ADVERTISEMENT

ಹಿತ್ತಿಲಿನಿಂದ ಮುಖ್ಯವಾಹಿನಿಗೆ

ಅನಿತಾ ಪೈಲೂರು
Published 10 ಏಪ್ರಿಲ್ 2017, 19:30 IST
Last Updated 10 ಏಪ್ರಿಲ್ 2017, 19:30 IST
ಹಿತ್ತಿಲಿನಿಂದ ಮುಖ್ಯವಾಹಿನಿಗೆ
ಹಿತ್ತಿಲಿನಿಂದ ಮುಖ್ಯವಾಹಿನಿಗೆ   

ಬೆಂಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕು ತೂಬುಗೆರೆ ಹೋಬಳಿಯಲ್ಲಿರುವ ಕಾಚಳ್ಳಿಯ ರಸ್ತೆ, ಹೊಲಗದ್ದೆಗಳಲ್ಲಿ ನಡೆದಾಡುತ್ತಿದ್ದರೆ ಒತ್ತಾಗಿ ಫಲ ಬಿಟ್ಟಿರುವ ಎತ್ತರದ ಹಲಸಿನ ಮರಗಳು ಗಮನ ಸೆಳೆಯುತ್ತವೆ. ಅವುಗಳ ಕಾಂಡದ ಸುತ್ತಲೂ ಪೇರಿಸಿರುವ ಮುಳ್ಳಿನ ಗಿಡ-ಬಳ್ಳಿಗಳು ಕುತೂಹಲ ಮೂಡಿಸುತ್ತವೆ.

ಒಳ್ಳೆಯ ಆದಾಯ ನೀಡುವ ಹಲಸಿನ ಪ್ರತಿಯೊಂದು ಹಣ್ಣೂ ನಮಗಿಂದು ಅಮೂಲ್ಯ ಎನ್ನುತ್ತಾರೆ ಊರಿನ ಉತ್ಸಾಹಿ ಹಲಸು ಬೆಳೆಗಾರ ಸುರೇಶ್. ಪಕ್ಕದ ಗಂಟಿಗಾನಹಳ್ಳಿಯ ಜಿ.ಸಿ. ಮಂಜಣ್ಣ ಇದಕ್ಕೆ ಪುರಾವೆ ಒದಗಿಸುತ್ತಾರೆ. ಕಳೆದ ಒಂದು ದಶಕದಲ್ಲಿ ಅವರಿಗೆ ಹಲಸಿನಿಂದ ಬರುವ ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ. ಐವತ್ತು ವರ್ಷದ ಒಂದು ಮರದಿಂದ ಸುಮಾರು 25ಸಾವಿರ ರೂಪಾಯಿ ಗಳಿಸಬಹುದೆಂದು ಅರಿತ ಅವರು ಎಂಟು ವರ್ಷಗಳ ಹಿಂದೆ ಮತ್ತೆ 15 ಗಿಡಗಳನ್ನು ನೆಟ್ಟರು. ಯಾವಾಗ ಹಿತ್ತಲ ಗಿಡ ಮಹತ್ವ ಮತ್ತು ಉಪಯುಕ್ತತೆಯ ಅರಿವಾಯಿತೋ ಆಂದಿನಿಂದ ನಾವು ಈ ಮರಗಳನ್ನು ಮಕ್ಕಳಂತೆ ಜತನ ಮಾಡಲಾರಂಭಿಸಿದೆವು ಎನ್ನುತ್ತಾರೆ ಮೆಳೇಕೋಟೆಯ ಎಂ.ಜಿ. ರವಿಕುಮಾರ್. ತಮ್ಮ ಅಜ್ಜಿ ನೆಟ್ಟ ಮರದ ಹಣ್ಣುಗಳನ್ನು ಸ್ಥಳೀಯವಾಗಿ ಮಾರುತ್ತಿದ್ದ ರವಿಕುಮಾರ್ ಅವರಿಗೆ ಮಾರುಕಟ್ಟೆ ಸಾಧ್ಯತೆಗಳ ಕುರಿತು ತಿಳಿದ ನಂತರೆ ಮತ್ತೆ ಹತ್ತು ಮರಗಳನ್ನು ಅರ್ಧ ಎಕರೆ ಜಾಗದಲ್ಲಿ ನೆಟ್ಟಿದ್ದಾರೆ. ಎಲ್ಲ ಮರಗಳೂ ಈಗ ಫಸಲು ನೀಡುತ್ತಿವೆ.

