ADVERTISEMENT

ಹಾಲಿನಲ್ಲಿ ರಕ್ತ: ಗಾಬರಿಯಾಗದಿರಿ

ಡಾ.ಎನ್.ಬಿ.ಶ್ರೀಧರ
Published 8 ಫೆಬ್ರುವರಿ 2016, 19:30 IST
Last Updated 8 ಫೆಬ್ರುವರಿ 2016, 19:30 IST
ಹಾಲಿನಲ್ಲಿ ರಕ್ತ
ಹಾಲಿನಲ್ಲಿ ರಕ್ತ   

ಹಾಲಿನಲ್ಲಿ ರಕ್ತ ಕಂಡಾಗ ಜಾನುವಾರು ಪಾಲಕರು ಗಾಬರಿಯಾಗುವುದು ಸಹಜ. ದಕ್ಷಿಣ ಕನ್ನಡ ಮತ್ತಿತರ ಜಿಲ್ಲೆಗಳಲ್ಲಿ ಇದು ಭೂತದ ಕಾಟ ಅಥವಾ ಮಾಟ ಮಂತ್ರ ಎಂದುಕೊಂಡು ದೇವರಲ್ಲಿ ಹರಕೆ ಹೊತ್ತುಕೊಳ್ಳುವುದೂ ಇದೆ. ಕರು ಹಾಲು ಕುಡಿಯುವಾಗ ಗುದ್ದುವುದರಿಂದಲೂ ಕೆಚ್ಚಲಿಗೆ ಗಾಸಿಯಾಗಿ, ಹಾಲಿನಲ್ಲಿ ರಕ್ತ ಬರುತ್ತದೆ ಎಂಬ ನಂಬಿಕೆಯೂ ಇದೆ.  ಕರು ಹಾಕಿದ ನಂತರ ಆಕಳಿನ ಹಾಲಿನಲ್ಲಿ ಕೆಲವು ದಿನಗಳವರೆಗೆ ರಕ್ತ ಕಾಣಿಸಿಕೊಳ್ಳುತ್ತದೆ. ಕೆಲವು ಸಲ ಹಾಲಿನಲ್ಲಿ ಕೆಚ್ಚಲಿನ ಉರಿಯೂತದಿಂದ ಕರು ಹಾಕಲು ಹತ್ತಿರ ಬಂದಾಗ ಅಥವಾ ಕರು ಹಾಕಿದ ನಂತರ 14 ದಿನಗಳವರೆಗೂ ಕಾಣಿಸಿಕೊಳ್ಳಬಹುದು. ಕೆಲವು ಸಲ ಇದು ಸಹಜವಾದರೂ, ಒಮ್ಮೊಮ್ಮೆ ಕೆಚ್ಚಲು ಬತ್ತಿ ಹೋಗುವ ಸಾಧ್ಯತೆ ಇದೆ. ಹಾಲಿನಲ್ಲಿ ರಕ್ತ ಇದ್ದರೆ ಆ ಹಾಲನ್ನು ಗ್ರಾಹಕರು ಸಾಮಾನ್ಯವಾಗಿ ಖರೀದಿಸುವುದಿಲ್ಲ. ಅಲ್ಲದೇ ಹಾಲು ಉತ್ಪಾದಕರ ಸಹಕಾರ ಸಂಘದಲ್ಲೂ ಈ ಹಾಲನ್ನು ತಿರಸ್ಕರಿಸುತ್ತಾರೆ.

