ಕಳೆದ 15 ವರ್ಷದಲ್ಲಿ, 29 ಕೊಳವೆ ಬಾವಿ ಕೊರೆಸಿ, ಸೋತು, ಕೊಳವೆ ಬಾವಿಗಾಗಿಯೇ ಹತ್ತು ಎಕರೆ ಕಳೆದುಕೊಂಡಿದ್ದ ವರೂರಿನ ದೇವೇಂದ್ರಪ್ಪ ಗಾಬಣ್ಣವರ ಧೃತಿಗೆಡದೆ 30ನೇ ಕೊಳವೆ ಬಾವಿ ಕೊರೆಸಿದರು. ಅದು ತಾಸಿಗೆ ಕೇವಲ 2 ಸಾವಿರ ಗ್ಯಾಲನ್ ನೀರನ್ನು ನೀಡುತ್ತಿತ್ತು. ಆ ಕೊಳವೆ ಬಾವಿಯನ್ನು ಇಂದು ಮರು ಪೂರಣ ಮಾಡಿದ ನಂತರ 3,500 ಗ್ಯಾಲನ್ ನೀರು ಲಭ್ಯವಾಗುತ್ತಿದೆ. ಇದರಿಂದ ಅವರು 30 ಎಕರೆ ಹೊಲದಲ್ಲಿ ಹನಿ ನೀರಾವರಿ ಮೂಲಕ ಬಾಳೆ, ಚಿಕ್ಕು ಮತ್ತು ತೆಂಗಿನ ತೋಟ ಮಾಡುವ ಮೂಲಕ ಸುತ್ತಲಿನ ರೈತರಿಗೆ ಆದರ್ಶರಾಗಿದ್ದಾರೆ.
1996ರಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಾಗಿನಿಂದಲೂ ನೀರಿನ ಸಮಸ್ಯೆಯಿಂದ ಕೃಷಿಕ್ಷೇತ್ರದ ಮೇಲೆ ತೀವ್ರ ಬೇಸರಪಟ್ಟುಕೊಂಡಿದ್ದರು ದೇವೇಂದ್ರಪ್ಪ. 40 ಎಕರೆ ಹೊಲದಲ್ಲಿ ಎಡೆಬಿಡದೆ 29 ಕೊಳವೆ ಬಾವಿ ಕೊರೆಸಿ ವಿಫಲರಾದರು. ಆದರೆ 30ನೇ ಕೊಳವೆ ಬಾವಿ ಅದೃಷ್ಟವಶಾತ್‌್ 2.5 ಇಂಚು ನೀರು ಬಂತು. ಆದರೆ ಅದು ಕೆಲವೇ ದಿನಗಳಲ್ಲಿ ಪ್ರಮಾಣ ಕಡಿಮೆ ಮಾಡುತ್ತಾ ಹೊರಟಿತು. ಇದರಿಂದ ಚಿಂತೆಗೀಡಾದ ದೇವೇಂದ್ರಪ್ಪನವರಿಗೆ ನೆರವಾಗಿದ್ದು ಸಂಕಲ್ಪ ಗ್ರಾಮೀಣಾಭಿವೃದ್ಧಿ ಸಂಸ್ಥೆ. ಸಂಸ್ಥೆಯ ಸಲಹೆ ಪಡೆದು ಅವರು ಆ ಕೊಳವೆ ಬಾವಿಗೆ ಜಲ ಮರು ಪೂರಣ ಮಾಡಿದರು. ಅಂದಿನಿಂದ ಅವರಿಗೆ ನೀರಿನ ಸಮಸ್ಯೆ ತಲೆದೊರಿಲ್ಲ.