ಇವರೆಲ್ಲರೂ ತೂಬುಗೆರೆ ಹಲಸು ಬೆಳೆಗಾರರ ಸಂಘದ ಸದಸ್ಯರು. 2008ನೇ ಇಸವಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗ್ರಾಮೀಣ ಜೈವಿಕ ಸಂಪನ್ಮೂಲ ಸಂಕೀರ್ಣ ಯೋಜನೆಯಡಿ ರೂಪುಗೊಂಡ ಈ ಸಂಘ ವಿಶ್ವವಿದ್ಯಾಲಯದ ಹಿಂದಿನ ಕುಲಪತಿ ಡಾ. ಕೆ. ನಾರಾಯಣ ಗೌಡ ಅವರ ಕನಸಿನ ಕೂಸು. ಈ ಯೋಜನೆಯ ಸಂಯೋಜಕರಾಗಿದ್ದ ಅವರು ಆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅಲ್ಲಿನ ಹಲಸಿನ ವೈವಿಧ್ಯ ಹಾಗೂ ವೈಶಿಷ್ಟ್ಯಗಳನ್ನು ನೋಡಿ ಬೆರಗಾಗಿದ್ದರು. ಜನರು ಅದನ್ನು ಅಲಕ್ಷಿಸಿ ಕೊಳೆತು ಹಾಳಾಗಲು ಬಿಡುವುದನ್ನು ನೋಡಿ,  ಸ್ಥಳೀಯ ಜೈವಿಕ ಸಂಪತ್ತನ್ನು ಉಳಿಸುವುದರ ಜೊತೆಗೆ ಹಣ್ಣಿನ ಸದ್ಬಳಕೆಯೂ ಆಗಬೇಕು ಎನ್ನುವ ಸದುದ್ದೇಶದಿಂದ ಈ ಸಂಘವನ್ನು ಸ್ಥಾಪಿಸಿದರು. ಇದು ದೇಶದಲ್ಲೇ ಇಂತಹ ಮೊದಲ ಪ್ರಯತ್ನ. ಈ ಸಂಘದ ಮೂಲಕ ಬೆಳೆಗಾರರು ಹಣ್ಣಿನ ಮಾರಾಟಕ್ಕೆ ಅಗತ್ಯ ಕೌಶಲ ಪಡೆದು, ಹಲಸಿನ ಕುರಿತ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡಿದ್ದಾರೆ.