ಕಾರಣಗಳೇನು?
ರಕ್ತ ಸ್ರಾವ: ಸ್ವಲ್ಪ ಪ್ರಮಾಣದ ರಕ್ತ ಕಣಗಳು ಹಾಲಿನಲ್ಲಿ ಸ್ವಾಭಾವಿಕವಾಗಿಯೇ ಇರುತ್ತವೆ. ಇವು ಕಣ್ಣಿಗೆ ಕಾಣಿಸುವುದಿಲ್ಲ ಮತ್ತು ಹಾಲಿಗೆ ಕೆಂಪು ಬಣ್ಣವನ್ನು ತರುವುದಿಲ್ಲ. ಆದರೆ ರಕ್ತ ಕಣಗಳ ಸಂಖ್ಯೆ ಜಾಸ್ತಿಯಾದಾಗ ಮಾತ್ರ ಹಾಲಿಗೆ ಕೆಂಪು ಬಣ್ಣ ಬರುತ್ತದೆ. ಹಾಲಿನಲ್ಲಿ ರಕ್ತ ಬರಲು ಹಲವಾರು ಕಾರಣಗಳಿವೆ. ಮುಖ್ಯವಾದ ಕಾರಣವೆಂದರೆ ಕೆಚ್ಚಲಿನಲ್ಲಿ ರಕ್ತಸ್ರಾವ. ಇದು ಕೆಚ್ಚಲಿನಲ್ಲಿರುವ ಕಿರು ರಕ್ತನಾಳಗಳು ಒಡೆಯುವುದರಿಂದ ಕೆಂಪು ರಕ್ತ ಕಣಗಳು ಹೊರಬಂದು ಹಾಲಿನಲ್ಲಿ ಮಿಶ್ರಗೊಳ್ಳುತ್ತವೆ. ಕರು ಹಾಕಿದ ಕೂಡಲೇ ಕೆಚ್ಚಲಿನ ಕಿರು ರಕ್ತ ನಾಳಗಳಲ್ಲಿನ ರಕ್ತದ ಒತ್ತಡ ಜಾಸ್ತಿಯಾಗಿ ಅವು ಒಡೆಯಬಹುದು. ಈ ರೀತಿಯ ರಕ್ತಸ್ರಾವ ತಾತ್ಕಾಲಿಕ. ಕರು ಹಾಕಿದ ನಂತರ ಸುಮಾರು 10–12 ದಿನ ಈ ರೀತಿಯ ರಕ್ತ ಸ್ರಾವ ಇದ್ದರೆ, ಇದು ಕ್ರಮೇಣ ಕಡಿಮೆಯಾಗಿ ಬಿಡುತ್ತದೆ. ಇದಕ್ಕಿಂತ ಜಾಸ್ತಿ ದಿನ ಹಾಲಿನಲ್ಲಿ ರಕ್ತ ಬರುತ್ತಿದ್ದರೆ, ಇದಕ್ಕೆ ಚಿಕಿತ್ಸೆ ಅವಶ್ಯ. ಕೆಲವೊಮ್ಮೆ ಕೆಚ್ಚಲಿಗೆ ಗಾಯವಾದಾಗ, ಕರುಹಾಕಿದ ಕೂಡಲೇ ಕೆಚ್ಚಲಿನಲ್ಲಿ ತುಂಬಿಕೊಳ್ಳುವ ನೀರು, ಇತ್ಯಾದಿಗಳೂ  ಹಾಲಿನಲ್ಲಿ ರಕ್ತ ಬರಲು ಕಾರಣವಾಗಬಹುದು.