ಮರುಪೂರಣ ವಿಧಾನ
ಕೊಳವೆ ಬಾವಿಯ ಸುತ್ತ 10 ಅಡಿ ಅಗಲ, 10 ಅಡಿ ಉದ್ದ, 10 ಅಡಿ ಆಳದ ಗುಂಡಿ ತೆಗೆಯಬೇಕು. ಇದಕ್ಕೆ ಕೆಳಗೆ ಎರಡು ಅಡಿ ಬೆಣಚು ಕಲ್ಲು, ಒಂದು ಅಡಿ ಮರಳು ಹಾಕಿ ಅದರ ಮೇಲೆ ಸಿಮೆಂಟ್ ರಿಂಗ್ ಹೊಂದಿಸಿ ಕೇಸಿಂಗ್ ಪೈಪ್‌ಗೆ ಸಣ್ಣ ಕಿಂಡಿ ಮಾಡಿ ಜಾಲರಿ ಸುತ್ತಬೇಕು. ಇದರ ಮುಂದಿನ ಭಾಗದಲ್ಲಿ ಮೂರೂವರೆ ಲಕ್ಷ ಲೀಟರ್ ನೀರು ಹಿಡಿಯುವ ಕೃಷಿ ಹೊಂಡ ನಿರ್ಮಿಸಿ ಅದರಲ್ಲಿ ನಿಂತಿರುವ ನೀರು ಈ ಗುಂಡಿಗೆ ಬರುವಂತೆ ಮಾಡಬೇಕು. ಉಸುಕಿನಲ್ಲಿ ನೀರು ಸೋಸಿ ಶುದ್ಧೀಕರಣಗೊಂಡು ಸಿಮೆಂಟ್ ರಿಂಗ್‌ನಲ್ಲಿ ಮೇಲೇರಿದ ನಂತರ ಕೇಸಿಂಗ್‌ನ ರಂಧ್ರದ ಮೂಲಕ ಅಂತರ್ಜಲ ಸೇರುವುದು. ಇದರಿಂದ ಅಂತರ್ಜಲದ ಮಟ್ಟ ಹೆಚ್ಚುತ್ತದೆ. ಇವರು ಈ ನೀರಿನಲ್ಲಿ 30 ಎಕರೆ ಹೊಲದಲ್ಲಿ ಹನಿ ನೀರಾವರಿ ತಂತ್ರ ಉಪಯೋಗಿಸುವ ಮೂಲಕ ನೀರಾವರಿ ಮಾಡುತ್ತಿದ್ದಾರೆ.
ಆರ್ಥಿಕ ಸಹಾಯ
2008ರಲ್ಲಿ ದೇಶಪಾಂಡೆ ಫೌಂಡೇಶನ್ ಫೆಲೋಶಿಪ್ ಕಾರ್ಯಕ್ರಮದಲ್ಲಿ ತರಬೇತಿ ಪಡೆದು ಕೊಳವೆಬಾವಿ ಮರುಪೂರಣ ಮಾಡಲು ದೇಶಪಾಂಡೆ ಫೌಂಡೇಶನ್‌ನ ಸಹಾಯಧನದಲ್ಲಿ ಸಂಕಲ್ಪ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹುಟ್ಟಿಕೊಂಡಿತು.
ಕೊಳವೆ ಬಾವಿ ಮರುಪೂರಣ ಮಾಡಲು ಕನಿಷ್ಠ ₨30ಸಾವಿರ ಖರ್ಚಾಗುತ್ತದೆ. ಇದರಲ್ಲಿ ಅರ್ಧದಷ್ಟನ್ನು ದೇಶಪಾಂಡೆ ಫೌಂಡೇಶನ್ ನೀಡಲಿದೆ, ಉಳಿದ ಅರ್ಧದಷ್ಟನ್ನು ರೈತರೇ ಭರಿಸಬೇಕು. ಸಂಕಲ್ಪ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೆಲಸ ಮೆಚ್ಚಿ ನಬಾರ್ಡ್ ಸಂಸ್ಥೆ 1,000 ರೈತರಿಗೆ ತರಬೇತಿ ನೀಡಲು ₨ 4 ಲಕ್ಷ ಹಣ ಬಿಡುಗಡೆ ಮಾಡಿದೆ. ‘ಸಂಸ್ಥೆ ದೇಶದಲ್ಲಿ 400 ಕ್ಕೂ ಹೆಚ್ಚು ಕೊಳವೆ ಬಾವಿ ಮರುಪೂರಣ ಮಾಡಿದೆ. ಧಾರವಾಡ ಜಿಲ್ಲೆಯಲ್ಲಿಯೇ 80 ಕ್ಕೂ ಹೆಚ್ಚು ಕೊಳವೆ ಬಾವಿ ಮರುಪೂರಣ ಮಾಡಿದೆ. ತೆರೆದ ಕೊಳವೆ ಬಾವಿಯಿಂದ ಚಿಕ್ಕಮಕ್ಕಳ ಪ್ರಾಣ ತೆಗೆದುಕೊಳ್ಳುವುದರ ಬದಲಾಗಿ ಸಂಕಲ್ಪ ಸಂಸ್ಥೆಯೊಂದಿಗೆ ಕೈ ಜೋಡಿಸಿ ಜಲಮರುಪೂರಣ ಮಾಡಬಹುದು’ ಎಂದು ಸಂಸ್ಥೆಯ ರೂವಾರಿ ಸಿಕಂದರ್ ಮೀರಾನಾಯಕ್ ಹೇಳುತ್ತಾರೆ. ಹೆಚ್ಚಿನ ಮಾಹಿತಿಗೆ – 9986840730
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.