ADVERTISEMENT

‘ಹಿಂದೆಲ್ಲಾ ಈ ಹಣ್ಣುಗಳನ್ನು ಕೇಳುವವರೇ ಇರಲಿಲ್ಲ. ಕೆಲವೇ ಕೆಲವು ಹಣ್ಣುಗಳು ಮನೆಬಳಕೆಗಾದರೆ ಇನ್ನು ಕೆಲ ಮರಗಳನ್ನು ಬಿಸಾಕು ಬೆಲೆಗೆ ಮಧ್ಯವರ್ತಿಗಳಿಗೆ ಫಲಗುತ್ತಿಗೆ ನೀಡುತ್ತಿದ್ದೆವು. ಆದರೆ ಸಿಂಹಪಾಲು ಹಣ್ಣುಗಳು ಜಾನುವಾರುಗಳ ಪಾಲಾಗುತ್ತಿದ್ದವು, ಇಲ್ಲವೇ ಕೊಳೆತು ಹಾಳಾಗುತ್ತಿದ್ದವು. ಅಷ್ಟಕ್ಕೂ ನಾವು ಹಲಸನ್ನು ಒಂದು ಬೆಳೆಯೆಂದು ಪರಿಗಣಿಸಿಯೇ ಇರಲಿಲ್ಲ’ ಎಂದು ಊರಿನ ಹಿರಿಯರು ನೆನಪಿಸಿಕೊಳ್ಳುತ್ತಾರೆ. ‘ತೂಬುಗೆರೆ ಹೋಬಳಿಯಲ್ಲಿರುವ 74 ಹಳ್ಳಿಗಳಲ್ಲಿ ಸುಮಾರು 3000 ಹಲಸಿನ ಮರಗಳು ಇವೆ. ಮನುಷ್ಯರ ಹಾಗೂ ಪ್ರಕೃತಿಯ ಆರೋಗ್ಯ ಕಾಪಾಡುವಲ್ಲಿ ಹಲಸು ಯಾವ ಪಾತ್ರ ವಹಿಸಬಲ್ಲುದು, ಆಹಾರವಾಗಿ ಅದರ ಉಪಯುಕ್ತತೆ ಏನು ಎಂಬುದು ಈಗ ಎಲ್ಲರಿಗೂ ಗೊತ್ತಿರುವ ವಿಷಯ. ಇವೆಲ್ಲ ಅಂಶಗಳ ಜೊತೆಗೆ, ತೂಬುಗೆರೆಯ ಹಲಸು ತನ್ನ ಸಿಹಿ ಸ್ವಾದ ಹಾಗೂ ಬಣ್ಣ ವೈವಿಧ್ಯಕ್ಕೆ ಖ್ಯಾತಿ ಪಡೆದಿದೆ. ಇಲ್ಲಿನ ಕೆಲ ಪ್ರಮುಖ ವಿಧಗಳೆಂದರೆ ಕೆಂಪು ರುದ್ರಾಕ್ಷಿ, ಹಳದಿ ರುದ್ರಾಕ್ಷಿ, ಚಂದ್ರ ಹಲಸು, ಶಿವರಾತ್ರಿ ಹಲಸು, ಏಕಾದಶಿ ಹಲಸು ಇತ್ಯಾದಿ. ತೂಬುಗೆರೆಯಲ್ಲಿ ಬಿಳಿ, ಕೆನೆ ಬಣ್ಣದಿಂದ ಹಿಡಿದು ಹಳದಿ ಮತ್ತು ಕಿತ್ತಳೆ ವರ್ಣದ ಹಲಸು ಇವೆ. ಇಂತಹ ಬಣ್ಣವೈವಿಧ್ಯ ಇತರ ಕಡೆಗಳಲ್ಲಿ ಕಾಣಸಿಗುವುದಿಲ್ಲ’ ಎನ್ನುತ್ತಾರೆ ಡಾ. ಎಸ್. ಶ್ಯಾಮಲಮ್ಮ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಇವರು ರಾಜ್ಯದ ಉತ್ತಮ ಹಲಸಿನ ತಳಿಗಳನ್ನು ಗುರುತಿಸಿ, ಉಳಿಸಿ, ಪಸರಿಸುವ ಕಾರ್ಯ ಮಾಡುತ್ತಿದ್ದಾರೆ. ಶ್ಯಾಮಲಮ್ಮ ಅವರ ತಂಡ ಇದುವರೆಗೆ ರಾಜ್ಯದಲ್ಲಿ 105 ಉತ್ತಮ ತಳಿಗಳನ್ನು ಗುರುತಿಸಿದೆ. ಅದರಲ್ಲಿ 12 ತೂಬುಗೆರೆ ಭಾಗದವು. ‘ಪ್ರತಿಯೊಂದು ಮರದಿಂದಲೂ ಈಗ ಹಿಂದಿಗಿಂತ

ಹತ್ತು ಪಟ್ಟು ಹೆಚ್ಚು ಹಣ ಗಳಿಸುತ್ತಿದ್ದೇವೆ’ ಎಂದು ಸಂಘದ ಕಾರ್ಯದರ್ಶಿ ರವಿಕುಮಾರ್ ಹೆಮ್ಮೆಯಿಂದ ಹೇಳುತ್ತಾರೆ. ಇಲ್ಲಿ ಹೆಚ್ಚಿನ ಕುಟುಂಬಗಳ ಸುಪರ್ದಿಯಲ್ಲಿ ಹಿರಿಯರು ನೆಟ್ಟು ಬೆಳೆಸಿದ ಒಂದೆರಡು ಹಲಸಿನ ಮರಗಳಿವೆ. ಇವುಗಳಲ್ಲಿ ಹೆಚ್ಚಿನವು ಕೆಲ ದಶಕ ಹಳೆಯದಾದರೆ, ಕೆಲವು ಶತಮಾನ ಕಂಡಿವೆ.