ಸೂಕ್ಷ್ಮಾಣುಗಳ ಬಾಧೆ: ಕೆಚ್ಚಲನ್ನು ಬಾಧಿಸುವ ತನ್ಮೂಲಕ ಕೆಚ್ಚಲು ಬಾವಿಗೆ ಕಾರಣವಾಗುವ ಹಲವಾರು ರೀತಿಯ ಸೂಕ್ಷ್ಮಾಣುಗಳ ಬಾಧೆಯಲ್ಲೂ ಹಾಲಿನಲ್ಲಿ ರಕ್ತ ಬರಬಹುದು. ಇವುಗಳಲ್ಲಿ ಮುಖ್ಯವಾದವುಗಳೆಂದರೆ ಲೆಪ್ಟೋಸ್ಪೈರಾ, ಮೈಕೋಪ್ಲಾಸ್ಮಾ, ಮೈಕ್ರೊಕಾಕಸ್ ಮತ್ತು ಟ್ಯುಬರ್‌ಕ್ಯುಲೋಸಿಸ್ ಬ್ಯಾಕ್ಟೀರಿಯಾಗಳ ವಿವಿಧ ಪ್ರಬೇಧಗಳು. ಇವುಗಳು ಜಾನುವಾರುಗಳಿಗೆ ರೋಗವನ್ನು ತರುವುದಲ್ಲದೇ ಕೆಚ್ಚಲುಬಾವನ್ನು ಉಂಟು ಮಾಡಬಹುದು. ಇವೂ ಕೆಚ್ಚಲಿನ ಕಿರು ರಕ್ತನಾಳಗಳನ್ನು ಹಾಳುಗೆಡವಿ ರಕ್ತ ಕಣಗಳನ್ನು ಹೊರಸೂಸಿ ಹಾಲಿಗೆ ಕೆಂಪು ಅಥವಾ ಗುಲಾಬಿ ಬಣ್ಣವನ್ನು ತರಬಹುದು. ಅದರಲ್ಲೂ ಜಾನುವಾರುಗಳಲ್ಲಿ ಕಾಮಾಲೆಯನ್ನುಂಟು ಮಾಡಬಲ್ಲ   ಲೆಪ್ಟೋಸ್ಪೈರಾ ಬ್ಯಾಕ್ಟೀರಿಯಾ ಬಹಳ ಮುಖ್ಯ ಪಾತ್ರ ವಹಿಸುವುದು. ಲೆಪ್ಟೋಸ್ಪೈರಾದಿಂದ ಹಾಲಿನಲ್ಲಿ ರಕ್ತ ಬರುವಿಕೆಯು ವಿಶಿಷ್ಟವಾಗಿರುತ್ತದೆ. ಹಾಲಿನಲ್ಲಿ ನಸುಗೆಂಪು ಬಣ್ಣದ ಸಣ್ಣ ಸಣ್ಣ ಗಡ್ಡೆಗಳು ಇರಬಹುದು ಮತ್ತು ನಾಲ್ಕೂ ಮೊಲೆಗಳಿಂದ ಬರುವ ಹಾಲು ರಕ್ತ ಮಿಶ್ರಿತವಾಗಿರಬಹುದು. ರಕ್ತದಲ್ಲಿನ ಪ್ಲೇಟ್ಲೆಟ್‌ಗಳ ಸಂಖ್ಯೆ ಕಡಿಮೆಯಾದಾಗಲೂ ಹಾಲಿನಲ್ಲಿ ರಕ್ತ ಬರುವ ಸಾಧ್ಯತೆ ಇದೆ. ಪ್ರಾರಂಭಿಕ ಹಂತದಲ್ಲಿ ರಕ್ತ ಮಿಶ್ರಿತ ಹಾಲು ಬಂದು ನಂತರ ಕೆಚ್ಚಲು ಸಂಪೂರ್ಣ ಕೆಚ್ಚಲು ಬಾವಿಗೆ ಒಳಗಾಗಬಹುದು. ಇದಕ್ಕೆ ತಕ್ಕ ಚಿಕಿತ್ಸೆ ತಜ್ಞ ಪಶುವೈದ್ಯರಿಂದ ಅಗತ್ಯ.

