವನ್ನು ನಿಗದಿತ ಪ್ರಮಾಣದಲ್ಲಿ ನೀಡಿದಲ್ಲಿ ಈ ಕಾಯಿಲೆಯನ್ನು ತಪ್ಪಿಸಬಹುದು. ಮಾಹಿತಿಗೆ ಲೇಖಕರ ಸಂಪರ್ಕ ಸಂಖ್ಯೆ 080– 23415352.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.