ಹಲಸಿನಿಂದ ಉತ್ತಮ ಆದಾಯ ಬರಲು ಆರಂಭವಾದ ಮೇಲೆ ಕೆಲ ರೈತರು ಬದುಗಳಲ್ಲಿ, ಹೊಲದ ಒಂದು ಭಾಗದಲ್ಲಿ 10–15 ಮರಗಳನ್ನು ಬೆಳೆಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನೀರಿನ ಅಭಾವ ತೀವ್ರವಾದ ಮೇಲೆ, ರೈತರು ಹಲಸನ್ನು ಪರ್ಯಾಯ ಬೆಳೆಯಾಗಿ ಪರಿಗಣಿಸುತ್ತಿದ್ದಾರೆ. ಮೊದಲ ಆರೇಳು ವರ್ಷಗಳಲ್ಲಷ್ಟೇ ಹಲಸಿಗೆ ನೀರು ಮತ್ತು ಗೊಬ್ಬರದ ಅವಶ್ಯಕತೆ ಇದೆ. ಅದೂ ಇತರ ಬೆಳೆಗಳಿಗೆ ಹೋಲಿಸಿದರೆ ಬಲು ಕಡಿಮೆ. ಬರನಿರೋಧಕ ಗುಣವಿರುವ ಈ ಬೆಳೆ ಹವಾಮಾನ ವೈಪರೀತ್ಯವನ್ನು ತಡೆದು ಉತ್ತಮ ಬೆಳೆ ನೀಡಬಲ್ಲುದು ಎನ್ನುತ್ತಾರೆ ಸುರೇಶ್. ಬೀಜದಿಂದ ಮಾಡಿದ ಮರಗಳಿಗಿಂತ ಬೇಗ ಇಳುವರಿ ನೀಡುವ ಕಸಿ ಗಿಡಗಳ ಲಭ್ಯತೆ ಹಲಸು ಬೆಳೆಸುವವರಿಗೆ ಅನುಕೂಲಕರವಾಗಿದೆ. ಕಸಿ ಗಿಡಗಳು ಬಹುತೇಕ ತಾಯಿ ಮರದ ಗುಣಗಳನ್ನು ಹೊಂದಿರುತ್ತವೆ. ಬೀಜ ಮರಗಳಲ್ಲಿ ಈ ಸಾಧ್ಯತೆ ಕಡಿಮೆ ಎನ್ನುತ್ತಾರೆ ಡಾ. ಶ್ಯಾಮಲಮ್ಮ.

(ಹಲಸಿನ ಮಾಹಿತಿ ನೀಡುತ್ತಿರುವ ರವಿಕುಮಾರ್)

ತೂಬುಗೆರೆ ಹಲಸು ಬೆಳೆಗಾರರ ಸಂಘದಲ್ಲಿ 120 ಸದಸ್ಯರಿದ್ದಾರೆ. ಅಧ್ಯಕ್ಷ ಕಾಚಳ್ಳಿ ಸರಸಿಂಹಯ್ಯ, ರವಿಕುಮಾರ್, ಸುರೇಶ್, ಮುನಿರಾಜು ಮೊದಲಾದವರನ್ನೊಳಗೊಂಡ ತಂಡ ಸಂಘದ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಈ ಪ್ರದೇಶದಲ್ಲಿ ಸುಮಾರು 150 ಟನ್ ಹಲಸು ಉತ್ಪಾದನೆಯಾಗುತ್ತದೆ. ತೂಬುಗೆರೆ ಹೋಬಳಿಯಲ್ಲಿ ಹಲಸಿನಿಂದ ಬರುವ ಆದಾಯ ಕಳೆದೊಂದು ದಶಕದಲ್ಲಿ ನಾಲ್ಕು ಲಕ್ಷ ರೂಪಾಯಿಂದ 30 ಲಕ್ಷ ರೂಪಾಯಿಗೆ ಹೆಚ್ಚಿದೆ. ರೈತರು ಸಂಘದ ಮೂಲಕವೂ, ನೇರವಾಗಿಯೂ ಮಾರಾಟ ಮಾಡುತ್ತಾರೆ.