ಆಹಾರದಲ್ಲಿನ ವ್ಯತ್ಯಾಸ: ಕೆಲವೊಮ್ಮೆ ಹಸುವಿನ ಆಹಾರಕ್ರಮದಲ್ಲಿ ಬದಲಾವಣೆಯಾದಾಗ ಮತ್ತು ಆಹಾರವು ವಿವಿಧ ರೀತಿಯ ವಿಷಗಳು ಮತ್ತು ನೈಸರ್ಗಿಕ ವಿಷಾಣುಗಳು ಹೊಂದಿದ್ದರೆ ಹಾಲಿನಲ್ಲಿ ರಕ್ತ ಬರುವ ಸಾಧ್ಯತೆ ಇದೆ. ಅದರಲ್ಲೂ ಶಿಲೀಂಧ್ರ ಪೀಡಿತ ಕಡಲೆಕಾಯಿ ಗಿಡದ ಮೇವು, ಹುಲ್ಲು ಇತ್ಯಾದಿಗಳನ್ನು ಬಹಳ ದಿನಗಳವರೆಗೆ ಆಕಳುಗಳಿಗೆ ನೀಡುತ್ತಿದ್ದರೆ, ಈ ಶಿಲೀಂಧ್ರ ವಿಷಗಳಿಂದ ಕೆಚ್ಚಲಿನಲ್ಲಿನ ಕಿರು ರಕ್ತನಾಳಗಳಿಗೆ ಹಾನಿಯಾಗಿ, ರಕ್ತ ಕಣಗಳು ಹಾಲಿನಲ್ಲಿ ಮಿಶ್ರಗೊಂಡು ಹಾಲು ಕೆಂಪಗೇ ಬಣ್ಣ ಹೊಂದಬಹುದು. ಅಲ್ಲದೇ ಜಾನುವಾರು ಕೆಲವೊಂದು ವಿಷಕಾರಕ ಗಿಡಗಳು ಅಥವಾ ಇಲಿ ಪಾಷಾಣಗಳ ವಿಷಬಾಧೆಯಿಂದ ಬಳಲಿದರೂ ಹಾಲಿನಲ್ಲಿ ರಕ್ತ ಬರಬಹುದು.
ಪೌಷ್ಟಿಕಾಂಶಗಳ ಕೊರತೆ: ವಿಟಮಿನ್ ಸಿ ಅಥವಾ ಕ್ಯಾಲ್ಸಿಯಂ ಕೊರತೆಯಿಂದ ಸಹ ಹಾಲಿನಲ್ಲಿ ರಕ್ತ ಬರಬಹುದೆಂದು ಹಲವು ಸಂಶೋಧನೆಗಳು ಹೇಳುತ್ತವೆ.

ಪರಿಹಾರವೇನು?
ರೈತರು ಕೇಳುವ ಸಾಮಾನ್ಯ ಪ್ರಶ್ನೆಯಿದು. ಹಾಲಿನಲ್ಲಿ ರಕ್ತ ಬರುವುದನ್ನು ನಿಲ್ಲಿಸಲು ಚಿಕಿತ್ಸೆ ನೀಡಬೇಕಾದರೆ ಎಲ್ಲ ಕಾಯಿಲೆಗಳಂತೆ ಕಾರಣ ಪತ್ತೆ ಮಾಡಿ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡುವುದು ವೈಜ್ಞಾನಿಕ ವಿಧಾನ. ಕೆಲವೊಮ್ಮೆ ನೈಸರ್ಗಿಕವಾಗಿ ಚಿಕಿತ್ಸೆಯಿಲ್ಲದೇ ಗುಣವಾಗಬಹುದಾದರೂ ಬಹಳಷ್ಟು ಸಲ ಚಿಕಿತ್ಸೆ ನೀಡಿದರೂ ಹಾಲಿನಲ್ಲಿ ರಕ್ತ ಬರುವುದನ್ನು ನಿಲ್ಲಿಸಲು ಹಲವು ದಿನಗಳು ಬೇಕಾಗುತ್ತದೆ. ತಜ್ಞ ಪಶುವೈದ್ಯರು ಹಾಲಿನಲ್ಲಿ ರಕ್ತ ಬರುವ ಕಾರಣದ ಆಧಾರದ ಮೇಲೆ, ಕ್ಯಾಲ್ಸಿಯಂ ಚುಚ್ಚುಮದ್ದು, ರಕ್ತ ಹೆಪ್ಪುಗಟ್ಟುವ ಔಷಧಗಳು, ವಿಟಮಿನ್ ಸಿ ಮತ್ತು ಅವಶ್ಯ ಬಿದ್ದರೆ ಸೂಕ್ತ ಜೀವ ನಿರೋಧಕಗಳನ್ನು ಬಳಸಿ ಚಿಕಿತ್ಸೆ ಮಾಡಬಲ್ಲರು.