ಐಸ್‌ಕ್ರೀಮ್ ಸೇರಿದಂತೆ ವಿವಿಧ ಆಹಾರ ಉದ್ಯಮಿಗಳೂ ತೂಬುಗೆರೆಯ ಹಲಸನ್ನರಸಿ ಬರುತ್ತಿದ್ದಾರೆ. ಒಬ್ಬೊಬ್ಬ ರೈತರಿಗೆ ನೇರ ಮಾರಾಟ ಮಾಡುವುದು ಬಹಳ ಕಷ್ಟಸಾಧ್ಯ. ಅನೇಕ ರೀತಿಯ ತೊಂದರೆಗಳು ಎದುರಾಗುತ್ತವೆ. ಮಧ್ಯವರ್ತಿಗಳಿಂದ ಮೋಸ ಹೋಗುವುದು ಅತ್ಯಂತ ಸಾಮಾನ್ಯ. ಈ ಸಂಘದ ಮೂಲಕ ಬೆಳೆಗಾರರೆಲ್ಲ ಜೊತೆಗೊಡಿದ್ದರಿಂದ ನಮ್ಮ ಹಲಸು ಪ್ರಸಿದ್ಧವಾಯಿತು, ನಾವೂ ಕೈಯಲ್ಲಿ ಹಣ ನೋಡುವಂತಾಯಿತು ಎನ್ನುತ್ತಾರೆ ಕಳೆದ ವರ್ಷ ತಮ್ಮ ಎಂಟು ಮರಗಳಿಂದ 65,000 ರೂಪಾಯಿ ಆದಾಯ ಗಳಿಸಿದ ಕೆಂಪಸಿದ್ದಪ್ಪ. ಇಲ್ಲಿನ ಬೆಳೆಗಾರರು ಹಲಸಿನ ತೊಳೆಗಳನ್ನು ಮಾರಾಟ ಮಾಡಿದರೆ ಆದಾಯ ಹೆಚ್ಚು ಎಂದು ಕಂಡುಕೊಂಡಿದ್ದಾರೆ. ಬೆಂಗಳೂರು, ನಂದಿ ಬೆಟ್ಟ ಮತ್ತು ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಸಮೀಪವಾಗಿರುವುದೂ ಇಲ್ಲಿನ ಹಳ್ಳಿಗಳಿಗೆ ಅನುಕೂಲಕರವಾಗಿ ಪರಿಣಮಿಸಿದೆ.

ಹಲಸು ಮೇಳ
ಇಲ್ಲಿನ ಕೆಲ ಬೆಳೆಗಾರರು ದೇಶದ ವಿವಿಧ ಕಡೆಗಳಲ್ಲಾಗುವ ಹಲಸು ಮೇಳಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. 2010ರಿಂದ ಪ್ರತಿ ವರ್ಷ ಲಾಲ್‌ಬಾಗ್‌ನಲ್ಲಿ ನಡೆಯುವ ಮಾವು ಮತ್ತು ಹಲಸು ಮೇಳದಲ್ಲಿ ಸಂಘದ ಸದಸ್ಯರು ಭಾಗವಹಿಸಿ ಗ್ರಾಹಕರಿಗೆ ನೇರ ಮಾರಾಟ ಮಾಡುತ್ತಿದ್ದಾರೆ. ಹಲಸು ಮೇಳಗಳಲ್ಲಿ ತಾಜಾ ಹಣ್ಣಿಗೆ ಇರುವ ಬೇಡಿಕೆಯನ್ನು ಗ್ರಾಹಕರಿಗೆ ತೃಪ್ತಿಕರವಾಗುವಂತೆ ಪೂರೈಸುವಲ್ಲಿ ಈ ಸಂಘದ ಸದಸ್ಯರು ಯಶಸ್ವಿಯಾಗಿದ್ದಾರೆ. ಸರಿಯಾದ ಹಣ್ಣಿನ ಆಯ್ಕೆ, ತೊಳೆಗಳನ್ನು ಚಾಕಚಕ್ಯತೆಯಿಂದ ಸ್ವಚ್ಛವಾಗಿ ಬಿಡಿಸುವ ಕ್ರಮ ಹಾಗೂ ಆಕರ್ಷಕ ಪ್ಯಾಕಿಂಗ್‌ನಿಂದಾಗಿ ಈ ಸಂಘ ಪೂರೈಸುವ ಹಣ್ಣುಗಳಿಗೆ ಬೇಡಿಕೆ ಹೆಚ್ಚು. ತೂಬುಗೆರೆ ಹೋಬಳಿಯಲ್ಲಿ ಉತ್ಪಾದನೆಯಾಗುವ ಶೇಕಡಾ 80ರಷ್ಟು ಹಣ್ಣು ತಿನ್ನಲು ಯೋಗ್ಯವಾದರೆ ಉಳಿದ ಭಾಗ ಮೌಲ್ಯವರ್ಧನೆಗೆ ಬಳಕೆಯಾಗುತ್ತಿದೆ. ನವನೀತಮ್ಮ ಅವರ ನೇತೃತ್ವದ ದಿವ್ಯಜ್ಯೋತಿ ಸ್ವ ಸಹಾಯ ಸಂಘ ಅನೇಕ ಉತ್ಪನ್ನಗಳನ್ನು ತಯಾರಿಸುತ್ತಿದೆ.

ತಮಗೆ ವೈಜ್ಞಾನಿಕ ಸಲಹೆ, ಕಾಲಕಾಲಕ್ಕೆ ಮಾರ್ಗದರ್ಶನ ಹಾಗೂ ಸೂಕ್ತ ಉಪಕರಣ ಒದಗಿಸುವ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ನಿರಂತರ ಸಹಕಾರವನ್ನು ತೂಬುಗೆರೆಯ ಬೆಳೆಗಾರರು ನೆನೆಯುತ್ತಾರೆ. ರಾಜ್ಯದಲ್ಲೇ ವಿಶಿಷ್ಟ ಹಲಸಿನ ತಾಣವಾಗಿರುವ ತೂಬುಗೆರೆಯಲ್ಲಿ ಈಗಾಗಲೇ ಆರಂಭವಾಗಿರುವ ಉತ್ತಮ ತಳಿಯ ಮರಗಳನ್ನು ಗುರುತಿಸಿ, ಸಂರಕ್ಷಿಸುವ ಕಾರ್ಯ ಚುರುಕಾಗಿ ಮುನ್ನಡೆದರೆ ಬೆಳೆಗಾರರಿಗೆ ಇನ್ನಷ್ಟು ಪ್ರಯೋಜನವಾದೀತು. ಈ ಪ್ರದೇಶವನ್ನು ಹಲಸು ಪ್ರವಾಸೋದ್ಯಮ ವಲಯವಾಗಿಯೂ ಅಭಿವೃದ್ಧಿಪಡಿಸುವುದಕ್ಕೆ ಅವಕಾಶವಿದೆ.  ಸಂಪರ್ಕಕ್ಕೆ:9632129566.

**

ತೂಬುಗೆರೆ ಹಾಗೂ ತುಮಕೂರು ಪ್ರದೇಶಗಳು ಕೆಂಪು-ವರ್ಣದ (ಕಿತ್ತಳೆ ಹಾಗೂ ಕೆಂಪು ಬಣ್ಣ ವೈವಿಧ್ಯ) ಹಲಸು ವೈವಿಧ್ಯಕ್ಕೆ ಖ್ಯಾತಿ ಪಡೆದಿವೆ. ಈ ಪ್ರದೇಶಗಳಲ್ಲಿ ಅಂದಾಜು ಶೇ10ರಷ್ಟು ಕೆಂಪು-ವರ್ಣದ ಹಲಸಿನ ಸಾಂದ್ರತೆ ಇದೆ.

ಹಳದಿ ಹಲಸಿಗಿಂತ ಕೆಂಪು ಹಲಸಿನೆಡೆ ಗ್ರಾಹಕರ ಒಲವು ಜಾಸ್ತಿ. ಹಾಗಾಗಿ ಈ ಬಣ್ಣದ ಹಲಸಿನ ಮಾರುಕಟ್ಟೆ ಸಾಧ್ಯತೆಗಳನ್ನು ಸೂಕ್ತವಾಗಿ ಬಳಸುವ ನಿಟ್ಟಿನಲ್ಲಿ ಸೂಕ್ತ ಅಧ್ಯಯನ ಮತ್ತು ಪ್ರಚಾರ ಅಗತ್ಯ ಎನ್ನುತ್ತಾರೆ ಹಲಸು ಆಂದೋಲನದ ರೂವಾರಿ ಶ್ರೀ ಪಡ್ರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.