ಇನ್ನು ರೈತರೇ ಪ್ರಥಮ ಚಿಕಿತ್ಸೆಯಾಗಿ ಹಲವು ಮನೆ ಮದ್ದುಗಳನ್ನು ಬಳಸಿ ಈ ಕಾಯಿಲೆಯನ್ನು ಬಗೆಹರಿಸಿಕೊಳ್ಳಬಹುದು. ದಿನಕ್ಕೆ ಎರಡು ಬೊಗಸೆಯಷ್ಟು ನಾಚಿಕೆ ಮುಳ್ಳಿನ ಎಲೆಗಳನ್ನು 5–8 ದಿನ ತಿನ್ನಿಸುವುದರ ಮೂಲಕ ಅಥವಾ ಅರ್ಧ ಬೊಗಸೆಯಷ್ಟು ಅರಿಶಿಣದ ಪುಡಿಯನ್ನು ಆಹಾರದಲ್ಲಿ 10 ದಿನ ನೀಡುವುದರ ಮೂಲಕ ಹಾಲಿನಲ್ಲಿ ರಕ್ತ ಬರುವುದನ್ನು ನಿಲ್ಲಿಸಬಹುದೆಂಬ ಪ್ರತೀತಿ ಇದೆ.
ಹಾಲಿನಲ್ಲಿ ರಕ್ತ ಬರುತ್ತಿದ್ದರೆ, ಅಂತಹ ಆಕಳಿನ ಕೆಚ್ಚಲಿಗೆ ಮಂಜುಗಡ್ಡೆಯಿಂದ ತಂಪುಗೊಳಿಸಿದ ನೀರನ್ನು ಅಗಾಗ ಎರಚುತ್ತಿರುವುದರಿಂದ ಮತ್ತು ಮಂಜುಗಡ್ಡೆಯಿಂದ ತಂಪುಗೊಳಿಸಿದ ಮರಳಿನ ಮೇಲೆ ಆಕಳಿನ ಕೆಚ್ಚಲು ಊರುವಂತೆ ಮಲಗಿಸಿದರೆ ಹಾಲಿನಲ್ಲಿ ರಕ್ತ ಬರುವುದನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಆಕಳ ಹಾಲಿನಲ್ಲಿ ರಕ್ತ ಬರುವುದನ್ನು ಗಮನಿಸಿದಾಗ ಗಾಬರಿಗೊಳ್ಳದೇ ಸಾವಧಾನದಿಂದ ತಜ್ಞ ಪಶುವೈದ್ಯರ ಸಲಹೆ ಪಡೆದು ಚಿಕಿತ್ಸೆ ಮಾಡಿಸಬೇಕು. ಬದಲಾಗಿ ಇದು ದೆವ್ವ ಭೂತಗಳ ಚೇಷ್ಟೆ ಅಥವಾ ಮಾಟ ಮಂತ್ರದಿಂದ ಆಗಿರುವುದು ಇತ್ಯಾದಿ ಮೂಢ ನಂಬಿಕೆಗಳಿಂದ ಹೊರಬಂದು ಸಮೃದ್ಧ ಹೈನುಗಾರಿಗೆಯತ್ತ ಹೆಜ್ಜೆಯಿಡುವುದು ಜಾಣ ಹೈನುಗಾರರ ಲಕ್ಷಣ. 

ಲೇಖಕರು: 
ಸಹ ಪ್ರಾಧ್ಯಾಪಕರು, ಬೆಂಗಳೂರು  ಪಶುವೈದ್ಯಕೀಯ ಮಹಾವಿದ್ಯಾಲಯ
ಮಾಹಿತಿಗೆ: 080–23415352

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.